‘ನಗರ ಸಂಕೀರ್ತನೆ’ ಎಂಬ ಉತ್ಸಾಹ ವರ್ಧನೆ!
ಅಂದು ಮಂಗಳವಾರ ಮಾರ್ಚ್ 19, 2024. ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ದೀಪಾ ಪದವಿಪೂರ್ವ ಕಾಲೇಜಿನ ಎದುರಿನ ರಸ್ತೆಯಲ್ಲಿ ನೂರಾರು ಮಹಿಳೆಯರು ಸಂಜೆ 5 ಗಂಟೆಯ ಸುಮಾರಿಗೆ ಹಳದಿ ಹಾಗೂ ಗುಲಾಬಿ ಬಣ್ಣದ ಸೀರೆಯುಟ್ಟು, ತುರುಬು ಕಟ್ಟಿ ಮಲ್ಲಿಗೆ ಅಥವಾ ಇತರ ಹೂವು ಮುಡಿದ ನಾರಿಯರು ಮದುವೆಮನೆ ಸಡಗರದಿಂದ ಓಡಾಡುತ್ತಿದ್ದರು. ಪುಟ್ಟ ಮಕ್ಕಳು ಕೂಡಾ ಸಾಂಪ್ರದಾಯಿಕ ಉಡುಗೆಯಲ್ಲಿದ್ದು ಸಂಭ್ರಮಿಸುತ್ತಿದ್ದರು. ಕೆಲವು ಮಕ್ಕಳು ಗಣೇಶ, ಶ್ರೀರಾಮ ಮೊದಲಾದ ಪೌರಾಣಿಕ ಪಾತ್ರಗಳಾಗಿ ಕಂಗೊಳಿಸುತ್ತಿದ್ದರು. ಇನ್ನು ಫೊಟೊ ತೆಗೆಯುತ್ತಿದ್ದ ಕ್ಯಾಮೆರಾಗಳಿಗೆ ಬಿಡುವಿರಲಿಲ್ಲ.
ರೂಪಾನಗರದ ‘ರೂಪಸಿಯರ’ ಈ ಸಡಗರಕ್ಕೆ ಸಾಥ್ ಕೊಡಲು ರೂಪಾನಗರದ ‘ರೂಪವಂತರೂ’ ತಾವೇನು ಕಡಿಮೆ ಎಂಬಂತೆ ಪಂಚೆ, ಜುಬ್ಬಾ, ಶಲ್ಯ ಧರಿಸಿ ಬಂದಿದ್ದರು. ಜೊತೆಗೆ ಜೀಪ್ ನಲ್ಲಿ ಮೈಕ್ ನ ವ್ಯವಸ್ಥೆ ಮಾಡಿದ್ದರು. ಲಯವಾದ್ಯವಾದ ಚೆಂಡೆಯನ್ನು ನುಡಿಸುವ ಪರಿಣಿತರೂ ಜೊತೆಗಿದ್ದರು. ದಾರಿಯುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಸ್ವಯಂಸೇವಕರಿದ್ದರು. ಇದಕ್ಕೆಲ್ಲಾ, ಕಾರಣ ರೂಪಾನಗರದ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ರಜತ ಮಹೋತ್ಸವದ ಪ್ರಯುಕ್ತ, ಬಡಾವಣೆಯ ನಿವಾಸಿಗಳಿಂದ ಹಮ್ಮಿಕೊಳ್ಳಲಾದ ‘ನಗರ ಸಂಕೀರ್ತನೆ’ ಕೆಲವೇ ನಿಮಿಷಗಳಲ್ಲಿ ಚಾಲನೆಗೂಳ್ಳಬೇಕಿತ್ತು.
“ಎಲ್ಲರೂ ಸಾಲಾಗಿ ನಿಲ್ಲಿ, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಒಂದು ಅಡಿ ಅಂತರ ಕಾಯ್ದುಕೊಳ್ಳಿ…. ‘ ಇತ್ಯಾದಿ ಮಾರ್ಗದರ್ಶನ ಮಾಡುತ್ತಿದ್ದವರು ಈ ‘ನಗರಸಂಕೀರ್ತನೆ’ಯ ಮುಖ್ಯ ರೂವಾರಿ ಆದ ಶ್ರೀಮತಿ ಸಾಧನಾ ತಂತ್ರಿ. ಕೇವಲ ಒಂದು ವಾರದಲ್ಲಿ ವಾಟ್ಸಾಪ್ ಗುಂಪಿನ ಮೂಲಕ ಸಂವಹನ ಮಾಡುತ್ತಾ, ಪ್ರತಿದಿನ ನಮ್ಮ ರೂಪಾನಗರ ಬಡಾವಣೆಯ ವೆಲ್ ಫೇರ್ ಅಸೋಸಿಯೇಶನ್ ಆಫೀಸಿನಲ್ಲಿ ಸಾಮೂಹಿಕ ತರಬೇತಿ ಆಯೋಜಿಸಿ, ಸಂತಸ-ಸಂಭ್ರಮದ ಸಂಚಲನವನ್ನು ಸೃಷ್ಟಿಸಿದವರು ಶ್ರೀಮತಿಯರಾದ ಪನ್ನಗ, ರಕ್ಷಾ ಪ್ರಭು, ಪದ್ಮಜಾ, ರೂಪಶ್ರೀ , ಮಂಗಳಾ, ವಂದನಾ, ಶೈಲಜಾ, ರಶ್ಮಿ, ಕಾವ್ಯ….ಮೊದಲಾದವರು.
ಸಂಜೆ 0545 ಗಂಟೆಗೆ ಶ್ರೀಮತಿ ಪನ್ನಗ ಅವರು ಹಾಡಲು ಆರಂಭಿಸಿದ ಮೇಲೆ, ಅವರ ದನಿಯನ್ನು ಅನುಸರಿಸಿ ಇತರರೂ ದನಿಗೂಡಿಸಲಾರಂಭಿಸಿದೆವು. ಗಣಪತಿ ಸ್ತುತಿಯಿಂದ ಆರಂಭಿಸಿ, ಶಾರದಾ ಸ್ತುತಿ, ಶ್ರೀರಾಮ ಸಂಕೀರ್ತನೆ, ಚಾಮುಂಡಿ ಸ್ತುತಿ, ಲಿಂಗಾಷ್ಟಕ …ಹೀಗೆ ಕೆಲವು ಆಯ್ದ ಭಕ್ತಿಗೀತೆಗಳಿಗೆ ದನಿಗೂಡಿಸುತ್ತಾ, ಕೈಯಲ್ಲಿದ್ದ ತಾಳವನ್ನು ಲಯಬದ್ಧವಾಗಿ ನುಡಿಸುತ್ತಾ ಮೆರವಣಿಗೆಯಲ್ಲಿ ಸಾಗಿದ ನಮ್ಮೆಲ್ಲರ ಸಂಭ್ರಮ ಮೇರೆ ಮೀರಿತ್ತು. ಸುಶ್ರಾವ್ಯವಾಗಿದ್ದ ಭಕ್ತಿಗೀತೆಗಳ ಜೊತೆಗೆ ಆಗಾಗ್ಗೆ ಚೆಂಡೆವಾದನದ ಆವರ್ತನದ ಸಂಯೋಜನೆಯೊಂದಿಗೆ, ಸುಮಾರು ಒಂದು ಗಂಟೆ ನಿಧಾನಗತಿಯಲ್ಲಿ ಬಡಾವಣೆಯಲ್ಲಿ ನಡೆಯುತ್ತಾ ವರಸಿದ್ಧಿವಿನಾಯಕ ದೇವಾಲಯದ ಬಳಿಗೆ ತಲಪಿದೆವು. ಈ ದಾರಿಯುದ್ದಕ್ಕೂ ಕುಡಿಯುವ ನೀರು ಒದಗಿಸಿದ ಸ್ವಯಂಸೇವಕರಿಗೆ ಹಾಗೂ ನಮ್ಮ ‘ನಗರ ಸಂಕೀರ್ತನೆ’ ಯನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಾ ನಮ್ಮನ್ನು ‘ವಿ.ಐ.ಪಿ’ ಭಾವನೆಗೆ ಪ್ರೇರೇಪಿಸುತ್ತಿದ್ದ ಬಡಾವಣೆಯ ನಿವಾಸಿಗಳಿಗೆ ಧನ್ಯವಾದಗಳು.
ದೇವಸ್ಥಾನ ತಲಪಿದ ಮೇಲೆ ಇನ್ನೊಂದು ಕೀರ್ತನೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡಿದೆವು. ವಯೋಬೇಧ ಮರೆತು, ಕೆಲವು ಉತ್ಸಾಹಿ ಮಹಿಳೆಯರು ಕೋಲಾಟಕ್ಕೆ ಹೆಜ್ಜೆ ಹಾಕಿ ನರ್ತಿಸಿದರು. ಕೆಲವರು ಭಜನೆ ಹಾಡಿದರು. ಉತ್ಸಾಹಿ ಯುವಪ್ರತಿಭೆ ಸುದೇಶ್ ಇದರಲ್ಲಿ ಮುಖ್ಯ ಪಾತ್ರ ವಹಿಸಿ ಸೊಗಸಾಗಿ ಹಾಡಿದರು . ಅನಂತರ ದೇವಾಲಯದಲ್ಲಿ ವಿಶೇಷ ರಂಗಪೂಜೆ ನಡೆಯಿತು. ಎಲ್ಲರಿಗೂ ಪ್ರಸಾದ ವಿತರಣೆಯಾಯಿತು.
ಒಟ್ಟಿನಲ್ಲಿ, ಒಂದು ಸುಸಂಸ್ಕೃತವಾದ, ಯೋಜನಾಬದ್ಧವಾದ ‘ನಗರ ಸಂಕೀರ್ತನೆ’ಯನ್ನು, ಅತಿ ಕಡಿಮೆ ಸಮಯದಲ್ಲೂ ಆಯೋಜಿಸುವ ಸಾಮರ್ಥ್ಯ ಮಹಿಳೆಯರಿಗೆ ಇದೆ ಎಂದು ಸಾಕ್ಷೀಕರಿಸಿದ, ಎಲ್ಲಾ ‘ನಾರೀಶಕ್ತಿ’ಗೆ ಅಭಿನಂದನೆಗಳು. ಈ ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತ, ಆಯೋಜಿಸಿದ, ಪ್ರಾಯೋಜಿಸಿದ, ಭಾಗವಹಿಸಿದ ಎಲ್ಲಾ ‘ರೂಪಸಿ’ಯರಿಗೂ, ‘ರೂಪವಂತರಿಗೂ’ ನಮನಗಳು. ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸಿದ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ದೇವಾಲಯದ ಆಡಳಿತ ಮಂಡಳಿಯವರಿಗೆ ಧನ್ಯವಾದಗಳು.
-ಹೇಮಮಾಲಾ.ಬಿ, ಮೈಸೂರು
ತಮ್ಮ ಬಡಾವಣೆಯಲ್ಲಿ ನೆಡೆದ ಭಗವಂತನ ಸಂಸ್ಮರಣ..
ಕಾರ್ಯಕ್ರಮ ದ ಒಂದುಪಕ್ಷಿ ನೋಟ..ಮನಕ್ಕೆ ಹಿತವೆನಿಸಿತು…
ಆಯೋಜಕರಿಗೆ ಭಾಗವಹಿಸಿದವರಿಗೆ..ಅದರಲ್ಲಿ ಬಾಗವಹಿಸಿ ಅದನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಗೆಳತಿ.
ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸುವಲ್ಲಿ ಸಹಕಾರಿಯಾಗುವುದರ ಜೊತೆಗೆ ಸ್ನೇಹ ಸಂಬಂಧಗಳನ್ನೂ ವೃದ್ಧಿಸುತ್ತವೆ.
ಭಾಗಿಯಾದವರನ್ನೆಲ್ಲ ವಿ.ಐ.ಪಿ.ಗಳನ್ನಾಗಿಸಿದ ಸಂಕೀರ್ತನಾ ಸಂಭ್ರಮದ ವರ್ಣನೆ ಸೊಗಸಾಗಿದೆ
ನಗರ ಸಂಕೀರ್ತನೆಯನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಸುಂದರ ಬರಹ, ಸಂಪೂರ್ಣ ವಸ್ತು ನಿಷ್ಠ ವರದಿ
ನಗರ ಸಂಕೀರ್ತನೆಯಂತಹ ಪುಣ್ಯಕಾರ್ಯದಲ್ಲಿ ಸ್ವತ: ಭಾಗವಹಿಸಿದ ಸಾರ್ಥಕ ಭಾವದೊಂದಿಗೆ, ಅದರ ಪೂರ್ತಿ ಪಕ್ಷಿನೋಟವನ್ನೂ ನೀಡಿದ ಬರಹವು ಅತ್ಯಂತ ಪ್ರಿಯವೆನಿಸಿತು. ಧನ್ಯವಾದಗಳು ಹೇಮಮಾಲಾ ಅವರಿಗೆ.