ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಇಷ್ಟನ್ನೂ ಮುಗಿಸಿ, ನಮ್ಮ ಪ್ರವಾಸದ ಅತ್ಯಂತ ಮುಖ್ಯ ಘಟ್ಟಕ್ಕೆ ತಯಾರಾಗಿ ಹೊರಟೆವು. ಸಂತ ತ್ಯಾಗರಾಜರ ಸಮಾಧಿ ಸ್ಥಳವಾದ ತಿರುವಯ್ಯಾರಿನ ಕಡೆಗೆ ಪ್ರಯಾಣ ಆರಂಭಿಸಿದೆವು. ನಾವು ನಿಷ್ಕಾರಣವಾಗಿ ನಮ್ಮ ಸಂಗೀತ ಸೇವೆ ಸಲ್ಲಿಸಲೂ ಹಾಗೆಯೇ ಸಂಗೀತ ಜ್ಞಾನವೃದ್ಧಿಯನ್ನು ಬೇಡುವ ಉದ್ದೇಶದಿಂದ ಅಲ್ಲಿಗೆ ಹೋದೆವು. ಸಮಾಧಿಯು ಕಾವೇರಿ ತೀರದಲ್ಲಿಯೇ ಇದೆ. ಆದರೆ ನಾವು ಹೋದಾಗ ಅದು ಸಂಪೂರ್ಣವಾಗಿ ಒಣಗಿತ್ತು. ಬಹುಶಃ ಏಳೂವರೆ ಎಂಟು ಗಂಟೆ ಇದ್ದಿರಬಹುದು. ಯಾರೂ ಇರಲಿಲ್ಲ. ಮುಂದಿನ ಕಬ್ಬಿಣದ ಬಾಗಿಲು ಸ್ವಲ್ಪವೇ ತೆರೆದಿತ್ತು. ನಾವು ಅದನ್ನು ತೆರೆದುಕೊಂಡು ಹೋಗಿ ಗರ್ಭಗುಡಿಯ ಮುಂದೆ ಕುಳಿತೆವು. ಹಿಂದಿನ ದಿನದ ಅಲಂಕಾರ ಹಾಗೆಯೇ ಇತ್ತು.
ನಾನು ನನ್ನ ಕನಸಿನಲ್ಲೂ ಈ ರೀತಿ ಆಗುವುದೆಂದು ಭಾವಿಸಿರಲಿಲ್ಲ. ತಿರುವಯ್ಯಾರಿಗೆ ಹೋಗುವುದೇ ದೂರದ ಆಲೋಚನೆ ಆಗಿತ್ತು ನನಗೆ. ಅಂಥದ್ದರಲ್ಲಿ ಗುರುಗಳೊಂದಿಗೆ ಅಲ್ಲಿ ಹೋಗಿ ಹಾಡುವುದಂತೂ! ನಾವು ನಮ್ಮ ಪಾಡಿಗೆ ನಾವು ನಾಟ ರಾಗದ, ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ಜಗದಾನಂದಕಾರಕ ಕೃತಿಯನ್ನು ಹಾಡಲು ಆರಂಬಿಸಿದೆವು. ಅದನ್ನು ಹಾಡುತ್ತಿರುವಾಗಲೇ ಪೂಜೆ ಮಾಡುವ ಓರ್ವ ಹುಡುಗನು ಬಂದ. ಅವನು ಕಳೆ ಕಳೆಯಾಗಿದ್ದ. ನಂತರ ಓರ್ವರು ಹಿರಿಯರು ಬಂದರು. ಗುರುಗಳು ಅವರಿಗೆ ನಮಸ್ಕಾರ ಎಂದರು. ಅವರು ಪ್ರತಿಕ್ರಯಿಸಿದರು. ಜಗದಾನಂದಕಾರಕ ಕೃತಿಯನ್ನು ಹಾಡಿ ನಿಲ್ಲಿಸಿದ ನಂತರ ಅವರು ನಮ್ಮನ್ನು ತಮಿಳಿನಲ್ಲಿ ಮಾತನಾಡಲು ಆರಂಭಿಸಿದರು. ಆದರೆ ನಾವು ಅಷ್ಟಾಗಿ ಉತ್ತರಿಸಲಿಲ್ಲವಾದ್ದರಿಂದ, ತೆಲುಗು? ಎಂದು ಕೇಳಿದರು. ಗುರುಗಳಿಗೆ ತೆಲುಗು ಚೆನ್ನಾಗಿ ಬರುತ್ತದೆ. ಅವರೂ ತೆಲುಗಿನಲ್ಲೇ “ಓಹೋ ತೆಲುಗಯ್ತೆ ಬಾಗ ವಸ್ತುಂದಿ. ಕ್ಷಮಿಂಚಂಡಿ ವಾಕಿಲಿ ತೀಸಿ ಮೇಮು ಇಕ್ಕಡವರಕು ವಚ್ಚೇಶಾಮು” ಎಂದರು. (ಓಹೋ ತೆಲುಗಾದರೆ ಚೆನ್ನಾಗಿಯೇ ಬರುತ್ತದೆ. ಕ್ಷಮಿಸಿ ನಾವು ಬಾಗಿಲು ತೆರೆದು ಇಲ್ಲಿವರೆಗು ಬಂದುಬಿಟ್ಟೆವು). ಅವರು ತೆಲುಗಿನಲ್ಲೇ “ನೀವು ಹಿಂದಿನ ತಿಂಗಳು ಸ್ವಾಮಿ ಆರಾಧನೆಗೆ ಬಂದಿದ್ದಿರಾ?” ಎಂದು ಕೇಳಿದರು. ಗುರುಗಳು, “ಇಲ್ಲ ಸ್ವಾಮಿ, ಈಗ ಬಂದು ಏನೋ ನಮ್ಮ ಕೈಲಾದಷ್ಟು, ನಮಗೆ ತಿಳಿದಷ್ಟು ಸಂಗೀತವನ್ನು ಅರ್ಪಿಸಿ ಹೋಗೋಣವೆಂದು ಬಂದಿರುವೆವು” ಎಂದೂ, “ನಮ್ಮದು ತ್ಯಾಗರಾಜರ ಶಿಷ್ಯರಾದ ಮಾನಂಬುಚುವಾಡಿ ಅವರ ಶಿಷ್ಯ ಪರಂಪರೆಯೇ. ಮೊನ್ನೆಯೇ ಅಯೋಧ್ಯೆಗೆ ಹೋಗಿ ರಾಮನಿಗೆ ತ್ಯಾಗಯ್ಯನ ಕೃತಿಗಳನ್ನು ಅರ್ಪಿಸುವ ಅವಕಾಶವನ್ನು ಕಂಚಿ ಸ್ವಾಮಿಗಳು ಮಾಡಿಕೊಟ್ಟಿದ್ದರು” ಎಂದೂ ಹೇಳಿದರು.
ಆ ಹಿರಿಯರು ಆಗ, “ತುಂಬಾ ಸಂತೋಷ. ತ್ಯಾಗರಾಜ ಸ್ವಾಮಿಗಳು ದೇಹತ್ಯಾಗ ಮಾಡಿದ್ದು ಪುಷ್ಯ ಬಹುಳ ಪಂಚಮಿಯಂದು. ನಾವು ತ್ಯಾಗರಾಜರ ವಂಶದವರೇ-ಆರನೇ ತಲೆಮಾರಿನವರು. ಪ್ರತಿ ಪಂಚಮಿಗೂ ವಿಶೇಷ ಪೂಜೆಯನ್ನೂ ಸಂಗೀತ ಸೇವೆಯನ್ನೂ ಸಲ್ಲಿಸಿಯೇ ಸಲ್ಲಿಸುತ್ತೇವೆ. ನೋಡಿ ನೀವು ಇಂದು ಬಂದಿದ್ದೀರಿ; ಇಂದು ಪಂಚಮಿ! ನೀವು ಇಂದು ಸಂಜೆಯೂ ಬರಬಹುದಿತ್ತು, ನಾಳೆಯೂ ಬರಬಹುದಿತ್ತು, ಆದರೆ ಇಂದೇ ಬಂದಿದ್ದೀರಿ; ಅದರಲ್ಲೂ ನಮಗಿಂತ ಮುನ್ನವೇ ಬಂದು ಆಗಲೇ ಸಂಗೀತ ಸೇವೆಯನ್ನೂ ಮಾಡುತ್ತಿದ್ದೀರಿ. ಇದು ಖಂಡಿತ ತ್ಯಾಗರಾಜ ಸ್ವಾಮಿಗಳೇ ಮಾಡಿರುವುದು. ಅವರೇ ನಿಮ್ಮನ್ನು ಕರೆಸಿಕೊಂಡಿದ್ದಾರೆ. ಇಂದು ನಿಮ್ಮ ಪುಣ್ಯವೇ ಸರಿ! ಈಗ ನಿಮಗೆ ಎಷ್ಟು ಹೊತ್ತಾಗುವುದೋ ಅಷ್ಟು ಹೊತ್ತು ಹಾಡಿ. ನಿಮ್ಮ ಸಂಗೀತಕ್ಕೇ ನಾವು ತ್ಯಾಗಯ್ಯನವರಿಗೆ ಅಭಿಷೇಕ ಪೂಜಾದಿಗಳನ್ನು ಮಾಡಿ ಪ್ರಸಾದವನ್ನು ಕೊಡುತ್ತೇವೆ” ಎಂದು ಬಹಳ ಭಾವುಕರಾಗಿ ಹೇಳಿದರು. ನಮಗೋ ತುಂಬು ಪುಣ್ಯವನ್ನು ಅನುಭವಿಸುತ್ತಿರುವ ಕ್ಷಣ. ನನಗೋ, ಎಂತಹ ಗುರುಕೃಪೆ ನನ್ನ ಮೇಲಿದೆ ಎಂಬ ಜವಾಬ್ದಾರಿಯ ಭಾವನೆ. ಇಂತಹ ದಿನದಂದು ಗುರಗಳೊಂದಿಗೆ ಬಂದು, ಸಾಕ್ಷಾತ್ ಶ್ರೀರಾಮನನ್ನೇ ನೋಡಿರುವ ಆ ಸಾಕ್ಷಾತ್ ನಾದಬ್ರಹ್ಮ ಶ್ರೀ ತ್ಯಾಗರಾಜರ ಮುಂದೆ ಹಾಡುವ ಅವಕಾಶ! ಇದು ತಾಯಿಯದ್ದೇ ಸಂದೇಶ. ಸಂಗೀತವು ನನ್ನ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ರೀತಿಯ ಘಟನೆಯ ಮೂಲಕ ತೋರಿಸುತ್ತಿದ್ದಾಳೆ ಎಂಬ ಜ್ಞಾನೋದಯ ಒಂದು ಕಡೆ. ಇವೆಲ್ಲವೂ ಒಂದು ಕಡೆ. ಅದಕ್ಕೆ ಸರಿಯಾಗಿ ಗುರುಗಳು ರಾಮ ಕೋದಂಡ ರಾಮ, ಓ ರಾಮ ಓರಾಮ ಓಂಕಾರ ಧಾಮ, ನಾರಾಯಣ ಹರಿ ನಾರಾಯಣ ಮುಂತಾದ ಊಂಛವೃತ್ತಿಯ ಉತ್ಸವಸಂಪ್ರದಾಯ ಕೃತಿಗಳನ್ನು ಹಾಡಿ ನಮ್ಮ ಕೈಲಿ ಹಾಡಿಸಿದರು. ಆ ತ್ಯಾಗರಾಜ ನಿಜರೂಪವನ್ನೇ ನೋಡುತ್ತಾ, ನನಗೇ ತಿಳಿಯದಂತೆ ಕಣ್ಣಲ್ಲಿ ನೀರು ಜಿನುಗಿತ್ತು. ನಂತರ ಗುರುಗಳು ಶ್ರೀಮದಾದಿ ತ್ಯಾಗರಾಜ ಗುರುವರಂ ಎಂದು ಮೈಸೂರು ವಾಸುದೇವಾಚಾರ್ಯರು ರಚಿಸಿರುವ ಕೃತಿಯನ್ನೂ, ತ್ಯಾಗರಾಜ ನಿನ್ನೇ ಕೋರಿ ಎಂದು ಮುಖಾರಿ ರಾಗದಲ್ಲಿ ರಾ ಚಂದ್ರಶೇಖರಯ್ಯನವರು (ಗುರುಗಳವರ ದೊಡ್ಡಪ್ಪ) ರಚಿಸಿದ ಕೃತಿಯನ್ನೂ ಸಮರ್ಪಿಸಿದರು.
ಇವೆಲ್ಲವನ್ನೂ ಹಾಡುತ್ತಿರಬೇಕಾದರೆ, ತ್ಯಾಗರಾಜ ಮೂರ್ತಿಗೆ ಜಲ, ಕ್ಷೀರ, ಗಂಧಾದಿಗಳಿಂದ ಅಭಿಷೇಕ ಮಾಡಿ ನಮಗೆ ಆಗಲೇ ತೀರ್ಥವಾಗಿ ನೀಡಿದರು. ನಮ್ಮೆಲ್ಲರ ಗೋತ್ರ ಪ್ರವರಗಳನ್ನು ಅರ್ಚಕರು ಹೇಳಿಸಿ, ಸಂಕಲ್ಪದಲ್ಲಿ ಸಂಗೀತ ಜ್ಞಾನ ಅಭಿವೃದ್ಧ್ಯರ್ಥಂ ಎಂದು ಹೇಳಿ ಪೂಜೆ ಮಾಡಿದರು. ನಾವು ಎಲ್ಲವನ್ನೂ ಹಾಡಿ ಕೊನೆಗೆ ಜಾನಕೀ ನಾಯಕ ನೀಕು ಜಯ ಮಂಗಳಂ ಎಂದು ಮಂಗಳ ಹಾಡುವ ಹೊತ್ತಿಗೆ ಮಂಗಳಾರತಿಯನ್ನು ಮಾಡಿದರು. ನಮ್ಮೆಲ್ಲರನ್ನೂ ಒಳಕ್ಕೆ ಕರೆದು, “ಸಾಮಾನ್ಯವಾಗಿ ಆ ದೂರದ ಹೊಸಲನ್ನೇ ಯಾರಿಗೂ ದಾಟಲು ಬಿಡುವುದಿಲ್ಲ. ಆದರೆ ಈ ಹೊತ್ತು ನಿಮ್ಮನ್ನು ಕರೆಸಿಕೊಂಡಿರುವುದು ಆ ಸ್ವಾಮಿಯೇ. ಹಾಗಾಗಿ ನೀವು ಇಲ್ಲಿಯ ತನಕ ಬರಬಹುದು ಎಂದು ಹೇಳಿದಾಗ ಗುರುಗಳು ಭಾವುಕರಾದದ್ದು ಕಂಡಿತು. ಅವರಲ್ಲಿನ ಧನ್ಯತಾ ಭಾವವನ್ನೂ, ತ್ಯಾಗರಾಜ ಸ್ವಾಮಿಯನ್ನೂ ಎಲ್ಲರನ್ನೂ ನೋಡಿ ನಾನು ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದೆ. ನಂತರ ಸ್ವಾಮಿ ತ್ಯಾಗಯ್ಯ ಪೂಜಿಸುತ್ತಿದ್ದ ರಾಮ ವಿಗ್ರಹವನ್ನು ಅತ್ಯಂತ ಹತ್ತಿರದಿಂದ ನೋಡಲು ಅವಕಾಶವಿತ್ತರು. ಎಲ್ಲರೂ ನಮ್ಮ ಕೈಲಾದಷ್ಟು ಧನವನ್ನು ನೀಡಿ ಪ್ರಸಾದವನ್ನು ಸ್ವೀಕರಿಸಿ ಹೊರ ಬಂದೆವು. ಗುರುಗಳು ಮಾತಿನಲ್ಲಿ “ಇದೆಂಥದ್ದೋ ಪುಣ್ಯ, ಅಣ್ಣಾ! ಎಲ್ಲಾ ಆ ಗುರುಕೃಪೆ ಅಷ್ಟೆ ಕಣೋ! ಹೇಗೋ ಸಾಧ್ಯ ಇವೆಲ್ಲ? ನಾವು ಏನೂ ತಿಂಡಿಯೂ ತಿನ್ನದೆ ನಿಷ್ಠೆಯಿಂದ ಬಂದು, ತಾಯಿ ಎಂತಹ ದಿವ್ಯ ಅವಕಾಶ ಮಾಡಿಕೊಟ್ಟುಬಿಟ್ಟಳು! ಹರ್ಷ, ನೀನು ಆಲೋಚಿಸಿ ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದೆ ಕಣಯ್ಯ”.
ಆಗ ಹರ್ಷ ಅಣ್ಣ, “ಸರ್, ನೀವು ಜೊತೆಯಲ್ಲಿರುವುದಕ್ಕೆ, ನೀವು ಬಂದದಕ್ಕಷ್ಟೇ ನಮಗೂ ಈ ಭಾಗ್ಯ!” ಎಂದು ವಿನಯದಿಂದ ಹೇಳಿದರು. ಹಾಗೆಯೇ ನಾವೆಲ್ಲರೂ ಗುರುಗಳು ಪಾದಕ್ಕೆ ನಮಸ್ಕಾರಗಳನ್ನು ಮಾಡಿದೆವು. ಮೈಸೂರಿನವರೇ ಒಬ್ಬರು ತ್ಯಾಗರಾಜರ ಮನೆಯ ಬಳಿ ತಿಂಡಿ ವ್ಯವಸ್ಥೆ ಮಾಡಿದ್ದಾರೆಂದು ಅವರ ಮನೆಗೆ ಹೋದೆವು. ಹಿರಿಯ ದಂಪತಿಗಳು ಹಾಗು ಅವರ ಮಗ. ಹಳೆಯ ಮನೆ. ಹಳೆಯದಾದರೂ ಸುಂದರ ದೇವರ ಪಟಗಳು, ಹಿತ್ತಲಿನಲ್ಲಿ ಮಾವು, ಕರಬೇವು, ನಿಂಬೆ, ಸೀಬೆ ಹೀಗೆ ವಿವಿಧ ಮರಗಳು. ಮನೆಯ ಮುಂಬಾಗಿಲಿಗೆ ಕಾವೇರಿ ತೀರ. ಅತ್ಯಂತ ಪ್ರೀತಿಯಿಂದ ಅವರು ಇಡ್ಲಿ, ಪೊಂಗಲು, ಚಟ್ನಿ, ಸಾಂಬಾರು, ಕೇಸರೀ ಬಾತುಗಳನ್ನು ಮಾಡಿ ಬಡಿಸಿದರು. ಚೆನ್ನಾದ ಕಾಫಿಯನ್ನೂ ನೀಡಿದರು. ನಮ್ಮ ಮನೆಯಲ್ಲಿ ಕಾಫಿ ಮಾಡುವುದಿಲ್ಲವಾದ್ದರಿಂದ ನಾನು ತಮಿಳುನಾಡಿನಲ್ಲಿ ಹೋದ ಕಡೆಯಲ್ಲೆಲ್ಲಾ ಕಾಫಿ ಕುಡಿದೆ! ಸರಿ ತಿಂಡಿ ಎಲ್ಲವೂ ಆಯಿತು. ಗುರುಗಳು ನಮ್ಮೆಲ್ಲರಿಗೂ, “ಬನ್ನಿರೋ ಹಿರಿಯ ದಂಪತಿಗಳಿದ್ದಾರೆ ಪ್ರವರ ಹೇಳಿ ಕಾಲು ಮುಟ್ಟೋಣ” ಎನ್ನುತ್ತಾ ಮೊದಲು ಅವರೇ ಪ್ರವರ ಹೇಳಿ ನಮಸ್ಕಾರಗಳನ್ನು ಮಾಡಿದರು. ನಂತರ ನಾವು ನಮಸ್ಕಾರಗಳನ್ನು ಮಾಡಲು ಅವರು ತಾಂಬೂಲಾದಿಗಳನ್ನು ಎಷ್ಟು ಬೇಡವೆಂದರೂ ನೀಡಿದರು. ಕೊನೆಗೆ ಹೋಗುವಾಗ ಹರ್ಷ ಅಣ್ಣನ ಕೈಲಿ ಎರಡು ಹಾಡನ್ನು ಹೇಳಿಸಿ, ನಂತರ “ಗುರುಗಳು ನಮ್ಮ ಕಡೆಯಿಂದ ಏನಾದರೂ ಕಡಿಮೆಯಾಗಿದ್ದರೆ ದಯವಿಟ್ಟು ಕ್ಷಮಿಸಿ” ಎಂದುಬಿಟ್ಟರು. ಅದೆಂತಹ ಸಂಸ್ಕಾರ ಅವರದ್ದು! ಗುರುಗಳು ಮಾತಿನಲ್ಲಿ, “ಇವರ ಮನೆ, ನಡವಳಿಕೆ, ನೋಡಿದ ತಕ್ಷಣವೇ ಹೃದಯ ತುಂಬಿತು. ಇವರು ರುಚಿ ರುಚಿಯಾಗಿ ಹಾಕಿದ ತಿಂಡಿ ಹೊಟ್ಟೆ ತುಂಬಿಸಿತು”.
ಈ ಪ್ರವಾಸ ಕಥನದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40750
(ಮುಂದುವರಿಯುವುದು)
–ತೇಜಸ್ ಎಚ್ ಬಾಡಾಲ, ಮೈಸೂರು
Beautiful
ತಿರುವಯ್ಯಾರಿನಲ್ಲಿರುವ ತ್ಯಾಗರಾಜರ ಸಮಾಧಿ ಬಳಿಯ ಅವರ ಗುಡಿ ಮುಂದೆ ಸಂಗೀತ ಸೇವೆ ಮಾಡುವ ಭಾಗ್ಯ ಪಡೆದ ನೀವೇ ಧನ್ಯರು! ಅವರ ಕೃಪೆಯಿಂದ ಹೃದಯವನ್ನೂ, ಉದರವನ್ನೂ ತುಂಬಿಸಿ ಸಂತೃಪ್ತರಾದಿರಿ! ಬರಹದ ಜೊತೆಗೆ ನಮಗೂ ಸಂಗೀತ ಕೇಳಿದ ಅನುಭವ ನೀಡಿದಿರಿ…ಧನ್ಯವಾದಗಳು.
ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಶುಭವಾಗಲಿ ತೇಜಸ್
ಪ್ರವಾಸ ಕಥನದ ಈ ಸಂಚಿಕೆಯೂ ಭಾವಪೂರ್ಣವಾಗಿ ಓದಿಸಿಕೊಂಡಿತು.