ವಿದ್ಯಾರ್ಥಿಗಳು ಮತ್ತು ಪರೀಕ್ಷೆ.

Share Button

ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ,  ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ. ಎಲ್ಲರಿಗೂ ಕೂಡ ರಜೆ ನೀಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳನ್ನು ಗಮನಿಸಿದಾಗ ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲರಿಗೂ ಕೂಡ ಅಭಿನಂದನೆಗಳು.       

ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡಿದ್ದಾರೆ. ಇದು ಮಾತ್ರ ಸಲ್ಲದು. ಏಕೆಂದರೆ ಪರೀಕ್ಷಾ ಫಲಿತಾಂಶವೇ ಅಂತಿಮವಲ್ಲ. ಈ ವರ್ಷ ಕಡಿಮೆ ಅಂಕೆ ಬಂದರೆ ಮುಂದಿನ ತರಗತಿಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಿ ಹೆಚ್ಚು ಅಂಕ ಪಡೆದರಾಯಿತು ಅಲ್ಲವೇ?. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದರೆ ಮನೆಯಲ್ಲಿ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಎಂದು ಮನಸ್ಸಿನಲ್ಲಿ ಅಂದುಕೊಂಡಿರುತ್ತಾರೆ. ಜೊತೆಗೆ ಅವರು ಹೆಚ್ಚಾಗಿ ತಮ್ಮ ಇತರ ಸ್ನೇಹಿತರೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅವರು ಹೆಚ್ಚು ಅಂಕ ತೆಗೆದಿದ್ದಾರೆ ನನಗೆ ಕಡಿಮೆ ಅಂಕ ಬಂದಿದೆ ಅಥವಾ ಫೇಲಾಗಿದೆ ಮನೆಗೆ ಹೋದರೆ ಈಗ ತಂದೆ-ತಾಯಿಗಳು, ನೆಂಟರು ನನ್ನನ್ನು ಖಂಡಿತ ಬೈಯುತ್ತಾರೆ ಎಂದು ಆಲೋಚನೆ ಮಾಡುತ್ತಾರೆ. ವಿದ್ಯಾರ್ಥಿಗಳು ಈ ರೀತಿ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಮುಖ್ಯವಾಗಿ ತಂದೆ-ತಾಯಿಗಳು ಪರೀಕ್ಷೆ ಸಮಯದಲ್ಲಿ ಆಗಲಿ ಫಲಿತಾಂಶ ಬಂದ ನಂತರ ಆಗಲಿ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರಬಾರದು. ಹಲವು ವಿದ್ಯಾರ್ಥಿಗಳು ಟ್ಯೂಷನ್ ಗಳಿಗೆ ಸೇರಿರುವುದೇ ಇಲ್ಲ ಅವರೇ ಓದಿಕೊಂಡು ಹೆಚ್ಚಿನ ಅಂಕ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಟ್ಯೂಷನ್ಗೆ ಸೇರಿಸಿದ್ದರೂ ಕೂಡ ಕಡಿಮೆ ಅಂಕ ಬರುತ್ತವೆ. ಅಥವಾ ಉತ್ತಮ ಅಂಕ ಪಡೆದಿರುತ್ತಾರೆ. ಇದು ಹಲವು ವಿದ್ಯಾರ್ಥಿಗಳ ಸಮಸ್ಯೆ. 

ಜೊತೆಗೆ ಈಗಿನ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಪೋಷಕರಾದ ನಾವು ಅವರ ಏಕಾಗ್ರತೆ ಕಡಿಮೆಯಾಗಲು ಏನು ಕಾರಣ? ಎಂದು ಕಾರಣ ಹುಡುಕಬೇಕು. ಅವರು ಪ್ರಾರಂಭದಿಂದ ಅಂದಂದಿನ ಪಠ್ಯ ಸಂಬಂಧಿ ವಿಷಯಗಳನ್ನು ಓದುತ್ತಿದ್ದಾರೆಯೇ ಎಂದು ಗಮನಿಸಬೇಕು. ಆಯಾದಿನದ ಪಾಠಗಳನ್ನು ಅಂದೆ ಓದಿಕೊಂಡರೆ ಯಾವುದೇ ಪಠ್ಯ ಸಂಬಂಧಿ ವಿಷಯಗಳಲ್ಲಿ ಒತ್ತಡ ಆಗುವುದಿಲ್ಲ. 

ಯುದ್ಧಕಾಲದ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆ ಹತ್ತಿರ ಬಂದಾಗ ಕೆಲವು ವಿದ್ಯಾರ್ಥಿಗಳು ಓದುತ್ತಾರೆ. ಜೊತೆಗೆ ಪೋಷಕರು ಕೂಡ ಅದೇ ಸಮಯದಲ್ಲಿ ಅವರಿಗೆ ಒತ್ತಡ ಹಾಕುತ್ತಾರೆ.  ನಿದ್ದೆಗೆಟ್ಟು ಓದಲು ಸೂಚಿಸುತ್ತಾರೆ. ಐದು ನಿಮಿಷ ಕಳೆಯಲು ಕೂಡ ಬಿಡುವುದಿಲ್ಲ!. ಯಾವಾಗಲೂ ಓದು ಓದು ಓದು ಎನ್ನುವ ಮಾತೇ ಅವರ ಬಾಯಿಯಿಂದ ಬರುತ್ತದೆ. ಇದು ಹಲವರಿಗೆ ಇಷ್ಟವಾಗುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಒತ್ತಡಕ್ಕೆ ಒಳಗಾಗುತ್ತಾರೆ. ಬರುವ ಉತ್ತರಗಳು ಕೂಡ ಅವರಿಗೆ ಜ್ಞಾಪಕಕ್ಕೆ ಬರುವುದಿಲ್ಲ. 

PC: Internet

ವಿದ್ಯಾರ್ಥಿಗಳು ಕೂಡ ಈ ಸಮಯದಲ್ಲಿ ಬಹಳ ಎಚ್ಚರ ವಹಿಸಬೇಕು. ಪೋಷಕರು ನಮ್ಮನ್ನು ಕಷ್ಟಪಟ್ಟು ಓದಲು ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಾರೆ, ಅದರಿಂದಾಗಿ ನಮ್ಮ ಕರ್ತವ್ಯ ಓದುವುದು, ಉತ್ತಮ ಅಂಕ ಪಡೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪಠ್ಯ ಸಂಬಂದಿ ವಿಷಯ ಅವರೇ ಓದಬೇಕು. ಪಠ್ಯಪುಸ್ತಕ ಇತರ ಸಾಮಗ್ರಿಗಳನ್ನು ಪೋಷಕರು ಒದಗಿಸಿ ಕೊಡಬಹುದು. ಅದರಲ್ಲೂ ಫಲಿತಾಂಶದ ದಿನ ಪೋಷಕರು ಬಹಳ ಎಚ್ಚರ ವಹಿಸಬೇಕು. ಆ ದಿನ ಪಲಿತಾಂಶ ನೋಡಲು ಜೊತೆಯಲ್ಲಿ ತಾವು ಕೂಡ ಹೋಗಲೇಬೇಕು. ಒಂದು ವೇಳೆ ಕಡಿಮೆ ಅಂಕ ಬಂದರೆ ಅವರಿಗೇ ಮಾನಸಿಕವಾಗಿ ಧೈರ್ಯ ತುಂಬಬೇಕು. ಮುಂದಿನ ಬಾರಿ ಹೆಚ್ಚು ಅಂಕ ತೆಗೆದರಾಯಿತು ಎಂದು ಸಮಾಧಾನದ ಮಾತುಗಳನ್ನು ಹೇಳಿದರೆ ಅವನು ಪರೀಕ್ಷೆಯ ಫಲಿತಾಂಶದ ಒತ್ತಡದಿಂದ ಹೊರ ಬರುತ್ತಾರೆ. 

ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಓದುವುದು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಏಕೆಂದರೆ ಶೇಕಡ 90ರಷ್ಟು ಅಂಕ ಬಂದರೂ ಕೂಡ ಹಲವರಿಗೆ ಸಮಾಧಾನವೇ ಇರುವುದಿಲ್ಲ!.  ಇನ್ನು ನೆನಪಿದೆ…… ನನಗೆ ಗೊತ್ತಿರುವ ಮೇಡಂ ರವರ ಮಗಳು ಶೇಕಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 98 ರಷ್ಟು ಅಂಕ ಪಡೆದಿದ್ದರೂ ಕೂಡ ಎರಡು ಅಂಕಗಳು ಕಡಿಮೆಯಾಯಿತು ಎಂದು ಎರಡು ದಿನ ಊಟ ಮಾಡದೆ ಇದ್ದಳಂತೆ!. ನೋಡಿ ಮಕ್ಕಳಿಗೆ ಈಗ ನೂರಕ್ಕೆ ನೂರರಷ್ಟು ಅಂಕ ಪಡೆಯುವ ಕಾತುರ, ಆತುರ ಹೆಚ್ಚಾಗಿದೆ. ಜೊತೆಗೆ ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅದು ಅತಿ ಹೆಚ್ಚಾಗಬಾರದು ಅತಿಯಾದರೆ ಅಮೃತವು ವಿಷವಾಗುತ್ತದೆ ಅಲ್ಲವೇ?. ಈಗ ಸೆಮಿಸ್ಟರ್ ಪದ್ಧತಿ ಇರುವುದರಿಂದ ಅಧ್ಯಯನದ ಬಗ್ಗೆ ಹೆಚ್ಚಿನಹೊರೆಯಾಗುವುದಿಲ್ಲ. ವರ್ಷಪೂರ್ತಿ ಓದಿರುವ ವಿಷಯವನ್ನು ಕೇವಲ ಮೂರು ಗಂಟೆಯಲ್ಲಿ ಬರೆಯುವುದು ಅದೇ ಪರೀಕ್ಷೆ. ಆದರೂ ಕೂಡ ಈ ಹಂತದಲ್ಲಿ ನಾವು ಆತುರದ ನಿರ್ಧಾರ ತೆಗೆದುಕೊಳ್ಳದೆ, ಈ ಜೀವನ ವಿಶಾಲವಾದದ್ದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತು ಎಂದು ನಮ್ಮ ಜೀವವನ್ನೇ ಕಳೆದುಕೊಂಡರೆ ಅದಕ್ಕೆ ಉತ್ತರವಾದರೂ ಏನು ಬರುತ್ತದೆ. ನಾವು ಬದುಕಿ ಎಲ್ಲವನ್ನು ಸಾಧಿಸಬೇಕು. 

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವು ಅಂದರೆ ಪೋಷಕರು ಮಕ್ಕಳಿಗೆ ಕೇವಲ ಪಠ್ಯ ಸಂಬಂಧಿ ವಿಷಯಗಳನ್ನು ಮಾತ್ರ ಓದಲು ತಿಳಿಸುತ್ತೇವೆ. ಪಠ್ಯೇತರ ವಿಷಯಗಳ ಬಗ್ಗೆ ತಿಳಿಸುವುದೇ ಇಲ್ಲ. ಅವರಿಗೆ ಓದಿನ ಜೊತೆಗೆ ಉತ್ತಮ ಸಂಸ್ಕಾರ ಗುಣಗಳನ್ನು ಕೂಡ ತಿಳಿಸಲೇಬೇಕು. ಜೊತೆಗೆ ಮೊದಲಿಗೆ ಈ ಜೀವನ ಎಂದರೇನು? ಅಲ್ಲಿ ನಮಗೆ ಕಷ್ಟಗಳು ಬಂದಾಗ ಕುಗ್ಗದೆ…. ಸುಖ ಬಂದಾಗ ಹಿಗ್ಗದೆ….. ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿ, ಈ ಸಮಾಜದಲ್ಲಿ ನಾವು ಹೇಗೆ ಬದುಕಬೇಕು? ಸಮಸ್ಯೆಗಳು ಬಂದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು?, ದುಡಿಕಿ ನಿರ್ಧಾರ ತೆಗೆದುಕೊಳ್ಳಬಾರದು  ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಳ್ಳಬೇಕು.

ನಾನು ಮೊದಲೇ ಹೇಳಿದಂತೆ ಈಗಿನ  ಸ್ಪರ್ಧಾತ್ಮಕ ಪ್ರಪಂಚದಲ್ಲಿ ಓದು ಮುಖ್ಯವಾಗುತ್ತದೆ ನಿಜ. ಆದರೆ ಅನೇಕರು ಹೆಚ್ಚಾಗಿ ಓದದಿದ್ದರೂ ಕೂಡ  ಸಾಧನೆಗಳನ್ನು ಮಾಡಿದ್ದಾರೆ. ಉದಾಹರಣೆಗೆ ಡಾ ರಾಜಕುಮಾರ್, ಸಚಿನ್ ತೆಂಡೂಲ್ಕರ್, ಸಾಲು ಮರದ ತಿಮ್ಮಕ್ಕ…….. ಹೀಗೆ ಹಲವರನ್ನು ಹೆಸರಿಸಬಹುದು. ಕೆಲಸಕ್ಕೆ ಸರ್ಟಿಫಿಕೇಟ್ ಮಾನದಂಡ ಆಗಿದೆ. ಈಗ ನೂರಾರು ಕೆಲಸಗಳು ತೆರೆದುಕೊಂಡಿರುತ್ತವೆ. ನಿಮ್ಮ ಅಂಕಗಳಿಗೆ ತಕ್ಕಂತೆ ಮುಂದಿನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.  ನಮಗೆ ಸಿಗುವ ಶಿಕ್ಷಣ ಶಿಕ್ಷೆ ಆಗಬಾರದು, ಶಿಕ್ಷಣವನ್ನು ಬಹಳ ಖುಷಿ ಖುಷಿಯಿಂದ ಅಧ್ಯಯನ ಮಾಡಬೇಕು. ಶಿಕ್ಷಣದ ಜೊತೆಗೆ ನಮ್ಮ ಸುತ್ತಮುತ್ತಲಿನ ಜೀವನ ಕೌಶಲ್ಯದ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕು. 

ವಿದ್ಯಾರ್ಥಿಗಳು  ಸದಾಭಿರುಚಿಯ ಹವ್ಯಾಸಗಳನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಏಷ್ಟೋ ಹವ್ಯಾಸಗಳು ಓದಿಗೂ ಕೂಡ ವೇದಿಕೆಯಾಗಿರುತ್ತವೆ. ಮನರಂಜನೆ ಜೊತೆ ಜೊತೆಗೆ ಓದು ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಟಿವಿ ನೋಡುವುದನ್ನು, ಮೊಬೈಲ್ ನೋಡುವುದನ್ನು ಕಡಿಮೆ ಮಾಡಲೇಬೇಕು. ಏಷ್ಟೋ ಮನೆಗಳಲ್ಲಿ ಪೋಷಕರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಂತಕ್ಕೆ ಬಂದಾಗ ಟಿವಿ ಕೇಬಲ್ ಡಿಸ್ ಕನೆಕ್ಟ್ ಮಾಡಿರೋ ಉದಾಹರಣೆಗಳು ಇವೆ. ಓದಿಗೆ ಇದೇ ಕಾಲೇಜು, ಇದೆ ಟ್ಯೂಷನ್, ಇದೆ ಶಿಕ್ಷಕರು ಎನ್ನುವಂತೆ ನಿರ್ಧಾರವಾಗಬಾರದು. ಓದುವವನು ಯಾವ ಶಾಲೆಯಲ್ಲಿ ಆದರೂ ಕೂಡ ಚೆನ್ನಾಗಿ ಓದುತ್ತಾನೆ. ನಮ್ಮ ಸಂಬಂಧಿಕರ ಹುಡುಗ ಪ್ರಾಥಮಿಕ ಅಂತದಿಂದಲೂ ಕನ್ನಡ ಮಾಧ್ಯಮ ಓದಿ, ನಂತರ ಹೈಸ್ಕೂಲ್ ಅಂತದಲ್ಲಿ ಇಂಗ್ಲೀಷ್  ತರಗತಿಯನ್ನು ಓದುವುದರ ಮೂಲಕ ಪಿಯುಸಿ (ಸೈನ್ಸ್ ನಲ್ಲಿ) ಸರ್ಕಾರಿ ಶಾಲೆಯಲ್ಲಿ ಇಡೀ ಕಾಲೇಜಿಗೆ ಅತಿ ಹೆಚ್ಚು ಅಂಕಗಳನ್ನು ಪಡೆದ. 

ಆದುದರಿಂದ ದಯವಿಟ್ಟು ವಿದ್ಯಾರ್ಥಿಗಳಲ್ಲಿ ಒಂದು ಮನವಿ ಪರೀಕ್ಷೆ ಫಲಿತಾಂಶದಿಂದ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳದೆ, ತಂದೆ ತಾಯಿಯ ಜವಾಬ್ದಾರಿಯನ್ನು ಅರಿಯಬೇಕು. ಅವರಿಗೂ ನಿಮ್ಮ ಜೀವನವೂ ಕೂಡ ಮುಖ್ಯವಾಗಿರುತ್ತದೆ. ಅವರ ಮಾರ್ಗದರ್ಶನದಲ್ಲಿ ಮುನ್ನುಗ್ಗಬೇಕು. 

ಶಾಲಾ ಕಾಲೇಜಿನಲ್ಲೂ ಕೂಡ ಶಿಕ್ಷಕರು ಈಗ ಎಂದೆಂದಿಗಿಂತ ನಮ್ಮ ಸುತ್ತಮುತ್ತಲಿನ ಜೀವನ ಕೌಶಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲೇಬೇಕಾದ ಅನಿವಾರ್ಯ ಸ್ಥಿತಿ ಈಗ ಬಂದೊದಗಿದೆ. 

ಮನೆಯ ವಾತಾವರಣವೂ ಕೂಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಬಲ್ಲದು. ಮಕ್ಕಳೆದುರು ನಾವು ಟಿವಿ ನೋಡುವುದು, ಮೊಬೈಲ್ ನೋಡುವುದನ್ನು, ಜಗಳವಾಡುವುದನ್ನು, ಮನೆಯ ಸಮಸ್ಯೆಗಳನ್ನು ಹೇಳುವುದನ್ನು ಬಿಡಬೇಕು. ಅವರ ಬೇಕು ಬೇಡಗಳ ಬಗ್ಗೆ ಸ್ಪಂದಿಸಿ ಆರೋಗ್ಯಕರವಾಗಿ ಚರ್ಚೆ ಮಾಡಬೇಕು. ಆಗ ಮಾತ್ರ ವಿದ್ಯಾರ್ಥಿ-ಶಿಕ್ಷಕರು-ಪೋಷಕರ ನಡುವಿನ ಉತ್ತಮ ಬಾಂಧವ್ಯ, ಅಧ್ಯಯನ ಆರೋಗ್ಯಪೂರ್ಣವಾಗಿರುತ್ತದೆ. 

-ಕಾಳಿಹುಂಡಿ ಶಿವಕುಮಾರ್, ಮೈಸೂರು.

5 Responses

  1. ವಿದ್ಯಾರ್ಥಿ ಗಳು ಪರೀಕ್ಷೆ… ಯಾರ್ಯಾರ ಜವಾಬ್ದಾರಿ ಹೇಗಿದ್ದರೆ ಚೆನ್ನ ಹೇಗಿರಬೇಕು… ಎನ್ನುವ ಅಂಶದ ಬಗ್ಗೆ.. ಅನಾವರಣ ಗೊಳಿಸಿರುವ ಲೇಖನ ..ಚೆನ್ನಾಗಿ ದೆ ಸಾರ್

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ ಲೇಖನ

  3. Padmini Hegde says:

    ಸಕಾಲಿಕ ಲೇಖನ

  4. ಶಂಕರಿ ಶರ್ಮ says:

    ಇಂದಿನ ವಿದ್ಯಾರ್ಥಿಗಳಲ್ಲಿರುವ ಅಂಕ ಗಳಿಸುವ ಒತ್ತಡವು ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳನ್ನು ಅನಾವರಣಗೊಳಿಸಿದ ಸಂದೇಶಯುಕ್ತ ಲೇಖನ ಚೆನ್ನಾಗಿದೆ.

  5. ಪದ್ಮಾ ಆನಂದ್ says:

    ಪರೀಕ್ಷೆಗಳು ಕಳೆದು ಫಲಿತಾಂಶ ಪ್ರಕಟಗೊಂಡು ಮುಂದಿನಡಿಯಿಡುವ ಈ ಸಮಯಕ್ಕೆ ಸಂದರ್ಭೋಚಿತವಾದ ಸುಂದರ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: