ಪರಾಗ

ವಾಟ್ಸಾಪ್ ಕಥೆ 48 : ಪಿತೃ ವಾತ್ಸಲ್ಯ

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಹೆಸರುವಾಸಿಯಾಗಿದ್ದ ಒಂದು ಪ್ರತಿಷ್ಠಿತ ಹೋಟೆಲಿಗೆ ವೃದ್ಧರಾಗಿದ್ದ ತನ್ನ ತಂದೆಯನ್ನು ಮಗನೊಬ್ಬ ಕರೆದುಕೊಂಡು ಬಂದನು. ಅಲ್ಲಿಗೆ ಬಂದಿದ್ದವರೆಲ್ಲ ಬಹುಪಾಲು ಜನರು ಸಮಾಜದ ಗಣ್ಯರು ಮತ್ತು ಆಧುನಿಕ ಯುವಕರು. ಜನಸಂದಣಿ ಬಹಳವಿದ್ದುದರಿಂದ ಅವರಿಬ್ಬರೂ ಸ್ವಲ್ಪ ಹೊತ್ತು ಕಾಯ್ದಿದ್ದರು. ನಂತರ ಜಾಗ ದೊರಕಿದಾಗ ಅಪ್ಪ ಮಗ ಎದುರುಬದುರಾಗಿ ಕುಳಿತರು. ಪಕ್ಕದ ಟೇಬಲ್ಲಿನಲ್ಲಿ ಆಧುನಿಕ ನವ ದಂಪತಿಗಳು ಊಟ ಮಾಡುತ್ತಿದ್ದರು. ಮಗ ಇಬ್ಬರಿಗೆ ಊಟವನ್ನು ಆರ್ಡರ್ ಮಾಡಿದನು. ಊಟ ಮಾಡುತ್ತಿರುವಾಗ ಆ ವೃದ್ಧರ ಕೈ ನಡುಗುತ್ತಿತ್ತು. ಪದಾರ್ಥವೊಂದು ಅವರ ಅಂಗಿಯ ಮೇಲೆ ಚೆಲ್ಲಿತು. ಅದನ್ನು ನೋಡುತ್ತಿದ್ದ ಯುವ ದಂಪತಿಗಳು ಮಾತನಾಡಿದರು, ”ಛೇ..ಛೇ.. ವಯಸ್ಸಾದವರನ್ನೆಲ್ಲ ಇಂತಹ ಜಾಗಕ್ಕೆ ಕರೆದುಕೊಂಡು ಬರಬಾರದು. ಅವರಿಗೆ ಶಿಸ್ತಾಗಿ ಊಟಮಾಡಲೂ ಬರುವುದಿಲ್ಲ. ಅವರ ಅಂಗಿಯೆಲ್ಲ ಗಲೀಜಾಗಿದೆ ಇಂತಹ ಅವಸ್ಥೆಯಲ್ಲಿ ಅವರನ್ನು ಹೋಟೆಲಿನಿಂದ ಹೊರಕ್ಕೆ ಬೀದಿಯಲ್ಲಿ ಹೇಗೆ ಕರೆದುಕೊಂಡು ಹೋಗುತ್ತೀರಿ?” ಎಂದರು.

ಅವರ ಮಾತನ್ನು ಕೇಳಿಸಿಕೊಂಡ ಮಗ ಏನೊಂದೂ ಉತ್ತರ ಕೊಡದೆ ತನ್ನಪ್ಪನಿಗೆ ತಾನೇ ತುತ್ತುಮಾಡಿ ಉಣ್ಣಿಸಿದನು. ಊಟ ಮುಗಿದ ನಂತರ ವಾಷ್ ಬೇಸಿನ್ನಿನ ಬಳಿಗೆ ಕೈಹಿಡಿದು ಕರೆದುಕೊಂಡು ಹೋಗಿ ಕೈ ಬಾಯಿ ತೊಳೆಸಿದ. ಅಂಗಿಯಲ್ಲಿ ಗಲೀಜಾಗಿದ್ದ ಭಾಗವನ್ನು ಉಜ್ಜಿ‌ ಉಜ್ಜಿ ತೊಳೆದ. ಅವರ ಅಂಗಿಯನ್ನು ಕಳಚಿ ತಾನು ತೊಟ್ಟುಕೊಂಡಿದ್ದ ಅಂಗಿಯನ್ನು ಅವರಿಗೆ ತೊಡಿಸಿದ. ತೊಳೆದ ಅಂಗಿ ಒದ್ದೆಯಾಗಿದ್ದರೂ ತಾನು ಧರಿಸಿದ. ಮೇಲೆ ತನ್ನ ಕೋಟನ್ನು ಹಾಕಿಕೊಂಡ. ಬಿಲ್ಲು ಚುಕ್ತಾಮಾಡಿ ಎಲ್ಲರಂತೆ ಹೋಟೆಲಿನಿಂದ ಹೊರ ನಡೆದ. ಹೊರನಿಂತಿದ್ದ ಕಾರಿನ ಬಳಿಗೆ ಹೋಗುವಷ್ಟರಲ್ಲಿ ಹೋಟೆಲಿನಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಇದನ್ನೆಲ್ಲ ಗಮನಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಮಗನನ್ನು ಕೂಗಿದರು ”ರೀ..ಮಿಸ್ಟರ್, ನೀವು ಏನನ್ನೋ ಬಿಟ್ಟು ಹೋಗುತ್ತಿದ್ದರಲ್ಲಾ” ಎಂದರು. ಮಗ ”ನಾನು ಯಾವುದೇ ವಸ್ತುವನ್ನು ಬಿಟ್ಟುಹೋಗಿಲ್ಲ” ಎಂದುತ್ತರಿಸಿದ.

ಆ ವ್ಯಕ್ತಿ ”ನಾನು ಹೇಳಿದ್ದು ನಿಮ್ಮ ವಸ್ತುವನ್ನಲ್ಲ. ಹಿರಿಯರಾದವರನ್ನು ಪ್ರೀತಿಯಿಂದ ಹೇಗೆ ನೋಡಿಕೊಳ್ಳಬೇಕೆಂಬ ಪಾಠವನ್ನು ಇಲ್ಲಿನವರಿಗೆಲ್ಲ ಬಿಟ್ಟು ಹೋಗುತ್ತಿದ್ದೀರಲ್ಲಾ” ಎಂದು ಎಂದರು.

ಮಗ ಹೇಳಿದ ”ಹೌದು ಈ ಪಾಠವನ್ನು ಕಲಿತಿದ್ದು ತಂದೆಯಿಂದ. ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ ನಮ್ಮ ತುಂಟಾಟಗಳನ್ನೂ ಸಹಿಸಿಕೊಂಡು ಬೇಸರಿಸದೆ ನಮ್ಮನ್ನು ತಿದ್ದಿ ನೋಡಿಕೊಂಡಿದ್ದಾರೆ. ಅದರಿಂದಲೇ ನಾವು ಈದಿನ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಈಗ ಅವರು ಮಗುವಿನ ಹಂತ ಮುಟ್ಟಿದ್ದಾರೆ. ಆದ್ದರಿಂದ ನಾನು ತಂದೆಯ ಸ್ಥಾನದಿಂದ ಅವರನ್ನು ಸಂಭಾಳಿಸುತ್ತಿದ್ದೇನೆ. ಹೆಚ್ಚೇನೂ ಇಲ್ಲ” ಎಂದು ಮುಂದೆ ನಡೆದ.

ಇವರ ಪಕ್ಕದಾಸನದಲ್ಲಿ ಕುಳಿತಿದ್ದ ಯುವದಂಪತಿಗಳು ಅಲ್ಲಿಗೆ ಬಂದು ತಮ್ಮ ನುಡಿಗಳಿಗಾಗಿ ಕ್ಷಮೆ ಕೋರಿದರು.ಹೋಟೆಲಿನಲ್ಲಿದ್ದ ಜನರು ಇದೆಲ್ಲಕ್ಕೂ ಸಾಕ್ಷಿಯಾದರು ಮಗನ ಪಿತೃ ವಾತ್ಸಲ್ಯದ ನಡವಳಿಕೆಗೆ ತಲೆದೂಗಿದರು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

8 Comments on “ವಾಟ್ಸಾಪ್ ಕಥೆ 48 : ಪಿತೃ ವಾತ್ಸಲ್ಯ

  1. ಪಿತೃವಾತ್ಸಲ್ಯಕ್ಕೆ ನಾವೂ ತಲೆದೂಗುವಂತಾಯಿತು. ಸದಾಶಯದ ಕಥೆ ಮನ ಮುಟ್ಟಿತು.

  2. ವೃದ್ಧ ತಂದೆಯೊಂದಿಗೆ ಈ ರೀತಿ ವ್ಯವಹರಿಸಿದ ಮಗನ ಮನಸ್ಸು ಶುದ್ಧ ಚಿನ್ನ!! ಒಂದೊಳ್ಳೆಯ ಸುಂದರ ಸಂದೇಶ ಹೊತ್ತು, ಸೂಕ್ತ ಚಿತ್ರದೊಂದಿಗೆ ಹೂನಗೆ ಸೂಸುತ್ತಿದೆ…ನಾಗರತ್ನ ಮೇಡಂ ಅವರ ವಾಟ್ಸಾಪ್ ಕಥೆ.

Leave a Reply to S.sudha Cancel reply

 Click this button or press Ctrl+G to toggle between Kannada and English

Your email address will not be published. Required fields are marked *