ಮೌನದ ಸುತ್ತ

Share Button


ಡಿ.ವಿ.ಜಿ.ಯವರ ಕಗ್ಗರಿಂದ ಈ ಮೌನದ ಯಾತ್ರೆ ಪ್ರಾರಂಭಿಸುವುದು ಯೋಗ್ಯವೆನಿಸುತ್ತದೆ.

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟವನಾಡು
ರುಸೊಬ್ಬನೆ ಮೌನದೊಳಮನೆಯು ಶಾಂತಿಯಲಿ
ವರಯೋಗ ಸೂತ್ರವದು ಮಂಕುತಿಮ್ಮ


ಅಂದರೆ ಮನಸ್ಸೆಂಬ ಆಲಯದಲ್ಲಿ ಎರಡು ಕೋಣೆಗಳನ್ನು ಕಟ್ಟಿಸಿಕೋ ಹೊರಗಿನ ಕೋಣೆಯಲ್ಲಿ ಎಲ್ಲ ಲೋಕ ವ್ಯವಹಾರಗಳನ್ನು ಮಾಡು, ಒಳಗಡೆಯ ಕೋಣೆಯು ಒಬ್ಬನೇ ಶಾಂತಿಯ ಮೌನದಲಿ ವಿರಮಿಸು. ಎಷ್ಟು ಅರ್ಥಪೂರ್ಣವಾಗಿದೆ. ಹೀಗೆ ನಾವು ಅನೇಕ ಸಂದರ್ಭಗಳೆಲ್ಲ ಸನ್ನಿವೇಶಗಳಲ್ಲಿ ಮೌನ ಅಪೇಕ್ಷಣೀಯ. ಮೌನದ ಬಗ್ಗೆ ಹಲವಾರು ನಾಣ್ಣುಡಿಗಳು ಬಂದಿವೆ. ‘ಮೌನಂ ಸಮ್ಮತಿ ಲಕ್ಷಣಂ’ ‘ಮಾತು ಬೆಳ್ಳಿ ಮೌನ ಬಂಗಾರ’, ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’, ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ‘ಮೌನೇನ ಕಲಹಂ ನಾಸ್ತಿ’ ಇತ್ಯಾದಿ. ಆಂಗ್ಲ ಭಾಷೆಯಲ್ಲಿ ಒಂದು ಪ್ರಸಿದ್ಧವಾದ ಹೇಳಿಕೆ ಇದೆ.. A seed grows with no noise, but a tree falls with a huge noise indicating destruction has noise while creation is quite? ಎಂದು. ಅಂದರೆ ಸೃಷ್ಟಿಯಕಾಲ ಮೌನ, ನಾಶ ಸದ್ದು ಎಂದು. ನಿರ್ಮಲಾನಂದರು ಹೇಳುವಂತೆ ಮಾತು ಬಹಳ ಹಿಂಸೆ, ಮೌನ ನೆಮ್ಮದಿ, ಮೌನ ಸಾಕ್ಷಾತ್ಕಾರ ಎಂದಿದ್ದಾರೆ.

ಇನ್ನು ಯಾವಾಗ ಮೌನಿಗಳಾಗುವುದು ಉತ್ತಮ ಎಂಬ ಬಗ್ಗೆ ವಿಶ್ಲೇಷಣೆ ಅಗತ್ಯ. ತಮ್ಮಲ್ಲಿ ನಿಜಾಂಶ ಇಲ್ಲದ ವೇಳೆ ಮೌನ ಉತ್ತಮ. ಸತ್ಯಾಂಶಗಳನ್ನು ಪರಿಶೀಲನೆ ಮಾಡದ ಸಂದರ್ಭಗಳಲ್ಲಿ ಮೌನ ವಹಿಸುವುದು ಜಾಣತನ. ಇನ್ನು ನಮ್ಮ ಮಾತುಗಳಿಂದ ಯಾರಿಗಾದರೂ ನೋವಾಗುತ್ತಿದ್ದರೆ, ಅಪಹಾಸ್ಯಗಳ ಸಂದರ್ಭಗಳಲ್ಲಿ ಈ ಮೌನ ಸಹಕಾರಿ. ಬಹಳ ಕೋಪದಿಂದ ಇದ್ದಾಗ ಮೌನ ನಿಜಕ್ಕೂ ಬಹಳ ಪರಿಣಾಮಕಾರಿ. ಮಹಾಭಾರತದಲ್ಲಿ ಯುದ್ಧಾ ನಂತರ ಕೃಷ್ಣ ಗಾಂಧಾರಿಯನ್ನು ಭೇಟಿಯಾದಾಗ ಗಾಂಧಾರಿ ಕೋಪವನ್ನು ನಿಗ್ರಹಿಸಿ ಮೌನ ವಹಿಸಿದ್ದರೆ ಯದುವಂಶಗಳ ನಿರ್ನಾಮ ಕೃಷ್ಣನ ಸಂತಾನ ನಿರ್ವಂಶ ಇತ್ಯಾದಿ ಶಾಪಗಳನ್ನು ಕೊಡುವ ಪ್ರಮೇಯ ಇರುತ್ತಿರಲಿಲ್ಲವೇನೋ. ಹಾಗೆಯೇ ದ್ರೌಪದಿ, ದುರ್ಯೋಧನ ಬಂದಾಗ ಅರಮನೆಯ ವಿಚಿತ್ರವಾದ ವಿನ್ಯಾಸದಿಂದ ಬಿದ್ದಾಗ ನಗದೆ ಸಂಯಮ ವಹಿಸಿ ಮೌನಧಾರಿಯಾಗಿದ್ದರೆ ಮಹಾಭಾರತ ಅಲ್ಲೇ ಕೊನೆಗೊಳ್ಳುತ್ತಿತ್ತೇನೋ! ಇನ್ನು ಸುಭದ್ರೆ ತನ್ನ ಮಗ ಅಭಿಮನ್ಯುವನ್ನು ಕಳೆದುಕೊಂಡಾಗ ಸಂತಾಪ, ಪುತ್ರ ಶೋಕವನ್ನೆಲ್ಲ ಮೌನವಾಗಿ ಕಳೆದದ್ದು ಅವಳ ಪಾತ್ರದ ಹಿರಿಮೆ.

ದೂರ್ವಾಸಮುನಿಗಳು ತಮ್ಮ ಪರಿವಾರದೊಂದಿಗೆ ಯಾದವರಿಂದ ಅವಮಾನಿತರಾಗಿ ಬಂದಾಗ ಕೃಷ್ಣ ಅವರಿಗೆ ಊಟೋಪಚಾರ, ವಸ್ತ್ರಗಳನ್ನು ನೀಡಿ ಗೌರವಿಸುತ್ತಾನೆ. ಆಗ ದೂರ್ವಾಸರು ಊಟ ಮಾಡಿ ಉಳಿದ ಎಂಜಲನ್ನು ಕೃಷ್ಣನ ಮೈಗೆ ಪೂಸಿಕೋ ಎನ್ನುತ್ತಾರೆ. ಕೃಷ್ಣ ಮರುಮಾತನಾಡದೆ ಮೈಯೆಲ್ಲ ಪೂಸಿ ಕಾಲುಭಾಗದ ಬೆರಳುಗಳನ್ನು ಮಾತ್ರ ಬಿಡುತ್ತಾನೆ, ದೂರ್ವಾಸರ ಮೇಲಿನ ಅಭಿಮಾನದಿಂದ. ದೂರ್ವಾಸರು ಇದರಿಂದ ಕೃದ್ಧರಾಗಿ ನಿನಗೆ ನಿನ್ನ ಬೆರಳುಗಳಿಂದಲೇ ಅಂತ್ಯ ಕಾಣಲಿ ಎಂದು ಶಾಪ ನೀಡುತ್ತಾರೆ. ಅವರು ಕೆಲಕಾಲ ಮೌನಿಗಳಾಗಿದ್ದರೆ ಕೃಷ್ಣನ ಜೀವ ಉಳಿದಿರುತ್ತಿತ್ತೇನೋ? ಆಮೇಲೆ ದೂರ್ವಾಸರು ಅದಕ್ಕಾಗಿ ಪರಿತಪಿಸುತ್ತಾರೆ.

ಇನ್ನು ನಾವು ಕೇಳಿಸಿಕೊಳ್ಳುತ್ತಿರುವಾಗ ಮೌನವಾಗಿರುವುದು ಲೇಸು. ಆ ವಿಷಯದಲ್ಲಿ ಧರ್ಮರಾಯ ನಿಜಕ್ಕೂ ಅಭಿನಂದನಾರ್ಹ. ಪಗಡೆಯಾಟದಲ್ಲಿ ಎಲ್ಲಾ ಸೋತು ಎಲ್ಲರೂ ಅಪಹಾಸ್ಯ ಮಾಡಿದರೂ ಮೌನಕ್ಕೆ ಶರಣಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದ.
ಇನ್ನು ನಾವಾಡಿದ ಮಾತು ನಾವೇ ನಾಚಿ ಮುಜುಗರ ಪಟ್ಟುಕೊಳ್ಳು ವಂತಾಗಿದ್ದರೆ ಆಗಲೂ ಮೌನವೇ ಲೇಸು. ಅಲ್ಲದೆ ನಾವಾಡಿದ ಮಾತು ತಪ್ಪು ಸಂದೇಶ ರವಾನಿಸುವಂತಿದ್ದರೂ ಮೌನವೇ ಉತ್ತಮ. ನಮಗೆ ಸಂಬಂಧಪಡದ, ಅನ್ವಯವಾಗದ, ದೊಡ್ಡ ಸುಳ್ಳನ್ನು ಹೇಳಬೇಕಾಗಿ, ಪ್ರಚೋದನೆ, ಪ್ರಲೋಭನೆ ಬಂದಾಗಲೂ ಮೌನ ನಿಜಕ್ಕೂ ಒಳ್ಳೆಯ ಅಸ್ತ್ರ.

ನಮ್ಮ ಮಾತುಗಳಿಂದ ಯಾರದಾದರೂ ಗೌರವ ಪ್ರತಿಷ್ಠೆಗೆ ಕುಂದು ಉಂಟಾಗುವಂತಿದ್ದರೆ, ಗೆಳೆತನಕ್ಕೆ ಧಕ್ಕೆ ಬರುವಂತಿದ್ದರೆ ಮೌನ ಸಹಕಾರಿ. ಪರಿಸ್ಥಿತಿಯನ್ನು ತಹಬಂದಿಗೆ ತಿಳಿಗೊಳಿಸಲು ಒಳ್ಳೆಯ ದಾರಿ. ಒಂದೊಮ್ಮೆ ದುಷ್ಟರನ್ನು, ದುರುಳರನ್ನು ಹೊಗಳಬೇಕಾಗಿ ಬಂದರೂ ಮೌನವಾಗಿರುವುದು ಒಳ್ಳೆಯದು. ಕೆಲಸ ಮಾಡುವ ಸಮಯದಲ್ಲಿ ಮೌನ ಅತ್ಯಂತ ಫಲಕಾರಿ. ಇದರಿಂದ ಉತ್ಪನ್ನ ಹೆಚ್ಚಾಗಬಹುದು ಹಾಗೂ ಅಪಘಾತಗಳು ಇಲ್ಲವಾಗ ಬಹುದು. ಕೆಲಸದಲ್ಲಿ ಒಂದು ಏಕಾಗ್ರತೆ ಸೃಷ್ಟಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ದ್ವೇಷಗಳನ್ನು ನಿಭಾಯಿಸುವಲ್ಲಿ ನಗು ಹೇಗೆ ಸಾಧನವಾಗುವುದೋ ಹಾಗೆ ವಾಗ್ವಾದಗಳನ್ನು ತಿಳಿಗೊಳಿಸಲು ಮೌನ ನಿಜವಾದ ಪ್ರಬಲ ಅಸ್ತ್ರ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ಮೌನ ಮೂರ್ಖರಿಗೆ ನೀಡಬಹುದಾದ ಒಂದು ಪ್ರಬಲ ಅಸ್ತ್ರ. ಸ್ವಾಮಿ ನಿರ್ಮಲಾನಂದರು ಮಾತು ಬಹಳ ಹಿಂಸೆ, ಮೌನ ನೆಮ್ಮದಿ, ಮೌನ ಸಾಕ್ಷಾತ್ಕಾರ ಎಂದು ಹೇಳಿದ್ದು ತಮ್ಮ ಸ್ವಾನುಭವದಿಂದ ಎನ್ನದೆ ವಿಧಿಯಿಲ್ಲ. ಮೌನದ ಮಹತ್ವ ಗೊತ್ತಾದರೆ ಮಾತು ಹೆಚ್ಚು ಅರ್ಥವಂತಿಕೆ ಪಡೆಯುತ್ತ ಹೋಗುತ್ತದೆ. ಮೌನವಿದ್ದಲ್ಲಿ ಕಲಹ ಇರಲು ಸಾಧ್ಯವೇ ಇಲ್ಲ. ಇದನ್ನು ನಾವು ಬಹಳ ಸಂಸಾರಗಳಲ್ಲಿ ನೋಡುತ್ತೇವೆ. ಪತಿ ಅಥವಾ ಪತ್ನಿ ಮೌನಕ್ಕೆ ಶರಣಾದರೆ ಆಗ ಅನಾಯಾಸವಾಗಿ ಒಂದು ಯುದ್ಧ ವಿರಾಮ ಘೋಷಿಸಿದ ವಾತಾವರಣ ಏರ್ಪಡುತ್ತದೆ. ಇದೊಂದು ಯುದ್ಧ ತಂತ್ರವಿದ್ದಂತೆ. ಉದ್ವೇಗದ ಮಾತಿನ ಚಕಮಕಿಯಲ್ಲಿ ಬುದ್ಧಿವಂತಿಕೆಯಿಂದ ಉಪಯೋಗಿಸಿ ಗೆಲ್ಲುವ ಸಾಧನ ಈ ಮೌನ ಎಂದರೆ ತಪ್ಪಾಗಲಾರದೇನೋ. ಕುಟುಂಬದಲ್ಲಿ ಸಾಮರಸ್ಯ ತರಲು ಈ ಮೌನ ಬಹಳ ಫಲಕಾರಿ.

ಪ್ರಾಣಿಗಳು, ಪಕ್ಷಿಗಳು ಮಾತಾಡುವುದಿಲ್ಲ. ಆಫ್ರಿಕಾದ ಝುಲು ಪ್ರಾಂತ್ಯದಲ್ಲಿರುವ ಹಲವು ಕಾಡು ಜನರಿಗೆ ಮಾತು ಬರುವುದಿಲ್ಲ. ಅವರಿಗೂ ಪ್ರಾಣಿಗಳಿಗೂ ವ್ಯತ್ಯಾಸವೇ ಇಲ್ಲ. ಆದರೂ ಸೋಜಿಗವೆಂದರೆ ಅವರಿಗೆ ಮಾತಿನ ಅಗತ್ಯವೇ ಕಂಡುಬಂದಿಲ್ಲ. ಮೌನವೇ ಅವರ ಭಾಷೆ. ಅಚ್ಚರಿಯಲ್ಲವೇ? ರೂಮಿಯವರ ಪ್ರಕಾರ ‘Listen to Silence, it has so much to say.  Silence is not empty it has full of answers. Work hard in silence let success make the noise’ ಎಷ್ಟು ಅರ್ಥಗರ್ಭಿತವಲ್ಲವೇ? ನಮ್ಮನ್ನು ಮೊಬೈಲ್ ನಿಯಂತ್ರಿಸುವ ಈ ದಿನಗಳಲ್ಲಿ ಮೌನದ ಮಹತ್ವವನ್ನು ಇನ್ನಾದರೂ ಅರಿತುಕೊಳ್ಳಬೇಕಿದೆ. ಮಾತಿನಿಂದ ಕರೋನಾ ಸೋಂಕು ಹರಡುತ್ತದೆ ಎಂಬ ವಕ್ರತುಂಡೋಕ್ತಿ ಇದೆ.

ಇನ್ನು ಮೌನದ ಉಪಯೋಗಗಳೇನು ಎಂದು ಯಾರಾದರೂ ಪ್ರಶ್ನಿಸಿದರೆ, ಅದಕ್ಕೆ ಉತ್ತರ ಮೌನವೇ ಸಾಟಿ. ಕಾರಣ ಮೌನದಿಂದ ಆಗುವ ಉಪಯೋಗಗಳು ಹಲವಾರು. ನಮ್ಮ ಆರೋಗ್ಯದಲ್ಲಿ ಚೇತರಿಕೆ, ತಾಳ್ಮೆ, ಸಂಯಮ ಇವುಗಳ ವೃದ್ಧಿ ನಿಜಕ್ಕೂ ಆಗುತ್ತದೆ. ಆದ್ದರಿಂದಲೇ ಋಷಿಮುನಿಗಳು, ಘನಪಾಠಿಗಳು, ವಿದ್ವಾಂಸರು ಈ ಗುಣಗಳನ್ನು ಹೊಂದಿರುವುದು ಕಾಣಬರುತ್ತದೆ. ಮೌನ ನಮ್ಮಲ್ಲಿರುವ ಒತ್ತಡ ಗುಣಗಳನ್ನು ಸಾಕಷ್ಟು ಪರಿಹರಿಸುತ್ತದೆ.

ಮಧ್ವಾಚಾರ್ಯರು ಕಾಷ್ಠ ಮೌನವನ್ನು ಆಚರಿಸುತ್ತಿದ್ದರು ಎಂಬ ಮಾತಿದೆ.
ಕಾಷ್ಠಮೌನಂ ಅಭಾಷಣ ವ್ರತಂ ಲೌಕಿಕ ಭಾಷಣ
ವರ್ಜನ ರೂಪಂ ಮೌನಂ ಚಕಾರ

ಅಂದರೆ ಆಚಾರ್ಯರು ಕೇವಲ ಮಾತನಾಡುವುದನ್ನು ಬಿಟ್ಟರು ಎಂದಲ್ಲ ಲೌಕಿಕ ಮಾತುಗಳನ್ನು ಬಿಟ್ಟರು ಎಂದು. ಆದರೆ ಮನಸ್ಸಿನಲ್ಲಿ ನಾರಾಯಣನ ಸ್ಮರಣೆ ಇತ್ತು. ಪಾಠಗಳನ್ನು ಹೇಳುತ್ತ ಭಗವಂತನನ್ನು ಸ್ಮರಿಸುತ್ತಿದ್ದರು. ಇದೂ ಒಂದು ತರದ ಮೌನವಲ್ಲವೇ?

ಮೌನ ಇದ್ದಲ್ಲಿ ಕಲಹ ಇರಲು ಸಾಧ್ಯವಿಲ್ಲ. ಮೌನವಾಗಿ ಇರಲಾರದವನು ಮಾತನಾಡುತ್ತಾನೆ. ಮಾತನಾಡಲು ಬಾರದವನು ಜಗಳವಾಡುತ್ತಾನೆ. ಜಗಳವಾಡಲು ಬಾರದವನು ಹೊಡೆದಾಡುತ್ತಾನೆ. ಹೊಡೆದಾಡಲು ಬಾರದವನು ಯುದ್ಧಕ್ಕೆ ನಿಲ್ಲುತ್ತಾನೆ. ಆಗ ಸಾವು ನೋವು ಉಂಟಾಗುತ್ತದೆ. ಮೌನ ಇವೆಲ್ಲವನ್ನೂ ನಿಯಂತ್ರಿಸಬಲ್ಲದಲ್ಲವೇ?

ಒಂದು ಮೌನದ ಬಗ್ಗೆಯ ಸುಭಾಷಿತದೊಂದಿಗೆ ಈ ಲೇಖನಕ್ಕೆ ಪೂರ್ಣವಿರಾಮ ಹಾಕೋಣವೇ?
ಮೌಖರ್ಯಂ ಲಾಘವ ಕರಂ
ಮೌನ ಮುನ್ನತಿಕಾರಕಂ
ಮುಖರಂ ನೂಪುರಂ ಪಾದೇ
ಕಂಠೇ ಹಾರೋ ವಿರಾಜಿತೆ

ಅಂದರೆ ಅತಿಯಾದ ಮಾತುಗಳು ಅವನತಿಯನ್ನುಂಟುಮಾಡುತ್ತವೆ. ಮೌನ ಉನ್ನತಿ ತರುತ್ತದೆ. ಸದ್ದು ಮಾಡುವ ಗೆಜ್ಜೆಗೆ ಕಾಲಿನಲ್ಲಿ ಸ್ಥಾನವಾದರೆ ಮೌನವಾಗಿರುವ ಹಾರವು ಕೊರಳಿನ ಮೇಲೆ ವಿರಾಜಿಸುತ್ತದೆ.

ಎಂಥಹ ಅದ್ಭುತವಾದ ಸುಭಾಷಿತ. ಮೌನದ ಬೆಲೆಯನ್ನು ಒಂದು ಸಾಲಿನಲ್ಲಿ ನೀಡಿದೆ. ನಾವೆಲ್ಲರೂ ದಿನದ ಕೆಲವು ಘಳಿಗೆಯಾದರೂ ಮೌನಾಚರಣೆ ಮಾಡಿದರೆ ನಿಜಕ್ಕೂ ನಮಗೂ, ಪರರಿಗೂ ಉಪಯೋಗ ಅಲ್ಲವೇ? ನೀವೇನಂತೀರಿ?

ಕೆ.ರಮೇಶ್, ಮೈಸೂರು

5 Responses

  1. ಮೌನದ ಸುತ್ತಾ..ಒಂದುಸುತ್ತು ಓದಿಕೊಂಡು ಬಂದೆವು..
    ಹಾಗೇ ಮಾತನಾಡದೆ…ಬರೆವಣಿಗೆಯಲ್ಲಿ ಉತ್ತರ… ಹೀಗೆ ಉತ್ತರ ಚೆಂದದ ಬರವಣಿಗೆ..ಸಾರ್..

  2. ನಯನ ಬಜಕೂಡ್ಲು says:

    ಯಾವುದೇ ವಿಷಯವಿರಲಿ ಬಹಳ ಚಂದ ಬರೆಯುತ್ತೀರಿ ಸರ್.

  3. ಪದ್ಮಾ ಆನಂದ್ says:

    ʼಮೌನಂ ಪಂಡಿತ ಲಕ್ಷಣಂʼ ಎಂಬಂತೆ ಮೌನದ ಪ್ರಭಾವ ಮತ್ತು ಉಪಯೋಗಗಳನ್ನು ಉದಹಾರಣೆಗಳೊಂದಿಗೆ ನೀಡಿದ ಲೇಖನಕ್ಕೆ ಒಂದು ಮೌನ ನಮನ.

  4. ಶಂಕರಿ ಶರ್ಮ says:

    ಮೌನದ ಮೌಲ್ಯವನ್ನು ಮನಕ್ಕೆ ಮುಟ್ಟುವಂತೆ ಸಾದರಪಡಿಸಿರುವಿರಿ, ತಮ್ಮ ಮೌಲ್ಯಯುತ ಲೇಖನದ ಮೂಲಕ…ಧನ್ಯವಾದಗಳು.

  5. ಮೌನದ ಮೌಲ್ಯವನ್ನು ಬಿಂಬಿಸುವ ಈ ಲೇಖನತುಂಬಾ ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: