ಎತ್ತ ಸಾಗುತ್ತಿದೆ ಯುವಜನಾಂಗ ?

Share Button


“ಮುಂದೆ ಗುರಿ ಇರಬೇಕು; ಹಿಂದೆ ಗುರು ಇರಬೇಕು”. ವ್ಯಕ್ತಿಯು ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವತ್ತ ಸತತ ಪ್ರಯತ್ನದಲ್ಲಿರಬೇಕು. ಕೇವಲ “ಗುರಿ” ಒಂದಿದ್ದರೆ ಸಾಲದು ಅದರ ಕುರಿತು ಪೂರ್ತಿ ಮಾಹಿತಿ, ಸಲಹೆ, ಸೂಚನೆಗಳನ್ನು ಕೊಟ್ಟು ಸರಿಯಾದ ಮಾರ್ಗದರ್ಶನ ನೀಡಲು ಅವನಿಗೆ ಬೆಂಬಲವಾಗಿ ಒಬ್ಬ ಸಮರ್ಥ “ಗುರು” ಇರಬೇಕು.

ಮಹಾಭಾರತ ಯುದ್ಧದಲ್ಲಿ ಪಾರ್ಥನಿಗೆ ಶತ್ರು ಸಂಹಾರ ಮಾಡಿ ರಾಜ್ಯವನ್ನು ಪಡೆಯುವುದು, ಅಲ್ಲದೆ ಧರ್ಮ ರಕ್ಷಣೆ ಮಾಡುವುದು ಅವನ ಮುಖ್ಯ ಗುರಿಯಾಗಿದ್ದಿತು. ಅವನಿಗೆ ಗುರುವಾಗಿ, ಬೆಂಬಲಿಗನಾಗಿ ನಿರಂತರ ಮಾರ್ಗದರ್ಶನ ನೀಡಿದವನು ಭಗವಂತ ಶ್ರೀ ಕೃಷ್ಣ.

ಶ್ರೀ ಕೃಷ್ಣನು ಯಾವಾಗಲೂ ಪ್ರಿಯ ಶಿಷ್ಯ ಅರ್ಜುನನಿಗೆ ಗುರುವಿನಂತೆ ಉಪದೇಶ, ಮಾರ್ಗದರ್ಶನ ಮಾಡುತ್ತಿದ್ದುದಲ್ಲದೆ, ಧೈರ್ಯ ಗುಂದಿದಾಗ ಸೂಕ್ತ ಸಲಹೆಗಳನ್ನಿತ್ತು, ಧೈರ್ಯತುಂಬಿ ಸದಾ ಬೆಂಬಲಿಸುತ್ತಿದ್ದನು; ರಕ್ಷಿಸುತ್ತಿದ್ದನು.

ಅರ್ಜುನನು ಒಮ್ಮೆ ಶ್ರೀ ಕೃಷ್ಣನಲ್ಲಿ “ತ್ರಿಗುಣಗಳ” ಬಗ್ಗೆ ಕೇಳಲು ಪರಮಾತ್ಮನು ಅಧ್ಯಾಯ 17ರ ಎರಡನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ…

ಶ್ರೀ ಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ
ದೇಹಿನಾಂ ಸಾ ಸ್ವಭಾವಜಾI
ಸಾತ್ವ್ತಿಕೀ ರಾಜಸೀ ಚೈವ
ತಾಮಸೀ ಚೇತಿ ತಾಂ ಶೃಣುII

ಜೀವಿಯ ಜನನವಾಗುತ್ತಲೇ ಅವರ ಸ್ವಭಾವದಲ್ಲಿ ಉತ್ಪನ್ನವಾಗುವ ತ್ರಿಗುಣಗಳಾದ ಸಾತ್ವ್ತಿಕ, ರಾಜಸ ಮತ್ತು ತಾಮಸಗಳೆಂಬ ಮೂರು ಪ್ರಕಾರದ ಗುಣವಿರುತ್ತದೆ; ಎಂದು ಹೀಗೆ ವಿವರಿಸುತ್ತಾನೆ. ವ್ಯಕ್ತಿಯ ಶ್ರದ್ಧೆಯು ಅವನ ಅಂತಃಕರಣಕ್ಕೆ ಅನುರೂಪವಾಗಿ ಇರುತ್ತದೆ. ಅವನಿಗೆ ಯಾವ ರೀತಿಯ ಶ್ರದ್ಧೆಯಿದೆಯೋ ಅದೇ ಅವನ ಸ್ವರೂಪ, ನಿಷ್ಠೆ ಆಗಿರುತ್ತದೆ. ಸಾತ್ವ್ತಿಕ ಗುಣದವನು ದೇವರ ಆರಾಧನೆ ಮಾಡುತ್ತ ಮನಸ್ಸಿಗೆ ಮುದ ಕೊಡುವ ಆಯುಸ್ಸು , ಸಾಮರ್ಥ್ಯ , ಬಲ, ಆರೋಗ್ಯ ಮುಂತಾದವುಗಳನ್ನು ವೃದ್ಧಿಸುವಂತಹ ರಸವತ್ತಾದ, ಸ್ವಾಧಯುಕ್ತ ಆಹಾರ ತೆಗೆದುಕೊಳ್ಳುತ್ತಾನೆ. ಅವನು ಕರ್ಮದ ಫಲಾಪೇಕ್ಷೆಗಳನ್ನು ನಿರೀಕ್ಷಿಸುವುದಿಲ್ಲ.

ರಾಜಸ ಗುಣದವನು ಹೆಚ್ಚು ಬಿಸಿಯಾದ, ಹುಳಿ, ಕಹಿ, ಖಾರ ,ಉಪ್ಪು ಇತ್ಯಾದಿಗಳಿಂದ ಕೂಡಿದ ಆಹಾರಗಳನ್ನು ಇಷ್ಟಪಡುತ್ತಾನೆ. ಇವು ದುಃಖ, ರೋಗ, ಶೋಕಗಳನ್ನು ಉಂಟುಮಾಡುತ್ತವೆ. ಅವನು ಪ್ರತಿಫಲಾಪೇಕ್ಷಿಯಾಗಿದ್ದು ಕೇವಲ ತೋರಿಕೆಗಾಗಿ ಯಜ್ಞ, ಕರ್ಮಾದಿಗಳನ್ನು ಮಾಡುತ್ತಾನೆ.

ತಾಮಸ ಗುಣದವನು ಅಶುದ್ಧವಾದ, ದುರ್ವಾಸನೆಯಿಂದ ಕೂಡಿದ, ಹಳಸಿದ, ಎಂಜಲಾದ ಆಹಾರಗಳನ್ನು ಬಯಸುವವನಾಗಿದ್ದು, ಅಶ್ರದ್ಧೆಯಿಂದ ಕೂಡಿದ್ದು, ವಿಧಿ- ವಿಧಾನಗಳನ್ನು ಪಾಲಿಸುವುದಿಲ್ಲ. ಆಚಾರ – ವಿಚಾರಗಳನ್ನು ಮರೆತಿರುತ್ತಾನೆ. ತ್ರಿಗುಣಗಳು ಸ್ವಭಾವದಲ್ಲಿ ಜನ್ಮದೊಂದಿಗೇ ಉತ್ಪನ್ನವಾದರೂ ನಾವು ಪ್ರಯತ್ನ ಪೂರ್ವಕವಾಗಿ ತಾಮಸ ಗುಣದಿಂದ, ರಾಜಸ ಗುಣದತ್ತ, ಮತ್ತು ರಾಜಸ ಗುಣದಿಂದ ಸಾತ್ವ್ತಿಕ ಗುಣದತ್ತ ಮುಂದುವರಿಯಬಹುದು. ಇದಕ್ಕಾಗಿ ಶ್ರದ್ಧೆ, ಆಸಕ್ತಿಗಳೊಂದಿಗೆ ಹೆಚ್ಚು ಹೆಚ್ಚು ಸಾತ್ವ್ತಿಕ ಜನರ ಸಂಪರ್ಕದಲ್ಲಿರಬೇಕು.


ಪ್ರಸ್ತುತ ಸಮಾಜದಲ್ಲಿ ತಾಮಸ ಪ್ರವೃತ್ತಿಯವರೇ ಅಧಿಕ ಸಂಖ್ಯೆಯಲ್ಲಿದ್ದು, ಅದರಲ್ಲೂ ಯುವಜನತೆ ಈ ಗುಣಕ್ಕೆ ಬಲಿಯಾಗುತ್ತಿದ್ದಾರೆ. ತಾಮಸಿಗಳಾದ ಅವರು ಬುದ್ಧಿಯಿಂದ ಯೋಚಿಸದೆ ಕೇವಲ ಕ್ಷಣಿಕ ಆಸೆಗಳನ್ನು ಪೂರೈಸಿಕೊಳ್ಳುವಲ್ಲಿ ಮುಂದುವರೆದು,ಮಾಡಬಾರದ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ. ಕಾಮ, ಕ್ರೋಧ, ಲೋಭ, ಮೋಹ ಮೊದಲಾದ ಷಡ್ವೈರಿಗಳ ವಶರಾಗಿ ಸಮಾಜ ಘಾತಕರಾಗುತ್ತಿದ್ದಾರೆ. ಅವರನ್ನು ಸನ್ಮಾರ್ಗದತ್ತ ನಡೆಸುವಲ್ಲಿ, ಸತ್ಚಿಂತನೆಯಲ್ಲಿ ತೊಡಗಿಸಿಕೊಂಡು, ಸದ್ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಲು, ಪ್ರೋತ್ಸಾಹಿಸಲು ಇರುವ ಏಕೈಕ ಸಾಧನ ಶ್ರೀಮದ್ಭಗವದ್ಗೀತೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಸದ್ಬುದ್ಧಿ, ಉತ್ತಮ ನಡೆ-ನುಡಿ, ಸಂಸ್ಕಾರಗಳನ್ನು ತಂದೆ ,ತಾಯಿ, ಗುರು, ಹಿರಿಯರು ಕಲಿಸಬೇಕು.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಯಾವುದೇ ಸಂಸ್ಕಾರಗಳನ್ನು ಕಲಿಯಲು ಅವಕಾಶಗಳು ಇರುವುದಿಲ್ಲ. ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯದಲ್ಲಿ ಏನಿದಯೋ ಅದಷ್ಟನ್ನು ಮಾತ್ರ ತಿಳಿಸಿಕೊಡುವುದು ಶಿಕ್ಷಕನ ಪಾತ್ರವಾಗಿದೆ. ಅದನ್ನು ಮೀರಿ ಅವನೇನಾದರೂ ನೀತಿ, ಶಿಷ್ಟಾಚಾರ ಇತ್ಯಾದಿಗಳ ಬಗ್ಗೆ ಬೋಧಿಸಲು ಹೊರಟರೆ ಅದೇ ಅಪರಾಧವೆನ್ನುವಂತೆ ಆಕ್ಷೇಪಿಸುವವರು ಎಷ್ಟೋ ಮಂದಿ. ತಪ್ಪನ್ನು ಎಸಗಿದ ವಿದ್ಯಾರ್ಥಿಯನ್ನು ಸರಿದಾರಿಗೆ ತರುವುದಕ್ಕಾಗಿ ಶಿಕ್ಷಕನು ವಿದ್ಯಾರ್ಥಿಗಳನ್ನು ದಂಡಿಸುವಂತಿಲ್ಲ.
ಯಾವುದೇ ರೀತಿಯ ಶಿಕ್ಷೆ ನೀಡುವಂತಿಲ್ಲ. ಶಿಕ್ಷೆ ಇಲ್ಲದೆ ಮಕ್ಕಳನ್ನು ತಿದ್ದುವುದು ಬಲು ಕಠಿಣ.

ಮನೆಯಲ್ಲಿ ಒಂದೋ ಎರಡೋ ಮಕ್ಕಳಿರುವ ಪುಟ್ಟ ಸಂಸಾರದಲ್ಲಿ ಗಂಡ – ಹೆಂಡಿರಿಬ್ಬರೂ ದುಡಿಯುವ ಇಂದಿನ ದಿನಗಳಲ್ಲಿ ಚಿಕ್ಕ-ಪುಟ್ಟ ಮಕ್ಕಳಿಗೆ ಆಸರೆ ಇಲ್ಲದಂತಾಗುತ್ತದೆ. ಹೊರಗೆ ಹೋಗಿ ದುಡಿಯುವ ದಂಪತಿಗಳು ಕೇವಲ ಹಣ ಸಂಪಾದನೆಯ ಕುರಿತು ಯೋಚಿಸುತ್ತಾರೆಯೇ ಹೊರತು ತಮ್ಮ ಮಡಿಲ ಕುಡಿಗಳ ಬಗ್ಗೆ, ಅವರ ಉತ್ತಮ ಭವಿಷ್ಯದ ಬಗ್ಗೆ ಚಿಂತಿಸುವುದಿಲ್ಲ. ಅವರ ಬೇಡಿಕೆಗಳನ್ನಷ್ಟೇ ಈಡೇರಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿ ಬೇಕಾದ್ದು, ಬೇಡದಿರುವಂಥದ್ದು ಎಲ್ಲವನ್ನು ತಂದು ತುಂಬುತ್ತಾರೆ. ಮಕ್ಕಳನ್ನು ಯಾವುದೇ ಕೊರತೆ ಇಲ್ಲದಂತೆ ಬೆಳೆಸುತ್ತಿದ್ದೇವೆ ಎಂದು ತಿಳಿದಿರುತ್ತಾರೆ.

ಆ ಪುಟಾಣಿಗಳಾದರೋ ಬೇಕು – ಬೇಡದ್ದೆಲ್ಲ ಸಿಗುತ್ತಿರುವ ಕಾರಣ ದುಡ್ಡಿನ ಬೆಲೆಯ ಅರಿವೇ ಇಲ್ಲದೆ ಬೆಳೆಯುತ್ತಾರೆ. ಇವರಿಗೆ ಮನೆಯಲ್ಲಿ ಪ್ರೀತಿಯಿಂದ ಸರಿ ತಪ್ಪುಗಳ ಬಗೆಗೆ ತಿಳಿಸಿ ಕೊಡುವ ಅಜ್ಜ – ಅಜ್ಜಿಯರು ಇರುವುದಿಲ್ಲ. ಒಂದು ವೇಳೆ ಇದ್ದರೂ ಇವರ ಜೊತೆಗಿರುವುದಿಲ್ಲ. ಮಕ್ಕಳಿಗೆ ಸಂಪ್ರದಾಯ, ಸಂಸ್ಕಾರ ಇತ್ಯಾದಿಗಳನ್ನು ಕಲಿಸಬೇಕು. ಆದರೆ ತಿಳಿಸಿಕೊಡಬೇಕಾದವರೇ ಸಂಪ್ರದಾಯಗಳನ್ನು ಆಚರಿಸುವುದಿಲ್ಲ. ಇನ್ನು ಹೇಗೆ ತಾನೇ ಮಕ್ಕಳು ಕಲಿಯಲು ಸಾಧ್ಯ? ಹಿರಿಯರನ್ನು ನೋಡಿ ಕಲಿಯಬೇಕಾಗಿರುವ ಎಷ್ಟೋ ವಿಚಾರಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.

ಪೋಷಕರಾದ ನಾವು ಮಕ್ಕಳಿಗೆ ಮಾದರಿಯಾಗಿರಬೇಕು. ಆಚಾರ – ವಿಚಾರ, ಉಡುಗೆ – ತೊಡುಗೆ, ವೇಷ- ಭೂಷಣಗಳ ಬಗ್ಗೆ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಮನೆಯಲ್ಲಿ ಮಕ್ಕಳನ್ನು ಅತಿಯಾದ ಮುದ್ದು ಮಾಡಿ ಬೆಳೆಸಿ, ಅವರ ತಪ್ಪುಗಳನ್ನು ತಿದ್ದದೇ ಇದ್ದರೆ ಮುಂದೊಂದು ದಿನ ಸಮಾಜದಲ್ಲಿ ಬರಿ ದುಷ್ಟ ಜನರೇ ಬಹು ಸಂಖ್ಯಾತರಾಗಬಹುದು. “ಇಂದಿನ ಮಕ್ಕಳೇ ಮುಂದಿನ ಜನಾಂಗ” . ತಾನು ಮಾಡಿದ್ದೇ ಸರಿ, ತಾನು ಆಡಿದ್ದೇ ಸರಿ ಎಂಬ ಅಹಂಕಾರ ಮನೋಭಾವವನ್ನು ಬೆಳೆಸಿಕೊಂಡ ಮಕ್ಕಳು ಮುಂದೆ ಸಮಾಜ ಕಂಟಕರಾಗಿ ದೇಶಕ್ಕೆ ಹೊರೆಯಾಗುತ್ತಾರೆ. ಚಿಕ್ಕಂದಿನಲ್ಲಿ ಅತಿ ಮುದ್ದಿನಿಂದ ಬೆಳೆದ ಮಗು ಬೆಳೆದು ನಿಂತು ಕಿಶೋರಾವಸ್ಥೆ, ಯೌವನಾವಸ್ಥೆಗೆ ತಲುಪಿದಾಗ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ” ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ” ?

ಇಂದಿನ ಜಾಲತಾಣ, ಸಮೂಹ ಮಾಧ್ಯಮ, ಸ್ನೇಹಿತರ ಸಹವಾಸ, ದುಷ್ಟರ ಸಂಪರ್ಕ ಇತ್ಯಾದಿಗಳಿಂದ ಆಕರ್ಷಿತರಾಗಿ ಮಾಡಬಾರದಂತಹ ಕೆಲಸಗಳನ್ನು ಅಪರಾಧಗಳನ್ನು ಮಾಡುತ್ತಾರೆ. ಚಿಕ್ಕಂದಿನಿಂದಲೇ ಮುದ್ದಿನಿಂದ ಬೆಳೆದ ಅವನು /ಅವಳು ಹಠದ ಸ್ವಭಾವವನ್ನೇ ಮೈಗೂಡಿಸಿಕೊಂಡಿದ್ದು ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿರುತ್ತಾರೆ. ಕೋಪ, ಆವೇಶ, ಕ್ರೋಧ, ಮತ್ಸರ ಇಂತಹ ದುರ್ಗುಣಗಳನ್ನೇ ಮೈಗೂಡಿಸಿಕೊಂಡಿರುತ್ತಾರೆ. ತನಗೆ ಪ್ರಿಯವಾದ ವಸ್ತು ಎಲ್ಲೇ ಇದ್ದರೂ, ಅದು ಏನೇ ಆದರೂ ತನಗೆ ಬೇಕು ಎಂಬ ಕೆಟ್ಟ ಕಾಮನೆಗೆ ಒಳಗಾಗಿ ಆವೇಶಭರಿತರಾಗಿ ಅಪರಾಧಗಳನ್ನು ಎಸೆಗುತ್ತಾರೆ. ಈ ರೀತಿಯಾಗಿ ದುಷ್ಟರ ಸಹವಾಸದಲ್ಲಿ ಬಿದ್ದು , ಕೆಟ್ಟ ದಾರಿ ತುಳಿದ ಮಗನನ್ನು/ ಮಗಳನ್ನು ಸರಿದಾರಿಗೆ ತರಲಾಗದೆ ಪೋಷಕರು ಹಗಲಿರುಳು ಕಣ್ಣೀರು ಹಾಕುತ್ತಿರುತ್ತಾರೆ.

ಇಲ್ಲಿ ನಾವು ಚಿಂತಿಸಬೇಕಾದ ವಿಷಯವೆಂದರೆ ಆ ಹುಡುಗ/ ಹುಡುಗಿ ಆ ರೀತಿ ದಾರಿ ತಪ್ಪಲು ಕಾರಣರು ಯಾರು ? ಪೋಷಕರು ಎಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ಮಕ್ಕಳನ್ನು ಎಳವೆಯಲ್ಲಿ ತಿದ್ದಿ, ಬುದ್ದಿ ಹೇಳಿ ಸನ್ಮಾರ್ಗದಲ್ಲಿ ನಡೆಸಬೇಕಾಗಿತ್ತು. ಅವರು ಮಕ್ಕಳಿಗೆ ಬೇಕು ಬೇಕಾದುದನ್ನೆಲ್ಲ ಒದಗಿಸುವುದಷ್ಟೇ ನಮ್ಮ ಕೆಲಸವೆಂದು ತಿಳಿದು, ಹಣ ಸಂಪಾದನೆಗೆ ಹೆಚ್ಚಿನ ಹೊತ್ತು ನೀಡಿದ್ದೆ ದೊಡ್ಡ ತಪ್ಪು. ಅಲ್ಲದೆ ಚಿಕ್ಕಂದಿನಲ್ಲಿ ಮಾಡಿದ ಸಣ್ಣ ಪುಟ್ಟ ತಪ್ಪು ಗಳೇ ಆದರೂ ಅದನ್ನು ತಿದ್ದಿ ಅವರಿಗೆ ಸರಿ ತಪ್ಪುಗಳ ಬಗೆಗೆ ತಿಳಿಸಬೇಕಾದುದು ಪೋಷಕರ ಕರ್ತವ್ಯ. ಮಕ್ಕಳು ಕೇಳಿ ಕಲಿಯುವುದಕ್ಕಿಂತ ಹೆಚ್ಚು ನೋಡಿ ಕಲಿಯುತ್ತಾರೆ. ಮನೆಯಲ್ಲಿ ಅಪ್ಪ ಅಮ್ಮ ಆಚಾರ- ವಿಚಾರ , ಸಂಪ್ರದಾಯ, ಪೂಜೆ ,ದೇವರು , ಪುರಾಣ ಇತ್ಯಾದಿಗಳ ಬಗ್ಗೆ ಶ್ರದ್ಧಾ ಭಕ್ತಿಯಿಂದ ಇದ್ದರೆ ಅದನ್ನು ನೋಡಿ ಮುಂದಿನ ಜನಾಂಗ ಅವನ್ನೆಲ್ಲಾ ಮೈಗೂಡಿಸಿಕೊಳ್ಳುತ್ತಾರೆ.

ಇಂದು ನಾವು ಆಧುನಿಕತೆ, ಪಾಶ್ಚಾತ್ಯ ಸಂಸ್ಕೃತಿ ಮುಂತಾದವುಗಳ ಹೆಸರಿನಲ್ಲಿ ನಮ್ಮತನವನ್ನೇ ಮರೆತು ಆಚಾರ , ಸಂಪ್ರದಾಯಗಳನ್ನು ತ್ಯಜಿಸಿ ಮನೋನೆಮ್ಮದಿಯನ್ನು ಕಳೆದುಕೊಂಡು ಯಂತ್ರದಂತೆ ದುಡಿಯುವುದು, ಹಣ ಸಂಪಾದನೆ ಮಾಡುವುದು ಇಷ್ಟರಲ್ಲೇ ತಲ್ಲೀನರಾಗಿದ್ದೇವೆ . ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯುವಜನತೆ ಮಾಡಬಾರದುದನ್ನು ಮಾಡಿ, ತಿನ್ನಬಾರದುದನ್ನು ತಿಂದು, ಕುಡಿದು ಮೋಜು – ಮಸ್ತಿ ಮಾಡುವುದರಲ್ಲಿ ತಮ್ಮ ಜೀವನವನ್ನು, ಸವೆಸುತ್ತಿದ್ದಾರೆ . ಅದೇ ಅವರ “ಧ್ಯೇಯ”ಎಂಬಂತಿರುತ್ತಾರೆ. ಆದರೆ ಮುಂದೊಂದು ದಿನ ಅವರಿಗೆ ಅವರ ತಪ್ಪಿನ ಅರಿವಾದಾಗ ಹಿಂದಿರುಗಲಾರದಷ್ಟು ಮುಂದೆ ಹೋಗಿರುತ್ತಾರೆ. ಆಗ “ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಆಗಿರುತ್ತದೆ. ಆದ್ದರಿಂದ ಮುಂದಿನ ಜನಾಂಗದ ರಕ್ಷಣೆ ಮಾಡಬೇಕಾದುದು ಇಂದಿನ ಯುವ ಮಾತಾ- ಪಿತೃಗಳು. ನಿಮ್ಮ ಕುಡಿಗಳ ಸರಿಯಾದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಮಕ್ಕಳನ್ನು ಬೆಳೆಸಬೇಕು. ಅದಕ್ಕಾಗಿ ನೀವೇ ಅವರಿಗೆ ಮಾದರಿಯಾಗಿರಬೇಕು. ನಮ್ಮ ಪವಿತ್ರ ಗ್ರಂಥಗಳಾದ ಗೀತೆ, ರಾಮಾಯಣ, ಮಹಾಭಾರತದ ಕಥೆಗಳನ್ನು ತಿಳಿಸುತ್ತಾ ಅವರನ್ನು ತಿದ್ದಿ ಬೆಳೆಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುತ್ತ ಜೀವನ ಸವೆಸುವ ಬದಲಾಗಿ ಮಕ್ಕಳನ್ನೇ ಆಸ್ತಿ ಆಗುವಂತೆ ಬೆಳೆಸಬೇಕು.

ಶ್ರೀಮದ್ ಭಗವದ್ಗೀತೆಯಲ್ಲಿ ಇಲ್ಲದ್ದು ಎಲ್ಲಿಯೂ ಇಲ್ಲ. ಅದರಲ್ಲಿ ಶ್ರೀ ಕೃಷ್ಣನು ಅರ್ಜುನನನ್ನು ಮಾಧ್ಯಮವಾಗಿಸಿ ಹೇಳಿರುವ ಬೋಧನೆಗಳನ್ನೆಲ್ಲ ನಾವು ಅಳವಡಿಸಿಕೊಳ್ಳಬೇಕು. ಮುಂದಿನ ಜನಾಂಗಕ್ಕೆ ಕಷ್ಟ- ಸುಖಗಳ ಅರಿವು ಮೂಡಿಸಿ, ಜೀವನದಲ್ಲಿ ತಾಳ್ಮೆ, ನೀತಿ, ಶಿಸ್ತು, ಪ್ರಾಮಾಣಿಕತೆ, ಸತ್ಯಸಂಧತೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ, ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ನಮ್ಮ- ನಿಮ್ಮೆಲ್ಲರ ಪಾತ್ರ ಬಹಳ ಹಿರಿದು.
“ಜೈ ಹಿಂದ್”

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.

7 Responses

  1. ಚಿಂತನೆಗೆ ಹಚ್ಚುವಂತಹ..ಹಾಗೂ ಉತ್ತಮಸಂದೇಶ ಹೊತ್ತ ಲೇಖನ.. ಚೆನ್ನಾಗಿ ಮೂಡಿಬಂದಿದೆ ಮೇಡಂ.. ವಂದನೆಗಳು

  2. ಶಂಕರಿ ಶರ್ಮ says:

    ಇಂದಿನ ಸಮಾಜದ ವಾಸ್ತವಿಕತೆಯನ್ನು ಅನಾವರಣಗೊಳಿಸುವ ಚಿಂತನಾತ್ಮಕ ಲೇಖನ ಬಹಳ ಚೆನ್ನಾಗಿದೆ ವನಿತಕ್ಕ

  3. ನಯನ ಬಜಕೂಡ್ಲು says:

    ಉತ್ತಮ ಲೇಖನ

  4. Padma Anand says:

    ಖಂಡಿತಾ ಚಿಂತನೆ ಮಾಡಬೇಕಾದ ವಿಷಯವೇ ಹೌದು. ಆದರೆ ಪರಿಸ್ಥಿತಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತಾಗಿದೆ.

  5. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಧನ್ಯವಾದಗಳು ನಾಗರತ್ನ ಮೇಡಂ, ಶಂಕರಿ ಅಕ್ಕ .
    ನಿಮ್ಮೆಲ್ಲರ ಪ್ರೋತ್ಸಾಹ ಕ್ಕೆ ಚಿರಋಣಿ

  6. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ವಂದನೆಗಳು ನಯನ ಮೇಡಂ, ಪದ್ಮ ಮೇಡಂ.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ

  7. Seetha s bhat says:

    Baraha channagide vanitakka.nammanne chintanege Ola padisuvanta baraha..all tha best.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: