ಥೀಮ್-ಬರಹ

ಜಾತ್ರೆಯೊಂದಿಗೆ ಕಳೆದ ಬಾಲ್ಯ

Share Button


ಸಂಕ್ರಾಂತಿ ಕಳೆದು ಬೇಸಿಗೆ ಬಂದರೆ ಸಾಕು ಒಂದೊಂದಾಗಿ ಹಬ್ಬ, ತೇರು, ಜಾತ್ರೆಗಳ ಕಲರವ ಶುರುವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳದ ನಡುವೆಯು ಅತ್ಯಂತ ಉತ್ಸಾಹದಿಂದ ಮೈಮರೆತು ಎಲ್ಲರೂ ಒಂದಾಗಿ ಮನದುಂಬಿ ಜಾತ್ರೆಯನ್ನು ಆಚರಿಸುವ  ಘಮ್ಮತ್ತು ಇದೆಯಲ್ಲಾ ಅದರ ಸೊಬಗೇ ಅದ್ಬುತ. ಜಾತ್ರೆಗಳು ನಮ್ಮ ಬಾಲ್ಯದ ದಿನಗಳನ್ನು ಈಗಲೂ ಸಹ ತಾಜಾಗೊಳಿಸುತ್ತವೆ‌.  ಬಾಲ್ಯವನ್ನು ದಾಟಿ ಉದ್ಯೋಗ ಹಾಗೂ ಇತರ ಕಾರಣಕ್ಕಾಗಿ ಪರ ಊರನ್ನು ಸೇರಿರುವ ಎಲ್ಲರೂ ಸಹ ನಮ್ಮೂರ ಜಾತ್ರೆ, ತೇರು ಎಂದು ತಮ್ಮ ತಮ್ಮ ಊರು, ಹಳ್ಳಿಗಳಿಗೆ ಮರಳಿ ಮತ್ತೆ ತಮ್ಮ ಬಾಲ್ಯದ ಜಾತ್ರೆಯ ತುಂಟಾಟವನ್ನು , ಆ ಸುಂದರ ದೃಶ್ಯವನ್ನು ಮತ್ತೆ ಕಣ್ಣ್ತುಂಬಿಸಿ ಕೊಳ್ಳುತ್ತಾರೆ.

ಊರು ಅದು ಯಾವುದೇ ಇರಲಿ, ಅಲ್ಲಿ ಒಂದು ದೇವಾಲಯ ಅಥವಾ ಗುಡಿ ಇದ್ದೆ ಇರುತ್ತದೆ. ಅಲ್ಲೆಲ್ಲಾ ವಾರ್ಷಿಕೋತ್ಸವಗಳೂ, ಜಾತ್ರೆಗಳೂ ನಡೆದೇ ನಡೆಯುತ್ತವೆ. ಅದರಲ್ಲೂ ಕರ್ನಾಟಕದಂತಹ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿರುವ ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಹಳ್ಳಿಯಲ್ಲೂ  ಒಂದು ದಿನದಿಂದ ಎರಡು ವಾರಗಳ ತನಕದ ಜಾತ್ರೆಗಳು ನಡೆಯುವುದನ್ನು ನಾವು ನೋಡಬಹುದು ಅದು ಉತ್ತರ ಕರ್ನಾಟಕದ ಬನಶಂಕರಿಯಮ್ಮನ ಜಾತ್ರೆ ಇರಬಹುದು ಅಥವಾ ಮಲೆನಾಡಿನ ಶಿರಸಿಯ ಮಾರಿಕಾಂಬೆಯ ಜಾತ್ರೆ ಇರಬಹುದು,  ಅಲ್ಲಿ ಊರಿಗೆ ಊರೇ ಪ್ರತಿ ನಿತ್ಯವು ತಮ್ಮೆಲ್ಲಾ  ನೋವನ್ನು ಮರೆತು ಪರಸ್ಪರ ಬಾಂಧವ್ಯದಿಂದ ಒಂದಾಗುತ್ತಾರಲ್ಲ  ಇದುವೇ  ಜಾತ್ರೆಯ ವೈಶಿಷ್ಟ್ಯತೆ.

ಜಾತ್ರೆ, ತೇರು ಎಂದರೆ ಕೇಳಬೇಕೆ ಹೊಸ ಹೊಸ ಆಟಿಕೆಗಾಗಿ ತಾಯಿಯ ಬಳಿ ಜಗಳವಾಡಿ, ಆಟಿಕೆ ತೆಗೆಸಿಕೊಡುವವರೆಗೂ ಮನೆಗೆ ಬರುವುದಿಲ್ಲ ಎಂದು ಹಟ ಮಾಡಿ ನಿಂತ ನೆನಪಿರಬಹುದು, ಮಿಠಾಯಿ, ಜಿಲೇಬಿ, ಐಸ್ ಕ್ರೀಂ, ಬಣ್ಣ ಬಣ್ಣದ ಬಲೂನ್  ಬೇಕೆಂದು ಗಲಾಟೆ ಮಾಡಿದ್ದು, ತೇರನ್ನು ಎಳೆಯುವಾಗ ನಾವು ಅದರ ಹಿಂದೆ ಹಿಂದೆ ಜೈಕಾರ ಹಾಕಿ ,  ಹುಲಿಯ ವೇಷ ಕುಣಿತ , ದೊಡ್ಡ ತಟ್ಟಿರಾಯನ ವೇಷಗಳನ್ನು  ಧರಿಸಿ ಕುಣಿಯುತ್ತಿರುವ ಜನರನ್ನು ಕಂಡು ನಾವು ಒಂದು ಕ್ಷಣ ಅವರೊಂದಿಗೆ ಹೆಜ್ಜೆಹಾಕಿದ ಕ್ಷಣ ಹೀಗೆ ಎಲ್ಲವನ್ನೂ ಮತ್ತೊಮ್ಮೆ ಜಾತ್ರೆ ನಮ್ಮ ನೆನಪಿಗೆ ತರುತ್ತದೆ‌.

PC: Internet

ಊರ ತೇರಿಗೆ ಹಣ್ಣುಕಾಯಿ ಮಾಡಿಸಲು ಅಪ್ಪನೊಂದಿಗೆ ಸರತಿ ಸಾಲಿನಲ್ಲಿ ನಿಂತು ರಥವೇರಿ ದೇವರನ್ನು ನೋಡಿದ್ದು, ನಂತರ ಪಾನಕ ಕುಡಿದು ಹಾಗೇ ಯಾವೆಲ್ಲಾ ಅಂಗಡಿಗಳು ಬಂದಿವೆ ಎಂದು ಒಂದು ಸುತ್ತು ಹಾಕಿ ಮನೆಗೆ ಬಂದು ಮತ್ತೇ ಸಂಜೆ ಅಮ್ಮನೊಂದಿಗೆ ಹೋಗಿ ಪೇಟೆಯಲ್ಲಿ ತಿರುಗಿದ್ದು, ಅಲ್ಲಿ ನೀರಿನಿಂದ ಗುಳ್ಳೆ ಬರುವ ಆಟಿಕೆಯನ್ನು ಉದುತಿದ್ದವನನ್ನು ನೋಡಿ ಆ ನೀರಿನ ಗುಳ್ಳೆಗಳನ್ನು ಹೊಡೆಯಲು ಜಿಗಿಯುತ್ತಿದ್ದ ನೆನಪು, ನಮ್ಮ ಅಚ್ಚು ಮೆಚ್ಚಿನ ಕ್ರಿಕೆಟ್ , ಸಿನಿಮಾ ನಟರ ಪೋಟೋ ಖರೀದಿಸಿ ಅದನ್ನು ನಮ್ಮ ಎಕ್ಸಾಮ್ ಪ್ಯಾಡ್ ಹಿಂದೆ ಅಂಟಿಸಿ ಸಂಭ್ರಮಿಸಿದ್ದು ಒಂದು ಕಡೆಯಾದರೆ, ೮ ಇಂಚಿನ ಟೀವ್ ಟೀವ್ ಎಂದು ಸದ್ದು ಮಾಡುತ್ತಿದ್ದ ವಿಡಿಯೋ ಗೇಮ್ ನಲ್ಲಿ ಆಟ ಆಡಿದ ಆ ನೆನಪು ಶಾಶ್ವತ. ಒಂದು ಜಾತ್ರೆ ನಮ್ಮ ಬಾಲ್ಯದ ದಿನಗಳನ್ನು  ಇಷ್ಟೇಲ್ಲಾ ಹಚ್ಚಹಸುರಾಗಿ ಮಾಡಿದೆ ಎಂದರೆ ನಾವೆಷ್ಟು ಅದೃಷ್ಟವಂತರು ಅಲ್ಲವೇ?

ಆದರೆ ಈ ಎಲ್ಲಾ ಸವಿಯನ್ನು  ನಾವೊಬ್ಬರೆ ಸವಿದರೆ ಸಾಕೇ? ನಾವು ನಮ್ಮ ಮಕ್ಕಳಿಗೂ ಜಾತ್ರೆಯಲ್ಲಿ  ಅವರ ಬಾಲ್ಯವನ್ನು ಸುಂದರವಾಗಿ ಕಳೆಯಲು ಬಿಡಬೇಕಲ್ಲವೇ? ಇಂದು ಸಹ ಜಾತ್ರೆ, ತೇರುಗಳು ನಡೆಯುತ್ತಲಿವೆ, ಆದರೆ ನಾವು ನಮ್ಮ ಮಕ್ಕಳ ಕೈಗೆ ಕಂಪ್ಯೂಟರ್, ಮೊಬೈಲ್ ನೀಡಿ , ನಾವು ನಮ್ಮ ಜೀವನದ ಜಂಜಾಟದಲ್ಲಿ ಮುಳುಗಿ ಬಿಡುತ್ತಿದ್ದೇವೆ. ನಾವು ಜಾತ್ರೆಗಳಲ್ಲಿ ಭಾಗವಹಿಸುವ ಬದಲು ವಾರಾಂತ್ಯಕ್ಕೆ ಮಾಲ್ ಗಳಿಗೆ ಹೋಗಿ ಹಣ ಖರ್ಚು ಮಾಡಿ ಅದನ್ನೇ ಎಂಜಾಯಮೆಂಟ್ ಎಂದು ತಿಳಿದು ಭ್ರಮೆಯಲ್ಲಿ ಬದುಕುತ್ತಿದ್ದೇವೆ.  ಜಾತ್ರೆಗಳು ಕೊಟ್ಟ ಸಣ್ಣ ಸಣ್ಣ ಸಂತಸಗಳನ್ನು , ಸಂಭ್ರಮಗಳನ್ನು  ಯಾವ ಮಾಲ್ ಗಳು ನೀಡಲಾರದು.

ನಮ್ಮೂರ ಜಾತ್ರೆ, ತೇರಿಗೆ ಹೋಗಲಾರದೆ ಕೆಲಸದ ಒತ್ತಡದ ನೆಪ ಹೇಳಿ ಮಹಾನಗರದಲ್ಲಿ ಉಳಿಯುವ ನಾವು, ಊರಿನಲ್ಲಿ ನಮ್ಮ ಬಾಲ್ಯದ ಗೆಳೆಯರು ಫೇಸ್ಬುಕ್ ನಲ್ಲಿ ಹಾಕಿದ ಜಾತ್ರೆಯ ಪೋಟೊಗಳನ್ನು ನೋಡಿ , ಅದಕ್ಕೆ ‘ಐ ಮಿಸ್ ಮೈ ಚೈಲ್ಡ್ ಹುಡ್ ಡೇಸ್’ ಎಂಬ ರೀಪ್ಲೇ ಮಾಡಿ ಸುಮ್ಮನಾಗುತ್ತೇವೆ.  ಊರ ಜಾತ್ರೆ, ಹಬ್ಬಗಳನ್ನು ನೆನಸಬೇಕಾದರೆ ನನ್ನಂತೆಯೇ ಊರು ಬಿಟ್ಟು ಬದುಕುತ್ತಿರುವ ಹಲವರಿಗೆ ಅದ್ಯಾಕಪ್ಪಾ ಊರು ಬಿಟ್ಟು ಬಂದೆ ಎಂದೆನಿಸದಿರದು. ಜಾತ್ರೆ ಎಂಬುದು ಒಂದು ನಿಜವಾದ ಸಂಭ್ರಮವೇ ಸರಿ. ಜಾತ್ರೆ  ಕೆಲವರ ಪಾಲಿಗೆ ಮೋಜಾದರೆ, ಹಲವರ ಪಾಲಿಗೆ ಬದುಕು, ನಮ್ಮೆಲ್ಲರ ಪಾಲಿಗೆ ಅದೊಂದು ಬಾಲ್ಯದ ಸವಿ ನೆನಪು

-ಸುರೇಂದ್ರ ಪೈ, ಭಟ್ಕಳ

10 Comments on “ಜಾತ್ರೆಯೊಂದಿಗೆ ಕಳೆದ ಬಾಲ್ಯ

  1. ಜಾತ್ರೆ ಯೊಂದಿಗೆ ಕಳೆದ ಬಾಲ್ಯ..ಸರಳ ಸುಂದರ ಬರಹವಾಗಿ ಹೊಮ್ಮಿದೆ..ನಮ್ಮ ಬಾಲ್ಯದ ನೆನಪಿನತ್ತ ಹೊರಳುವಂತೆ ಮಾಡಿದೆ..ವಂದನೆಗಳು ಸರ್..

  2. ನಮ್ಮನ್ನೂ ನಿಮ್ಮ ಜಾತ್ರೆಯಲ್ಲಿ ಸುತ್ತಿಸಿದ ಪುಣ್ಯ ನಿಮಗೆ! ಲೇಖನ ಸಖತ್ತಾಗಿದೆ.

  3. ಜಾತ್ರೆಯ ನೆನಪುಗಳು, ವಿವರಣೆಗಳು ಲೇಖನದಲ್ಗಿ ಸೊಗಸಾಗಿ ಮೂಡಿ ಬಂದಿದೆ

  4. ನಮ್ಮೂರ ಜಾತ್ರೆ ಯ ನೆನಪುಗಳು,ಬಾಲ್ಯವ ನೆನಪಿಸುವ ಸುಂದರ ಲೇಖನ..

Leave a Reply to Savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *