ಮಕ್ಕಳಿಗೆ ಸಂಸ್ಕಾರ ಯಾಕೆ ಬೇಕು?
ನಮ್ಮ ಶಾರೀರಿಕ ಹಾಗೂ ಬೌದ್ಧಿಕ ಕ್ರಿಯೆಗಳು ಆರೋಗ್ಯಯುತವಾಗಿರಬೇಕಾದರೆ ಅವುಗಳು ಸರಿಯಾದ ಯೋಜಿತ ಮಾರ್ಗದಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ರೂಪಿಸುವ ಅಂಶಗಳೇ ಸಂಸ್ಕಾರವಾಗಿದೆ. ಸಂಸ್ಕಾರವೆಂಬುದು ಸಂಸ್ಕೃತ ಪದವಾಗಿದ್ದು, ‘ಸಂ` ಎಂದರೆ ಸಂಪೂರ್ಣ, ‘ಕಾರ` ಎಂದರೆ ಕ್ರಿಯೆ. ಮಾನವನ ಜೀವನವು ತನ್ನ ಪೂರ್ವಜರಿಂದ ಪಡೆದುಕೊಂಡ ನಂಬಿಕೆಗಳು, ಮೌಲ್ಯಗಳು, ಧರ್ಮ, ಆಚರಣೆಗಳು, ಸಂಪ್ರದಾಯಗಳು, ಆಹಾರ, ಉಡುಗೆ , ಭಾಷೆ, ಮತ್ತು ಇತರ ಸಂಬಂಧಗಳಿಂದ ಪ್ರಭಾವಿತವಾಗಿದೆ. ಸಂಘ ಜೀವಿಯಾದ ಮಾನವನು ತನ್ನ ಸಂಸ್ಕೃತಿಯ ಚೌಕಟ್ಟಿನೊಳಗೆ ಬದುಕಲು ಅನುಕೂಲವಾಗುವಂತೆ ಪೂರಕ ರೀತಿ, ನೀತಿಗಳನ್ನು ಕಟ್ಟು ಕಟ್ಟಳೆಗಳನ್ನು ತಾನೇ ರೂಪಿಸಿಕೊಂಡನು.
ಸಂಸ್ಕಾರವೆಂಬುದು ಜನರ ಬದುಕು ಅವರ ನಂಬಿಕೆ, ಆರಾಧನೆ, ಆಹಾರ ಪದ್ಧತಿ, ನಡವಳಿಕೆ, ಆಚಾರ ವಿಚಾರ ವ್ಯವಹಾರಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಉತ್ತಮ ಜೀವನ ರೂಪಿಸುವಲ್ಲಿ ಸಂಸ್ಕಾರದ ಪಾತ್ರ ಬಹಳ ಹಿರಿದು. ವ್ಯಕ್ತಿಯ ನಡವಳಿಕೆಯಿಂದಲೇ ಅವನ ಸಂಸ್ಕಾರದ ಗುಣಮಟ್ಟವನ್ನು ಅಳೆಯಬಹುದು. ಶರೀರ, ಮನಸ್ಸು, ಬುದ್ಧಿ ಇವುಗಳ ಶುದ್ಧೀಕರಣವೇ ಸಂಸ್ಕಾರ. ಸಂಸ್ಕಾರಯುತ ವಿವೇಕ ಭಾವನೆಗಳು, ಆಸಕ್ತಿಗಳು, ವರ್ತನೆಗಳು, ಅಭಿರುಚಿ, ಜೀವನ ಶೈಲಿ, ಆರೋಗ್ಯ ಇವೆಲ್ಲಾ ಒಳ್ಳೆಯ ಗುಣಗಳನ್ನು ಹುಟ್ಟು ಹಾಕುತ್ತವೆ.
ಷೋಡಶ ಸಂಸ್ಕಾರಗಳು
ಹಿಂದೂ ಧರ್ಮದಲ್ಲಿ ಷೋಡಶ ಸಂಸ್ಕಾರಗಳೆಂಬ ಹದಿನಾರು ಪವಿತ್ರ ವಿಧಿಗಳು ರೂಢಿಯಲ್ಲಿವೆ. ಗರ್ಭಾದಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣವೇಧ, ವಿದ್ಯಾರಂಭ, ಉಪನಯನ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಅಂತ್ಯೇಷ್ಠಿ ಇವೇ ಮೊದಲಾದ, ಮಾನವ ಜೀವನದ ಹದಿನಾರು ಪ್ರಮುಖ ಹಂತಗಳನ್ನು ಗುರುತಿಸಿ ಇವುಗಳನ್ನು ಆಚರಿಸಲಾಗುತ್ತದೆ.
ಮಾನವ ಜೀವನದ ಪ್ರಮುಖ ಹಂತಗಳಲ್ಲಿ ನಡೆಯುವ ಈ ಧಾರ್ಮಿಕ ಕ್ರಿಯೆಗಳು; ಮಗುವಿನ ಜನನ ಪೂರ್ವದಿಂದ ಪ್ರಾರಂಭವಾಗಿ, ಜೀವನದ ಅಂತಿಮ ಭಾಗದ ತನಕ ಆಯಾಯ ಹಂತಗಳಲ್ಲಿ ನಡೆಯುತ್ತವೆ. ಈ ಧಾರ್ಮಿಕ ಕ್ರಿಯೆಗಳು ಮಗುವಿನ ಮುಂದಿನ ಜೀವನದ ಸರ್ವತೋಮುಖ ಅಭಿವೃದ್ಧಿಗೆ ಪೂರಕವೆಂದು ನಂಬಲಾಗಿದೆ. ಇವುಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಿ, ಅವನ ದೈಹಿಕ ಮತ್ತು ಆಧ್ಯಾತ್ಮಿಕ ಪಯಣದ ದಾರಿಯನ್ನು ಸುಗಮಗೊಳಿಸುತ್ತದೆ ಮತ್ತು ದುರ್ಗುಣಗಳ ಸೃಷ್ಠಿಗೆ ಅಡಿಪಾಯವನ್ನು ಹಾಕುವ ದೈಹಿಕ ದೋಷಗಳನ್ನು ಸರಿಪಡಿಸುತ್ತವೆ ಎನ್ನಲಾಗಿದೆ. ಮುಖ್ಯವಾಗಿ, ಮಗುವಿಗೆ ಮಾಡುವ ಧಾರ್ಮಿಕ ಸಂಸ್ಕಾರಗಳು, ಅದರಲ್ಲಿರುವ ನ್ಯೂನತೆಗಳನ್ನು ತೊಡೆದು ಹಾಕುತ್ತವೆ. ಅದರ ಮುಂದಿನ ಬೆಳವಣಿಗೆಯ ಹಂತದಲ್ಲಿ; ಸಕಾರಾತ್ಮಕ ಆಲೋಚನೆಗಳು ಮತ್ತು ನಂಬಿಕೆಗಳನ್ನು ಅಳವಡಿಸುವ ಗುರಿಯನ್ನು ಹೊಂದಿರುವ ಮಾನಸಿಕ ಮತ್ತು ಧಾರ್ಮಿಕ ಪರಿಹಾರವಾಗಿ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವುದು ಉಚಿತವಾಗಿದೆ.
ಮಗುವಿನ ಜೀವನದ ಮೊದಲ ಹಂತದಲ್ಲಿ ನೀಡಲಾಗುವ ಧಾರ್ಮಿಕ ಸಂಸ್ಕಾರಗಳ ಬಗ್ಗೆ ತಿಳಿಯೋಣ
ಗರ್ಭದಾನ
ಇದು ಗರ್ಭಧಾರಣೆಯ ಪೂರ್ವದಲ್ಲಿ ನೀಡಲಾಗುವ ಸಂಸ್ಕಾರವಾಗಿದ್ದು; ಆರೋಗ್ಯಕರ ಸಂತತಿಯ ಜನನವಾಗಲೆಂಬ ಉತ್ತಮ ಆಶಯದೊಂದಿಗೆ ಸಾಂಕೇತಿಕವಾಗಿ ಇದನ್ನು ಆಚರಿಸಲಾಗುತ್ತದೆ.
ಪುಂಸವನ
ಇದು, ಗರ್ಭಧಾರಣೆಯಾಗಿ ಮೂರನೆಯ, ನಾಲ್ಕನೆಯ ಅಥವಾ ಎಂಟನೆಯ ತಿಂಗಳಿನಲ್ಲಿ ನಡೆಸಲ್ಪಡುವ ಸಂಸ್ಕಾರವಾಗಿದೆ. ಹೊಟ್ಟೆಯೊಳಗಿನ ಮಗುವಿನ ಬೆಳವಣಿಗೆಯ ಒಂದು ಮುಖ್ಯ ಹಂತವಾಗಿ ಈ ಸಮಯದಲ್ಲಿ ಮಗು ಒದೆಯಲು ಪ್ರಾರಂಭಿಸುತ್ತದೆ. ಈ ಸಂಸ್ಕಾರವು, ಉದರದಲ್ಲಿರುವ ಭ್ರೂಣವನ್ನು ಪೋಷಿಸಿ, ಗಂಡು ಮಗುವನ್ನು ತರುವುದು ಎಂಬ ನಂಬಿಕೆಯಿದೆ.
ಸೀಮಂತೋನ್ನಯನ
ಈ ಸಂಸ್ಕಾರವು ತಾಯಿಗೆ ಅದೃಷ್ಟವನ್ನು ಮತ್ತು ಹುಟ್ಟುವ ಮಗುವಿಗೆ ದೀರ್ಘಾಯುಷ್ಯವನ್ನು ತರುವುದು. ತಾಯಿ ಮತ್ತು ಮಗುವನ್ನು ಕೆಟ್ಟ ದೃಷ್ಟಿ ಅಥವಾ ನಕರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಮತ್ತು ಅಕಾಲಿಕ ಗರ್ಭಪಾತವನ್ನು ತಪ್ಪಿಸುತ್ತದೆ. ಈ ಸಮಾರಂಭದಲ್ಲಿ; ಗರ್ಭದಲ್ಲಿರುವ ಮಗುವಿನ ಆರೋಗ್ಯ, ಯೋಗಕ್ಷೇಮ ಮತ್ತು ತಾಯಿಯ ಸುರಕ್ಷಿತ ಹೆರಿಗೆಗಾಗಿ ಪ್ರಾರ್ಥಿಸಲಾಗುತ್ತದೆ.
ಜಾತಕರ್ಮ
ಇದು ನವಜಾತ ಶಿಶುವಿನ ಜನನದ ಬಳಿಕ ನಡೆಯುವ ಮೊದಲನೇ ಸಂಸ್ಕಾರವಾಗಿದ್ದು; ಮಗುವನ್ನು ಜಗತ್ತಿಗೆ ಸ್ವಾಗತಿಸುವ ವಿಧಿಯಾಗಿದೆ. ಇದು ಮಗುವಿನ ಜನನವನ್ನು ಸ್ಮರಿಸುವುದರೊಂದಿಗೆ, ತಂದೆ ಮತ್ತು ಮಗುವಿನ ನಡುವೆ .ಮಧುರ ಬಾಂಧವ್ಯವನ್ನು ಸೃಷ್ಠಿಸುತ್ತದೆ. ತಂದೆಯು, ಜ್ಞಾನ ದೇವತೆಯಾದ ಶಾರದೆಯ ವೈದಿಕ ಸ್ತೋತ್ರ ಪಠಣದೊಂದಿಗೆ, ಚಿನ್ನದ ಉಂಗುರದ ಮೂಲಕ ಜೇನುತುಪ್ಪವನ್ನು ಮಗುವಿನ ತುಟಿಗೆ ಸ್ಪರ್ಶಿಸುವನು. ಸರ್ವರೋಗ ನಿರೋಧಕವಾದ ಜೇನುತುಪ್ಪವು ಮಗುವಿನ ಮೇಧಾ ಶಕ್ತಿಯನ್ನು ಹೆಚ್ಚಿಸುವುದು.
ನಾಮಕರಣ
ಈ ವಿಧಿಯಲ್ಲಿ, ಮಗು ಹುಟ್ಟಿದ ಹನ್ನೊಂದನೇ ದಿನದಂದು ಪೂಜೆ, ಮಂತ್ರಗಳ ಸಹಿತ ಮಗುವಿಗೆ ಶಾಸ್ತ್ರೋಕ್ತವಾಗಿ ಹೆಸರಿಡಲಾಗುತ್ತದೆ. ಒಂದು ನಿರ್ದಿಷ್ಟ ನಕ್ಷತ್ರಪುಂಜದಲ್ಲಿ ಜನಿಸಿದ ಮಗುವಿಗೆ ಆಯಾ ನಕ್ಷತ್ರಪುಂಜಕ್ಕೆ ಹೊಂದಿಕೆಯಾಗುವಂತಹ ಧ್ವನಿ (ಅಕ್ಷರ)ಯನ್ನು ವೈದಿಕ ಜಾತಕದಲ್ಲಿ ಸೂಚಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ಅಥವಾ ತಂದೆ ತಾಯಿಯರಿಗೆ ಸಂಬಂಧಿತ ಹೆಸರನ್ನು ಆಯ್ಕೆ ಮಾಡುವರು.
ನಿಷ್ಕ್ರಮಣ
ಮಗುವಿಗೆ ನಲುವತ್ತು ದಿನಗಳಾದ ಬಳಿಕ ಮೊದಲ ಬಾರಿಗೆ ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ಯುವ ಈ ಸಂಸ್ಕಾರ ವಿಧಿಯಲ್ಲಿ, ವೈದಿಕ ಸ್ತೋತ್ರಗಳೊಂದಿಗೆ, ಸ್ವಸ್ತಿಕ, ಶಂಖ ಇತ್ಯಾದಿ ಮಂಗಳಕರವಾದ ಚಿಹ್ನೆಗಳನ್ನು ಮಗುವಿಗೆ ತೋರಿಸಲಾಗುತ್ತದೆ. ಬಳಿಕ, ದೇವಸ್ಥಾನಕ್ಕೆ ಕರೆದೊಯ್ದು, ಮಗುವಿನ ಆರೋಗ್ಯಕರ ಸರ್ವತೋಮುಖ ಅಭಿವೃದ್ಧಿಗಾಗಿ ಪೂಜೆ ಪ್ರಾರ್ಥನೆ ಸಲ್ಲಿಸಲಾಗುವುದು. .
ಅನ್ನಪ್ರಾಶನ
ಸಾಮಾನ್ಯವಾಗಿ ಆರನೇ ತಿಂಗಳಿನಲ್ಲಿ ಮಗುವಿಗೆ ಹಲ್ಲುಗಳು ಮೂಡಲು ಪ್ರಾರಂಭವಾಗುವುದು. ಈ ಸಮಯದಲ್ಲಿ ನೀಡುವ ಈ ಸಂಸ್ಕಾರವು, ತಾಯಿಯ ಹಾಲನ್ನು ಹೊರತು ಪಡಿಸಿ ಮೊದಲ ಬಾರಿಗೆ ಘನ ಆಹಾರವನ್ನು ವಿಧಿಪೂರ್ವಕವಾಗಿ ನೀಡುವ ಆಚರಣೆಯಾಗಿದೆ.
ಚೂಡಾಕರ್ಮ
ಈ ಸಂಸ್ಕಾರವನ್ನು ಮುಂಡನ ಸಮಾರಂಭ ಎಂದೂ ಕರೆಯುವರು. ಈ ವರೆಗೆ ಕತ್ತರಿಸದ ಮಗುವಿನ ಕೂದಲನ್ನು ಈ ವಿಧಿಯಲ್ಲಿ ಬೋಳಿಸಲಾಗುತ್ತದೆ. ಇದು ಮಗುವಿನ ಶುದ್ಧೀಕರಣ, ನವೀಕರಣ ಮತ್ತು ಹೊಸ ಬೆಳವಣಿಗೆಯನ್ನು ಸಂಕೇತಿಸುತ್ತದೆ. ಸೂಕ್ತ ಮಂತ್ರ ಪಠಣದೊಂದಿಗೆ ಮಗುವಿನ ದೀರ್ಘಾಯುಷ್ಯ, ಸಮೃದ್ಧಿ ಮತ್ತು ಖ್ಯಾತಿಗಾಗಿ ಆಶೀರ್ವಾದವನ್ನು ನೀಡಲಾಗುತ್ತದೆ.
ಕರ್ಣವೇಧ
ಈ ಸಂಸ್ಕಾರದಲ್ಲಿ, ಕಿವಿಯನ್ನು ಚುಚ್ಚಲಾಗುತ್ತದೆ. ಈ ಕ್ರಿಯಾ ಕರ್ಮವು, ಮಗುವಿನ ಬುದ್ಧಿವಂತಿಕೆ ಹೆಚ್ಚುವುದು, ಉಸಿರಾಟದ ಸೋಂಕು ಇತ್ಯಾದಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ವಿದ್ಯಾರಂಭ
ವಿದ್ಯೆ ಎಂದರೆ ಜ್ಞಾನ. ಈ ಸಂಸ್ಕಾರ ವಿಧಿಯಲ್ಲಿ ಲಿಖಿತ ಜಗತ್ತಿನ ಪ್ರಾರಂಭವನ್ನು, ಗುರುಗಳ ಮೇಲ್ವಿಚಾರಣೆಯಲ್ಲಿ ಅಕ್ಕಿಯ ತಟ್ಟೆಯಲ್ಲಿ ಓಂಕಾರ, ಶ್ರೀಕಾರಗಳನ್ನು ಬರೆಯಿಸಿ ಮಗುವಿಗೆ ಔಪಚಾರಿಕವಾಗಿ ವರ್ಣಮಾಲೆಯ ಪರಿಚಯ ನೀಡಲಾಗುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ವಿದ್ಯಾರಂಭವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ.
ಉಪನಯನ
ಮಾನವನ ಜೀವನದಲ್ಲಿ ಶಿಕ್ಷಣವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ. ಉಪನಯನವೆಂದರೆ ಗುರುವಿನ ಹತ್ತಿರ ಇರುವುದು ಎಂದರ್ಥ. ಇದು ಆಧ್ಯಾತ್ಮಿಕ ಪುನರ್ಜನ್ಮವನ್ನು ಸಂಕೇತಿಸುತ್ತದೆ.. ಬ್ರಹ್ಮೋಪದೇಶದ ಈ ಸಂದರ್ಭದಲ್ಲಿ ಮಗುವಿಗೆ ಬ್ರಹ್ಮಚರ್ಯ ವ್ರತದ ಜೊತೆಗೆ ಅತ್ಯಂತ ಪವಿತ್ರವಾದ ಗಾಯತ್ರಿ ಮಂತ್ರವನ್ನು ಉಪದೇಶಿಸಲಾಗುವುದು.
ವೇದಾರಂಭ
ಈ ವಿಧಿಯಲ್ಲಿ ಮಗುವಿನ ವೇದಗಳ ಕಲಿಕೆಯು ಆರಂಭವಾಗುತ್ತದೆ. ಶುಭದಿನದಂದು ಪವಿತ್ರ ಅಗ್ನಿಯ ಮುಂದೆ ವಿದ್ಯಾರ್ಥಿಯು ತನ್ನ ಗುರುಗಳ ಸೇವೆಗಾಗಿ ಮತ್ತು ಶಿಸ್ತುಬದ್ಧ ಜೀವನವನ್ನು ನಡೆಸಲು ತನ್ನನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾನೆ. ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತ ಅಧ್ಯಯನ ಮೇಲೆ ಮಾತ್ರ ಗಮನಹರಿಸುತ್ತಾನೆ.ಈ ರೀತಿಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಪಡೆದ ಮಗುವು ಗುರು ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲ ತರಹದ ಜೀವನ ಮೌಲ್ಯಗಳನ್ನು ಅರಿತು ಉತ್ತಮ, ಆರೋಗ್ಯಯುತ ಜೀವನ ನಡೆಸುವಲ್ಲಿ ಸಫಲತೆಯನ್ನು ಕಾಣುವನು.
ಸಾಮಾನ್ಯ ಜೀವನದಲ್ಲಿ ಸಂಸ್ಕಾರ
ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಕ್ಕಳು ಇದರಿಂದಾಗಿ ದಾರಿ ತಪ್ಪುವುದನ್ನು ಕಾಣುತ್ತೇವೆ. ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಸರಿಯಾದ ಕಲ್ಪನೆ ಇಲ್ಲದಂತಾಗಿದೆ. ಇದಕ್ಕಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡುವುದು ಅತ್ಯಂತ ಅವಶ್ಯವಾಗಿದೆ. ಉತ್ತಮ ಜೇವನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸದಿದ್ದರೆ, ಅವರು ಮುಂದೆ ಉತ್ತಮ ರೀತಿಯಲ್ಲಿ ಸದ್ಗುಣದ ಜೀವನವನ್ನು ನಡೆಸುವುದು ಸುಲಭವಲ್ಲ. ಅತ್ಯಂತ ವೇಗವಾಗಿ ಸಾಗುವ ಇಂದಿನ ಜೀವನ ಪದ್ಧತಿಯಿಂದಾಗಿ; ಪ್ರತಿಯೊಬ್ಬರಿಗೂ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಆತ್ಮಾವಲೋಕನಕ್ಕೂ ಸಮಯವಿಲ್ಲದಾಗಿದೆ. ತೆಗೆದುಕೊಳ್ಳುವ ನಿರ್ಧಾರಗಳು ಸರಿಯೇ? ತಪ್ಪೇ? ಎಂಬುದು ತಿಳಿಯುವುದಿಲ್ಲ. ಹಿರಿಯರ ಸಲಹೆಯನ್ನು ಕೇಳುವ ವ್ಯವಧಾನವೂ ಇಲ್ಲ.
ಸಂಸ್ಕಾರ ಅಥವಾ ಜೀವನ ಮೌಲ್ಯಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿಸಿ ಕಲಿಸಬೇಕು. ಜೊತೆಗೆ, ಆಧ್ಯಾತ್ಮಿಕ ಶ್ರೇಷ್ಠ ವಿಚಾರಗಳನ್ನು ಕೇಳುವ ಸಂಸ್ಕಾರವನ್ನು ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕು. ಜೀವನ ಉನ್ನತಿಯೆಡೆಗೆ ಸಾಗಲು ಆಧ್ಯಾತ್ಮಿಕ ಜ್ಞಾನದ ತಳಹದಿಯಿಂದ ಜೀವನ ರೂಪಿಸಿಕೊಳ್ಳಬೇಕು. ಈ ದಿನಗಳಲ್ಲಿ ಮಕ್ಕಳು ಪಾಶ್ಚಮಾತ್ಯ ಸಂಸ್ಕೃತಿಗೆ ಒಳಗಾಗುವ ಭಯವಿದೆ. ಭಗವಂತನ ಧ್ಯಾನ, ಯೋಗ, ಸತ್ಸಂಗ ಇತ್ಯಾದಿಗಳು ಹೆಚ್ಚಾಗಬೇಕು. ಇಲ್ಲಿ, ಒಳ್ಳೆಯ ಗೆಳೆಯರ ಒಡನಾಟ ಕೂಡಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತದೆ. ಸಮಾಜಕ್ಕೆ ಮಾದರಿ ಆಗುವಂತೆ ಮಕ್ಕಳನ್ನು ರೂಪಿಸುವಲ್ಲಿ ಅವರೊಳಗಿನ ಒಳ್ಳೆಯ ಸಂಸ್ಕಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಕ್ತಿ, ಸಮರ್ಪಣಾ ಭಾವ, ಶಿಸ್ತು, ವಿವೇಚನೆ, ದೃಢಸಂಕಲ್ಪ, ಸಹನೆ, ಸಂಯಮ, ದೈವ ಪ್ರೀತಿ, ಪಾಪ ಭೀತಿ, ನಿಸ್ವಾರ್ಥ ಸೇವಾ ಮನೋಭಾವನೆ ಇತ್ಯಾದಿ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು ಸಂಸ್ಕಾರವು ಅತ್ಯಗತ್ಯ.
ಮೊಗ್ಗಿನಂತಿರುವ ಮಕ್ಕಳ ಹೃದಯಗಳನ್ನು ವಿಕಾಸವಾಗುವಂತೆಯೂ, ಸುವಾಸನೆ ಮತ್ತು ಸೌಂದರ್ಯವನ್ನು ಬೀರುವಂತಹ ಹೂವುಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕು. ಮಗುವಿನ ಸಮಗ್ರ ಬೆಳವಣಿಗೆಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಸರಿಯಾದ ಮಾರ್ಗದರ್ಶನದಲ್ಲಿ ತೆಗೆದುಕೊಳ್ಳುವ ವಿವೇಕಯುತ ನಿರ್ಧಾರಗಳು ಯಾರಿಗೂ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬುದಂತೂ ಖಚಿತ.
ಹಿಂದೆ ಮಕ್ಕಳು, ತಮ್ಮ ಹೆತ್ತವರು ಮತ್ತು ಗುರುಗಳ ಮಾರ್ಗದರ್ಶನದ ಮೂಲಕ ವಿವಿಧ ನಡವಳಿಕೆಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ದಿನವನ್ನು ಚೆನ್ನಾಗಿ ಪ್ರಾರಂಭಿಸಲು ಮುಂಜಾನೆಯ ಪ್ರಾರ್ಥನೆ, ಮನೆಯ ಹಿರಿಯರೆಲ್ಲರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು, ದೇವರ ಮುಂದೆ ಭಕ್ತಿಯಿಂದ ತಲೆಬಾಗುವುದು, ಗುರು ಹಿರಿಯರಲ್ಲಿ ಗೌರವ, ಪವಿತ್ರ ಗ್ರಂಥಗಳನ್ನು ಓದುವುದು ಇತ್ಯಾದಿ ಪ್ರಮುಖ ಜೀವನ ಪಾಠಗಳನ್ನು ಮಗುವಿಗೆ ಪ್ರಾರಂಭಿಕ ಹಂತದಲ್ಲೇ ಪರಿಚಯಿಸಲಾಗುತ್ತಿತ್ತು.
ಪುಟ್ಟ ಮಗು ತನ್ನ ಹೆತ್ತವರು, ಒಡನಾಡಿಗಳನ್ನು ನೋಡಿ ತಾನು ಅನುಸರಿಸುತ್ತದೆ…ಕಲಿಯುತ್ತದೆ. ಆದ್ದರಿಂದ, ಮೊದಲಿಗೆ ಹೆತ್ತವರು ಮೌಲ್ಯಯುತ ನಡವಳಿಕೆಗಳನ್ನು ಸ್ವತ: ಪಾಲಿಸಬೇಕು. ಏಕೆಂದರೆ, ನಾವು ಅನುಸರಿಸದೆ ಇರುವುದನ್ನು ಇತರರಿಗೆ ಕಲಿಸಲು ಎಂದಿಗೂ ಸಾಧ್ಯವಿಲ್ಲ. ಮಗು ಹಸಿ ಮಣ್ಣಿನ ಮುದ್ದೆ ಇದ್ದಂತೆ. ನಾವು ಯಾವ ರೂಪ ನೀಡುತ್ತೇವೆಯೋ ಅದೇ ರೂಪವನ್ನು ಪಡೆಯುತ್ತದೆ.
ನಮ್ಮ ಪಕ್ಕದೂರಿನಲ್ಲಿ ಒಂದು ವಿದ್ಯಾಸಂಸ್ಥೆಯಿದೆ. ಕಲಿಯುವ ಮಕ್ಕಳಿಗೆ ವಸತಿ, ಊಟದ ವ್ಯವಸ್ಥೆಯೂ ಇದೆ. ಈ ವಿದ್ಯಾಸಂಸ್ಥೆಯು ಅತ್ಯಂತ ಕಟ್ಟುನಿಟ್ಟಿನ ಶಿಸ್ತುಪಾಲನೆಗೆ ಹೆಸರುವಾಸಿಯಾಗಿದೆ. ಬೆಳಗ್ಗೆ ಬೇಗನೆದ್ದು ಭಜನೆ, ಧ್ಯಾನ, ಓದು, ಯೋಗ, ರಾತ್ರಿ ಭಜನೆ…ಹೀಗೆ ದಿನ ಪೂರ್ತಿ ಮಕ್ಕಳ ಚಟುವಟಿಕೆಗಳು ಅಲ್ಲಿಯ ಗುರುಗಳ ಕಣ್ಗಾವಲಿನಲ್ಲಿ ನಿಯಮ ಪ್ರಕಾರ ನಡೆಯುತ್ತದೆ. ವಸತಿ ನಿಲಯಕ್ಕೆ ಹೆತ್ತವರ ಭೇಟಿಯೂ ನಿಗದಿತ ಸಮಯಕ್ಕೆ ವರ್ಷಕ್ಕೆ ಎರಡು ಬಾರಿ ಮಾತ್ರ. ಮೌಲ್ಯಯುತ ಸಂಸ್ಕಾರವನ್ನು ನಿಜ ಅರ್ಥದಲ್ಲಿ ಮಕ್ಕಳಿಗೆ ನೀಡಿ, ಅವರನ್ನು ತಿದ್ದಿ, ಮಕ್ಕಳ ಸುಂದರ ಭವಿಷ್ಯವನ್ನು ರೂಪಿಸುವಲ್ಲಿ ತನ್ನ ಕೈಜೋಡಿಸಿದೆ.
ಸಾಧಾರಣವಾಗಿ ಕೆಲವು ಮಕ್ಕಳು ಪ್ರೌಢಶಾಲೆಗೆ ತಲಪಿದಾಗ, ಮನೆಯರ ಮಾತನ್ನು ಮೀರಿ ನಡೆಯುವುದು ಸಾಮಾನ್ಯ. ಓದಿನಲ್ಲಿ ಅಲಕ್ಷ್ಯ, ಬೇಜವಾಬ್ದಾರಿತನ, ಹುಡುಗಾಟಿಗೆ ಇತ್ಯಾದಿಗಳಿಂದಾಗಿ, ತಮ್ಮ ವಿದ್ಯಾಭ್ಯಾಸದಲ್ಲಿ ಹಿಂದುಳಿಯುವರು. ಅಂತಹ ಮಕ್ಕಳನ್ನು ಹೆತ್ತವರು ಕಡಿಮೆ ಎಂದರೆ ಒಂದು ವರ್ಷ, ಇಲ್ಲಿಯ ವಸತಿನಿಲಯದಲ್ಲಿದ್ದು ಕಲಿಯುವಂತೆ ಏರ್ಪಾಡು ಮಾಡುವರು. ಅಲ್ಲಿದ್ದು ಬಂದ ಮಕ್ಕಳು ಮತ್ತೆಂದಿಗೂ ದಾರಿ ತಪ್ಪಿ ನಡೆದ ಇತಿಹಾಸವೇ ಇಲ್ಲ ಎನ್ನಬಹುದು.
ಬಾಲ್ಯದಲ್ಲಿ ರೂಢಿಸಿಕೊಂಡ ಮೌಲ್ಯಗಳು ಅಥವಾ ಸಂಸ್ಕಾರಗಳು ಮುಂದೆ ಸದ್ಗುಣಶೀಲ ಜೀವನವನ್ನು ನಡೆಸಲು ತಳಹದಿಯನ್ನು ರೂಪಿಸುತ್ತವೆ. ಸುತ್ತುಮುತ್ತಲಿನ ಸಾಮಾಜಿಕ ವಾತಾವರಣ ಹೇಗೇ ಇರಲಿ, ವ್ಯಕ್ತಿಯು ಸ್ವಲ್ಪವೂ ವಿಚಲಿತನಾಗದೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಅಕ್ಷರ, ಶಿಕ್ಷಣ ಅಥವಾ ವಿದ್ಯೆ ಕಲಿತ ವ್ಯಕ್ತಿಯು ಕೆಟ್ಟವನಾಗುವ, ಭ್ರಷ್ಟನಾಗುವ ಸಾಧ್ಯತೆಯಿದೆ. ಆದರೆ ಯೋಗ್ಯ ಸಂಸ್ಕಾರಗಳನ್ನು ಕಲಿತ ವ್ಯಕ್ತಿಯು ಎಂದಿಗೂ ಕೆಟ್ಟವನಾಗಲಾರ… ಅದಕ್ಕೆ ಅಂತಹ ಅದ್ಭುತ ಶಕ್ತಿಯಿದೆ.
-ಶಂಕರಿ ಶರ್ಮ, ಪುತ್ತೂರು.
ಸರಳ ಬರವಣಿಗೆಯ ಮೂಲಕ.. ತಿಳಿಸಿರುವ..ಮಕ್ಕಳಗೆ ಸಂಸ್ಕಾರ..ಏಕೆ ಬೇಕು..ಲೇಖನ.. ಆಪ್ತವಾಗಿ ಮೂಡಿಬಂದಿದೆ.. ಶಂಕರಿ ಮೇಡಂ…
ಲೇಖನವನ್ನು ಓದಿ, ಮೆಚ್ಚುಗೆ ಸೂಚಿಸಿದ ಗಾಯತ್ರಿ ಮೇಡಂ…ಧನ್ಯವಾದಗಳು.
Beautiful. ಸಂಸ್ಕಾರ ಅಂದರೆ ಏನು ಅನ್ನುವುದನ್ನು ಸವಿಸ್ತಾರವಾಗಿ ಪರಿಚಯಿಸಿದ್ರಿ. ನೈಸ್
ಸಹೃದಯ ಪ್ರತಿಕ್ರಿಯೆಗೆ ನಮನಗಳು…ನಯನಾ ಮೇಡಂ.
ಸಂಸ್ಕಾರದ ಮಹತ್ವವನ್ನು ಸಾರುವ, ಇಂದಿನ ದಿನಗಳಲ್ಲಿ ಅತೀ ಅವಶ್ಯಕ ಎನಿಸುವ ವಿಚಾರಧಾರಯಿಂದ ಕೂಡಿದ ಸೊಗಸಾದ ಲೇಖನ
ಅಬ್ಬಾ ಎಷ್ಟೊಂದು ಬಗೆಯ ಸಂಸ್ಕಾರಗಳನ್ನು ತಿಳಿಸಿಕೊಟ್ಟಿದ್ದೀರಾ
ವಂದನೆಗಳು
ಪ್ರೀತಿಯ ಸ್ಪಂದನೆಗೆ ವಂದನೆಗಳು…ಗಾಯತ್ರಿ ಮೇಡಂ.
ಸಂಗ್ರಯೋಗ್ಯ ಮಾಹಿತಿ ನೀಡಿರುವಿರಿ. ಮೇಡಂ ನಿಮಗೆ ತುಂಬಾ ತುಂಬಾ ಅಭಿನಂದನೆಗಳು.
ಪ್ರೋತ್ಸಾಹಕರ ಸ್ಪಂದನೆಗೆ ಶರಣೆಂಬೆ.
ಸೊಗಸಾದ ಬರಹ.
ಸೊಗಸಾಗಿ ಪ್ರಕಟಿಸಿ, ಓದಿ ಸ್ಪಂದಿಸಿ ಪ್ರೋತ್ಸಾಹಿಸಿದ ಸುರಹೊನ್ನೆ ಸಂಪಾದಕಿ ಹೇಮಮಾಲಾ ಅವರಿಗೆ ಹೃತ್ಪೂರ್ವಕ ನಮನಗಳು.
ರೂಢಿಗತ ಸಂಸ್ಕಾರಗಳ ಸದಾಶಯವನ್ನು ಪರಿಚಯಿಸುವ ಲೇಖನ ಚೆನ್ನಾಗಿದೆ