ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಜಂಬುಕೇಶ್ವರ ದೇವಸ್ಥಾನದಿಂದ ನೇರವಾಗಿ ತಂಜಾವೂರಿಗೆ ಹೊರಟೆವು. ತಂಜಾವೂರು ನನಗೆ ವಿಶೇಷವಾಗಿ ಆಸಕ್ತಿಯ ಕ್ಷೇತ್ರವಾಗಿತ್ತು. ಕಾರಣ ಕಲ್ಕಿ ಕೃಷ್ಣಮೂರ್ತಿಯವರ ಪೊನ್ನಿಯಿನ್‌ ಸೆಲ್ವನ್‌ ಕಾದಂಬರಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಒಂದು ಈ ತಂಜಾವೂರು. ಎರಡನೆಯದಾಗಿ ರಾಜರಾಜ ಚೋಳನು ಕಟ್ಟಿಸಿದ ಬೃಹದೀಶ್ವರ ದೇವಾಲಯವಿರುವುದೂ ಇಲ್ಲಿಯೇ. ತಂಜಾವೂರಿನ ಹೃದ್ಭಾಗದಲ್ಲಿ ಈ ದೇವಸ್ಥಾನವಿದೆ. ಇದನ್ನು ಅಲ್ಲಿಯ ಜನರು “ಪೆರಿಯ ಕೋವಿಲ್”‌ (ಅರ್ಥಾತ್‌ ದೊಡ್ಡ ದೇವಸ್ಥಾನ) ಎಂದು ಕರೆಯುತ್ತಾರೆ. ಬೃಹದೀಶ್ವರ ದೇವಸ್ಥಾನದಿಂದ ಸುಮಾರು ಐನೂರು ಮೀಟರ್‌ ದೂರದಲ್ಲಿಯೇ ಹರ್ಷ ಅಣ್ಣ ಪೊನ್ನಿ ರೆಸಿಡೆನ್ಸಿ ಎಂಬಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದರು.

ಪೊನ್ನಿ ಎನ್ನುವುದು ನಾನು ಈಗಾಗಲೇ ಹೇಳಿದಂತೆ ನನಗೆ ಇಷ್ಟವಾದ ಹೆಸರೂ ಆಗಿತ್ತು. ಸ್ವಲ್ಪ ಹೊತ್ತು ಕೊಠಡಿಯಲ್ಲಿ ಕಾಲು ಚಾಚಿಕೊಂಡು ಹೋಟೇಲಿನ ಮುಂಭಾಗಕ್ಕೆ ಬಂದಾಗ ನಮಗೊಂದು ಫಲಕ ಕಂಡಿತು. ಹೋಟೇಲಿನಿಂದ ಎಷ್ಟೆಷ್ಟು ದೂರದಲ್ಲಿ ಯಾವ ಯಾವ ದೇವಸ್ಥಾನವಿದೆ ಎಂಬ ಮಾಹಿತಿ ಅದರಲ್ಲಿತ್ತು. ನಮ್ಮ ಕಣ್ಣಿಗೆ ಬಿದ್ದಿದ್ದು ಬಂಗಾರು ಕಾಮಾಕ್ಷಿ ದೇವಸ್ಥಾನ. ಗುರುಗಳ ಕಿವಿ ತಕ್ಷಣ ಚುರುಕಾಯಿತು. “ಲೋ ಬಂಗಾರು ಕಾಮಾಕ್ಷಿ ಇಲ್ಲೇ ಇದೆಯಾ? ದಿವ್ಯ ಕ್ಷೇತ್ರ ಕಣಯ್ಯಾ! ಶ್ಯಾಮಾ ಶಾಸ್ತ್ರಿಗಳು ಸ್ತುತಿಸಿದ ತಾಯಿ ಅವಳೇ ಅಲ್ಲವೇ! ಹೋಗಲೇ ಬೇಕು. ಅಲ್ಲಿ ಹೋಗಿ ನಾವು ಕುಳಿತುಕೊಂಡು ಭೈರವಿ ರಾಗದ ಕಾಮಾಕ್ಷಿ ಸ್ವರಜತಿಯನ್ನು ಹಾಡಲೇ ಬೇಕು!” ಎಂದರು. ನಾವು ಹೊರಟೆವು. ಮೊದಲು ಒಂದು ದೇವಸ್ಥಾನ ಒಳಹೊಕ್ಕಾಗ, ಅಲ್ಲಿದ್ದದ್ದು ಪಟ್ಟಾಭಿರಾಮಸ್ವಾಮಿ! ನಮ್ಮ ಯಾತ್ರೆಗೆ ಇನ್ನೊಂದು ದೇವಸ್ಥಾನವನ್ನು ನೋಡಿದ ಭಾಗ್ಯ ದೊರಕಿದಂತಾಯಿತು. ಅದರ ಪಕ್ಕದಲ್ಲಿಯೇ ಬಂಗಾರು ಕಾಮಾಕ್ಷಿ ದೇವಸ್ಥಾನ. ತೆಲುಗಿನಲ್ಲಿ ಪುಟ್ಟ ಮಕ್ಕಳಿಗೆ ಬಂಗಾರು ಎಂದು ಮುದ್ದಿನಿಂದ ಕರೆಯುವುದೊಂದು ವಾಡಿಕೆ. ಆ ದೇವಾಲಯದ ಮೂರ್ತಿಯಂತೂ ತುಂಬಾ ಮುದ್ದಾಗಿದೆ. ಅದರಲ್ಲೂ ಸೊಗಸಾಗಿ ಕೆಂಪು ಬಣ್ಣದ ಸೀರೆಯನ್ನು ಉಡಿಸಿ ಅವಳಿಗೆ ಅಲಂಕಾರ ಮಾಡಿ, ಸುತ್ತಲೂ ದೀಪಗಳನ್ನು ಬೆಳಗಿಸಿದ್ದರು. ಆವರಣದಲ್ಲಿ ಶ್ಯಾಮಾ ಶಾಸ್ತ್ರಿಗಳ ಪಟವೊಂದಿತ್ತು. ಅದರ ಕೆಳಗೆಯೇ ಕುಳಿತು ಗುರುಗಳು ಕಾಮಾಕ್ಷೀ! ಅಂಬ! ಅನುದಿನಮು ವರವಕನೇ ನೀ ಪಾದಮುಲೆ ದಿಕ್ಕನುಚು ನಮ್ಮಿತಿನಿ! ಶ್ರೀಕಂಚಿ ಕಾಮಾಕ್ಷೀ! ಎಂದು ಆರಂಭಿಸಿದರು. (ಶ್ರೀ ಕಂಚಿ ಕಾಮಾಕ್ಷಿಯೇ! ಅನುದಿನವೂ ನಿನ್ನ ಪಾದವೇ ನನಗೆ ದಿಕ್ಕೆಂದು ನಂಬಿರುವೆನಮ್ಮ). ಅಲ್ಪ-ಸ್ವಲ್ಪ ತೆಲುಗು ಅರ್ಥವಾಗುವ ನಾನು ಕಣ್ಣು ಮುಚ್ಚಿ ಹಾಗೆಯೇ ಕೇಳುತ್ತಾ ಕುಳಿತೆ. ಒಂದೊಂದು ಚರಣದಲ್ಲೂ ಅವಳನ್ನು ವರ್ಣಿಸುತ್ತಾ, ತಾಯೇ ನಿನ್ನಲ್ಲಿ ಶರಣಾಗಿದ್ದೇನೆ; ನನ್ನನ್ನು ಕಾಪಾಡು ತಾಯಿ ಎಂದು ಶ್ಯಾಮಾಶಾಸ್ತ್ರಿಗಳು ಹೈದಯದಿಂದ ಹೇಳಿರುವುದು ತಿಳಿಯುತ್ತಿತ್ತು. ಅಷ್ಟಕ್ಕೂ ಶ್ಯಾಮಾ ಶಾಸ್ತ್ರಿಗಳು ಎಂತಹ ಮಹಾತ್ಮರು! ಅವರ ಈ ಸ್ವರಜತಿಯನ್ನು ಕೇಲುವುದೇ ಒಂದು ಸೌಭಾಗ್ಯ. ಒಂದು ಚರಣವಂತೂ ಪಾತಕಮುಲನು ದೀರ್ಚಿ ನೀ ಪಾದ ಭಕ್ತಿ ಸಂತತಮೀಯವೆ! ಪಾವನಿಗದಾ? ಮೊರವಿನದಾ? ಪರಾಕೇಲನಮ್ಮ! ವಿನಮ್ಮ! ಎಂದು ಹೇಳುತ್ತದೆ. ನಾನು ಮಾಡಿದ ಪಾಪಗಳನ್ನೆಲ್ಲಾ ತೀರಿಸಿ ಸತತವೂ ನಿನ್ನ ಪಾದಭಕ್ತಿಯಲ್ಲಿ ಮುಳುಗುವಂತೆ ಮಾಡೇ! ನೀನು ಪಾವನಿಯಲ್ಲವೇ; ನನ್ನ ಮೊರೆಯು ನಿನಗೆ ಕೇಳದ? ನಾನು ಪರಕೀಯನಾದೆನಾ ಅಮ್ಮ? ಕೇಳಮ್ಮ! ಎಂದು ಶ್ಯಾಮಾ ಶಾಸ್ತ್ರಿಗಳು ತಾಯಿಯನ್ನೇ ಕೇಳುವಂತಿದೆ ಅದು! ಇಷ್ಟರಲ್ಲಿ ನನಗೆ ಕಂಠವು ಬಿಗಿದಿತ್ತು. ಆಗಾಗ ನಾನು ಆ ಬಂಗಾರು ಕಾಮಾಕ್ಷಿಯನ್ನು ನೋಡುತ್ತಲೇ ಇದ್ದೆ. ಕೊನೆಯ ಚರಣವು ಎಂತಹ ಕಠೋರ ಹೃದಯಿಗೂ ಅಳುವನ್ನು ತರಿಸಿಬಿಡುತ್ತದೆ. ಅದನ್ನು ಭೈರವಿ ರಾಗದಲ್ಲಿ ಗುರುಗಳು, ಹರ್ಷ ಅಣ್ಣ, ಕೌಸ್ತುಭ ಅಣ್ಣ ಇಂತಹವರ ಧ್ವನಿಯಲ್ಲಿ ಕೇಳುವುದೇ ಒಂದು ಸೌಭಾಗ್ಯ. ಕೊನೆಯ ಚರಣವಿಂತಿದೆ: ಶ್ಯಾಮಕೃಷ್ಣ ಸಹೋದರಿ ಶಿವಶಂಕರಿ ಪರಮೇಶ್ವರಿ! ಹರಿ ಹರಾದುಲಕು ನೀ ಮಹಿಮಲುಗಣಿಂಪುಪ; ತರಮಾ ಸುತುಡಮ್ಮಾ! ಅಭಿಮಾನಮು ಲೇದಾ ನಾ ಪೈ? ದೇವಿ ಪರಾಕೇಲನೇ? ಬ್ರೋವವೆ ಇಪುಡು ಶ್ರೀ ಭೈರವಿ!

ಶ್ಯಾಮಕೃಷ್ಣ ಸಹೋದರಿಯೇ, ಶಿವಶಂಕರಿಯೇ, ಪರಮೇಶ್ವರಿಯೇ! ಹರಿ, ಹರ ಇವರಾದರೂ ನಿನ್ನ ಮಹಿಮೆ ಎಂಥದೆಂದು ಎಣಿಸಬಲ್ಲರೇ? ನಾನು ನಿನ್ನ ಮಗನಮ್ಮ! ನನ್ನ ಮೇಲೆ ಅಭಿಮಾನವಿಲ್ಲವೇ? ದೇವಿ! ಏಕಮ್ಮ ಈ ರೀತಿ ನನ್ನನ್ನು ಪರಕೀಯನೆಂದೆಣಿಸುತ್ತೀಯೆ? ನನ್ನನ್ನು ಈಗಲೇ ಪೊರೆಯೇ ಶ್ರೀ ಭೈರವಿ!

ಬಂಗಾರು ಕಾಮಾಕ್ಷಿ ಮಂದಿರ

“ನಿನ್ನ ಮಗನಮ್ಮಾ! ಅಭಿಮಾನವಿಲ್ಲವೇ?” ಎಂದು ಹಾಡಿದಾಗ ಮಾತ್ರ, ನನಗೆ ಕಣ್ಣಲ್ಲಿ ನೀರು ಜಿನುಗಿತು. ಆ ತಾಯಿಯನ್ನು ಇಷ್ಟು ಭಕ್ತಿಯಿಂದ ಕೇಳಿದರಲ್ಲವೇ ಮೋಕ್ಷ ಪ್ರಾಪ್ತಿ! ಗುರುಗಳ ಮಾತಿನಲ್ಲಿ ಹೇಳುವುದಾದರೆ, “ನೂರು ಸಲ ಹಾಡಬಹುದು ಕಣಯ್ಯ! ಅದೆಷ್ಟು ಚೆನ್ನಾಗಿ ಮಾಡಿದ್ದಾರೆ ಶ್ಯಾಮಾ ಶಾಸ್ತ್ರಿಗಳು”. ಆ ತಾಯಿಯನ್ನೇ ನೋಡುತ್ತಾ ನಾವೆಲ್ಲರೂ ಸ್ತಬ್ಧರಾಗಿ ನಿಂತೆವು. ಆರತಿ ಆದ ನಂತರ ಆದಿ ಶಂಕರರ ಮೀನಾಕ್ಷಿ ಸ್ತೋತ್ರವನ್ನು ಹಾಡಿದೆವು. ಪ್ರತಿ ಬಾರಿಯೂ ಮಾಂ ಪಾಹಿ ಮೀನಾಂಬಿಕೆ ಎಂದು ಹಾಡುವಾಗ ಹೃದಯಕ್ಕೆ ಬಹಳ ಹಿತಕಾರಿ ಎನಿಸುತ್ತಿತ್ತು.

ಅಲ್ಲಿಂದ ನೇರವಾಗಿ ಬೃಹದೀಶ್ವರನ ದೇವಾಲಯ (ಅಲ್ಲಿನ ಜನರಿಗೆ ಪೆರಿಯ ಕೋವಿಲ್)‌ಕ್ಕೆ ಹೋದೆವು. ಇಡೀ ದೇವಾಲಯವೇ ಕೋಟೆಯಂತೆ ಕಟ್ಟಲಾಗಿದೆ. ದೇವಾಲಯದ ಸುತ್ತಲೂ ಕಂದಕವಿದೆ. ಅಲ್ಲಿ ಹಿಂದೆ ನೀರಿರುತ್ತಿತ್ತು ಆದರೆ ಈಗಿಲ್ಲ. ದೇವಾಲಯದ ಗೋಪುರವೇ ಎಲ್ಲಕ್ಕಿಂತಲೂ ಅಚ್ಚರಿ ಮೂಡಿಸುವ ವಿಷಯ. ದೇವಾಲಯ ನಿರ್ಮಿಸಲು ಸಿಮೆಂಟು ಇತ್ಯಾದಿಗಳನ್ನು ಚೋಳರು ಬಳಸೇ ಇಲ್ಲ. ಎಲ್ಲವೂ ಒಂದರಲ್ಲೊಂದು ಸೇರಿಕೊಂಡರೆ ತೆರೆಯಲಾರದಂತಹ ನಿರ್ಮಾಣ. ಮುಖ್ಯ ದೇವಾಲಯದ ಗೋಪುರದ ಮೇಲಿರುವ ಕುಂಭವೊಂದೇ ಸುಮಾರು ಇಪ್ಪತ್ತೈದು ಟನ್ನುಗಳಷ್ಟು ಭಾರವಿರುವ ಏಕಶಿಲೆ. ಇದರ ಕೆತ್ತನೆಗಳ ಕುರಿತಾಗಿ ನಿಮಗೆ ಹೇಳುವುದಕ್ಕಿಂತಲೂ ನನಗೆ ಅಲ್ಲಿ ಆದ ಅನುಭವಗಳನ್ನು ವಿವರಿಸುತ್ತೇನೆ. ಎಲ್ಲಾ ದ್ವಾರಪಾಲಕರೂ ಒಂದು ಕಾಲನ್ನೆತ್ತಿ ತಮ್ಮ ಗದೆಯ ಮೇಲಿಟ್ಟಿರುತ್ತಾರೆ. ದೇವಾಲಯದ ಆವರಣವನ್ನು ಪ್ರವೇಶಿಸಿದ ತಕ್ಷಣ ಮೆದುಳು ಮನಗಳು ಸುಮ್ಮನಾಗಿಬಿಡುತ್ತವೆ. ಯಾವ ಭಾವನೆಗಳು, ಆಲೋಚನೆಗಳೂ ಮೂಡದು. ಸುಮ್ಮನೆ ಆ ದೇವಾಲಯವನ್ನು ನೋಡುತ್ತಾ ನಿಂತುಬಿಡುತ್ತೇವೆ. ಏನು ನೋಡುವುದೋ, ಏನನ್ನು ಬಿಡುವುದೋ ಒಂದೂ ತಿಳಿಯುವುದಿಲ್ಲ.

ಬೃಹದೀಶ್ವರ ದೇವಾಲಯ,ತಂಜಾವೂರು

ಮುಖ್ಯ ಶಿವನ ದೇವಾಲಯ ಈ ದೊಡ್ಡ ಆವರಣದ ಮಧ್ಯದಲ್ಲಿದೆ. ಅದರ ಮೇಲೆ ಇರುವುದೇ ಈ ಶ್ರೀ ವಿಮಾನ. ಹೊರಕ್ಕೇ ಆ ಬೃಹತ್‌ ಶಿವಲಿಂಗ ಕಾಣುತ್ತದೆ. ದೇವಸ್ಥಾನದ ಒಳಗೆ ಹೋದಂತೆಯೇ ಶಿವಲಿಂಗದ ನಿಜವಾದ ಗಾತ್ರವು ನಮಗೆ ಗೊತ್ತಾಗುತ್ತದೆ. ಅವನನ್ನು ನೋಡುತ್ತಲೇ ಕೇಳುವುದೇನೋ, ಬಿಡುವುದೇನೋ ಅರಿಯದೆ ಸುಮ್ಮನೆ ಅವನನ್ನು ಓಂ ನಮೋ ಭಗವನ್‌ ವಿಶ್ವೇಶ್ವರರಾಯ ಮಹಾದೇವಾಯ..ಎಂದು ಹಾಡಿ ಹೊಗಳಿಬಿಡುತ್ತೇವೆ. ತಮಿಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಶಿವಲಿಂಗವಿರುವ ಮುಖ್ಯ ದೇಗುಲ, ಅಂತೆಯೇ ಅದರ ಹಿಂಬದಿಯ ಗೋಡೆಯಲ್ಲಿ ಲಿಂಗೋದ್ಭವ ಶಿವ; ಅವನ ಆದಿ ಅಂತ್ಯಗಳನ್ನು ಪರೀಕ್ಷಿಸುತ್ತಿರುವ ಹಂಸ ರೂಪಿ ಬ್ರಹ್ಮ ಹಾಗು ವರಾಹ ರೂಪಿ ವಿಷ್ಣು; ಇನ್ನಂದು ಕಡೆ ಮೌನದಲ್ಲೇ ವ್ಯಾಖ್ಯಾನವನ್ನು ಮಾಡುವ ಶ್ರೀ ದಕ್ಷಿಣಾಮೂರ್ತಿ; ಹಾಗೆಯೇ ಪಾರ್ವತಿ, ಸುಬ್ರಹ್ಮಣ್ಯ, ದುರ್ಗೆ-ಇಷ್ಟು ಸನ್ನಿಧಿಗಳಿರುತ್ತವೆ. ಇಲ್ಲಿ ಇನ್ನೂ ಸುಂದರವಾಗಿ ನಿಂತಿರುವವಳು ಬೃಹನ್ನಾಯಕಿ. ನಾವು ಬೃಹದೀಶ್ವರನ ದೇವಾಲಯದ ಆವರಣದಲ್ಲೇ ಕುಳಿತು ಶ್ರೀರುದ್ರ ಪಠಿಸಿದೆವು. ನಂತರ ಮುದ್ದುಸ್ವಾಮಿ ದೀಕ್ಷಿತರ ಬೃಹದೀಶ್ವರಾಯ ನಮಸ್ತೆ ಎಂಬ ಶಂಕರಾಭರಣ ರಾಗದ ಕೃತಿಯನ್ನು ಗುರುಗಳು ಪಾಠ ಮಾಡಿದರು. ಕ್ಷೇತ್ರದಲ್ಲಿ ಕುಳಿತು, ಅದೇ ಕ್ಷೇತ್ರ ಕೃತಿಯನ್ನು ಪಾಠ ಮಾಡಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪುಣ್ಯ ಬೇರಾವುದಿದೆ? ಈ ದೇವಾಲಯದ ಬಹುತೇಕ ಗೋಡೆಗಳ ಮೇಲೆ ಶಾಸನಗಳನ್ನು ಕೆತ್ತಿಸಿದ್ದಾರೆ. ಹರ್ಷ ಅಣ್ಣ ಹೇಳಿದಂತೆ, ಎ ಎಸ್‌ ಐ (ಅರ್ಕಿಯಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ-ಭಾರತ ಪುರಾತತ್ವ ಸಮೀಕ್ಷೆ)ಯ ಅಧಿಕಾರಿಗಳಿಗೆ ಶಾಸನಗಳನ್ನು ಓದುವುದು ಹಾಗು ಸಂಗ್ರಹಿಸುವುದನ್ನು ಕಲಿಸಲು ಮೊದಲು ಕಳುಹಿಸುವುದು ಈ ಬೃಹದೀಶ್ವರ ದೇವಾಲಯಕ್ಕೇ. ಗುರುಗಳು ತಮಾಷೆಗಾಗಿ, “ರಾಜ ಎಲ್ಲವನ್ನೂ ಇದರ ಮೇಲೆ ಬರೆಸಿಬಿಟ್ಟಿದ್ದಾನೆ ಕಣಯ್ಯ. ಶಿಲ್ಪಿ ಬಂದು, ನೀವು ಹೇಳಿದ್ದೆಲ್ಲಾ ಕೆತ್ತಿದ್ದೀವಿ ಸ್ವಾಮಿ; ಆದರೆ ಇನ್ನೂ ಜಾಗ ಮಿಕ್ಕಿದೆ ಎಂದಾಗ, ರಾಜ ವೈದ್ಯನನ್ನು ಕರೆಸಿ, ಅವನ ಕೈಲೂ ಬರೆಸಿ ಎಂದು ಹೇಳಿದ” ಎಂದು ಹೇಳಿ ನಮ್ಮನ್ನೆಲ್ಲಾ ನಗಿಸಿದರು.

ಎಲ್ಲಾ ಸನ್ನಿಧಿಗಳನ್ನು ನೋಡಿದ ನಂತರ ಸ್ವಾಮಿಯ ಶಯನ ಸಮಯ ಆರಂಭವಾಯಿತು. ತಮಿಳುನಾಡಿನಲ್ಲಿ ಓದುವರ್‌ ಎಂಬ ಒಂದು ಜನಾಂಗವಿದೆ. ದೇವರಿಗಾಗಿಯೇ ಹಾಡುವ ಜನರು ಅವರು. ಪರಂಪರಾಗತವಾಗಿ ಅವರು ಕೆಲವು ಹಾಡುಗಳನ್ನು ಕಲಿಸುತ್ತಾ ಬರುತ್ತಾರೆ. ಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬೃಹನ್ನಾಯಕಿಯ ಶಯನ ಕೊಠಡಿಗೆ ತರುತ್ತಾರೆ. ಅದರ ಮುಂದೆ ಎಕ್ಕಲೈ ಎನ್ನುವ ವಾದ್ಯವನ್ನು ಊದುತ್ತಾ ದಾರಿ ಮಾಡುತ್ತಾ ಬರುತ್ತಾರೆ. ಕೊನೆಗೆ ಸ್ವಾಮಿಗೂ ತನ್ನ ಪತ್ನಿಗೂ ಸಾಂಬ್ರಾಣಿ, ಹೂ ಇತ್ಯಾದಿಗಳಿಂದ ಸಿಂಗಾರ ಮಾಡಿ, ಕೊಠಡಿಯ ಬಾಗಿಲು ಹಾಕಿ ಅಲ್ಲಿರುವವರಿಗೆ ಪ್ರಸಾದ ಹಂಚುತ್ತಾರೆ. ಆ ಉತ್ಸವವನ್ನು ನೋಡುವುದೇ ಒಂದು ಸಂಭ್ರಮ. ಸ್ವಾಮಿಯು ಪಲ್ಲಕಿಯಲ್ಲಿರುವ ತನಕ ಆ ಪಲ್ಲಕಿಗೆ ಬೆಲೆ. ಅದಾದ ನಂತರ ಅದನ್ನು ನೋಡುವವರು ಯಾರೂ ಇರರು. ಕೊನೆಗೆ ಅದ್ಭುತ ರುಚಿಯ ಪೊಂಗಲ್‌ ಪ್ರಸಾದವನ್ನು ಸ್ವೀಕರಿಸಿ ಪೊನ್ನಿ ರೆಸಿಡೆನ್ಸಿಗೆ ಹಿಂತಿರುಗಿದೆವು.

ಹರ್ಷ ಅಣ್ಣ, ಕೌಸ್ತುಭ ಅಣ್ಣ, ಹಾಗು ನಾನು ಬೆಳಗ್ಗೆಯ ದರ್ಶನಕ್ಕೆ ಮತ್ತೆ ಹೋಗಬೇಕೆಂದು ಯೋಚಿಸಿದೆವು. ಅಂತೆಯೇ ಬೆಳಗ್ಗೆ ಎದ್ದೇಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು, ಬೇಗನೇ ಎದ್ದೆವು. ಬೆಳಂಬೆಳಗ್ಗೆ ಅತ್ಯಂತ ಕಡಿಮೆ ಜನರಿದ್ದ ಸಮಯ. ಆದರೆ ಎಲ್ಲರೂ ಬೃಹದೀಶ್ವರನು ಕಾಣದಂತೆ ಎಳೆದಿದ್ದ ತೆರೆಯ ತೆರೆಯುವಿಕೆಗೇ ಕಾಯುತ್ತಿದ್ದರು. ಅದಿನ್ನೂ ಎಷ್ಟು ಹೊತ್ತಾಗಬಹುದೋ ಎಂದು ಯೋಚಿಸಿ ನಾವು ಮತ್ತೊಮ್ಮೆ ಶ್ರೀರುದ್ರವನ್ನು ಪಠಿಸೋಣವೆಂದು ಕುಳಿತ ತಕ್ಷಣವೇ ಜನರ ಉದ್ಗಾರ “ಹರ ಹರ ಮಹದೇವ! ಓಂನಮಃಶಿವಾಯ”. ನಾವೂ ಆನಂದದಲ್ಲಿ ಎದ್ದು ಹೋಗಿ ಮೊದಲು ಅವನ ದರ್ಶನ ಮಾಡಿ, ಹಣೆಗೆ ವಿಭೂತಿ ಇಟ್ಟುಕೊಂಡು, ನಂತರ ಕುಳಿತುಕೊಂಡು ರುದ್ರಪಠಣ ಪ್ರಾರಂಭಿಸಿದೆವು. ಜೊತೆಗೆ ಹರ್ಷ ಅಣ್ಣನ ಬಳಿ ಇದ್ದ ಮೈಕ್‌ ಒಂದನ್ನು ಬಳಸಿ ಅದನ್ನು ಧ್ವನಿಮುದ್ರಣ (ರೆಕಾರ್ಡ್)‌ ಮಾಡಿದೆವು.ಹೊರ ಬಂದಾಗ ನಾನು ಹರ್ಷ ಅಣ್ಣನನ್ನು ಕೇಳಿದೆ, “ಈ ಊರಿನ ಜನಗಳಿಗೆ ಈ ದೇವಸ್ಥಾನ ಎಷ್ಟು ಸಾಮಾನ್ಯ ಆಗಿಬಿಟ್ಟಿರುತ್ತಲ್ಲ ಅಣ್ಣ? ಮೈಸೂರವರಿಗೆ ಅರಮನೆಯ ತರಹ”. ಅದಕ್ಕೆ ಅವರು, “ಹೂಂ ಕಣೋ, ಯಾವುದು ಅಪರೂಪವೋ ಅದೇ ಕಣೋ ಅದ್ಭುತ. ಹಾಗಾಗಿಯೇ ಪ್ರತಿ ದಿನವನ್ನೂ ನಾವು ಏನಾದರೊಂದು ಹೊಸದಕ್ಕಾಗಿ ಮುಡಿಪಾಗಿಟ್ಟುಬಿಟ್ಟರೆ ಜೀವನವೇ ಸುಂದರ ಅಲ್ವೇನೋ?” ಎಂದರು.

ಈ ಪ್ರವಾಸ ಕಥನದ ಹಿಂದಿನ ಭಾಗ ಇಲ್ಲಿದೆ :   https://www.surahonne.com/?p=40728

(ಮುಂದುವರಿಯುವುದು)

ತೇಜಸ್‌ ಎಚ್‌ ಬಾಡಾಲಮೈಸೂರು

4 Responses

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಶುಭವಾಗಲಿ ತೇಜಸ್

  2. ನಯನ ಬಜಕೂಡ್ಲು says:

    ನಾವೇ ಎಲ್ಲವನ್ನು ನೋಡಿದ್ದೇವೋ ಏನೋ ಅನ್ನುವ ಭಾವವನ್ನು ತರುತ್ತದೆ ತೇಜಸ್ ನಿಮ್ಮ ಬರಹ. ಏನೋ ಒಂದು ಕುತೂಹಲದ ಎಳೆ ಇಣುಕುತ್ತದೆ ನಿಮ್ಮ ಬರಹದಲ್ಲಿ. ಬಹುಷಃ ನಮ್ಮ ದೇಶದ ಸಂಸ್ಕೃತಿಯ ಸೆಳೆತವೇ ಅಂತಹುದೇನೋ. ತುಂಬಾ ಚೆನ್ನಾಗಿದೆ.

  3. ಶಂಕರಿ ಶರ್ಮ says:

    ಸಂಗೀತದ ಯಾತ್ರೆಯಂತಿರುವ ಪ್ರವಾಸ ಕಥನದಲ್ಲಿ ಎರಡನ್ನೂ ಆಸ್ವಾದಿಸುವ ಅವಕಾಶದೊಂದಿಗೆ, ದೇಗುಲಗಳ ವೈಭವವನ್ನೂ ಅನುಭವಿಸುವ ಅವಕಾಶ! ಲೇಖನ ಮಾಲೆಯು ಸುಂದರವಾಗಿದೆ.

  4. Padma Anand says:

    ಪ್ರವಾಸ ತಾಣಕ್ಕೆ ಭೇಟಿಯಿತ್ತಾಗ ಉಂಟಾದ ಅನುಭವಗಳ ವರ್ಣನೆ ಆ ಸ್ಥಳಗಳ ಮಹತ್ವವನ್ನು ಕಣ್ಣ ಮುಂದೆ ಪಡಿಮೂಡಿಸಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: