ಶೃಂಗಿಯೆಂಬ ಯೋಗಿ

Share Button


ಅರಿಯದೆ ಯಾವುದಾದರೂ ಪಾಪಕಾರ್ಯ ಅಥವಾ ತಪ್ಪು ಕೆಲಸ ಮಾಡಿದರೆ ಆ ತಪ್ಪು ಮನವರಿಕೆಯಾದಾಗ ಆತ ಪಶ್ಚಾತ್ತಾಪಪಟ್ಟನೆಂದರೆ ಅದಕ್ಕೆ ಕ್ಷಮೆಯಿದೆ ಎನ್ನುತ್ತಾರೆ. ಎಂದರೆ, ಮುಂದೆ ಅಂತಹ ತಪ್ಪು ತನ್ನಿಂದ ಆಗದಂತೆ ನೋಡಿಕೊಳ್ಳುತ್ತಾನೆ, ತಿದ್ದಿಕೊಳ್ಳುತ್ತಾನೆ, ಉತ್ತಮನಾಗುತ್ತಾನೆ. ಎಂಬುದು ಇದರ ಹಿಂದಿರುವ ತಾತ್ಪರ್ಯ. ಮನುಷ್ಯನೆಂದ ಮೇಲೆ ತಿಳಿದೋ ತಿಳಿಯದೆಯೋ ತಪ್ಪುಗಳು ಬಂದೇ ಬರುತ್ತವೆ. ತಪ್ಪು ಮಾಡುವುದು ರಾಕ್ಷಸ ಗುಣ. ಅದನ್ನು ಒಪ್ಪಿಕೊಂಡು ತಿದ್ದಿ ನಡೆಯುವುದು ಮಾನವೀಯ ಗುಣ, ಹಾಗೆಯೇ ಆದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ದೇವಗುಣವಂತೆ, ಅಂತೆಯೇ ಅರಿಷಡ್ವರ್ಗಗಳಲ್ಲಿ ಒಂದಾದ ಕೋಪವೂ ಮನುಷ್ಯನನ್ನು ಕೂಪಕ್ಕೆ ತಳ್ಳುತ್ತದೆ. ‘ಕೋಪವೆಂಬುದು ತನ್ನ ಪಾಪದಾ ನೆಲೆಗಟ್ಟು? ಕೋಪಿತಾ ಕೂಪಕ್ಕಿಳಿವ’ ಎಂದು ಸರ್ವಜ್ಞನನು ವಚನದಲ್ಲಿ ಹೇಳಿದ್ದಾನೆ. ಹೌದು, ಮುಂಗೋಪ ಸಲ್ಲದು. ಕೂಲಂಕುಷ ತಿಳಿಯದೆ ಕೋಪಿಸುವುದು ಅನರ್ಥಕ್ಕೆ ದಾರಿ.

ಕ್ರೋಧದಿಂದಲೇ ರಾಜನು ಬಾಧೆಗೊಳಗಾಗಿಹನು ಎನ್ನುವಂತೆ ಉತ್ತಮ ರಾಜ್ಯಾಡಳಿತ ಮಾಡುತ್ತಿದ್ದವನೂ ವೀರ ಅಭಿಮನ್ಯುವಿನ ಪುತ್ರನೂ ಆದ ಪರೀಕ್ಷಿತ್ರಾಜನ ಅರೆಕ್ಷಣದ ಕ್ರೋಧವು ಅನರ್ಥಕ್ಕೆ ದಾರಿಯಾಯ್ತು. ಒಬ್ಬ ರಾಜನ ಕೋಪಕ್ಕೆ ಮತ್ತೊಬ್ಬ ಯೋಗಿಯ ಕೋಪ. ರಾಜನ ಸಿಟ್ಟಿನಿಂದೇನಾಯ್ತು? ಯೋಗಿಯ ಕೋಪಕ್ಕೆ ಗುರಿಯಾದವರು ಯಾರು ನೋಡೋಣ.

ಅಂಗೀರಸ ಗೋತ್ರೋತ್ಪನ್ನನಾದ ‘ಶಮೀಕ’ನೆಂಬ ಒಬ್ಬ ಮಹರ್ಷಿ ಇದ್ದ. ಈತನ ಬಗ್ಗೆ ಇದೇ ಅಂಕಣದಲ್ಲಿ ಪರೀಕ್ಷಿತರಾಜನ ಕುರಿತಾಗಿ ಬರೆದ ಕತೆಯಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ. ಇವನ ಮಗನೇ `ಶೃಂಗಿ’. ಸದಾ ಸಾಮಾನ್ಯರಲ್ಲಿರುವಂತೆ ಋಷಿಗಳಲ್ಲೂ  ಕೆಲವರು ಬಹಳ ಬೇಗನೆ ಕೋಪೋದ್ರಿಕ್ತರಾಗುವವರೂ ಇನ್ನು ಕೆಲವರು ಶಾಂತ ಸ್ವಭಾವದವರೂ ಇರುತ್ತಿದ್ದರು. ಈ ನಿಟ್ಟಿನಲ್ಲಿ ಶಮೀಕನು ಬಹಳ ಶಾಂತ ಸ್ವಭಾವದ ಋಷಿಯಾದರೆ ಶೃಂಗಿಯು ತನ್ನ ತಂದೆಯವರಿಗಾದ ಅವಮಾನ ಸಹಿಸಲಾರದೆ ಸ್ವಲ್ಪ ಮುಂಗೋಪ ತೋರಿಸುತ್ತಾನೆ….? ಪಿತೃಸೇವೆಯನ್ನು ದೇವರ ಸೇವೆಯೆಂದು ನಂಬಿಮಾಡುತ್ತಿದ್ದನು ಶೃಂಗಿ. ತಪಸ್ಸಿಗೆ ತೊಡಗಿದರೆ ಲೋಕದ ಪರಿವೆಯೇ ಇಲ್ಲದ ತಪೋನಿರತನಾಗುತ್ತಿದ್ದನು ಶಮೀಕ ಋಷಿ. ಅಂತಹ ಸಂದರ್ಭದಲ್ಲಿ ಅಗ್ನಿಕಾರ್ಯ, ಅದಕ್ಕೆ ಬೇಕಾದ ಸವಲತ್ತುಗಳನ್ನೊದಗಿಸುವುದು, ಆಶ್ರಮಕ್ಕೆ ಬಂದವರನ್ನು ಸತ್ಕಾರ ಮಾಡುವುದು ಮುಂತಾದ ಕೆಲಸಗಳೆಲ್ಲ ಶೃಂಗಿಯೇ ವಹಿಸುತ್ತಿದ್ದ.

ಹೀಗಿರಲು ಒಂದು ದಿನ ಕುಶ-ಸಮಿಧೆಗಳನ್ನು ತರುವುದಕ್ಕಾಗಿ ಶೃಂಗಿಯು ಆಶ್ರಮದಿಂದ ಹೊರಗಡೆ ಬಹುದೂರ ಹೋಗಿದ್ದನು. ಅದೇ ವೇಳೆಗೆ ಹಸ್ತಿನಾವತಿಯ ರಾಜನೂ ವೀರ ಅಭಿಮನ್ಯುವಿನ ಮಗನೂ ಆದ ಪರೀಕ್ಷಿತ ರಾಜನು ಬೇಟೆಯಾಡುತ್ತಾ ಆ ದಾರಿಯಾಗಿ ಬಂದನು. ವಿನೋದಕ್ಕಾಗಿ ಬೇಟೆಯಾಡುತ್ತಾ ಬಂದಿದ್ದರೂ ರಾಜನು ನೀರಡಿಕೆಯಿಂದ ದಣಿದು ಬಳಲಿದ್ದ. ಆಶ್ರಮದ ಬಳಿ ತಪೋನಿರತನಾಗಿ ಕುಳಿತಿದ್ದ ಮುನಿಯನ್ನು ಕಂಡ ರಾಜನು ತನ್ನ ಬೇಟೆಯಾದ ಹರಿಣವು ಈ ದಾರಿಯಾಗಿ ಬಂತೇ? ಎಂದು ರಾಜನು ಶಮೀಕನಲ್ಲಿ ವಿಚಾರಿಸಿದ. ಪಂಚೇಂದ್ರಿಯಗಳನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡು ಇಹವನ್ನು ಮರೆತು ಪರಮಾತ್ಮನಲ್ಲೇ ಮನಸ್ಸು ನೆಟ್ಟು ತಪೋನಿರತನಾಗಿದ್ದ ಮುನಿಪುಂಗವನು ರಾಜನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲಿರಲಿಲ್ಲ. ರಾಜನಿಗೆ ಸಿಟ್ಟು ಕೆರಳಿತು. ‘ಹೋಗಲಿ, ಕುಡಿಯಲು ಸ್ವಲ್ಪ ಗಂಗೋದಕವನ್ನಾದರೂ ಕೊಡಿ’ ಎಂದ. ಋಷಿಯಿಂದ ಉತ್ತರ ಸಿಗದಿರಲು ರಾಜನಿಗೆ ಕ್ರೋಧ ಹೆಚ್ಚಾಯ್ತು. ಹತ್ತಿರದಲ್ಲೇ ಸತ್ತು ಬಿದ್ದಿದ್ದ ಹಾವೊಂದನ್ನು ಒಂದು ಕೋಲಿನ ಸಹಾಯದಿಂದ ಎತ್ತಿ ತಂದು ಮುನಿಯ ಕೊರಳಿಗೆ ‘ಹಾರ’ದಂತೆ ಹಾಕಿದವ ತನ್ನ ದಾರಿ ಹಿಡಿದ, ಆಗಲೂ ಶಮೀಕನು ತಪಸ್ಸಿನಿಂದ ಬಹಿರ್ಮುಖನಾಗಲೇ ಇಲ್ಲ.

ಇತ್ತ ಶೃಂಗಿಯು ತನ್ನ ಕೆಲಸ ಪೂರೈಸಿ ಆಶ್ರಮಕ್ಕೆ ಹಿಂದಿರುಗಿದಾಗ ಅವನಿಗೊಂದು ಆಶ್ಚರ್ಯ ಕಾದಿತ್ತು. ತಂದೆಯ ಕೊರಳಲ್ಲಿ ಸತ್ತ ಹಾವೊಂದು ಕೊರಳ ಹಾರದಂತೆ ಜೋತಾಡುತ್ತಿದೆ. ಈ ಕುಕೃತ್ಯವನ್ನು ಎಸಗಿದವರು ಯಾರು? ಅದು ಪರೀಕ್ಷಿತ್ರಾಜನ ಕೃತ್ಯವೆಂದು ದೂರದಿಂದ ನೋಡಿದವರು ಯಾರೋ ವಿಷಯ ತಿಳಿಸಿದರು. ಶೃಂಗಿಗೆ ಕೆಟ್ಟ ಕೋಪ ಬಂತು. ಭೂಪತಿಗೆ ಅಧಿಕಾರದ ಮದ ಏರಿತೇ! ನನ್ನ ಪೂಜ್ಯರಾದ ತಂದೆಯವರಿಗೆ ಹೀಗೆ ಅಪಮಾನ ಮಾಡುವುದೇ? ನಾಡಿಗೆ ಒಡೆಯನಾದ ರಾಜನು ತಾಪಸೋತ್ತಮರಾದ ಮಹರ್ಷಿಗೆ ಕುಚೇಷ್ಟೆ ಮಾಡುವುದೇ! ನದೀ ತೀರದಲ್ಲಿ ಆಚಮನ ಮಾಡಿದ ಶೃಂಗಿಯು ‘ಇನ್ನು ಏಳು ದಿನಗಳ ಅವಧಿಯಲ್ಲಿ ಪರೀಕ್ಷಿತ ರಾಜನಿಗೆ ಹಾವುಕಚ್ಚಿ ಮರಣ ಬರಲಿ’ ಎಂದು ಶಾಪವಿತ್ತನು.

ಶಮೀಕನು ಧ್ಯಾನದಿಂದ ಬಹಿರ್ಮುಖನಾದಾಗ ತನಗೆ ರಾಜ ಮಾಡಿದ ಕುಚೇಷ್ಟೆಯೂ ಅದಕ್ಕೆ ಪ್ರತೀಕಾರವಾಗಿ ಮಗನಿಂದಾದ ಅಚಾತುರ್ಯವೂ ತಿಳಿಯಿತು. ಮಗನನ್ನು ಕರೆದು ‘ಇದೇನು ಕುಮಾರ, ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟೆ! ದೇಶವನ್ನಾಳುವ ದೊರೆ ನಮ್ಮ ಆಶ್ರಮಕ್ಕೆ ಬಂದಾಗ ಅವರನ್ನು ಸತ್ಕಾರ ಮಾಡುವುದು ನಮ್ಮ ಧರ್ಮ. ಅದು ಬಿಟ್ಟು ಹೀಗೆ ಅರ್ಥವಿಲ್ಲದ ಕೆಲಸದಿಂದ ಅನರ್ಥಕ್ಕೆಡೆ ಮಾಡಿದೆಯಾ? ಹೋಗು ನಡೆದು ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ! ಕೊಟ್ಟ ಶಾಪದ ವಿಷಯವನ್ನು ರಾಜನಿಗೆ ಮುಟ್ಟಿಸುವ ಏರ್ಪಾಡು ಮಾಡು’ ಎಂದು ಬುದ್ಧಿ ಹೇಳಿದನು. ಶೃಂಗಿಗೀಗ ತನ್ನ ತಪ್ಪಿನ ಅರಿವಾಯ್ತು. ತಂದೆಯಲ್ಲಿ ಕ್ಷಮೆ ಬೇಡಿದನು ಹಾಗೂ ಒಬ್ಬ ಶಿಷ್ಯನನ್ನು ಅರಮನೆಗೆ ಕಳುಹಿಸಿದನು.

ಇತ್ತ ಶೃಂಗಿಗೆ ತಾನು ಕೋಪದ ಭರದಲ್ಲಿ ರಾಜನನ್ನು ಶಪಿಸಿದೆನಲ್ಲ ಎಂಬ ಪಶ್ಚಾತ್ತಾಪವಾದರೆ ಅತ್ತ ರಾಜನಿಗೂ ತಾನೊಬ್ಬ ಮಹರ್ಷಿಯನ್ನು ಹಾಗೆ ಅವಮಾನಿಸಬಾರದಿತ್ತು. ಈ ತನಕ ಜನಾನುರಾಗಿಯಾಗಿ ಪ್ರಜೆಗಳ ಪ್ರೀತಿ, ಪಾತ್ರ, ಗೌರವಕ್ಕೆ ಕಾರಣನಾಗಿದ್ದವ ಒಂದು ಕ್ಷಣದ ಕೋಪಕ್ಕೆ ಬುದ್ಧಿ ಕೊಟ್ಟೆನಲ್ಲ ಎಂಬ ಪಶ್ಚಾತ್ತಾಪವುಂಟಾಯ್ತು.

ಮುಂದೆ ಪರೀಕ್ಷಿತ್ರಾಜ ಮುನಿಯ ಶಾಪದಿಂದ ತಾನು ರಕ್ಷಣೆ ಪಡೆಯುವುದಕ್ಕಾಗಿ ಒಂದೇ ಕಂಬದ ಮೇಲೆ ಒಂದು ಮಂದಿರವನ್ನು ನಿರ್ಮಿಸಿ ಅದರಲ್ಲಿದ್ದುಕೊಂಡು ಏಳು ದಿನ ಕಳೆಯುವುದಕ್ಕೋಸ್ಕರ ಉದ್ಯುಕ್ತನಾದ, ಕೊನೆಯ ದಿನ ಸರ್ಪಗಳು ಮಾನವ ರೂಪದಲ್ಲಿ ಅತಿಥಿಯಾಗಿ ಬಂದು ಸರ್ಪರಾಜನಾದ ತಕ್ಷಕನು ರಾಜನಿಗಿತ್ತ ಹಣ್ಣಿನೊಳಗಿದ್ದ ಕ್ರಿಮಿಯಾಗಿ ನಿಂದು ರಾಜನನ್ನು ಕಚ್ಚಿ ಕೊಂದುದು; ಮುಂದೆ ಆತನ ಮಗನಾದ ಜನಮೇಜಯನು ರಾಜ್ಯಾಡಳಿತಕ್ಕೆ ಬಂದು ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡಲು ಸರ್ಪಾಧ್ವರವೆಂಬ ಯಾಗವನ್ನು ಕೈಗೊಂಡು, ಆ ಸಂದರ್ಭದಲ್ಲಿ ತಪೋನಿಧಿಗಳಾದ ವೈಶಂಪಾಯನರು ಜನಮೇಜಯನಿಗೆ ಹೇಳಿದ ಅವನ ಪೂರ್ವ ಇತಿಹಾಸವೇ ಮಹಾಭಾರತ ಕಥೆ, ಪಂಚಮ ವೇದವೆಂದು ಹಿಂದೂಗಳು ಪೂಜಿಸುವಂತ ಪುರಾಣ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

7 Responses

  1. ನಯನ ಬಜಕೂಡ್ಲು says:

    Nice

  2. ಪದ್ಮಾ ಆನಂದ್ says:

    ಕೋಪಾತುರಕ್ಕೆ ಬಲಿಯಾಗಿ ಕಷ್ಟವನ್ನನುಭವಿಸುವ ಪೌರಾಣಿಕ ಕಥೆ ನೀತಿಪಾಠವಾಗಿಯೂ ಹೊರಹೊಮ್ಮಿದೆ.

  3. ಪುರಾಣಕಥೆಗಳ…ಮರುಓದು ಮುದ ತರುವಂತೆ ಮಾಡುತ್ತದೆ ವಿಜಯಾ ಮೇಡಂ

  4. Anonymous says:

    ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

  5. Shashiprabha R Karnik says:

    Nice

  6. Anonymous says:

    ಓದುಗ ಬಳಗಕ್ಕೆ ಹಾಗೂ ಸುರಹೊನ್ನೆಯ ಅಡ್ಮಿನ್ ಹೇಮಮಾಲಾ ಇವರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  7. ಶಂಕರಿ ಶರ್ಮ says:

    ಅತಿ ಕೋಪದ ಪರಿಣಾಮವಾಗಿ ಕುಲವೇ ನಾಶವಾಗುವಂತಹ ಹಂತಕ್ಕೆ ತಲಪಿದ, ಉತ್ತಮ ಸಂದೇಶ ಹೊತ್ತ ಕಥೆ. ಎಂದಿನಂತೆ ಚಂದದ ನಿರೂಪಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: