ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಾಂಬೋಡಿಯಾ ಮತ್ತು ವಿಯೆಟ್ನಾಂ

ನಮ್ಮ ಮುಂದಿನ ಪ್ರವಾಸೀ ತಾಣ ವಿಶ್ವ ಪಾರಂಪರಿಕ ತಾಣವಾದ – ಸಂಗ್ ಸಾಟ್ (Sung Sot) ಎಂದು ಖ್ಯಾತವಾದ ಸುಣ್ಣಕಲ್ಲಿನ ಗುಹೆ. ರಾತ್ರಿಯಿಡೀ ಈ ಗುಹೆಯ ವರ್ಣನೆ ಮಾಡುತ್ತಿದ್ದ ಗಿರಿಜಕ್ಕ, ಅದನ್ನು ತಲುಪಲು ಇದ್ದ ನೂರು ಮೆಟ್ಟಿಲುಗಳನ್ನು ತನ್ನಿಂದ ಏರಲು ಸಾಧ್ಯವೇ, ಮೆಟ್ಟಿಲುಗಳಿಗೆ ರೈಲಿಂಗ್ಸ್ ಇವೆಯೇ ಎಂದು ಎಲ್ಲರ ಬಳಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಿದ್ದಳು. ಅವಳ ಮಾತುಗಳನ್ನು ಆಲಿಸುತ್ತಿದ್ದವರ ಮನದಲ್ಲಿ ಆತಂಕದ ಜೊತೆಗೇ ಉತ್ಸಾಹವೂ ಇಮ್ಮಡಿಯಾಗಿತ್ತು. ಕ್ರೂಸ್‌ನಲ್ಲಿ ಕುಳಿತು ನಯನ ಮನೋಹರವಾದ ವಿವಿಧ ಆಕಾರಗಳಲ್ಲಿ ಎದ್ದು ನಿಂತ ನೂರಾರು ದ್ವೀಪಗಳನ್ನು ವೀಕ್ಷಿಸುತ್ತಿದ್ದವು. ಇದೊಂದು ಅತ್ಯದ್ಭುತವಾದ ಅನುಭವವಾಗಿತ್ತು – ನಮ್ಮ ಮುಂದೆ ಇದ್ದ ಎರಡು ಬಂಡೆಗಳು ಒಂದನ್ನೊಂದು ಚುಂಬಿಸಲು ಕಾತುರರಾಗಿದ್ದಂತೆ ಕಂಡರೆ, ದೂರದಲ್ಲಿದ್ದ ಕಡಿದಾದ ಬಂಡೆಯೊಂದು, ‘ನೋಡು ನನ್ನನ್ನು, ಆಗಸದೆತ್ತರಕ್ಕೆ ಬೆಳೆದು ನಿಂತಿರುವೆ’ ಎಂದು ಹೇಳುವಂತೆ ತೋರುತ್ತಿತ್ತು. ಮತ್ತೊಂದು ಬಂಡೆಯು ವಿಶಾಲವಾಗಿದ್ದು, ‘ನಾನು ಹತ್ತು ಹಲವು ಜೀವರಾಶಿಗಳಿಗೆ ತವರೂರಾಗಿರುವೆ, ಬಾ ಒಮ್ಮೆ ನನ್ನನ್ನು ನೋಡು’ ಎಂದು ಕರೆಯುವಂತೆ ಭಾಸವಾಗುತ್ತಿತ್ತು. ಹೀಗೆ ನಿಸರ್ಗದ ಚೆಲುವನ್ನು ನೋಡುತ್ತಾ ಮೈಮರೆತವಳನ್ನು ನಮ್ಮ ಗೈಡ್‌ನ ಕರೆ ಎಚ್ಚರಿಸಿತ್ತು. ಯುನೆಸ್ಕೋದಿಂದ ಗುರುತಿಸಲ್ಪಟ್ಟ ಪ್ರವಾಸೀ ತಾಣವಾದ ಸಂಗ್ ಸಾಟ್ ಗುಹೆಯನ್ನು ತಲುಪಿದ್ದೆವು.

ಸುಣ್ಣದ ಕಲ್ಲಿನ ಗುಹೆಗಳನ್ನು ಇಂಗ್ಲೆಂಡ್, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ದಕ್ಷಿಣ ಆಫ್ರಿಕಾದಲ್ಲಿ ನೋಡಿದ್ದೆ ಆದರೆ ವಿಯೆಟ್ನಾಮಿನ ವಿಶ್ವ ಪಾರಂಪರಿಕ ತಾಣವಾದ ಸಂಗ್ ಸಾಟ್ ಗುಹೆಯ ಅಂದಚೆಂದವನ್ನು ಬಣ್ಣಿಸಲು ಪದಗಳನ್ನು ಎಲ್ಲಿಂದ ಹುಡುಕಿ ತರಲಿ? ಕಡಿದಾದ ಸುಮಾರು ನೂರು ಮೆಟ್ಟಿಲುಗಳನ್ನು ಏರಿದ ಮೇಲೆಯೇ ಈ ಸುಣ್ಣದ ಕಲ್ಲಿನ ಗುಹೆಯ ದರ್ಶನಭಾಗ್ಯ. ಈ ಗುಹೆಯನ್ನು ಮೊದಲು ಪತ್ತೆ ಹಚ್ಚಿದ ಫ್ರಾನ್ಸ್ ದೇಶದ ಪ್ರವಾಸಿಗನು ಸಂಗ್ ಸಾಟ್ ಅಂದರೆ ‘ಬೆರಗು ಮೂಡಿಸುವ ಗುಹೆ’ ಎಂದು ಕರೆದ. ಗುಹೆಯ ಪ್ರವೇಶ ಮಾಡಿದವರೆಲ್ಲಾ, ‘ಅಬ್ಬಾ ಎಂತಹ ಸುಂದರವಾದ ದೃಶ್ಯ ಎಂದು ಉದ್ಗಾರ ಮಾಡುವವರೇ’. ಗುಹೆಯೊಳಗಿರುವ ಕಲಾಕೃತಿಗಳನ್ನು ನಿರ್ಮಾಣ ಮಾಡಿದ ಶಿಲ್ಪಿ ನಿಸರ್ಗ ದೇವತೆ, ಕೇವಲ ನೀರು ಮತ್ತು ಕಲ್ಲಿನಿಂದ ಇಂತಹ ಅದ್ಭುತ ಶಿಲ್ಪಗಳನ್ನು ರಚಿಸಲು ಪ್ರಕೃತಿಮಾತೆ ತೆಗೆದುಕೊಂಡ ಸಮಯವೆಷ್ಟು ಗೊತ್ತೆ? ಹಲವಾರು ಮಿಲಿಯನ್ ವರ್ಷಗಳು. ಈ ಬೆರಗು ಹುಟ್ಟಿಸುವ ಗುಹೆಯನ್ನು ಅಲಂಕರಿಸಲು ರಂಗು ರಂಗಿನ ದೀಪಾಲಂಕಾರ ಮಾಡಲಾಗಿತ್ತು. ಗುಹೆಯ ಒಳಗೆ ಕಂಡ ಶಿಲ್ಪಗಳು ಅವರವರ ಭಾವಕ್ಕೆ ಅವರವರ ಕಲ್ಪನೆಗೆ ಹೊಂದುವಂತಿದ್ದವು. ಸುಮಾರು ಎರಡು ಸಾವಿರ ಚದರ ಮೀಟರ್ ವಿಸ್ತಾರವಾಗಿರುವ ಈ ಗುಹೆಯಲ್ಲಿ ಎರಡು ಅಂಕಣಗಳಿದ್ದು, ಮುಂದಿದ್ದ ಹಜಾರದಲ್ಲಿ ಮೇಲ್ಛಾವಣಿಯಿಂದ ಇಳಿಬಿದ್ದ ದೀಪದ ಗೊಚಲುಗಳಂತೆ ತೋರುವ ಸ್ಟಾಲಗ್‌ಮೈಟ್ಸ್ ಈ ಗುಹೆಯ ಅಂದವನ್ನು ಹೆಚ್ಚಿಸಿತ್ತು. ಹಿಂದಿದ್ದ ಹಜಾರದಲ್ಲಿ ಸುಮಾರು ಒಂದು ಸಾವಿರ ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇತ್ತು. ಇದು ಫ್ರಾನ್ಸ್ ದೇಶದವರ ‘ಒಪೇರಾ ಹೌಸ್’ ಹೋಲುತ್ತಿತ್ತು. ಈ ಗುಹೆಯ ಗೋಡೆಗಳನ್ನು ಯಾವುದೊ ಅಲೌಕಿಕ ಶಕ್ತಿಯು ರಚಿಸಿದಂತೆ ತೋರುತ್ತಿತ್ತು, ಮೇಲ್ಛಾವಣಿಯನ್ನು ಅಂದಗಾಣಿಸಲು ನೂರಾರು ಶಿಲ್ಪಿಗಳು ಹಗಲಿರುಳೆನ್ನದೆ ಕೆತ್ತಿದಂತೆ ಗೋಚರವಾಗುತ್ತಿತ್ತು.
ಇಲ್ಲೊಂದು ಕುದುರೆಯಾಕೃತಿಯಲ್ಲಿ ಕಾಣುವ ಶಿಲ್ಪ ಹಾಗು ಕತ್ತಿಯಾಕಾರದಲ್ಲಿ ಇರುವ ಶಿಲ್ಪ ಎಲ್ಲರನ್ನೂ ಆಕರ್ಷಿಸಿದ್ದವು. ಈ ಸ್ಟಾಲಕ್ಟೈಟ್ಸ್ ಒಂದು ರೋಚಕವಾದ ದಂತಕಥೆಯನ್ನು ಹೇಳುತ್ತಿತ್ತು – ಒಮ್ಮೆ ತಾನ್ ಗೊಂಗ್ ಎಂಬ ವೀರನು ಚೈನಾದವರೊಂದಿಗೆ ಹೋರಾಡಿ ಅವರನ್ನು ಸದೆ ಬಡಿದ ನಂತರ ತನ್ನ ಲೋಕಕ್ಕೆ ಹಾರಿಹೋದನಂತೆ. ಆದರೆ ತನ್ನ ಅನುಯಾಯಿಗಳನ್ನು ರಕ್ಷಿಸಲು ತನ್ನ ಮಾಂತ್ರಿಕ ಶಕ್ತಿಯುಳ್ಳ ಕುದುರೆ ಹಾಗು ಕತ್ತಿಯನ್ನು ಅಲ್ಲಿಯೇ ಬಿಟ್ಟು ಅದೃಶ್ಯನಾದನಂತೆ. ಇಂದಿಗೂ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಈ ಕುದುರೆ ಹಾಗೂ ಕತ್ತಿ ಟೊಂಕ ಕಟ್ಟಿ ನಿಂತಿವೆ. ಗುಹೆಯ ನೆಲದ ಮೇಲೆ ಕಾಣುವ ಗೊರಸಿನ ಗುರುತು ತಾನ್ ಗೊಂಗ್‌ನ ಕುದುರೆಯದ್ದೇ ಎಂದು ಗೈಡ್ ಧೃಡೀಕರಿಸುತ್ತಿದ್ದ. ಅಲ್ಲಿಯೇ ಬೀಡು ಬಿಟ್ಟಿದ್ದ ಫೋಟೋಗ್ರಾಫರ್ ಬಳಿ ಫೋಟೋ ತೆಗೆಸಿಕೊಲ್ಳಲು ಎಲ್ಲರೂ ಸರತಿ ಸಾಲಿನಲ್ಲಿ ನಿಂತೆವು.

ಈ ಸಾಗರದ ಮಡಿಲಲ್ಲಿ ಸುಮಾರು 1970 ದ್ವೀಪಗಳಿದ್ದು, ಸಮುದ್ರದ ಗರ್ಭದಿಂದ ಉದಯಿಸಲು ಈ ದ್ವೀಪಗಳಿಗೆ ಸುಮಾರು ಐನೂರು ಮಿಲಿಯನ್ ವರ್ಷಗಳೇ ಆಗಿರಬಹುದೆಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನು ಈ ದ್ವೀಪಗಳಲ್ಲಿರುವ ಬಂಡೆಗಳೊಳಗೆ ಸಮುದ್ರದ ನೀರು ನುಗ್ಗಿ ಈ ಸುಣ್ಣದ ಕಲ್ಲಿನ ಗುಹೆಗಳ ರಚನೆಯಾಗಲು ಇಪ್ಪತ್ತು ಮಿಲಿಯನ್ ವರ್ಷಗಳೇ ಉರುಳಿರಬಹುದು ಎಂದೂ ವಿಜ್ಞಾನಿಗಳು ಹೇಳುತ್ತಾರೆ. ಈ ದ್ವೀಪಗಳಲ್ಲಿ ಸುಮಾರು 24 ವೈವಿಧ್ಯಮಯ ಸಸ್ಯ ಪ್ರಬೇಧಗಳಿದ್ದು, 60 ಪ್ರಾಣಿ ಸಂಕುಲಗಳಿವೆಯೆಂದು ಜೀವಶಾಸ್ತ್ರಜ್ಞರು ದಾಖಲಿಸಿದ್ದಾರೆ. ಹಲವಾರು ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಆದಿಮಾನವನು ವಾಸಿಸುತ್ತಿದ್ದ ಎಂಬ ಸಾಕ್ಷ್ಯಾಧಾರಗಳನ್ನು ಪುರಾತತ್ವಶಾಸ್ತ್ರಜ್ಞರು ನೀಡುತ್ತಾರೆ. ಈ ದ್ವೀಪಗಳ ಹಿಂದಿರುವ ಐತಿಹ್ಯವು ರೋಚಕವಾಗಿದೆ – ಈ ಪ್ರದೇಶದಲ್ಲಿ ಹಲವಾರು ಅಸುರರು ಇದ್ದು ಅಮಾಯಕರಿಗೆ ಸದಾ ಕಿರುಕುಳ ನೀಡುತ್ತಿದ್ದರಂತೆ. ಅವರ ಪ್ರಾರ್ಥನೆಗೆ ಓಗೊಟ್ಟ ದೇವರು, ದುಷ್ಟರನ್ನು ನಾಶಪಡಿಸಿ, ಶಿಷ್ಟರನ್ನು ರಕ್ಷಿಸಲು ಒಂದು ಹಿಡಿ ಕಲ್ಲುಗಳನ್ನು ತೂರಿದನಂತೆ. ಆ ಕಲ್ಲುಗಳೇ ಬೃಹದಾಕಾರವಾಗಿ ಬೆಳೆದು ಸಾಗರದ ಮಧ್ಯೆ ನಿಂತಿವೆ, ಆ ಕಲ್ಲುಗಳ ಮಧ್ಯೆ ಬೆಳೆದು ನಿಂತಿರುವ ಗಿಡ ಮರಗಳು, ಜೀವ ಸಂಕುಲಕ್ಕೆ ಆಶ್ರಯ ನೀಡಿದ್ದು ಅಲ್ಲೊಂದು ದ್ವೀಪವೇ ರಚನೆಯಾಗಿದೆ. ಇಂತಹ ಹತ್ತು ಹಲವು ವಿಸ್ಮಯಗಳನ್ನು ನೋಡುತ್ತಾ, ಸಮುದ್ರ ರಾಜನ ಮಡಿಲಲ್ಲಿ ಪಯಣಿಸುತ್ತಾ ಸಂಭ್ರಮಿಸಿದೆವು.

ವಿಯೆಟ್ನಾಮಿನ ಕಡಲತೀರ 3,260 ಕಿ.ಮೀ ಉದ್ದವಾಗಿದ್ದು ವೈವಿಧ್ಯಮಯವಾದ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ನಾಡಿನ ರುಚಿರುಚಿಯಾದ ತಿನಿಸುಗಳು ಬಾಯಲ್ಲಿ ನೀರೂರಿಸುವುದು ಖಚಿತ. ಸಪೂರವಾದ ಮೈಮಾಟವುಳ್ಳ ವಿಯೆಟ್ನಾಮೀ ಬೆಡಗಿಯರು ತಮ್ಮ ಉಡುಗೆ ತೊಡುಗೆಗಳಿಂದ ಅಪ್ಸರೆಯರ ಹಾಗೆ ಕಾಣುತ್ತಿದ್ದರು.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://www.surahonne.com/?p=40169

(ಮುಂದುವರೆಯುವುದು)
-ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

10 Responses

  1. ಪ್ರವಾಸ ಕಥನ ಚಂದದ ನಿರೂಪಣೆ ಯೊಂದಿಗೆ ಸಾಗುತ್ತಾ…ಕುತೂಹಲ.. ಮೂಡಿಸುತ್ತಿದೆ.
    .ಗಾಯತ್ರಿ ಮೇಡಂ..ವಂದನೆಗಳು

  2. Padmini Hegde says:

    ವಿಸ್ಮಯಗಳ ಕಥನ!

  3. ಶಂಕರಿ ಶರ್ಮ says:

    ವಿಯೆಟ್ನಾಮಿನ ವಿಶ್ವ ಪಾರಂಪರಿಕ ತಾಣವಾದ ಸಂಗ್ ಸಾಟ್ ಗುಹೆಯ ವರ್ಣನೆಯು ಅದ್ಭುತ ಅನುಭವವನ್ನು ನೀಡಿತು ಗಾಯತ್ರಿ ಮೇಡಂ. ವಿಯೆಟ್ನಾಮಿ ಸುಂದರಿಯರು ನಿಜಕ್ಕೂ ಅಪ್ಸರೆಯರೇ ಸೈ..!

  4. ಈ ಲೇಖನದಲ್ಲಿ ಒಂದು ತಪ್ಪಾಗಿದೆ ಕ್ಷಮೆ ಇರಲಿ
    ಸ್ಟಾಲಗ್ ಮೈಟ್ಸ್ ಬದಲಿಗೆ ಸ್ಟಾಲಕ್ಟೃಟ್ಸ್
    ಎಂದು ಬರಬೇಕಿತ್ತು

  5. ನಾಗರತ್ನ ಮೇಡಂ ಮತ್ತು ಪದ್ಮಿನಿಗೆ ನನ್ನ ವಂದನೆಗಳು

  6. ಗೆಳತಿ ಶಂಕರಿ ಶರ್ಮ ಅವರ ಅನಿಸಿಕೆಗಳಿಗೆ ವಂದನೆಗಳು

  7. ನಯನ ಬಜಕೂಡ್ಲು says:

    Nice

  8. Padma Anand says:

    ನಿಜಕ್ಕೂ ವಿಸ್ಮಯಗಳ ನಾಡಿನ ಪ್ರವಾಸ ಕಥನ ಸೊಗಸಾಗಿ ಮಾಹಿತಿಪೂರ್ಣವಾಗಿ ಮೂಡಿ ಬರುತ್ತಿದೆ

  9. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಮೇಡಂ ವಿಯೆಟ್ನಾಂ ಪ್ರವಾಸ ಕಥನ ಚೆನ್ನಾಗಿ ವರ್ಣಿಸಿದ್ದೀರಿ.
    ಲೇಖನ ಓದುತ್ತಿದ್ದಂತೆ ನಮ್ಮ ವಿಯೆಟ್ನಾಂ ಪ್ರವಾಸದ ಸವಿ ನೆನಪುಗಳೆಲ್ಲ ಮರುಕಳಿಸಿದವು.ನಮಸ್ತೆ

  10. ನಯನ ,ವನಿತಾ ಪ್ರಸಾದ್ ,ಹಾಗೂ ಪದ್ಮ ಆನಂದ್ ಅವರಿಗೆ ನನ್ನ ವಿನಯ ಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: