ವಿಶೇಷ ದಿನ

ಸೈನಿಕ – ಜೀವ ರಕ್ಷಕ

Share Button

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಗೋರಖ್ ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕೂತು ಪ್ರಯಾಣಿಸುತ್ತಿದ್ದೆ. ಅದಾಗಲೇ ರೈಲು ಬೆಂಗಳೂರನ್ನು ಬಿಟ್ಟು ವೇಗದಿಂದ ತನ್ನ ನಿರ್ದಿಷ್ಟ ಸ್ಥಳದತ್ತ ಸಾಗುತ್ತಿತ್ತು. ನನ್ನ ಭೋಗಿಯಲ್ಲಿ ಓರ್ವ ವಯಸ್ಸಾದ ಹೆಂಗಸು, ಮಧ್ಯ ವಯಸ್ಸಿನ ಮಹಿಳೆ, ಒಬ್ಬ ತಂದೆ ಹಾಗು ಆತನ ಮಗ,  ಸೈನ್ಯದ ಪ್ಯಾಂಟ್ ಧರಿಸಿದ್ದ ಒಬ್ಬ ಸೈನಿಕ, ನನ್ನ ಸಹ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. 

ಮಧ್ಯ ವಯಸ್ಸಿನ ಮಹಿಳೆಯಂತೂ ಸಿಡುಕು ಮುಖವನ್ನು ಹೊತ್ತು ಅತ್ತಿಂದಿತ್ತ ಇತ್ತಿಂದತ್ತ ನಡೆದಾಡುತ್ತಿದ್ದಳು. ಅದೇನೋ ಹೇಳಲಾಗದ ಅತೃಪ್ತಿ ಆಕೆಯ ಮುಖದಲ್ಲಿ ಮನೆ ಮಾಡಿತ್ತು. 

ಸೈನಿಕ ಹಾಗು ಆ ವೃದ್ಧ ಮಹಿಳೆ ಹಿಂದಿಯಲ್ಲಿ ಅದಾಗಲೇ ಮಾತನಾಡಲು ಪ್ರಾರಂಭಿಸಿದ್ದರು. ಆಕೆ ಒಬ್ಬಳೇ ಪ್ರಯಾಣಿಸುತ್ತಿದ್ದುದ್ದನ್ನು ಅರಿತ ಸೈನಿಕ ಆಕೆಯ ಭಾರವಾದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಆಸನದ ಕೆಳಗಿಟ್ಟು, ಆಕೆ ತಂದ ಸಣ್ಣ ಹಾಸಿಗೆಯನ್ನು ಹಾಸಿ ಆ ವೃದ್ದೆ ಮಲಗಲು ಅನುವು ಮಾಡಿ ಕೊಡುತ್ತಿದ್ದನು. ತಾನು ಸೈನ್ಯದಿಂದ ರಜೆ ಪಡೆದು ತನ್ನ ಮನೆಗೆ ಹೋಗುತ್ತಿರುವುದಾಗಿ ಆ ವೃದ್ದ ಹೆಂಗಸಿಗೆ ಸಂತೋಷದಿಂದ ಹೇಳುತ್ತಿದ್ದನು. ಟೀ ಖರೀದಿಸಿ ತಾನೂ ಕುಡಿದು ಆ ವೃದ್ದೆಗೂ ತರಿಸಿ ಕೊಟ್ಟನು. 

ಆತನ ಪರೋಪಕಾರ ಮನಸ್ಸು, ತನ್ನ ಸುತ್ತ ಇರುವವರೆಲ್ಲಾ ತನ್ನವರೇ ಎಂಬ ಭಾವ, ಸದಾ ಮಂದಸ್ಮಿತ ಮುಖ, ಆತನೊಬ್ಬ ಯೋಗ್ಯ ಸೈನಿಕನೆಂದು ಸಾರಿ ಸಾರಿ ಹೇಳುತ್ತಿತ್ತು. ದೇಶದ ಪ್ರಜೆಗಳೆಲ್ಲ ತನ್ನವರು, ಅವರ ಸೇವೆಗೆ ತಾನು ಮೀಸಲು ಎಂಬ ಸದ್ಭಾವ ಓರ್ವ ಸೈನಿಕನಿಗಲ್ಲದೆ ಮತ್ಯಾರಿಗೆ ಇರಲು ಸಾಧ್ಯ? 

ರೈಲು ತನ್ನ ಪಾಡಿಗೆ ತಾನು ಗಮ್ಯ ಸ್ಥಾನದತ್ತ ಚಲಿಸುತ್ತಲಿತ್ತು. ಭೋಗಿಯಲ್ಲಿದ್ದ ಎಲ್ಲರೂ ನಿದ್ದೆಗೆ ಜಾರಲು ಆರಂಭಿಸಿದರು. ಆ ಸೈನಿಕ, ” ಮಾಜೀ, ಎಲ್ಲವೂ ಸರಿಯಾಗಿ ಇದೆಯೇ? ನಿಮಗೆ ಇನ್ನೇನಾದರೂ ಬೇಕೇ? ನೀರಿನ ಬಾಟಲಿ ಇದೆಯೇ?” ಎಂದು ಕಾಳಜಿ ಪೂರ್ವಕವಾಗಿ ಕೇಳಿದನು. ಆ ವೃದ್ದೆಯೂ ಸಹ ಅಷ್ಟೇ ವಾತ್ಸಲ್ಯದಿಂದ, ” ಇಲ್ಲ ಬೇಟ, ನನಗೇನೂ ಬೇಡ. ಏನಾದರೂ ಬೇಕಿದ್ದರೆ ಹೇಳುತ್ತೇನೆ” ಎಂದಳು.

ಭೋಗಿಯಲ್ಲಿ ಆ ಸೈನಿಕ ಹಾಗು ವೃದ್ದೆ ಕೆಳಗಿನ ಅಂತಸ್ತಿ ನಲ್ಲಿ ಮಲಗಿದ್ದರೆ, ಮೇಲಿನ ಮಲಗುವ ಸ್ಥಳದಲ್ಲಿ ನಾನು ಹಾಗು ಆ ಮಧ್ಯ ವಯಸ್ಸಿನ ಹೆಂಗಸು ಇದ್ದೆವು. ಮಲಗಿದ್ದ ಸೈನಿಕ ಎದ್ದು ಆ ಮಧ್ಯ ವಯಸ್ಸಿನ ಹೆಂಗಸಿನತ್ತ ತಿರುಗಿ, ” ಬೆಹನ್ ಜಿ, ಸ್ವಲ್ಪ ಫ್ಯಾನ್ ಹಾಕುತ್ತೀರಾ? ಸೆಖೆ ಎನಿಸುತ್ತಿದೆ” ಎಂದು ಅತ್ಯಂತ ವಿನಮ್ರನಾಗಿ ಕೇಳಿಕೊಂಡನು. ಅದಕ್ಕೆ ಆ ಮಹಿಳೆ, ಅಷ್ಟೇ ದಾರ್ಷ್ಟ್ಯದಿಂದ ಸಾಧ್ಯವಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದಳು. ಸೈನಿಕ ನಸು ನಗುತ್ತಾ ಹಾಗೆಯೇ ಮಲಗಿದ. 

PC: Internet


ಆಕೆಯ ನಡವಳಿಕೆಯಿಂದ ನನಗೆ ಕೋಪ ಬಂದಿತು. ಆದರೂ ಬಹಳ ತಾಳ್ಮೆಯಿಂದ “ಆತ ಒಬ್ಬ ಸೈನಿಕ.  ಫ್ಯಾನ್ ಹಾಕಿ ಪ್ಲೀಸ್” ಎಂದು ಕೇಳಿಕೊಂಡೆ. ಅದಕ್ಕವಳು, “ಸೋ ವಾಟ್? ಆತನೂ ಸಹ ನಮ್ಮ ನಿಮ್ಮ ಹಾಗೆ ಸಂಬಳ ತೆಗೆದುಕೊಂಡು ಕೆಲಸ ಮಾಡುತ್ತಾನೆ. ಅದರಲ್ಲೇನಿದೆ?” ಎಂದು ಉಡಾಫೆ ಯಿಂದ ಹೇಳಿದಳು. 

ಯಾವ ಕ್ಷೇತ್ರದಲ್ಲಾದರೂ ದುಡಿದು ಹಣ ಸಂಪಾದಿಸಬಹುದು. ಅದಕ್ಕೆ ಸೈನ್ಯಕ್ಕೆ ಸೇರಿ, ಪ್ರಾಣ ಒತ್ತೆ ಇಟ್ಟು ದುಡಿಯಬೇಕಿಲ್ಲ. ಈ ಜಗತ್ತಿನಲ್ಲಿ ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ. ಒಂದು ಕೋಟಿ ಹಣ ಕೊಟ್ಟು, ಬಂಗಲೆಯನ್ನು ಕಟ್ಟಿಸಿ ಕೊಡುತ್ತೇವೆ, ಸೈನ್ಯಕ್ಕೆ ಸೇರಿ ಎಂದರೆ, ನಮ್ಮಲ್ಲಿ ಎಷ್ಟು ಜನ ಮುಂದೆ ಬಂದಾರು? ಸೈನ್ಯಕ್ಕೆ ಸೇರಲು ದೇಶ ಪ್ರೇಮ, ದೇಶ ದೆಡೆಗಿನ ಬದ್ಧತೆ, ದೇಶದ ಜನರ ಮೇಲಿನ ಪ್ರೀತಿ ಅತಿ ಮುಖ್ಯ. ಹಗಲಿರುಳು ಮಾತೃಭೂಮಿಯನ್ನು ಕಾಯುವ ಸೈನಿಕರ ಸಮರ್ಪಣಾ ಭಾವಕ್ಕೆ ಸಮನಾದುದು, ಬಹುಶಃ ಈ ಜಗತ್ತಿನಲ್ಲಿ ಇನ್ಯಾವುದೂ ಇಲ್ಲವೇನೋ! ಹೆತ್ತವರನ್ನು, ಒಡ ಹುಟ್ಟಿದವರನ್ನು, ಹೆಂಡತಿ ಹಾಗು ಮಕ್ಕಳನ್ನು, ಬಂಧು ಮಿತ್ರರನ್ನು, ತಾವು ಬೆಳೆದ ಊರನ್ನು ಬಿಟ್ಟು, ಚಳಿ ಗಾಳಿ ಮಳೆಯೆನ್ನದೆ, ದೇಶ ಕಾಯುವ ಕಾಯಕ ಅಸಾಮಾನ್ಯರಿಂದ ಮಾತ್ರ ಸಾಧ್ಯ.

ಇಂತಹ ಅಸಾಮಾನ್ಯರಿಗಾಗಿ ಸಾಮಾನ್ಯರಾದ ನಾವು ಒಂದು ಫ್ಯಾನ್ ಸ್ವಿಚ್ ಹಾಕಿ ಅವರನ್ನು ತಂಪಾಗಿಸಲು ಹಿಂದು ಮುಂದು ನೋಡಿದರೆ, ನಮ್ಮಂತಹ ಕೃತಜ್ಞ ಹೀನರು ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲವೇನೋ!?

ಆ ಮಧ್ಯ ವಯಸ್ಸಿನ ಹೆಂಗಸು ನಿದ್ದೆಗೆ ಜಾರುವುದನ್ನೇ ಕಾಯುತ್ತಿದ್ದ ನಾನು, ಕೊಂಚ ಮೇಲಕ್ಕೆ ಕೈ ಮಾಡಿ ಫ್ಯಾನ್ ಹಾಕಿದೆ. ಸೆಖೆಯಿಂದ ನಿದ್ದೆ ಬಾರದೆ ಕಣ್ಣು ಬಿಟ್ಟು ಮಲಗಿದ್ದ ಆ ಸೈನಿಕ, ಫ್ಯಾನ್ ತಿರುಗುವುದನ್ನು ಗಮನಿಸಿ, ನನ್ನತ್ತ ನೋಡಿ ನಸು ನಕ್ಕ. ಧನ್ಯವಾದದ ರೂಪದಲ್ಲಿದ್ದ ಆತನ ನಗುವಿಗೆ, ಸೈನಿಕರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುವ ನನ್ನಂತಹ ಅನೇಕ ಮಂದಿ ಇದ್ದಾರೆಂದು, ಉತ್ತರವಾಗಿ ನಾನೂ ನಕ್ಕೆ.  

ನಮ್ಮನ್ನು ಕಾಯುವ ಸೈನಿಕನ ಬಹು ಚಿಕ್ಕ ಅಭಿಲಾಷೆಯನ್ನು ಈಡೇರಿಸಿದೆನೆಂಬ ಭಾವನೆಯಿಂದ ಆ ದಿನ ನಾನು ಅತ್ಯಂತ ಖುಷಿಯಿಂದ ನನ್ನ ನಿಲ್ದಾಣದತ್ತ ಪ್ರಯಾಣಿಸಿದೆನು. ಪ್ರತಿ ವರ್ಷ ಸೇನಾ ದಿನ (15 ಜನವರಿ) ಹಾಗು ಕಾರ್ಗಿಲ್ ವಿಜಯ ದಿನ (26 ಜುಲೈ) ದಂದು ಈ ಘಟನೆ ನನ್ನ ಮನಃಪಟಲದಲ್ಲಿ ಹಾದು ಹೋಗುತ್ತದೆ. ದೇಶದ ಸುರಕ್ಷತೆಗಾಗಿ ಪಣ ತೊಟ್ಟು ನಿಲ್ಲುವ ಸೈನಿಕರಿಗೆ ಸದಾ ನಮ್ಮ ಮನಸ್ಸು ಮಿಡಿಯುತ್ತಿರಲಿ.

ಜೈ ಹಿಂದ್ !

– ಮಾಲಿನಿ ವಾದಿರಾಜ್

12 Comments on “ಸೈನಿಕ – ಜೀವ ರಕ್ಷಕ

  1. ಚೆನ್ನಾಗಿದೆ. ದೇಶ ಕಾಯುವ ಸೈನಿಕನಿಗಾಗಿ ನಾವು ಎಷ್ಟು ಮಾಡಿದರೂ ಕಡಿಮೆ.

    1. ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

  2. ಕಣ್ಮುಂದೆ ನಡೆದ ಪ್ರಸಂಗ ದ ಅನಾವರಣ..ಮನುಷ್ಯ ನ ದೋರಣೆಯ..ಸ್ವಭಾವ..ನಿರೂಪಣೆ ಸೊಗಸಾಗಿ ದೆ ಮೇಡಂ

    1. ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

  3. ದೇಶ ಕಾಯುವ ಸೈನಿಕನ ತ್ಯಾಗ ಬಹಳ ದೊಡ್ಡದು. ನೀವು ಹೇಳಿದಂತೆ ಎಲ್ಲರು ಸೈನ್ಯಕ್ಕೆ ಸೇರಲು ತಯಾರಿರುವುದಿಲ್ಲ. ಅಸಾಮಾನ್ಯರಿಂದ ಮಾತ್ರ ಸಾಧ್ಯ ಈ ಕಾಯಕ. ಮನಸು ತಟ್ಟಿದ ಅದ್ಭುತ ಬರಹ. ಧನ್ಯವಾದಗಳು ಸುಂದರವಾದ ಬರಹಕ್ಕೆ. ಮನದುಂಬಿ ಬಂತು.

    1. ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

  4. ನಮ್ಮನ್ನು ಕಾಯುವ ಸೈನಿಕರಿಗೆ ದೊಡ್ಡದೊಂದು ಸಲಾಂ
    ನಡೆದ ಘಟನೆಯನ್ನು ಮೆಲುಕು ಹಾಕುವಂತೆ ವರ್ಣಿಸಿದ್ದೀರಿ
    ವಂದನೆಗಳು

  5. ಸತ್ಯಘಟನೆಯ ನಿರೂಪಣೆಯು ಸಹಜವಾಗಿ ಮೂಡಿಬಂದಿದೆ. ಸಕಾಲಿಕ ಲೇಖನವು ಮನತುಂಬಿತು. ದೇಶಕ್ಕಾಗಿ ಪ್ರಾಣವನ್ನು ಒತ್ತೆಯಿಟ್ಟು ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಯೋಧನಿಗೂ ನಮ್ರನಮನಗಳು.
    ನಮ್ಮೂರಿನ ಸಮುದಾಯ ಬಾನುಲಿ ಕೇಂದ್ರದಲ್ಲಿ “ದೇಶ ರಕ್ಷಣೆ ನಮ್ಮ ಹೊಣೆ” ಎನ್ನುವ ಶೀರ್ಷಿಕೆಯಡಿ ಈ ವರೆಗೆ 94 ನಿವೃತ್ತ ಯೋಧರ ಸಂದರ್ಶನವನ್ನು ನಡೆಸಿ ಪ್ರಸಾರ ಮಾಡಿ, ಅವುಗಳನ್ನು ಯೂಟೂಬ್ ನಲ್ಲಿ ರವಾನಿಸುವಲ್ಲಿ ಸಂಯೋಜಕಿಯಾಗಿ ನನಗೆ ಲಭಿಸಿದ ಅನುಭವವು ಬಹಳ ವಿಶಿಷ್ಟವಾದದ್ದು!

  6. ಮನವನ್ನು ತಟ್ಟಿದ ಬರಹ. ಒಂದೇ ಸ್ಥಳ, ಸಮಯದಲ್ಲಿ ಎರಡು ವಿಭಿನ್ನ ನಡುವಳಿಕೆಗಳ ಅನಾವರಣ. ಸೈನಿಕರ ನಡುವಳಿಕೆ ಅನುಕರಣೀಯ. ಅವರುಗಳು ಆದರಣೀಯರು. ನಿಮ್ಮ ಪ್ರತಿಕ್ರಿಯೆಯೂ ಸಹ ಅಭಿನಂದನಾರ್ಹ. ಕೆಲವರ ನಡುವಳಿಕೆಗಳು ‘ಯಾವ ರೀತಿ ಖಂಡಿತಾ ಇರಬಾರದು’ ಎಂಬುದಕ್ಕೆ ಉದಾಹರಣೆಯಾಗುತ್ತವೆ, ಆ ಮಧ್ಯ ವಯಸ್ಸಿನ ಮಹಿಳೆಯ ನಡುವಳಿಕೆಯಂತೆ. ಚಂದದ ಬರಹ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *