ಬೊಗಸೆಬಿಂಬ

ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ

Share Button


ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ: ಸರ್ಕಾರದ, ಸಂಘ ಸಂಸ್ಥೆಯ ಜೊತೆಗೆ ಕೈಜೋಡಿಸೋಣ.

ಹಿಂದೆಂದಿಗಿಂತಲೂ ಈಗ ಬೇಸಿಗೆ ತನ್ನ ಪ್ರಭಾವವನ್ನು ಈಗಾಗಲೇ ನಮಗೆ ತೋರಿಸಿದೆ. ಸೂರ್ಯನ ಪ್ರಕಾರ ಬೆಳಕು ಬೆಳಗ್ಗೆಯಿಂದಲೇ ಪ್ರಾರಂಭವಾಗುತ್ತಿದೆ. ಇನ್ನು ಮಧ್ಯಾಹ್ನ ಹಂತದಲ್ಲಿ ಮಿತಿಮೀರಿದ ಬಿಸಿಲಿನಿಂದಾಗಿ ಮನುಷ್ಯನಿಂದ ಹಿಡಿದು ಪ್ರಾಣಿ-ಪಕ್ಷಿಗಳು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿವೆ.

ಹವಾಮಾನದ ವರದಿಯ ಪ್ರಕಾರ ಈ ಬಾರಿ ಬೇಸಿಗೆಯೂ ಕೂಡ ಹೆಚ್ಚಲಿದೆ ಮತ್ತು ಮಳೆಗಾಲದ ಅವಧಿಯು ಕೂಡ ಹೆಚ್ಚಲಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಈ ಹಂತದಲ್ಲಿ ನಾವು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮಳೆಗಾಲದಲ್ಲಿ ನೀರಿನ ಪ್ರವಾಹ ಹೆಚ್ಚಿ ಅನೇಕ ತೊಂದರೆಗಳು ನಡೆಯುತ್ತವೆ. ಅದೇ ರೀತಿ ಬೇಸಿಗೆಕಾಲದಲ್ಲಿ ಎಲ್ಲೆಡೆ ನೀರಿನ ಹಾಹಾಕಾರ ಹೆಚ್ಚಿ, ಕುಡಿಯುವ ನೀರಿನ ಸಮಸ್ಯೆಯೂ ಕೂಡ ಮಿತಿಮೀರುತ್ತದೆ.  

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳು ಹೆಚ್ಚಿನ ಕ್ರಮವಹಿಸಿ ನೀರಿನ ಸಮಸ್ಯೆಯನ್ನು ನಿವಾರಿಸಲು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಕಾಳಜಿ ವಹಿಸಿವೆ.  ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಲುವಾಗಿ ನೆನ್ನೆ ರಾಜ್ಯದ ಎಲ್ಲಾ ಜಿಲ್ಲಾಡಳಿತದೊಂದಿಗೆ ಸಿಎಂ ರವರು ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಹೆಚ್ಚುವರಿಯಾಗಿ ಪ್ರತಿ ಜಿಲ್ಲೆಗೆ ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಮತ್ತು ವಿದ್ಯುಚ್ಛಕ್ತಿಗೆ ತೊಂದರೆ ಆಗದಂತೆ ಕ್ರಮವಿಸಲಾಗುವುದು ಎಂದಿದ್ದಾರೆ. 7408 ಹಳ್ಳಿಗಳ 1115 ವಾರ್ಡ್ಗಳಲ್ಲಿ ನೀರಿಗೆ ತೊಂದರೆ ನಿವಾರಿಸುವುದು ಮುಂತಾದ ಕ್ರಮದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಹೊಸದಾಗಿ ಬೋರ್ವೆಲ್ ಕೊರಿಸಲು ಕೂಡ ಡಿಸಿಗಳಿಗೆ ಅಧಿಕಾರ ನೀಡಿದ್ದಾರೆ.

ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದ್ದಾರೆ. ನಿಜಕ್ಕೂ ಇದೊಂದು ಸ್ವಾಗತ ವಿಷಯ. ಏಕೆಂದರೆ ಈ ಹಂತದಲ್ಲಿ ನಾವು ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸುತ್ತೇವೆ  ಅದರಿಂದಾಗಿ ಸಾರ್ವಜನಿಕರು, ಪ್ರಾಣಿ -ಪಕ್ಷಿಗಳು ಸಮಸ್ಯೆಯಿಂದ ಮುಕ್ತವಾಗಬಹುದು. ಸರ್ಕಾರ, ಸಂಘ ಸಂಸ್ಥೆಗಳು ಈ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತಿವೆ ನಿಜ. ಆದರೆ ಮುಂದುವರೆದು ಸಾರ್ವಜನಿಕರು ಕೂಡ ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪ್ರತಿದಿನ ನೀರು ಬರುತ್ತಿದ್ದ ವಾರ್ಡ್ಗಳಲ್ಲಿ ದಿನ ಬಿಟ್ಟು ದಿನ ನೀರನ್ನು ಬಿಡುತ್ತಿದ್ದಾರೆ. ಇನ್ನು ಕೆಲವು ವಾರ್ಡ್ಗಳಲ್ಲಿ ವಾರಕ್ಕೆ ಎರಡು ಬಾರಿ ನೀರು ಬಿಡುವ ಅಂತದವರಿಗೆ ತಲುಪಿದೆ.

ಮೈಸೂರು ಮತ್ತು ಬೆಂಗಳೂರಿಗೆ ನೀರುಣಿಸುವ ಕಪಿಲ ಮತ್ತು ಕಾವೇರಿ ನದಿಗಳು ಕೂಡ ತಮ್ಮ ನೀರಿನ ಮಟ್ಟವನ್ನುಕಳೆದುಕೊಂಡಿವೆ. ಇದರಿಂದಾಗಿ ಕುಡಿಯುವ ನೀರಿಗೂ ಕೂಡ ಸಮಸ್ಯೆ ತಲೆದೋರುವ ಸ್ಪಷ್ಟ ಚಿತ್ರಣವನ್ನು ನಮಗಾಗಲೇ ನೀಡಿವೆ. ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನೀರು ಬಂದ ವೇಳೆಯಲ್ಲಿ ನಮಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಅವಶ್ಯಕತೆಗೆ ತಕ್ಕಂತೆ ಬಳಸಿ, ನಲ್ಲಿಯಲ್ಲಿ ಸುಮ್ಮನೆ ನೀರು ಪೋಲಾಗದಂತೆ ನೋಡಿಕೊಳ್ಳೋಣ. ಏಕೆಂದರೆ ನಾವು ಎಲ್ಲಾ ಕಡೆ ಗಮನಿಸುತ್ತಾ ಬಂದರೆ ಪ್ರತಿ ಮನೆಯ ಮುಂದೆಯೂ ಇರುವ ನಲ್ಲಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿರುತ್ತದೆ. ವ್ಯರ್ಥವಾಗಿ ಚರಂಡಿಯನ್ನು ಸೇರುತ್ತದೆ.

ಇದು ಒಂದೆಡೆಯಾದರೆ, ಮತ್ತೊಂದೆಡೆ ಕುಡಿಯುವ ನೀರಿಗಾಗಿ ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ಚಿತ್ರಣಗಳು ನಮ್ಮ ಕಣ್ಮುಂದೆ ಇವೆ.  ಎಷ್ಟೇ ಬೋರ್ವೆಲ್ಗಳು ಇದ್ದರೂ, ಸಂಪುಗಳು ಇದ್ದರೂ, ಕೂಡ ನೀರಿನ ಹಾಹಾಕಾರ ಮುಗಿಯುವುದೇ ಇಲ್ಲ. ಈ ಹಂತದಲ್ಲಿ ನಾವು ನೀರನ್ನು ಇತಿಮಿತಿಯಾಗಿ ಬಳಸಬೇಕು. ಹಲವು ಮನೆಗಳ ಮುಂದೆ ನೀರಿನ ನಲ್ಲಿಯನ್ನು ಆಫ್ ಮಾಡಿರುವುದೇ ಇಲ್ಲ. ಜೊತೆಗೆ ಮನೆಯ ಮುಂದೆ ನೀರನ್ನು ವ್ಯರ್ಥವಾಗಿ ಚೆಲ್ಲುತ್ತಾರೆ. ಜೊತೆಗೆ ತಮ್ಮ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು  ಹೆಚ್ಚು ನೀರು ಉಪಯೋಗಿಸಿ ತೊಳೆಯಯುತ್ತಾರೆ. ಜೊತೆಗೆ ತಮ್ಮ ದನಕರುಗಳಿಗೂ ಕೂಡ ಅಲ್ಲಿಯೇ ಸ್ನಾನ ಮಾಡಿಸುತ್ತಾರೆ. ಇನ್ನು ಮುಂದುವರೆದು ಮನೆಯಲ್ಲಿ  ಸ್ನಾನ ಇನ್ನಿತರ ಕೆಲಸಗಳಿಗೂ ಕೂಡ ಅತಿ ಹೆಚ್ಚು ನೀರನ್ನು ಉಪಯೋಗಿಸುತ್ತಿದ್ದಾರೆ.

ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ನಿಟ್ಟಿನಲ್ಲಿ ನಾವು ಎಷ್ಟು ಜಾಗೃತ ವಹಿಸುತ್ತೇವೆ ಅಷ್ಟು ಮುಖ್ಯವಾಗುತ್ತದೆ. ಈ ನೀರು ಇತರರಿಗೂ ಕೂಡ ಬೇಕಾಗುತ್ತದೆ ಎನ್ನುವ ಅಂಶದ ಬಗ್ಗೆ ಯೋಚಿಸಬೇಕು. ಮನುಷ್ಯರ ಪಾಡೇ ಈ ರೀತಿ ಇರುವಾಗ ಇನ್ನೂ ಜಾನುವಾರಗಳ, ಪ್ರಾಣಿ ಪಕ್ಷಿಗಳ ಪಾಡು ಹೇಳತಿರದು.  ಒಂದಲ್ಲ ಒಂದು ರೀತಿಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.


ಮನೆ ಮುಂದೆ ಚಿಕ್ಕದಾದ ಪಾತ್ರೆಗಳಲ್ಲಿ ಪಕ್ಷಿಗಳು ಬಂದು ಕುಡಿಯಲು ಅನುಕೂಲವಾದ ರೀತಿಯಲ್ಲಿ ಕ್ರಮವಿಸೋಣ. ಈಗಾಗಲೇ ಸಮಾಜಸೇವಕರು ಸಂಘ-ಸಂಸ್ಥೆಗಳು ಹಲವು ಪಾರ್ಕ್ ಗಳಲ್ಲಿ ಮರಗಳಿಗೆ ಹೊಂದಿಕೊಂಡಂತೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಹೆಚ್ಚಬೇಕು. ಪ್ರಾಣಿ -ಪಕ್ಷಿಗಳು ಕೂಡ ನಮ್ಮಂತೆ ನೀರನ್ನು ಕುಡಿಯಲು ಅವಲಂಬಿತವಾಗಿರುತ್ತವೆ. ನಾವು ಬದುಕಿ ಅವುಗಳನ್ನು ಬದುಕಿಸೋಣ.

ಜೊತೆಗೆ ಐದು ರೂಪಾಯಿ ಉಪಯೋಗಿಸಿ ಕುಡಿಯುವ ನೀರಿನ ಸವಲತ್ತುಗಳನ್ನು ಹಲವು ಬಡಾವಣೆಗಳಲ್ಲಿ  ಒದಗಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಹಲವು ಕಡೆ ನೀರು ಇದ್ದರೂ ಕೂಡ ಅತೀ ಹೆಚ್ಚು ಬಳಸಿ ಪೋಲು ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ಕಾಲುವೆಯ ನೀರನ್ನು ಕೂಡ ಕೊಡುತ್ತಿಲ್ಲ ಜೊತೆಗೆ ಅಕ್ಕಪಕ್ಕದಲ್ಲಿಹರಿಯುವ ನದಿಗಳು ಕೂಡ ಬತ್ತಿ ಹೋಗಿವೆ. ಬೋರ್ವೆಲ್ ನಲ್ಲಿ ಅಂತರ್ಜಲ ಕಡಿಮೆಯಾಗಿದೆ. ಕಿಲೋಮೀಟರ್ ವರೆಗೆ ಸಾಗಿ ನೀರನ್ನು ತರಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.      

ಆದುದರಿಂದ ನಾವು ಕುಡಿಯುವ ನೀರಿಗೆ ಎಲ್ಲೂ ಸಮಸ್ಯೆ ಆಗದಂತೆ ಬಳಸೋಣ. ಮುಖ್ಯವಾಗಿ ನದಿಗೆ ಸುತ್ತಮುತ್ತಲಿನ  ಚರಂಡಿಯ ಕೊಳಚೆಯ ನೀರು, ಕಾರ್ಖಾನೆಗಳ ಮಲಿನ ನೀರು ಸೇರದಂತೆ ನೋಡಿಕೊಳ್ಳೋಣ. ಸರ್ಕಾರದ ಜೊತೆಗೆ, ಸಂಘ ಸಂಸ್ಥೆಗಳ ಜೊತೆಗೆ ನಮ್ಮ ನಾಗರಿಕ ಕರ್ತವ್ಯವಾಗಿ ನಾವು ಕೂಡ ಮುನ್ನೆಚ್ಚರಿಕೆ ಕ್ರಮವನ್ನು ವಹಿಸೋಣ. ಕುಡಿಯುವ ನೀರಿನ ಹಾಹಾಕಾರ ಬರದಂತೆ ನೋಡಿಕೊಳ್ಳೋಣ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

9 Comments on “ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ

  1. ಇವತ್ತಿನ ಬಹು ಮುಖ್ಯ ಸಮಸ್ಯೆಯ ಕುರಿತು ಬರೆದಿದ್ದೀರಿ.

  2. ನೀರಿನ ಬರ ಎದುರಿಸಬೇಕಾದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ, ಲೇಖಕರ ಕಿವಿಮಾತುಗಳು ಬಹಳ ಪ್ರಸ್ತುತ ಎನಿಸಿವೆ.

  3. ನಾಗರೀಕ ಕರ್ತವ್ಯವನ್ನು ಜಾಗ್ರತಗೊಳಿಸುವ, ಎಲ್ಲರೂ ಎಚ್ಚೆತ್ತು ನಡೆಯಬೇಕಾದ ಅಗತ್ಯತೆಯನ್ನು ಸಾರುವ ಉಪಯುಕ್ತ ಲೇಖನ.

  4. ಬಹಳ ಪ್ರಸ್ತುತ ಬರೆಹ. Global warming, ಪರಿಸರ ನಾಶ, ಕಾಡಿನ ನಾಶ, ನಗರೀಕರಣ, ಕೊಳವೆ ಬಾವಿ,ನೀರಿನ ದುರುಪಯೋಗ ಇಂತಹ ಅನೇಕ ಕಾರಣಗಳಿಂದ ಈ ಸ್ಥಿತಿ ಬಂದಿದೆ. ಈಗಲಾದರೂ ಎಚ್ಚರ ವಹಿಸಬೇಕು

  5. ಲೇಖನದ ಕಿವಿಮಾತುಗಳು ಬಹಳ ಪ್ರಸ್ತುತವಾದದ್ದು

  6. ನಿಮ್ಮ ಸಾಮಾಜಿಕ ಕಾಳಜಿಗೆ ಶರಣು ಶರಣಾರ್ಥಿ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *