ಗೋಪುರಗಳ ನಾಡಿನಲ್ಲಿ…ಹೆಜ್ಜೆ 15
ಪಂಚಭೂತ ಕ್ಷೇತ್ರ ಜಂಬುಕೇಶ್ವರ ದೇವಸ್ಥಾನ. ತಿರುವಾನೈಕಾವಲ್
ಭಾರತದಲ್ಲಿ ಶಿವನು ಪಂಚಭೂತಸ್ವರೂಪಿಯಾಗಿ ಕಾಣಿಸಿಕೊಂಡ ಸ್ಥಳಗಳನ್ನು ಪಂಚಭೂತ ಕ್ಷೇತ್ರಗಳೆನ್ನುತ್ತಾರೆ. ಪಂಚಭೂತಗಳಲ್ಲಿ ಜಲತ್ತ್ವವನ್ನು ಪ್ರತಿನಿಧಿಸುವ ಶಿವಕ್ಷೇತ್ರ ‘ತಿರುವಾನೈಕಾವಲ್’ ನಲ್ಲಿರುವ ಜಂಬುಕೇಶ್ವರ ಕ್ಷೇತ್ರ. ಇದು ಶ್ರೀರಂಗಂನ ಪ್ರಸಿದ್ಧ ವೈಷ್ಣವ ದೇವಾಲಯದಿಂದ ಸುಮಾರು 2 ಕಿಮೀ ದೂರದಲ್ಲಿರುವ ಶೈವ ದೇವಾಲಯವಾಗಿದೆ.
ದ್ರಾವಿಡ ಶೈಲಿಯ ವಿಸ್ತಾರವಾದ,ಸುಂದರವಾದ ಈ ದೇವಸ್ಥಾನದಲ್ಲಿ ಶಿವನನ್ನು ಜಂಬುಕೇಶ್ವರ ಎಂದೂ, ಪಾರ್ವತಿಯ ಅವತಾರವನ್ನು ‘ಅಖಿಲಾಂಡೇಶ್ವರಿ’ ಎಂದೂ ಪೂಜಿಸುತ್ತಾರೆ. ಇಲ್ಲಿ ಜಲತತ್ವದ ಶಿವಲಿಂಗವನ್ನು ಸ್ಥಾಪಿಸಿರುವುದರಿಂದ ಗರ್ಭಗುಡಿಯಲ್ಲಿ ಸದಾಕಾಲ ನೀರಿನ ಚಿಲುಮೆ ಇರುತ್ತದೆ. ಇಲ್ಲಿಯ ಸ್ಥಳಪುರಾಣ ಬಹಳ ವಿಶಿಷ್ಟವಾಗಿದೆ. ಒಮ್ಮೆ ಪಾರ್ವತಿಯು, ಸದಾಕಾಲ ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡುವ ಶಿವನ ಬಗ್ಗೆ ತಾತ್ಸಾರ ಹೊಂದುತ್ತಾಳೆ. ಪಾರ್ವತಿಗೆ ತನ್ನ ಉದ್ದೇಶ ಅರಿವಾಗಲೆಂದು ಭೂಮಿಗೆ ಹೋಗಲು ತಿಳಿಸಿದನು. ಪಾರ್ವತಿಯು ಅಖಿಲಾಂಡೇಶ್ವರಿ ಎಂಬ ಅವತಾರದಲ್ಲಿ, ಕಾವೇರಿ ನದಿ ತೀರದ ಸ್ಥಳದಲ್ಲಿ. ನೀರಿನಿಂದ ಶಿವಲಿಂಗವನ್ನು ರೂಪಿಸಿ ತಪಸ್ಸನ್ನಾಚರಿಸುತ್ತಾಳೆ. ಆಕೆ ‘ಜಂಬೂ ಮರ’ದ ಅಡಿಯಲ್ಲಿ ಶಿವಲಿಂಗವನ್ನು ಪ್ರತಿಸ್ಠಾಪಿಸಿದುದರಿಂದ ಶಿವನಿಗೆ ‘ಜಂಬುಕೇಶ್ವರ’ ಎಂಬ ಹೆಸರಾಯಿತು.
ಅಖಿಲಾಂಡೇಶ್ವರಿಯ ತಪಸ್ಸಿಗೆ ಮೆಚ್ಚಿದ ಶಿವನು, ಪ್ರತ್ಯಕ್ಷನಾಗಿ, ಪಶ್ಚಿಮಾಭಿಮುಖವಾಗಿ ನಿಂತು ಶಿವಜ್ಞಾನ ಬೋಧಿಸುತ್ತಾನೆ ಹಾಗೂ ಅಖಿಲಾಂಡೇಶ್ವರಿಯು ಪೂರ್ವಾಭಿಮುಖವಾಗಿ ಕೇಳಿಸಿಕೊಳ್ಳುತ್ತಾಳೆ. ಹೀಗಾಗಿ, ಇಲ್ಲಿ ಶಿವ-ಪಾರ್ವತಿಯ ಮೂರ್ತಿಗಳು ಪರಸ್ಪರ ಅಭಿಮುಖವಾಗಿ, ಗುರು-ಶಿಷ್ಯೆಯರ ತೆರದಿ ಇವೆ, ಹಾಗೂ ಈ ಸ್ಥಳವನ್ನು ಉಪದೇಶ ಸ್ಥಾನ ಎಂದು ಕರೆಯುತ್ತಾರೆ. ಇಲ್ಲಿ ಇಂದಿಗೂ ಗರ್ಭಗುಡಿಯ ಪಕ್ಕ ‘ಜಂಬೂ ಹಣ್ಣಿನ’ ಮರವಿದೆ.
ಈಗ ನಾವು ಕಾಣುವ ಭವ್ಯವಾದ ದೇವಾಲಯವನ್ನು 2 ನೇ ಶತಮಾನದಲ್ಲಿ ಮೊದಲ ಚೋಳ ದೊರೆಯಾದ ಕೋಚೆಂಗೋಟ್ ಚೋಳನು ಕಟ್ಟಿಸಿದನೆಂದು ಹೇಳುತ್ತಾರೆ. ಅದ್ಭುತವಾದ ಪ್ರಾಕಾರಗಳನ್ನೂ , ಗೋಪುರಗಳನ್ನೂ, ಶಿಲ್ಪವೈಭವವನ್ನು ಹೊಂದಿರುವ ದೊಡ್ಡದಾದ ದೇವಾಲಯವಿದಾದರೂ, ಗರ್ಭಗುಡಿಯ ಬಾಗಿಲು ಚಿಕ್ಕದಾಗಿ ಕೇವಲ 4 ಅಡಿ ಎತ್ತರ, 2.5 ಅಡಿ ಅಗಲವಿದೆ. ಒಂದು ಬಾರಿಗೆ ಇಬ್ಬರು ತೆವಳಿಕೊಂಡು ಹೋಗಿ ಶಿವಲಿಂಗದ ದರ್ಶನ ಮಾಡಿ ಬರಬೇಕಾಗುತ್ತದೆ .
ಇದಕ್ಕೆ ಕಾರಣವಾದ ಕುತೂಹಲಕಾರಿಯಾದ ಹಿನ್ನೆಲೆಯಿದೆ. ಕೈಲಾಸದಲ್ಲಿರುವ ಶಿವಗಣಗಳಾದ, ಮಾಲ್ಯವನ್ ಮತ್ತು ಪುಷ್ಪದಂತ ಎಂಬವರು ಸದಾ ಒಂದಿಲ್ಲೊಂದು ವಿಷಯಕ್ಕೆ ಜಗಳ ಮಾಡುತ್ತಿದ್ದರಂತೆ. ಹೀಗೆ ಒಂದು ಜಗಳದ ಸಂದರ್ಭದಲ್ಲಿ, ಮಾಲ್ಯವನ್ ಪುಷ್ಪದಂತನಿಗೆ ‘ನೀನು ಭೂಮಿಯಲ್ಲಿ ಆನೆಯಾಗಿ ಜನಿಸು’ ಎಂದ ಶಾಪವಿತ್ತನು, ಇದಕ್ಕೆ ಪ್ರತಿಯಾಗಿ ಪುಷ್ಪದಂತನು ‘ನೀನು ಭೂಮಿಯಲ್ಲಿ ಜೇಡ ಆಗಿ ಜನಿಸು’ ಎಂದು ಶಾಪವಿತ್ತನು. ಹೀಗೆ ಪರಸ್ಪರ ಶಪಿಸಿಕೊಂಡ ಇವರೀರ್ವರು ಜಂಬುಕೇಶ್ವರ ಕ್ಷೇತ್ರದಲ್ಲಿ ಜನಿಸಿದರು. ಆನೆಯು ಕಾವೇರಿ ನದಿಯ ನೀರನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ ಶಿವಭಕ್ತಿ ಮೆರೆಯುತ್ತಿತ್ತು. ಜೇಡನು ಶಿವಲಿಂಗದ ಮೇಲೆ ಒಣ ಎಲೆಗಳು ಬೀಳಬಾರದೆಂದೂ, ಬಿಸಿಲಿನಿಂದ ರಕ್ಷಿಸಬೇಕೆಂದೂ ಶಿವಲಿಂಗದ ಮೇಲೆ ಬಲೆ ನೇಯುತ್ತಾ ಶಿವನ ಸೇವೆ ಮಾಡುತ್ತಿತ್ತು. ತಾನು ಸ್ವಚ್ಚಗೊಳಿಸಿದ ಶಿವಲಿಂಗದ ಮೇಲೆ ಜೇಡದ ಬಲೆ ಬೆಳೆಯುವುದನ್ನು ಆನೆ ಸಹಿಸುತ್ತಿರಲಿಲ್ಲ. ತನ್ನ ನೇಯ್ಗೆಯು ಆನೆಯ ಅಭಿಷೇಕದಿಂದ ಕೊಚ್ಚಿ ಹೋಗುವುದನ್ನು ಜೇಡ ಸಹಿಸುತ್ತಿರಲಿಲ್ಲ. ಹೀಗೆ ಕೈಲಾಸದ ಜಗಳ ಭೂಮಿಯಲ್ಲಿಯೂ ಮುಂದುವರಿಯಿತು. ಆದರೆ ಅವರಿಬ್ಬರೂ ಶಿವಭಕ್ತರಾಗಿದ್ದು, ತಮ್ಮದೇ ಶೈಲಿಯಲ್ಲಿ ಶಿವಾರಾಧನೆ ಮಾಡುತ್ತಿದ್ದರು. ಒಂದು ದಿನ ಕೋಪ ತಾಳಲಾರದೆ ಜೇಡವು ಆನೆಯ ಸೊಂಡಿಲಿನ ಒಳಗೆ ಹೋಗಿ ಕಚ್ಚಿ ಆನೆಯನ್ನು ಸಾಯಿಸಿತು. ಇವರಿಬ್ಬರ ಶಿವಭಕ್ತಿಯನ್ನು ಕಂಡು ಶಿವನು ಮನ್ನಿಸಿದ.
ಜೇಡವು ಮುಂದಿನ ಜನ್ಮದಲ್ಲಿ ರಾಜನಾಗಿ ಜನಿಸಿತು. ತನ್ನ ಹಿಂದಿನ ಜನ್ಮದಲ್ಲಿ ಇದ್ದ ‘ಆನೆಯ ಮೇಲೆ ಕೋಪ‘ ಇಲ್ಲೂ ಮುಂದುವರಿಯಿತು. ಹಾಗಾಗಿ, ಈ ಜನ್ಮದಲ್ಲಿ, ಮರಿಯಾನೆಯೂ ಒಳ ಹೋಗಲು ಸಾಧ್ಯವಿಲ್ಲದ ಪುಟ್ಟ ಗರ್ಭಗುಡಿಯನ್ನು ಕಟ್ಟಿಸಿದನಂತೆ. ಆನೆಯೂ ಮರುಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ, ಇದೇ ಗುಡಿಯಲ್ಲಿ ಅರ್ಚಕನಾಗಿ ಬಂತಂತೆ. ಗರ್ಭಗುಡಿಯ ಬಾಗಿಲಿನ ಎತ್ತರ ಕಡಿಮೆ ಇದ್ದರೂ, ಅರ್ಚಕನು ಬಾಗಿಕೊಂಡು ಗರ್ಭಗುಡಿಯ ಒಳಗೆ ಹೋಗಿ ಶಿವಪೂಜೆ ಮಾಡುತ್ತಿದ್ದನಂತೆ! ಅಲ್ಲಿಗೆ ಇಬ್ಬರಿಗೂ ತಂತಮ್ಮ ಶಾಪಕ್ಕೆ ಪರಿಹಾರವೂ ಸಿಕ್ಕಂತಾಯಿತು!ಕಾಲಾನಂತರದಲ್ಲಿ, ಶ್ರೇಷ್ಠವಾದ (ತಿರು), ಆನೆಯು (ಆನೈ) ಇದ್ದ ಕಾಡು (ಕಾವಲ್) ಆಗಿದ್ದ ಈ ಸ್ಥಳಕ್ಕೆ ‘ತಿರುವಾನೈಕಾವಲ್’ ಎಂಬ ಹೆಸರಾಯಿತು.
ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39781
(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು
ತುಂಬಾ ಚೆನ್ನಾಗಿದೆ
ಧನ್ಯವಾದಗಳು
ಪ್ರವಾಸ ಕಥನ.. ಮನಕ್ಕೆ ಮುದ ತರುವಂತೆ ಸಾಗುತ್ತಿದೆ..ಗೆಳತಿ.
ಮಾಹಿತಿ ಪೂರ್ಣ ಅಷ್ಟೇ ಅಲ್ಲ, ಸ್ಥಳ ಪುರಾಣವೂ ಸೊಗಸಾಗಿದೆ.
ಧನ್ಯವಾದಗಳು
ಧನ್ಯವಾದಗಳು
ಸಂಕ್ಷಿಪ್ತವಾದ ಕುತೂಹಲಕಾರಿ ಪೌರಾಣಿಕ ಹಿನ್ನೆಲೆಯ ಕಥೆಗಳನ್ನು ರಸವತ್ತಾಗಿ ಬಣ್ಣಿಸುತ್ತಾ ಗೋಪುರಗಳ ನಾಡಿನಲ್ಲಿ ಊರಿದ ಹೆಜ್ಜೆಗಳನ್ನು ಓದುಗರಿಗೆ ದರ್ಶಿಸಿದ ಪರಿ ನಿಜಕ್ಕೂ ಅನನ್ಯ!
ಧನ್ಯವಾದಗಳು
ಸೊಗಸಾದ ಪೌರಾಣಿಕ ಕಥೆಯೊಂದಿಗೆ ತಿರುವಣ್ಣಾಮಲೈ ವರ್ಣನೆ ಗೋಪುಗಳ ನಾಡಿನಲ್ಲಿ ಲೇಖನಮಾಲಿಕೆಯಲ್ಲಿ ಚಂದದಿಂದ ಮೂಡಿ ಬಂದಿದೆ.