ಬಸವ ಬೆಳಗನ್ನು ಅರಸುತ್ತಾ.. ಪುಟ 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾದ ಶರಣರು ದೇಶ ವಿದೇಶಗಳಿಂದ ಬಸವಕಲ್ಯಾಣಕ್ಕೆ ಆಗಮಿಸಿ ಅನುಭವ ಮಂಟಪದ ಆಧ್ಯಾತ್ಮಿಕ ಸಂವಾದಗಳಲ್ಲಿ ಪಾಲ್ಗೊಂಡರು. ಅಲ್ಲಮ ಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಹನ್ನೆರಡನೇ ಶತಮಾನದಲ್ಲಿ ಸುಮಾರು ಒಂದು ಲಕ್ಷದ ತೊಂಭತ್ತಾರು ಸಾವಿರ ಶರಣರು ಅನುಭವ ಮಂಟಪಕ್ಕೆ ಭೇಟಿ ನೀಡಿದ್ದಾರೆಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ಲಭ್ಯ. ಏಳು ನೂರಾ ಎಪ್ಪತ್ತು ಅಮರಗಣಂಗಳು ಇಲ್ಲಿ ನೆಲೆಯಾಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರಂತೆ. ಶರಣರು ತಮ್ಮ ತಮ್ಮ ಕಾಯಕವನ್ನು ಮುಗಿಸಿ, ತಮ್ಮ ವೈಚಾರಿಕ ಹಾಗು ಆಧ್ಯಾತ್ಮಿಕ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದೆಡೆ ಸೇರುತ್ತಿದ್ದರು. ಜಾತಿ, ಮತ, ಪಂಥ, ಲಿಂಗಗಳ ಬೇಧವಿಲ್ಲದೆ ಎಲ್ಲರೂ ಒಂದೆಡೆ ಸೇರಿ ಚರ್ಚೆ ನಡೆಸುವ ಸಂಘಟನೆಗೆ ಅನುಭವ ಮಂಟಪ ಎಂದು ಕರೆಯಲಾಗುತ್ತಿತ್ತು. ಅನುಭವ ಮಂಟಪವು ಅಲ್ಲಮರ ನೇತೃತ್ವದಲ್ಲಿ ಅನುಭಾವ ಮಂಟಪವಾಗಿ ರೂಪುಗೊಳ್ಳತೊಡಗಿತ್ತು.
ಅನುಭವ ಮಂಟಪದತ್ತ ಹೆಜ್ಜೆ ಹಾಕಿದವರಿಗೆ ನಿರಾಸೆ ಕಾದಿತ್ತು, ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಒಟ್ಟಿಗೆ ಸೇರಿ ಆಧ್ಯಾತ್ಮಿಕ ಸಂವಾದಗಳನ್ನು ನಡೆಸುತ್ತಿದ್ದ ಪವಿತ್ರ ತಾಣ ಇಲ್ಲಿರಲಿಲ್ಲ. ನೂತನವಾಗಿ ನಿರ್ಮಾಣವಾಗಿರುವ ಒಂದು ಕಟ್ಟಡ, ಅನುಭವ ಮಂಟಪ ಎಂಬ ಹೆಸರು ಹೊತ್ತ ಫಲಕ, ಲಿಂಗಾಕಾರದ ಗೋಪುರ, ಒಂದು ವಿಶಾಲವಾದ ಸಭಾಂಗಣ, ಶೂನ್ಯ ಸಿಂಹಾಸನಾ ಪೀಠದಲ್ಲಿ ರಾರಾಜಿಸುತ್ತಿರುವ ಅಲ್ಲಮಪ್ರಭುಗಳ ಮೂರ್ತಿ ಇವುಗಳನ್ನು ಕಂಡೆವು.. ಸುತ್ತಲೂ ಶರಣರ ಭಾವಚಿತ್ರಗಳಿದ್ದು, ಆಯ್ದ ಶರಣರ ವಚನಗಳನ್ನು ಬರೆಸಲಾಗಿದೆ. ಭಾಲ್ಕಿ ಚೆನ್ನಬಸವ ಪಟ್ಟದ್ದೇವರ ಪ್ರಯತ್ನದಿಂದ ಈ ಅನುಭವ ಮಂಟಪದ ಕಟ್ಟಡವು ತಲೆ ಎತ್ತಿ ನಿಂತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಈ ಸಭಾಂಗಣವನ್ನು ಅನುಭವ ಮಂಟಪವೆಂದು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರಲಿಲ್ಲ. ಇಲ್ಲಿ ಏಳುನೂರಾಎಪ್ಪತ್ತು ಶರಣರು ಹೇಗೆ ತಾನೆ ಸಂವಾದಗಳಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂಬ ಗೊಂದಲ ಮೂಡಿತ್ತು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸ್ಥಳೀಯರೊಬ್ಬರು ನಮ್ಮನ್ನು ಬಸವೇಶ್ವರ ದೇಗುಲದ ಹಿಂಬದಿಯಲ್ಲಿದ್ದ ‘ಪೀರ್ ಪಾಶಾ ಬಂಗಲೆಗೆ’ ಕರೆದೊಯ್ದರು. ಸುಮಾರು ನಾಲ್ಕೈದು ಎಕರೆ ವಿಸ್ತೀರ್ಣದಲ್ಲಿದ್ದ ಈ ಬಂಗಲೆಯ ಮುಖ್ಯ ದ್ವಾರವು ಚಾಲುಕ್ಯರ ಶೈಲಿಯಲ್ಲಿದ್ದು, ಒಳಗೆ ಪ್ರವೇಶಿಸುತ್ತಲೇ ಒಂದು ದೊಡ್ಡ ಕಲ್ಲಿನ ಮಂಟಪವಿದ್ದು ಮಧ್ಯೆ ನಂದಿಯ ವಿಗ್ರಹವಿದೆ. ಈ ಪವಿತ್ರವಾದ ಸ್ಥಳದಲ್ಲಿ ಹೆಜ್ಜೆಯಿಡುತ್ತಿದ್ದಂತೆಯೇ ನಮಗೆ ಅರಿವಿಲ್ಲದಂತೆಯೇ ಮನದಾಳದಲ್ಲಿ ವಿಶೇಷವಾದ ಅನುಭೂತಿಯೊಂದು ಮೂಡತೊಡಗಿತ್ತ್ತು. ಹನ್ನೆರಡನೇ ಶತಮಾನದಲ್ಲಿ ಇಲ್ಲಿಯೇ ಅನುಭವ ಮಂಟಪದ ಸಭೆಗಳು ನಡೆಯುತ್ತಿದ್ದವು ಎಂಬ ಮಾಹಿತಿ ದೊರೆತಿತ್ತು. ಇಲ್ಲಿಗೆ ಆಗಮಿಸುವ ಶರಣರನ್ನು ಸತ್ಕರಿಸಲು ಒಂದು ದೊಡ್ಡ ತಂಡವೇ ಇತ್ತು – ಬಂದವರ ಸೌಖ್ಯ ವಿಚಾರಿಸಲು ಅಕ್ಕ ನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ ಹಾಗೂ ಚೆನ್ನ ಬಸವಣ್ಣ ಮುಂದಾದರೆ, ದಾಸೋಹ ಕೇಂದ್ರ ನಡೆಸಲು ಬೇಕಾದ – ದವಸಧಾನ್ಯ ಹೊತ್ತು ತರುವವರು, ನೀರು ತರುವವರು, ಕಟ್ಟಿಗೆ ಒಡೆದು ತರುವವರು, ಅಡಿಗೆ ಮಾಡುವವರು, ಊಟ ಬಡಿಸುವವರು, ಶುಚಿ ಮಾಡುವವರು ಹೀಗೆ ಸಮರೋಪಾದಿಯಲ್ಲಿ ಹಲವರು ಶ್ರದ್ಧಾಭಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈ ಸ್ಥಳದಲ್ಲಿ ಅಲ್ಲಮರ ಅಧ್ಯಕ್ಷತೆಯಲ್ಲಿ ಅನುಭವದ ಆಧಾರದ ಮೇಲೆಯೇ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಇಲ್ಲಿ ಬಸವರಾಜನು ಅಣ್ಣ ಬಸವಣ್ಣನಾದರೆ, ಮಹಾದೇವಿಯು ಅಕ್ಕನಾಗಿ ದುಃಖಿತರನ್ನು ಸಂತೈಸುವ ಹೊಣೆ ಹೊತ್ತಿದ್ದಳು. ಇತಿಹಾಸದ ಗರ್ಭದಲ್ಲಿ ಹೂತು ಹೋಗಿರುವ ಅನುಭವ ಮಂಟಪವನ್ನು ನಿರ್ಮಿಸಲು, ಈಗ ಕರ್ನಾಟಕ ಸರ್ಕಾರ ಲಿಂಗಾಕಾರದ ಬೃಹತ್ ಅನುಭವ ಮಂಟಪವನ್ನು ನಿರ್ಮಿಸಲು ಮುಂದಾಗಿದೆ.
ನಾವು ಅಲ್ಲಿಂದ ನೇರವಾಗಿ ‘ಅರಿವಿನ ಮನೆಯ’ ಕಡೆಗೆ ಹೊರಟೆವು. ಎಲ್ಲಾ ಜಾತಿಯವರನ್ನೂ ಸಮಾನರನ್ನಾಗಿ ಮಾಡಲು ಅವರ ಕೊರಳಿಗೆ ಲಿಂಗವನ್ನು ಕಟ್ಟಿ ಗುರು-ಲಿಂಗ-ಜಂಗಮ ತತ್ವವನ್ನು ಸಾರಿದ ಬಸವಣ್ಣನವರು ಪೂಜೆ ಮಾಡುತ್ತಿದ್ದ ಸ್ಥಳ ಇದು. ಗುರು ಎಂದರೆ ಜ್ಞಾನಯೋಗ, ಲಿಂಗ ಎಂದರೆ ಭಕ್ತಿಯೋಗ, ಜಂಗಮ ಎಂದರೆ ಕರ್ಮಯೋಗವಲ್ಲವೆ? ಹಾಗಾಗಿ ಇದನ್ನು ಮಹಾಮನೆಯೆಂದೂ ಕರೆಯುವರು. ”ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ / ಸತ್ಯವ ನುಡಿವುದೇ ದೇವಲೋಕ; ಮಿಥ್ಯವ ನುಡಿವುದೇ ಮರ್ತ್ಯಲೋಕ / ಆಚಾರವೇ ಸ್ವರ್ಗ, ಅನಾಚಾರವೇ ನರಕ / ಕೂಡಲಸಂಗಮದೇವ, ನೀವೇ ಪ್ರಮಾಣ” ಎಂದು ಬದುಕಿನ ಮೌಲ್ಯಗಳಿಗೂ ಧರ್ಮಕ್ಕೂ ತಳುಕು ಹಾಕಿದರು ಶರಣ ಬಸವಣ್ಣನವರು. ಇಲ್ಲಿ ಮೂರ್‍ನಾಲ್ಕು ಗವಿಗಳಿದ್ದು – ನೀಲಮ್ಮನ ಗವಿ ಹಾಗೂ ಹರಳಯ್ಯನವರ ಗವಿಗಳೂ ಇಲ್ಲಿವೆ. ಮುಂದೆ ಇರುವ ಅಂಗಳದಲ್ಲಿ ತಗ್ಗಾದ ಪ್ರದೇಶದಲ್ಲಿ ಇರುವುದೇ ಗಂಜಿ ಕೆರೆ. ಈ ಹೆಸರು ಬರಲು ಕಾgಣ ಏನು ಅಂತೀರಾ – ಬಸವಣ್ಣನವರ ಮಹಾಮನೆಗೆ ದೂರ ದೂರದ ದೇಶಗಳಿಂದ ಜನಸಾಗರವೇ ಹರಿದು ಬರುತ್ತಿತ್ತು. ಹೀಗಾಗಿ ನಿತ್ಯ ದಾಸೋಹಕ್ಕಾಗಿ ತಯಾರಿಸುವ ಅನ್ನವನ್ನು ಬಸಿದ ಗಂಜಿ ಇಲ್ಲಿ ಶೇಖರವಾಗುತ್ತಿತ್ತು.
ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮರ ಗದ್ದುಗೆ ಮಠವನ್ನು ನೋಡೋಣ ಬನ್ನಿ. ಅಂದು ಅಲ್ಲಮರ ಹಚ್ಚಿಟ್ಟಿದ್ದ ನಂದಾದೀಪವನ್ನು ಇಂದಿಗೂ ಬೆಳಗಿಸಲಾಗುತ್ತಿದೆ. ಅಲ್ಲಮರು ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ಜೋಪಾನವಾಗಿ ಕಾಪಾಡಿಕೊಂಡು ಬರಲಾಗಿದೆ. ಅಲ್ಲಮರು ತಮ್ಮ ಗದ್ದುಗೆಯಲ್ಲಿ ಕುಳಿತು ಶರಣರೊಂದಿಗೆ ಅನುಭಾವದ ಚರ್ಚೆ ನಡೆಸುತ್ತಿದ್ದರು. ಈ ಗದ್ದುಗೆಗೆ ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಅಲ್ಲಮರು ಆ ಮನೆಯ ತಾರಸಿಯ ಮೇಲಿರುವ ಕಮಾನಿನ ಆಕಾರದಲ್ಲಿರುವ ಗೂಡಿನಲ್ಲಿ ಕುಳಿತು, ಭಕ್ತರಿಗೆ ದರ್ಶನ ಕೊಡುತ್ತಿದ್ದರಂತೆ. ನಾವು ಮಾಳಿಗೆ ಏರಲು ಇದ್ದ ಎತ್ತರವಾದ ಪಾವಟಿಗೆಗಳನ್ನು ಹತ್ತಲು ಯತ್ನಿಸಿ ವಿಫಲರಾದೆವು, ಕಾರಣ ಬಹಳ ನುಣುಪಾಗಿದ್ದ ಮೆಟ್ಟಿಲುಗಳು ಜಾರುವಂತಿದ್ದವು. ಅಲ್ಲಮನಂತಹ ಮಹಾಮಹಿಮರು ಹೆಜ್ಜೆ ಹಾಕಿದ್ದ ಕಡೆ ಪಾಮರರಾದ ನಾವು ನಮ್ಮ ಪಾದಗಳನ್ನು ಇಡಲು ಸಾಧ್ಯವೇ? ನಾವು ಗದ್ದುಗೆಗೆ ಭಕ್ತಿಪೂರ್ವಕವಾಗಿ ವಂದಿಸುತ್ತಿರುವಾಗ, ಅಲ್ಲಿಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ದಂಪತಿಗಳು ಗದ್ದುಗೆಗೆ ಪೂಜೆ ಸಲ್ಲಿಸಿ ನಮಗೆಲ್ಲಾ ಫೇಡೆಯನ್ನು ಹಂಚಿದರು. ಅಲ್ಲಪ್ರಭುಗಳೇ ಅವರ ಮನೆ ದೇವರು ಎಂದೂ ತಮ್ಮ ಮಗನಿಗೆ ಪ್ರಭುವಿನ ಆಶೀರ್ವಾದದಿಂದ ಗಂಡು ಮಗುವಾಗಿದೆಯೆಂದೂ ಸಂತೋಷದಿಂದ ಹೇಳಿದರು. ಅಲ್ಲಮರ ಗದ್ದುಗೆಯಿಂದ ಹೊರಟಾಗ ಅವರ ವಚನವೊಂದನ್ನು ಮೆಲುಕು ಹಾಕತೊಡಗಿದ್ದೆ, ”ಕೊಟ್ಟ ಕುದುರೆಯನು ಏರಲರಿಯದೆ ಮತ್ತೊಂದು ಕುದುರೆಯ / ಬಯಸುವವನು ವೀರನೂ ಅಲ್ಲ, ಧೀರನೂ ಅಲ್ಲ / ಇದು ಕಾರಣ ನೆರೆ ಮೂರು ಲೋಕದಲ್ಲಿ / ಹಲ್ಲಣವ ಹೊತ್ತು ಬಳಲುತ್ತೈದರೆ / ಗುಹೇಶ್ವರ ಲಿಂಗವ ಅವರೆತ್ತಬಲ್ಲರು”
ಇನ್ನು ಬಸವಣ್ಣನವರು ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ ಬಸವಕಲ್ಯಾಣ ಕೋಟೆಯನ್ನು ನೋಡುವ ಕುತೂಹಲ ಎಲ್ಲರಿಗೂ ಇತ್ತು. ಚಾಲುಕ್ಯರು ಕಲ್ಯಾಣವನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು ಸುಮಾರು ನೂರು ವರ್ಷಗಳ ಕಾಲ ತಮ್ಮ ಆಳ್ವಿಕೆ ನಡೆಸಿದರು. ನಂತರದಲ್ಲಿ ಬಿಜ್ಜಳ ಹಾಗು ಅವನ ವಂಶಸ್ಥರಾದ ಕಲಚೂರಿ ರಾಜವಂಶದವರು ಕಲ್ಯಾಣವನ್ನು ಆಳಿದರು. ಈ ಕೋಟೆಯ ಮೇಲ್ಭಾಗದಲ್ಲಿ ಅರಸರ ಆಸ್ಥಾನವಿದ್ದು, ಬಸವಣ್ಣನವರು ಹಳೆಗನ್ನಡದಲ್ಲಿದ್ದ ಓಲೆಗರಿಯನ್ನು ಓದಿ ಸಿಂಹಾಸನದಡಿಯಲ್ಲಿದ್ದ ನಿಧಿಯನ್ನು ತೋರಿಸಿದ ಸ್ಥಳವನ್ನೂ ನೋಡಿದೆವು. ಈ ಕೋಟೆಯ ಆವರಣದಲ್ಲಿ ಒಂದೆರೆಡು ನೀರಿನ ಹೊಂಡಗಳಿದ್ದು ಕೋಟೆಯಲ್ಲಿ ವಾಸವಾಗಿದ್ದವರಿಗೆಲ್ಲಾ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು. ಈ ಕೋಟೆಯೊಳಗೆ ಬಸವಣ್ಣನವರ ಹೆಜ್ಜೆಗಳನ್ನು ಅರಸುತ್ತಾ ಮುಂದೆ ಸಾಗಿದೆವು. ವಿಪ್ರನಾಗಿ ಹುಟ್ಟಿದರೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಚೇತನ, ಬಿಜ್ಜಳನ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದರೂ ತನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಕಿರಿಯರಿಲ್ಲ ಎಂದು ಸಾರಿದ ವಚನಸಾಹಿತ್ಯದ ಹರಿಕಾರನನ್ನು ನೆನೆಯುತ್ತಾ ಕೋಟೆಯನ್ನು ಸುತ್ತು ಹಾಕಿದೆವು. ಕೋಟೆಯ ಸನಿಹದಲ್ಲಿದ್ದ ಬಸವ ಮ್ಯೂಸಿಯಂನಲ್ಲಿ ಪುರಾತನ ಕಾಲದ ಶಿಲ್ಪಗಳು, ರಾಜರ ಕಾಲದ ನಾಣ್ಯಗಳು, ಯುದ್ಧದ ಸಮಯದಲ್ಲಿ ಸೈನಿಕರು ತೊಡುವ ಉಡುಪುಗಳು, ಶಸ್ತ್ರಾಸ್ತ್ರಗಳನ್ನೂ ನೋಡಿದೆವು. ಕಲ್ಯಾಣದ ಕೋಟೆಯಲ್ಲಿ ಸುತ್ತಾಡುವಾಗ ಮನದ ಮುಂದೆ ಸುಳಿದಿತ್ತು ಅಲ್ಲಿನ ಇತಿಹಾಸ -‘ಒಮ್ಮೆ ಬಿಜ್ಜಳನ ಆಪ್ತನಾಗಿದ್ದ ಬಸವಣ್ಣನವರು, ತಮ್ಮ ಸಮಾಜ ಸುಧಾರಣೆಯ ಕ್ರಮಗಳಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ, ಬಿಜ್ಜಳನ ಕೋಪಕ್ಕೆ ತುತ್ತಾಗಿ, ಬಹಿಷ್ಕೃತರಾಗಿ ಕಲ್ಯಾಣವನ್ನು ತೊರೆಯುವ ದೃಶ್ಯ, ಸೈನಿಕರ ಹಾಗೂ ಶರಣರ ಮಧ್ಯೆ ನಡೆಯುವ ಕಲಹ, ಷಡ್ಯಂತ್ರ ರಚಿಸಿದ ಕೆಲವರು ಬಿಜ್ಜಳ ರಾಜನನ್ನೇ ಕೊಲೆ ಮಾಡುವ ದೃಶ್ಯ, ವಚನ ಸಂಪುಟಗಳನ್ನು ಹೊತ್ತು ಕಲ್ಯಾಣದಿಂದ ಚದುರಿ ಹೋದ ಶರಣರು’ ಅಬ್ಬಾ, ಧರ್ಮದ ಹೆಸರಿನಲ್ಲಿ ಆಚರಿಸುವ ಕಂದಾಚಾರ, ಜಾತಿ ಮತ ಪಂಥಗಳೆಂಬ ಬೇಧಭಾವ, ಕಲಹಗಳು, ಧರ್ಮದ ಅನುಯಾಯಿಗಳ ಮಾರಣಹೋಮಕ್ಕೆ ಕೊನೆಯೆಂದು?
ಸಮಯದ ಅಭಾವದಿಂದ ಶರಣರು ತಪಗೈದ ಎಲ್ಲಾ ಗವಿಗಳನ್ನು ನೋಡಲು ನಮಗೆ ಸಾಧ್ಯವಾಗಲಿಲ್ಲ. ಬೆಟ್ಟ ಗುಡ್ಡಗಳಿಂದ ಸುತ್ತುವರೆಯಲ್ಪಟ್ಟಿರುವ ತ್ರಿಪುರಾಂತ ಕೆರೆಯಗುಂಟ ಸಾಗಿದರೆ ಹಲವು ಶರಣರ ಗವಿಗಳು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತವೆ. ‘ನುಲಿಯ ಚಂದಯ್ಯನವರ ಗವಿ’ ಎಂಬ ಫಲಕ ನೋಡಿ, ಆ ಗವಿಯೊಳಗೆ ನುಸುಳಿದೆವು. ಬಾಲ್ಯದಲ್ಲಿ ತಂದೆಯವರು ಹೇಳುತ್ತಿದ್ದ ಪ್ರಸಂಗವೊಂದು ನೆನಪಾಗಿತ್ತು – ಒಮ್ಮೆ ನುಲಿಯ ಚಂದಯ್ಯನವರು ನುಲಿಯನ್ನು ಹದಗೊಳಿಸುತ್ತಿರುವಾಗ ಅವರ ಕೊರಳಲ್ಲಿದ್ದ ಲಿಂಗವು ಜಾರಿ ಕೊಳದೊಳಗೆ ಬಿದ್ದಿತಂತೆ, ಆಗ ಚಂದಯ್ಯನವರು ಸ್ವಲ್ಪವೂ ವಿಚಲಿತರಾಗದೆ ತಮ್ಮ ಕಾಯಕವನ್ನು ಮುಂದುವರೆಸಿದಾಗ, ಲಿಂಗಯ್ಯನೇ ಕೊಳದಿಂದ ಮೇಲೇರಿ ಬಂದು ಅವರ ಭಕ್ತನ ಮನೆಯಲ್ಲಿ ಕಾಯಕ ಮಾಡಲು ಆರಂಭಿಸಿದನಂತೆ. ಅಬ್ಬಾ ಕಾಯಕದಲ್ಲಿ ಎಂತಹ ಶ್ರದ್ಧೆ, ಎಂತಹ ತನ್ಮಯತೆ ! ಕಾಯಕವೇ ಕೈಲಾಸ ಎಂದು ನಂಬಿದ್ದವರು ಚಂದಯ್ಯನವರು. ನುಡಿದಂತೆ ನಡೆದ ಮಹಿಮರು. ಈ ಗವಿಯ ಸನಿಹದಲ್ಲಿದ್ದ ಪಂಚಸೂತ್ರ ಗವಿ ಚೆನ್ನಬಸವಣ್ಣನವರ ಧ್ಯಾನ ಮಂದಿರವಾಗಿತ್ತು. ಕಲ್ಯಾಣದ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗೆ ಕಂಕಣಬದ್ಧರಾಗಿದ್ದ ಬಸವಣ್ಣನವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಚೆನ್ನಬಸವಣ್ಣನವರು. ಹಲವಾರು ದಲಿತರಿಗೆ ಸತ್ಯಶುದ್ಧ ಕಾಯಕ ಹಾಗೂ ದಾಸೋಹದ ಮಹತ್ವವನ್ನು ಬೋಧಿಸಿ, ಅವರಿಗೆ ಲಿಂಗದೀಕ್ಷೆ ಕೊಟ್ಟು, ಅವರ ಬಾಳನ್ನು ಉದ್ಧರಿಸಿದ ಮಹಾನುಭಾವರು. ಇವರ ವಚನವೊಂದನ್ನು ಕೇಳೋಣ ಬನ್ನಿ, ‘ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ / ಜ್ಞಾನವೆಂದರೆ ತಿಳಿಯುವುದು / ಕ್ರಿಯೆಯೆಂದರೆ ತಿಳಿದಂತೆ ಆಚರಿಸುವುದು / ಕೂಡಲ ಚೆನ್ನಸಂಗಮದೇವಾ.’ ಹತ್ತಿರದಲ್ಲಿಯೇ ಒಂದು ಪತ್ರಿವನ ಇದೆ, ಇಲ್ಲಿ ಬಿಲ್ವಪತ್ರೆ, ಬನ್ನಿಪತ್ರೆ ಹಾಗೂ ಇನ್ನಿತರ ಫಲ ಪುಷ್ಪಗಳ ಮರಗಳು ಹೇರಳವಾಗಿದ್ದು ಶರಣರ ಲಿಂಗಪೂಜೆಗೆ ಹೂಗಾರ ಮಾದಯ್ಯನಂತವರು ಹೂ ಪತ್ರೆಗಳನ್ನು ಒದಗಿಸುತ್ತಿದ್ದರಂತೆ.
ತ್ರಿಪುರಾಂತ ಕೆರೆಯ ಪೂರ್ವ ದಿಕ್ಕಿನಲ್ಲಿ ಇರುವ ದಿಬ್ಬದ ಮೇಲೆ ಮಹಾದೇವಿಯಕ್ಕನ ಗುಹೆ ಇದೆ. ಕೌಶಿಕ ಮಹಾರಾಜನನ್ನು ತ್ಯಜಿಸಿ, ಉಡುತಡಿಯಿಂದ ದಿಗಂಬರೆಯಾಗಿ ಕಾಲ್ನಡಿಗೆಯಲ್ಲೇ ಮಹಾದೇವಿಯು ಕಲ್ಯಾಣಕ್ಕೆ ಬಂದದ್ದಾದರೂ ಹೇಗೆ ಎಂಬ ಕೌತುಕವು ಎಲ್ಲರನ್ನೂ ಕಾಡುವುದಲ್ಲವೇ? ಅಕ್ಕನ ಮಾತುಗಳಲ್ಲಿಯೇ ಕೇಳೋಣ ಬನ್ನಿ, ‘ಹಸಿವಾದೊಡೆ ಭಿಕ್ಷಾನ್ನಗಳುಂಟು / ತೃಷೆಯಾದೊಡೆ ಕೆರೆ ಹಳ್ಳ ಭಾವಿಗಳುಂಟು / ಶಯನಕ್ಕೆ ಹಾಳು ದೇಗುಲಗಳುಂಟು / ಚೆನ್ನ ಮಲ್ಲಿಕಾರ್ಜುನಯ್ಯ, ಆತ್ಮ ಸಂಗಾತಕ್ಕೆ ನೀನೆನಗುಂಟು’ ನಮ್ಮ ನಡು ಬಾಗಿಸಿ ಆ ಗುಹೆಯೊಳಗೆ ಹೋದೆವು, ಅಕ್ಕನ ಪ್ರತಿಮೆಯ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದೆವು. ಮಹಾದೇವಿಯು ತನ್ನ ತಪೋಭೂಮಿಯಾದ ಕಲ್ಯಾಣಕ್ಕೆ ಬಂದು, ಅಲ್ಲಮ, ಸಿದ್ದರಾಮ, ಬಸವಣ್ಣ ಹಾಗೂ ಇನ್ನಿತರ ಶರಣರ ಮನೆಯ ಮಗಳಾಗಿದ್ದು, ಎಲ್ಲರಿಗೂ ಅಕ್ಕನಾದ ಬಗೆ ವಿಸ್ಮಯವನ್ನುಂಟು ಮಾಡಿತ್ತು. ಗವಿಯ ಮುಂಭಾಗದಲ್ಲಿ ಒಂದು ಹೊಂಡವಿದ್ದು ಅಕ್ಕನ ತೀರ್ಥ ಎಂಬ ಹೆಸರು ಪಡೆದಿದೆ. ಗವಿಯ ಮೇಲ್ಭಾಗಕ್ಕೆ ಹೋಗಲು ಹತ್ತಾರು ಮೆಟ್ಟಿಲುಗಳಿದ್ದು, ಅಲ್ಲೊಂದು ದೃಶ್ಯ ವೀಕ್ಷಣಾ ಗೋಪುರವಿದೆ. ಅಲ್ಲಿಂದ ನಿಸರ್ಗದ ರಮಣೀಯತೆಯನ್ನು ಕಣ್ತುಂಬಿಕೊಂಡು ಅಕ್ಕನ ವಚನಗಳನ್ನು ಮೆಲುಕು ಹಾಕುತ್ತಾ ಅಕ್ಕ ನಾಗಮ್ಮನ ಗವಿಯ ಬಳಿ ಸಾಗಿದೆವು. ಸೋದರನ ಬೆನ್ನಿಗೆ ನಿಂತು ಮಗ ಚನ್ನಬಸವಣ್ಣನ ಜೊತೆಗೂಡಿ ಅನುಭವ ಮಂಟಪದ ಎಲ್ಲಾ ಕಾರ್ಯ ಕಲಾಪಗಳಲ್ಲೂ ಮಂಚೂಣಿಯಲ್ಲಿದ್ದವಳು ಅಕ್ಕ ನಾಗಮ್ಮ. ಈ ಗವಿಯ ಮುಂದೆ ವಿಶಾಲವಾದ ಅಂಗಳವಿದ್ದು ಗಿಡ ಮರಗಳಿಂದ ಕಂಗೊಳಿಸುತ್ತಿವೆ. ಸುಮಾರು ನೂರಡಿ ಉದ್ದವಾಗಿರುವ ಈ ಗವಿಯಲ್ಲಿ ಹಲವು ತಿರುವುಗಳಿದ್ದು ಮುಂದೆ ಹೋದಷ್ಟೂ ಗವಿಗಳು ಗೋಚರಿಸುತ್ತಿದ್ದವು. ಬಹುಶಃ ಇದು ಅಕ್ಕ ನಾಗಮ್ಮನವರ ನೆರಳಲ್ಲಿ ಸಾಂತ್ವನ ಪಡೆದ ಬಹಳಷ್ಟು ಶರಣೆಯರ ಧ್ಯಾನ ಮಂದಿರವಾಗಿದ್ದಿರಬಹುದು.
ನಾವು ಬಸವಕಲ್ಯಾಣವನ್ನು ಪ್ರವೇಶಿಸುತ್ತಲೇ ನಮ್ಮ ಕಣ್ಣಿಗೆ ಕಂಡದ್ದು ಬೃಹತ್ತಾದ ಭಕ್ತ್ತಿ ಭಂಡಾರಿ ಬಸವಣ್ಣನವರ ವಿಗ್ರಹ ಇದು ನೂರಾ ಎಂಟು ಅಡಿ ಎತ್ತರವಿದ್ದು, ವಿಶ್ವದಲ್ಲಿಯೇ ಅತಿ ದೊಡ್ಡದಾದ ಮೂರ್ತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಸವಣ್ಣನವರ ವಿಗ್ರಹ ಅರ್ಧ ಪದ್ಮಾಸನದ ಭಂಗಿಯಲ್ಲಿದ್ದು, ಅವರ ಬಲಗೈ ಜ್ಞಾನಮುದ್ರೆಯಲ್ಲಿದೆ. ಎಡಗೈಲಿ ವಚನ ಸಂಗ್ರಹದ ತಾಳೆಗರಿಯ ಪುಸ್ತಕದ ಕಟ್ಟೊಂದನ್ನು ಹಿಡಿದು ಎಲ್ಲರಿಗೂ ಜ್ಞಾನದೀಕ್ಷೆ ಕೊಡುವಂತಿದೆ.
ಈ ವಿಗ್ರಹದ ಮುಂದೆ ಬಸವಾದಿ ಶರಣರ ಮೂರ್ತಿಗಳಿವೆ. ಈ ಪವಿತ್ರವಾದ ಸ್ಥಳದ ಸುತ್ತಲೂ ಸುಂದರವಾದ ಉದ್ಯಾನವನವಿದ್ದು, ಮುಂದಿರುವ ಕೊಳದಲ್ಲಿ ಅರಳಿರುವ ಕಮಲಗಳು ಮನಸ್ಸಿಗೆ ಮುದನೀಡುತ್ತಿವೆ. ಈ ಸ್ಮಾರಕದ ಅಡಿಯಲ್ಲಿ ಒಂದು ಧ್ಯಾನ ಮಂದಿರವಿದ್ದು, ಒಬ್ಬ ಶಿವಶರಣೆಯು ಭಜನೆಯನ್ನು ಹೇಳಿಕೊಡುತ್ತಿದ್ದರು, ನಾವೂ ಬಸವಣ್ಣನವರ ಸನ್ನಿಧಾನದಲ್ಲಿ ಕುಳಿತು ಅವರ ಜೊತೆ ಧ್ವನಿಗೂಡಿಸಿದೆವು. ನಂತರದಲ್ಲಿ ಅವರು ನೀಡಿದ ಕಲ್ಲುಸಕ್ಕರೆ ಪ್ರಸಾದವನ್ನು ಸ್ವೀಕರಿಸಿ, ಪಕ್ಕದಲ್ಲಿದ್ದ ಶರಣಗ್ರಾಮವನ್ನು ನೋಡಲು ಹೊರಟೆವು. ಇದು ಗುಹೆಯಾಕಾರದಲ್ಲಿ ರಚಿಸಲ್ಪಟ್ಟಿದ್ದು, ಅಲ್ಲಲ್ಲಿ ಗೂಡುಗಳನ್ನು ಮಾಡಿ ಶರಣರ ಮೂರ್ತಿಗಳನ್ನು ಸ್ಥಾಪಿಸಿರುವರು – ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಮಡಿವಾಳ ಮಾಚಿದೇವರು, ಅಂಬಿಗರ ಚೌಡಯ್ಯ, ಚನ್ನಬಸವಣ್ಣ ಮುಂತಾದ ಶರಣರ ಮೂರ್ತಿಗಳು ಇವೆ. ನಾವು ಮುಂದೆ ಬಸವ ವನದತ್ತ ಹೆಜ್ಜೆ ಹಾಕಿದೆವು – ಆನೆ ಕಾಲಿಗೆ ಕಟ್ಟಿ ಎಳೆಸುತ್ತಿರುವ ಹರಳಯ್ಯ, ಮಧುವರಸರ ಮೂರ್ತಿಗಳು, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವನು ಆನೆಯೊಂದಿಗೆ ಸೆಣಸುತ್ತಿರುವ ಭಂಗಿ, ಹರಳಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರು ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿರುವ ಚಿತ್ರಗಳು, ನಮ್ಮನ್ನು ಹನ್ನೆರಡನೇ ಶತಮಾನದ ಕಲ್ಯಾಣ ಪಟ್ಟಣಕ್ಕೆ ಕರೆದೊಯ್ದಿದ್ದವು. ಅಂಬಿಗರ ಚೌಡಯ್ಯನವರ ವಿಗ್ರಹದ ಮುಂದೆ ಬರೆಯಲಾಗಿದ್ದ ವಚನವೊಂದು ಐಹಿಕ ಭೋಗದಲ್ಲಿ ಮುಳುಗಿದ್ದ ಮಾನವರ ಚಿತ್ರಣವನ್ನು ಕಟ್ಟಿಕೊಟ್ಟಿತ್ತು, ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ / ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ / ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ / ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ / ಇಂತೀ ಸದಾ ಹಲವು ಚಿಂತೆಗಳಲ್ಲಿ ಇಪ್ಪವರ ಕಂಡೆನು / ಶಿವ ಚಿಂತೆಯಲ್ಲಿ ಇದ್ದವರೊಬ್ಬರನ್ನೂ ಕಾಣೆನೆಂದಾತ ಅಂಬಿಗರ ಚೌಡಯ್ಯ”
(ಮುಂದುವರಿಯುವುದು)
ಈ ಬರಹದ ಹಿಂದಿನ ಪುಟ ಇಲ್ಲಿದೆ : https://www.surahonne.com/?p=39787
–-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಬಸವಣ್ಣನವರ ಕುರಿತ ವಿಸ್ತೃತ ಲೇಖನ ಬಹಳ ಚೆನ್ನಾಗಿ ಮೂಡಿ ಬಂತು. ಹಲವಾರು ಮಾಹಿತಿಗಳನ್ನು ಒಳಗೊಂಡ ಲೇಖನಮಾಲೆ. ಬಸವಣ್ಣನವರ ವಚನಗಳು ಬದುಕಿನ ಸತ್ಯವನ್ನು ತಿಳಿಸುತ್ತವೆ ಹಾಗೂ ಎಲ್ಲ ಕಾಲದಲ್ಲೂ ಬದುಕಿಗೆ ಹೊಂದಿಕೆ ಆಗುವಂತದ್ದು.
ಬಸವೇಶ್ವನವರ ಬಗ್ಗೆ ವಿಸ್ತಾರವಾದ ಮಾಹಿತಿ ಯನ್ನು ತಮ್ಮ ಪ್ರವಾಸದಲ್ಲಿನ ಕಂಡುಂಡ ಅನುಭವದ ಹಿನ್ನೆಲೆಯಲ್ಲಿ …ಅಭಿವ್ಯಕ್ತಿ ಸಿರುವ ರೀತಿ… ವಹಳ ಸೊಗಸಾಗಿ ಅನಾವರಣಗೊಂಡಿದೆ.. ಧನ್ಯವಾದಗಳು ಗಾಯತ್ರಿ ಮೇಡಂ
ಹತ್ತು ಹಲವಾರು ಮಾಹಿತಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಲೇಖನ ಮಾಲಿಕೆ ಸೊಗಸಾಗಿ ಮೂಡಿ ಬಂತು
ಮಾಹಿತಿಪೂರ್ಣ ಪ್ರವಾಸ ಲೇಖನ…..
ಜೊತೆಗೆ ಶರಣಚಿಂತನ….
ಚಿಂತನೆಗೂ ಹಚ್ಚುವ ಸಂಚಲನ.
ಇಷ್ಟವಾಯಿತು. ಅಭಿನಂದನೆ ಮತ್ತು ಧನ್ಯವಾದ
ತುಂಬು ಹೃದಯದ ವಂದನೆಗಳು ಸಹೃದಯ ಓದುಗರಿಗೆ
ಬಸವಣ್ಣನವರ ಅನುಭವ ಮಂಟಪ, ಆ ಕಾಲದಲ್ಲಿ ಅಲ್ಲಿ ನಡೆಯುತ್ತಿದ್ದ ವಿಚಾರ ವಿನಿಮಯಗಳ ಸೂಕ್ಷ್ಮ ವಿವರಣೆ, ಅಲ್ಲಮರ ಗದ್ದುಗೆ, ಬಸವಕಲ್ಯಾಣದಲ್ಲಿರುವ ಜಗತ್ತಿನ ಅತೀ ಎತ್ತರದ ಭಕ್ತಿ ಭಂಡಾರಿ ಬಸವಣ್ಣನವರ ವಿಗ್ರಹ…ಎಲ್ಲವನ್ನೂ ಒಳಗೊಂಡ ಸೊಗಸಾದ, ಸಂಗ್ರಹಯೋಗ್ಯ ಬರಹವು ಮನಮುಟ್ಟಿತು…ಧನ್ಯವಾದಗಳು ಗಾಯತ್ರಿ ಮೇಡಂ.
ಸಹೃದಯ ಓದುಗರಿಗೆ ನನ್ನ ಹೃದಯಪೂರ್ವಕ ವಂದನೆಗಳು