ಸರ್ವರುಜಾಪಹಾರಿಯಂತೆ ಈ ನೆಲ್ಲಿಕಾಯಿ!
ಯಾವುದೇ ಲೇಖನ ಬರೆಯಬೇಕಾದರೂ ಅದಕ್ಕೊಂದು ಕಾರಣವಿರುತ್ತದೆ. ಬರೆಯಬೇಕೆನ್ನುವ ತುಡಿತ ಇದ್ದರೆ ಸಾಕೇ? ಅದಕ್ಕೆ ಸಮಯವೂ ಬೇಕು. ವಿಚಾರವೊಂದು ಮನಸ್ಸಿಗೆ ಹೊಳೆದಾಗ ಆ ಕೂಡಲೇ ಬರೆದರೆ ಅದೇನೋ ಸಮಾಧಾನ. ಆದರೆ ನಾನಾ ಕಾರಣಗಳಿಂದ ಅದೇ ದಿನ ಬರೆಯಲು ಸಾಧ್ಯವಾಗುವುದಿಲ್ಲ. ನಾಳೆ ಬರೆಯೋಣ ಎಂದು ಆ ಕೆಲಸ ಮುಂದೂಡಿದಾಗ ಹಲವು ನಾಳೆಗಳು ಉರುಳಿರುತ್ತವೆ. ಅಂತಹುದೇ ಸಾಲಿಗೆ ಸೇರಿರುವ ವಿಷಯವೊಂದನ್ನು ಈ ಲೇಖನದಲ್ಲಿ ಹಂಚಿಕೊಂಡಿರುವೆ.
ವಿಶ್ವವಿದ್ಯಾನಿಲಯ ಮಟ್ಟದ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆಯುತ್ತಿದ್ದವು. ಕರ್ತವ್ಯ ನಿರ್ವಹಿಸುವ ಕಾಲೇಜಿನಲ್ಲಿ ಆಂತರಿಕ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಅಕ್ಕಪಕ್ಕದ ಕಾಲೇಜುಗಳಲ್ಲಿ ಬಾಹ್ಯಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಬಾಹ್ಯ ಪರೀಕ್ಷಕಳಾಗಿ ಒಂದು ಕಾಲೇಜಿಗೆ ಹೋಗಿದ್ದೆ. ಆ ಕಾಲೇಜು ನನಗೇನೂ ಹೊಸದಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಆ ಕಾಲೇಜಿಗೆ ಭೇಟಿ ನೀಡುತ್ತಿರುತ್ತೇನೆ. ಆ ಕಾಲೇಜು ಕ್ಯಾಂಪಸ್ಸಿನೊಳಗೆ ಹಲವು ಹೂಗಿಡಗಳು. ಅರಳಿ ಚೆಲುವು ಬೀರುತ್ತಿದ್ದ ವಿವಿಧ ಬಣ್ಣದ ಹೂವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದಂತೆ ಗಿಡವೊಂದು ಕಂಡಿತು. ಆ ಗಿಡದ ಎಲೆಗಳು ಬೀಂಬುಳಿ ಗಿಡದ ಎಲೆಗಳನ್ನು ಹೋಲುತ್ತಿದ್ದುವು. ಆದರೆ ಆ ಗಿಡದಲ್ಲಿದ್ದ ಕಾಯಿಗಳು ಬೇರೆಯದೇ ರೀತಿ ಕಂಡವು. ಆ ಗಿಡದ ಹತ್ತಿರ ಹೋಗಿ ಗಮನಿಸಿದೆ. ಗಿಡಕ್ಕೆ ಅಳವಡಿಸಿದ್ದ ನಾಮಫಲಕದ ಮೇಲೆ ನೆಲ್ಲಿಕಾಯಿ- ಇಂಡಿಯನ್ ಗೂಸ್ ಬೆರಿ ಎಂದು ಬರೆದಿತ್ತು.ಗಾತ್ರದಲ್ಲಿ ಕಿರಿದಾದ ಈ ನೆಲ್ಲಿಕಾಯಿಯನ್ನು ಇಲ್ಲಿಯ ತನಕ ತಿಂದಿರಲಿಲ್ಲ. ಕಂಡಿದ್ದರೆ ತಾನೇ ತಿನ್ನುವ ಮಾತು!
ಈ ಮರದ ನೆಲ್ಲಿಕಾಯಿ ಸ್ವಲ್ಪ ವಿಶೇಷವಾಗಿ ಕಂಡಿತು. ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿರುವಾಗ, ಕೊಠಡಿಯ ಮೂಲಕ ಕಂಡ ದೃಶ್ಯ- ವಿದ್ಯಾರ್ಥಿಗಳ ಗುಂಪೇ ಆ ಗಿಡದ ಬಳಿ ಜಮಾಯಿಸಿತ್ತು. ಓರ್ವ ಆ ಗಿಡವನ್ನು ಹಿಡಿದು ಜಗ್ಗುತ್ತಿದ್ದ. ಹಾಗೇ ಅಲ್ಲಾಡಿಸುತ್ತಿದ್ದ. ನೆಲಕ್ಕೆ ಬಿದ್ದ ನೆಲ್ಲಿಕಾಯಿಗಳನ್ನು ವಿದ್ಯಾರ್ಥಿಗಳು ಹೆಕ್ಕಿ ತಿನ್ನುತ್ತಿದ್ದರು. ಆ ನೆಲ್ಲಿಕಾಯಿಯ ರುಚಿಯನ್ನೊಮ್ಮೆ ನೋಡಬೇಕಲ್ಲಾ ಅನ್ನುವ ಮನಸ್ಸಾಯಿತು. ಹಾಗಾಗಿ ಪ್ರಯೋಗಾಲಯದ ಅಟೆಂಡರ್ ಬಳಿ “ನನಗೆರಡು ನೆಲ್ಲಿಕಾಯಿ ತಂದುಕೊಡಬಹುದೇ?” ಎಂದು ವಿನಂತಿಸಿದ ಮೇರೆಗೆ ನೆಲ್ಲಿಕಾಯಿ ತಂದುಕೊಟ್ಟಿದ್ದೂ ಆಯಿತು, ಇಷ್ಟಪಟ್ಟು ತಿಂದಿದ್ದೂ ಆಯಿತು. ನೆಲ್ಲಿಕಾಯಿ ತಿಂದ ಮೇಲೆ ನೀರು ಕುಡಿದರೆ ಬಾಯಿಯೆಲ್ಲಾ ಸಿಹಿಯಾಗುವುದು. ಈ ನೆಲ್ಲಿಕಾಯಿ ತಿಂದ ಮೇಲೆ ನೀರು ಕುಡಿದಾಗ ಬಾಯಿ ಅಷ್ಟೇನೂ ಸಿಹಿಯಾಗಲಿಲ್ಲ. ಈ ನೆಲ್ಲಿಕಾಯಿಯ ಬಗೆಗೆ ಜಾಸ್ತಿ ತಿಳಿದುಕೊಳ್ಳಬೇಕು ಅನ್ನುವ ಅಪೇಕ್ಷೆ ಮನದಲ್ಲಿ ಮೂಡಿಯಾಗಿತ್ತು.
ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಹಲವು ಆಕಾರದ ನೆಲ್ಲಿಕಾಯಿ ನೋಡಿ, ಉಪಯೋಗಿಸಿ ತಿಂದು ಗೊತ್ತಿತ್ತು. ಏಕೆಂದರೆ ಉತ್ಥಾನ ದ್ವಾದಶಿ ದಿನ ನಡೆಯುವ ತುಳಸಿ ಪೂಜೆಗೆ ನೆಲ್ಲಿಕಾಯಿಯ ತಂಬುಳಿ ಆಗಲೇಬೇಕು. ಜೊತೆಗೆ ತುಳಸಿ ಗಿಡದ ಜೊತೆ ನೆಲ್ಲಿಕಾಯಿ ಗಿಡದ ಕಡ್ಡಿ ಇರಲೇಬೇಕು. ತುಳಸಿಪೂಜೆಯ ದಿನ, ತುಳಸಿಕಟ್ಟೆಯ ಸುತ್ತ ಮನೆಯಲ್ಲಿರುವ ಒಟ್ಟು ಜನರ ಸಂಖ್ಯೆಯಷ್ಟು ನೆಲ್ಲಿಕಾಯಿಗಳ ಮೇಲೆ ತುಪ್ಪದ ದೀಪಗಳನ್ನುಇರಿಸುವುದು ವಾಡಿಕೆಯಾಗಿ ಬೆಳೆದುಬಂದಿದೆ. ಮೊದಲೆಲ್ಲಾ ತುಳಸಿಪೂಜೆಯ ಮೊದಲು ನೆಲ್ಲಿಕಾಯಿ ತಿನ್ನಬಾರದು. ಪ್ರತಿ ವರ್ಷವೂ ತುಳಸಿಪೂಜೆಯ ಬಳಿಕವೇ ನೆಲ್ಲಿಕಾಯಿ ಉಪಯೋಗ ಮಾಡಬೇಕೆಂಬುದು ಅಲಿಖಿತ ನಿಯಮವಾಗಿತ್ತು.
ಅಂತರ್ಜಾಲ ಜಾಲಾಡಿದಾಗ ಸಿಕ್ಕ ಹೆಸರೇ ಬಾಂಬೆ ನೆಲ್ಲಿಕಾಯಿ. ಕಿರುನೆಲ್ಲಿಕಾಯಿ, ನಕ್ಷತ್ರ ನೆಲ್ಲಿಕಾಯಿ, ರಾಜನೆಲ್ಲಿಕಾಯಿ (ರಾಯನೆಲ್ಲಿಕಾಯಿ), ಮೈಸೂರು ನೆಲ್ಲಿಕಾಯಿ, ಒಟಾಹೈಟ್ ನೆಲ್ಲಿಕಾಯಿ, ಮಲಯ ನೆಲ್ಲಿಕಾಯಿ, ಎಂದುವಿವಿಧ ಹೆಸರುಗಳಿಂದ ಕರೆಯಲ್ಪಡುವ ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಫಿಲಾಂತಸ್ ಅಸಿಡಸ್. ಸಂಸ್ಕೃತದಲ್ಲಿ ಲಾವಳಿ ಅನ್ನುವರಂತೆ.ಅದೆಷ್ಟೋ ಜನರ ಬಾಲ್ಯದ ನೆನಪುಗಳಲ್ಲಿ ವಿರಾಜಮಾನವಾಗಿರುವ ಈ ನೆಲ್ಲಿಕಾಯಿಯನ್ನು ನಾನು ಇಲ್ಲಿಯ ತನಕ ಕಂಡಿರಲಿಲ್ಲವೆಂದು ಖೇದವಾಯಿತು. “ನನಗೇನೂ ಗೊತ್ತಿಲ್ಲ”, “ಕಲಿಯುವುದು ಬಹಳವಿದೆ” ಅಂತ ಅನ್ನಿಸುವ ಮನಸ್ಸಿನ ಭಾವಕ್ಕೆ ನಕ್ಷತ್ರ ನೆಲ್ಲಿಕಾಯಿಯೂ ಸೇರ್ಪಡೆಯಾಯಿತು. ಕಾಕತಾಳೀಯವೆಂಬಂತೆ, ಈ ಘಟನೆ ನಡೆದು ಎರಡು ದಿನಗಳ ಬಳಿಕ, ನಮ್ಮ ನೆರೆಮನೆಯವರು, ನಮ್ಮ ಮನೆಯ ಗೇಟಿನಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಈ ನಕ್ಷತ್ರ ನೆಲ್ಲಿಕಾಯಿಗಳನ್ನಿಟ್ಟು ಹೋಗಿದ್ದರು. ಕಾಡು ಮಾವಿನಹಣ್ಣು, ಹಲಸಿನ ಹಣ್ಣು, ದೀವಿ ಹಲಸು ಮುಂತಾದವುಗಳನ್ನು ಆಗಾಗ ನಮಗೆ ಕೊಡುವುದುಂಟು ಅವರು. ನೇರವಾಗಿ ಅವರ ಮನೆಗೆ ಹೋಗಿ ಆ ನೆಲ್ಲಿಕಾಯಿಗಳಿಂದ ಏನು ತಯಾರಿಸಬಹುದೆಂದು ಕೇಳಿದೆ. ಇದರ ಉಪ್ಪಿನಕಾಯಿ ತುಂಬಾ ಒಳ್ಳೆಯದಾಗುತ್ತದೆಂದು ಹೇಳಿದುದಲ್ಲದೆ, ಉಪ್ಪಿನಕಾಯಿ ತಯಾರಿಸುವ ವಿಧಾನವನ್ನು ಹಂಚಿಕೊಂಡರು ಸಹಾ. ಮಾಮೂಲಿಯಾಗಿ ಉಪ್ಪಿನಕಾಯಿ ಹಾಕುವ ಗೋಜಿಗೆ ಹೋಗದ ನಾವು ಮನೆಯಲ್ಲಿ ಈ ನೆಲ್ಲಿಕಾಯಿಯ ಉಪ್ಪಿನಕಾಯಿ ತಯಾರಿಸಿದೆವು. ಇಷ್ಟಪಟ್ಟು ತಿಂದೆವು.
ರಾಜ ನೆಲ್ಲಿಕಾಯಿ ಉಪಯೋಗಿಸಿ ಚಟ್ನಿ, ಗೊಜ್ಜು, ಜಾಮ್, ಜ್ಯೂಸ್ ಮಾಡಬಹುದು ಹಾಗೆಯೇ ಸಕ್ಕರೆ ಪಾಕದಲ್ಲಿ ಹಾಕಿ ಕುದಿಸಿ ಕ್ಯಾಂಡಿ ತಯಾರಿಸಿ ಸವಿಯಬಹುದು, ಸಂಗ್ರಹಿಸಿಯೂ ಇಡಬಹುದು. ಗಿಡದ ಹಣ್ಣುಗಳನ್ನು ಇಂಡೋನೇಶಿಯಾದಲ್ಲಿ ವಿನೆಗರ್ ತಯಾರಿಸಲು ಬಳಸುವರು. ಮಲೇಶಿಯಾದಲ್ಲಿ ಹಣ್ಣುಗಳಿಂದ ಸಿರಪ್ ತಯಾರಿಸುವರು. ರಕ್ತವರ್ಧಕವಾಗಿಯೂ ಬಳಸಬಹುದಾದ ಈ ನೆಲ್ಲಿಕಾಯಿಗಳನ್ನು ಆರೋಗ್ಯವರ್ಧಕಹಾಗೂ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಲೇಹ್ಯ ತಯಾರಿಯಲ್ಲಿ ಬಳಸುವರಂತೆ.
ಈ ನೆಲ್ಲಿಕಾಯಿ ಮಾತ್ರವಲ್ಲ, ಗಿಡದ ಬೇರು, ಎಲೆ ಇವುಗಳನ್ನು ಕೂಡಾ ಹಲವು ಸಾಂಪ್ರದಾಯಿಕ ಔಷಧಿಯಲ್ಲಿ ಬಳಸುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಗಿಡದ ಎಲ್ಲಾ ಭಾಗಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಸೋರಿಯಾಸಿಸ್, ಗೋನೋರಿಯಾ, ಸಯಾಟಿಕಾ, ಸಂಧಿವಾತ, ಮಲಬದ್ಧತೆ, ಮೂತ್ರಪಿಂಡದ ಕಲ್ಲುಗಳು, ಮಧುಮೇಹ, ಅಸ್ತಮಾ, ಮೂಲವ್ಯಾಧಿ ಇತ್ಯಾದಿ ಆರೋಗ್ಯ ಸಮಸ್ಯೆಗಳ ನಿವಾರಣೆ ಮಾಡುವ ಸಾಂಪ್ರದಾಯಿಕ ಔಷಧಿ ತಯಾರಿಯಲ್ಲಿ ಬಳಸುತ್ತಾರೆ.ಈ ಗಿಡದ ಎಲೆಗಳು ನೋವುನಿವಾರಕ, ಜ್ವರನಿವಾರಕ, ಮೂತ್ರವರ್ಧಕ, ಉರಿಯೂತನಿವಾರಕ ಗುಣಗಳನ್ನು ಹೊಂದಿವೆಯೆಂದು ಸಂಶೋಧನೆಗಳಿಂದ ಧೃಢಪಟ್ಟಿವೆ. ಗಿಡದ ಎಲೆ ಹಾಗೂ ಬೇರುಗಳನ್ನು ಹಾವಿನ ಕಡಿತಕ್ಕೆ ನಡೆಸುವ ಚಿಕಿತ್ಸೆಯಲ್ಲೂ ಬಳಸುವರಂತೆ. ಈ ಗಿಡದ ಎಲೆ ಹಾಗೂ ಕರಿಮೆಣಸು ಉಪಯೋಗಿಸಿ ತಯಾರಿಸಿದ ಲೇಪವನ್ನು ಸಯಾಟಿಕಾ, ಸೊಂಟಶೂಲೆ(ಕಟಿವಾಯು) ಹಾಗೂ ಸಂಧಿವಾತ ನಿವಾರಣೆಗೆ ಬಳಸಬಹುದೆಂಬ ಮಾಹಿತಿಯೂ ಲಭ್ಯವಾಯಿತು. ಎಲೆಗಳ ಕಷಾಯವನ್ನು ಬೆವರು ತರಿಸಲು ಹಾಗೂ ಗೊನೋರಿಯಾ ಉಪಶಮನಕ್ಕೆ ಬಳಸುವರು. ಬೇರಿನಲ್ಲಿ ಸ್ವಲ್ಪ ವಿಷದ ಅಂಶ ಇದ್ದರೂ, ತಲೆನೋವು ಹಾಗೂ ಕೆಮ್ಮನ್ನು ಕಡಿಮೆ ಮಾಡಲು ಹಾಗೆಯೇ ಉಬ್ಬಸ ಚಿಕಿತ್ಸೆಯಲ್ಲಿ ಇದರ ಬೇರು ಬಳಸುವರು (1) ಒಟ್ಟಿನಲ್ಲಿ ಈ ರಾಜನೆಲ್ಲಿಕಾಯಿಯು ಸರ್ವರುಜಾಪಹಾರಿ ಎಂದರೂ ತಪ್ಪಿಲ್ಲ. ಎಲ್ಲಿಯಾದರೂ ಕಾಣಸಿಕ್ಕರೆ ಬಳಸುವಿರಲ್ವಾ?
(1) Star Gooseberry Uses, Remedies, Research, Side Effects by Dr Renita Dsouza
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಮಾಹಿತಿಪೂರ್ಣ………ತಿಳಿದಂತಾಯಿತು.
ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ ಮೇಡಂ.. ಇದನ್ನು ನಾವು..ಶಾಲೆಗೆ ಹೋಗುವಾಗ..ನೀವು ಲೇಖನ ದಲ್ಲಿ ತಿಳಿಸಿರುವಂತೆ ಗಿಡ ಅಲ್ಲಾಡಿಸಿ..ಕೆಳಗೆ ಬಿದ್ದಿರುವುದೆಲ್ಲಾ ಹೆಕ್ಕಿ ..ಮೊದಲೇ ಮನೆಯಿಂದ ಅಮ್ಮನ ಕಣ್ಣು ತಪ್ಪಿಸಿ ತಂದ ಉಪ್ಪು ಮೆಣಸಿನ ಪುಡಿಯೊಂದಿಗೆ..ಚೆನ್ನಾಗಿ ತಿಂದು ..ಒಮ್ಮೊಮ್ಮೆ ಕೆಮ್ಮು ಬರೆಸಿಕೊಂಡು..ಮಂಗಳಾರತಿ ಮಾಡಿಸಿಕೊಂಡದ್ದು..ನೆನಪಿಗೆ ಬಂತು..ಔಷಧೀಯ ಗುಣವಿದ್ದರೂ..ಅದಕ್ಕೊಂದು ಮಿತಿಯನ್ನು.. ಇರಿಸಿಕೊಳ್ಳದೆ…ಮುಕ್ಕಿದರೆ ಏನಾಗುತ್ತೆ..
ನೆನಪಿನ ಬುತ್ತಿಯನ್ನು ಬಿಚ್ಚಿ ಆಪ್ತವಾಗಿ ಪ್ರತಿಕ್ರಿಯಿಸಿದ ನಾಗರತ್ನ ಮೇಡಂ ಗೆ ಧನ್ಯವಾದಗಳು
ಉಪಯುಕ್ತ ಬರಹ. ಬರೆಯುವ ವಿಷಯದಲ್ಲಿ ನೀವು ಹಂಚಿಕೊಂಡ ಸ್ಥಿತಿಯೇ ನನ್ನದು ಕೂಡಾ ಮೇಡಂ. ನಾಳೆ ನಾಳೆ ಅಂತ ಮುಂದೆ ಹಾಕೋದೇ ಆಗಿದೆ.
ನಾಲ್ಕೈದು ವರ್ಷಗಳಿಂದ ಬರೆಯಬೇಕೆಂದು ಯೋಚಿಸಿದ ವಿಷಯಗಳು ತಣ್ಣಗೆ ಕುಳಿತಿವೆ…ಧನ್ಯವಾದ ನಯನಾ
ಸ್ವಲ್ಪ ಹುಳಿರುಚಿ ಇರುವ ಈ ರಾಜಾನೆಲ್ಲಿಕಾಯಿಯನ್ನು ನಾನೂ ಚಿಕ್ಕಂದಿನಲ್ಲಿ ನೋಡಿರಲಿಲ್ಲ. ಇದರ ಕುರಿತು ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿರುವ ಆತ್ಮೀಯ ಲೇಖನ ಖುಷಿ ಕೊಟ್ಟಿತು… ಧನ್ಯವಾದಗಳು ಮೇಡಂ.
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ಶಂಕರಿ ಮೇಡಂ ಗೆ ಧನ್ಯವಾದಗಳು
Good information
Nicely written
Thank you Jyothi
ಇಲ್ಲಿ ತೋರಿಸಿರುವ ನೆಲ್ಲಿಕಾಯಿ ಮರ ನಮ್ಮ ಕಾಲೇಜಿನಲ್ಲಿರುವ ಮರದ ಹಾಗೆ ಕಾಣುತ್ತದೆ. ಇದನ್ನ ನನ್ನ ಸಹೋದ್ಯೋಗಿಯಾಗಿದ್ದ ಡಾ. ಉಷಾ ಕೆ.ಎಂ. ಮೇಡಮ್ ಅವರು ನಡಿಸಿದ್ದು, ಮೇಡಮ್.
ಹೌದು ಸರ್…ನಾನು ನಿಮ್ಮ ಕಾಲೇಜಿಗೆ ಬಂದಿದ್ದಾಗ ಈ ಗಿಡವನ್ನು ಗಮನಿಸಿದ್ದು…ಉಷಾ ಮೇಡಂಗೆ ಧನ್ಯವಾದಗಳು ಹಾಗೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು