ಮನೆಮದ್ದು. ಹಿರಿಯರಿಂದ ರೂಢಿಗತವಾಗಿ ಬಂದ ಔಷಧೋಪಚಾರ.

Share Button


ಮನೆಮದ್ದು ಎಂದರೆ ಮನೆಯಲ್ಲೇ ತಯಾರಿಸಬಹುದಾದ ಔಷಧ. ಹಿಂದೆ ಇಷ್ಟೊಂದೆಲ್ಲ ಅಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳು ಇರಲಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಊರುಗಳಲ್ಲಿ ಯಾವುದೇ ಸೌಲಭ್ಯವಿರಲಿಲ್ಲ. ಅಂಥಹ ಸಮಯದಲ್ಲಿ ಹಿರಿಯರಾದ ಕೆಲವರು ತಮ್ಮ ಹಿರಿಯರಿಂದ ಕೇಳಿದ್ದ, ಕಂಡಿದ್ದ ಮನೆಯಲ್ಲೇ ಖಾಯಿಲೆಗಳಿಗೆ ಮಾಡಬಹುದಾದ ಔಷಧೋಪಚಾರದ ಬಗ್ಗೆ ತಿಳಿಸಿಕೊಡುತ್ತಿದ್ದರು ಜನರು ಅದನ್ನು ಪಾಲಿಸುತ್ತಿದ್ದರು. ಹೀಗಾಗಿ ಇಂಥಹ ಮನೆಮದ್ದುಗಳ ಬಳಕೆ ನಂಬಿಕೆಗೆ ಪಾತ್ರವಾಗಿತ್ತು. ಇವುಗಳಿಗೆ ಉಪಯೋಗಿಸಬಹುದಾದ ವಸ್ತುಗಳು ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಸೊಪ್ಪು, ಎಲೆ, ಹೂವು, ಕೆಲವು ಮನೆಬಳಕೆಯ ಸಾಂಬಾರ ಪದಾರ್ಥಗಳು ಮಾತ್ರ. ಹೀಗಾಗಿ ಸುಲಭವಾಗಿ ಔಷಧವನ್ನು ತಯಾರಿಸಿ ಬಳಸಬಹುದಾಗಿತ್ತು.

ನಮ್ಮ ತಂದೆಯವರ ತಾಯಿ ಆಗಿನ ಕಾಲದಲ್ಲಿ ಅಲ್ಪಸ್ವಲ್ಪ ಅಕ್ಷರಾಭ್ಯಾಸ ಮಾಡಿದ್ದರು. ಕನ್ನಡ ಪತ್ರಿಕೆಗಳನ್ನು ತಮ್ಮ ಇಳಿವಯಸ್ಸಿನಲ್ಲಿ ಓದಬಲ್ಲವರಾಗಿದ್ದರು . ಅವರು ಹುಟ್ಟಿದ ಮನೆ ಮತ್ತು ಗಂಡನ ಮನೆಯವರ ವೃತ್ತಿ ಕೃಷಿ. ಅವರು ಇಂತಹ ಕೆಲವು ಮನೆಮದ್ದುಗಳ ಬಗ್ಗೆ ಅರಿತಿದ್ದರು. ನಮ್ಮಲ್ಲಿ ಯಾರಿಗಾದರೂ ಸಾಮಾನ್ಯ ಜಡ್ಡು ಜಾಪತ್ರೆಗಳಾದರೆ ಇವನ್ನೇ ಮಾಡಿಸುತ್ತಿದ್ದರು, ಅವುಗಳ ಪ್ರಭಾವದಿಂದ ಖಾಯಿಲೆ ವಾಸಿಯಾಗುತ್ತಿತ್ತು.

ನಾವು ವಾಸವಾಗಿದ್ದ ಮನೆಯ ಹಿಂಭಾಗದಲ್ಲಿ ದೊಡ್ಡದಾದ ಖಾಲಿ ಜಾಗವಿತ್ತು. ಅಲ್ಲಿ ಹಣ್ಣು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದೆವು. ಹುಡುಗರಾಗಿದ್ದ ನಾವೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದೆವು. ನಮ್ಮ ಅಜ್ಜಿ ಹಣ್ಣು ತರಕಾರಿಗಳ ಜೊತೆಯಲ್ಲಿ ಕೆಲವು ಔಷಧೋಪಚಾರಕ್ಕೆ ಬರುವಂತಹ ಗಿಡಗಳನ್ನು ಬೇರೆ ಊರಿನಿಂದ ತರಿಸಿ ಹಾಕಿಸುತ್ತಿದ್ದರು. ಅವುಗಳಲ್ಲಿ ನುಗ್ಗೆ, ಹೊನಗೊನೆ, ಬಸಳೆ, ಮೆಂತ್ಯ, ಒಂದೆಲಗ, ಬಾಳೆ, ದೊಡ್ಡಪತ್ರೆ, ತುಳಸಿ, ಸೇರಿದ್ದವು.

ಹೊಟ್ಟೆಯಲ್ಲಿ ಗ್ಯಾಸ್ ತೊಂದರೆಗೆ ನುಗ್ಗೆಸೊಪ್ಪಿನ ಚಿಗುರು ಎಲೆಗಳನ್ನು ಕತ್ತರಿಸಿ ಪಕೋಡ ಮಾಡುವಾಗ ಕಡಲೆ ಹಿಟ್ಟಿಗೆ ಸೇರಿಸುವಂತೆ ಹೇಳುತ್ತಿದ್ದರು. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ತೊಂದರೆಯಿಂದ ಹೊಟ್ಟೆಯುಬ್ಬರ ಅಗದಂತೆ ತಡೆಯುತ್ತಿತ್ತು. ಕಡಲೆಹಿಟ್ಟು ಮತ್ತು ಅಡುಗೆ ಎಣ್ಣೆ ಸೇರಿ ಉಂಟಾಗುವ ಅಡ್ಡ ಪರಿಣಾಮವನ್ನು ಇದು ತಡೆಯುತ್ತದೆ ಎಂಬುದು ಅವರ ನಂಬಿಕೆ. ಅಲ್ಲದೆ ರಕ್ತಪುಷ್ಟಿ ಕಡಿಮೆಯಾಗಿದ್ದರೆ ನುಗ್ಗೆ ಸೊಪ್ಪನ್ನು ಇತರೆ ಬೆರಕೆ ಸೊಪ್ಪುಗಳ ಜೊತೆ ಬೆರೆಸಿ ಬಸ್ಸಾರು, ಮೊಶ್ಶಪ್ಪು, ಪಲ್ಯಗಳನ್ನು ಮಾಡಿಸುತ್ತಿದ್ದರು. ಇದರಿಂದ ಹೇರಳವಾಗಿ ಕಬ್ಬಿಣ, ಮತ್ತು ಕ್ಯಾಲ್ಷಿಯಂ ಅಂಶಗಳು ದೊರೆಯುತ್ತವೆ. ಅಲ್ಲದೆ ವಯಸ್ಸಾದವರ ಮೂಳೆ ಸವೆತದಿಂದಾಗುವ ತೊಂದರೆಗಳೂ ದೂರವಾಗುತ್ತವೆ.

ಬಾಳೆ ದಿಂಡನ್ನು ಸಣ್ಣದಾಗಿ ಕತ್ತರಿಸಿ ಕೋಸಂಬರಿ, ಪಲ್ಯಗಳನ್ನು ಮಾಡಿಸಿ ನಮಗೆಲ್ಲ ತಿನ್ನಲು ಹೇಳುತ್ತಿದ್ದರು. ಇದರಿಂದ ಹೊಟ್ಟೆಯಲ್ಲಿನ ಕಲ್ಮಷಗಳು ಹೊರಹೋಗಿ ಜೀರ್ಣಾಂಗ ಶುದ್ಧವಾಗುತ್ತದೆ. ಪಿತ್ತಕೋಶ, ಮೂತ್ರಕೋಶದಲ್ಲಿನ ಕ್ಯಾಲ್ಷಿಯಂ ಕಲ್ಲುಗಳು ಇದರಿಂದ ಕರಗುತ್ತವೆ.

ಒಂದೆಲಗದ ಸೊಪ್ಪನ್ನು ಹುರಿದು ಚಟ್ನಿ ಮಾಡಿಸುತ್ತಿದ್ದರು. ಅದು ಬಾಯಿಗೆ ಸ್ವಲ್ಪ ಕಹಿಯಾಗಿರುತ್ತಿತ್ತು. ಒತ್ತಾಯಕ್ಕೆ ತಿಂದರೂ ನಮಗೆ ಇಷ್ಟವಾಗುತ್ತಿರಲಿಲ್ಲ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ದೊಡ್ಡಪತ್ರೆ, ವೀಳ್ಯದೆಲೆ, ತುಳಸಿ, ಶುಂಠಿ, ಕಾಳುಮೆಣಸುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಶೇಖರಿಸಿಡುತ್ತಿದ್ದರು. ಊಟತಿಂಡಿ ಆದನಂತರ ಪುಡಿಗೆ ಸ್ವಲ್ಪ ಪ್ರಮಾಣದಲ್ಲಿ ಸುಣ್ಣ ಮತ್ತು ಬೆಲ್ಲ ಸೇರಿಸಿ ಬಾಯಿಗೆ ಹಾಕಿ ತಿನ್ನುವಂತೆ ಮಾಡುತ್ತಿದ್ದರು ಇದರಿಂದ ಆಹಾರದಲ್ಲಿ ಏನೇ ವ್ಯತ್ಯಾಸವಾಗಿದ್ದರೂ ಜೀರ್ಣ ಪ್ರಕ್ರಿಯೆಗೆ ತೊಂದರೆ ಬರುತ್ತಿರಲಿಲ್ಲ.

ಚಿಕ್ಕಮಕ್ಕಳಿಗೆ ನೆಗಡಿ, ಕೆಮ್ಮು ಆಗಿದ್ದರೆ ತುಳಸಿ ಎಲೆಯರಸ,ವೀಳ್ಯದೆಲೆಯ ರಸ, ಒಂದು ಹನಿ ಜೇನುತುಪ್ಪ ಸೇರಿಸಿ ನೆಕ್ಕಿಸುತ್ತಿದ್ದರು ಇಲ್ಲವೇ ಒಳಲೆಯಿಂದ ಕುಡಿಸುತ್ತಿದ್ದರು. ಮಗುವಿನ ಮೂಗು, ಎದೆಯಮೇಲೆ, ಮತ್ತು ಬೆನ್ನಿಗೆ ಬಜೆಬೇರನ್ನು ತೇಯ್ದು ಲೇಪನ ಮಾಡುತ್ತಿದ್ದರು. ಇದರಿಂದ ಖಂಡಿತ ಗುಣವಾಗುತ್ತಿತ್ತು.

ಅಡುಗೆ ಮನೆಯಲ್ಲಿ ಇರುತ್ತಿದ್ದ ಸಾಂಬಾರು ಪದಾರ್ಥಗಳಾದ ಜೀರಿಗೆ, ಕೊತ್ತಂಬರಿಬೀಜ, ಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಅರಿಷಿಣ, ಓವಿನಕಾಳು(ಅಜವಾನ), ಜಾಯಿಕಾಯಿ, ಬಜೆ, ಬೆಲ್ಲ, ಲವಂಗ, ಮೆಂತ್ಯ, ಜೇನುತುಪ್ಪ ಇತ್ಯಾದಿಗಳೆಲ್ಲ ಮನೆ ವೈದ್ಯಕ್ಕೆ ಉಪಯೋಗ ಆಗುವಂಥಹವೇ.

ಮಲಬದ್ಧತೆಯಾದರೆ ಜೀರಿಗೆ, ಕೊತ್ತಂಬರಿ, ಓವಿನಕಾಳುಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಸುತ್ತಿದ್ದರು. ಉತ್ತಮ ಫಲಿತಾಂಶ ನೀಡುತ್ತಿತ್ತು. ಇದರ ಬದಲಿಗೆ ಈಗ ಔಷಧ ಕಂಪನಿಯ ಓಮಂ ವಾಟರ್ ಬಂದಿದೆ.

ಶಾಲಾ ಕಾಲೇಜಿನ ದಿನಗಳಲ್ಲಿ ಬಹಳ ದೂರ ನಡೆದೇ ಹೋಗಬೇಕಾಗಿತ್ತು. ಅಷ್ಟೊಂದು ಒತ್ತೊತ್ತಾಗಿ ಮನೆಗಳಿರಲಿಲ್ಲ. ಹಾಗಾಗಿ ಹಲವಾರು ಮರಗಳು ಇರುವ ಕಾಲುದಾರಿಯಲ್ಲಿ ಹೋಗುತ್ತಿದ್ದೆವು. ಅಲ್ಲಿ ನೆಲ್ಲಿಕಾಯಿ, ನೇರಳೆಹಣ್ಣು, ಹುಣಿಸೇಕಾಯಿ, ಮಾವಿನಕಾಯಿಗಳು ಧಾರಾಳವಾಗಿ ದೊರಕುತ್ತಿದ್ದವು. ಆಗಿನ ಉತ್ಸಾಹದಲ್ಲಿ ಅವುಗಳನ್ನು ಇತಿಮಿತಿಯಿಲ್ಲದೆ ತಿನ್ನುತ್ತಿದ್ದೆವು ಇದರ ಪರಿಣಾಮವಾಗಿ ದೊಣ್ಣೆಗೆಮ್ಮು ಪ್ರಾರಂಭವಾಗಿ ನಮ್ಮ ಗುಟ್ಟು ಮನೆಯವರಿಗೆ ಗೊತ್ತಾಗುತ್ತಿತ್ತು. ಅಜ್ಜಿ ಬೈದು ಹಸಿಶುಂಠಿಯನ್ನು ಜಜ್ಜಿ, ಅದಕ್ಕಿಷ್ಟು ಮೆಣಸಿನಕಾಳು, ಚಿಟಕೆ ಅರಿಷಿಣ, ಒಂದೆರು ಚೂರು ಬೆಲ್ಲ ಸೇರಿಸಿ ಚೆನ್ನಾಗಿ ಜಗಿದು ತಿನ್ನಲು ಹೇಳುತ್ತಿದ್ದರು. ರಸವನ್ನು ಹೊರಕ್ಕೆ ಉಗುಳದೆ ನಿದಾನವಾಗಿ ನುಂಗಿಕೊಳ್ಳುವಂತೆ ಹೇಳುತ್ತಿದ್ದರು. ಕೆಲವುದಿನದ ಈ ಉಪಚಾರದ ನಂತರ ಕೆಮ್ಮು ವಾಸಿಯಾಗುತ್ತಿತ್ತು. ಒಂದೆರಡು ದಿನ ಮಾತ್ರ ಎಚ್ಚರಿಕೆ ವಹಿಸುತ್ತಿದ್ದೆವು. ಮತ್ತದೇ ಹುಡುಗುಬುದ್ಧಿ, ಅದೇ ತಪ್ಪು ಮಾಡುತ್ತಿದ್ದೆವು.


ಕೆಲವರಿಗೆ ಆಹಾರ ನೋಡಿದರೆ ತಿನ್ನಲು ವಾಕರಿಕೆ, ಹಸಿವೆ ಆಗದಿರುವುದು, ಆಯಾಸ, ಅಜೀರ್ಣ, ಅತಿಯಾದ ನಿದ್ರೆ ಇಂತಹ ತೊಂದರೆಗಳುಂಟಾಗುತ್ತಿತ್ತು. ಅವರಿಗೆ ನೀರಿಗೆ ಒಂದರ್ಧ ನಿಂಬೆಹಣ್ಣಿನ ರಸ ಹಾಕಿ ಅದಕ್ಕೆ ಚಿಟಿಕೆ ಅಡುಗೆಸೋಡಾ ಬೆರೆಸಿ ಕುಡಿಸುತ್ತಿದ್ದರು. ಹಾಗೇ ಹೊಕ್ಕುಳಿಗೆ ಹರಳೆಣ್ಣೆ (ಔಡಲೆಣ್ಣೆ) ಬಿಸಿಮಾಡಿ ಹಚ್ಚುತ್ತಿದ್ದರು. ಒಂದು ವೀಳ್ಯದೆಲೆಯನ್ನು ಹೆಂಚಿನ ಮೇಲೆ ಬಿಸಿಮಾಡಿ ಹೊಕ್ಕುಳ ಸುತ್ತ ಅದರಿಂದ ಶಾಖ ಕೊಡುತ್ತಿದ್ದರು. ನಿಧಾನವಾಗಿ ಮೃದುವಾಗಿ ಹೊಕ್ಕುಳ ಸುತ್ತ ಕೈಯಿಂದ ಸವರುತ್ತಿದ್ದರು.
ಆಗೆಲ್ಲ ಮಣ್ಣಿನ ಮಾಳಿಗೆ ಅಥವಾ ಹೆಂಚಿನ ಮನೆಗಳು ಹೆಚ್ಚಾಗಿದ್ದವು. ಅವುಗಳ ಸಂದಿಗಳಲ್ಲಿ ಚೇಳುಗಳು ಸೇರಿಕೊಂಡು ಬಿಡುತ್ತಿದ್ದವು. ಅವು ಕೆಳಕ್ಕೆ ಬಿದ್ದು ಕಾಣದೆ ಏನಾದರೂ ಅವುಗಳಿಗೆ ಕೈಯೋ, ಕಾಲೋ ತಗುಲಿದಾಗ ಅವು ಕಚ್ಚುತ್ತಿದ್ದವು. ತಕ್ಷಣ ಕಚ್ಚಿದ ಜಾಗಕ್ಕೆ ಕತ್ತರಿಸಿದ ಈರುಳ್ಳಿ ರಸವನ್ನು ಹಚ್ಚುತ್ತಿದ್ದರು. ಹಾಗೇ ಕಚ್ಚಿಸಿಕೊಂಡ ವ್ಯಕ್ತಿಗೂ ರಸಭರಿತ ಈರುಳ್ಳಿಯನ್ನು ಬೆಲ್ಲದ ಜೊತೆ ಜಗಿದು ತಿನ್ನಲು ಕೊಡುತ್ತಿದ್ದರು.

ಹಲ್ಲಿನಲ್ಲಿ ನೋವು ಬಂದರೆ ಲವಂಗವನ್ನು ಕುಟ್ಟಿ ಪುಡಿಯನ್ನು ನೋವಿರುವ ಜಾಗದಲ್ಲಿ ಕಚ್ಚಿ ಹಿಡಿದುಕೊಳ್ಳಲು ಹೇಳುತ್ತಿದ್ದರು. ಒಸಡೇನಾದರೂ ಊದಿಕೊಂಡಿದ್ದರೆ ಆ ಜಾಗದಲ್ಲಿ ಹರಳು( ಔಡಲ) ಬೀಜದ ಅರ್ಧ ಬಾಗವನ್ನು ಹೆಂಚಿನ ಮೇಲೆ ತಡೆದುಕೊಳ್ಳುವಷ್ಟು ಬಿಸಿಮಾಡಿ ಇಟ್ಟು ಕಾವುಕೊಡುತ್ತಿದ್ದರು.

ಮಾವಿನ ಹಣ್ಣಿನ ಕಾಲದಲ್ಲಿ ಕಣ್ಣುಗಳ ತೊಂದರೆ ಬಹಳವಾಗಿ ಮಕ್ಕಳಲ್ಲಿ ಕಂಡುಬರುತ್ತಿತ್ತು. ಕಣ್ಣು ನವೆಯಾಗುವುದು, ಉಜ್ಜಿದ ತಕ್ಷಣ ಕೆಂಪಾಗುವುದು, ಗುಡ್ಡೆ ಊದಿಕೊಳ್ಳುವುದು ಆಗುತ್ತದೆ. ಬೆಂದಿರುವ ಬಿಸಿಯನ್ನವನ್ನು ಬೆಣ್ಣೆಯೊಡನೆ ಚೆನ್ನಾಗಿ ಕೈಯಿಂದ ಹಿಸುಕಿ ಬೆರೆಸಿ ಶುಭ್ರವಾದ ಬಿಳಿಬಟ್ಟೆಯೊಂದರಲ್ಲಿ ಸುತ್ತಿ ಕಣ್ಣನ್ನು ಮುಚ್ಚಿ ರೆಪ್ಪೆಯ ಮೇಲ್ಭಾಗದಲ್ಲಿ ಇಟ್ಟು ಕಾವು ಕೊಡುತ್ತಿದ್ದರು. ಹಾಗೂ ಶುದ್ಧವಾದ ಹರಳೆಣ್ಣೆಯನ್ನು ಹತ್ತಿಯಿಂದ ಅದ್ದಿ ಇದನ್ನೂ ಮುಚ್ಚಿದ ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿರಿಸಿ ಅಂಗಾತ ಮಲಗಿಕೊಳ್ಳಲು ಹೇಳುತ್ತಿದ್ದರು.

ಈಗಿನ ಮಾರುಕಟ್ಟೆಯಲ್ಲಿ ಕಣ್ಣಿನ ರೆಪ್ಪೆಯ ತುದಿಗೆ ಹಚ್ಚಿಕೊಳ್ಳಲು ಕಾಜಲ್ ಅಥವಾ ಕಾಡಿಗೆ ಸಿಗುತ್ತದೆ. ಆದರೆ ಇದನ್ನು ಇನ್ನಷ್ಟು ಶುದ್ಧವಾದ ರೀತಿಯಲ್ಲಿ ಮನೆಯಲ್ಲಿ ನಮ್ಮ ಅಜ್ಜಿಯವರುಮಾಡಿಸುತ್ತಿದ್ದರು. ಒಂದು ಹೊಸ ಮಡಿಕೆಯನ್ನು ತಂದು ಚೆನ್ನಾಗಿ ನೀರಿನಿಂದ ಸ್ವಚ್ಛಗೊಳಿಸಿ ಒರೆಸಿ ಇಟ್ಟುಕೊಳ್ಳುವುದು. ಸೌದೆ ಒಲೆಯ ಮೇಲೆ ಮಡಿಕೆಯನ್ನು ತಲೆಕೆಳಗಾಗಿ (ಬಾಯಿ ಕೆಳಗಾಗಿ) ಇರಿಸುವುದು. ಮಡಕೆಯ ಹೊರಮೈಯಿಗೆ ಹೊನಗೊನೆ ಸೊಪ್ಪು ಮತ್ತು ನಂದಬಟ್ಟಲಿನ ಸೊಪ್ಪಿನ ರಸದ ಮಿಶ್ರಣವನ್ನು ಬಟ್ಟೆಯಲ್ಲಿ ಶೋಧಿಸಿ ಅದಕ್ಕೆ ಸ್ವಲ್ಪ ಹಸುವಿನ ಬೆಣ್ಣೆಯನ್ನು ಸೇರಿಸಿ ಲೇಪಿಸುತ್ತಿದ್ದರು. ಸಣ್ಣ ಉರಿಯಲ್ಲಿ ಕಾಯಿಸುತ್ತಿದ್ದಂತೆ ಮಿಶ್ರಣ ಹಚ್ಚಿದ್ದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದು ಶೇಖರವಾಗುತ್ತಿದ್ದಂತೆ ಒಲೆಯನ್ನು ಆರಿಸಿ ಮಡಕೆಯನ್ನು ತಣ್ಣಗಾಗಲು ಹಾಗೇ ಬಿಡುವುದು. ನಂತರ ಕೆರೆಬಿಲ್ಲೆ (ಈಗಿನ ಸ್ಕ್ರೇಪರ್)ಯಿಂದ ನಿಧಾನವಾಗಿ ಎರೆದು ಕಪ್ಪನ್ನು ಶುಭ್ರವಾದ ಡಬ್ಬಿಯಲ್ಲಿ ಶೇಖರಿಸಿಡುತ್ತಿದ್ದರು. ಅದನ್ನವರು ‘ಕಣ್ಕಪ್ಪೆಂದು’ ಕರೆಯುತ್ತಿದ್ದರು. ಇದನ್ನು ಸಣ್ಣ ಮಕ್ಕಳಿಂದ ವಯಸ್ಸಾದವರ ವರೆಗೆ ಎಲ್ಲರೂ ಅಪಾಯವಿಲ್ಲದಂತೆ ಬಳಸಬಹುದು. ಅಡ್ಡ ಪರಿಣಾಮವಿಲ್ಲ.

ಎಲ್ಲಿಯಾದರೂ ಆಕಸ್ಮಿಕವಾಗಿ ಕಾಲಿಗೆ ಮುಳ್ಳೊಂದು ಚುಚ್ಚಿಕೊಂಡು ಘಾಯವಾಗಿ ಕೀವು ಕೂಡ ತುಂಬಿದ್ದರೂ ಅದನ್ನು ಮನೆಮದ್ದಿನಿಂದ ಗುಣಪಡಿಸುತ್ತಿದ್ದರು. ಮುಳ್ಳು ಚುಚ್ಚಿದ ಜಾಗವನ್ನು ಸ್ವಲ್ಪ ಚೂಪಾದ ಕಾಯಿಸಿದ ಸೂಜಿಯಿಂದ ಸ್ವಲ್ಪ ಅತ್ತಿತ್ತ ಬಗೆ ಮಾಡಿ ಆ ಜಾಗಕ್ಕೆ ಎಕ್ಕದ ಗಿಡದ ಹಾಲನ್ನು ಚೆನ್ನಾಗಿ ಹಾಕುತ್ತಿದ್ದರು. ಹಾಗೂ ಎಕ್ಕದ ಗಿಡದ ಎಲೆಯನ್ನು ಹೆಂಚಿನಮೇಲೆ ಸ್ವಲ್ಪ ಬಿಸಿಮಾಡಿ ಊತವಿರುವ ಕಡೆ ಕಾವು ಕೊಡಿಸುತ್ತಿದ್ದರು. ಒಂದೆರಡು ದಿನ ಹೀಗೆ ಮಾಡುವಷ್ಟರಲ್ಲಿ ಕೀವು ರಕ್ತ ಹೊರಕ್ಕೆ ಬಂದು ನಾಟಿದ್ದ ಮುಳ್ಳು ಸಲೀಸಾಗಿ ಹೊರಬರುತ್ತಿತ್ತು. ನಂತರ ಒಂದೆರಡು ದಿನ ಬಟ್ಟೆಯಿಂದ ಬ್ಯಾಂಡೇಜ್ ಮಾಡಿದರೆ ಪೂರ್ಣ ಪರಿಹಾರ ದೊರಕುತ್ತಿತ್ತು.

ಎಲ್ಲಕ್ಕಿಂತ ಬಹಳ ಕಷ್ಟಕರವಾದ ಒಂದು ಕೆಲಸ ನಮ್ಮಜ್ಜಿಯವರು ಮಾಡಿಸುತ್ತಿದ್ದು ನಮ್ಮಮ್ಮ ಬೇಸರಗೊಂಡರೂ ಮಾಡುತ್ತಿದ್ದರು. ಅದು ಮನೆಯಲ್ಲಿಯೇ ಹರಳೆಣ್ಣೆಯನ್ನು (ಔಡಲೆಣ್ಣೆ) ತಯಾರಿಸುವುದು. ಮನೆಯ ಹಿಂದುಗಡೆ ಮೂರೋ ನಾಲ್ಕು ಕಲ್ಲುಗಳನ್ನು ಮಟ್ಟಸವಾಗಿಟ್ಟು ಅದರ ಮೇಲೆ ನೀರು ಕಾಯಿಸುವ ಹಂಡೆಯನ್ನಿಡುತ್ತಿದ್ದರು. ಅದರಲ್ಲಿ ನೀರನ್ನು ಕಾಯಿಸಲು ತುಂಬಿದ ನಂತರ ಸೌದೆಗಳನ್ನಿಟ್ಟು ಒಲೆ ಉರಿಸುತ್ತಿದ್ದರು. ಹರಳಿನ ಬೀಜಗಳನ್ನು ತಂದು ಅವುಗಳನ್ನು ಬಾಣಲೆಯಲ್ಲಿ ಚೆನ್ನಾಗಿ ಘಮ್ಮೆಂದು ವಾಸನೆ ಬರುವವರೆಗೆ ಹುರಿಯುತ್ತಿದ್ದರು. ಅದನ್ನು ಒರಳಲ್ಲಿ ರುಬ್ಬಿ ನುಣ್ಣಗೆ ಮಾಡುತ್ತಿದ್ದರು. ಅದನ್ನು ಹಂಡೆಯೊಳಗೆ ಬೇಯಲು ಹಾಕುತ್ತಿದ್ದರು. ಚೆನ್ನಾಗಿ ಕುದಿಯಬೇಕು. ಅದರೊಳಕ್ಕೆ ಬೇವು ಮತ್ತು ಅರಳಿಮರದ ಚಕ್ಕೆಗಳನ್ನು ಕುಟ್ಟಿ ಹಾಕುತ್ತಿದ್ದರು. ಬೇಯುತ್ತಿರುವಾಗ ತಳ ಒತ್ತದಂತೆ ಉದ್ದನೆಯ ದಬ್ಬೆಯಿಂದ ಚೆನ್ನಾಗಿ ತಿರುವುತ್ತಿರಬೇಕು. ಚೆನ್ನಾಗಿ ಬೆಂದು ಕುದಿಯಲು ಪ್ರಾರಂಭವಾದ ನಂತರ ಅದರಿಂದ ಹಿತವಾದ ಘಮ್ಮೆನ್ನುವ ಹರಳೆಣ್ಣೆಯ ವಾಸನೆ ಮೂಗಿಗೆ ಅಡರುತ್ತದೆ. ಒಲೆ ಆರಿಸಿ ತಡೆಯುವಷ್ಟು ಬಿಸಿಯಾರಿದ ನಂತರ ನೀರಿನ ಮೇಲೆ ತೇಲುತ್ತಿರುವ ಎಣ್ಣೆಯನ್ನು ನಾಜೂಕಾಗಿ ಬೊಗಸೆಯಿಂದ ಎತ್ತುತ್ತಾ ಪಾತ್ರೆಯೊಂದರಲ್ಲಿ ಶೇಖರಿಸುತ್ತಿದ್ದರು. ಅದು ಬಹಳ ರೇಜಿಗೆಯ ಕೆಲಸ. ಹಾಗಾಗಿ ದಿನವೆಲ್ಲಾ ಹಿಡಿಯುವ ಈ ಕೆಲಸ ಮಾಡಲು ಉತ್ಸಾಹವಿರುತ್ತಿರಲಿಲ್ಲ. ಹೀಗೆ ಶೇಖರ ಮಾಡಿದ ಹರಳೆಣ್ಣೆ ಪರಿಶುದ್ಧವಾದುದು. ಆಗೆಲ್ಲ ಹೇರಾಯಿಲ್‌ಗಳ ಬಳಕೆ ವಿರಳವಾಗಿತ್ತು. ಇಂಥಹ ಪರಿಶುದ್ಧವಾದ ಹರಳೆಣ್ಣೆಯನ್ನು ಎಳೆಯ ಮಕ್ಕಳಿಗೂ ಉಪಯೋಗಿಸುತ್ತಿದ್ದರು. ತಲೆಗೂ ತಂಪಾಗಿ ಹೇರಳವಾಗಿ ಕೂದಲೂ ಬೆಳೆಯುತ್ತಿದ್ದವು.

ಹೀಗೇ ಹೇಳುತ್ತಾ ಹೋದರೆ ಕೊನೆಮೊದಲಿಲ್ಲದ ಕಥೆಯಾದೀತು. ಹಿರಿತಲೆಗಳಿದ್ದ ಮನೆಗಳಲ್ಲಿ ಇಂತಹ ಇನ್ನೂ ಅನೇಕ ಮನೆಮದ್ದುಗಳಿರಬಹುದು. ಈಗ ಅಜ್ಜಿಗಳೂ ಇಲ್ಲ. ನಂಬುವವರೂ ಇಲ್ಲ. ಮಾತಿಗೆ ಮುಂಚೆ ಖಾಸಗಿ ಆಸ್ಪತ್ರೆಗಳೇ ಗತಿ..

ಬಿ.ಆರ್.ನಾಗರತ್ನ. ಮೈಸೂರು.

18 Responses

  1. Hema Mala says:

    ಎಷ್ಟೊಂದು ಮನೆ ಔಷಧಿಗಳನ್ನು ತಮ್ಕ ಕಣಜದಲ್ಲಿ ಇಟ್ಟುಕೊಂಡಿದ್ದೀರಿ…ಸೊಗಸಾದ ಉಪಯುಕ್ತ ಬರಹ.

  2. ಬರಹದ ಪ್ರಕಟಣೆಗಾಗಿ ಹೇಮಾರವರಿಗೆ ಧನ್ಯವಾದಗಳು

    • Padma Venkatesh says:

      ಗೆಳತಿ, ಇಷ್ಟೊಂದು ಮಾಹಿತಿಗಳು! ಕಾಡಬೆಳದಿಂಗಳಾಗುವುದು ಬೇಡ, ಕೈಪಿಡಿಯಾಗಿ ಹೊರಬರಲಿ..

  3. ಬಹಳ ಉಪಯುಕ್ತವಾದ ಲೇಖನ
    ನಮ್ಮ ಅಜ್ಜಿಯ ನೆನಪು ಕಾಡಿತು

  4. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಹಾಗೂ ಉಪಯುಕ್ತ ಲೇಖನ. ಹಿಂದಿನ ಚಿಕಿತ್ಸಾ ಪದ್ಧತಿ ಗಳ ವಿವರ ತುಂಬಾ ಚೆನ್ನಾಗಿದೆ.

  5. ಶಂಕರಿ ಶರ್ಮ says:

    ಹಿತ್ತಲಗಿಡ ಖಂಡಿತಾ ಮದ್ದೇ….!! ಅಡುಗೆಕೋಣೆಯೋ… ಔಷಧಿಗಳ ಭಂಡಾರ! ಬಹಳಷ್ಟು ಮನೆಮದ್ದುಗಳ ಸಂಗ್ರಹವನ್ನು ನಮ್ಮ ಮುಂದೆ ಹರಡಿದ ನಾಗರತ್ನ ಮೇಡಂ ಅವರಿಗೆ ಧನ್ಯವಾದಗಳು.

  6. ಮುಕ್ತ c. N says:

    ಬಹಳ ಉಪಯುಕ್ತ ವಾದ ಲೇಖನ. ನಮ್ಮ ಹಿರಿಯರು ಯಾಕೆ ಡಾಕ್ಟರ್ ಗಳಿಂದ ದೂರವಿರುತ್ತಿದ್ದರು ಎನ್ನುವುದು ಅರ್ಥವಾಗುತ್ತದೆ. ನಿಮ್ಮ ಹಿರಿಯರ ಕೆಲವು ಮನೆಮದ್ದು ಗಳ ಬಗ್ಗೆ ನೀವು ಸಂಪೂರ್ಣ ಮಾಹಿತಿ ಹೊಂದಿರುವುದು ಖುಷಿಯ ವಿಷಯ. ಅವರು ಪರಂಪರೆ ನೀವು ಮುಂದುವರೆಸಿ.

  7. Padma Anand says:

    ಅಬ್ಬಾ, ಎಲ್ಲಕ್ಕೂ diagnostic centre ಗೆ ಓಡುವ ಈಗಿನವರಿಗೆ ಅಡ್ಡ ಪರಿಣಾಮಗಳಿಲ್ಲದ ಮನೆ ಔಷಧಿಗಳ ಕಣಜವನ್ನೇ ತೆರೆದಿಟ್ಟಿದ್ದೀರಿ. ಸಂಗ್ರಹ ಯೋಗ್ಯ ಲೇಖನ.

  8. ಧನ್ಯವಾದಗಳು ಪ್ರಿಯ ಪದ್ಮಾ ಮೇಡಂ

  9. S.sudha says:

    ಬಹಳ ಉಪಯುಕ್ತ ಲೇಖನ. ನನ್ನ ಅಜ್ಜಿಯ ಮತ್ತು ಆಯುರ್ವೇದ ವೈದ್ಯ ರಾಗಿದ್ದ ದೊಡ್ಡ ಪ್ಪನವರ ನೆನಪಾಯಿತು.

  10. Padmini Hegde says:

    ಮನೆ ಮದ್ದುಗಳ ಒಂದು ಔಷಧಾಲಯವೇ ನಿಮ್ಮ ಅಂಗೈಯಲ್ಲಿದೆ, ಅದ್ಭುತ!

  11. ಧನ್ಯವಾದಗಳು ಪದ್ಮಿನಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: