ವಿಯೆಟ್ನಾಂ ಮತ್ತು ಕಾಂಬೋಡಿಯಾ ಪ್ರವಾಸದಲ್ಲಿ ಆದ ಫಜೀತಿ : ಹೆಜ್ಜೆ – 11

Share Button


ವಿಯೆಟ್ನಾಂ ಮತ್ತು ಕಾಂಬೋಡಿಯಾ ಪ್ರವಾಸ ಮುಗಿಸಿ ಮಲೇಷಿಯಾ ವಿಮಾನದಲ್ಲಿ ಭಾರತಕ್ಕೆ ಹಿಂತಿರುಗುವಾಗ ಪ್ರವಾಸದ ಸಮಯದಲ್ಲಿ ನಡೆದ ಫಜೀತಿಗಳು ಒಂದೊಂದಾಗಿ ಕಣ್ಣ ಮುಂದೆ ತೇಲಿ ಬಂದವು. ಈ ಅವಾಂತರಗಳನ್ನು ಕೇಳಿ ನಗುವುದೋ ಅಳುವುದೋ ನೀವೇ ಹೇಳಿ?

ಪ್ರಸಂಗ-1
ಗಿರಿಜಕ್ಕ ಮತ್ತು ಧರ್ಮಪ್ಪ ಭಾವನವರು – ಕೇಸರಿ ಟ್ರಾವಲ್ಸ್‌ನಲ್ಲಿ ವಿಯೆಟ್ನಾಂ, ಕಾಂಬೋಡಿಯಾ ಪ್ರವಾಸಕ್ಕೆ ಹೊರಟಿದ್ದೇವೆ, ಬರುತ್ತಿಯಾ ಎಂದಾಗ, ಆಯಿತು ಎಂದು ಒಂದೇ ಉಸಿರಿನಲ್ಲಿ ಹೇಳಿದ್ದೆ. ಮಾರನೆಯ ದಿನವೇ, ಅವರು ಹೇಳಿದ ಅಕೌಂಟ್‌ಗೆ ಮುಂಗಡ ಹಣವನ್ನು ಅಂದರೆ 60,000 ರೂಗಳನ್ನೂ ಕಳುಹಿಸಿದ್ದೆ. ಎರಡು ದಿನ ಕಳೆಯುವಷ್ಟರಲ್ಲಿ, ಟ್ರಾವೆಲ್ಸ್‌ನವರು ವೀಸಾ ಮಾಡಿಸಲು, ನಿಮ್ಮ ಪಾಸ್‌ಪೋರ್ಟ್‌ನ ಮೊದಲನೆಯ ಹಾಗೂ ಕೊನೆಯ ಪುಟದ ಫೋಟೋವನ್ನು ವಾಟ್ಸ್‌ಅಪ್‌ನಲ್ಲಿ ಕಳುಹಿಸಿ ಎಂದಾಗ ತಕ್ಷಣವೇ ಕಳುಹಿಸಿದೆ. ಇಲ್ಲಿಂದ ಶುರುವಾಯಿತು ನನಗೆ ಪೀಕಲಾಟ. ನಮ್ಮ ಪ್ರವಾಸ ಮಾರ್ಚಿ 13 ರಂದು ಆರಂಭವಾಗಲಿದ್ದುದರಿಂದ ನನ್ನ ಪಾಸ್‌ಪೋರ್ಟ್ ಮುಂದಿನ ಆರು ತಿಂಗಳು ಚಾಲ್ತಿಯಲ್ಲಿರಬೇಕಾಗಿತ್ತು. ಆದರೆ ನನ್ನ ಪಾಸ್‌ಪೋರ್ಟ್‌ನ ಅವಧಿ ಆಗಸ್ಟ್ ತಿಂಗಳಿನಲ್ಲಿಯೇ ಮುಗಿಯುತ್ತಿದ್ದುದರಿಂದ ತಕ್ಷಣವೇ ನವೀಕರಣ ಮಾಡಿಸಬೇಕಾಗಿತ್ತು. ಫೆಬ್ರವರಿ ಮೊದಲನೇ ವಾರದಲ್ಲಿ ನಾನು ನವೀಕರಿಸಿದ ಪಾಸ್‌ಪೋರ್ಟನ್ನು ಪ್ರವಾಸೀ ಸಂಸ್ಥೆಗೆ ಕಳುಹಿಸಿಕೊಡಬೇಕಾಗಿತ್ತು. ಬೆಂಗಳೂರಿನಲ್ಲಿ ತತ್ಕಾಲ್ ಅಡಿಯಲ್ಲಿ ಮಾಡಿಸಿ ಎಂದೂ ಸ್ನೇಹಿತರು ಸಲಹೆ ನೀಡಿದರು, ಮತ್ತೆ ಕೆಲವರು ಶಿವಮೊಗ್ಗಾದಲ್ಲಿ ಒಂದು ವಾರದಲ್ಲಿ ಪಾಸ್‌ಪೋರ್ಟ್ ನವೀಕರಣ ಮಾಡುತ್ತಾರೆ, ನೀವು ಮೂರನೆಯ ಬಾರಿ ನವೀಕರಣ ಮಾಡುತ್ತಿರುವುದರಿಂದ ಪೊಲೀಸ್ ಪರಿಶೀಲನೆಯ ಉಸಾಬರಿ ಇಲ್ಲ, ಸುಮ್ಮನೆ ಬೆಂಗಳೂರಿಗೆ ಯಾಕೆ ಹೋಗುತ್ತೀರಾ? ಎಂದು ಹೇಳಿದಾಗ ತಲೆಯಾಡಿಸಿದೆ. ಜನವರಿ ಹದಿನೈದರಂದು ಪಾಸ್‌ಪೊರ್ಟ್ ಸಿಬ್ಬಂದಿಯನ್ನು ಬೇಟಿ ಮಾಡುವ ಅವಕಾಶವೂ ದೊರೆಯಿತು. ಒಂದು ವಾರದಲ್ಲಿ ಪೊಲೀಸ್ ಪರಿಶೀಲನೆಗಾಗಿ ನನ್ನ ದಾಖಲೆಗಳೆಲ್ಲಾ ಬಂದಿತ್ತು, ತಕ್ಷಣವೇ ಪೊಲೀಸ್ ಠಾಣೆಗೆ ಹೋಗಿ ಅವರು ಕೇಳಿದ ಮಾಹಿತಿಯನ್ನು ನೀಡಿ ಮನೆಗೆ ಬಂದೆ. ಇನ್ನೇನು ಪಾಸ್‌ಪೋರ್ಟ್ ಬಂದ ಹಾಗೆ ಎಂಬ ಭ್ರಮೆಯಲ್ಲಿ ತೇಲಿದೆ. ಆದರೆ ಒಂದು ವಾರ ಕಳೆದರೂ ಪಾಸ್‌ಪೋರ್ಟ್‌ನ ಸುದ್ದಿಯಿಲ್ಲ. ನಾನು ಪಾಸ್‌ಪೋರ್ಟ್ ಕಳುಹಿಸದಿದ್ದಲ್ಲಿ ವೀಸಾ ಆಗುವುದಿಲ್ಲ, ವೀಸಾ ಇಲ್ಲದೆ ಹೊರದೇಶಕ್ಕೆ ಹೋಗುವುದಾದರು ಹೇಗೆ? ನಾನು ಪ್ರವಾಸೀ ಸಂಸ್ಥೆಗೆ ಮುಂಗಡ ಕಟ್ಟಿದ್ದ ಅರವತ್ತು ಸಾವಿರ ರೂಗಳು ಢಮಾರ್ ಆದ ಹಾಗೆ. ನನ್ನ ವಿದ್ಯಾರ್ಥಿಯಾಗಿದ್ದ ಪೊಲೀಸ್ ಆಫೀಸರ್‌ಗೆ ಫೋನಿನಲ್ಲಿ ವಿಷಯ ತಿಳಿಸಿದೆ. ಅವರು ಏನು ಮ್ಯಾಜಿಕ್ ಮಾಡಿದರೋ ಗೊತ್ತಿಲ್ಲ, ಎರಡೇ ದಿನದಲ್ಲಿ ಪಾಸ್‌ಪೋರ್ಟ್ ನನ್ನ ಕೈ ಸೇರಿತ್ತು. ಅಂತೂ ಫೆಬ್ರವರಿ ಎರಡರಂದು ನವೀಕರಸಿದ ಪಾಸ್‌ಪೋರ್ಟ್‌ನ ಪ್ರತಿಗಳನ್ನು ಪ್ರವಾಸಿ ಸಂಸ್ಥೆಯವರಿಗೆ ಕಳುಹಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಒಂದು ವಾರದಲ್ಲಿ ಆಗದಿದ್ದ ಕೆಲಸ ಎರಡೇ ಗಂಟೆಗಳಲ್ಲಿ ಆಗಿತ್ತು, ಮುಂದಿನ ಜನ್ಮದಲ್ಲೂ ಶಿಕ್ಷಕಿಯೇ ಆಗಬೇಕೆಂಬ ಹಂಬಲ ಗರಿಗೆದರಿತ್ತು.

ಪ್ರಸಂಗ-2
ಪ್ರವಾಸೀ ಸಂಸ್ಥೆಯವರಿಂದ ಪ್ರವಾಸದ ವೇಳಾಪಟ್ಟಿ, ವಿಮಾನದ ಟಿಕೆಟ್‌ಗಳೂ ವಾಟ್ಸ್‌ಅಪ್ ಅಂಚೆಯ ಮೂಲಕ ಬಂದು ತಲುಪಿದೆವು. ಮಾರ್ಚ್ 13, ಬುಧವಾರ 00.05 A.M ಗೆ ಸರಿಯಾಗಿ ಬೆಂಗಳೂರಿನಿಂದ ಕೌಲಾಲಂಪರ್‌ಗೆ ವಿಮಾನ ಹೊರಡಲಿತ್ತು. ಶಿವಮೊಗ್ಗಾ ನಿವಾಸಿಯಾಗಿದ್ದ ನಾನು ಬುಧವಾರ ಮುಂಜಾನೆ ಏಳು ಗಂಟೆಯ ರೈಲಿಗೆ ರಿಸರ್ವ್ ಮಾಡಿಸಿದೆ. ನನ್ನ ಜೊತೆ ಹೊರಟಿದ್ದ ಪುಷ್ಪ ಮೇಡಂಗೆ ಈ ವಿಷಯ ತಿಳಿಸಿದಾಗ, ಅವರು ವಿಮಾನ ಹೊರಡಲಿರುವುದು ಮಂಗಳವಾರ ರಾತ್ರಿ, ಬುಧವಾರ ಅಲ್ಲ ಎಂದು ಖಚಿತ ಪಡಿಸಿದರು. ನೀವು ಏನೇ ಹೇಳಿ, ನಮ್ಮ ಕ್ಯಾಲೆಂಡರ್ ಸರಿ ಎಂದೆನಿಸಿತ್ತು. ನಮಗೆ ಸೂರ್ಯೋದಯವಾದ ಮೇಲೆಯೇ ದಿನದ ಆರಂಭ, ಪಾಶ್ಚಿಮಾತ್ಯರಿಗಾದರೋ ನಡುರಾತ್ರಿ ಹನ್ನೆರೆಡು ಗಂಟೆಯಿಂದಲೇ ದಿನದ ಆರಂಭ. ಅಂತೂ ಗೆಳತಿಗೆ ಫೋನ್ ಮಾಡಿದ್ದರಿಂದ ನಾನು ಬಚಾವ್ ಆದೆ, ಇಲ್ಲವಾದರೆ ಒಂದು ದಿನ ತಡವಾಗಿ ಹೋಗಿ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಬರಬೇಕಾಗಿತ್ತು.

ಪ್ರಸಂಗ-3
ಉತ್ತರ ವಿಯೆಟ್ನಾಮನ್ನು ತಲುಪಿದವರು, ಅಲ್ಲಿನ ಇಮ್ಮಿಗ್ರೇಷನ್ ಕ್ಯೂ ನಲ್ಲಿ ನಿಂತು ನಮ್ಮ ನಮ್ಮ ಪಾಸ್‌ಪೋರ್ಟ್ ಹಾಗೂ ವೀಸಾ ತಪಾಸಣೆಯಾದ ಬಳಿಕ ಹೊರ ಬಂದೆವು. ಆದರೆ ಎಷ್ಟು ಹೊತ್ತಾದರೂ ಗಿರಿಜಕ್ಕ ಮತ್ತು ಧರ್ಮಪ್ಪ ಭಾವನವರು ಹೊರಗೆ ಬರಲೇ ಇಲ್ಲ. ಹೊರ ಬಂದ ನಾವು ಹಿಂತಿರುಗಿ ಹೋಗುವಂತೆಯೂ ಇಲ್ಲ. ನಮ್ಮ ಗೈಡ್ ಎಲ್ಲಾ ಪ್ರವಾಸಿಗರನ್ನೂ ಒಟ್ಟುಗೂಡಿಸಿ ಹೊಟೇಲಿಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದ. ನಾನು ನಮ್ಮ ಗೈಡ್‌ಗೆ ಸುದ್ದಿ ಮುಟ್ಟಿಸಿದೆ, ಅವನು ತಕ್ಷಣ ಅವರ ಬಳಿಗೆ ಹೋಗಿ ಅವರ ದಾಖಲೆಗಳನ್ನು ಸರಿಪಡಿಸಿ, ಅವರನ್ನು ಕರೆ ತಂದ. ಪ್ರವಾಸೀ ಸಂಸ್ಥೆಯವರು ನೀಡಿದ್ದ ವಿಯೆಟ್ನಾಮಿನ ಇ-ವೀಸಾದಲ್ಲಿ ಗಿರಿಜಕ್ಕನ ಪಾಸ್‌ಪೋರ್ಟ್ ಸಂಖ್ಯೆ ತಪ್ಪಾಗಿ ನಮೂದಿಸಲಾಗಿತ್ತು. ಮುಂಬೈನ ಆಫೀಸಿಗೆ ಫೋನ್ ಮಾಡಿ ಇ-ವೀಸಾವನ್ನು ಸರಿಪಡಿಸಲು ಸುಮಾರು ಅರ್ಧ ತಾಸು ಕಾಯಬೇಕಾಗಿತ್ತು. ಎಲ್ಲರಿಗೂ ಸಾಕಷ್ಟು ದಣಿವಾಗಿತ್ತು. ಹಾಗಾಗಿ, ಅಲ್ಲಿಂದ ನೇರವಾಗಿ ನಮ್ಮನ್ನು ಭಾರತೀಯ ಹೋಟೆಲ್ಲಿಗೆ ಕರೆದೊಯ್ದರು. ಯಾರಿಗೂ ಕ್ಯೂ ನಿಲ್ಲುವ ತಾಳ್ಮೆಯೂ ಉಳಿದಿರಲಿಲ್ಲ, ಬೇಗ ಬೇಗ ಚಪಾತಿ ಪಲ್ಯ ಬಡಿಸಿಕೊಂಡು ಬಂದು ಊಟ ಮಾಡಲು ಕುಳಿತೆವು. ಆದರೆ ನಮ್ಮ ಜೊತೆಯಿದ್ದ ಹೈದರಾಬಾದ್ ದಂಪತಿಗಳು ಮಾತ್ರ ಮೂಲೆಯಲ್ಲಿ ಸುಮ್ಮನೇ ಕುಳಿತಿದ್ದರು, ಕಾರಣ ಕೇಳಿದಾಗ, ಅವರು ಜೈನ್ ಆಹಾರವನ್ನು ಮಾತ್ರ ಸೇವಿಸುವುದರಿಂದ, ಈರುಳ್ಳಿ ಬೆಳ್ಳುಳ್ಳಿ ಹಾಕಿದ ಊಟವನ್ನು ಮಾಡುವುದಿಲ್ಲವೆಂದರು. ಅಷ್ಟರಲ್ಲಿ ಅಲ್ಲಿಗೆ ಬಂದ ಹೋಟೆಲ್ಲಿನ ಮ್ಯಾನೇಜರ್ ಅವರ ಬಳಿ ಕ್ಷಮಾಪಣೆ ಕೇಳಿ, ಅರ್ಧಗಂಟೆಯಲ್ಲಿ ಅನ್ನ ತೊವ್ವೆ, ಮೊಸರು ತಂದು ಅವರಿಗೆ ಬಡಿಸಿದ. ನಾವು ಕನ್ನಡ ಮಾತಾಡುತ್ತಿದ್ದುದನ್ನು ಕೇಳಿ ನಮ್ಮ ಬಳಿ ಬಂದು – ನೀವು ಕರ್ನಾಟಕದವರಾ ಎಂದು ವಿಚಾರಿಸಿದರು. ಅವರ ಹೆಸರು ಹರಿಕುಮಾರ್, ಭದ್ರಾವತಿಯವರು. ನಾನು ಶಿವಮೊಗ್ಗಾದವಳಾದ್ದರಿಂದ ಅವರ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಂಡೆ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆಲಸದ ನಿಮಿತ್ತ ವಿಯೆಟ್ನಾಮಿಗೆ ಬಂದರಂತೆ. ವಿಯೆಟ್ನಾಮಿ ಬೆಡಗಿಯನ್ನು ಕಂಡು ಮನಸೋತವರು, ಅವಳನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದಾರೆ. ಜೀವನ ನಿರ್ವಹಣೆಗಾಗಿ ಹೋಟೆಲ್ ಉದ್ದಿಮೆಯನ್ನು ಆರಂಭಿಸಿದ್ದಾರೆ. ಆ ಊರಿನಲ್ಲಿ ಎರಡು ರೆಸ್ಟೋರಾಂಟ್‌ಗಳನ್ನು ನಡೆಸುತ್ತಿದ್ದಾರೆ. ಅವರ ಮಡದಿ ಸ್ವಲ್ಪ ಸ್ವಲ್ಪ ಹಿಂದೀ ಭಾಷೆಯನ್ನೂ ಕಲಿತಿದ್ದಾಳೆ. ಗಲ್ಲಾ ಪೆಟ್ಟಿಗೆ ಬಳಿಯಿದ್ದ ಗಣಪತಿಯ ಫೋಟೋ ಮತ್ತು ಹೊರನಾಡಿನ ಅನ್ನಪೂರ್ಣೇಶ್ವರಿಯ ಫೋಟೋಗೆ ಹೂ ಮುಡಿಸಿ, ದೀಪ ಬೆಳಗುತ್ತಿದ್ದ ಅವರ ಪತ್ನಿಯನ್ನು ಕಂಡು ಮನದಲ್ಲಿ ಮೆಚ್ಚುಗೆಯ ಭಾವ ಮೂಡಿತ್ತು.

ಪ್ರಸಂಗ-4
ವಿಯೆಟ್ನಾಮಿನ ಉತ್ತರ ಭಾಗದ ಪ್ರವಾಸೀ ತಾಣಗಳಿಗೆ ಭೇಟಿ ನೀಡಿದವರು, ಕಾಂಬೋಡಿಯಾಕ್ಕೆ ಹೊರಟು ನಿಂತೆವು. ನಾನು ಎಲ್ಲರಿಗಿಂತ ಮುಂಚಿತವಾಗಿಯೇ ಲಗೇಜ್ ಕೆಳಗಿಳಿಸಿ, ಅವರು ನೀಡಿದ್ದ ಕಾರ್ಡ್‌ನಂತಹ ರೂಮ್ ಕೀಯನ್ನು ಹೊಟೇಲಿನವರಿಗೆ ಹಸ್ತಾಂತರಿಸಿ ನಮ್ಮ ವಾಹನದಲ್ಲಿ ಹೋಗಿ ಕುಳಿತೆ. ನನ್ನ ಸಹಪ್ರಯಾಣಿಕರೆಲ್ಲಾ ಒಬ್ಬೊಬ್ಬರಾಗಿ ಬರತೊಡಗಿದರು. ಇನ್ನೇನು ಬಸ್ ಹೊರಡಬೇಕು, ಅಷ್ಟರಲ್ಲಿ ಕೊಠಡಿ ಸಂಖ್ಯೆ 304 ರಲ್ಲಿ ಇದ್ದವರನ್ನು ರಿಸೆಪ್ಷನ್‌ನಲ್ಲಿ ಕರೀತಾ ಇದ್ದಾರೆ ಎಂಬ ಕೂಗು ಕೇಳಿ ಬಂತು. ನಾನು ಗಡಿಬಿಡಿಯಿಂದ ಬಸ್‌ನಿಂದ ಕೆಳಗಿಳಿದು ಹೊರಟೆ. ಅವರು, ‘ನೀವು ಉಪಯೋಗಿಸಿದ ತಲೆದಿಂಬಿನ ಕವರ್ ಮೇಲೆ ಹೇರ್ ಡೈನ ಕಪ್ಪು ಕಲೆಗಳಾಗಿವೆ. ಆ ಕಲೆ ಹೋಗುವುದಿಲ್ಲ. ಹಾಗಾಗಿ ನೀವು ಆರು ಡಾಲರ್ ದಂಡ ತೆರಬೇಕಾಗುವುದು’, ಎಂದು. ತನ್ನ ಮೊಬೈಲಿನಲ್ಲಿ ಆ ಕಲೆಗಳ ಫೋಟೋ ತೋರಿಸಿದ. ಕಲೆಯೇನೂ ಅಷ್ಟು ಎದ್ದು ಕಾಣುತ್ತಿರಲಿಲ್ಲ, ಮಸುಕು ಮಸುಕಾಗಿತ್ತು. ನಾನು ಕಕ್ಕಾಬಿಕ್ಕಿಯಾಗಿ ಮ್ಯಾನೇಜರ್ ಮುಖ ನೋಡಿದೆ. ಅವನು ಅಲ್ಲಿಂದ ಬೇಗನೆ ಹೊರಡುವ ತರಾತುರಿಯಲ್ಲಿದ್ದ, ನಮ್ಮ ಮುಂದಿನ ವಿಮಾನ ಇನ್ನೆರೆಡು ಗಂಟೆಗಳಲ್ಲಿ ಹೊರಡುವುದಿತ್ತು. ಬಸ್‌ನಲ್ಲಿ ಕುಳಿತಿದ್ದ 34 ಪ್ರಯಾಣಿಕರು ನಮ್ಮನ್ನು ಕಾಯುತ್ತಿದ್ದರು. ನಾನು ಚರ್ಚೆ ಮಾಡುತ್ತಾ ಕುಳಿತರೆ, ನಮ್ಮ ಪ್ಲೈಟ್ ಮಿಸ್ ಆಗಬಹುದು ಅಥವಾ ಅವನು ನನ್ನನ್ನು ಬಿಟ್ಟು ಹೋಗಬಹುದು. ನಾನು ಯಾವ ಮಾತನ್ನೂ ಆಡದೇ ಆರು ಡಾಲರ್ ದಂಡವನ್ನು ತೆತ್ತು (ಸುಮಾರು ಐನೂರು ರೂಗಳು) ಬಸ್‌ನಲ್ಲಿ ಬಂದು ಕುಳಿತೆ. ಕಾಲಾಯ ತಸ್ಮೈ ನಮಃ !


ಪ್ರಸಂಗ-5
ವಿಯೆಟ್ನಾಮಿನಲ್ಲಿ ಹೆಜ್ಜೆಯಿಟ್ಟ ಕ್ಷಣದಿಂದ ನಮ್ಮ ಗೈಡ್ ಅಲ್ಲಿರುವ ಕಳ್ಳಕಾಕರ ಬಗ್ಗೆ ಎಲ್ಲರನ್ನೂ ಎಚ್ಚರಿಸುತ್ತಲೇ ಇದ್ದ. ‘ನಿಮ್ಮ ಬ್ಯಾಗ್‌ಪ್ಯಾಕ್‌ಗಳನ್ನು ಬೆನ್ನಿಗೆ ಹಾಕದೇ ಮುಂದೆ ಹಾಕಿಕೊಳ್ಳಿ, ಪಾಸ್‌ಪೋರ್ಟ್‌ಗಳನ್ನು ನಿಮ್ಮ ಹೊಟೇಲಿನ ಕೊಠಡಿಗಳಲ್ಲಿರುವ ಲಾಕರ್‌ಗಳಲ್ಲಿ ಭದ್ರವಾಗಿಡಿ ಇತ್ಯಾದಿ. ನಾವೆಲ್ಲರೂ ಪಾಸ್‌ಪೋರ್ಟ್‌ಗಳನ್ನು ಲಾಕರ್‌ಗಳಲ್ಲಿ ಜೋಪಾನವಾಗಿಟ್ಟು ಎಲ್ಲಾ ಕಡೆ ಸುತ್ತಾಡಿದೆವು. ನಾವು ಅಲ್ಲಿಂದ ಹೊರಡುವ ದಿನ ಬಂತು. ಮತ್ತೆ ಸೂಟ್‌ಕೇಸುಗಳಲ್ಲಿ ಬಟ್ಟೆ ಬರೆ ತುಂಬಿಸಿ ಹೊರಟೆವು. ಬೆಂಗಳೂರಿನಿಂದ ಬಂದಿದ್ದ ಗೆಳತಿ ಶ್ರೀಲಕ್ಷ್ಮಿ ಲಾಕರ್‌ನಲ್ಲಿಟ್ಟಿದ್ದ ಪಾಸ್‌ಪೋರ್ಟ್ ಮರೆತು ಬಂದಿದ್ದಳು. ಎಲ್ಲರೂ ಬಸ್‌ನಲ್ಲಿ ಕುಳಿತಮೇಲೆ ಆಪದ್ಭಾಂಧವನಂತೆ ಬಂದ ಗೈಡ್, ‘ನಿಮ್ಮ ಪಾಸ್‌ಪೋರ್ಟ್ ಇದೆಯಾ, ಒಮ್ಮೆ ಚೆಕ್ ಮಾಡಿ’ ಎಂದಾಗ, ಲಾಕರ್‌ನಲ್ಲಿಟ್ಟಿದ್ದ ಪಾಸ್‌ಪೋರ್ಟ್‌ನ್ನು ಮರೆತು ಬಂದಿದ್ದ ಶ್ರೀಲಕ್ಷ್ಮಿ ದಂಪತಿಗಳು ಗಡಿಬಿಡಿಯಿಂದ ಹೋದವರು ಲಾಕರ್ ತೆಗೆಯಲು ಯತ್ನಿಸಿದರು, ಆದರೆ ಅದು ತೆರೆಯಲೇ ಇಲ್ಲ, ಕಾರಣ ಅವರು ತಮ್ಮ ಕೋಡ್ ಸಂಖ್ಯೆಯನ್ನು ಮರೆತೇ ಬಿಟ್ಟಿದ್ದರು. ‘ಖುಲ್ ಜಾ ಸಿಮ್ ಸಿಮ್’ ಎಂದುಸುರಿದ ಮಾಂತ್ರಿಕನೊಬ್ಬ ಲಾಕರ್ ಅನ್ನು ತೆಗೆಯುವವರೆಗೆ ಗಂಡ ಹೆಂಡತಿ ತಮ್ಮ ಜಗಳ ಮುಂದುವರೆಸಿದ್ದರು. ಹೋಟೆಲಿನ ಸಿಬ್ಬಂದಿಯೊಬ್ಬ ಬಂದು ತನ್ನ ಮಾಸ್ಟರ್ ಕೀಯಿಂದ ಲಾಕರ್ ಓಪನ್ ಮಾಡಿದ್ದ.

ಪ್ರಸಂಗ-6
ರೆಡ್ ರಿವರ್ ಡೆಲ್ಟಾ ಕ್ರೂಸ್‌ನಲ್ಲಿ ಪಯಣಿಸುವಾಗ ಅಲ್ಲೊಂದು ತೇಲುವ ಮಾರ್ಕೆಟ್‌ನಲ್ಲಿ ಮೊಸಳೆಗಳ ನರ್ಸರಿಯಿತ್ತು. ನಾವು ಆ ಪುಟ್ಟ ಪುಟ್ಟ ಮೊಸಳೆ ಮರಿಗಳನ್ನು ಅಚ್ಚರಿಯಿಂದ ನೋಡಿ ಹಿಂತಿರುಗುವಾಗ ಅಲ್ಲಿನ ಅಂಗಡಿಯೊಂದರಲ್ಲಿ ಮೊಸಳೆ ಚರ್ಮದ ಬೆಲ್ಟ್ ಇತ್ತು. ಕೇರಳದಿಂದ ಬಂದಿದ್ದ ಸಹಪ್ರಯಾಣಿಕನು ಆ ಬೆಲ್ಟ್ ಕೊಂಡಾಗ, ಜೊತೆಗಿದ್ದವರು, ‘ಇದು ನಿಷೇಧಿತ ವಸ್ತುವಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ದಂಡ ವಿಧಿಸಬಹುದು’ ಎಂದು ಎಚ್ಚರಿಕೆ ನೀಡಿದರೂ ಆತ ಅವರ ಮಾತುಗಳನ್ನು ಅಲಕ್ಷಿಸಿದ. ನಾವು ಕಾಂಬೋಡಿಯಾದಿಂದ ದಕ್ಷಿಣ ವಿಯೆಟ್ನಾಮಿಗೆ ಹೋಗಲು, ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಸರತಿ ಸಾಲಿನಲ್ಲಿ ನಿಂತಿರುವಾಗ ಅವರ ಹೆಸರನ್ನು ಧ್ವನಿವರ್ಧಕದ ಮೂಲಕ ಕರೆಯಲಾಗಿತ್ತು. ಅವರ ಚೆಕ್‌ಇನ್ ಸೂಟ್‌ಕೇಸಿನಲ್ಲಿದ್ದ ಮೊಸಳೆಯ ಬೆಲ್ಟನ್ನು ವಶಪಡಿಸಿಕೊಂಡ ವಿಮಾನ ನಿಲ್ದಾಣದ ಸಿಬ್ಬಂದಿ, ಅವರಿಗೆ ಸಾಕಷ್ಟು ದಂಡವನ್ನೂ ವಿಧಿಸಿದರು.

ಪ್ರಸಂಗ-7
ಕಾಂಬೋಡಿಯಾದಿಂದ ದಕ್ಷಿಣ ವಿಯೆಟ್ನಾಮಿಗೆ ವಿಮಾನದಲ್ಲಿ ಬಂದಿಳಿದೆವು. ನಮ್ಮ ನಮ್ಮ ಲಗೇಜನ್ನು ಟ್ರಾಲಿಗಳಲ್ಲಿ ತುಂಬಿಸಿ ನಮ್ಮ ಗೈಡ್ ಹೇಳಿದ್ದ ಸ್ಥಳದಲ್ಲಿ ಕಾಯುತ್ತಾ ನಿಂತೆವು. ಕೆಲವರು ಶೌಚಾಲಯಕ್ಕೆ ಹೋಗಿ ಬಂದರು. ಎಲ್ಲರೂ ಬಂದಮೇಲೆ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ನಿರ್ಮಲಕ್ಕನ ಸುಳಿವಿಲ್ಲ, ನಾನು ಶೌಚಾಲಯದ ಬಳಿ ನಿಂತು, ‘ನಿರ್ಮಲಕ್ಕ, ನಿರ್ಮಲಕ್ಕ’ ಎಂದು ಎರಡು ಮೂರು ಬಾರಿ ಕೂಗಿದೆ, ಯಾವುದೇ ಉತ್ತರವಿಲ್ಲ. ವಿಮಾನ ನಿಲ್ದಾಣದಲ್ಲಿ ಎಲ್ಲಿ ಹುಡುಕಿದರೂ ಅವಳ ಪತ್ತೆಯಿಲ್ಲ. ಕುಮಾರ್ ಭಾವನವರು ಕಂಗಾಲಾಗಿದ್ದರು, ಅವರ ಮುಖದಲ್ಲಿ ಗಾಬರಿ ಎದ್ದು ಕಾಣುತ್ತಿತ್ತು, ಕಣ್ಣಂಚಿನಲ್ಲಿ ಕಂಬನಿ ತುಳುಕುತ್ತಿತ್ತು. ಮೂರು ತಿಂಗಳ ಹಿಂದೆ ಹರ್ನಿಯಾ ಆಪರೇಷನ್ ಆಗಿದ್ದವಳು ಆಷ್ಟು ಲಗೇಜನ್ನು ಎಳೆಯುತ್ತಾ ಹೋಗಲು ಅಸಾಧ್ಯ ಎಂಬುದು ಅವರ ವಾದವಾಗಿತ್ತು. ಅವಳ ಮೈಮೇಲೆ ಸರ ಬಳೆಗಳ ರೂಪದಲ್ಲಿ ಸುಮಾರು 150 ಗ್ರಾಂ ಚಿನ್ನ ಬೇರೆ ಇತ್ತು. ಮೊಬೈಲಿಗೆ ಕರೆ ಮಾಡಲು ನಮ್ಮ ಬಳಿ ರೋಮಿಂಗ್ ಕರೆನ್ಸಿ ಇರಲಿಲ್ಲ. ಗಾಬರಿಯಲ್ಲಿ ವಿಮಾನ ನಿಲ್ದಾಣದ ವೈ ಫೈ ಡೌನ್‌ಲೋಡ್ ಮಾಡಿಕೊಳ್ಳೋದನ್ನೂ ಮರೆತಿದ್ದೆವು. ವಿಮಾನ ನಿಲ್ದಾಣದ ಹೊರಗೆ ಹೋದರೆ ಮತ್ತೆ ಒಳಗೆ ಪ್ರವೇಶಿಸುವಂತಿಲ್ಲ. ಆಗ ಗೈಡ್ ಒಂದು ಸಲಹೆ ನೀಡಿದ, ‘ನೀವು ವಿಮಾನ ನಿಲ್ದಾಣದ ವೈ ಫೈ ಡೌನ್ ಲೋಡ್ ಮಾಡಿಕೊಂಡು ಹೊರಗೆ ಹೋಗಿ. ಅಲ್ಲಿ ನಿರ್ಮಲಕ್ಕ ಇದ್ದರೆ, ನನಗೆ ತಕ್ಷಣ ವಾಟ್ಸ್‌ಅಪ್ ಮೆಸೇಜ್ ಮಾಡಿ’ ನಾನು ಹೊರಗೆ ಹೋದರೆ, ಅಲ್ಲಿ ನಗು ನಗುತ್ತಾ ನಮಗಾಗಿ ಕಾಯುತ್ತಾ ಕುಳಿತಿದ್ದ ನಿರ್ಮಲಕ್ಕನನ್ನು ಕಂಡು ಖುಷಿಯಾಯಿತು. ‘ನೋಡು, ನಾನೇ ಎಲ್ಲರಿಗಿಂತ ಮೊದಲು ಬಂದೆ’ ಎಂದು ನಿರ್ಮಲಕ್ಕ ಹೆಮ್ಮೆಯಿಂದ ಬೀಗುತ್ತಾ ಹೇಳಿದಾಗ ನಗುವುದೋ ಅಳುವುದೋ ತಿಳಿಯಲಿಲ್ಲ. ಅರ್ಧ ಗಂಟೆ ಅವಳಿಗಾಗಿ ಕಾದು ನಿಂತ ಸಹಪ್ರಯಾಣಿಕರೆಲ್ಲಾ ಹರ್ಷೋದ್ಗಾರ ಮಾಡಿದರು.

ಪ್ರಸಂಗ-8
ವಿಯೆಟ್ನಾಂ ಹಾಗೂ ಕಾಂಬೋಡಿಯಾಕ್ಕೆ ಹೋದವರಿಗೆ ಅಲ್ಲಿನ ಶಾಪಿಂಗ್ ಮಾಲ್‌ಗಳಿಗೆ ಹೋದಾಗ ವಸ್ತುಗಳ ದರಪಟ್ಟಿಯನ್ನು ನೋಡಿ ಗಾಬರಿಯಾಗಿತ್ತು. ವಿಯೆಟ್ನಾಮಿನ ಕರೆನ್ಸಿಯ ಹೆಸರು ಡಾಂಗ್. ನಮ್ಮ ನೂರು ರೂಪಾಯಿಗೆ 29,746.783 ಡಾಂಗ್‌ಗಳು. ಒಂದು ಶರ್ಟ್‌ನ ಬೆಲೆ 2,97,460 ಡಾಂಗ್‌ಗಳು. ನಾನಂತೂ ಲಕ್ಷಗಟ್ಟಲೆ ಡಾಂಗ್ ಗಳನ್ನು ಕೊಟ್ಟು ವಸ್ತುಗಳನ್ನು ಖರೀದಿಸುವ ಸಾಹಸ ಮಾಡಲಿಲ್ಲ. ಇನ್ನು ಕಾಂಬೋಡಿಯಾದ ಕರೆನ್ಸಿಯ ಹೆಸರು ರಿಯಲ್. ನಮ್ಮ ನೂರು ರೂಗಳಿಗೆ 4,870.08 ರಿಯಲ್. ಒಂದು ಕಪ್ ಕಾಫಿಯ ಬೆಲೆ 11,080 ರಿಯಲ್. ನಾವು ಆ ಬೋರ್ಡ್‌ಗಳನ್ನು ನೋಡಿದ ಮೇಲೆ ಏನನ್ನೂ ಕೊಳ್ಳದೇ ಬಂದೆವು. ಆದರೆ ನಮ್ಮ ಲಾಡ್ಜ್ ಮುಂದೆಯೇ ಚೀಲಗಳನ್ನೂ, ವ್ಯಾನಿಟಿ ಬ್ಯಾಗುಗಳನ್ನೂ ಹೊತ್ತು ಕಾಡುತ್ತಿದ್ದ ಮಹಿಳೆಯರನ್ನು ಕಂಡು ಅವರು ಮಾರುತ್ತಿದ್ದ ವಸ್ತುಗಳನ್ನು ಕೊಳ್ಳಲೇಬೇಕಾಯಿತು. ಅತ್ಯಂತ ಬಡದೇಶಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳ ಸ್ಥಿತಿ ಕಂಡು ಬೇಸರವಾಯಿತು. ಪ್ರಾಕೃತಿಕ ಸಂಪತ್ತು, ಪುರಾತನ ನಾಗರೀಕತೆ ಹೊಂದಿದ್ದ ರಾಷ್ಟ್ರಗಳ ಪರಿಸ್ಥಿತಿಯನ್ನು ನೋಡಿ ಬೇಸರವಾಗಿತ್ತು.

ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40543

(ಪ್ರವಾಸ ಕಥನ ಮುಗಿಯಿತು)

-ಡಾ.ಗಾಯತ್ರಿದೇವಿ ಸಜ್ಜನ್

10 Responses

  1. ಪ್ರವಾಸ ಕಥನ ದ ನಿರೂಪಣೆ ಯು ಸೊಗಸಾಗಿ ಮೂಡಿಬಂತು..ಹಾಗೇ ಆ ಪ್ರವಾಸದಲ್ಲಾದ ಪಜೀತಿಯ..ಅನಾವರಣವೂ..ಸೊಗಸಾಗಿತ್ತು…ಗಾಯತ್ರಿ ಮೇಡಂ..

  2. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿ ಮೂಡಿ ಬಂತು ಪ್ರವಾಸ ಕಥನ

  3. Padma Anand says:

    ಅತ್ಯಂತ ಮಾಹಿತಿಪೂರ್ಣವಾಗಿಯೂ, ಆಸಕ್ತಿದಾಯಕ ನಿರೂಪಣೆಯನ್ನೂ ಒಳಗೊಂಡ ಪ್ರವಾಸೀ ಕಥನ, ಕೊನೆಯ ಕಂತಿನಲ್ಲಿ ಮುಂದಿನ ಪ್ರಯಾಣಿಕರಿಗೆ ಎಚ್ಚರಿಕೆಯನ್ನೂ ನೀಡುತ್ತಾ ಸಂತಸ ನೀಡಿತು.

  4. ವಂದನೆಗಳು ಪದ್ಮ ಮೇಡಂ, ನಾಗರತ್ನ ಮೇಡಂ ಮತ್ತು ನಯನಾಗೆ

  5. ಶಂಕರಿ ಶರ್ಮ says:

    ಗಾಯತ್ರಿ ಮೇಡಂ ಅವರ ಕಾಂಬೋಡಿಯಾ ಮತ್ತು ವಿಯೆಟ್ನಾಂ ಪ್ರವಾಸ ಲೇಖನದ ಜೊತೆಗೆ ಅವರ ವಿಶೇಷ ಅನುಭವಗಳು ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತಾಯಿತು! ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಪ್ರವಾಸ ಕಥನವು ಅಲ್ಲಿಗೆ ಹೋಗುವವರಿಗೆ ಕೈಪಿಡಿಯಂತಿದೆ…ಧನ್ಯವಾದಗಳು ಮೇಡಂ.

  6. Anonymous says:

    TUMBA CHENNAGIDE

  7. Anonymous says:

    very nice

  8. Hema Mala says:

    ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂತು.ಸಾಧ್ಯವಾದರೆ ನಾವೂ ವಿಯೆಟ್ನಾಂ-ಕಾಂಬೋಡಿಯಾಕ್ಕೆ ಹೋಗಿ ಬರೋಣ ಎಂಬ ಆಸಕ್ತಿ ಕುದುರಿದೆ.

  9. Padmini Hegde says:

    ಸ್ವಾರಸ್ಯಕರವಾದ ಪ್ರವಾಸಕಥನ. ಖುಷಿ ಆಯಿತು

  10. ಸಹೃದಯ ಓದುಗರೆಲ್ಲರಿಗೂ ತುಂಬು ಹೃದಯದ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: