ಜ್ಞಾನದಾತನಿಗೆ ನಮನ
‘ವಂದೇಗುರೂಣಾಂ’
“ಗುರು ” ಯಾರು ? ಏನು ?
ಧ್ಯಾನಮೂಲಮ್ ಗುರೋ ರ್ಮೂರ್ತಿಃI ಪೂಜಾಮೂಲಮ್ ಗುರೋಃ ಪದಂI
ಮಂತ್ರಮೂಲಂ ಗುರೋರ್ವ್ಯಾಕ್ಯಂ I
ಮೋಕ್ಷ ಮೂಲಂ ಗುರೋಃ ಕೃಪಾI
ಎಂದರೆ ——ಗುರುವಿನ ಮೂರ್ತಿ ಧ್ಯಾನಕ್ಕೆ ವಿಷಯ .
ಗುರುವಿನ ಪಾದ ಪೂಜೆಗೆ ವಿಷಯ .
ಗುರುವಿನ ಮಾತು ಮಂತ್ರಕ್ಕೆ ವಿಷಯ.
ಗುರುವಿನ ಕೃಪೆ ಮೋಕ್ಷಕ್ಕೆ ವಿಷಯ.
ಬೆಳಕಿನೆಡೆಗೆ ಸಾಗಲು ಜ್ಞಾನದಲ್ಲೇ ನಿರತರಾಗಿ ಸಾಧನೆಯ ಶಿಖರವೇರಲು ಜನರ ಜೀವನವನ್ನು ಜ್ಞಾನ ಜ್ಯೋತಿಯಿಂದ ಬೆಳಗಿಸುವ ಕಣ್ಣಿಗೆ ಕಾಣುವ ದೇವರು- ಗುರು .
“ಗು “ಶಬ್ದ ಸ್ತ್ವಂಧ ಕಾರಃ ಸ್ಯಾತ್ I
“ರು” ಶಬ್ದ ಸ್ತನ್ನಿರೋದಕಃI
ಅಂಧಕಾರ ನಿರೋಧಿತ್ವಾತ್ I ಗುರುರಿತ್ಯಭಿಧೀಯತೇ I”
‘ಗು ‘ಎಂದರೆ ಅಂಧಕಾರ,
‘ರು ‘ಎಂದರೆ ಅದನ್ನು ಹೋಗಲಾಡಿಸುವುದು. ಅಂಧಕಾರವನ್ನು ಹೋಗಲಾಡಿಸುವವನೇ “ಗುರು” ಎಂಬುದು ಶಬ್ದದ ಅರ್ಥ. ಗುರು ಎಂಬ ಎರಡಕ್ಷರದ ಮಹಾನ್ ಪದ ಕೇವಲ ವ್ಯಕ್ತಿಯಲ್ಲ ;ಭಗವಂತನಿಗೆ ಆ ಪದ.
ಗುರು ಎಂದರೆ ಬೆಳಕು, ಸತ್ಯ, ನಿತ್ಯ, ಅವ್ಯಕ್ತ, ಪರಮೋಚ್ಚ, ಕಾಲಾತೀತ —- ಹೀಗೆ ಗುರುವಿನ ಗರಿಮೆಯನ್ನು ವರ್ಣಿಸುವುದು ಅಸಾಧ್ಯ .ಗುರು ಎಂಬ ಪುಟ್ಟ ಪದದ ವೈಶಾಲ್ಯ, ವಿಸ್ತಾರ ಅಪಾರ. ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ನಮ್ಮನ್ನು ಸೆಳೆಯುವ ಪ್ರಭಯೇ ಗುರು. ಗುರು ಪರಿಪೂರ್ಣ. ಗುರುವು ಪರಿಪೂರ್ಣನಾಗಿರುವುದರಿಂದಲೇ ಶಿಷ್ಯನನ್ನು ಪೂರ್ಣತೆ ಎಡೆಗೆ ಕೊಂಡೊಯ್ಯುತ್ತಾನೆ.
ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ತರವಾದುದು. ಗುರುವನ್ನು ತ್ರಿಮೂರ್ತಿ ಸ್ವರೂಪನೆಂದು ಭಾವಿಸಿ, ಗೌರವಿಸುವುದು ಸಾಮಾನ್ಯವಾಗಿದೆ.
“ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃI
ಗುರುರೇವ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ” II
ಗುರು ಆದವನು ಯೋಗ್ಯನಾದ ಶಿಷ್ಯನಲ್ಲಿ ಸತ್ಯ, ಧರ್ಮ, ಅಹಿಂಸೆ, ನೀತಿ ಮುಂತಾದ ಸದ್ಗುಣಗಳನ್ನು ಸೃಷ್ಟಿ ಮಾಡುವುದರಿಂದ “ಬ್ರಹ್ಮ”ನಾಗಿರುತ್ತಾನೆ. ಶಿಷ್ಯನಲ್ಲಿ ಶಮದಮಾದಿ ಅಧ್ಯಾತ್ಮ ಸಾಧನಗಳನ್ನು, ಆತ್ಮಜ್ಞಾನ ಸಂಪತ್ತನ್ನು ಭದ್ರವಾಗಿ ನಿಲ್ಲುವಂತೆ ಸ್ಥಾಪಿಸುವುದರಿಂದ “ವಿಷ್ಣು” ವಾಗಿರುತ್ತಾನೆ. ಶಿಷ್ಯನ ದುರ್ಗುಣಗಳನ್ನು, ಅಜ್ಞಾನಾಂಧಕಾರವನ್ನೂ ಸಂಹಾರ ಮಾಡುವುದರಿಂದ “ಮಹೇಶ್ವರನೂ” ಆಗಿರುತ್ತಾನೆ. ಸಚ್ಚಿದಾನಂದ ಸ್ವರೂಪವನ್ನು ಶಿಷ್ಯನಿಗೆ ತೋರಿಸಿ ತಾನೆ “ಪರಬ್ರಹ್ಮ”ವು ಆಗಿರುತ್ತಾನೆ.
ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ವೀರ ಪಾರ್ಥನಿಗೆ ಮನೋ ದೌರ್ಬಲ್ಯ ಉಂಟಾದಾಗ ಅವನ ಸಾರಥಿಯಾಗಿದ್ದ ಶ್ರೀಕೃಷ್ಣ ಅರ್ಜುನನಿಗೆ “ಗೀತೆ”ಯನ್ನು ಉಪದೇಶಿಸಿದನು. ಈ ಉಪದೇಶವು ವಿಶ್ವದ ಮಾನವ ಜನಾಂಗದ ಉದ್ಧಾರಕ್ಕೆ ಕಾರಣವಾದುದಾಗಿದೆ. ಇದರಿಂದಾಗಿ ಶ್ರೀ ಕೃಷ್ಣನು “ಕೃಷ್ಣಂ ವಂದೇ ಜಗದ್ಗುರುಂ” ಎಂಬ ಗೌರವಕ್ಕೆ ಪಾತ್ರನಾದನು. ಹೀಗೆ ಶ್ರೀ ಕೃಷ್ಣನೇ
“ಆದಿ ಜಗದ್ಗುರು”ವಾದನು.
ದೇವರನ್ನು ಯಾರೂ ಕಾಣಲು ಸಾಧ್ಯವಿಲ್ಲ. ಆದರೆ ದೇವ ಸ್ವರೂಪನಾದ ಗುರುವನ್ನು ಕಣ್ಣಾರೆ ಕಾಣಲು ಸಾಧ್ಯ. ಗುರುವೆಂದರೆ ಪ್ರತ್ಯಕ್ಷ ದೇವರು, ಸಂಚಾರಿ ಪರಮೇಶ್ವರ, ಮಾತನಾಡುವ ಭಗವಂತನೆಂದು ಭಾವಿಸಿ ಗೌರವಿಸಬೇಕು. ಗುರುವಾದವನು ಸಕಲ ತೀರ್ಥ ಸ್ವರೂಪನೂ, ಸರ್ವ ದೇವತಾ ಸ್ವರೂಪನೂ, ಸರ್ವವೇದ ಸ್ವರೂಪನೂ ಆಗಿ ಸಾಕ್ಷಾತ್ “ಶ್ರೀ ಹರಿಯೇ” ಆಗಿರುತ್ತಾನೆ.
ಗುರು—–” ಎಲ್ಲರಿಗಿಂತಲೂ ಹೆಚ್ಚು ಶ್ರೇಷ್ಠತ್ವ ಮತ್ತು ಸತ್ವವಿರುವುದೇ ಅವನ ವೈಶಿಷ್ಟ್ಯ” ಎಂದು ಹೇಳಿದ್ದಾರೆ.
ಗುರು ಗೀತೆಯಲ್ಲಿ —–
“ಯೋಗುರುಃ ಸ ಶಿವ ಪ್ರೋಕ್ತೋಯಶ್ಯಿವಃ
ಸ ಗುರು ಸ್ಮೃತಃI” ಎಂದು ಹೇಳಿದೆ.
ಎಂದರೆ —ಗುರುವೇ ಶಿವನು, ಶಿವನ ಸ್ವರೂಪವೇ ಗುರುವು. ಗುರುವಿನಿಂದ ಹೊರತಾದ ಶಿವನೇ ಇಲ್ಲ ಎಂಬಲ್ಲಿಗೆ “ಗುರು” ಯಾರು ಎಂಬುದು ವಿಷದವಾಗುತ್ತದೆ.
ಚಾಣಕ್ಯನು ತನ್ನ ನೀತಿ ಶತಕದಲ್ಲಿ——
“ಗುರುರಗ್ನಿಃ ದ್ವಿಜಾತೀನಾಮ್ I
ವರ್ಣಾನಾಂ ಬ್ರಾಹ್ಮಣೋ ಗುರುಃI
ಪತಿ ರೇವಗುರುಃ ಸ್ತ್ರೀಣಾಂI
ಸರ್ವಸ್ಯಾಭ್ಯಾಗತೋ ಗುರುಃ I”
ಬ್ರಾಹ್ಮಣರಿಗೆ ಅಗ್ನಿಯೇ ಗುರುವಾಗಿದ್ದಾನೆ. ಚಾತುರ್ವರ್ಣದವರಿಗೆ ಬ್ರಾಹ್ಮಣನೇ ಗುರು ಆಗಿದ್ದಾನೆ. ಸ್ತ್ರೀಗೆ ಪತಿಯೇ ಗುರುವಾದರೆ ಅಭ್ಯಾಗತನು ಎಲ್ಲರಿಗೂ ಗುರುವಾಗಿರುತ್ತಾನೆ ; ಎಂದು ಹೇಳಿದ್ದಾನೆ.
ನೀತಿ ಶತಕ ಒಂದರಲ್ಲಿ —–“ವಿದ್ಯಾಗುರೂಣಾಂ ಗುರುಃ” ಎಂದರೆ ವಿದ್ಯೆಯು ಗುರುವಿಗೇ ಗುರು ” ಎಂದು ಸಾರಿದೆ.
ಕವಿ ಕುಮಾರವ್ಯಾಸನು ತನ್ನ ಗದುಗಿನ ಭಾರತದ ವಿದುರ ನೀತಿಯಲ್ಲಿ—-
“ಒಂದು ವರ್ಣವನರುಹಿದವ ಗುರು
ವೊಂದಪಾಯದಲುಳಿಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮಗುರು” ಎಂದು ಹೇಳಿರುವನು.
ಒಂದು ಅಕ್ಷರವನ್ನು ಕಲಿಸಿದವನೂ, ಅಪಾಯವೊಂದರಿಂದ ರಕ್ಷಿಸಿದವನೂ,ಕದನದಲ್ಲಿ ರಕ್ಷಣೆಯಿತ್ತು ಉಳಿಸಿದವನೂ ಶ್ರೇಷ್ಠ ಗುರು ಎನಿಸಿಕೊಳ್ಳುತ್ತಾನೆ; ಎಂದು ಹೇಳಿರುವನು.
ಪುಲಿಗೆರೆಯ ಸೋಮನಾಥನು ತನ್ನ ಸೋಮೇಶ್ವರ ಶತಕದಲ್ಲಿ——“ಹಿತವಂ ತೋರುವನಾತ್ಮ ಬಂಧು, ಪೊರೆವಾತಂ ತಂದೆ ಸದ್ಧರ್ಮದಾಸತಿಯೇ ಸರ್ವಕ್ಕೆ ಸಾಧನಂ, ಕಲಿಸಿದಾತಂ ವರ್ಣಮಾತ್ರಂ ಗುರು”. ಒಂದು ಅಕ್ಷರವನ್ನು ಕಲಿಸಿದವನೂ “ಗುರು” ಎನಿಸಿಕೊಳ್ಳುತ್ತಾನೆ, ಎಂದು ಹೇಳಿದ್ದಾನೆ .
ಪುರಾಣ ಕಾಲದಿಂದ ಇಂದಿನ ವರ್ತಮಾನ ಕಾಲದವರೆಗೂ “ಗುರು” ಸ್ಥಾನವು ಗೌರವದ್ದಾಗಿಯೇ ಕಾಣುತ್ತದೆ. ವ್ಯಾಸ, ವಸಿಷ್ಠ ,ವಿಶ್ವಾಮಿತ್ರ, ಶಂಕರಾಚಾರ್ಯರು, ವಿದ್ಯಾರಣ್ಯರು, ಚಾಣಕ್ಯರೆ ಮೊದಲಾದವರು ದೇಶ ,ಕೋಶ, ಅಧಿಕಾರ ,ಸಂಪತ್ತು ಯಾವುದನ್ನು ಬಯಸದೆ ಕೇವಲ ಧರ್ಮ ಜಾಗೃತಿ, ಸಮಾಜದ ಐಕ್ಯತೆ, ಶಿಕ್ಷಣ, ಸಂಸ್ಕೃತಿಯ ರಕ್ಷಣೆಗಾಗಿ ತಮ್ಮನು ಮುಡಿಪಾಗಿ ಇಟ್ಟಂತೆ ಕಾಣುತ್ತದೆ. ವಿಶ್ವವೇ ಅವರ ಕುಟುಂಬವಾಗಿ ಅವರು “ವಿಶ್ವ ಕುಟುಂಬಿ”ಯಾಗಿದ್ದರು.
“ಲೋಕಾಃ ಸಮಸ್ತಾಃ ಸುಖಿನೋಭವಂತು” ಎನ್ನುವ ವಿಶಾಲ ಹೃದಯಿಗಳವರು. ಆದ್ದರಿಂದಲೇ ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿ ,ಉಳಿಸಿ, ಬೆಳೆಸಲು ಕಾರಣವಾಯಿತು. ಲೌಕಿಕ ವಿದ್ಯೆಯನ್ನು ಉಪದೇಶಿಸುವವರು
” ಶಿಕ್ಷಾ ಗುರುಗಳು”. ಆಧ್ಯಾತ್ಮಿಕ ವಿದ್ಯೆಯನ್ನು ಬೋಧಿಸುವವರು “ದೀಕ್ಷಾ ಗುರುಗಳು”. ಶಿಕ್ಷಾ ಗುರುಗಳು ಅನೇಕರು ಇರಬಹುದು, ಆದರೆ ಮೋಕ್ಷದೆಡೆಗೆ ಕರೆದೊಯ್ಯುವ ದೀಕ್ಷಾ ಗುರು ಮಾತ್ರ ಒಬ್ಬನೇ.
“ಅಧೀತ ವೇದ ವೇದಾಂಗಃ I ಸರ್ವಸ್ಮೃತಿ ಷು ಕೋವಿದಃ I
ಪುರಾಣ ಸಂಹಿತಾ ವಕ್ತಾ I ತದರ್ಥ ಪ್ರತಿಪಾದಕಃII”
ಗುರುವಾದವನು ನಾಲ್ಕು ವೇದಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಮತ್ತು ಕಲ್ಪ ಎಂಬ ಅಂಗಗಳನ್ನು ಅಧ್ಯಯನ ಮಾಡಿರಬೇಕು.
ವಚನಕಾರರು ಕೂಡ ಗುರುವಿನ ಬಗ್ಗೆ —–
“ನೀನೊಲಿದರೆ ಕೊರಡು ಕೊನರುವುದಯ್ಯಾ ನೀನೊಲಿದರೆ ಬರಡು ಹಯನಹುದಯ್ಯಾ ನೀನೊಲಿದರೆ ವಿಷವು ಅಮೃತವಹುದಯ್ಯಾ ನೀನೊಲಿದರೆ ಸಕಲ ಪಡಿ ಪದಾರ್ಥ
ಇದಿರಲಿರ್ಪುದು ಕೂಡಲಸಂಗಮದೇವ”
ಹೀಗೆ ಅನೇಕ ವಚನಗಳನ್ನು ರಚಿಸಿದ್ದಾರೆ.
“ಗುರು” ಪದವಿಯು ಅತ್ಯುನ್ನುತ ಶ್ರೇಣಿಯದು. “ಗುರು” ಪದದಲ್ಲಿ ಹಲವು ಪ್ರಬೇಧಗಳನ್ನು ಕಾಣಬಹುದು.ಅಧ್ಯಾಪಕ, ಉಪಾಧ್ಯಾಯ, ಶಿಕ್ಷಕ ,ಪಂಡಿತ, ಆಚಾರ್ಯ, ದೃಷ್ಟ ಇತ್ಯಾದಿ. ಶಿಷ್ಯನಲ್ಲಿರುವ ಜಾಣತನವನ್ನೂ ಚಾತುರ್ಯವನ್ನೂ ಬಡಿದೆಬ್ಬಿಸಿ ಕತ್ತಲಿನಿಂದ- ಬೆಳಕಿನೆಡೆಗೆ, ಅಜ್ಞಾನದಿಂದ- ಜ್ಞಾನದೆಡೆಗೆ ಮುನ್ನಡೆಯುವ ಮಾರ್ಗದರ್ಶನವನ್ನು ನೀಡುವವನೇ “ಗುರು” ಆಗಿದ್ದಾನೆ.
ಈ ರೀತಿಯಾಗಿ ಸನಾತನ ಭಾರತದಲ್ಲಿ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಾರತೀಯ ಪರಿಕಲ್ಪನೆ ಪ್ರಕಾರ ಶಿಷ್ಯನ ಆಧ್ಯಾತ್ಮಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ಬಹಳ ಮಹತ್ವವನ್ನು ಪಡೆಯುತ್ತದೆ. ಗುರು ಒಂದು ಪ್ರಾಂತ್ಯಕ್ಕೋ, ರಾಜ್ಯಕ್ಕೋ ಅಥವಾ ದೇಶಕ್ಕೋ ಸೀಮಿತವಲ್ಲ; ಅವನು ವಿಶ್ವಕ್ಕೆ ಸೀಮಿತ.
“ವಿದ್ವಾನ್ ಸರ್ವತ್ರ ಪೂಜ್ಯತೆ” ಎಂಬಂತೆ ವಿದ್ವಾಂಸರಿಗೆ, ಗುರುಗಳಿಗೆ ಎಂದೆಂದೂ, ಎಲ್ಲೆಡೆಗಳಲ್ಲೂ ಮನ್ನಣೆ ದೊರೆಯುತ್ತದೆ. ಈಗಲೂ ನಮ್ಮಲ್ಲಿ ಅಂತಹ ಅನೇಕ ಗುರುಗಳಿದ್ದಾರೆ. ಅವರಿಗೆ ನಾವು ಶರಣಾಗಬೇಕು, ಅವರ ಮೊರೆ ಹೋಗಬೇಕು, ಅಂತಹ ಗುರುಗಳಿಗೆ ಗುಲಾಮರಾಗಬೇಕು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿI” ಎಂಬ ದಾಸರವಾಣಿಯಂತೆ ಅಂತಹ ಗುರುಗಳಿಗೆ ತಲೆಬಾಗಿ ಆ ದಿವ್ಯ ಜ್ಞಾನವನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕು. ಹೀಗೆ ಗುರು ಒಬ್ಬ ಒಡನಾಡಿ,ಊಹಕ ಮತ್ತು ಮಾರ್ಗದರ್ಶಿ.ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಜ್ಞಾನದ ಪ್ರಸಾರವು ಮೌಖಿಕವಾಗಿದ್ದಿತು; ಮತ್ತು ಗುರುವು ಜ್ಞಾನದ ಏಕೈಕ ಪಾಲಕನಾಗಿದ್ದನು. ಗುರು- ಶಿಷ್ಯರ ಸಂಬಂಧವು ಸೌಹಾರ್ದಯುತವಾಗಿದ್ದಿತು.ಉತ್ತಮ ಗುರುವು ಮಗುವಿಗೆ ಎರಡನೆಯ ಪೋಷಕನಾಗಿರುತ್ತಾನೆ; ಹಾಗೂ ಗುರುವು ಶಿಷ್ಯನ ವರ್ತಮಾನ ಮತ್ತು ಭವಿಷ್ಯ ಈ ಎರಡರ ಮೇಲೂ ಪ್ರಭಾವ ಬೀರುತ್ತಾನೆ.
ಹುಟ್ಟಿನಿಂದ ಸಾಯುವವರೆಗೂ ನಮಗೆ ಯಾರೆಲ್ಲಾ ಕಲಿಸುತ್ತಾರೋ ಅವರೆಲ್ಲಾ ಗುರುಗಳೇ. “ಜನನಿಯೇ ಮೊದಲ ಗುರುವು”. ಗುರು ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ. “ಗುರುವಿನ ಪಾದ ಪದದಿಂದ ಪರಂಜ್ಯೋತಿ ” . ಈ ಕಾರಣದಿಂದ ಗುರುವಿಗೆ ವಿಧೇಯರಾಗಿ, ಗುರುವಿನ ಪ್ರೀತಿಯ ಶಿಷ್ಯರಾಗಿ, ಗುರುವಿನಿಂದ ಬೆಳೆಯೋಣ, ಗುರುವಾದೇಶದಂತೆ ಬಾಳೋಣ.
ಅಂತಿಮವಾಗಿ ಗುರು ಯಾರು? ಏನು ? ಅನ್ನುವುದಕ್ಕಿಂತಲೂ ಗುರುಗಳಲ್ಲಿರುವ ಭಯ, ಭಕ್ತಿ, ಶ್ರದ್ಧೆ, ಗೌರವಗಳು ಶಿಷ್ಯನಲ್ಲಿ ಜಾಗೃತಿಯನ್ನೂ, ಭಾವನಾತ್ಮಕ ಪರಿಣಾಮವನ್ನೂ, ಪ್ರಚೋದನೆಯನ್ನೂ ಉಂಟುಮಾಡುವ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ಕೊಡುತ್ತವೆ. ಅಂತಹ ಅದಮ್ಯ ಚೇತನವಾದ ಗುರುವಿನ ಪಾದಪದ್ಮಗಳಿಗೆ ಸಾಷ್ಟಾಂಗ ಪ್ರಣಾಮಗಳು.
-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.
ಸೊಗಸಾಗಿದೆ
ಗುರುವಿನ ಬಗ್ಗೆ ಲೇಖನ ಚೆನ್ನಾಗಿದೆ ಮೇಡಂ
ಗುರುಪೂರ್ಣಿಮೆಯ ಈ ಸಮಯದಲ್ಲಿ ಗುರುವಿನ ಕುರಿತಾದ ಈ ಲೇಖನ ಅತ್ಯಂತ ಅರ್ಥಪೂರ್ಣ ಮೂಡಿ ಬಂದಿದೆ.
ಧನ್ಯವಾದಗಳು ನಯನಾ ಮೇಡಂ, ನಾಗರತ್ನ ಮೇಡಂ
ಗುರುವಿನ ಮಹತ್ವವನ್ನು ವಿವರಿಸಿದ ಲೇಖನ ಚೆನ್ನಾಗಿದೆ
Thank you Padma madam
ಗುರುಪೂರ್ಣಿಮೆ ಅಂಗವಾಗಿ ಮೂಡಿಬಂದ ಸಕಾಲಿಕ ಲೇಖನವು ಗುರುವಿನ ಬಗ್ಗೆ ಅನೇಕ ಮಾಹಿತಿಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ ವನಿತಕ್ಕ…ಧನ್ಯವಾದಗಳು.
Thank you Shankari Akka