ಮೂರ್ಖರು – ಯಾರು?

Share Button


ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ.  ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ.  ಇದ್ದ ಸುಮಾರು ಶಿಕ್ಷಕಿಯರುಗಳು ಗಂಭಿರ ಮುಖಮುದ್ರೆಯಿಂದಲೇ ಇರುತ್ತಿದ್ದರು.  ನಮ್ಮಲ್ಲಿದ್ದ ವಿಜ್ಞಾನ ಶಿಕ್ಷಕಿಗೆ ಮದುವೆಯಾಗಿ ವರ್ಗಾವಣೆ ತೆಗೆದುಕೊಂಡು ಹೊರಟು ಹೋದರು.  ಅವರ ಜಾಗಕ್ಕೆ ಆಗತಾನೆ ವಿದ್ಯಾಭ್ಯಾಸ ಮುಗಿಸಿದ್ದ ಶುಭಾ ಮೇಡಂ ಬಂದರು.  ಅವರಲ್ಲಿ ಉತ್ಸಾಹ ಪುಟಿಯುತಿತ್ತು.  ಪಾಠ-ಪ್ರವಚನಗಳ ಸಮಯವೊಂದನ್ನು ಬಿಟ್ಟರೆ ಬೇರೆಲ್ಲಾ ಸಮಯದಲ್ಲಿ ಉಲ್ಲಾಸದಿಂದ ಮಾತುಗಳನ್ನಾಡಿಸುತ್ತಾ, ವಿಜ್ಞಾನದ ಕಥೆಗಳನ್ನು ಹೇಳುತ್ತಾ, ಹೊಸ ಹೊಸ ಒಳಾಂಗಣ, ಹೊರಾಗಂಣ ಆಟಗಳನ್ನು ಆಡಿಸುತ್ತಾ ನಮ್ಮೆಲ್ಲರ ಮೆಚ್ಚಿನ ಶಿಕ್ಷಕಿಯಾಗಿದ್ದರು.  ಬೇರೆಲ್ಲಾ ಹಿರಿಯ ಶಿಕ್ಷಕರು ಅವರಿಗೆ – ಮಕ್ಕಳಿಗೆ ಅಷ್ಟೊಂದು ಸಲುಗೆ ಕೊಡಬೇಡಿ, ನಿಮ್ಮ ತಲೆಯ ಮೇಲೇ ಕುಳಿತುಕೊಳ್ಳುತ್ತಾರೆ – ಎಂದು ಹೇಳುತ್ತಿದ್ದರೂ, ಶುಭಾ ಮೇಡಂಗೆ ಮಕ್ಕಳನ್ನು ಹೇಗೆ ಖುಷಿಯಾಗಿಯೂ ನಿಯಂತ್ರಣದಲ್ಲಿಯೂ ಇಟ್ಟುಕೊಳ್ಳಬಹುದು ಎಂಬುದು ತಿಳಿದಿತ್ತು.  ಮಿಕ್ಕವರಿಗೆ ಇದು ಅಷ್ಟು ರುಚಿಸುತ್ತಿರಲಿಲ್ಲ.

ಏಪ್ರಿಲ್‌ ಮಾಹೆ ಬಂತು.  ಎಲ್ಲರೂ ಪರೀಕ್ಷೆಗಳ ಭರಾಟೆಯಲ್ಲಿದ್ದರು.  ಒಂದನೇ ತಾರೀಖು, ಶುಭಾ ಮೇಡಂ ನಮ್ಮ ತರಗತಿಗೆ ಬಂದು ಹೇಳಿದರು –

ಇಂದು ಏಪ್ರಿಲ್‌ 1 ನೇ ತಾರೀಖು, ಯಾರನ್ನಾದರೂ ಏಪ್ರಿಲ್‌ ಫೂಲ್‌ ಮಾಡಬೇಕು, ಮಾಡೋಣ, ಹೇಳಿ ನನ್ನೊಂದಿಗೆ ಯಾರು ಕೈ ಜೋಡಿಸುತ್ತೀರಿ? – ಎಂದರು.

ಮೊದಲಿಗೆ ನಾನು ಹೇಳಿದೆ – ನಾನು ಮಿಸ್‌

ನನಗೆ ಇನ್ನೊಬ್ಬರು ಬೇಕು – ಶುಭಾ ಮಿಸ್‌ ಹೇಳಿದರು.

ಗೆಳತಿ ಜಯಲಕ್ಷ್ಮಿ ಹೇಳಿದಳು – ನಾನೂ ಬರುತ್ತೀನಿ ಮಿಸ್.‌

ಓಕೆ, ನೀವಿಬ್ಬರೂ ಈಗ ಇಲ್ಲಿಗೆ ಬನ್ನಿ – ಎಂದು ತಾವು ಕುಳಿತಿದ್ದ ಕುರ್ಚಿಯ ಹತ್ತಿರ  ನಮ್ಮಿಬ್ಬರನ್ನು ಕರೆದರು.  ನಾನು ಮತ್ತು ಜಯಲಕ್ಷ್ಮಿ ಅವರ ಕುರ್ಚಿಯ ಮುಂದಿದ್ದ ಮೇಜಿನ ಮುಂದೆ ಹೋಗಿ ನಿಂತುಕೊಂಡೆವು. 

ಶುಭಾ ಮೇಡಂ ಹೇಳಿದರು – ನೋಡಿ, ಇದು ನಮ್ಮ ಈ ತರಗತಿಯ ಮಕ್ಕಳಿಗೆ ಮಾತ್ರ ತಿಳಿದಿರಬೇಕು, ಮತ್ತೆ ಈಗಲೇ ಯಾರಿಗೂ ಗುಟ್ಟು ಬಿಟ್ಟು ಕೊಡಬಾರದು.

ಓಕೆ ಮಿಸ್‌ – ತರಗತಿಯ ಎಲ್ಲಾ ಮಕ್ಕಳೂ ಒಕ್ಕೊರಲಿನಿಂದ ಕೂಗಿದೆವು.

ಪದ್ಮ, ಜಯ ನೀವಿಬ್ಬರೂ ನಾಗರತ್ನ ಟೀಚರ್‌ ಮನೆಗೆ ಹೋಗಿ.  ಹೇಗೂ ಅವರ ಪತಿ ಊರಿನಲ್ಲಿ ಇಲ್ಲ, ಅದು ನನಗೆ ಗೊತ್ತು.  ಮನೆಯಲ್ಲಿ ಅವರ ಅತ್ತೆಯವರು ಇರುತ್ತಾರೆ.  ಅವರಿಗೆ ನೀವುಗಳು – ನಾಗರತ್ನ ಮೇಡಂ ಶಾಲೆಯಲ್ಲಿ ಪಾಠ ಮಾಡುವಾಗ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದಾರೆ.  ತಲೆಗೆ ನೀರನ್ನು ತಟ್ಟಿ ಬೆಂಚಿನ ಮೇಲೆ ಮಲಗಿಸಿದ್ದಾರೆ.  ಡಾಕ್ಟರಿಗೆ ಬರಹೇಳಿದ್ದಾರೆ.  ನಿಮ್ಮನ್ನೂ ಕರೆದುಕೊಂಡು ಬರಲು ಹೇಳಿದರು, ಈಗಲೇ ಬರಬೇಕಂತೆ, ಎಂದು ಹೇಳಿ ಕರೆತನ್ನಿ, ಮುಖದಲ್ಲಿ ಗಂಭಿರತೆ ಇರಲಿ, ಒಂದು ಸಣ್ಣ ಸುಳಿವೂ ಸಿಗಬಾರದು – ಎಂದರು.

ನಮ್ಮ ಶಾಲೆಯಿಂದ ಕೇವಲ 7 – 8 ನಿಮಿಷಗಳ ನಡಿಗೆಯಷ್ಟು ದೂರದಲ್ಲಿ ನಾಗರತ್ನ ಮೇಡಂ ಅವರ ಮನೆಯಿತ್ತು.  ಅದು ನಮಗೆಲ್ಲಾ ತಿಳಿದಿತ್ತು.  ಆದರೆ ನಾಗರತ್ನ ಮೇಡಂ ಅವರು ಸ್ವಲ್ಪ ಜಾಸ್ತೀನೇ ಅನ್ನುವಷ್ಟು ಗಂಭೀರ ಸ್ವಭಾವದವರು.  ಒಂದು ಸಣ್ಣ ಸಣ್ಣ ತಪ್ಪಿಗೂ ಕಠಿಣವಾಗಿ ಶಿಕ್ಷಿಸುತ್ತಿದ್ದರು.

ಸ್ವಲ್ಪ ಅಳುಕಾದರೂ ನಾನು ಏನೂ ಹೇಳದೆ ಹೊರಡಲು ತಯಾರಾದೆ.  ಗೆಳತಿ ಜಯಲಕ್ಷ್ಮಿ – ನಾನು ಹೋಗೋಲ್ಲ ಮೇಡಂ, ನಮ್ಮ ಮನೆಯಲ್ಲಿ ಬೈಯ್ಯುತ್ತಾರೆ – ಎಂದುಬಿಟ್ಟಳು.

ಸಹಪಾಠಿ ಗೌರಿ ಬರಲೊಪ್ಪಿದಳು.  ಆದರೆ ಅವಳು ಅಷ್ಟೊಂದು ಮಾತನಾಡುತ್ತಿರಲಿಲ್ಲ.

ಶುಭಾ ಮೇಡಂ ಹೇಳಿದರು – ಪದ್ಮಾ ಎಲ್ಲಾ ನೀನೇ ಹೇಳಬೇಕು, ಗೌರಿ ಸುಮ್ಮನೆ ನಿನ್ನ ಜೊತೆಗಿರುತ್ತಾಳೆ, ಆಯ್ತಾ? – ಎಂದರು.

“ಸರಿ” ಎಂದು ತಲೆ ಅಲ್ಲಾಡಿಸುತ್ತಾ ತರಗತಿಯ ಹೊರಗಡೆ ಯಾರಿಗೂ ಕಾಣದಂತೆ ಗೌರಿಯೊಡನೆ ನಾಗರತ್ನ ಮೇಡಂ ಮನೆಗೆ ಹೋದೆ.

ಅವರ ಅತ್ತೆಯವರು ಆಗತಾನೇ ಬೆಳಗಿನ ಕೆಲಸಗಳನ್ನು ಮುಗಿಸಿ ವೃತ್ತಪತ್ರಿಕೆ ಹಿಡಿದು ಕುಳಿತಿದ್ದರು.

ಗಾಭರಿಯನ್ನು ಮುಖದಲ್ಲಿ ತುಂಬಿಕೊಂಡು ಹೇಳಿದೆ – ನಾಗರತ್ನ ಮೇಡಂ ಪಾಠ ಮಾಡುವಾಗಲೇ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದಾರೆ.  ನೀವು ಈಗಲೇ ಶಾಲೆಗೆ ಬರಬೇಕಂತೆ.

ನನೊಂದಿಗೆ ಬಂದಿದ್ದ ಗೌರಿ, ಸುಮ್ಮನೆ ಮೌನಗೌರಿಯಂತೆ ನನ್ನೊಡನೆ ನಿಂತಿದ್ದಳು.

ಹೌದಾ? ಯಾಕೆ? ಏನಾಯಿತು? ಎಂದೂ ನಮ್ಮ ನಾಗರತ್ನ ಹಾಗೆಲ್ಲಾ ಹುಷಾರು ತಪ್ಪಿದವಳೇ ಅಲ್ಲವಲ್ಲಾ – ಎಂದು ಕಳವಳ ವ್ಯಕ್ತಪಡಿಸುತ್ತಾ, ಅಲ್ಲೇ ಇದ್ದ ದೇವರ ಫೋಟೋಗೆ ಕೈ ಮುಗಿಯುತ್ತಾ, ಮನೆಯಲ್ಲಿ ಉಡುವ ಸೀರೆಯನ್ನು ಬದಲಾಯಿಸಿ, ಹೇಗೋ ಒಂದು ಬೇರೆ ಸೀರೆ ಸುತ್ತಿಕೊಂಡು, ಚಪ್ಪಲಿ ಮೆಟ್ಟಿ ನಮ್ಮೊಂದಿಗೆ ಹೊರಟರು.

ದಾರಿಯುದ್ದಕ್ಕೂ ಅವರು ಪಡುತ್ತಿದ್ದ  ಗಾಭರಿ, ಆತಂಕಗಳನ್ನು ಗಮನಿಸಿದ ನನಗೋ, ಈವತ್ತು ನಾಗರತ್ನ ಮೇಡಂ ಕೈಲಿ ನನಗೆ ಸರಿಯಾದ ಪೂಜೆ ಇದೆ, ಎನ್ನುವ ಗಾಭರಿಯಿಂದ ಕೈಕಾಲುಗಳು ನಡುಗತೊಡಗಿದವು.

ಶಾಲೆಯ ಹತ್ತಿರ ಹತ್ತಿರ ಬರುತ್ತಾ – ನಮ್ಮ ನಾಗರತ್ನ ಈಗ ಎಲ್ಲಿದ್ದಾಳೆ? – ಕೇಳಿದರು ಅವರ ಅತ್ತೆ.

ಆಫೀಸ್‌ ರೂಮಿನಲ್ಲಿ ಮಲಗಿಸಿದ್ದಾರೆ, ಒಳಗಡೆ ಪುಕ ಪುಕ ಅನ್ನುತ್ತಿದ್ದರೂ, ಮೇಲೆ ಧೈರ್ಯವಾಗಿ ಹೇಳಿದೆ.

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ, ಅವರು ಬಲಭಾಗದಲ್ಲಿ ಇದ್ದ ಆಫೀಸ್‌ ರೂಮಿನ ಕಡೆ ಹೋಗುತ್ತಿದ್ದಂತೆ, ನಾನು ನಮ್ಮ ತರಗತಿ ಇದ್ದ ಎಡಗಡೆಗೆ ಬೇಗ ಬೇಗ ಹೋಗಿ ಹಿಂದಿನ ಬೆಂಚಿನಲ್ಲಿ ಕುಳಿತು ಕಿಟಕಿಯಿಂದ ನೋಡತೊಡಗಿದೆ.

ಅದೇ ಸಮಯಕ್ಕೆ ಸರಿಯಾಗಿ ಪೀರಿಯಡ್‌ ಮುಗಿದಿದ್ದರಿಂದ ಪಕ್ಕದ ತರಗತಿಯಲ್ಲಿ ಪಾಠ ಮಾಡುತ್ತಿದ್ದ ನಾಗರತ್ನ ಮೇಡಂ ಕೈಯಲ್ಲಿ ರಿಜಿಸ್ಟರ್‌, ಡಸ್ಟರ್‌, ಚಾಕ್ ಪೀಸುಗಳನ್ನು ಹಿಡಿದು ತರಗತಿಯಿಂದ ಹೊರಬಂದು ಆಫೀಸ್‌ ರೂಮಿನ ಕಡೆ ಹೊರಟರು.

ಮುಖಾಮುಖಿಯಾಗಲು ಇಬ್ಬರೂ ಗೊಂದಲಗೊಂಡರು.  ಆಫೀಸ್‌ ರೂಮಿನಿಂದ ಹೊರಬಂದ ಶುಭಾ ಮಿಸ್‌ –

ಏಪ್ರಿಲ್‌ ಫೂಲ್‌, ಏಪ್ರಿಲ್‌ ಫೂಲ್‌ – ಎಂದು ಚಿಕ್ಕ ಮಕ್ಕಳಂತೆ ಕೈ ತಟ್ಟುತ್ತಾ ಹೇಳಿದರು.

ಒಳಗಡೆಯಿದ್ದ ಮಿಕ್ಕೆಲ್ಲಾ ಶಿಕ್ಷಕರುಗಳೂ ಹೊರಬಂದು ಮೋಜಿನಲ್ಲಿ ಭಾಗಿಯಾದರು.

ನಂತರ ನಡೆದ ವಿಷಯವನ್ನೆಲ್ಲಾ ವಿವರಿಸಲಾಯಿತು.

ʼಏನೋ ಸಧ್ಯ, ನಾನು ಏಪ್ರಿಲ್‌ ಫೂಲ್‌ ಆದರೂ ಚಿಂತೆಯಿಲ್ಲ, ನಿನಗೇನೂ ಆಗಿಲ್ಲವಲ್ಲ ಅಷ್ಟೇ ಸಾಕು’ – ನಾಗರತ್ನ ಮೇಡಂ ಅವರ ಅತ್ತೆಯವರು ಕಕ್ಕುಲಾತಿಯಿಂದ ಹೇಳಿದರು.

ನಾಗರತ್ಮ ಮೇಡಂ, ಶುಭಾ ಮೇಡಂ ಅವರೆಡೆಗೆ ಕೆಂಗಣ್ಣಿನ ಒಂದು ನೋಟ ಬೀರಿ, ಹೇಳಿದರು – ಯಾರದು, ನಿಮ್ಮನ್ನು ಕರೆಯಲು ಬಂದದ್ದು? ತೋರಿಸಿ, ಅವರು ಯಾರು ಅಂತ, ಮಾಡ್ತೀನಿ ಅವರಿಗೆ – ಅಂದರು.

ನಾನು ಮುಂದಿನ ಮೂರು ದಿನಗಳು ನಾಗರತ್ನ ಮೇಡಂ ಅವರಿಗೆ ಮುಖ ತೋರಿಸಿದ್ದರೆ ಕೇಳಿ!

-ಪದ್ಮಾ ಆನಂದ್‌, ಮೈಸೂರು

13 Responses

  1. ಅಂತೂ ಗಂಭೀರ ವದನದ ಮೇಡಂ ಗೆ ಫೂಲ್ ಮಾಡಲುಯಶಸ್ವಿಯಾಗಿದ್ದೇನೋ ಸರಿ ..ಮೂರುದಿನ ಕಣ್ಣತಪ್ಪಿಸಿ ಓಡಾಡಿದ್ದು..ಹ್ಹಹ್ಜ…ಮನಕ್ಕೆ ಮುದ ತಂದಿತು ಗೆಳತಿ ಪದ್ಮಾ ಅನಂದ್..

    • Padma Anand says:

      ಲೇಖನ ಮುದ ನೀಡಿದ್ದು ಖುಷಿಯಾಯಿತು. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

  2. ನಯನ ಬಜಕೂಡ್ಲು says:

    Very nice story

  3. ASHA nooji says:

    ಏಪ್ರಿಲ್ ಫೂಲ್ ಸಕತ್

  4. Padma Anand says:

    ಲೇಖನವನ್ನು ಪ್ರಕಟಿಸಿದ ” ಸುರಹೊನ್ನೆ”ಗೆ ತುಂಬು ಮನದ ಧನ್ಯವಾದಗಳು.

  5. Hema Mala says:

    ಈಗ ಅರ್ಥವಾಯ್ತು, ಇನ್ನು ನಿಮ್ಮ ಬಗ್ಗೆ ‘ಎಪ್ರಿಲ್ 01’ ರಂದು ಜಾಗರೂಕತೆಯಿಂದ ಇರಬೇಕು! ಸೂಪರ್ ಬರಹ…

  6. ಶಂಕರಿ ಶರ್ಮ says:

    ಎಪ್ರಿಲ್ ಫೂಲ್ ಕಥೆ ಚೆನ್ನಾಗಿದೆ. ಮಕ್ಕಳು ಸಣ್ಣವರಿದ್ದಾಗ, ಪ್ರತಿ ಎಪ್ರಿಲ್ 1ನೇ ತಾರೀಕಿನಂದು ಮನೆಯಿಂದಲೇ ಪ್ರಾರಂಭಿಸಿ ಕಡಿಮೆ ಪಕ್ಷ ನಾಲ್ಕಾರು ಮಂದಿಗೆ ಫೂಲ್ ಮಾಡುತ್ತಿದ್ದ ನೆನಪಾಯಿತು.

  7. MANJURAJ H N says:

    ಕುತೂಹಲಕಾರಿಯಾಗಿದೆ. ಅಭಿನಂದನೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: