ಕಾದಂಬರಿ : ಕಾಲಗರ್ಭ – ಚರಣ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
”ಆಹಾ ಪುಟ್ಟೀ, ನಮಗೆ ಸಪ್ತಮಾತೃಕೆಯರಾದ ನಂತರ ನಮ್ಮ ವಂಶೋದ್ಧಾರಕ ಹುಟ್ಟಿದ. ಅವರುಗಳ ಲಾಲನೆ ಪಾಲನೆ, ಮನೆಯ ಹಿರಿಯರ ಜವಾಬ್ದಾರಿ, ಒಕ್ಕಲು ಮಕ್ಕಳ ಯೋಗಕ್ಷೇಮ ಇವುಗಳಿಗೆ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು. ನನ್ನ ಹೆತ್ತವರು ನಾಲ್ಕಕ್ಷರ ಕಲಿಸಿದ್ದರಿಂದ ಆ ಎಲ್ಲ ಹಳವಂಡಗಳ ನಡುವೆ ನನ್ನ ಓದು. ನಿಮ್ಮ ತಾತನ ಬಾಯಲ್ಲಿ ಆಗಿಷ್ಟು ಈಗಿಷ್ಟು ವಿಚಾರಗಳ ಬಗ್ಗೆ ಮಾತು, ಹಲವಾರು ಜನರ ಬದುಕು ಬವಣೆಗಳು, ಮಕ್ಕಳ ಸಲುವಾಗಿ ಬಂದ ಹೊಸ ನಂಟಸ್ಥನಗಳು, ಒಂದೇ ಎರಡೇ, ಯಾವ ಕಾಲೇಜಿನಲ್ಲಿ ಇವೆಲ್ಲ ಅನುಭವಗಳನ್ನು ಕಲಿಸುತ್ತಾರೆ. ಇರಲಿಬಿಡು, ಈಗ ಮಾಡಲು ಹೊರಟಿರುವ ಕೆಲಸ ಘನವಾದ್ದೇ ಅದರಲ್ಲಿ ಎರಡು ಮಾತಿಲ್ಲ. ನಿನ್ನ ಯೋಜನೆಗಳಿಗೆ ಅನುಸಾರವಾಗಿ ಪರವಾನಗಿ ಸಿಗಬಹುದು. ಪ್ರಾರಂಭಿಸಲು ನಮ್ಮವೇ ಬೇಕಾದಷ್ಟು ಮನೆಗಳಿವೆ. ಅಲ್ಲೇ ಯಾವುದಾದರೊಂದರಲ್ಲಿ ಪ್ರಾರಂಭಿಸಬಹುದು. ಎಲ್ಲಾ ಸರಿ ಈಗ ನೀನು ಮತ್ತು ಚಂದ್ರಿಕಾ ನಮ್ಮ ಮನೆಯಿಂದ ಬೇರೆ ಮನೆಗೆ ಹೋಗುತ್ತಿದ್ದೀರಿ. ಹಳೆಯ ಗೆಳೆಯರಿರಬಹುದು. ಮನೇಲೇ ಮಾಡೋಕೆ ಕೆಲಸವಿದೆ ಅಂತ ಅಂದರೆ ಅಥವಾ ಚಂದ್ರಿಕಾ ಒಪ್ಪಿ ನೀನು ಹೊರಗೆ ನಿಂತರೂ ಒಂದಲ್ಲಾ ಒಂದು ಸಾರಿ ಆಕ್ಷೇಪಣೆ ಬರಲಾರದೆಂಬುದು ಯಾವ ಗ್ಯಾರಂಟಿ. ಪುಟ್ಟೀ ಇಷ್ಟೇ ವರ್ಷಗಳು ತಡೆದಿದ್ದೀಯಂತೆ ಇವೆಲ್ಲ ಒಂದು ಹಂತಕ್ಕೆ ಬರುವವರೆಗೆ ಈ ಸುದ್ಧಿಯನ್ನು ಎತ್ತದಿರುವುದೇ ಸೂಕ್ತ ಅನ್ನಿಸುತ್ತೆ. ನಂತರ ಎಲ್ಲರ ಮರ್ಜಿ ನೋಡಿಕೊಂಡು ಏನಾದರೂ ಮಾಡಬಹುದು ಅನ್ನಿಸಿದರೆ ಪ್ರಾರಂಭಿಸು.ಇಲ್ಲವಾದರೆ ಮಹೇಶನ ಜೊತೆಗೂಡಿ ಮನೆಯ ಕಾರುಬಾರು ನೋಡಿಕೊಂಡಿರು. ಅದೇನೋ ಹೇಳ್ತಾರಲ್ಲಾ ‘ಮನೆಗೆದ್ದು ಮಾರುಗೆಲ್ಲು’ ಅಂತ ನೆನಪಿರಲಿ” ಎಂದರು ಬಸಮ್ಮ.

”ಆತಂಕಪಟ್ಟುಕೊಳ್ಳುವುದೇನಿಲ್ಲ ಅಜ್ಜೀ, ತಾತ ಈಗಿನ್ನೂ ಕೇಳಿದ್ದಾರೆ. ನಾನು ನನ್ನ ಯೋಜನೆಗಳನ್ನು ಪಟ್ಟಿಮಾಡಿ ಅವಕಾಶ ಕೋರಿ ಅರ್ಜಿಹಾಕಿ, ಅದೆಲ್ಲ ಪ್ರೋಸೆಸ್ ಆಗಿ ನನಗೆ ಅನುಮತಿ ಕೊಡಬೇಕಾದರೆ ಆರು ತಿಂಗಳೋ, ವರ್ಷವೋ ಆದರೆ ನಮ್ಮ ಪುಣ್ಯ. ಮನೆಗೆ ಹಿರಿಯರಾದ ತಾತನವರಿಗೆ ಹೇಳಿ ಮುಂದುವರೆಯೋಣಾಂತ ಅಂತ ಕೇಳಿದೆ. ಅಷ್ಟರಲ್ಲಿ ನೀವೂ ಬಂದಿರಿ. ಒಬ್ಬರನ್ನೊಬ್ಬರು ಮೀರಿಸುವಂತೆ ಉಪನ್ಯಾಸ ಕೊಟ್ಟಿರಿ. ಏನೇ ಆಗಲಿ ನೀವು ಹೊರಗೆಲ್ಲೂ ಹೋಗದಿದ್ದರು ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದೀರಲ್ಲ ! ನಿಮ್ಮ ಅನುಭವದ ಪಾಕ ನನಗಿಷ್ಟವಾಯಿತು. ನೀವಿಬ್ಬರು ನನ್ನ ಜೊತೆಗಿದ್ದರೆ ಮಿಕ್ಕಿದ್ದು ಸರಾಗ. ಅದಕ್ಕೇ ಕೇಳಿ ತಿಳಿದೆ. ಎಲ್ಲವೂ ಒಂದು ಹಂತ ಮುಟ್ಟುವವರೆಗೆ ಯಾರನ್ನೂ ಕೇಳುವುದಿಲ್ಲ. ನನ್ನ ಅಪ್ಪ ಅಮ್ಮನನ್ನಾಗಲಿ, ಸಂಗಾತಿಯಾಗಿ ಬರುವವರನ್ನಾಗಲೀ ಕೇಳೆನು ಸರಿಯಾ?” ಇನ್ನು ಶಯನಸುಖ ಪಡೆಯಬಹುದೆಂದು ಅಲ್ಲಿಂದ ರೂಮಿನ ಬಾಗಿಲನ್ನು ಮುಂದಕ್ಕೆಳೆದುಕೊಂಡು ಹೊರ ನಡೆದಳು ಮಾದೇವಿ.

ಇತ್ತ ಮಂಗಳಾ ಮತ್ತು ತನ್ನ ಪತ್ನಿ ಗೌರಮ್ಮನವರ ಜೊತೆ ಮನೆಗೆ ಬಂದರು ಗಂಗಾಧರಪ್ಪ. ”ಗೌರಾ ಊಟ ಹೆಚ್ಚಾಯಿತು ಎನ್ನಿಸುತ್ತಿದೆ. ಸ್ವಲ್ಪ ಹೊತ್ತು ಹಾಗೆ ಅಡ್ಡಾಗುತ್ತೇನೆ” ಎಂದು ತಮ್ಮ ಕೋಣೆಗೆ ಹೋದರು.

”ಹಾ ಇಲ್ಲಿ ಸುಬ್ಬಣ್ಣನ ಜೊತೆಗೆ ಮಗ ಒಂದಾಗಿ ಆ ಮನೆಯಲ್ಲಿ ಶಂಕರಪ್ಪ ಜವಾಬ್ದಾರಿಯ ನೊಗ ಹೊತ್ತಮೇಲೆ ನೀವಿಬ್ಬರು ಗೆಳೆಯರು ಬಹಳಾ ಸೋಂಬೇರಿಗಳಾಗಿಬಿಟ್ಟಿರಿ” ಎಂದರು ಗೌರಮ್ಮ.

”ಹೂ ಹಾಗೇ ಅಂದುಕೋ, ಮೊದಲೆಲ್ಲ ಮಾಡಿ ಮುಗಿಸಿದ್ದೇವಲ್ಲ, ಈಗೆಲ್ಲ ಅವರದ್ದೇ ತಾನೇ. ಏನಾದರೂ ನಮ್ಮನ್ನು ಸಲಹೆ ಕೇಳಿದರೆ ಹೇಳುವುದಷ್ಟೇನಮ್ಮ ಕೆಲಸ. ನೀನೂ ಸ್ವಲ್ಪ ಹೊತ್ತು ಮಲಗು” ಎಂದರು ಗಂಗಾಧರಪ್ಪ.

”ಮಲಗಬಹುದಿತ್ತು ಆದರೆ ನಾನು ನಿಮ್ಮಷ್ಟು ಪುಣ್ಯವಂತಳಲ್ಲ. ಮಧ್ಯಾನ್ಹ ಮಲಗಿದರೆ ರಾತ್ರಿ ನನಗೆ ನಿದ್ರೆ ಬರುವುದಿಲ್ಲ. ಆದರೆ ಇವತ್ತು ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕಾಗಿದೆ” ಎನ್ನುತ್ತಾ ಪತಿಯ ಹಿಂದೆಯೇ ಬಂದರು.

”ಮಾತನಾಡುವುದಿದೆಯಾ? ಚುಟುಕಾದರೆ ಸರಿ, ತುಂಬ ಉದ್ದವಾದರೆ ರಾತ್ರಿ ಆಗಬಹುದೇ?” ಎಂದರು.
”ಓ..ನಾನೇನು ಭಾಷಣ ಬಿಗೀತೀನ, ಒಂದೆರಡು ವಿಷಯ ಅಷ್ಟೇ ಕೇಳಿ. ನಿಮ್ಮ ಗುರುಗಳು ಕುಕ್ಕೇ ಸುಬ್ರಮಣ್ಯಕ್ಕೆ ಹೋಗಿ ಬರಬೇಕೆಂದು ಹೇಳಿದ ಮಾತೇ ನನ್ನ ತಲೆಯಲ್ಲಿ ಕೊರೆಯುತ್ತಿದೆ. ಅದ್ಯಾಕೆ ಅವರು ಲಗ್ನಕ್ಕೆ ಮೊದಲೇ ಹೋಗಿಬಂದರೆ ಒಳ್ಳೆಯದೆಂದು ಒತ್ತಿ‌ ಒತ್ತಿ ಹೇಳಿದರು?” ಎಂದು ಕೇಳಿದರು ಗೌರಮ್ಮ.

ಹೆಂಡತಿಯ ಮಾತನ್ನು ಕೇಳಿ ಬಸಮ್ಮನಷ್ಟು ತಿಳಿವಳಿಕೆ ಹೊಂದಿರದ ಈಕೆ ಹೆದರಿದ್ದಾಳೆ ಎನ್ನಿಸಿತು. ಅದನ್ನು ಹೊರಗೆ ತೋರ್ಪಡಿಸಿಕೊಳ್ಳದೆ ಗಂಗಾಧರಪ್ಪ ತಾವು ಧರಿಸಿದ್ದ ಮೇಲಂಗಿಯನ್ನು ಕಳಚಿ ಗೂಟಕ್ಕೆ ಸಿಕ್ಕಿಸಿದರು. ಹಾಗೇ ಮಂಚದ ಮೇಲೆ ಕುಳಿತಿದ್ದ ಪತ್ನಿಗೆದುರಾಗಿ ಕುಳಿತು ”ಅದಕ್ಯಾಕೆ ಅಷ್ಟೊಂದು ಆತಂಕಪಡುತ್ತಿದ್ದಿ ಗೌರಾ, ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲಾ ಒಂದು ದೋಷವಿದ್ದೇ ಇರುತ್ತದೆ. ನಂಬಿಕೆ ವಿಶ್ವಾಸಗಳಿಂದ ಅವನ್ನು ಬಗೆಹರಿಸಿಕೊಳ್ಳಲು ದೈವದ ಮೊರೆ ಹೋಗುತ್ತೇವೆ. ಮಾರ್ಗಗಳು ಬೇಕಷ್ಟೇ. ಗುರುಗಳು ಹೇಳಿರುವುದೂ ಹಾಗೆಯೇ. ಕುಕ್ಕೇ ಸುಬ್ರಮಣ್ಯ ದೇವಸ್ಥಾನಕ್ಕೆ ಸುಮಾರು ಐದುಸಾವಿರ ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರಪುತ್ರ ಷಣ್ಮುಖ ದೇವರನ್ನು ನಾಗರೂಪದಲ್ಲಿ ಸುಬ್ರಮಣ್ಯ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ನಾಗಾರಾಧನೆಯೇ ಇಲ್ಲಿ ಮುಖ್ಯ. ನಾಗದೋಷಗಳ ಪರಿಹಾರದ ಸ್ಥಳವೆಂದು ಇದನ್ನು ನಂಬಲಾಗಿದೆ. ದೇಶದ ಮೂಲೆಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರೆ ಪೂಜಾದಿಗಳನ್ನು ಸಲ್ಲಿಸಲು ಜಾತಿಭೇದವಿಲ್ಲದೆ ಜನರು ಬರುತ್ತಾರೆ. ಮಹೇಶನ ಜಾತಕದಲ್ಲಿ ಸರ್ಪದೋಷವಿದೆ ಎಂದು ಕಂಡಿರಬೇಕು. ಅದಕ್ಕೇ ಹೀಗೆ ಹೇಳಿದ್ದಾರೆ. ಹೋಗಿ ಬಂದರಾಯ್ತು. ಇಲ್ಲದ ಹುಳವನ್ನು ತಲೆಯಲ್ಲಿ ಬಿಟ್ಟುಕೊಂಡು ಆತಂಕ ಪಡಬೇಡ. ಇಲ್ಲವಾದರೆ ಅದೇ ಬೆಳೆದು ಹುತ್ತವಾಗಿಬಿಡುತ್ತದೆ. ಏನೂ ಆಗುವುದಿಲ್ಲ. ನಾವೆಷ್ಟೇ ಆಲೋಚಿಸಿದರೂ ಏನಾಗಬೇಕೋ ಅದೇ ಆಗುತ್ತದೆ. ಆದರೆ ಪ್ರಯತ್ನ ಮಾತ್ರ ನಮ್ಮದು, ಫಲಾಫಲ ದೇವರದ್ದು ತಿಳಿಯಿತಾ? ನಾನಿನ್ನು ಮಲಗಬಹುದಾ?” ಎಂದರು ಗಂಗಾಧರಪ್ಪ.

ಪತಿಯ ಗುಣ ತಿಳಿದಿದ್ದ ಗೌರಮ್ಮ ಇನ್ನು ಹೆಚ್ಚು ಕೆದಕಿದರೆ ಕಷ್ಟವೆಂದು ಅಲ್ಲಿಂದೆದ್ದು ಹೊರನಡೆದರು. ಹಾಗೆ ತನ್ನವರು ಹೇಳಿದಂತೆ ಎಲ್ಲದ್ದಕ್ಕೂ ಸೂತ್ರಧಾರ ಮೇಲಿದ್ದಾನೆ. ಇಲ್ಲದಿದ್ದರೆ ಎರಡು ಮೂರುವರ್ಷಗಳಿಂದ ಮನೆಯಲ್ಲಿ ಮಗನ ಮದುವೆಗಾಗಿ ಪ್ರಯತ್ನಗಳು ನಡೆದಿತ್ತು. ಆಗುವುದಿದ್ದರೆ ಇಷ್ಟರಲ್ಲಿ ಆಗಿಹೋಗಬೇಕಿತ್ತು. ನೋಡಿದ ಹೆಣ್ಣುಗಳಿಗೆ ಲೆಕ್ಕವೇ ಇಲ್ಲ. ಯಾವುದೂ ಒಪ್ಪಿಗೆಯಾಗಲೇ ಇಲ್ಲ. ಜಾತಕಗಳು ಹೊಂದಿದರೂ ಯಾರು ಹಳ್ಳಿಗೆ ಬಂದಿರಲು ಸಿದ್ಧರಿಲ್ಲ. ಹುಡುಗಿಯರೇ ಆಗಲಿ, ಅವರಪೋಷಕರದ್ದೇ ನೂರೆಂಟು ತಕರಾರುಗಳು. ಕೊನೆಗೆ ಇಲ್ಲಿಯೇ ಪಕ್ಕದಲ್ಲಿ ಸಿಗುವಂತೆ ಬರೆದಿದ್ದಾನೆಂದ ಮೇಲೆ ಮುಂದಿನದೂ ಆತನ ಜವಾಬ್ದಾರಿಯೇ. ಇರುವನೊಬ್ಬ ಮಗ, ಅವರಲ್ಲಿಯೂ ಮಗಳೊಬ್ಬಳೇ, ಇಚ್ಛೆಪಟ್ಟು ತಂದುಕೊಳ್ಳಲು ಎರಡೂ ಮನೆಯವರು ಉತ್ಸುಕರಾಗಿದ್ದೇವೆ. ಅವರಿಬ್ಬರ ಬಾಳು ಬಂಗಾರವಾಗುವಂತೆ ಮಾಡು ಭಗವಂತಾ ಎಂದು ಆತನಿಗೆ ಮನದಲ್ಲೇ ಮನವಿ ಸಲ್ಲಿಸಿ ಹಿತ್ತಲ ಅಂಗಳದಲ್ಲಿ ಬಿಸಿಲಿಗೆ ಒಣಹಾಕಿದ್ದ ಮೆಣಸಿನಕಾಯನ್ನು ಗಮನಿಸಲು ಅತ್ತ ನಡೆದರು.

ಗಂಗಾಧರಪ್ಪನವರು ಹೆಂಡತಿಗೇನೋ ತನಗೆ ತಿಳಿದಂತೆ ಸಮಧಾನ ಹೇಳಿಕಳುಹಿಸಿದರು. ಆದರೆ ಅವರ ನಿದ್ರೆ ಹಾರಿಹೋಯಿತು. ಗುರುಗಳಿಗೆ ಫೋನ್ಮಾಡಿ ಮತ್ತೊಮ್ಮೆ ಇದರ ಬಗ್ಗೆ ಕೇಳಬೇಕೆಂದುಕೊಳ್ಳುತ್ತಿರುವಾಗಲೆ ಮೊಬೈಲ್ ಸದ್ದುಮಾಡಿತು. ಆ ಕಡೆ ಕಣ್ಣು ಹಾಯಿಸಿದಾಗ ಅದು ಗುರುಗಳಿಂದಲೇ ಎಂದು ಗೊತ್ತಾಗಿ ಆನಂದವಾಯಿತು. ತಡಮಾಡದೆ ತೆಗೆದು ಕಾಲ್‌ಗೆ ನಮಸ್ಕಾರದೊಂದಿಗೆ ಉತ್ತರಿಸಿದರು. ಅತ್ತಲಿಂದ ಪ್ರತಿವಂದನೆ ಬಂತು ”ಮಲಗಿದ್ದೆಯಾ?” ಎಂದು ಕೇಳಿದರು ಗುರುಗಳು.

”ಹಾ..ನಿದ್ರೆ ಮಾಡುತ್ತಿರಲಿಲ್ಲ, ಹಾಗೆ ಉರುಳಾಡುತ್ತಿದ್ದೆ” ಎಂದರು ಗಂಗಾಧರಪ್ಪ. ಅವರು ತಮ್ಮ ಮನೆಗೆ ಬಂದು ಹೋದನಂತರದ ವಿದ್ಯಮಾನಗಳನ್ನು ವರದಿಮಾಡಿದರು. ಜಾತಕದಲ್ಲಿ ಕಂಡಂತೆ ಪೂಜೆ ಮಾಡಿಸುವ ಬಗ್ಗೆ ತನ್ನಾಕೆಯ ಮನಸ್ಸಿನ ಶಂಕೆ, ಅದಕ್ಕೆ ಉತ್ತರ ಹೇಳಿದ್ದರೂ ತಮ್ಮ ಮನಸ್ಸಿನಲ್ಲಿ ಉಂಟಾದ ತಳಮಳ ಎಲ್ಲವನ್ನೂ ವಿವರಿಸಿ ಅವರಿಂದ ಬರುವ ಉತ್ತರಕ್ಕಾಗಿ ಕಾಯ್ದರು.

ಎಲ್ಲವನ್ನು ಸಾವಕಾಶವಾಗಿ ಆಲಿಸಿದ ಗುರು ಬಸವರಾಜಪ್ಪನವರು ”ಹಾ.. ಅದೇ ವಿಷಯವಾಗಿ ಮಾತನಾಡಬೇಕೆಂದು ನಿನಗೆ ಫೋನ್ ಮಾಡಿದೆ. ನೀಲಕಂಠಪ್ಪನಿಗೆ ಹೇಳೋಣವೆಂದುಕೊಂಡೆ. ಅವನು ಸ್ವಲ್ಪ ಅವಸರದವನು ನಿನ್ನಷ್ಟು ನಿಧಾನಸ್ಥನಲ್ಲ. ಮಿಗಿಲಾಗಿ ನಾಗದೋಶ ಕಂಡುಬಂದದ್ದು ನಿನ್ನ ಮಗನ ಜಾತಕದಲ್ಲಿ. ಹಾಗೆಂದು ಗಾಭರಿ ಪಡುವಂತಹದ್ದೇನೂ ಇಲ್ಲ. ಅದಕ್ಕೆ ತಕ್ಕಂತೆ ಪೂಜೆ ಮಾಡಿಸಿದರಾಯಿತು. ಮುಂದಿನವಾರ ಕುಕ್ಕೆ ಸುಬ್ರಮಣ್ಯಕ್ಷೇತ್ರಕ್ಕೆ ನಾನೇ ಹೋಗುತ್ತಿದ್ದೇನೆ. ಅಲ್ಲಿ ವಿಶೇಷ ಪೂಜೆಯಿದೆ. ಆ ಸಾಮೂಹಿಕ ಪೂಜೆಯಲ್ಲೇ ಸಂಕಲ್ಪ ಮಾಡಿಸಿ ಪೂಜೆ ಮಾಡಿಸಿದರೆ ಖರ್ಚುವೆಚ್ಚಗಳು ಭಾರವೆನ್ನಿಸುವುದಿಲ್ಲ. ಇಲ್ಲಾ ಪ್ರತ್ಯೇಕವಾದರೆ ಹಿಗ್ಗಾಮುಗ್ಗಾ ಪೀಕಿಸುತ್ತಾರೆ. ಸುಮ್ಮನೆ ಅಷ್ಟುದಿನ, ಇಷ್ಟುದಿನವೆಂದು ಎಳೆಯುತ್ತಾರೆ ಅಲ್ಲಿನ ಪುರೋಹಿತರು. ನನಗೆ ತುಂಬಾ ಬೇಕಾದವರು ನೀವುಗಳು. ಹೇಗೋ ಬಿಡುವು ಮಾಡಿಕೊಂಡು ಬರುತ್ತೇವೆಂದರೆ ನಾನು ಅಲ್ಲಿಗೆ ಬುಕ್ ಮಾಡಿಸಿಬಿಡುತ್ತೇನೆ. ನಾನು ಇರುವುದರಿಂದ ಪೂಜಾ ಪುನಸ್ಕಾರಗಳನ್ನು ಸಾಂಗವಾಗಿ ಮುಗಿಸಬಹುದು. ಅಲ್ಲದೆ ಜಗದೀಶಪ್ಪನ ಕುಟುಂಬವೇನೂ ಬರಬೇಕಿಲ್ಲ. ಸುಬ್ಬಣ್ಣನಿಗೂ ಬೇಡ. ನಿಮ್ಮವೆರಡು ಕುಟುಂಬಗಳೇ ಸಾಕು. ಹಾಗೇ ನೀವು ಮನೆದೇವರ ದರ್ಶನವನ್ನೂ ಮಾಡಿಕೊಂಡು ಬರಬಹುದು. ಪ್ರಯತ್ನ ನಮ್ಮದು, ಫಲಾಫಲ ಅವನಿಗೆ ಬಿಟ್ಟದ್ದು. ಇವತ್ತೇ ವಿಚಾರಿಸಿ ನನಗೆ ತಿಳಿಸು” ಎಂದು ಮರುತ್ತರಕ್ಕೆ ಕಾಯದೆ ಕಾಲ್ ಅಂತ್ಯಗೊಳಿಸಿದರು.

ಸ್ವಲ್ಪ ಹೊತ್ತಿನ ಹಿಂದೆ ಇದ್ದ ತಲ್ಲಣ ಗುರುಗಳ ಮಾತಿನಿಂದ ಶಮನವಾಯಿತು. ಸುಬ್ಬಣ್ಣ , ಅವನ ತಾಯಿ ಬರಬೇಕೆಂದೇನಿಲ್ಲ ಎಂಬ ಮಾತು ಗಂಗಾಧರಪ್ಪನಿಗೆ ಬಲ ಕೊಟ್ಟಿತು. ಆತ ಮನೆಯಲ್ಲಿದ್ದರೆ ಹತ್ತುಜನರಿದ್ದಂತೆ. ಮಂಗಳಾಳಂತೂ ಮನೆಯ ಉಸ್ತುವಾರಿಯಲ್ಲಿ ಎತ್ತಿದಕೈ. ಅ ಸಂಜೆಯೇ ಗುರುಗಳ ಸಂದೇಶವನ್ನು ಎಲ್ಲರಿಗೂ ಒಪ್ಪಿಸಿ ಹೋಗಿ ಬರುವುದೆಂದು ನಿರ್ಧರಿಸಿದರು. ಗುರುಗಳೇ ತಮ್ಮೊಡನೆ ಇದ್ದು ಪೂಜೆ ಮಾಡಿಸುತ್ತಾರೆಂದರೆ ತಲೆನೋವೇ ಇಲ್ಲ. ಹುಂ..ಈ ವಿಷಯವನ್ನು ಮೊದಲು ಪತ್ನಿ ಗೌರಮ್ಮನವರಿಗೆ ತಿಳಿಸಬೇಕೆಂದು ಎದ್ದು ಹೊರನಡೆದರು. ಸಂಜೆಗೆ ಎಲ್ಲರೂ ಕುಳಿತು ಸಮಾಲೋಚನೆ ಮಾಡಿದರು. ಸುಬ್ಬಣ್ಣ ಮತ್ತು ಮಂಗಳಕ್ಕ ಮನೆಯಲ್ಲಿ ಇರುತ್ತಾರೆಂದು ಕೇಳಿದ ಮಹೇಶ ಒಳ್ಳೆಯದೇ ಆಯಿತಂದುಕೊಂಡ. ಆದಷ್ಟು ಬೇಗ ಪೂಜೆ ಮುಗಿಸಿ ಹಿಂದಿರುಗಿದರೆ ಮುಂದಿನ ಕಾರ್ಯಗಳಿಗೆ ತಯಾರಿ ಮಾಡಿಕೊಳ್ಳಬಹುದು. ಹೋಗಿಬಂದುಬಿಡೋಣ ಎಂದು ತಾನೇ ಗುರುಗಳಿಗೆ ಫೋನ್ ಮಾಡಿ ತಿಳಿಸಿಬಿಟ್ಟನು. ಇಬ್ಬರ ಮನೆಯಲ್ಲು ಕಾರುಗಳಿದ್ದರೂ ಎಲ್ಲರೂ ಒಟ್ಟಿಗೇ ಒಂದೇ ವಾಹನದಲ್ಲಿ ಹೋಗುವುದೆಂದು ತೀರ್ಮಾನಿಸಿದರು. ಗುರುಗಳ ಜೊತೆಯಲ್ಲೇ ಒಂದೇ ವ್ಯಾನಿನಲ್ಲಿ ಪ್ರಯಾಣ ಬೆಳೆಸಿದರು.

ಹೀಗೆ ಹೊರಟವರು ಗುರುಗಳ ಆದೇಶದಂತೆ ಅವರ ಸಮ್ಮುಖದಲ್ಲಿಯೇ ಪೂಜೆ ಪುನಸ್ಕಾರಗಳೆಲ್ಲವೂ ಸಾಂಗವಾಗಿ ನೆರವೇರಿದವು. ಇದರಿಂದ ಎಲ್ಲರಿಗೂ ಸಮಾಧಾನ ತಂದಿತು. ಅದರಲ್ಲೂ ಹೆಚ್ಚಿನ ಸಂತಸಪಟ್ಟವರೆಂದರೆ ಗಂಗಾಧರಪ್ಪ ಮತ್ತು ಗೌರಮ್ಮನವರು. ಧರ್ಮಸ್ಥಳಕ್ಕೂ ಹೋಗಿ ಮಂಜುನಾಥನ ದರ್ಶನವನ್ನೂ ಪಡೆದರು. ಗುರುಗಳು ಹೊರನಾಡಿನಲ್ಲಿರುವ ತಮ್ಮ ಮಗನ ಮನೆಯಲ್ಲಿ ಉಳಿದರು. ನೀವು ನಿಶ್ಚಿತಾರ್ಥದ ದಿನಾಂಕವನ್ನು ನಿಗದಿಪಡಿಸಿ ಒಂದೆರಡು ದಿನ ಮುಂಚಿತವಾಗಿ ತಿಳಿಸಿ ನಾನು ಬರುತ್ತೇನೆಂದು ಹೇಳಿದರು. ಇದರಿಂದ ಹೋಗುವಾಗ ಇದ್ದ ಬಿಗುವಿನ ವಾತಾವರಣ ಹಿಂತಿರುಗುವಾಗ ಇರಲಿಲ್ಲ.

ಕ್ಷೇತ್ರದಲ್ಲಿ ಪೂಜಾ ವ್ಯವಸ್ಥೆ, ಅಚ್ಚುಕಟ್ಟಾಗಿದ್ದು ಇವುಗಳ ಬಗ್ಗೆ ಹಿರಿಯರಾದ ನೀಲಕಂಠಪ್ಪ , ಗಂಗಾಧರಪ್ಪನವರು ಬಾಯಿತುಂಬಾ ಹೊಗಳಿದರು. ಅದಕ್ಕೆ ಶಂಕರಪ್ಪನೂ ಧ್ವನಿ ಕೂಡಿಸಿದನು. ”ಮಂತ್ರಗಳೇನೋ ಕೇಳಲು ಚೆನ್ನಾಗಿದ್ದವು, ಆದರೆ ನಮ್ಮ ಅಪ್ಪರಾಣೆಗೂ ನಮಗೆ ಅರ್ಥವಾಗಲಿಲ್ಲ” ಎಂದರು ಮಹಿಳಾಮಣಿಗಳಾದ ಬಸಮ್ಮ , ಗೌರಮ್ಮ ಮತ್ತು ಶಾರದಾ.

”ಹೂ..ಅದಕ್ಕೇ ನಮ್ಮ ಬಸವಣ್ಣ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಬಳಕೆಗೆ ತಂದರು. ಅನುಭವದ ಆಣಿಮುತ್ತುಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನವೆಂದು ಕರೆದರು. ದೇವವಾಣಿಯನ್ನು ಜನವಾಣಿಯನ್ನಾಗಿಸಿದರು. ಹೆಚ್ಚಿಗೆ ಬೇಡ ಅವರು ಹೇಳಿರುವ ಒಂದೇ‌ಒಂದು ವಚನ ಬದುಕಿಗೆ ಸಪ್ತಸೂತ್ರಗಳನ್ನು ಒಳಗೊಂಡಿದೆ. ಅದನ್ನು ನಾವು ಅಳವಡಿಸಿಕೊಂಡರೆ ಸಾಕು” ಎಂದಳು ಮಾದೇವಿ.

”ಸರಿ ಕೂಸೇ ನೀನು ಹೇಳುವುದೆಲ್ಲವನ್ನು ನಾನೂ ಒಪ್ಪುತ್ತೇನೆ. ನನ್ನ ಉಪನ್ಯಾಸಗಳಲ್ಲೂ ಉದಾಹರಿಸಿ ವಿವರಿಸುತ್ತೇನೆ. ಆದರೆ ರೂಢಿಗೆ ತಕ್ಕಂತೆ ನಾವು ಬದಲಾಗುವುದು ಅನಿವಾರ್ಯವಾಗಿದೆ. ಅದಕ್ಕೇ ಇವೆಲ್ಲಾ” ಎಂದರು ನೀಲಕಂಠಪ್ಪ.

”ಆಯಿತು ದೇವಿ ನೀರಿಗಿಳಿದಾಗಿದೆ, ಛಳಿಯೇನು ಮಳೆಯೇನು ಹೇಗೋ ಈಸಬೇಕಷ್ಟೇ. ಅದನ್ನು ಪಕ್ಕಕ್ಕಿಡು, ಎಲ್ಲಿ ಒಂದೆರಡು ವಚನಗಳನ್ನಾಗಲೀ, ದಾಸರ ಪದಗಳನ್ನಾಗಲೀ ಹಾಗೇ ನುಡಿ” ಎಂದರು ಗೌರಮ್ಮನವರು.

”ಅದಕ್ಕೇನಂತೆ ಅತ್ತೇ, ಕೇಳಿ” ಎಂದು ಈಗತಾನೇ ಉದಾಹರಣೆಗೆ ಹೇಳಿದ ಬಸವಣ್ಣನವರ ಸಪ್ತಸೂತ್ರಗಳ ವಚನ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,’ ಅಕ್ಕಮಹಾದೇವಿಯ ‘ಬೆಟ್ಟದಾ ಮೇಲೊಂದು ಮನೆಯ ಮಾಡಿ’ ಎಂಬ ವಚನಗಳನ್ನು ಮತ್ತು ಕನಕದಾಸರ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಕೀರ್ತನೆಯನ್ನು ಸುಶ್ರಾವ್ಯವಾಗಿ ಹಾಡಿದಳು.

ನೇರನುಡಿ, ಸುಮಧುರವಾದ ಕಂಠಸಿರಿಗೆ ಮಾರುಹೋದ ಮಹೇಶ ಅವಳೆಡೆಗೆ ಮೆಚ್ಚುಗೆಯ ನೋಟ ಹರಿಸುತ್ತಾ ಪರವಾಗಿಲ್ಲ ನೀನು ಬರೀ ಮಾತುಗಾರಳೆಂದು ತಿಳಿದಿದ್ದೆ, ಹಾಡುಗಾರಳೆಂದು ಇವತ್ತೇ ಗೊತ್ತಾಗಿದ್ದು ಎಂದನು.

”ಹೂ..ಹೊಲಗದ್ದೆ, ತೋಟಗಳಿಗೆ ಎಡತಾಕುತ್ತಾ ಮಾತನಾಡಿದ್ದೂ ಮಾತನಾಡಿದ್ದೇ, ಮುಂದೆ ಬಾಳಸಂಗಾತಿಯಾಗಿ ಬರುತ್ತಾಳೆ. ಆಗ ನೋಡುವೆಯಂತೆ ನನ್ನ ಮಗಳ ತಿಳಿವಳಿಕೆಯನ್ನು” ಎಂದು ಹೊಗಳಿದರು ಶಂಕರಪ್ಪ.

ಹೀಗೇ ಒಬ್ಬರಿಗೊಬ್ಬರು ಮಾತನಾಡುತ್ತಾ ಅನುಭವಗಳನ್ನು ಹಂಚಿಕೊಳ್ಳುತ್ತಾ ಸುಖವಾಗಿ ಪ್ರಯಾಣಮಾಡಿ ತಮ್ಮೂರು ತಲುಪಿದರು. ಪ್ರಯಾಣ ಮಾಡಿ ಬಂದವರನ್ನು ಎದುರುಗೊಂಡ ಸುಬ್ಬು,ಮಂಗಳಾ ಅವರೆಲ್ಲರಿಗೂ ಊಟೋಪಚಾರ ಮಾಡಿ ಸೈ ಎನ್ನಿಸಿಕೊಂಡರು.
ಮಾರನೆಯ ದಿನ ಮನೆಯ ಮುಂದೆ ಮಾದೇವಿ ಒಬ್ಬಳೇ ಸಿಕ್ಕಾಗ ಮಹೇಶ ”ದೇವಿ, ನಿನಗೆ ಈ ಜಾತಕ, ಸಾಲಾವಳಿ, ಪೂಜೆ, ಆಚರಣೆಗಳಲ್ಲಿ ನಂಬಿಕೆಯಿಲ್ಲ ಎಂದು ನೆನ್ನೆಯ ಮಾತುಕತೆಗಳನ್ನು ಆಲಿಸಿದಾಗ ನನಗನ್ನಿಸಿತ್ತು” ಎಂದ.

”ಹಂಗೇನಿಲ್ಲ, ಅವೆಲ್ಲ ಅರ್ಥಹೀನವೆಂದು ಸಾರಾಸಗಟಾಗಿ ತಳ್ಳಿಹಾಕಲಾರೆ. ಇವನ್ನು ಕೇಳದಿದ್ದರೆ ಉತ್ತಮವೇನೋ ನನ್ನ ಭಾವನೆ. ಕೇಳಿದಾಗ ಏನಾದರೂ ದೋಷವೆಂದು ಪೂಜೆ, ಶಾಂತಿ. ಅದೂ‌ಇದೂ ಎಂದು ಹೇಳಿ ಅದನ್ನು ಮಾಡಲಿಲ್ಲವೆಂದಾಗ ಅದೇ ತಲೆಯಲ್ಲಿ ಉಳಿದು ಚಿಂತೆಯುಂಟಾಗುತ್ತದೆ. ಒಂದು ವಿಷಯ ಗೊತ್ತಾ ಮಹೀ, ಗುರುಗಳು ಮನಗೇ ಬಂದು ನಮ್ಮ ಜಾತಕಗಳನ್ನು ನೋಡುತ್ತಿರುವಾಗ ಸುಬ್ಬು ಮತ್ತು ಚಂದ್ರಿಕಳದ್ದು ಥಟ್ಟನೆ ಹೊಂದಿಕೆಯಾಗುತ್ತವೆಂದು ಹೇಳಿದರು. ನಮ್ಮಬ್ಬರದ್ದನ್ನು ಪರಿಶೀಲಿಸುತ್ತಾ ಲೆಕ್ಕ ಹಾಕಿದ್ದೂ ಹಾಕಿದ್ದೇ, ಸಾಕಷ್ಟು ಹೊತ್ತು ನೋಡಿ ಏನಾದರೂ ದೋಷವಿದೆಯೆಂದು ಹೇಳಿದಾಗ ಹಿರಿಯರು ಹಿಂತೆಗೆದಾಗ ಅದಕ್ಕೆಲ್ಲ ಪರಿಹಾರ ಕೇಳಿ ಮಾಡಿಸಿದರಾಯಿತು ಒಪ್ಪಿಕೊಳ್ಳಿ ಎಂದು ಒತ್ತಾಯ ಮಾಡಬೇಕೆಂದುಕೊಂಡೆ. ಏಕೆಂದರೆ ನನ್ನ ಅಂತರಂಗದ ಗೆಳೆಯ ನನ್ನ ಬಾಳಸಂಗಾತಿ ಆಗುತ್ತಿದ್ದಾರೆ ಎಂಬುದೇ ನನಗೆ ವಿವರಿಸಲಾಗದಷ್ಟು ಹಿಗ್ಗಿನ ವಿಷಯವಾಗಿತ್ತು. ಅದೂ ಸರಿ, ಈ ಬಗ್ಗೆ ನಿನ್ನ ಅಭಿಪ್ರಾಯ? ” ಎಂದು ಮರುಪ್ರಶ್ನೆ ಹಾಕಿದಳು ಮಾದೇವಿ.

”ಹೂ..ಗ್ರಹಗತಿಗಳ ಬಗ್ಗೆ ವೈಜ್ಞಾನಿಕ ತಳಹದಿಯೂ ಇದೆ. ನನಗೆ ಅದರ ಬಗ್ಗೆ ಅಲ್ಪಸ್ವಲ್ಪ ತಿಳಿದಿದೆ. ಪೂರಾ ತಳ್ಳಿಹಾಕಬಾರದೆನ್ನಿಸುತ್ತೆ. ನಿನ್ನನ್ನು ಕೇಳಬೇಕೆನ್ನಿಸಿತು ತಪ್ಪು ತಿಳಿಯಬೇಡ ದೇವಿ” ಎಂದ ಮಹೇಶ.

”ಅದರಲ್ಲೇನಿದೆ ಮಹೀ, ನಾವೆಲ್ಲರೂ ಮುಂದೆ ಒಂದೇ ಸೂರಿನಡಿಯಲ್ಲಿ ಬಾಳಬೇಕಾದವರು. ನಂನಮ್ಮ ಅನಿಸಿಕೆಗಳನ್ನು ಒಬ್ಬರಿಗೊಬ್ಬರು ಕೇಳಿ ತಿಳಿದುಕೊಂಡರೆ ಒಳ್ಳಿತಲ್ಲವೇ?” ಎಂದಳು ದೇವಿ.

ಹೀಗೆ ಇಬ್ಬರ ಮಾತುಕತೆಗಳು ನಡೆಯುತ್ತಾ ಇರುವಾಗಲೇ ಯಾರೋ ಬರುತ್ತಿರುವ ಸೂಚನೆ ಸಿಗುತ್ತಿದ್ದಂತೆ ದೇವಿ ಮನೆಯೊಳಕ್ಕೆ ನಡೆದಳು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40538

(ಮುಂದುವರಿಯುವುದು)
ಬಿ.ಆರ್.ನಾಗರತ್ನ, ಮೈಸೂರು

12 Responses

  1. ನಯನ ಬಜಕೂಡ್ಲು says:

    ಸೊಗಸಾಗಿ ಸಾಗುತ್ತಿದೆ ಕಥೆ

  2. Padma Anand says:

    ಈ ಕಂತು ಓದಿ ಮುಗಿಸಿದಾಗ ಭಕ್ತಿಭಾವದಿಂದ ಪೂಜೆ, ಯಾತ್ರೆ ಮುಗಿಸಿಕೊಂಡು ಬಂದ ಚಂದದ ಕುಟುಂಬಕ್ಕೆ ಎಲ್ಲಾ ಒಳ್ಳೆಯದೇ ಆಗಲಿ ಎಂದು ಓದುಗಳಾದ ನನ್ನ ಮನಸ್ಸೂ ಬಯಸಿತು.

  3. ಧನ್ಯವಾದಗಳು ನಯನಾ ಮೇಡಂ

  4. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  5. Hema Mala says:

    ಕಾದಂಬರಿಯ ಓಘ ಚೆನ್ನಾಗಿದೆ.
    ಧನ್ಯವಾದಗಳು

  6. ಶಂಕರಿ ಶರ್ಮ says:

    ನಾಗದೋಷ ಪರಿಹಾರಕ್ಕಾಗಿ ಕುಕ್ಕೆಸುಬ್ರಹ್ಮಣ್ಯ ದೇವರ ಸೇವೆ ಮಾಡಿ ಬಂದ ಕುಟುಂಬಗಳಿಗೆ ನೆಮ್ಮದಿ ನೀಡಿದಂತೆ; ಓದಿದ ನಮಗೂ ಖುಷಿ, ನೆಮ್ಮದಿ ನೀಡಿತು. ಕಥೆ ಸೊಗಸಾಗಿ ಸಾಗುತ್ತಿದೆ… ಧನ್ಯವಾದಗಳು ನಾಗರತ್ನ ಮೇಡಂ.

  7. Padmini Hegde says:

    ಕಾದಂಬರಿ ಅನುಭವ, ನಂಬಿಕೆಗಳನ್ನು ಪ್ರಸ್ತಾಪಿಸಿ ಅದಕ್ಕೆ ಪ್ರಸ್ತುತತೆಯ ಮಹತ್ವವನ್ನು ದೊರಕಿಸಿ ಕೊಟ್ಟಿದೆ

  8. ಧನ್ಯವಾದಗಳು ಗೆಳತಿ ಹೇಮಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: