ಬಹುಪಯೋಗಿ ಬಲುರುಚಿಯ ‘ಹಲಸು’..

Share Button

“ಹಲಸು ದಿನ”ವನ್ನು ಪ್ರತಿ ವರ್ಷ ಜುಲೈ 4 ರಂದು ಆಚರಿಸಲಾಗುತ್ತದೆ. ಉಷ್ಣವಲಯದ ಹಣ್ಣು. ಸಸ್ಯ ಆಧಾರಿತ ಆಹಾರವನ್ನು ಅನುಸರಿಸಲು ಪ್ರಯತ್ನಿಸುತ್ತಿರುವವರಿಗೆ ಜನಪ್ರಿಯ ಮಾಂಸ ಬದಲಿಯಾಗಿದೆ. ಇದು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ. ಇದು ಯಾವುದೇ ಆಹಾರಕ್ರಮಕ್ಕೆ ಉತ್ತಮ ಸೇರ್ಪಡೆಯಾಗಿದೆ. ಮಾಗಿದ ಹಲಸಿನ ಹಣ್ಣನ್ನು ಹಸಿಯಾಗಿ ತಿನ್ನಬಹುದು. ಕೆಲವರು ಅದಕ್ಕೆ ಬೆಲ್ಲ ಹಾಕಿ ಕುದಿಸಿ ತಿನ್ನುತ್ತಾರೆ. ಮತ್ತು ಹಸಿವನ್ನು ರುಚಿಕರವಾದ ಮೇಲೋಗರವಾಗಿ ಬೇಯಿಸಬಹುದು. ಮಾರುಕಟ್ಟೆಯಲ್ಲಿ ವಿವಿಧ ಹೊಸ ಪಾಕ-ವಿಧಾನಗಳಿವೆ ಮತ್ತು ರೆಸ್ಟೋರೆಂಟ್‌ಗಳು ಸಹ ಹೊಸ ಭಕ್ಷ್ಯಗಳನ್ನು ನೀಡಲು ಪ್ರಾರಂಭಿಸಿವೆ.

ಈ ಹಲಸು ಪದವನ್ನು ಕೇಳಿದೊಡನೆ ನಮಗೆ ನಮ್ಮ ಬಾಲ್ಯದ ನೆನಪಾಗುತ್ತದೆ!. ನಮ್ಮ ಪೂರ್ವಿಕರು ಹಾಕಿದ ಒಂದೇ ಒಂದು ಹಲಸಿನ ಮರ ನಮ್ಮ ಮನೆ ಹಿಂದುಗಡೆ ಇತ್ತು. ಬೃಹದಾಕಾರವಾಗಿತ್ತು. ವರ್ಷಕ್ಕೆ 30 ರಿಂದ 40 ಹಲಸಿನ ಹಣ್ಣು ನಮಗೆ ಸಿಗುತ್ತಿತ್ತು. ನಿಜಕ್ಕೂ ನಮಗೆ ಅಚ್ಚರಿಯಾಗುತ್ತದೆ!. ಒಂದೇ ಒಂದು ಮರ ಇಷ್ಟೊಂದು ಫಲ ನೀಡುತ್ತಿತ್ತು ಎಂದು. ಆದರೆ ಕಾಲಾನುಕ್ರಮ ಅದಕ್ಕೆ ರೋಗ ಬಂದು ನಾಶವಾಯಿತು. ಆದರೆ ಇವತ್ತಿಗೂ ನಾವು ಒಂದು ಹಲಸಿನ ಗಿಡವನ್ನು ಹಾಕಲಿಲ್ಲ. ಇಂದು ನಮ್ಮ ಮಕ್ಕಳು, ಮೊಮ್ಮಕ್ಕಳು ಹಲಸಿನ ಹಣ್ಣನ್ನು ತಿನ್ನಲಿಲ್ಲ. ದುಡ್ಡು ಕೊಟ್ಟು ತಿನ್ನುತ್ತೇವೆ ಅಷ್ಟೇ!. ಇದು ಒಂದು ರೀತಿಯಲ್ಲಿ ದೌರ್ಭಾಗ್ಯ ಎನ್ನಬಹುದು. ಈಗಲೂ ಕೂಡ ನಮ್ಮ ಪೂರ್ವಿಕರು ಹಾಕಿದ ಮರಗಳು ವಿವಿಧ ಜಾತಿಯ ಹಣ್ಣುಗಳನ್ನು ನೀಡಿವೆ, ನೀಡುತ್ತಿವೆ. ಆದರೆ ನಾವು ಅವರ ಹಾದಿಯಲ್ಲಿ ಸಾಗಲಿಲ್ಲ. ನಾವು ಈಗ ಸಂಕಲ್ಪ ಮಾಡಬೇಕು. ವಿವಿಧ ಬಗೆಯ ಹಣ್ಣು ಹಂಪಲು ನೀಡುವ ಗಿಡಗಳನ್ನು ನೆಡಬೇಕು. ಹೇಗಿದ್ದರೂ ಈಗ ಮಳೆಗಾಲ ಪ್ರಾರಂಭವಾಗಿದೆ. ಈ ವರ್ಷದಿಂದಲೇ ಈ ರೀತಿಯ ಅಭಿಯಾನ ಪ್ರಾರಂಭವಾಗಬೇಕು.

ಹಲಸಿನ ಗಿಡ

ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ಆಹಾರ ಸೇವನೆ ಉತ್ತಮವಾಗಿರಬೇಕು. ನಮಗೆ ಹುಷಾರಿಲ್ಲದಾಗ ತಜ್ಞರು ನಮಗೆ ಸಲಹೆ ನೀಡುವುದೇ ನೀವು ಹೆಚ್ಚು ಹಣ್ಣು, ಹಂಪಲು ತಿನ್ನಿ ಎಂದು. ಜೊತೆಗೆ ಕಾಲಕಾಲಕ್ಕೆ ಬರುವ ಹಣ್ಣು ಹಂಪಲುಗಳು ನಮಗೆ ಯಥೇಚ್ಛವಾಗಿ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿವೆ. ಎಲ್ಲಾ ಕಾಲದಲ್ಲೂ ಸಿಗುವ ಫಲಗಳು ಇವೆ. ಸರಿಯಾದ ರೀತಿಯ ಆಹಾರ ಸೇವನೆ ಪ್ರತೀ ವ್ಯಕ್ತಿಯ ಆರೋಗ್ಯದ ಗುಟ್ಟು. ಕೆಲವರು ಮಾಂಸದ ಸೇವನೆ ಮೂಲಕ ದೇಹಕ್ಕೆ ಬೇಕಾದ ವಿವಿಧ ರೀತಿಯ ಪ್ರೋಟೀನ್‌, ಪೋಷಕಾಂಶಗಳನ್ನು ಪಡೆಯುತ್ತಾರೆ. ಆದರೆ ಹೆಚ್ಚು ಮಾಂಸಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗಬಹುದು. ಹೀಗಾಗಿ ಅದಕ್ಕೆ ಪರ್ಯಾಯವಾಗಿ ಹಲಸಿನ ಹಣ್ಣನ್ನು ಬಳಸಬಹುದಾಗಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹಲಸಿನ ಹಣ್ಣಿನ ಹೆಚ್ಚು ಸೇವನೆ ಬೇಡ. ಅಲ್ಪ ಪ್ರಮಾಣದಲ್ಲಿ ಅಂದರೆ ಬಾಯಿ ರುಚಿಗೆ ತಕ್ಕಷ್ಟು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಲಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಜುಲೈ 4 ರಂದು ಹಲಸಿನ ದಿನವನ್ನು ಆಚರಿಸಲಾಗುತ್ತದೆ.

ಹಾಗಾದರೆ ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳಿವೆ?- ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಮಾಹಿತಿ ನೀಡಿದ್ದಾರೆ…….

ನ್ಯೂಟ್ರಿಯೆಂಟ್ ಗಳ ಆಗರ :
ಹಲಸಿನಲ್ಲಿ ದೇಹಕ್ಕೆ ಬೇಕಾದ ಅನೇಕ ರೀತಿಯ ಜೀವಸತ್ವಗಳಿವೆ. ಕ್ಯಾಲೋರಿ, ಫಾಟ್‌, ಡಯೆಟರಿ ಫೈಬರ್‌, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಸೇರಿ ಅನೇಕ ಆರೋಗ್ಯಯುತ ಖನಿಜಗಳನ್ನು ಹಲಸು ತನ್ನೊಳಗೆ ಇರಿಸಿಕೊಂಡಿದೆ. ಹಲಸನ್ನು ಅನೇಕ ರೀತಿಯಲ್ಲಿ ಸಿಹಿ ಪದಾರ್ಥವಾಗಿ, ಅನ್ನದ ಜೊತೆಗಿನ ಪದಾರ್ಥವಾಗಿ ಬಳಸಬಹುದಾಗಿದೆ.

​ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ :
ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಹಲಸಿನ ಹಣ್ಣು ಸಹಾಯಕವಾಗಿದೆ. ಆದರೆ ನೆನಪಿಡಿ ಮಧುಮೇಹ ಇರುವವರು ಎಚ್ಚರಿಕೆಯಿಂದ ಸೇವನೆ ಮಾಡಬೇಕು. ಏಕೆಂದರೆ ರುಚಿ ಇದೆ ಎಂದು ಹೆಚ್ಚು ಹಲಸಿನ ಹಣ್ಣನ್ನು ಹೆಚ್ಚು ಸೇವನೆ ಮಾಡುವುದರಿಂದ ಶುಗರ್‌ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ನಮ್ಮ ದೇಹವು ಇತರ ಕೆಲವು ಆಹಾರಗಳಿಗಿಂತ ಹೆಚ್ಚು ನಿಧಾನವಾಗಿ ಹಲಸಿನ ಹಣ್ಣನ್ನು ಜೀರ್ಣಿಸಿಕೊಳ್ಳುತ್ತದೆ ಹೀಗಾಗಿ ಹಣ್ಣುಗಳನ್ನು ತಿನ್ನುವಾಗ ರಕ್ತದಲ್ಲಿನ ಸಕ್ಕರೆಯು ಬೇಗನೆ ಏರುವುದಿಲ್ಲ. ಆದ್ದರಿಂದ ಅಪರೂಪಕ್ಕೆ ಒಂದು ಬಾರಿ ಹಲಸಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಹಲಸಿನ ಬೀಜವೂ ಆರೋಗ್ಯಕಾರಿ
ಕೇವಲ ಹಲಸಿನ ಕಾಯಿ, ಹಣ್ಣು ಮಾತ್ರವಲ್ಲ, ಹಲಸಿನ ಬೀಜ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬೀಜಗಳನ್ನು ಸಾಂಬಾರಿನ ಜೊತೆ ಬಳಕೆ ಮಾಡುವುದರಿಂದ ಅತ್ಯುತ್ತಮ ಪೋಷಕಾಂಶಗಳು ದೊರಕುತ್ತವೆ.ಅಷ್ಟೇ ಅಲ್ಲ ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಕೂಡ ಸೇವನೆ ಮಾಡಬಹುದು. ಇದು ಕೂಡ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ, ಆರೋಗ್ಯಯುತವಾಗಿರವಂತೆ ಮಾಡಲು ಈ ಬೀಜಗಳು ಒಳ್ಳೆಯದು.

ದೇಹದ ತೂಕ ಇಳಿಕೆಗೆ
ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಸ್ಥೂಲಕಾಯತೆಯ ಸಮಸ್ಯೆ ಹೆಚ್ಚುತ್ತಿದೆ. ಹಲಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಕೊಬ್ಬು ಮುಕ್ತ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ. ಅಲ್ಲದೆ ಹಲಸಿನ ಪದಾರ್ಥಗಳು ಹೊಟ್ಟೆಯಲ್ಲಿ ಬೇಗನೆ ಜೀರ್ಣವಾಗುವುದಿಲ್ಲ. ಹೀಗಾಗಿ ಪದೆ ಪದೇ ಹಸಿವೆಯಾಗುವುದನ್ನು, ಕಡು ಬಯಕೆಗಳನ್ನು ತಪ್ಪಿಸಬಹುದಾಗಿದೆ.

​ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ.
ಹಲಸಿನ ಹಣ್ಣುಗಳು ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ಸರಳವಾದ ಸಕ್ಕರೆಗಳನ್ನು ಹೊಂದಿರುತ್ತವೆ. ಈ ಸಕ್ಕರೆಗಳು ನಮ್ಮ ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ ಮತ್ತು ಈ ಹಣ್ಣಿನ ಒಂದು ಸಣ್ಣ ಭಾಗವನ್ನು ತಿನ್ನುವುದು ನಿಮಗೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ನೀವು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಳ ಮಾಡುತ್ತದೆ.

ಹಲಸಿನ ಹಣ್ಣಿನ ಸೇವೆನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಯಸ್ಸಾದಂತೆ ಕಾಣುವ ತ್ವಚೆ, ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸಲು ಹಲಸಿನ ಹಣ್ಣು ಸಹಾಯಕವಾಗಿದೆ. ಇದರಲ್ಲಿನ ವಿಟಮಿನ್‌ ಸಿ ಅಂಶ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಿಕ್ಕಾಗ ತಾಜಾ ಹಲಸಿನ ಹಣ್ಣನ್ನು ತಿಂದು ಬಿಡಿ!. ವರ್ಣ ರಂಜಿತ ಹಲಸಿನ ಹಣ್ಣಿನ ತೊಳೆಗಳು ಕಣ್ಮನ ಸೆಳೆಯುತ್ತವೆ!.

ಈ ವಿಷಯಗಳ ಬಗ್ಗೆ ಗಮನವಿರಲಿ
ಹಲಸಿನ ಹಣ್ಣಿನ ಸೇವನೆಯಿಂದ ಕೆಲವರಿಗೆ ಸರಿಯಾಗಿ ಜೀರ್ಣವಾಗದೆ ಅಜೀರ್ಣವಾಗಬಹುದು. ಹೀಗಾಗಿ ಆದಷ್ಟು ರುಚಿಗೆ ಮಾತ್ರ ಸೇವನೆ ಮಾಡಿ.ಇನ್ನು ಕೆಲವರಿಗೆ ಅಲರ್ಜಿಯನ್ನು ಉಂಟು ಮಾಡಿ, ತುರಿಕೆಯಾಗಬಹುದು ಹೀಗಾಗಿ ಎಚ್ಚರಿಕೆ ಅಗತ್ಯ.ಹೊಟ್ಟೆ ತುಂಬ ಹಲಸಿನ ಹಣ್ಣನ್ನೇ ತಿನ್ನಬೇಡಿ. ನಿಮ್ಮ ದೇಹ ಪ್ರಕೃತಿಯ ಅನುಗುಣವಾಗಿ ಸೇವನೆ ಮಾಡಿ ಎಂದು ಸಲಹೆ ನೀಡುತ್ತಾರೆ ಡಾ. ಶರದ್‌. “ಉಂಡು ಮಾವಿನ ಹಣ್ಣು ತಿನ್ನು, ಹಸಿದು ಹಲಸಿನ ಹಣ್ಣು ತಿನ್ನು” ಎನ್ನುವ ಮಾತು ಕೂಡ ಇದೆ.

ಹಲಸಿನ ಬಗ್ಗೆ ಮತ್ತಷ್ಟು ಮಾಹಿತಿ…….
ಅನೂಹ್ಯ ಸ್ವಾದ, ಆಕರ್ಷಕ ಬಣ್ಣ, ಅಪ್ರತಿಮ ಸುವಾಸನೆಯಿಂದ ಆಬಾಲವೃದ್ಧರನ್ನೂ ಹಲಸು ತನ್ನೆಡೆಗೆ ಸೆಳೆಯುತ್ತದೆ. ಅನಾದಿಕಾಲದಿಂದಲೂ ಹಲಸು ಬಳಕೆಯಲ್ಲಿದೆ. ಆದರೆ ಹಣ್ಣುಗಳ ಸಾಮ್ರಾಟನಾಗಿಯೂ ವಿದೇಶಿ ಹಣ್ಣುಗಳ ನಡುವೆ ನಮ್ಮ ಹಳ್ಳಿ ಹಲಸು ನಮ್ಮ ಊರಲ್ಲಿ, ದೇಶದಲ್ಲಿ ಅವಜ್ಞೆಗೊಳಗಾಗಿದೆ. ಅದರ ಬೃಹದಾಕಾರವೇ ಅದಕ್ಕೆ ಮುಳುವಾಗಿದೆ ಎಂದರೆ ತಪ್ಪಲ್ಲ.
ವಿಪರ್ಯಾಸವೆಂದರೆ ಭಾರತದ ಮೂಲದ ಈ ಹಣ್ಣು ಈಗ ವಿದೇಶಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ.

ಹಸಿವು ನೀಗಿಸಲು, ಜೇಬು ತುಂಬಿಸಲು ಹಲಸು ಇಂದು ಸಹಕಾರಿಯಾಗಿದೆ. ಎಷ್ಟೋ ಜನರು ಮರೆತಿದ್ದ ಬಹುಪಯೋಗಿ ಹಲಸನ್ನು ಮತ್ತೆ ಬೆಳೆಯಲು ಆರಂಭಿಸಿದ್ದಾರೆ.ವಾಣಿಜ್ಯಿಕವಾಗಿ ಬೆಳೆದು ಕೈತುಂಬಾ ಲಾಭ ಗಳಿಸುತ್ತಿದ್ದಾರೆ. ಹಳ್ಳಿ ಹಲಸು ದೇಶ, ವಿದೇಶಗಳಲ್ಲಿ ತನ್ನ ಪರಿಮಳ ಬೀರುತ್ತಿದೆ. ಮಲೇಷ್ಯಾದಲ್ಲಿ ಬೆಳೆದ ಹಲಸಿಗೆ ಅಮೆರಿಕಾ, ಬ್ರಿಟನ್ ಗಳಲ್ಲಿ ಮಾರುಕಟ್ಟೆ ಸಿಗುತ್ತಿದೆ.

ಹಿತ್ತಲ ಹಲಸೇ ಮದ್ದು
ಒಂದು ಹಲಸು ಅದರ ಪ್ರಯೋಜನ ಮಾತ್ರ ನೂರಾರು. ಹಲಸಿನ ಎಲೆ, ಎಳೆಹಲಸಿನ ಕಾಯಿ (ಗುಜ್ಜೆ), ಹಣ್ಣು, ಬೀಜ ಹೀಗೆ ಪ್ರತಿಯೊಂದರಲ್ಲೂ ಒಂದಲ್ಲ ಒಂದು ಔಷಧೀಯ ಗುಣವಿದೆ. ಇತ್ತೀಚಿನ ಸಂಶೋಧನೆ ಪ್ರಕಾರ ಹಲಸಿನಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ.ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮೊದಲಾದ ರೋಗಗಳನ್ನೂ ತಡೆಗಟ್ಟುವ ಔಷಧೀಯ ಗುಣ ಹಲಸಲ್ಲಿದೆ ಎಂದು ತಿಳಿದು ಬಂದಿದ್ದು, ಇನ್ನಷ್ಟು ಸಂಶೋಧನೆಗಳು ನಡೆಯುತ್ತಿದೆ.

ಹಲಸು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿದೆ. ತರಕಾರಿಯೂ ಹೌದು, ಹಣ್ಣು ಹೌದು. ಮಾಂಸದ ರೂಪದಲ್ಲಿ ಅಂದರೆ ಪರ್ಯಾಯ ಮಾಂಸ ರೂಪದಲ್ಲಿ (substitute meet) ಉತ್ತರ ಭಾರತದ ಹೊಟೇಲ್ ಗಳಲ್ಲಿ ಬಳಕೆ ಯಲ್ಲಿದೆ. ಎಳೆ ಹಲಸು ಉಪ್ಪಿನಕಾಯಿ, ಫ್ರೈ, ತರಕಾರಿಯಾಗಿ ಪದಾರ್ಥಕ್ಕೆ ಬಳಕೆಯಾಗುತ್ತೆ. ಬಳಿಕ ಬೆಳೆದ ಹಲಸನ್ನು ಮತ್ತೆ ಚಿಪ್ಸ್, ಹಪ್ಪಳ, ದೋಸೆ, ಪೋಡಿ ಮಾಡಿ ಚಪ್ಪರಿಸಬಹುದು!. ಇದರಿಂದಾಗಿ ಹಲಸು ಬಹುಪಯೋಗಿ. ಹಣ್ಣಾದ ಬಳಿಕವೂ ಬಹುರೂಪಿ. ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ (ಸಟ್ಟೇವು), ಗೆಣಸಲೆ, ಬನ್ಸ್, ಶಿರಾ, ಹೋಳಿಗೆ ಹೀಗೆ ಹತ್ತು ಹಲವು ಬಗೆಯ ಖಾದ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಲಸಿನ ಬೀಜವನ್ನು ಬೀಸಾಡುವಂತಿಲ್ಲ. ಅದನ್ನೂ ವಿವಿಧ ಪದಾರ್ಥ ಹಾಗೂ ಖಾದ್ಯ ತಯಾರಿಸಲು ಸಾಧ್ಯ. ಬೀಜವನ್ನು ಬಳಸಿ ಚಾಕೊಲೇಟ್ ತಯಾರಿಸಬಹುದು ಎಂದು ಸಂಶೋಧಿಸಿದ್ದಾರೆ.

ಹೀಗೆ ಬಹುಪಯೋಗಿ ಹಲಸು ಕಲಿಯುಗದ ಕಲ್ಪವೃಕ್ಷವೇ ಹೌದು. ಬಳಕೆಯ ವಿಧಾನ ಅರಿಯಬೇಕಿದೆ. ಆಗ ಸದ್ಬಳಕೆ ಸಾಧ್ಯ. ಈಗಿನ ಸಮಸ್ಯೆ ಎಂದರೆ ಬೃಹದಾಕಾರದ ಹಣ್ಣು, ಅದನ್ನ ಹೇಗೆ ಸಂಸ್ಕರಿಸಿಸುವುದು ಎಂಬುದಾಗಿದೆ. ಎಳೆ ಹಲಸು ರೆಡಿ ಟು ಕುಕ್ ರೂಪದಲ್ಲಿ, ಹಣ್ಣು ರೆಡಿ ಟು ಈಟ್ ರೂಪದಲ್ಲಿ ದೊರೆತರೆ ಹಲಸಿಗೆ ಉತ್ತಮ ಬೇಡಿಕೆ ಇದೆ. ಬೇಡಿಕೆಗೆ ತಕ್ಕ ಪೂರೈಕೆಯಾದಲ್ಲಿ ನಿಸ್ಸಂದೇಹವಾಗಿ ಹಲಸು ತನ್ನ ರಾಜ ಮರ್ಯಾದೆಯನ್ನು ಮರಳಿ ಪಡೆಯುತ್ತದೆ. ಕಾಡಂಚಿನ ಪ್ರದೇಶಗಳಲ್ಲಿ ಹಲಸು ಯಥೇಚ್ಛವಾಗಿ ಬೆಳೆಯುವುದರಿಂದ ಹಲಸಿನ ವಿವಿಧ ಬಗೆಯ ಖಾದ್ಯಗಳು ಕೂಡ ತಯಾರಾಗುತ್ತವೆ. ಅನೇಕ ಪ್ರಾಣಿ -ಪಕ್ಷಿಗಳಿಗೂ ಕೂಡ ಹಲಸಿನ ಹಣ್ಣು ಆಹಾರವಾಗಿದೆ.

ನಮಗೆ ಬಾಲ್ಯದಲ್ಲಿ ಚಿಕ್ಕ ತಮಾಷೆ ಘಟನೆ ಎಂದರೆ ಹಲಸಿನ ಕಾಯಿಯನ್ನು ಕಿತ್ತು ಒಂದು ಕಡೆ ಇಡುತ್ತಿದ್ದರು. ಅದು ಕೆಲವು ದಿನಗಳ ನಂತರ ಹಣ್ಣಾಗಿ ಘಮ್ಮನೆ ನಮಗೆ ಮೂಗಿಗೆ ಬಡಿಯುತ್ತಿತ್ತು ಅದರ ವಾಸನೆ. ನಾವು ಹಲಸು ಹಣ್ಣಾಗಿದಿಯಾ ಮೂಸಿ ನೋಡು ಎಂದು ಹೇಳುತ್ತಿದ್ದೆವು. ನಮ್ಮ ಎದುರಿಗಿರುವವರು ಮೂಸಿದಾಗ ಅವರ ತಲೆಯ ಮೇಲೆ ಒಂದು ಏಟು ಬಾರಿಸುತ್ತಿದ್ದೆವು. ಆಗ ಹಲಸಿನ ಹಣ್ಣಿಗೆ ಅವನ ಮೂಗು ತಾಕಿ ಅಯ್ಯೋ ಎನ್ನುವಾಗ ನಾವು ಖುಷಿ ಪಡುತ್ತಿದ್ದೆವು. ಒಂದು ಹಲಸಿನ ಹಣ್ಣನ್ನು ಮನೆ ಮಂದಿಯಲ್ಲ ತಿನ್ನುತ್ತಿದ್ದೆವು. ಬೀಜವನ್ನು ಕೆಂಡದಲ್ಲಿ ಸುಟ್ಟು ತಿನ್ನುವುದೇ ಒಂದು ರೀತಿಯಲ್ಲಿ ಮಜಾ. ಒಮ್ಮೊಮ್ಮೆ ಉಪ್ಪು ನೀರಿನಲ್ಲಿ ಬೇಯಿಸಿ ತಿನ್ನುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ಮನೆ ಮನೆಗೆ ಹಂಚುತ್ತಿದ್ದೆವು. ಈ ಹಣ್ಣು ಎಲ್ಲೇ ಇಟ್ಟರೂ ನಮಗೆ ಗೊತ್ತಾಗಿ ಬಿಡುತ್ತಿತ್ತು. ಏಷ್ಟೋ ಬಾರಿ ಕದ್ದು ಕೂಡ ತಿಂದಿದ್ದೇವೆ!. ಹಲವರು ಕಳ್ಳತನ ಮಾಡಿ ಕೂಡ ಕನಸಿನ ಹಣ್ಣು ಕಿತ್ತುಕೊಂಡು ಹೋಗುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.


ಉಷ್ಣವಲಯದ ಹಣ್ಣು ಬಾಂಗ್ಲಾದೇಶ ಮತ್ತು ಶ್ರೀಲಂಕಾದ ರಾಷ್ಟ್ರೀಯ ಹಣ್ಣು ಜೊತೆಗೆ ತಮಿಳುನಾಡು ಮತ್ತು ಭಾರತದ ಕೇರಳ ರಾಜ್ಯದ ಫಲವಾಗಿದೆ. ಈ ಹಲಸಿನ ಹಣ್ಣು. ಅನಿಸುದಕ್ಷಣ ಮತ್ತು ಆಗ್ನೇಯ ಏಷ್ಯಾದ ಭಾಗಗಳಿಗೆ ಸ್ಥಳೀಯವಾಗಿದೆ. ಈ ಹಣ್ಣನ್ನು ಸಸ್ಯ ಆಧಾರಿತ ಆಹಾರ ಕ್ರಮವನ್ನು ಅನುಸರಿಸುವ ಜನರಿಗೆ ಜನಪ್ರಿಯ. ಮೊದಲೇ ಹೇಳಿದಂತೆ ಮಾಂಸದ ಬದಲಿ ಎಂದು ಕರೆಯಲಾಗುತ್ತದೆ. ಹಲಸುಗಳನ್ನು ಪ್ರದೇಶಕ್ಕೆ ಅನುಗುಣವಾಗಿ ಜಾಕ್, ಕಥಲ್, ಮತ್ತು ಚಕ್ಕಾ ಎಂದು ಕರೆಯಲಾಗುತ್ತದೆ.

ಹಲಸಿನ ಸೇವನೆ ಸಹಸ್ರಾರು ವರ್ಷಗಳ ಇತಿಹಾಸವನ್ನು ಕೂಡ ಹೊಂದಿದೆ. ಭಾರತದ ಪಶ್ಚಿಮ ಘಟ್ಟಗಳ ಭಾಗದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಹಲಸು ಅಗ್ರಸ್ಥಾನವನ್ನು ಪಡೆದಿದೆ. ಹಲಸಿನ ಮರ ನಿತ್ಯ ಹರಿದ್ವರ್ಣ ಮರವಾಗಿದೆ. ಬಿಸಿ ವಾತಾವರಣ ಮತ್ತು ತೇವಾಂಶವುಳ್ಳ ಉಷ್ಣವಲಯದ ಹವಾಮಾನದಲ್ಲಿ ಇದನ್ನು ಬೆಳೆಯಲಾಗುತ್ತದೆ.”ಹಲಸು” ಎಂಬ ಪದವು ಪೋರ್ಚುಗೀಸನ ಜಾಕಾದಿಂದ ಬಂದಿದೆ. ಮತ್ತು ಪ್ರತಿಯಾಗಿ ಮಲಯಾಳಂ ಪದ ಚಕ್ಕಾದಿಂದ ಬಂದಿದೆ.

ಗೃಹಿಣಿಯರು ಹಲಸಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಹಾರದ ರುಚಿ ನಮ್ಮನ್ನು ಸೆಳೆಯುತ್ತದೆ!.ಒಟ್ಟಿನಲ್ಲಿ ಬಾಯಲ್ಲಿ ನೀರು ಬರಿಸುವ ಹಲಸಿನ ಹಣ್ಣನ್ನು ತಿನ್ನದೇ ಇರುವವರು ಇಂದೇ ತಿನ್ನಿ!. ಆದರೆ ಮರೆಯಬೇಡಿ, ಮನೆಗೊಂದು ಗಿಡವನ್ನು ನೆಡಿ!.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

10 Responses

  1. Krishnaprabha M says:

    ಬಲು ಪ್ರಿಯ ಹಲಸಿನ ಹಣ್ಣಿನ ಬಗೆಗಿನ ಸವಿಸ್ತಾರ ಲೇಖನ ಚೆನ್ನಾಗಿದೆ

  2. ನಯನ ಬಜಕೂಡ್ಲು says:

    ಹಲಸಿನಷ್ಟೇ ಸಿಹಿ ನೀಡುವ ಲೇಖನ. ಚೆನ್ನಾಗಿದೆ ಸರ್.

  3. ಹಲಸಿನ ಹಣ್ಣಿನ ಬಗ್ಗೆ ವಿಸ್ತಾರವಾದ ಲೇಖನ ಚೆನ್ನಾಗಿ ‌ಮೂಡಿಬಂದಿದೆ…ಸಾರ್… ಧನ್ಯವಾದಗಳು

  4. ಶಂಕರಿ ಶರ್ಮ says:

    ರುಚಿಕರವಾದ, ಬಹೂಪಯೋಗಿ ಹಲಸು ಹಳ್ಳಿಗಳಲ್ಲಿ ಪ್ರತಿ ಮನೆಯ ಹಿತ್ತಿಲಿನಲ್ಲೂ ರಾರಾಜಿಸುತ್ತದೆ. ನಮ್ಮ ಸಣ್ಣ ಹಿತ್ತಿಲಲ್ಲಿ ಇರುವ ಸೊಗಸಾದ ಎರಡು ಹಲಸಿನ ಮರಗಳು ನಮ್ಮೊಂದಿಗೆ ಅಕ್ಕಪಕ್ಕದ ಮನೆಯವರಿಗೂ ಸ್ವಾದಿಷ್ಟ ಹಣ್ಣು ನೀಡುತ್ತಿವೆ. ಸಕಾಲಿಕ ಬರಹ ಚೆನ್ನಾಗಿದೆ.

  5. MANJURAJ H N says:

    ಹಲಸನು ನೆನಪಿಸಿದ ನಿಮಗೆ ಧನ್ಯವಾದಗಳು. ಲೇಖನ ಚೆನ್ನಾಗಿದೆ

  6. Savithri bhat says:

    ಹಲಸಿನ ವಿಸ್ತಾರ ಲೇಖನ ಓದಿ ಬಾಯಲ್ಲಿ ನೀರೂರಿತು..ಸುಂದರ ನಿರೂಪಣೆ, ಜೊತೆಯಲ್ಲಿ ಅಂದವಾದ ಚಿತ್ರಗಳೂ ಕಣ್ಮನ ತುಂಬಿತು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: