ಹರಿಹರ ಕವಿಯ ಬಸವರಾಜದೇವರ ರಗಳೆ: ಬಸವಣ್ಣನ ಅಂತರಂಗ ವಿಕಸನ ಪ್ರತಿಮಾತ್ಮಕ ಚಿತ್ರಣ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಶಿವಸಂಗಿ ಬಸವಣ್ಣ: ಮಂಗಳವಾಡೆಗೆ ಬಂದ ಬಸವಣ್ಣ ಬಿಜ್ಜಳನ ಕರಣಶಾಲೆಗೆ ಹೋಗುತ್ತಾನೆ. ಭಂಡಾರಿಗಳು ಆಯ ವ್ಯಯದ ಲೆಕ್ಕವನ್ನು ತಪ್ಪಾಗಿ ಮಾಡುವುದನ್ನು ನೋಡುತ್ತಾನೆ. ಭಂಡಾರದ ಮುಖ್ಯಸ್ಥ ಸಿದ್ಧ ದಂಡಾಧಿಪನಿಗೆ ಲೆಕ್ಕದಲ್ಲಿ ತಪ್ಪು ಆಗುತ್ತಿರುವುದನ್ನು ಮನವರಿಕೆ ಮಾಡಿಕೊಡುತ್ತಾನೆ. ಎಲ್ಲರಿಗೂ ಸಂತೋಷವಾಗುತ್ತದೆ. ಬಸವಣ್ಣನನ್ನು ಸಿದ್ಧ ದಂಡಾಧಿಪ ಬಿಜ್ಜಳನ ಬಳಿಗೆ ಕರೆದುಕೊಂಡು ಹೋಗಿ ಯೋಗ್ಯ ಗಣಕಕಾರ ಬಸವಣ್ಣನನ್ನು ನೇಮಿಸಿಕೊಳ್ಳಲೇಬೇಕೆಂದು ವಿನಂತಿಸಿಕೊಳ್ಳುತ್ತಾನೆ. ವರ್ಷಕ್ಕೆ ನೂರೊಂದು ಹೊನ್ನಿನ ಸಂಬಳಕ್ಕೆ ನೇಮಕಾತಿ ಆಗುತ್ತದೆ. ಕಮ್ಮೆ ಕುಲಪತಿಯಾಗಿದ್ದ ಭಂಡಾರಿ ಸಿದ್ಧ ದಂಡಾಧಿಪನಿಗೆ ಬಸವಣ್ಣ ತನ್ನ ಕುಲಬಾಂಧವ ಎಂದು ಸಂತೋಷವಾಗುತ್ತದೆ. ತನ್ನ ಮನೆಯಲ್ಲಿಯೆ ಇರಿಸಿಕೊಳ್ಳುತ್ತಾನೆ. ಬಸವಣ್ಣ ಆತನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಲಾರಂಭಿಸುತ್ತಾನೆ.

ದೇಶ ವಿದೇಶಗಳಿಂದ ಬರುವ ಕಾಣಿಕೆಗಳನ್ನು ರಾಜನ ಪರವಾಗಿ ಸ್ವೀಕರಿಸುವ ಹೊಣೆಯೂ ಬಸವಣ್ಣನದಾಗಿರುತ್ತದೆ. ಒಂದು ದಿನ ಕಾಣಿಕೆಯಾಗಿ ರಾಶಿ ರಾಶಿಯಾಗಿ ಬಂದಿರುವ ಅತುಲ ಐಶ್ವರ್ಯವನ್ನು ನೋಡಿದ ಬಸವಣ್ಣನಿಗೆ “ಇಂತಪ್ಪ ಅನರ್ಘ್ಯಮಂ ಭಕ್ತರ್ಗೆ ಕಯ್ಯಾರೆ ಕೊಡಲಿಲ್ಲ. ಎಂದು ಪರಮ ಶಿವಭಕ್ತರ್ಗೆ, ಮಹೇಶಂಗೆ ಸೇರಿಸುವೆನಿಂತಿದಂ? ಕಾಕಭಾಜನನಾಗಿ ಹೋಗುತಿರ್ದಪುದು ಅಕಟಾ” ಎಂದು ವ್ಯಥೆಯಾಗುತ್ತದೆ. “ದೇವ ಸಂಗಯ್ಯ, ಸಲಿಸೆನ್ನ ಮನದಳ್ತಿಯಂ” ಎಂದು ಸಂಗಮನಾಥನನ್ನು ಬೇಡಿಕೊಳ್ಳುತ್ತಾನೆ. ಬಸವಣ್ಣನ ಮನದೊಳಗಿನ ಈ ಮಾತುಗಳು ಸಂಗನ ಪೂಜೆಯ ಅಂಗವಾಗಿ ಶಿವಭಕ್ತರನ್ನು ಕುರಿತು ಯೋಚಿಸಿದ ಮೊಟ್ಟಮೊದಲ ಮಾತುಗಳಾಗಿವೆ.

ತನ್ನೆಲ್ಲ ಐಶ್ವರ್ಯವನ್ನು ಶಿವಭಕ್ತರಿಗೆ ಅರ್ಪಿಸುವ ಕಾಲ ಯಾವಾಗ ಬರುವುದೋ ಎಂಬ ಬಸವಣ್ಣನ ನಿರೀಕ್ಷೆಯ ಚಿಂತನೆ-ಭಾವನೆ ಮುಂದೆ ಸ್ವಲ್ಪ ದಿನಗಳಲ್ಲಿಯೇ ವಾಸ್ತವ ಆಗುತ್ತದೆ. ಸಿದ್ಧ ದಂಡಾಧಿಪನ ಸಾವಿನ ಮೂಲಕ ಆ ಅವಕಾಶ ಕೈಗೆಟಕುತ್ತದೆ. ಮಕ್ಕಳಿಲ್ಲದ ಅವನ ಸಮಸ್ತ ಆಸ್ತಿಗೆ, ಸಂಪತ್ತಿಗೆ, ಧನಕನಕಾದಿಗಳಿಗೆ ಬಿಜ್ಜಳ ಬಸವಣ್ಣನನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾನೆ. ಜೊತೆಗೆ ಭಂಡಾರವನ್ನೂ ಒಳಗೊಂಡಂತೆ ರಾಜ್ಯದ ಎಲ್ಲಾ ಕಾರ್ಯಭಾರದ ಸೂಕ್ತ ನಿರ್ವಹಣೆಯ ಜವಾಬ್ದಾರಿಯನ್ನೂ ಬಸವಣ್ಣನಿಗೇ ಕೊಡುತ್ತಾನೆ.

ಕೈತುಂಬ ಹಣವನ್ನು ವೆಚ್ಚ ಮಾಡಬಹುದಾದ ಸಿದ್ಧ ದಂಡಾಧಿಪನ ಆಸ್ತಿ ಮತ್ತು ಅಧಿಕಾರವನ್ನು ಪಡೆದ ಬಸವಣ್ಣ “ನಲವಿಂದ ಹರಭಕ್ತರಂ ಕರೆಯಿಸುತ್ತಂದು ಒಲವಿಂದ ಚರಣ ಸರಸಿಜಮನ್ ಅಪ್ಪುತ್ತಂ ಆರಾಧನೆಯನಿತ್ತು ಅವರ ಹರಕೆಯಂ ಹೊತ್ತು” ಶರಣರ ಚರಣಗಳ ಆಲಿಂಗನಾಸಕ್ತನಾಗಿ ಸಂತೋಷಪಡುತ್ತಾನೆ. ಸಜ್ಜನ ಸ್ನೇಹದಿಂದ ಬಸವಣ್ಣ ಶರಣರಿಗೆ ಎರಡು ಮನಸ್ಸು ಮಾಡದೆ ಸತ್ಕಾರ ಮಾಡುತ್ತಾನೆ ಎಂಬುದು ಜಗತ್ತಿಗೆಲ್ಲ ಪ್ರಚಾರ ಆಗಿದೆ. ಸಕಲ ದೇಶದ ಶರಣರು ಹರಭಕ್ತಿ-ಸರೋನಿಧಿ ದಡ ಮೀರಿ ಹರಿದು
ಬರುವಂತೆ ಬಸವಣ್ಣನಿದ್ದಲ್ಲಿಗೆ ಬಂದಿದ್ದಾರೆ. ಅವರನ್ನು ಬಸವಣ್ಣ ಅತಿ ಸ್ನೇಹದಿಂದ, ಅತಿ ಹರುಷದಿಂದ, ಅತಿ ಭಯ ಭಕ್ತಿಯಿಂದ ಎದುರುಗೊಂಡಿದ್ದಾನೆ. “ನರಜನ್ಮದೊಳು ಬಂದು ಗುರುಕರುಣಮಂ ಹೊತ್ತು ಹರಕಿಂಕರನಾಗಿ ಶರಣರ ಬರವಂ ಪಡೆದೆ” ಎಂದು ಅವರಿಗೆ ಕೈ ಮುಗಿದಿದ್ದಾನೆ. “ನಿಮ್ಮಂ ಸಿಂಗರಿಸಿದಂಗೆ ಆಳಾಗದ ಚೆಲುವಾವುದು. ನಿಮ್ಮಂ ಪೊಗಳಲ್‌ ಎನ್ನಳವಲ್ಲ. ನಿಮ್ಮೊಳಂ ಸಂಗನೊಳ್ ಅವಿಭೇದಂ” ಎಂದು ಆನಂದಭಾಷ್ಪವನ್ನು ಸುರಿಸಿದ್ದಾನೆ. ಹೀಗೆ ಬಸವಣ್ಣ ಶಿವಭಕ್ತಿ ಸಾರಾಯನಾಗಿ ಪರಮಸುಖಿಯಾಗಿದ್ದ ಎನ್ನುತ್ತಾನೆ ಕವಿ.

ಎಂದಿನಂತೆ ಬಿಜ್ಜಳನ ಅರಮನೆಯಿಂದ ಬಸವಣ್ಣ ತನ್ನ ಅರಮನೆಗೆ ಬಂದ. ಅಲ್ಲಿ ನೆರೆದಿದ್ದ ಶರಣಸಂದೋಹವನ್ನು ಕಂಡ. ಒಡನೆಯೇ ದಂಡಿಗೆಯಿಂದಿಳಿದ. “ಬದುಕಿದೆಂ ಬದುಕಿದೆನೆಂದು ಮೈಯಿಕ್ಕಿ ನಿಂದು ಕೈಮುಗಿದು ಕಿಂಕುರ್ವಾಣನೇತ್ರನುಂ ದೈನ್ಯವದನುಂ …. .ಆಗಿ” ಭದ್ರಾಸನಗಳನ್ನು ಅವರೆಲ್ಲರಿಗೆ ನೀಡಿದ, ಷೋಡಶೋಪಚಾರ ಮಾಡಿದ ಎನ್ನುವ ಕವಿ ಬಸವಣ್ಣ ಬಿಜ್ಜಳನ ಸೇವೆಯನ್ನು ಮಾಡಿದಂತೆಯೇ ಶರಣರ ಸೇವೆಯನ್ನೂ ಮಾಡುತ್ತಿದ್ದ, ಎರಡರಲ್ಲಿಯೂ ಯಾವ ಕೊರೆಯೂ ಇರುತ್ತಿರಲಿಲ್ಲ ಎನ್ನುತ್ತಾನೆ.

ಒಂದು ದಿನ ಎಂದಿನಂತೆ ಬಿಜ್ಜಳನ ಅರಮನೆಯಿಂದ ತನ್ನ ಅರಮನೆಗೆ ಬಂದು ಅಲ್ಲಿ ನೆರೆದಿದ್ದ ಶರಣ ಸಮೂಹವನ್ನು ಕಂಡು, ಕೂಡಲೇ ದಂಡಿಗೆಯಿಂದ ಇಳಿದು ಅವರನ್ನೆಲ್ಲ ಉಪಚರಿಸಿದ; ಆದರೆ ಅಂದು ಶರಣರ “ಚರಣಂಗಳಂ ತೊಳೆದು” ದಿನರಾತ್ರಿಯೆಲ್ಲ ಅವರೊಂದಿಗೆ ಇರುತ್ತಾನೆ, ಅದರಿಂದ ಉಂಟಾದ ಸಂಗಸುಖದಿಂದ ಆತನಿಗೆ ಪುಳಕವೇರುತ್ತದೆ. ಅಂದಿನಂತೆ ದಿನವೂ ಶರಣರೊಡನೆ “ನಿಚ್ಚ ಶಿವರಾತ್ರಿಯಂ” ಮಾಡುವೆನೆಂದು ಸತ್ಯವಚನ ಅಲಂಕೃತನಾಗುತ್ತಾನೆ ಎಂದು ಕವಿ ಬಸವಣ್ಣನ ಅಂದಿನ ನಡೆಯ ವಿಶೇಷತೆಯನ್ನು ಗಮನಕ್ಕೆ ತರುತ್ತಾನೆ. ಬಸವಣ್ಣನಿಗೆ ಮೊದಲಿಗೆ ಶರಣರ ಸೇವೆಯೆಂದರೆ ಶರಣರಿಗೆ ತನ್ನ ಐಶ್ವರ್ಯವನ್ನು ದಾನಮಾಡುವುದು ಆಗಿತ್ತು. ಅದೇ ನಿತ್ಯಸತ್ಯ ಆಗಿತ್ತು. ಈಗ ಶರಣರಿಗೆ ದಾನಕೊಟ್ಟು ಕೈಮುಗಿಯುವುದರ ಮಟ್ಟಿಗೆ ಸೀಮಿತವಾಗಿ “ಸತ್ಯ” ಕಾಣುತ್ತಿಲ್ಲ. ಬದಲಿಗೆ ನಿತ್ಯವೂ ಶಿವರಾತ್ರಿಯನ್ನು ಮಾಡುವುದು ಸತ್ಯವಾಗಿ ಕಾಣುತ್ತಿದೆ, ಅದರಂತೆ ನಡೆಯುತ್ತೇನೆ” ಎಂದು ಶರಣರ ಮುಂದೆ ಪ್ರತಿಜ್ಞೆ ಮಾಡಿದ್ದಾನೆ.

ಹೀಗೆ ಬಿಜ್ಜಳ ರಾಜನಿಗೆ ಕಡಿಮೆ ಇಲ್ಲದಂತೆ ತನ್ನ ಅಧಿಕಾರದಲ್ಲಿ ಮೆರೆಯುವ ಬಸವಣ್ಣನನ್ನು ಬಿಜ್ಜಳ ಹೇಗೆ ಭಾವಿಸಿದ, ನೃಪನಾದ ಬಿಜ್ಜಳನನ್ನು ಬಸವಣ್ಣ ಹೇಗೆ ಭಾವಿಸಿದ ಎನ್ನುವುದನ್ನು ಕವಿ “ಶಿವಕಳಾ ಪರಿಪೂರ್ಣ ತೇಜಃ ಪ್ರತಾಪರೂಪಿಂಗೆ ಬಿಜ್ಜಳಂ ಮನದೊಳೆ ಎರಗುತ್ತಮಿರೆ ತಂದಿಕ್ಕಿದ ಸಮ ಗದ್ದುಗೆಯ ಮೇಲೆ ನೃಪನನು ಉಪಚರಿಸುತಂ ವಿಳಾಸನಿಧಿ ಕುಳ್ಳಿರೆ” ಎಂದು ವರ್ಣಿಸುತ್ತಾನೆ. ಬಿಜ್ಜಳನೊಂದಿಗೆ ಕೂಡುವ ಸಮಗದ್ದುಗೆ ದೊರೆತರೂ ಹೊಂದಿದ್ದ ಅಧಿಕಾರದ ಮದಕ್ಕೆ ಒಳಗಾಗದ ಬಸವಣ್ಣನ ಮಾನಸಿಕ ಸ್ಥಿರತೆಯನ್ನೂ ರಾಜನಲ್ಲಿ ಆತನ ಸಭ್ಯ ವರ್ತನೆಯನ್ನೂ ಕವಿ ಸ್ಪಷ್ಟಪಡಿಸುತ್ತಾನೆ.

ದಿನನಿತ್ಯದಂತೆ ಬಿಜ್ಜಳ ಸಭೆಯಲ್ಲಿ ಆಸೀನನಾಗಿದ್ದ. ಒಬ್ಬ ಮಾಲೆಕಾರ ಬಿಜ್ಜಳನಿಗೆ ಕೇದಿಗೆ ಹೂವನ್ನು ಕೊಟ್ಟು ನಮಸ್ಕರಿಸಿದ. ಬಿಜ್ಜಳ ಅದರ ಒಂದು ಎಸಳನ್ನು ಬಸವಣ್ಣನಿಗೆ ಕೊಟ್ಟ. ಬಸವಣ್ಣ ಅದನ್ನು ತನ್ನ ಸಂಪುಟದಲ್ಲಿದ್ದ ಲಿಂಗಕ್ಕೆ ಅರ್ಪಿಸಿದ. ಸಭೆಯಲ್ಲಿದ್ದ ವೇದ ಪಂಡಿತನೊಬ್ಬ ಶಿವನಿಗೆ ಕೇದಿಗೆ ಹೂ ಸಲ್ಲದು, ಬಸವಣ್ಣ ಅಪಚಾರ ಮಾಡಿದ್ದಾರೆ ಎಂದು ಆಕ್ಷೇಪಿಸಿದ. ಬಸವಣ್ಣ ಅದಕ್ಕೆ “ದೇವಂ ಭಕ್ತರ್‌ ಕೊಟ್ಟೊಡೆ ಕೈಕೊಳ್ವಂ” ಎಂದು ಉತ್ತರಿಸಿದ. ಅದಕ್ಕೆ ಸಾಕ್ಷಿ ಎಂದು ಕೆಲಬಲದ ಸಹಸ್ರ ಮಾಹೇಶ್ವರರ ಕಕ್ಷಪುಟದ ಸಜ್ಜೆಗಳನ್ನು ಉಪ್ಪರಿಸಿ ತೋರಿಸಿದ. ಎಲ್ಲದರಲ್ಲೂ ಬಸವಣ್ಣ ಲಿಂಗಕ್ಕೆ ಇರಿಸಿದ ಕೇದಗೆಯ ಎಸಳನ್ನು ಹೋಲುವ ಕೇದಗೆಯ ಎಸಳು ಇತ್ತು. ಅಂಥ ಕೇದಗೆಯ ಎಸಳು ಮಂಗಳವಾಡದ ಮಹಾಶಿವಲಿಂಗದ ಅಂಘ್ರಿಯಲ್ಲಿಯೂ ಇತ್ತೆಂದು ತಿಳಿದ ರಾಜ ಹತ್ತಿರದಲ್ಲಿದ್ದವರನ್ನು ಬಿರುಗಣ್ಣಿನಿಂದ ನೋಡಿ ಬಸವಣ್ಣನಿಗೆ ತಪ್ಪುಗಾಣಿಕೆ ಕೊಟ್ಟು ಬಸವಣ್ಣನನ್ನು ಸಾಕ್ಷಾತ್‌ ಸಂಗಮೇಶ್ವರ ಎಂದು ಕೊಂಡಾಡುತ್ತಾನೆ. ಈ ಪ್ರಸಂಗದಲ್ಲಿ ಬಸವಣ್ಣ ಪ್ರಾಣಲಿಂಗ, ಸ್ಥಾವರ ಲಿಂಗಗಳಲ್ಲಿ ಇಟ್ಟ ಅಭೇದತೆಯ ನಂಬಿಕೆ ವ್ಯಕ್ತವಾಗುವುದಲ್ಲದೆ ಆತ ಲಿಂಗಧಾರಿಗಳಲ್ಲೆಲ್ಲ ಶಿವಭಕ್ತಿಯನ್ನು ಕಾಣುವ ಜಂಗಮ-ಪ್ರಾಣಿ ಆಗುವುದೂ ಸಹ ಸೂಚಿತವಾಗುತ್ತದೆ.

ಶಿವಸ್ವರೂಪಿ ಲಿಂಗಧಾರಿಗಳು: *ಬಸವಣ್ಣನಿಗೆ ತಾನು ಮತ್ತು ತನ್ನ ಸುತ್ತೆಲ್ಲ ನೆರೆದಿದ್ದ ಶರಣರು ಬೇರೆ ಬೇರೆ ಅಲ್ಲ, ಅವರೆಲ್ಲ ಲಿಂಗಧಾರಿಗಳು, ಲಿಂಗವಿದ್ದಲ್ಲೆಲ್ಲ ಶಿವನಿದ್ದಾನೆ, ಲಿಂಗಧಾರಿಗಳೆಲ್ಲ ಶಿವಸ್ವರೂಪಿಗಳು ಎಂಬ ನಂಬಿಕೆ ಇತ್ತು, ಅದು ಅವನ ಪ್ರಾಣದಾಳಕ್ಕೂ ಒಪ್ಪಿತವಾಗಿತ್ತು ಎನ್ನುವುದನ್ನು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದು ನೂರಾರು ಶಿವಭಕ್ತರು ಬಸವಣ್ಣನ ಮನೆಗೆ ಬಂದು ಅವನೊಡನೆ ಲಿಂಗಪೂಜೆ ಮಾಡುವುದು. ಬಸವಣ್ಣನ ಮನೆಗೆ ಬಂದ ನೂರಾರು ಭಕ್ತರಲ್ಲಿ ಒಬ್ಬೊಬ್ಬರೂ ಒಂದೊಂದು ತಮ್ಮ ವಿಶಿಷ್ಟ ನೇಮಗಳನ್ನು ಹೇಳುತ್ತಾರೆ. ಅವರ ಬೇಡಿಕೆಯನ್ನು ಕವಿ ಹತ್ತಿಪ್ಪತ್ತು ಸಾಲುಗಳಲ್ಲಿ ವರ್ಣಿಸುತ್ತಾನೆ. “ಅಳಿಗಳು ಎರಗದ ಹೂ, ಕಳೆ ರವಿ ಮುಟ್ಟದ ಅರಳುಗಳು, ಶೋಧಿಸಿದ ತಣ್ಣಿತಪ್ಪ ಅಗ್ಘವಣಿ, ಸಿರಿಗಂಧ ಬೆರೆಸಿದ ಸಣ್ಣೀರು, ಸಂಪಿಗೆಯ ಮುಗುಳುಗಳು ಕೂಡಿದ ಹಿಮಜಲ, ಬಾಸಣಿಸಿದ ವಿಮಲಮಪ್ಪ ಅಗ್ಘವಣಿ” ಇತ್ಯಾದಿಗಳು ಕೆಲವರ ಅಗತ್ಯಗಳು. ಕೆಲವರ ದೇವರಿಗೆ ಬೇಕಾದದ್ದು ಬಾವನ್ನ, ಆವಗಂ ಬೇಳ್ಪ ಪಚ್ಚೆ, ನಂದವರ್ತಿ, ಮಂದೈಪ ಕಂಪೆ ಇತ್ಯಾದಿಗಳು. ಕೆಲವರಿಗೆ ಮೊದಲು ಧೂಪ ನಂತರ ದೀಪಾರತಿ ಪೂಜಾಕ್ರಮ. ಜಲಚರ ಸೋಂಕದ ಅಗ್ಘವಣಿ, ವತ್ಸನುಣ್ಣದ ಪಯ, ದೇವಲೋಕದ ಕಮಲ, ದೇವಲೋಕದ ಮರುಗ, ಕರಿಯ ಮಲ್ಲಿಗೆ, ಕರವೀರದ
ಅರಳೆ, ಕಾಮದಹನದ ವಿಭೂತಿ, ಹೇಮದ ಅಕ್ಷತೆ- ಇವು ಕೆಲವರ ನೇಮ.  ಕೆಲವರಿಗೆ ಆರತಿಗೆ ವಾರಿಜದ ತಂತುವಿನ ಬತ್ತಿ, ಪಚ್ಚ ಕರ್ಪುರ; ಕೈಕೊಳಿಸಲು ರನ್ನದಿಂಡೆ, ರಂಗವಲ್ಲಿಗೆ ಗಜಮಸ್ತಕದ ಮುತ್ತು, ಜಪಕ್ಕೆ ಏಕಮುಖ ರುದ್ರಾಕ್ಷಿಮಾಲೆ ಅತ್ಯಗತ್ಯ. ಹೀಗೆ ಶರಣರು ಪೂಜೆಗಾಗಿ ಯಾವುದರ ಅವಶ್ಯಕತೆ ಇದೆ ಎಂದರೂ ಅವನ್ನೆಲ್ಲ ಬಸವಣ್ಣ ಪೂರೈಸಿದ ಎನ್ನುವ ಕವಿ ಹೀಗೆಲ್ಲ ಶರಣರ ಸೇವೆಯನ್ನು ಮಾಡಿದ ಬಸವಣ್ಣ “ಕಂದಿದನೆ ಕುಂದಿದನೆ ಬಾಡಿದನೆ……ಬೆಚ್ಚಿದನೆ? ಸಂಗನಂ ನೆನೆದು ಸುಖದಿಂದಂ ಈವುತ್ತಿರ್ದನ್” ಎಂದು ಉದ್ಗರಿಸಿದರೆ, ಶರಣರ ಪೂಜಾ ಸಂಭ್ರಮವು “ಭಕ್ತಿ ಸ್ವಯಂವರ, ಮುಕ್ತಿ ಸ್ವಯಂವರ”ದ ತೆರ ಇತ್ತು ಎಂದು ವರ್ಣಿಸುತ್ತಾನೆ.

“ಹಾಲುಂಡೆ ಮೆತ್ತಗಿದೆ, ಅದ ಕೊಳ್ಳು; ಹಾಲನಾರೈಸಿದರೆ ಸಾಕು ಮತ್ತೇನೂ ಬೇಡ; ಬೀಸಂಬೂರಿಗೆಯನ್ನು ಒಮ್ಮೆ ರುಚಿ ನೋಡು; ಪರಡಿಯ ಪಾಯಸವನ್ನಾದರೂ ಉಣ್ಣು; ಕೆನೆ ಮೊಸರು ನಿನಗೆ ತುಂಬ ಇಷ್ಟವಾದದ್ದು, ಅದನ್ನು ಸವಿ; ಒಂದೇ ಒಂದು ಮೇಲೋಗರವನ್ನಾದರೂ ರುಚಿ ನೋಡು; ಯಾಕೆ ಪಕ್ವಾನ್ನವನ್ನೂ ತಿನ್ನುತ್ತಿಲ್ಲ, ದೃಷ್ಟಿ ಆಗಿದೆ ನಿನಗೆ, ಉಪ್ಪಾರತಿ ಎತ್ತುತ್ತೇನೆ ತಡೆ” ಹೀಗೆಲ್ಲಾ ಶರಣರ ಭಕ್ತಿಪರವಶತೆ ಇತ್ತು; “ಆರೈಸಲಿಕ್ಕುವ ಶರಣರಿಚ್ಛೆಗೆ ಅವತರಿಸಿ … ಉಂಡನ್ ಎಲ್ಲರ್ಗೆ ಇಷ್ಟವರನಾಗಿ ಶಂಕರಂ ……. ಆಗಳ್ ಒಲವಿಂ ಹಸ್ತ ಪ್ರಕ್ಷಾಲನ” ಮಾಡಿದ ಬಸವಣ್ಣ ಎಂದು ಕವಿ ಹೇಳುವುದರ ಅರ್ಥ ಬಸವಣ್ಣ ಸಂಗಮೇಶ್ವರ ಮತ್ತು ಲಿಂಗಧಾರಿ ಶರಣರ ಅಭೇದತೆಯನ್ನು ದರ್ಶಿಸಿದ ಅನುಭಾವಿಯಾದ ಎಂದು.

ಬಸವಣ್ಣ ಈ ಹಿಂದೆ ಬಿಜ್ಜಳನ ಎಲ್ಲ ವೈಭವವೂ ಭಕ್ತರಿಗೆ ಮಾಹೇಶ್ವರರಿಗೆ ಸಲ್ಲದೆ ಕಾಕಭಾಜನ ಆಗುತ್ತಿದೆ, ಅದನ್ನು ಸರಿಪಡಿಸುವ ಅವಕಾಶ ಎಂದು ಬರುವುದೋ ಎಂದು ಒದ್ದಾಡಿಕೊಂಡಿದ್ದುದು ಬರಿಯ ಆಲಾಪ ಆಗಿರಲಿಲ್ಲ ಎಂದು ಸೂಚಿಸುವಂತೆ ಕವಿ ಶರಣರು ಬಸವಣ್ಣನ ಮನೆಗೆ ಬಂದು ತಮ್ಮಿಚ್ಚೆಯಂತೆ ಶಿವಪೂಜೆ ಮಾಡಿದ ಸಂದರ್ಭವನ್ನು ಬಸವಣ್ಣ ಮನವಾರೆ ಬಿಜ್ಜಳನ ಭಂಡಾರದ ಅಮೂಲ್ಯ ವಸ್ತ್ರಾಭರಣಗಳನ್ನೆಲ್ಲ ಶರಣರಿಗೆ ಕೊಟ್ಟು ಸತ್ಕರಿಸಿ ಕೃತಕೃತ್ಯ ಆದ ಒಂದು ಘಟನೆ ಮಾತ್ರ ಎಂದು ವರ್ಣಿಸುತ್ತಾನೆ. ಆ ಪ್ರಸಂಗ ಪಡೆದ ತಿರುವನ್ನೂ ವಿವರಿಸುತ್ತಾನೆ.

ಬಸವಣ್ಣನು ಶರಣರಿಗಿತ್ತ ಭೂಷಣಗಳನ್ನು ಶರಣರು ಧರಿಸಿ ಓಡಾಡುತ್ತಾರೆ. ಅದನ್ನು ಅವನ ವಿದ್ವೇಷಿಗಳು ನೋಡಿ “ನಿಲಲಾರದೆ ಗಳಗಳನೆ ಪರಿತಂದು” ಬಿಜ್ಜಳನಿಗೆ ವಿಷಯ ತಿಳಿಸುತ್ತಾರೆ. “ಎಲೆ ಮರುಳರಸ! ನಿನ್ನ ಭಂಡಾರದೊಳು ನೀನಿಕ್ಕಲಮ್ಮದ ಪದಕಂ ಶರಣರ ಪೇರುರದೊಳು, ನೀಂ ಮುಟ್ಟಲಂಜುವ ತಾರಹಾರಂ ಭಕ್ತರ ಕೊರಳ್ಗಳೊಳು, ನೀಂ ಕೈಕೊಳಿಸಲಮ್ಮದ ವಜ್ರದ ಕಂಕಣ ಶರಣರ ಕರದೊಳು, ನೀಂ ನೋಡಲಮ್ಮದ ರತ್ನ ಮುದ್ರಿಕೆಗಳು ಶರಣರ ಕೋಮಲಾಂಗುಲಿಯೊಳು ….” ಇತ್ಯಾದಿಯಾಗಿ
ಬಿಜ್ಜಳನ ಭಂಡಾರ “ಸೂರೆ ಹೋದ”, “ಭಕ್ತರ್ಗೆ ಬರಿದಾದ” ವಿಷಯವನ್ನು ತಿಳಿಸುತ್ತಾರೆ.

ಬಿಜ್ಜಳ ನಂಬಿ ಬಸವಣ್ಣನೊಡನೆ ಭಂಡಾರವನ್ನು ಪರೀಕ್ಷಿಸಲು ಇರಬೇಕು ಎಂದು ನಿರೀಕ್ಷಿಸಿದ ನಿಲವಿನ ಹದಿನೆಂಟು ಕೋಟಿಯ ಬದಲಿಗೆ ಛತ್ತೀಸ ಕೋಟಿ, ಬಾಹತ್ತರ ಕೋಟಿಗಳಿಗಿಂತ ಮಿಗಿಲಾಗುತ್ತದೆ ಭಂಡಾರದ ಲೆಕ್ಕ. ಆಗ ಬಸವಣ್ಣನು “ಶರಣರ ಮುಂದೆ ನೀನಾರು” ಎಂದು ಬಿಜ್ಜಳನನ್ನು ಝಂಕಿಸುತ್ತಾನೆ, ಬಿಜ್ಜಳ ಬಸವಣ್ಣನ ಕಾಲಿಗೆರಗುತ್ತಾನೆ. ಈ ಪ್ರಸಂಗ ಲಿಂಗ ತೊಟ್ಟವರೆಲ್ಲ ಜಂಗಮರು, ಜಂಗಮರಿಗೆ ಕೊಟ್ಟದ್ದೆಲ್ಲ ಲಿಂಗಕ್ಕೇ ಕೊಟ್ಟದ್ದು ಎಂಬ ನಿಲುವನ್ನು ಸ್ಪಷ್ಟಪಡಿಸುವುದರ ಜೊತೆಗೆ ಬಸವಣ್ಣನ ಅಧಿಕಾರಸ್ಥಾನ. ರಾಜ, ರಾಜ್ಯಕ್ಕೆ ಒಂದು ಪ್ರತೀಕ ಆದ ಭಂಡಾರವು ಬಸವಣ್ಣನ ಶಿವಭಕ್ತಿಯಿಂದಾಗಿ ಲೆಕ್ಕ ಮಾಡಿ ಮುಗಿಸಲಾಗದಷ್ಟು ವೃದ್ಧಿ ಆದುದನ್ನೂ, ಇಡೀ ರಾಜ್ಯವೇ ಶಿವಮಯ ಆಯಿತು ಎಂಬುದನ್ನೂ ಸಂಕೇತಿಸುತ್ತದೆ.


ಬಸವಣ್ಣ ಭಂಡಾರದ ಮೇಲೆ ತನಗಿರುವ ಹಿಡಿತವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಅವನ ಮೇಲೆ ದೂರು ತಂದವರು “ಭಕ್ತರ ಉರವಣೆ ಪಿರಿದಾಯ್ತು. ಅದಲ್ಲದೆಯುಂ ವಿಷ್ಣುವಂ ಬಯ್ವರೆಂದಡೆ ವೈಷ್ಣವರಂ ಕಂಡರಾರು? ಬ್ರಹ್ಮನಂ ಬಗೆಯರೆಂದಡೆ ಬ್ರಾಹ್ಮರಂ ಬಲ್ಲರಾರು? ಜಿನನಂ ಕಿತ್ತು ಬಿಸುಡುವರೆಂದಡೆ ಜೈನರ ಸುದ್ದಿಯೆಲ್ಲಿಯದು? ಬೊಮ್ಮರಂ ಬೆಳ್ಮಾಡುವರೆಂದಡೆ ಸ್ವಾಮಿಗಳಂ ಸರಕು ಮಾಡುವರಾರು? ಇಂತು ಷಡ್ದರ್ಶನಂ ಕೀಳಾದವು, ಮೃಢದರ್ಶನಂ ಮೇಲಾದುದು” ಎಂದೂ ತಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದರು. ಇದು ಬಸವಣ್ಣನಿಂದಾಗಿ ಉಳಿದ ಧರ್ಮಗಳು ತಮ್ಮ ಪ್ರಾಶಸ್ತ್ಯವನ್ನು ಕಳೆದುಕೊಂಡವು, ಎಲ್ಲೆಲ್ಲು ಶೈವಧರ್ಮ ಮುಂಚೂಣಿಗೆ ಬಂದಿತು; ಬಸವಣ್ಣ ಲೌಕಿಕ ಮತ್ತು ಆಧ್ಯಾತ್ಮಿಕ ಎಂಬ ಎರಡು ಪ್ರತ್ಯೇಕ ಜೀವನ ರೀತಿಗಳು ವ್ಯಕ್ತಿಗೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟ ಎಂದೇ ಹೇಳುತ್ತದೆ. ಇದು ಕೊರಳಲ್ಲಿ ಕಟ್ಟಿಕೊಂಡ ಬದನೆಕಾಯಿ ಲಿಂಗವಾಗಿ ವೇಷಧಾರಿ ಜಂಗಮರೂ ನಿಜ ಜಂಗಮರೇ ಆಗುವ ಪ್ರಸಂಗದಲ್ಲಿ ಮತ್ತಷ್ಟು ಸ್ಪಷ್ಟವಾಗಿದೆ.

ಒಂದು ದಿನ ಬಸವಣ್ಣನು ಶರಣ ಸಂತರ್ಪಣೆಯಲ್ಲಿ ಮಗ್ನನಾಗಿದ್ದಾಗ “ಕೆಲಬರ್‌ ಡಂಬಕರ್”‌ ಬಂದು ವಿಭೂತಿ ರುದ್ರಾಕ್ಷಿಗಳನ್ನು ಧರಿಸಿ ವೃಂತ ಫಲಮಂ ಸಮಂ ತಂದು ಕಕ್ಷದೊಳಿರಿಸಿ ಆತನಿಗೆ ಕಾಣಿಸಿಕೊಳ್ಳುತ್ತಾರೆ. ಬಸವಣ್ಣ ಅವರನ್ನು ಮರ್ಯಾದಿಸಿ ಅವರ ಕೊರಳಲ್ಲಿದ್ದ ಲಿಂಗದ ಪೂಜೆಗೆ ಹೂವು, ಅಗ್ಘವಣಿಯನ್ನು ತಂದು ಕಕ್ಷದ ಸೆಜ್ಜೆಯನ್ನು ಉಪ್ಪರಿಸಬೇಕೆಂದು ವಿನಂತಿಸುತ್ತಾನೆ. ಇದನ್ನು ನಿರೀಕ್ಷಿಸದ ಆ ಡಂಬಕರಿಗೆ ಈಗ ಭಯವಾಗುತ್ತದೆ. ಕೊನೆಗೆ ಬಸವನನ್ನು “ಕರುಣಿಸಿ” ಎಂದು ಬೇಡಿಕೊಳ್ಳುತ್ತಾರೆ. “ಬಸವಭಾವಂ ಬಲಿದು ಸೆಜ್ಜೆಯೊಳು (ಬದನೇಕಾಯಿಯ) ತೊಟ್ಟು ಪಿಂಡಿಗೆಯಾಗೆ ಫಲಮೆ ಲಿಂಗಮದಾಗೆ” ಆ ಡಂಬಕರೂ ನಿಜಭಕ್ತರಾದರು ಎಂದು ಹೇಳುವುದರ ಜೊತೆಗೆ ಹೀಗೆ “ಸಂತತಂ ಬಂದಿಕಾರರ್‌ ಭಕ್ತ”ರಾದರು, ಶಿವನ ಕರುಣೆಯಿಂದ ಜನನ ಮರಣದ ಬಂಧವನ್ನು ಕಳೆದುಕೊಂಡರು ಎಂದೂ ಕವಿ ಹೇಳುತ್ತಾನೆ, ಬಸವಣ್ಣನ ಶಿವಭಕ್ತಿಯ ವ್ಯಾಪ್ತಿ ವಿಸ್ತೃತ ಆದುದನ್ನೂ ಗಮನಕ್ಕೆ ತರುತ್ತಾನೆ.

ಸಕಲ ಜೀವಾತ್ಮರಲ್ಲೂ ಶಿವನನ್ನು ಕಾಣುವ ಹಂತಕ್ಕೆ ಬಸವಣ್ಣ ಏರುವುದನ್ನು ಸೂಚಿಸುವ ಪ್ರಸಂಗವನ್ನೂ ಕವಿ ಚಿತ್ರಿಸಿದ್ದಾನೆ. ಒಮ್ಮೆ ಭಕ್ತವೇಷಧಾರಿಯಾಗಿ ಬಂದ ಕಳ್ಳರು ಹೊರಗಡೆ ಮೇಯುತ್ತಿದ್ದ ಬಸವಣ್ಣನ ಆಕಳುಗಳನ್ನು ಅಪಹರಿಸಿದರು. ಗಾಬರಿಯಿಂದ ಗೋವಳರು ಬಸವಣ್ಣನಿಗೆ ವಿಷಯವನ್ನು ತಿಳಿಸಿದರು. ಆಗ ಬಸವಣ್ಣ “ಎಲೆ ಮರುಳು ಗೋವಳರಾ ಭಕ್ತರೇಂ ಕಳ್ಳರೇ? ಶಿವವೇಷಮುಂ ಕಳವುಂ ಒಂದೆಡೆಯೊಳ್ ಇಪ್ಪುದೇ” ಎಂದು ಪ್ರತಿಕ್ರಿಯಿಸುವುದರ ಜೊತೆಗೆ ಅವರು ತಮ್ಮ ಒಡವೆಯನ್ನೇ
ಒಯ್ದಿದ್ದಾರೆ, “ತಾಯ್ಗಳು ಉಮ್ಮಳಿಸಲಾಗದು ಕರುಗಳಂ ಬಿಡಿರೇ” ಎಂದು ಆಜ್ಞಾಪಿಸುತ್ತಾನೆ. ನಿಶ್ಚಿಂತೆಯಿಂದ “ಶರಣರೊಡನೆ ಒಲುಮೆಯಿಂ ಲಿಂಗಾರ್ಚನಂ ಗೆಯ್ದು,….ಮೃಢ ಪ್ರಸಾದಮಂ ಕೈಕೊಂಡು ಪರಮಸುಖಿ”ಯಾಗಿರುತ್ತಾನೆ.

ಡಂಭಕರು ನಿಜ ಭಕ್ತರಾಗುವುದರಲ್ಲಿ ಆ ಪ್ರಸಂಗ ಕೊನೆಗೊಂಡರೆ ಆಕಳುಗಳು ಕಳುವಾಗುವ ಪ್ರಸಂಗ ಬಸವಣ್ಣ ಯಾವುದೇ ಸಂದರ್ಭದಲ್ಲಿ ಚಿತ್ತಸ್ಥಿರತೆಯನ್ನು ಕಳೆದುಕೊಳ್ಳುತ್ತಿರಲಿಲ್ಲ, ಶಿವನ ಸ್ಮರಣೆಯನ್ನು ಮರೆಯುತ್ತಿರಲಿಲ್ಲ, ಬದಲಿಗೆ “ಸಂಗನೇ ಕೊಂಬವಂ ಸಂಗನೇ ಕೊಡುವವಂ, ಸಂಗನೇ ಉಂಬವಂ ಸಂಗನೇ ಉಡುವವಂ” ಎಂಬ ಸರ್ವಂ ಶಿವಮಯಂ ಎನ್ನುವ ಆಯಾಮವನ್ನು ಶಿವಭಕ್ತಿಗೆ ನೀಡಿದ ಎನ್ನುವುದನ್ನು ಮನಗಾಣಿಸುವುದರಲ್ಲಿ ಕೊನೆಗೊಳ್ಳುತ್ತದೆ.

ಈ ಲೇಖನದ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=40535

(ಮುಂದುವರಿಯುವುದು)

ಗಜಾನನ ಈಶ್ವರ ಹೆಗಡೆ

4 Responses

  1. ನಯನ ಬಜಕೂಡ್ಲು says:

    ಸೊಗಸಾದ ಬರಹ

  2. ಲೇಖನ…ಓದಿಸಿಕೊಂಡು..ಹೋಗುತ್ತಿದೆ..ಸಾರ್..

  3. ಶಂಕರಿ ಶರ್ಮ says:

    ಬಸವಣ್ಣನವರ ಕುರಿತ ಪ್ರಬುದ್ಧ ಲೇಖನವು ಸಂಗ್ರಹಯೋಗ್ಯವಾಗಿದೆ.
    ಧನ್ಯವಾದಗಳು ಸರ್.

  4. MANJURAJ H N says:

    ಸುಲಲಿತ ಗದ್ಯ, ಸುಕವಿ ಭಕ್ತಮಹಾಕವಿ ಹರಿಹರನ ಹಾಗೆ ! ಹೀಗೆ ಮುಂದುವರಿಯಲಿ ಗುರುಗಳೇ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: