ಅಂತರಂಗದ ಗೆಳೆಯರು
ಆದ್ರೂ ನಂಗೆ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಅನ್ನೇ ಮದ್ವೆ ಆಗಬೇಕೂಂತ ತುಂಬಾನೇ ಆಸೆ ಇತ್ತು ಮೀನಾ –
ಅದ್ಯಾಕೆ ಗೀತಾ? – ಕೇಳಿದಳು ಮೀನಾ.
ಹುಂ ಕಣೆ, ನಮಗೆ ಆಗ 10-12 ವರ್ಷಗಳು, ಎಷ್ಟೊಂದು ಒಳ್ಳೊಳ್ಳೆಯ ಕನ್ನಡ ಸಿನಿಮಾಗಳು ಬರ್ತಿತ್ತು ಗೊತ್ತಲ್ವಾ ನಿಂಗೆ, ಆದ್ರೆ ನಮ್ಮನೇಲಿ ಮೂರು ಅಥವಾ ನಾಲ್ಕು ತಿಂಗಳುಗೆ ಒಂದು ಸಿನಿಮಾಗೆ ಕಳುಹಿಸುತ್ತಾ ಇದ್ರ, ಅದೂ ಹೋಗೋದಕ್ಕೆ ಮುಂಚೆ ನಮ್ಮಮ್ಮ ಎಕ್ಸಪೆಕ್ಟ್ ಮಾಡ್ತಾ ಇದ್ದಂತಹ ಸಣ್ಣ ಪುಟ್ಟ ಎಲ್ಲಾ ಮನೆ ಕೆಲಸಗಳನ್ನು ಮುಗಿಸಬೇಕು, ಬಂದ್ಮೇಲೆ ಸಿನಿಮಾ ಬಗ್ಗೆ ಮಾತಾಡಬಾರದು, ಸುಮ್ಮನೆ ಪಾಠಗೀಠ ಓದ್ಕೊಂಡು ಇರ್ಬೇಕಾಗಿತ್ತು. ನಂಗೋ ಎಲ್ಲಾ ಕಥೆ, ಎಲ್ಲರಿಗೂ ಹೇಳಬೇಕು ಅನಿಸ್ತಾ ಇತ್ತು. ಆವಾಗೆಲ್ಲ, ʼಅಬ್ಬಾ, ಗೇಟ್ ಕೀಪರ್ ಅನ್ನ ಮದ್ವೆ ಮಾಡಿಕೊಂಡು ಬಿಟ್ರೆ, ಎಷ್ಟು ಸರ್ತಿ ಬೇಕಾರ್ದು ಹೋಗಿ ಸಿನಿಮಾ ನೋಡ ಬಹುದು, ಆಮೇಲೆ ಗಂಡ ಬೇಗ ಮನೇಗೂ ಬರೋಲ್ಲಾ, ಮನೇಲಿ ಹಾಯಾಗಿ ಸಿನಿಮಾ ಬಗ್ಗೆ ಯೋಚ್ನೆ ಮಾಡ್ಕೊಂಡು ಕೂತ್ಕೋಬೋದುʼ ಅನಿಸ್ತಾ ಇತ್ತು – ಗೀತಾ ಹೇಳಿದಳು.
ನಿಂಗೆ ಹಾಗಾದ್ರೆ, ನಂಗೆ ಒಂದೋ, ಪುರೋಹಿತರನ್ನೋ, ಇಲ್ಲಾ ಅಡಿಗೆಯವರನ್ನೋ ಮಾಡ್ಕೋಬೇಕು ಅಂತ ಆಸೆ ಆಗ್ತಾ ಇತ್ತು ಗೀತಾ, ಯಾಕೆ ಗೊತ್ತಾ, ನಂಗೆ ತುಂಬಾ ತೆಂಗಿನಕಾಯಿ ಹಾಕಿ ಮಾಡಿದ ಅಡುಗೆ ಊಟ ಮಾಡೋಕೆ, ಆಮೇಲೆ ದಿನಾ ಸಿಹಿ ತಿಂಡಿಗಳು, ಬೋಂಡ, ಆಂಬೊಡೆ ತಿನ್ನೋಕೆ ಇಷ್ಟ ಆಗ್ತಾ ಇತ್ತು, ನಮ್ಮನೇಲಿ ತುಂಬಾ ಬಡತನ ಅಲ್ವಾ, ನಮ್ಮ ಅಮ್ಮ ಹತ್ತು ಪೈಸೆಗೆ ಆಗ ಸಿಗ್ತಾ ಇದ್ದ ಮೂರು ತೆಂಗಿನ ಕಾಯಿಯ ಚೂರುಗಳನ್ನು ತಂದು ಹಾಕಿ ನಮ್ಮ ಮನೇಲಿದ್ದ 8 ಜನಕ್ಕೆ ಉಪ್ಪಿಟ್ಟು ಮಾಡ್ತಾ ಇದ್ರು. ಆಗೆಲ್ಲ ನಂಗೆ, ʼಪುರೋಹಿತರನ್ನೇ ಮದ್ವೆ ಮಾಡ್ಕೊಂಡು ಬಿಟ್ರೆ, ದಿನಾ ತೆಂಗಿನಕಾಯಿ ತರ್ತಾರೆ, ತುಂಬಾ ತೆಂಗಿನ ತುರಿ ಹಾಕಿ ರುಚಿ ರುಚಿಯಾಗಿ ಅಡುಗೆ ಮಾಡ್ಕೊಂಡು ತಿನ್ಬೋದು ಅನಿಸ್ತಾ ಇತ್ತು, ಹಾಗೆ ಸಿಹಿ ತಿಂಡಿ, ಬೋಂಡಾ ಏನಾದ್ರೂ ತಿನ್ಬೇಕು ಅನ್ನಿಸೊದಾಗಲೆಲ್ಲಾ, ʼದೇವ್ರೆ, ನಂಗೆ ಅಡಿಗೆಯವರನ್ನ ಗಂಡನಾಗಿ ಕೊಡಪ್ಪ, ದಿನಾ ಬೇಕಾದ್ದನ್ನೆಲ್ಲಾ ತಿನ್ಬೋದುʼ ಅನ್ನಿಸ್ತಾ ಇತ್ತು.
ಆಹಾ, ನಾವೋ, ನಮ್ಮ ಆಸೆಗಳೋ, ಮೌಢ್ಯಾನೋ ಒಂದೂ ಕಾಣೆ, ತಡೀ ಕಾಫಿ ಬಿಸಿ ಮಾಡ್ಕೊಂಡು ಬರ್ತೀನಿ, ಅಮೇಲೆ ಮತ್ತೆ ಹಳೇದೆನ್ನೆಲ್ಲಾ ಜ್ಞಾಪಿಸಿಕೊಳ್ಳೊಕೆ ಚೆನ್ನಾಗಿರುತ್ತೆ – ಎನ್ನುತ್ತಾ ಗೀತಾ ಒಳ ನಡೆದರೆ, ಮೀನಾ, ಅಲ್ಲೇ ಮೇಜಿನ ಮೇಲೆ ಇದ್ದ ನಿಯತಕಾಲಿಕವೊಂದನ್ನು ಮೊಗಚಿ ಹಾಕುತ್ತಾ ಕುಳಿತಳು.
ಗೀತಾ, ಮೀನಾ ಇಬ್ಬರೂ ಬಾಲ್ಯದ, ಚೆಡ್ಡಿ ದೋಸ್ತ್, ಅಂತಾರಲ್ಲಾ, ಹಾಗೆ ಪೆಟ್ಟಿಕೋಟ್ ಗೆಳೆತಿಯರು. ಎದುರು ಬದುರು ಮನೆಗಳಲ್ಲಿದ್ದ ಒಂದೇ ವಾರಿಗೆಯ ಹೆಣ್ಣು ಮಕ್ಕಳು. ಇಬ್ಬರದೂ ಕೆಳ ಮಧ್ಯಮ ವರ್ಗದ ಕುಟುಂಬ. ಮನೆಯಲ್ಲಿ ಶಿಸ್ತು ಜಾಸ್ತಿ. ಆದರದು ಇವರ ಗೆಳೆತನಕ್ಕೇನೂ ತೊಂದರೆ ಮಾಡಿರಲಿಲ್ಲ. ಪಿಯುಸಿ ವರೆಗೆ ಒಟ್ಟಿಗೆ ಓದಿನ ನಂತರ ಗೀತಾ ಬೆಂಗಳೂರಿಗೆ ಅಣ್ಣನ ಮನೆಗೆ ಓದು ಮುಂದುವರೆಸಲು ಹೋದರೆ, ಮೀನಾ ತಾವಿದ್ದ ಬಾಡಿಗೆ ಮನೆಯನ್ನು ಬಿಟ್ಟು ಒಂಟಿಕೊಪ್ಪಲ್ಲಿನಲ್ಲಿ ಹೊಸದಾಗಿ ಖರೀದಿಸಿದ್ದ ಸ್ವಂತ ಮನೆಗೆ ವಲಸೆ ಹೋಗಿದ್ದಳು.
ಹಲವಾರು ವರ್ಷಗಳು ಪತ್ರ ವ್ಯವಹಾರವಿದ್ದರೂ, ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಮುಖ್ಯ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ ಒಬ್ಬರಿಗೊಬ್ಬರಿಗೆ ಸಾಕೆನಿಸುವಷ್ಟು ಸಮಯವನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ.
ಈಗ ಇಬ್ಬರ ಗಂಡಂದಿರೂ ರಿಟೈರ್ ಆಗಿ ವಿಶ್ರಾಂತ ಜೀವನವನ್ನು ಹುಟ್ಟೂರಿನಲ್ಲೇ ಕಳೆಯುವ ನಿರ್ಧಾರ ಮಾಡಿ, ಮೈಸೂರಿನಲ್ಲೇ ಬಂದು ನೆಲಸಲಾಗಿ, ಸುಪ್ತವಾಗಿದ್ದ ಇವರಿಬ್ಬರ ಗಾಢ ಸ್ನೇಹ ಮತ್ತೆ ಹಸಿರೊಡೆದು ಚಿಗುರಿತು. ಹದಿನೈದು – ಇಪ್ಪತ್ತು ದಿನಗಳಿಗೊಮ್ಮೆ ಇಬ್ಬರಲ್ಲೊಬ್ಬರ ಮನೆ, ಅಥವಾ ಇಬ್ಬರಿಗೂ ಅನುಕೂಲವೆನಿಸುವ ಯಾವುದಾದರೂ ಹೋಟೆಲ್, ಕಾಫಿ ಶಾಪಿನಲ್ಲೆ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದರು. ಬಾಲ್ಯದ ಆತ್ಮೀಯತೆ, ಸ್ನೇಹ ಗಟ್ಟಿಯಾಗಿ ಮನಸ್ಸಿಗೆ ಮುದ ನೀಡುತಿತ್ತು. ಇವರಿಬ್ಬರ ಮಾತುಗಳಲ್ಲಿ ನುಸುಳದ ವಿಷಯಗಳೇ ಇಲ್ಲ. ಮಕ್ಕಳು, ಮರಿಗಳು, ನೆಂಟರು, ಇಷ್ಟರು, ದೇಶ, ಭಾಷೆ, ರಾಜಕಾರಣ, ಜಾಗತೀಕರಣ, ಸೋಶಿಯಲ್ ಮೀಡಿಯಾ, ಹೀಗೆ ಎಲ್ಲಾ ವಿಚಾರಗಳೂ ಬಂದು ಹೋಗುತಿತ್ತು.
ಇಂದಿನ ಟಾಪಿಕ್ ಬಾಲ್ಯದಲ್ಲಿ ತಮ್ಮ ತಮ್ಮ ಮನದಲ್ಲಿ ಮೂಡುತ್ತಿದ್ದ ಭಾವನೆಗಳ ವಿನಿಮಯ.
ಗೀತಾ ತಂದ ಘಂ ಎನ್ನುವ ಫಿಲ್ಟರ್ ಕಾಫಿ, ಕುರುಕಲು ತಿಂಡಿಯನ್ನು ತಿನ್ನುತ್ತಾ ಗೆಳತಿಯರು ಅರ್ಧಕ್ಕೇ ಬಿಟ್ಟಿದ್ದ ತಮ್ಮ ಮಾತುಗಳನ್ನು ಮುಂದುವರೆಸಿದರು.
ಸ್ವಲ್ಪ ದಿನ ಆದ ಮೇಲೆ, ನಿಂಗೇ ಗೊತ್ತಲ್ವ ನಂಗೆ ಮಣಿ ಸಾಮಾನು ಹಾಕೋ ಹುಚ್ಚು ಹಿಡಿದುಕೊಂಡಿತ್ತು. ಹತ್ತು ಪೈಸೆಗೆ ಒಂದು ತೊಲ, ಅಂದ್ರೆ 10 ಗ್ರಾಂ, ಐದು ಪೈಸೆಗೆ 5 ಗ್ರಾಂ, ಮಣಿ ಬರ್ತಿತ್ತು. 5 ಪೈಸೆಗೆ ಕಮ್ಮಿ ಅಂಗಡೀಲಿ ಕೊಡ್ತಾ ಇರಲಿಲ್ಲ. ಆ ಐದು ಪೈಸೆಗೆ ಮನೆಯಲ್ಲಿ ಎಷ್ಟು ಗಿಂಜಬೇಕಿತ್ತು ಅಂದ್ರೆ, ನನಗಂತೂ ಅಳೂನೆ ಬಂದು ಬಿಡ್ತಾ ಇತ್ತು ಆಗೆಲ್ಲಾ ನನ್ನ ಅಂತರಂಗದ ಗೆಳೆಯನನ್ನ ಚೇಂಜ್ ಮಾಡ್ಕೊಂಬಿಟ್ಟೆ. – ಅಯ್ಯೋ ಬ್ಯಾಂಗಲ್ ಸ್ಟೋರಿನವರನ್ನ ಮದುವೆ ಮಾಡ್ಕೊಂಡ್ರೆ ಎಷ್ಟು ಚೆನ್ನಾಗಿ ಇರುತ್ತೆ, ದಿನಾ ಮಣಿ ಸಾಮಾನು ಹಾಕಬಹುದು, ದಿನಾ ಹೊಸಾ ಬಳೆ, ಕ್ಲಿಪ್ಸ್, ಹೇರಪಿನ್ಸ್, ಮಣಿಸರ ಎಲ್ಲಾ ಇಷ್ಟ ಬಂದದ್ದು ಹಾಕೋಬಹುದು ಅಂತ ಸ್ವಲ್ಪ ದಿನಗಳು ತುಂಬಾನೇ ಆಸೆ ಆಗ್ತಾ ಇತ್ತು.
ಮೀನಾ ಮುಂದುವೆರಿಸಿದಳು.
ಆದ್ರೆ ನಂಗೆ ಆಶ್ಚರ್ಯ ಆಗೋದು ಅಂದ್ರೆ ಏನು ಗೊತ್ತಾ ಗೀತಾ, ನಮ್ಮ ಮನದಲ್ಲಿ ಮೂಡಿದ ಅಂತರಂಗದ ಗೆಳೆಯರನ್ನ ಮದ್ವೆ ಮಾಡ್ಕೋಬಾರ್ದು ಅಂತ ಅಲ್ಲ, ಎಲ್ಲಾ ಕೆಲಸಗಳಿಗೂ ತನ್ನದೇ ಆದ ಡಿಗ್ನಿಟಿ ಆಫ್ ಲೇಬರ್ ಇದ್ದೇ ಇರುತ್ತೆ, ಆದ್ರೆ ನಮಗ್ಯಾಕೆ, ನಾವೂ ಓದಿ, ಒಳ್ಳೇ ಕೆಲಸಕ್ಕೆ ಸೇರ್ಕೊಂಡು ತುಂಬಾ ದುಡ್ಡು ಸಂಪಾದ್ನೆ ಮಾಡಿ ಏನೇನು ಬೇಕೋ ಅದನ್ನೆಲ್ಲಾ ತೊಗೋಳ್ಳೋಣ ಅಂತ ಅನಿಸ್ತಾನೇ ಇರಲಿಲ್ಲ ಅಂತ!
ಮತ್ತೆ ಹೇಳ್ಬೇಕು ಅಂದ್ರೆ, ಇದನ್ನ ಮುಗ್ಧತೆ ಅನ್ನಬೇಕೋ, ಮೌಢ್ಯ ಅನ್ನಬೇಕೋ, ಈಗ ನೆನೆನಸಿಕೊಂಡ್ರೆ ಮೂರ್ಖತನ ಅನ್ನಿಸುತ್ತೆ. ನಮಗೇನು ಬೇಕೋ ಅದನ್ನ ಒದಗಿಸುವ ಗಂಡ ಸಿಗಬೇಕು ಅನ್ನವುದಕ್ಕಷ್ಟೇ ನಮ್ಮ ಆಸೆಗಳು ಸೀಮಿತವಾಗಿತ್ತಲ್ಲ ಯಾಕೆ ಅಂತ.
ಹುಂ ಕಣೆ ಮೀನಾ, ನಂಗೆ ಯಾರಾದರೂ – ನೀ ದೊಡ್ಡವಾಳಾದಮೇಲೆ ಏನು ಆಗ್ತಿ? – ಅಂದ್ರೆ, – ಇನ್ನೇನಾಗಕ್ಕೆ ಸಾಧ್ಯ, ಟೀಚರ್ ಅಷ್ಟೇ ಅನ್ನುತ್ತಿದ್ದೆ, ಸಧ್ಯ ಹೆಂಡ್ತಿ ಆಗ್ತೀನಿ, ಅಂತಾ ಅನ್ತಾ ಇರಲಿಲ್ಲವಲ್ಲ ಅಷ್ಟೇ ಪುಣ್ಯ. ಅಂದ್ರೆ, ಟೀಚರ್ ಬಿಟ್ಟು ಪ್ರಪಂಚದಲ್ಲಿ ಬೇರೆ ಏನೂ ಇಲ್ಲವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಶಿಕ್ಷಕರು ನಮ್ಮ ಆದರ್ಶ ವ್ಯಕ್ತಿಗಳಾಗಿರ್ತಿದ್ದರು.
ಗೀತಾ ನಿಂಗೆ ಜ್ಞಾಪಕ ಇದ್ಯಾ? ನಾವುಗಳು ಆಗ 8 ಅಥವಾ 9 ನೇ ತರಗತಿಯಲ್ಲಿ ಓದ್ತಾ ಇದ್ವು. ಇಂಡಿಯಾ ಚೀನಾ ಯುದ್ಧ ಶುರು ಆಗಿತ್ತು. ಎಲೆಲ್ಲೂ ಭೀತಿ, ರಾತ್ರಿ ಆದ್ರೆ ಬಾಂಬ್ ಹಾಕುತ್ತಾರೆ ಎನ್ನುವ ಭಯದಿಂದ ಊರುಗಳಿರುವುದನ್ನು ಅವರು ಗುರುತಿಸಬಾರದು ಅಂತ ಕರೆಂಟ್ ಎಲ್ಲಾ ತೆಗೆದು ಬಿಡ್ತಾ ಇದ್ರು. ನಮಗೆಲ್ಲಾ ತುಂಬಾನೇ ಕೋಪ ಬರ್ತಾ ಇತ್ತು, ಚೀನಿಯರನ್ನ ಬೈಯ್ಯೋದೇನು, ಹಾಗೇನೇ ದೇಶಭಕ್ತಿನೂ ಉಕ್ಕಿ ಹರೀತಾ ಇತ್ತು, ಒಂದು ಸಲ ನಾವಿಬ್ಬರೂ ಮಾತ್ನಾಡಿ ಕೊಳ್ತಾ ಇದ್ವು – ನಡೀಯೇ ನಾವೂ ಯುದ್ಧಕ್ಕೆ ಹೋಗಿ ನಮ್ಮ ಸೈನಿಕರನ್ನು ರಕ್ಷಿಸೋಣ – ಅಂತ, ಆಗ ನಿಮ್ಮ ಅಣ್ಣ – ಅಲ್ಲಿ ಹೋಗಿ ನೀವುಗಳು ಏನು ಕೆಲ್ಸ ಮಾಡ್ತೀರಿ? – ಅಂತ ಕೇಳ್ದ, ಆಗ ನಾವು – ನರ್ಸ್ ಕೆಲ್ಸ ಮಾಡ್ತೀವಿ, ಇನ್ನೇನು ಮಾಡೋಕೆ ಸಾಧ್ಯ? – ಎಂದ್ವು.
ಅಲ್ಲ ಕಣ್ರೆ, ಚೆನ್ನಾಗಿ ಓದಿ ಡಾಕ್ಟರ್ ಆಗಿ ಗಾಯಗೊಂಡ ಸೈನಿಕರನ್ನು ನೋಡ್ಕೋತೀವಿ ಅಂತ ಬಾಯಲ್ಲ ಕೂಡ ಹೇಳೋಲ್ವಲ್ಲಾ – ಅಂತ ರೇಗ್ಸಿದ, ಅದಕ್ಕೇ ನಾವು – ನಾವು ಡಾಕ್ಟರ ಆಗೋ ತನಕ ಯುದ್ಧ ನಡೀತಾ ಇರುತ್ತಾ, ಈಗ್ಲೇ ಹೋಗ್ಬೇಕಲ್ಲ – ಅಂತ ಅಂದಿದ್ದದಕ್ಕೆ, ಅವನು – ಈಗೇನು ನಿಮಗೆ ನರ್ಸ್ ಕೆಲ್ಸ ಎಲ್ಲಾ ತುಂಬಾ ಚೆನ್ನಾಗಿ ಬರುತ್ತಾ, ದೊಡ್ಡದಾಗಿ ಯೋಚ್ನೆ ಮಾಡೋದನ್ನಾದರೂ ಕಲ್ತುಕೊಳ್ಳಿ, ಏನಾದ್ರೂ ಸಾಧಿಸೋಕ್ಕೆ ಸಹಾಯ ಆಗುತ್ತೆ ಅಂತ ಹೇಳಿದ್ದ ಜ್ಞಾಪಕ ಇದ್ಯಾ?
ಹುಂ ಕಣೆ, ಇಲ್ದೇ ಏನು, ಮತ್ತದೇ ಯಾವುದೇ ಕೆಲ್ಸ ಕೀಳು ಅಂತ ಅಲ್ಲ, ಆದ್ರೆ ನಾವುಗಳು ಯೋಚನೆ ಮಾಡೋ ಧಾಟಿ ಬಗ್ಗೆ ಎಷ್ಟು ಸೀಮಿತವಾಗಿತ್ತಲ್ಲಾ ನಮ್ಮಗಳ ಆಲೋಚನಾ ಧಾಟಿ ಅಂತ ಅನ್ನಿಸುತ್ತೆ. ಆಮೇಲೇ ಅಲ್ವಾ, ಒಂದಿನ, ಇಂದಿನ ಥರಾನೇ ನಿಮ್ಮನೆ ಸಂಪಿಗೆ ಮರದ ಕೆಳಗೆ ಕುಳಿತು ಮೀಟಿಂಗ್ ಮಾಡಿ ಚರ್ಚಿಸಿ – ಇಲ್ಲಾ ಇನ್ಮೇಲೆ, ನಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಅನ್ನೋದನ್ನ ಕಂಡು ಹಿಡಿದು ಅದರಲ್ಲೇ ಪರಿಣಿತಿಯನ್ನು ಸಾಧಿಸಿ ನಮಗೆ ಬೇಕಾದಷ್ಟು ದುಡ್ಡು ಸಂಪಾದಿಸಿ, ನಮಗೆ ಬೇಕಾದ ಹಾಗೇ ಜೀವನ ಕಳ್ಯೋಣ, ಹಾಗೇ ಅದಕ್ಕೆಲ್ಲಾ ಒಪ್ಪಿಗೆ ಕೊಡೋ ಒಳ್ಳೇ ಹುಡುಗನ್ನೇ ಮದ್ವೆ ಮಾಡ್ಕೋಳ್ಳೋಣ ಅಂತ ರೆಸಲ್ಯೂಶನ್ ಪಾಸ್ ಮಾಡಿದ್ದು, ಇರ್ಲಿ ಬಿಡು, ಇನ್ನು ಮುಂದಿನ ಕಥೆನ್ನೆಲ್ಲಾ ಮುಂದಿನ ಮೀಟಿಂಗಿಗೆ ಇಟ್ಕೋಳ್ಳೋಣ – ಎಂದಾಗ,
ಮೀನಾ – ಆದ್ರೂ, 20-30 ಷರ್ಷಗಳಲ್ಲಿ ಯೋಚನೆಯ ಧಾಟಿ ಎಷ್ಟು ಬದಲಾಗಿ ಹೋಗಿದೆ ಅಲ್ವಾ? ನಾವೆಲ್ಲಾ ನಮಗೇನೂ ಬೇಕಿದ್ರೂ ಅದನ್ನ ಒದಗಿಸುವ ಗಂಡ ಸಿಕ್ಕಬೇಕಪ್ಪ ಅಂತ ಯೋಚಿಸ್ತಾ ಇದ್ವಿ, ಅದು ನಮ್ಮ ಪೆದ್ದುತನಾನೋ ಅಥವಾ ಕಾಲವೇ ಹಾಗಿತ್ತೋ ಗೊತ್ತಿಲ್ಲ, ಈಗಿನ ಮಕ್ಕಳಂತೂ ಎಷ್ಟು ಚಿಕ್ಕ ವಯಸ್ಸಿಗೇ ಹೆಣ್ಣು ಗಂಡೆಂಬ ಬೇಧವಿಲ್ಲದೆ ತಮ್ಮ ತಮ್ಮ ಗುರಿಯ ಬಗ್ಗೆ ನಿಚ್ಚಳವಾದ ಅಭಿಪ್ರಾಯ ಹೊಂದಿರುತ್ತಾರೆ, ನಿಜವಾಗ್ಲೂ ಇದು ಚೆಂಜ್ ಫಾರ್ ಗುಡ್ ಕಣೇ, ಓಕೆ, ಈವತ್ತಿಗೆ ಇಷ್ಟು ಸಾಕು, ಮುಂದಿನ ಮೀಟಿಂಗಿನ ದಿನ ಮತ್ತು ಟಾಪಿಕ್ಕನ್ನು ಫೋನಿನಲ್ಲಿ ನಿಶ್ಚಯಿಸೋಣ – ಎನ್ನುತ್ತಾ ಮೀಟಿಂಗಿಗೆ ಮಂಗಳ ಹಾಡಿದರು ಮೀನಾ ಮತ್ತು ಗೀತಾ.
-ಪದ್ಮಾ ಆನಂದ್, ಮೈಸೂರು
ಆಗಿನಕಾಲದ ಮಕ್ಕಳ.. ಮಗ್ದಮನಸ್ಸಿನ..ಆಲೋಚನೆಗಳಲ್ಲಿ ತಾವೇ..ತಮ್ಮ ಬಯಕೆ ನೆರವೇರಿಸಿಕೊಳ್ಳಲು…ಆರಿಸಿಕೊಂಡು…ಸಿಕ್ಕರೆ ಹೀಗಿರಬಹುದೆಂಬ..ಕನಸುಕಂಡಿದ್ದನ್ನು..ಬಾಲ್ಯದ ಸ್ನೇಹಿತೆಯೊಡನೆ ಹಂಚಿಕೊಂಡು..ಅದನ್ನು ಈಗಿನ…ಆಧುನಿಕ ಮನೋಭಾವವುಳ್ಳ ವರ…ನಿರ್ಧಾರಕ್ಕೆ ಹೋಲಿಸಿಕೊಂಡು..ಬರದಿರುವ ಅಂತರಂಗದ ಗೆಳೆಯರು ಲೇಖನ..ಮನದಲ್ಲಿ ನಮ್ಮ ಹಳೆಯ ನೆನಪು..ಮುಖದಮೇಲೆ ತೆಳುವಾದ ನಗು ಹೊಮ್ಮಿ ಮುದ ಕೊಟ್ಟಿತು ಪದ್ಮಾ ಮೇಡಂ ..ವಂದನೆಗಳು..
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಮೀಟಿಂಗ್ ಪೊಗದಸ್ತಾಗಿದೆ!
ಧನ್ಯವಾದಗಳು.
ಮುಗ್ಧ ಮನಸ್ಸುಗಳ ಆಲೋಚನೆಗಳು ಸ್ವಾರಸ್ಯಕರವಾಗಿರುತ್ತವೆ. ಹಿಂದೆ, ಗಂಡು ಮಕ್ಕಳಿಗೆ ಬಸ್ಸು ಬಿಡುವ ಡ್ರೈವರ್, ಟಿಕೆಟ್ ಕೊಡುವ ಕಂಡಕ್ಟರ್ ಗಳೇ ಹೀರೋಗಳು! ಹೆಣ್ಣು ಮಕ್ಕಳಿಗೆ ಅಂತಹ ಆಲೋಚನೆಗಳು ಬರಲೂ ಸಾಧ್ಯವಿಲ್ಲದಷ್ಟು ಕಟ್ಟುಪಾಡು. ನಮ್ಮ ಗೀತಾ…ಮೀನಾರಂತೆ, ಅರ್ಥವಿಲ್ಲದ ಕನಸುಗಳು! ಚಂದದ ಕಿರುಗತೆ…ಪದ್ಮಾ ಮೇಡಂ.
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಮನಸಿನಲ್ಲಿ ಒಂದು ಹೊಸ ಆಲೋಚನೆಯ ಜಗತ್ತನ್ನೇ ಸೃಷ್ಟಿಸುತ್ತದೆ ಸುಂದರ ನೆನಪುಗಳನ್ನು ಹೊಂದಿದ ಬರಹ.
ಲೇಖನವನ್ನು ಪ್ರಕಟಿಸಿದ್ದಕ್ಕಾಗಿ “ಸುರಹೊನ್ನೆ” ಗೆ ಧನ್ಯವಾದಗಳು
ಚೆನ್ನಾಗಿದೆ ಮೇಡಂ,
ಕೌಟುಂಬಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು
ಸಂವಾದದ ರೂಪದಲ್ಲಿ ಕಟ್ಟಿ ಕೊಟ್ಟಿದ್ದೀರಿ.
ಧನ್ಯವಾದಗಳು
ತಮ್ಮ ಮೆಚ್ಚುಗೆಗೆ ವಂದನೆಗಳು ಸರ್.