ವಿಭೀಷಣ – ಧರ್ಮದ ಮೂರ್ತ ರೂಪ
ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ ಬಗ್ಗೆ ಇಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಧರ್ಮಪಾಲನೆ, ವಚನಪಾಲನೆ, ಕರ್ತವ್ಯ ನಿಷ್ಠೆ, ಪತ್ನಿ ಧರ್ಮ, ಸ್ನೇಹ ಧರ್ಮ, ಸಮರ ಧರ್ಮ, ಸಹಿಷ್ಣುತೆ, ಕ್ಷಮಾದಾನ ಹೀಗೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸದ್ಗುಣಗಳನ್ನು ಅದ್ಭುತವಾಗಿ ವಿವರಿಸಲಾಗಿದೆ. ರಾಮಾಯಣವು ಸತ್ಯವಾಗಿಯೂ ತ್ರೇತಾಯುಗದಲ್ಲಿ ನಡೆದದ್ದೆಂದು ನಂಬುವವರಿಗೂ, ರಾಮಾಯಣ ಅನೇಕ ಪಾತ್ರಗಳನ್ನೊಳಗೊಂಡ ಒಂದು ಕಾಲ್ಪನಿಕ ಮಹಾ ಕಥೆಯೆಂದು ವಿತಂಡ ವಾದ ಮಂಡಿಸುವವರಿಗೂ ಜೀವನ ಪಾಠವನ್ನು ಹೇಳಿಕೊಡುವ ಜಗತ್ತಿನ ಏಕೈಕ ಮಹಾಕಾವ್ಯ ‘ರಾಮಾಯಣ’.
ಇಲ್ಲಿ ಬರುವ ವ್ಯಕ್ತಿಗಳ ಗುಣ ಸ್ವಭಾವವು ಸರ್ವ ಕಾಲಕ್ಕೂ ಸಲ್ಲುವಂಥದ್ದು. ಇದರಲ್ಲಿ ಬರುವ ವಿಭೀಷಣನ ವ್ಯಕ್ತಿತ್ವ ಅತ್ಯಂತ ಪ್ರಭಾವಶಾಲಿಯಾದದ್ದು. ದೈವಭಕ್ತನೂ, ಧರ್ಮಶೀಲನೂ, ತನ್ನ ಸಾಮ್ರಾಜ್ಯಕ್ಕೆ ನಿಷ್ಠನೂ,ಹೆತ್ತವರಿಗೆ ಹಿತಕರನೂ, ಒಡಹುಟ್ಟಿದವರಿಗೆ ಪ್ರೀತಿಪಾತ್ರನೂ ಆಗಿದ್ದ ವಿಭೀಷಣ ಬಹಳ ಸಂಧಿಗ್ಧ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು.
ರಾವಣನು ಎಲ್ಲಿಯವರೆಗೂ ದೈವ ಭಕ್ತನೂ, ದೇಶಭಕ್ತನೂ, ಅತ್ಯುತ್ತಮ ದೊರೆಯೂ ಹಾಗು ಧರ್ಮೀಯನೂ ಆಗಿದ್ದನೋ, ಅಲ್ಲಿಯವರೆಗೂ ವಿಭೀಷಣನು ಆತನ ಅನುಯಾಯಿಯಾಗಿದ್ದನು.
ಧರ್ಮದ ಸೂಕ್ಷ್ಮತೆಯ ಬಗ್ಗೆ ಅನೇಕ ಬಾರಿ ತಿಳಿಸಿ ಹೇಳಿದರೂ ಒಪ್ಪದ ಅಣ್ಣ ರಾವಣನ ಬಗ್ಗೆ ಆತನಿಗೆ ಕೊನೆವರೆಗೂ ಅದೇ ಪ್ರೀತಿ, ಗೌರವವಿತ್ತು. ‘ಪರಸ್ತ್ರೀ ವ್ಯಾಮೋಹ’ ಅಧರ್ಮವೆಂದು ವಿವಿಧ ರೀತಿಯಲ್ಲಿ ತಿಳಿಸಿದರೂ ಕೇಳದ ರಾವಣನನ್ನೂ, ತನ್ನ ಜನ್ಮಭೂಮಿಯಾದ ಲಂಕೆಯನ್ನೂ ಧರ್ಮಕ್ಕಾಗಿ ತೊರೆಯ ಬೇಕಾಯಿತು.
ಸಹೋದರಿ ಶೂರ್ಪನಖಿಯ ಮೇಲಿನ ಅತಿಯಾದ ಪ್ರೀತಿ ಮತ್ತು ಸೀತೆಯ ಮೇಲಿನ ಮೋಹಕ್ಕೆ ಕಟ್ಟು ಬಿದ್ದ ರಾವಣನನ್ನು ಆತನ ಬಂಧು ಬಾಂಧವರು, ಮಿತ್ರರು, ಪ್ರಜೆಗಳು ಬೆಂಬಲಿಸಿದರು. ಆದರೆ ಅವರನ್ನೆಲ್ಲಾ ಎದುರಿಸಿದ ವಿಭೀಷಣನು, ಧರ್ಮವನ್ನು ಪ್ರತಿಪಾದಿಸುವ ರಾಮ ಲಕ್ಷ್ಮಣರನ್ನೂ, ವಾನರ ಸೇನೆಯನ್ನೂ ಬೆಂಬಲಿಸಿದನು. ‘ರಾಮ’ ತನ್ನ ಅಣ್ಣನ ಪ್ರಾಣವನ್ನು ತೆಗೆಯಲು ಬಂದ ಶತ್ರುವೆಂದು ತಿಳಿದಿದ್ದರೂ ಸಹ ಧರ್ಮಕ್ಕಾಗಿ ತನ್ನವರನ್ನೇ ಎದುರು ಹಾಕಿಕೊಂಡನು.
ಶತ್ರುವಿಗೆ ಲಂಕೆಯ ಅಭೇಧ್ಯ ಕೋಟೆಯನ್ನು ಭೇದಿಸುವ ರಹಸ್ಯವನ್ನು ಬಯಲು ಮಾಡಿದನು. ಇದರಿಂದ ಮೇಲ್ನೋಟಕ್ಕೆ ವಿಭೀಷಣ ಒಬ್ಬ ದೇಶ ದ್ರೋಹಿ ಎನಿಸಿದರೂ, ಅಧರ್ಮದಿಂದ ನಡೆದುಕೊಳ್ಳುವವರು ತನ್ನವರೇ ಆದರೂ ಸರಿಯೇ, ಅಂಥಹವರನ್ನು ಅನುಸರಿಸಬಾರದು ಎಂಬ ಸಾರ್ವಕಾಲಿಕ ಸಂದೇಶವನ್ನು ನೀಡುವುದರ ಮೂಲಕ ಧರ್ಮವನ್ನು ಎತ್ತಿ ಹಿಡಿಯುತ್ತಾನೆ.
ವಿಭೀಷಣನ ಮನದಾಳದಲ್ಲಾದ ತೊಳಲಾಟ, ಅನ್ಯಾಯವನ್ನು ಬೆಂಬಲಿಸಿದ ತನ್ನವರನ್ನು ಬಿಟ್ಟು, ಏಕಾಂಗಿಯಾಗಿ ನಡೆಸಿದ ಹೋರಾಟ, ತಾನು ಅರ್ಥೈಸಿ, ಅನುಸರಿಸಿಕೊಂಡು ಬಂದ ಧರ್ಮ ತತ್ವ-ಸಿದ್ಧಾಂತಗಳ ಮೇಲೆ ಆತನಿಗಿದ್ದ ಅಪಾರವಾದ ನಂಬಿಕೆ ಸರ್ವ ಕಾಲಕ್ಕೂ ಅನುಕರಣೀಯ.
ನ್ಯಾಯ, ನೀತಿ, ಧರ್ಮವೇ ಎಲ್ಲರಿಗಿಂತಲೂ, ಎಲ್ಲಕ್ಕಿಂತಲೂ ಮಿಗಿಲಾದುದು ಎಂಬ ಸಂದೇಶವನ್ನು ಸಾರುವ ವಿಭೀಷಣನ ವ್ಯಕ್ತಿತ್ವ ಇಂದಿನವರಿಗೆ ಮಾದರಿಯಾಗಿದೆ.
–ಮಾಲಿನಿ ವಾದಿರಾಜ್
ವಿಭೀಷಣನ ವ್ಯಕ್ತಿತ್ವ ವನ್ನು ಒರಗೆ ಹಚ್ಚುವ..ಚಿಕ್ಕ ಲೇಖನ ಆದರೂ ಚೊಕ್ಕ ಲೇಖನ..
ರಾಮಾಯಣ ಮಹಾ ಕಾವ್ಯದ ಉತ್ತಮ ಸಂದೇಶಗಳನ್ನೂ, ಅದರಲ್ಲೂ ವಿಭೀಷಣನ ಶ್ರೇಷ್ಠತೆಯನ್ನು ಸಂಕ್ಷಿಪ್ತಗೊಳಿಸಿಕೊಟ್ಟ ಲೇಖನ ಉತ್ತಮವಾಗಿದೆ.
ಸೊಗಸಾದ ಪಾತ್ರ ಪರಿಚಯ. ವಿಭಿಷಣನ ಗುಣ ಎಲ್ಲರೂ ಮೆಚ್ಚುವಂತದ್ದು, ಅನುಸರಿಸಬೇಕಾದಂತದ್ದು.
ನಾನು ಒಪ್ಪುತ್ತೇನೆ
ಅಸುರ ಕುಲದಲ್ಲಿ ಹುಟ್ಟಿದರೂ ಸುರ ಗುಣಗಳನ್ನು ಹೊಂದಿದ್ದ ವಿಶೇಷ ಪಾತ್ರ ವಿಭೀಷಣನದು. ಈ ಪಾತ್ರದ ಸಂದೇಶವನ್ನು ಪರಿಚಯಿಸಿದ ಲೇಖನ ಚೆನ್ನಾಗಿದೆ