ಜಗದ್ಗುರುವಿನ ಜನನ….

Share Button

ಓಂ ಶ್ರೀ ಗುರುಭ್ಯೋ ನಮಃ 

ಯೋಗ ಮಾಯೆಯು ಶ್ರೀಹರಿಯ ಆಣತಿಯಂತೆ ದೇವಕಿಯ ಏಳನೇ ಗರ್ಭದಲ್ಲಿದ್ದ ಪಿಂಡವನ್ನೊಯ್ದು ಗೋಕುಲದಲ್ಲಿದ್ದ ವಸುದೇವನ ಪತ್ನಿ ರೋಹಿಣಿಯ ಗರ್ಭದಲ್ಲಿ ಇರಿಸಿದಳು. ಅಲ್ಲದೆ ಮಹಾವಿಷ್ಣುವಿನ ಆಜ್ಞೆಯಂತೆ ನಂದಗೋಪನ ಪತ್ನಿ ಯಶೋದೆಯ ಗರ್ಭವನ್ನು ಪ್ರವೇಶಿಸಿದಳು. 

ವಸುದೇವ- ದೇವಕಿಯರು ಕಂಸನಿಂದ ಬಂಧಿತರಾಗಿ ಸೆರೆ ಯಲ್ಲಿದ್ದರು. ಹೀಗಿರಲು ಒಂದು ಸುಮಹೂರ್ತದಲ್ಲಿ ಶ್ರೀಹರಿಯು ವಸುದೇವನ ದೇಹದಲ್ಲಿ ಪ್ರವೇಶಿಸಿದನು. ಅಲ್ಲಿಂದ ಶ್ರೀಹರಿಯ ತೇಜವು ದೇವಕಿಯ ಗರ್ಭವನ್ನು ಪ್ರವೇಶಿಸಿತು. ಮಹಾವಿಷ್ಣುವು ದೇವಕಿಯ ಗರ್ಭ ಸೇರಿದನೆಂದು ತಿಳಿದ ಎಲ್ಲಾ ದೇವಾನುದೇವತೆಗಳು, ಋಷಿ- ಮುನಿಗಳು ,ದೇವಕಿ – ವಸುದೇವರನ್ನಿಟ್ಟ ಸೆರೆಮನೆಗೆ ಬಂದರು. ದೇವಕಿಯ ಗರ್ಭದ ಎದುರು ನಿಂತು ಅಖಂಡವಾಗಿ ಶ್ರೀಹರಿಯನ್ನು ಸ್ತೋತ್ರ ಮಾಡಿ ಗರ್ಭಕ್ಕೆ ನಮಸ್ಕರಿಸಿ ಹಿಂತಿರುಗಿದರು.

ದೇವಕಿಗೆ ನವ ಮಾಸ ತುಂಬಲು ಒಂದು ಶುಭ ಮುಹೂರ್ತದಲ್ಲಿ ಮಹಾವಿಷ್ಣುವು ಮಧ್ಯರಾತ್ರಿಯ ಸಮಯ, ರೋಹಿಣಿ ನಕ್ಷತ್ರದಲ್ಲಿ, ಸಕಲ ಗ್ರಹಗಳು ಉಚ್ಛ ಸ್ಥಾನದಲ್ಲಿದ್ದಾಗ ಚತುರ್ಭುಜನಾದ ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ, ಪೀತಾಂಬರಧಾರಿಯಾಗಿ, ಮೇಘ- ಶ್ಯಾಮಲ ವರ್ಣದಲ್ಲಿ ಅವತರಿಸಿದನು. ಶ್ರೀಹರಿಯನ್ನು ನಿಜ ರೂಪದಲ್ಲಿ ಕಂಡ ದಂಪತಿಗಳು ಮಹದಾನಂದದಿಂದ ಆ ಪರಮಾತ್ಮನನ್ನು ಅಖಂಡವಾಗಿ ಸ್ತೋತ್ರ ಮಾಡಿದರು. 

“ಮಂಗಲಂ ಭಗವಾನ್ ವಿಷ್ಣುಃ ಮಂಗಲಂ ಮಧುಸೂಧನಃI ಮಂಗಲಂ ಪುಂಡರೀಕಾಕ್ಷಃ ಮಂಗಳಾಯತನಂ ಹರಿಃII “

ಶ್ರೀಹರಿಯು ತಾನು ಮೂಲ ರೂಪದಲ್ಲಿ ಅವರಿಗೆ ಗೋಚರಿಸಿದ ಕಾರಣವನ್ನು ಈ ರೀತಿಯಾಗಿ ತಿಳಿಸುತ್ತಾನೆ……
” ಹಿಂದೆ ಸ್ವಾಯಂಭೂ ಮನ್ವಂತರದಲ್ಲಿ ನೀವಿಬ್ಬರೂ “ಸುತಪ-ಪ್ರಶ್ನೆ” ಎಂಬ ದಂಪತಿಗಳಾಗಿದ್ದಿರಿ. ಆಗ ನನ್ನ ಕುರಿತು ಘನ – ಘೋರ ತಪಸ್ಸನ್ನು ಆಚರಿಸಿ ನನ್ನ ಸಮಾನನಾದ ಪುತ್ರನನ್ನು ಬೇಡಿದಿರಿ. ಆಗಲಿ ಎಂದ ನಾನು ನಿಮ್ಮ ಪುತ್ರನಾಗಿ ಜನಿಸಬೇಕಾಯಿತು. ಹಾಗೂ “ಪ್ರಶ್ನೆಗರ್ಭ” ಎಂಬ ಹೆಸರಿನಿಂದ ನಾನು ಪ್ರಸಿದ್ಧನಾದೆನು. ಆಮೇಲೆ ನೀವಿಬ್ಬರೂ ಎರಡನೇ ಜನ್ಮದಲ್ಲಿ ಕಶ್ಯಪ- ಅದಿತಿಯರಾಗಿ ಜನಿಸಿದಿರಿ. ಆಗ ಮತ್ತೆ ನಾನು ನಿಮ್ಮ ಮಗನಾಗಿ ಜನಿಸಿದೆನು. “ಉಪೇಂದ್ರ” “ವಾಮನ ” ನೆಂದೂ ನನ್ನನ್ನು ಕರೆದರು. ಈಗ ಈ ಜನ್ಮದಲ್ಲಿ ನೀವು ದೇವಕಿ- ವಸುದೇವರಾದಿರಿ. ನಾನೇ ಮತ್ತೆ ನಿಮ್ಮ ಉದರದಲ್ಲಿ ಜನಿಸಿ ಮೂರು ಜನ್ಮಗಳಲ್ಲಿ ನಿಮಗೆ ಮಗನಾಗಿ ಜನಿಸಿ ಬಂದಿದ್ದೇನೆ. ಇನ್ನು ನಾನು ಸಾಮಾನ್ಯ ಶಿಶುವಾಗುವೆನು.” 

ಎಲೈ! ವಸುದೇವನೇ, ನೀನು ನನ್ನನ್ನು ಈಗಿಂದೀಗಲೇ ಗೋಕುಲಕ್ಕೆ ಒಯ್ದು ನಂದಗೋಪನ ಪತ್ನಿ ಯಶೋದೆಯ ಬಳಿ ನನ್ನನ್ನು ಬಿಟ್ಟು, ಅಲ್ಲಿ ಈಗ ತಾನೇ ಜನಿಸಿದ ಹೆಣ್ಣು ಕೂಸನ್ನು ತಂದು ಇಲ್ಲಿ ದೇವಕಿಯ ಮಗ್ಗುಲಲ್ಲಿ ಮಲಗಿಸು; ಎಂದು ಹೇಳಿದವನೇ ಶ್ರೀಹರಿಯು ಈಗ ತಾನೆ ಜನಿಸಿದ ಸಾಮಾನ್ಯ ಶಿಶುವಾದನು. 

ಶ್ರೀಹರಿಯ ಆಜ್ಞೆಯಂತೆ ವಸುದೇವನು ಒಂದು ಬುಟ್ಟಿಯಲ್ಲಿ ಕೂಸನ್ನು ಮಲಗಿಸಿ ಎತ್ತಿ ಕೊಂಡು ಹೊರಟನು.

ಕೂಡಲೇ ಗಾಢಾಂಧಕಾರ ಕತ್ತಲೆಯಲ್ಲಿ ಸೂರ್ಯ ಪ್ರಕಾಶದಂತೆ ದಾರಿ ತೋರುವ ಬೆಳಕು ಬಿದ್ದಿತು. ಸೆರೆಮನೆಯ ಬಾಗಿಲಿನ ಸರಪಳಿಗಳು ತಾವೇ ಕಳಚಿ ಬಾಗಿಲು ತೆರೆಯಲ್ಪಟ್ಟಿತು. ಶ್ರೀಹರಿಯ ಮಾಯೆಯಿಂದ ಕಾವಲುಗಾರರೆಲ್ಲರೂ ನಿದ್ರೆಗೆ ಜಾರಿದರು. ಆಗ ಆದಿಶೇಷನು ಬಂದು ತನ್ನ ಹೆಡೆಯನ್ನು ಶಿಶುವಿಗೆ ಮಳೆ – ಗಾಳಿ ಬಡಿಯದಂತೆ ಮಾಡಿದನು. ತುಂಬಿ ಹರಿಯುತ್ತಿದ್ದ ಯಮುನಾ ನದಿ ವಸುದೇವನಿಗೆ ದಾರಿ ಬಿಟ್ಟು ಕೊಟ್ಟಳು. ಇದರಿಂದ ವಸುದೇವನು ನಿರಾಯಾಸವಾಗಿ ಗೋಕುಲ ತಲುಪಿದನು.ಗೋಕುಲವಾಸಿಗಳು, ನಂದಗೋಪನ ಪತ್ನಿ ಯಶೋದೆ ಎಲ್ಲರೂ ಗಾಢ ನಿದ್ದೆಯಲ್ಲಿರಲು , ಅವಳ ಪಕ್ಕದಲ್ಲಿ ತನ್ನ ಮಗುವನ್ನು ಮಲಗಿಸಿ, ಅಲ್ಲಿದ್ದ ಹೆಣ್ಣು ಶಿಶುವನ್ನು ಎತ್ತಿಕೊಂಡು ಹೊರಟನು.

ಮರಳಿ ಬಂದ ವಸುದೇವನು ಕಾರಾಗೃಹವನ್ನು ಪ್ರವೇಶಿಸುತ್ತಿದ್ದಂತೆಯೇ ಬಾಗಿಲಗಳು ತಾವೇ ಮುಚ್ಚಿಕೊಂಡು ಸರಪಳಿಗಳು ಬಿಗಿದುಕೊಂಡು ಬೀಗವು ಹಾಕಲ್ಪಟ್ಟಿತು. ಕೂಡಲೇ ಮಗು ಅಳಲು ಆರಂಭಿಸಿತು. ಕಾವಲುಗಾರರು ಓಡಿ ಹೋಗಿ ಕಂಸನಿಗೆ ಸುದ್ದಿ ಮುಟ್ಟಿಸಿದರು. ದೂತರ ಧ್ವನಿ ಕೇಳಿ ಗಡಿಬಿಡಿಯಿಂದ ಎದ್ದ ಕಂಸನು ಖಡ್ಗಧಾರಿಯಾಗಿ ಕಾರಾಗೃಹಕ್ಕೆ ಬಂದನು. 

ಎಲ್ಲಿದೆ ಕೂಸು ? ಎಲ್ಲಿದೆ ಕೂಸು? ಎನ್ನುತ್ತಾ ಕೂಸಿನ ಎರಡು ಕಾಲುಗಳನ್ನು ಒಂದೇ ಮುಷ್ಟಿಯಲ್ಲಿ ಹಿಡಿದು ಎತ್ತಲು ಧಾವಿಸಿದನು. ಇದು ಹೆಣ್ಣು ಮಗು ನಿನ್ನನ್ನು ಏನೂ ಮಾಡಲಾರದು ಎಂದು ದೇವಕಿ ಎಷ್ಟೇ ಬೇಡಿಕೊಂಡರೂ ಕ್ರೂರಿ ಕಂಸನು ಕರಗಲಿಲ್ಲ.

ಬಲವಂತವಾಗಿ ಕೂಸನ್ನು ದೇವಕಿಯ ಕೈಯಿಂದ ಕಿತ್ತುಕೊಂಡು ಗರಗರನೆ ತಿರುಗಿಸಿದನು. ಇನ್ನೇನು ಎದುರಿಗಿರುವ ದೊಡ್ಡ ಬಂಡೆಗೆ ಅಪ್ಪಳಿಸಬೇಕು ಎನ್ನುವಷ್ಟರಲ್ಲಿ ಕೂಸು ಕೈಯಿಂದ ಕೊಸರಿಕೊಂಡು ಆಕಾಶಕ್ಕೆ ಜಿಗಿಯಿತು. ಆಕಾಶದಲ್ಲಿ ಮೂಲ ರೂಪದಲ್ಲಿ ಬೃಹದಾಕಾರವಾಗಿ ಗೋಚರಿಸಿತು. ಶ್ರೀ ಹರಿಯು ಮಹಾ ಮಾಯೆಯ ಶಕ್ತಿ ರೂಪ ಧರಿಸಿ, ಅಷ್ಟ ಭುಜೆಯಾಗಿ, ಆಯುಧ ಪಾಣಿಯಾಗಿ ಆಕಾಶದಿಂದಲೇ ಹೀಗೆಂದಳು————-

“ಎಲೈ ಮೂರ್ಖ! ನನ್ನನ್ನು ಕೊಲ್ಲಬೇಕೆಂದಿರುವೆಯಾ? ನಿನ್ನನ್ನು ಕೊಲ್ಲುವವನು ಈಗಾಗಲೇ ಜನಿಸಿ ಬೇರೆಡೆಯಲ್ಲಿ ಬೆಳೆಯುತ್ತಿದ್ದಾನೆ.”

“ಅವಿವೇಕಿಯೇ! ನಿನ್ನ ಪ್ರಾರಬ್ಧದಿಂದ ನೀನು ತಪ್ಪಿಸಿಕೊಳ್ಳಲಾರೆ. ಇನ್ನಾದರೂ ನಿನ್ನ ಹಿಂಸಾ ವೃತ್ತಿಯನ್ನು ಬಿಡು. ಸಾತ್ವಿಕರಂತೆ ಬಾಳು ಎಂದು ಘರ್ಜಿಸಿ” ಅಂತರ್ಧಾನಳಾದಳು.

ಹೀಗೆ ಮಥುರಾ ನಗರದ ಸೆರೆಮನೆಯಲ್ಲಿ ಜನಿಸಿದ ಶ್ರೀ ಕೃಷ್ಣನು ಯಶೋದೆ- ನಂದ ಗೋಪರ ಮಗನಾಗಿ ಬೆಳೆಯತೊಡಗಿದನು.

 ಹರಿಃ ಓಂ!

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.

6 Responses

  1. ಪ್ರಸ್ತುತ ಕೃಷ್ಣ ಜನ್ಮಾಷ್ಟಮಿಗೆ ಪೂರಕವಾದ..ಜಗದ್ಗುರು ವಿನ ಜನನಕಥೆಕೊಟ್ಟ ನಿಮಗೆ ಧನ್ಯವಾದಗಳು.. ಮೇಡಂ

  2. ನಯನ ಬಜಕೂಡ್ಲು says:

    Nice

  3. ಕೃಷ್ಣನ ಜನನದ ಸುಂದರವಾಗಿ ಮೂಡಿಬಂದಿದೆ

  4. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಧನ್ಯವಾದಗಳು ನಯನ ಮೇಡಂ ಮತ್ತು ನಾಗರತ್ನ ಮೇಡಂ

  5. ಶಂಕರಿ ಶರ್ಮ says:

    ಶ್ರೀಕೃಷ್ಣ ಪರಮಾತ್ಮನ ಜನನದ ಕುರಿತು ಮೂಡಿಬಂದ ಸಕಾಲಿಕ ಲೇಖನವು ಬಹಳ ಚೆನ್ನಾಗಿದೆ ವನಿತಕ್ಕ.

  6. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಧನ್ಯವಾದಗಳು ಗಾಯತ್ರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: