ಸಾಗರ ತೀರದ ಕಲ್ಲು ಬಂಡೆ…
ಅತ್ತ ಜಲರಾಶಿ
ಸುತ್ತಲೂ ಮರಳು ರಾಶಿ
ನಟ್ಟ ನಡುವೆ ದೃಷ್ಠಿ ಬೊಟ್ಟಿನಂತೆ
ನಿಂತಿರುವ ನಾನೊಂದು
ಕಲ್ಲು ಬಂಡೆ
ರಪ್ಪೆಂದು ರಾಚುವ
ಅಲೆಗಳ ಹೊಡೆತ
ಸುಯ್ಯೆಂದು ಬೀಸುವ
ಬಿಸಿಗಾಳಿಯ ರಭಸ.
ಸವೆದರೂ, ನವೆದರೂ..
ಅಲುಗಾಡದೆ ನಿಂತಿರುವ
ನಾನೊಂದು ಹೆಬ್ಬಂಡೆ
ಸುಡು ಬಿಸಿಲಿಗೆ ಮೈಯೊಡ್ಡಿ
ಸುಟ್ಟು ಕರಕಲಾಗಿ
ನೆರಳಿನ ತಂಪಿಗೆ
ಹಪ ಹಪಿಸುವ
ನಾನೊಂದು ಕರಿ ಬಂಡೆ
ಮೀನ ಹೆಕ್ಕಿ ತಂದ ಹಕ್ಕಿಗಳು
ನೆತ್ತಿ ಮೇಲೆ ಕುಕ್ಕಿ ತಿಂದು
ಪಿಚ್ಚಕ್ಕೆಂದು ಹಿಕ್ಕೆ ಹಾಕಿ ಹಾರಿದಾಗ
ಒರೆಸಿಕೊಳ್ಳಲೂ ಆಗದ
ನಾ ನಿಸ್ಸಹಾಯಕ ಬಂಡೆ
ಸಂಜೆಯ ತಂಗಾಳಿ…
ಹೊಂಗಿರಣದಿ ಮಿಂಚುವ ಚಿಣ್ಣರು
ಮೈ ಮೇಲೆ ಹತ್ತಿ ಕುಣಿದಾಗ
ತಾಯ್ತನದ ಹೆಮ್ಮೆ
ಬೆಳಕು ಮುಳುಗಿ
ಬೆದರುವ ಕತ್ತಲು
ಬೋರ್ಗರೆವ ಕಡಲು .
ಚಿಕ್ಕಿ ಕುಟುಂಬ ನೆನಪಿಸುತ್ತದೆ
ನಾನೊಂದು ಏಕಾಂಗಿ ಬಂಡೆ.
ಮನಸ್ಸು ಅಲ್ಲೋಲ ಕಲ್ಲೋಲ
ದೇಹ ಮಾತ್ರ ನಿಶ್ಚಲ
ನನ್ನ ಅಸಹಾಯಕತೆಯ
ಸಹನೆ ಎಂದರೆಲ್ಲ.
ಸೃಷ್ಟಿಯ ಕ್ರೌರ್ಯಕ್ಕೆ ತುತ್ತಾದ
ನಾನೂ ಶಾಪಗ್ರಸ್ತ ಅಹಲ್ಯಾ..
ಜ್ವಾಲಾಮುಖಿಯ ಅದುಮಿಟ್ಟುಕೊಂಡ
ಮೋಕ್ಷಾಕಾಂಕ್ಷಿ ಕಲ್ಲು ಬಂಡೆ..
–ದಿವ್ಯಾ ರಾವ್
ಅರ್ಥ ಪೂರ್ಣ ವಾದ ಕವಿತೆ.. ಚೆನ್ನಾಗಿ ದೆ ಮೇಡಂ
Thank you
Very nice
ಬದುಕಿನ ಹಲವು ಆಯಾಮಗಳನ್ನು ಚಿತ್ರಿಸುವ ಈ ಕವನ ಅರ್ಥಪೂರ್ಣವಾಗಿದೆ
ಆರಂಭದ 17 ಸಾಲುಗಳಲ್ಲಿ ಮತ್ತೆ ಕೊನೆಯ 9 ಸಾಲುಗಳಲ್ಲಿ ಪರಸ್ಪರ ಪೂರಕವಾಗಿ ಇರುವ ನಡಿಗೆ ಚೆನ್ನಾಗಿದೆ.
ಹೆಬ್ಬಂಡೆಯ ಅಸಹಾಯಕತೆಯನ್ನು ಬದುಕಿನ ಹಲವು ಮಜಲುಗಳೊಡನೆ ಹೋಲಿಸಿದ ಅರ್ಥಪೂರ್ಣ ಕವಿತೆ ಮನಮುಟ್ಟುವಂತಿದೆ.
ಅರ್ಥಗರ್ಭಿತ ಮನಮುಟ್ಟುವ ಕವಿತೆ.