ಲಹರಿ….ಭಾಗ 1
ಹೀಗೇ ಬೆಳಗಿನ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೊರಟಿದ್ದೆ. ದಾರಿಯಲ್ಲಿ ಜನರು ಅವರಷ್ಟಕ್ಕೆ ಅವರೆಂಬಂತೆ ನಡೆದು ಹೊರಟಿದ್ದರು. ಅವರ ನಡುವೆ ಸಾಗುತ್ತಿರುವ ಗುಂಪೊಂದು ನನ್ನ ಗಮನವನ್ನು ಸೆಳೆದಿತ್ತು. ಆ ಗುಂಪಿನಲ್ಲಿದ್ದವರೆಂದರೆ ಕೆಲವು ಮಹಿಳೆಯರು ಮತ್ತು ಪುರುಷರು ಮತ್ತು ಎಲ್ಲರೂ ಸರಳಜೀವನವನ್ನು ನಡೆಸುತ್ತಿರುವ ಸಾಮಾನ್ಯರಂತೆಯೇ ಇದ್ದರು. ಎಲ್ಲರ ಕೈಗಳಲ್ಲೂ ಚೀಲಗಳು ಅಥವಾ ಬಟ್ಟೆಯ ಪುಟ್ಟ ಗಂಟುಗಳು.
‘ಎಲ್ಲಿಗೆ ಹೋಗುತ್ತಿರುವಿರಿ?’- ನಾನು ಅವರನ್ನು ಕುತೂಹಲದಿಂದ ಕೇಳಿದೆ.
‘ಅಯೋಧ್ಯೆಗೆ’-ಎಂದ ಅವರ ನುಡಿ ನನ್ನಲ್ಲಿ ಅಚ್ಚರಿಯೊಂದಿಗೆ ರೋಮಾಂಚನವನ್ನು ಮೂಡಿಸಿತ್ತು. ಅದಕ್ಕೆ ಕಾರಣ ಇಷ್ಟೇ, ಬಾಲ್ಯದಿಂದಲೂ ನನಗೆ ಅಯೋಧ್ಯೆ ಎನ್ನುವ ಪದ ಚಿರಪರಿಚಿತ ಮತ್ತು ಮನಸ್ಸಿಗೆ ಬಹಳ ಆಪ್ತವೆನಿಸಿದೆ. ಪ್ರಾಥಮಿಕಶಾಲೆಯ ಪಠ್ಯದಲ್ಲಿನ ಒಂದು ಪಾಠವಾದ ರಾಮಾಯಣದ ಕಥೆಯ ಆರಂಭದ ಭಾಗವನ್ನು ಓದಿ ದಶರಥನ ಮರಣಕ್ಕಾಗಿ ಮತ್ತು ರಾಮನ ವನವಾಸಕ್ಕಾಗಿ ಮರುಗಿದ ನಾನು ಮುಂದಿನ ಕಥೆಯನ್ನು ತಿಳಿಯಲು ಆಶಿಸಿದಾಗ ನನ್ನ ಅಮ್ಮ ನನಗೆ ರಾಮಾಯಣದ ಸಂಪೂರ್ಣ ಕಥೆಯನ್ನು ಕಣ್ಣೆದುರು ನಡೆಯುತ್ತಿರುವಂತೆ ಹೇಳಿದ್ದು, ಅದು ಎಂದೂ ಮರೆಯಲಾರದಂತೆ ನನ್ನ ಪುಟ್ಟ ಮೆದುಳಿನಲ್ಲಿ ಮಾತ್ರವಲ್ಲದೆ ಹೃದಯದೊಳಗೆ ದಾಖಲಾಗಿದ್ದು, ಆಗ ಕೇಳಿದ ಅಯೋಧ್ಯೆಯನ್ನು ನಾನು ನನ್ನದೇ ಕಲ್ಪನೆಯಲ್ಲಿ ಊಹಿಸಿಕೊಂಡಿದ್ದು, ಬಹಳ ದಿನಗಳವರೆಗೂ ಅದು ನನ್ನ ಭಾಗಕ್ಕೆ ಒಂದು ಕಾಲ್ಪನಿಕಸ್ಥಳವಾಗಿಯೇ ಉಳಿದಿದ್ದು ನಂತರದ ದಿನಗಳಲ್ಲಿ ಅದೂ ನಾನಿರುವ ಊರಿನಂತೆಯೇ ಭೂಮಿಯ ಮೇಲಿರುವ ಒಂದು ನಗರ ಎಂದು ತಿಳಿದಿದ್ದು, ಶ್ರೀರಾಮನಿಲ್ಲದ ಅಯೋಧ್ಯೆ ಇರುವುದು ಸಾಧ್ಯವೇ ಎಂದು ನನ್ನ ಮೆದುಳು ವಾಸ್ತವವನ್ನು ಒಪ್ಪಿಕೊಳ್ಳಲು ಹರತಾಳ ನಡೆಸಿದ್ದು, ಆಗಾಗ ರಾಮಾಯಣವನ್ನು ಓದುವಾಗಲೆಲ್ಲ ಅಯೋಧ್ಯೆಯನ್ನು ಕುರಿತಾದ ವಿಷಯಗಳು ನನ್ನ ಮನದಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಅದಕ್ಕೆ ಪೂರಕವಾಗಿ ಸುದ್ದಿಯಾಗಿ ಕಾಡಿದ ರಾಮಜನ್ಮಭೂಮಿಯ ವಿವಾದ, ಎಲ್ಲವೂ ಅಯೋಮಯವೆನಿಸಿ ಕಾಡುತ್ತಿರುವಾಗಲೇ ಕೊನೆಗೂ ಅಯೋಧ್ಯೆಯಲ್ಲಿ ವಿವಾದಿತ ಮೂಲಸ್ಥಳದಲ್ಲೇ ನೂತನವಾದ ಹಾಗೂ ವಿಶಾಲವಾದ ಸುಂದರ ಸ್ವರೂಪದ ರಾಮಮಂದಿರ ನಿರ್ಮಾಣವಾಗಿ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆಯೂ ಆಗಿದ್ದು, ಅದನ್ನು ನಾನು ದೃಶ್ಯಮಾಧ್ಯಮದಲ್ಲಿ ನೋಡಿ ಕಣ್ತುಂಬಿಕೊಂಡಿದ್ದು, ಅಂತೂ ಅಯೋಧ್ಯೆಯಲ್ಲಿ ರಾಮನ ಸನ್ನಿಧಾನವಿದೆ ಎನ್ನುವ ನಂಬಿಕೆ ದೃಢವಾಗಿದ್ದು-ಹೀಗೆ ಬಹಳ ವರ್ಷಗಳಿಂದಲೂ ನನ್ನ ಮನದೊಂದಿಗೆ ಸೇರಿಹೋಗಿರುವ ಅಥವಾ ಸೇರುತ್ತ ಬಂದಿರುವ ಅಯೋಧ್ಯೆಯ ಹೆಸರನ್ನು ಮತ್ತೆ ಕೇಳಿದಾಗ ಸಹಜವಾಗಿ ನನ್ನ ಮನಸ್ಸು ಗರಿಗೆದರಿತ್ತು.
‘ನನ್ನನ್ನೂ ನಿಮ್ಮೊಂದಿಗೆ ಕರೆದೊಯ್ಯಲು ಸಾಧ್ಯವೇ? ನನಗೂ ಅಯೋಧ್ಯೆಯನ್ನು ನೋಡಬೇಕೆಂಬ ಆಸೆಯಿದೆ’-ನಾನು ಪುಟ್ಟ ಮಗುವಿನಂತೆ ಅವರನ್ನು ಕೇಳಿದೆ.
‘ಅದಕ್ಕೇನು? ಆಗಬಹುದು, ಆದರೆ ಬಹಳ ದೂರ ನಡೆಯಬೇಕಾಗುತ್ತದೆ’-ಅವರೆಂದರು.
‘ನನಗೆ ನಡೆಯಲು ಆಗುತ್ತದೆ’-ನಾನೆಂದೆ.
‘ಹಾಗಾದರೆ ಬರಬಹುದು’- ಎಂದು ಹೇಳುತ್ತ ಅವರು ನನ್ನನ್ನೂ ಅವರ ಗುಂಪಿಗೆ ಸೇರಿಸಿಕೊಂಡರು.
ಎಲ್ಲರೂ ಮೌನವಾಗಿ ಹೆಜ್ಜೆ ಹಾಕತೊಡಗಿದೆವು. ಹೊರಡುವಾಗ ಬೆಳಗಿನ ಸಮಯದಲ್ಲಿ ಬೆಚ್ಚನೆಯ ಬಿಸಿಲಿತ್ತು, ಮನದಲ್ಲಿ ಅದಮ್ಯವಾದ ಉತ್ಸಾಹವಿತ್ತು ಮತ್ತು ಶರೀರದಲ್ಲಿ ಹೆಚ್ಚಿನ ಶಕ್ತಿಯಿದ್ದಂತೆ ಅನ್ನಿಸಿತ್ತು. ನಡೆಯುತ್ತ ನಾವು ಮುಂದೆ ಸಾಗಿದಂತೆ ಸೂರ್ಯ ತನ್ನತ್ತ ನೋಡುತ್ತಿದ್ದ ಮೋಡಗಳ ಕೆನ್ನೆಗೆ ರಂಗನ್ನು ಬಳಿಯುತ್ತ ಪಶ್ಚಿಮದತ್ತ ಸರಿಯುತ್ತಿದ್ದ. ಸಂಜೆಯ ಗಾಳಿ ಮೆಲ್ಲನೆ ಬೀಸತೊಡಗಿತ್ತು. ಹಕ್ಕಿಗಳು ಗುಂಪುಗೂಡಿ ಚಿಲಿಪಿಲಿಗುಟ್ಟುತ್ತ ಗೂಡಿನತ್ತ ಧಾವಿಸಲಾರಂಭಿಸಿದವು. ನೋಡುತ್ತಿದ್ದಂತೆ ಮೆಲ್ಲಗೆ ಇರುಳು ಮುಸುಕಿತ್ತು.
ಎಲ್ಲೆಲ್ಲೂ ಕತ್ತಲೆ, ಬೀದಿದೀಪಗಳ ಬೆಳಕಿನ ಆಸರೆಯಲ್ಲಿ ನಡೆಯುತ್ತಿದ್ದಾಗಲೇ ಕುಳಿತರೆ ಸಾಕು ಎನ್ನಿಸಿತ್ತು. ರಸ್ತೆಯ ಒಂದು ಬದಿಯಲ್ಲಿ ಮನೆಯೊಂದು ಕಂಡಿತ್ತು. ನಾವೆಲ್ಲರೂ ಅತ್ತ ಸಾಗಿದ್ದೆವು. ಯಾರದೋ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುವಂತಾಗಿತ್ತು. ನಮ್ಮ ಸದ್ದು ಕೇಳಿ ಆ ಮನೆಯವರು ಬಾಗಿಲನ್ನು ತೆರೆದು ನಮ್ಮತ್ತ ಪ್ರಶ್ನಾರ್ಥಕದೃಷ್ಟಿಯಿಂದ ನೋಡಿದರು.
ನಾವು ಅಯೋಧ್ಯೆಗೆ ಹೊರಟಿದ್ದೇವೆಂದು ತಿಳಿಸಿ, ಕತ್ತಲಾದ್ದರಿಂದ ವಿಶ್ರಮಿಸಲು ಈ ಜಗುಲಿಯ ಮೇಲೆ ಆಶ್ರಯ ಪಡೆದಿದ್ದೇವೆಂದು ಹೇಳಿದೆವು. ಅವರು ಒಳಸೇರಿ ಬಾಗಿಲನ್ನು ಮುಚ್ಚಿದರು. ನಾವೆಲ್ಲರೂ ಕುಳಿತಲ್ಲೇ ಗೋಡೆಗೆ ಒರಗಿ ತೂಕಡಿಸುವುದೆಂದು ತೀರ್ಮಾನಿಸಿದಾಗ ನಾನು ಮೂಲೆಯೊಂದನ್ನು ಸೇರಿ ರಾಮಧ್ಯಾನದಲ್ಲಿ ತೊಡಗಿದೆ. ಅರ್ಧಗಂಟೆ ಕಳೆದಿರಬಹುದು, ಮತ್ತೆ ಬಾಗಿಲು ತೆರೆಯಲ್ಪಟ್ಟಿತು. ಅವರು ನಮಗೆ ಬೇರೆಡೆಗೆ ಹೋಗುವಂತೆ ತಿಳಿಸಲು ಬಂದಿರಬಹುದು ಎಂದು ನಾವೆಲ್ಲ ಆತಂಕದಿಂದ ಅವರತ್ತ ನೋಡತೊಡಗಿದೆವು.
ಆದರೆ ಆದದ್ದೇ ಬೇರೆ. ಹಾಗೆ ಬಂದಾಕೆ ನಮ್ಮೆಲ್ಲರಿಗೂ ಒಂದೊಂದು ತಟ್ಟೆಯನ್ನು ಕೊಟ್ಟರು, ಅದರಲ್ಲಿ ಎರಡೆರಡು ಬಿಸಿರೊಟ್ಟಿಗಳು, ಮೇಲೆ ತುಪ್ಪ, ಜೊತೆಗೆ ಪಲ್ಯ, ಒಂದು ಬಟ್ಟಲಿನಲ್ಲಿ ಮೊಸರು ಕೊಟ್ಟು ನಿಧಾನವಾಗಿ ತಿಂದು ವಿಶ್ರಮಿಸುವಂತೆ ಹೇಳಿದರು. ಹಸಿದ ಹೊಟ್ಟೆಗೆ ಆ ತಿನಿಸು ಮೃಷ್ಟಾನ್ನದಂತೆ ಭಾಸವಾಯಿತು. ನಂತರ ಎಲ್ಲರಿಗೂ ಸಾಕೆನಿಸುವಷ್ಟು ಕುಡಿಯಲು ಮಜ್ಜಿಗೆಯನ್ನು ಕೊಟ್ಟರು. ಆಯಾಸದಿಂದ ದಣಿದಿದ್ದ ನನಗೆ ಅಮೃತವನ್ನು ಕುಡಿದ ಅನುಭವ. ಸುತ್ತ ನೋಡಿದೆ. ಎಲ್ಲರೂ ಆಗಲೇ ನಿದ್ದೆಯ ತಯಾರಿ ನಡೆಸಿದ್ದರು. ಮನೆಯಾಕೆ ಬಂದು ನಮ್ಮ ತಟ್ಟೆ ಬಟ್ಟಲುಗಳನ್ನೆಲ್ಲ ಕೊಂಡೊಯ್ದರು.
ಇಂತಹ ಸಜ್ಜನರ ಮನೆಯ ಜಗುಲಿ ದೊರೆತಿದ್ದು ನಮ್ಮ ಪುಣ್ಯ ಎಂದು ಭಾವಿಸಿ ಹಾಗೇ ಗೋಡೆಗೆ ಒರಗಿ ಕಣ್ಮುಚ್ಚಿದೆ. ಕುಳಿತಲ್ಲೇ ನನಗೇ ಅರಿವಿಲ್ಲದಂತೆ ನಿದ್ರೆಗೆ ಜಾರಿದ್ದೆ. ಎಚ್ಚರವಾದಾಗ ಮೂಡಣದಲ್ಲಿ ಓಕುಳಿಯ ನೀರನ್ನೆರಚಿದಂತೆ ಕೆಂಬಣ್ಣ ಮೂಡತೊಡಗಿತ್ತು. ಆ ಮನೆಯವರಿಗೆ ಮತ್ತಷ್ಟು ಹೊರೆಯಾಗದಂತೆ ಅವರು ಏಳುವ ಮೊದಲೇ ನಾವೆಲ್ಲ ಅಲ್ಲಿಂದ ಹೊರಟುಬಿಡಬೇಕೆಂದು ನಿಶ್ಚೈಸಿ ಎಲ್ಲರೂ ನಡೆಯಲಾರಂಭಿಸಿದೆವು. ಸ್ವಲ್ಪ ದೂರ ಸಾಗುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಕೊಳವೆಬಾವಿಯೊಂದು ಕಾಣಿಸಿತು. ಹಿಡಿಕೆಯನ್ನು ಒತ್ತಿದಾಗ ನೀರು ಹೊರಬರಲಾರಂಭಿಸಿತು. ಒಬ್ಬರ ನಂತರ ಒಬ್ಬರಂತೆ ಹಿಡಿಕೆಯನ್ನು ಒತ್ತುತ್ತ ಸಹಕಾರಿ ತತ್ತ್ವದಲ್ಲಿ ಎಲ್ಲರೂ ಮುಖಮಾರ್ಜನ ಇತ್ಯಾದಿ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡೆವು. ಕೈ ತೊಳೆಯಲು ನಮ್ಮ ಗುಂಪಿನಲ್ಲಿನ ಯಾರೋ ಒಬ್ಬರು ಕೊಟ್ಟ ಸಾಬೂನನ್ನೇ ಎಲ್ಲರೂ ಬಳಸಿದ್ದೆವು.
ನೀರು ಕುಡಿದು ನಿರಾಳವಾದ ನಂತರ ನಮ್ಮ ನಡಿಗೆ ಮತ್ತೆ ಶುರುವಾಯಿತು. ಅಂತೂ ನಾವು ಹಳ್ಳಿಯೊಂದನ್ನು ತಲುಪಿದ್ದೆವು. ಒಳಗೆ ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಸಗಣಿ ಗಂಜಲಗಳ ವಾಸನೆ, ಅಲ್ಲಲ್ಲಿ ಬಿದ್ದ ಹಿಕ್ಕೆಗಳು ಮತ್ತು ಹುಲ್ಲು, ಇನ್ನೇನು ಕ್ಷಣದಲ್ಲಿಯೇ ಬಿದ್ದು ಹೋಗುತ್ತವೇನೋ ಎಂಬಂತೆ ಕಾಣುವ ಕೊಟ್ಟಿಗೆಗಳು, ದಪ್ಪ ಗೋಡೆಗಳ ಗುಡಿಸಲುಗಳು ಮತ್ತು ಅಲ್ಲಲ್ಲಿ ಮೇಯುತ್ತಿದ್ದ ಹಸು ಎಮ್ಮೆಗಳು. ಮುಂದೆ ಹೋದಂತೆ ಕಂಡಿದ್ದು ಆಂಜನೇಯನ ದೇವಾಲಯ. ಬಾಗಿಲು ಮುಚ್ಚಿದ್ದರಿಂದ ನಾವೆಲ್ಲರೂ ಮುಚ್ಚಿದ ಬಾಗಿಲ ಸರಳಿನ ಮೂಲಕವೇ ಆಂಜನೇಯನ ದರ್ಶನ ಮಾಡಿದೆವು. ಅದರಿಂದ ಸ್ವಲ್ಪ ದೂರದಲ್ಲಿದ್ದ ಒಂದು ವಿಶಾಲವಾದ ಅರಳಿಕಟ್ಟೆಯ ಮೇಲೆ ಕುಳಿತು ವಿಶ್ರಮಿಸುತ್ತಿರುವಾಗಲೇ ಹುಡುಗರ ಗುಂಪೊಂದು ನಮ್ಮತ್ತ ಬಂದಿತು.
ಅವರು ಅಲ್ಲಿಯೇ ನಿಂತು ನಮ್ಮತ್ತ ನೋಡುತ್ತ ಏನೋ ಮಾತನಾಡಿಕೊಳ್ಳತೊಡಗಿದರು.
ಅವರಲ್ಲೊಬ್ಬ ಯುವಕ -”ಯಾರು ನೀವು?”-ಎಂದು ಕೇಳಿದ.
”ನಾವು ಯಾತ್ರಿಕರು, ಅಯೋಧ್ಯಗೆ ಹೊರಟಿದ್ದೇವೆ”-ಎಂದಷ್ಟೇ ಹೇಳಿ ಸುಮ್ಮನಾದೆವು. ಅವರೆಲ್ಲರೂ ಅಲ್ಲಿಂದ ಮುಂದೆ ಹೋದರು.
ಸ್ವಲ್ಪಸಮಯದಲ್ಲೇ ಗ್ರಾಮದ ಹಿರಿಯರೊಬ್ಬರು ನಮ್ಮತ್ತ ಬಂದು-”ನೀವೆಲ್ಲ ಅಯೋಧ್ಯೆಗೆ ಹೊರಟಿದ್ದೀರಂತೆ, ನಮ್ಮ ಹುಡುಗರು ಹೇಳಿದರು, ಗ್ರಾಮದೊಳಗೆ ಬರಬಹುದಲ್ಲ!” -ಎನ್ನುತ್ತ ನಮ್ಮನ್ನು ಅವರೊಂದಿಗೆ ಕರೆದೊಯ್ದರು. ಅಲ್ಲಿ ನಮ್ಮೆಲ್ಲರಿಗೂ ಪುಷ್ಕಳವಾದ ಊಟದ ವ್ಯವಸ್ಥೆಯಿತ್ತು. ಹೊಳೆಯುವ ತಾಮ್ರದ ಕೊಡದಲ್ಲಿ ಕುಡಿಯಲು ನೀರನ್ನು ತಂದಿತ್ತರು. ಊಟಮಾಡಿ ನೀರು ಕುಡಿದ ನಂತರ ವಿಶ್ರಮಿಸಿಕೊಳ್ಳಲು ಒಂದು ಹಳೆಯ ಕಾಲದ ಹೆಂಚಿನ ಮನೆಯನ್ನೇ ನಮಗೆ ಬಿಟ್ಟುಕೊಟ್ಟರು. ನಾವು ಅವರ ಈ ಉಪಚಾರವನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ. ದಣಿದ ನಮಗೆ ಆ ಕ್ಷಣದಲ್ಲಿ ಸ್ವರ್ಗದಲ್ಲಿರುವಂತೆ ಭಾಸವಾಗಿತ್ತು. ಕಿಟಕಿಗಳನ್ನು ತೆರೆದು ಬಾಗಿಲನ್ನು ಮುಚ್ಚಿ ಗೋಡೆಗೆ ಬೆನ್ನುತಾಗಿಸಿ ಕುಳಿತು ಸೂರ್ಯೋದಯ ತರುವ ನಾಳೆಯನ್ನು ಕಾಯುತ್ತ ಕುಳಿತಾಗ ಕ್ಷಣಗಳು ನಿಧಾನವಾಗಿ ಸರಿಯುತ್ತಿರುವ ಅನುಭವ.
ಹಾಗೇ ಕುಳಿತು ನಾನು ಯೋಚಿಸತೊಡಗಿದೆ. ಶ್ರೀರಾಮನ ಸ್ವಂತಸ್ಥಳವಾದ ಅಯೋಧ್ಯೆ ಎನ್ನುವ ಪದವನ್ನು ಉಚ್ಚರಿಸಿದ್ದರಿಂದಲೇ ನಮಗೆ ಅಪರಿಚಿತರಿಂದಲೂ ಆಹಾರ ನೀರು ದೊರಕಿತ್ತು. ಹಸಿವಿನಿಂದ ಬಳಲದಂತೆ ಆ ರಾಮನೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆ ಎನ್ನಿಸಿದ್ದು ನಿಜ. ಅಷ್ಟಲ್ಲದೇ ದಾಸರು ಹೇಳಿದ್ದಾರೆಯೇ?-ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲ ಒಂದಿದ್ದರೆ ಸಾಕೋ-ಎಂದು? ಆದರೆ ನಿತ್ಯವೂ ಊಟ ಸಿಗುತ್ತದೆ ಎಂಬ ಖಾತ್ರಿ ಎಲ್ಲಿದೆ? ಮುಂದಿನ ದಿನಗಳಲ್ಲಿ ನಮ್ಮ ಪರಿಸ್ಥಿತಿ ಹೇಗಾಗುವುದೋ ಎನ್ನಿಸಿತ್ತು. ಕೊನೆಗೂ ರಾತ್ರಿ ಕಳೆದು ಬೆಳಗಾಗಿತ್ತು.
ನಾವೆಲ್ಲರೂ ಮುಖಮಾರ್ಜನಗಳನ್ನು ಮುಗಿಸುವಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ ಕೇಳಿಬಂತು. ಬಾಗಿಲನ್ನು ತೆರೆದಾಗ ಹಬೆಯಾಡುವ ಬಿಸಿಕಾಫಿಯನ್ನು ತಂದಿದ್ದ ಮಹಿಳೆ ನಡುಮನೆಗೆ ಬಂದು ಬಟ್ಟಲುಗಳಿಗೆ ಕಾಫಿಯನ್ನು ಸುರಿದು ಎಲ್ಲರಿಗೂ ಕುಡಿಯಲು ಕೊಟ್ಟರು. ಅವರಿಂದ ಬೀಳ್ಕೊಂಡು ನಾವು ಮತ್ತೆ ನಡೆಯಲು ಪ್ರಾರಂಭಿಸಿ ಮುಖ್ಯರಸ್ತೆಯನ್ನು ತಲುಪಿದೆವು.
ನೋಡುನೋಡುತ್ತಿದ್ದಂತೆ ನಡೆಯುತ್ತ ನಡೆಯುತ್ತ ನಾವು ಹಳ್ಳಿಯಿಂದ ಬಹಳ ದೂರ ಬಂದುಬಿಟ್ಟಿದ್ದೆವು. ದೃಷ್ಟಿ ಹರಿಸಿದಷ್ಟು ದೂರಕ್ಕೂ ನಮಗೆ ಕಾಣುತ್ತಿದ್ದುದು ಕೇವಲ ಮರಗಳು, ಕುರುಚಲು ಪೊದೆಗಳು, ಅಲ್ಲಲ್ಲಿ ಹೂವುಗಳನ್ನು ಹೊತ್ತ ಗಿಡಗಳು, ಮುಂದೆ ಉದ್ದವಾದ ಹಾಗೂ ಕೊನೆಯಿಲ್ಲದ ರಸ್ತೆ. ನಮ್ಮನ್ನು ಹೊರತುಪಡಿಸಿ ಅಲ್ಲಿ ಒಂದು ನರಪಿಳ್ಳೆಯ ಸುಳಿವೂ ಇಲ್ಲ! ಆಗಾಗ ರಸ್ತೆಯ ಮೇಲೆ ಭರ್ರನೆ ಸಾಗುವ ಭಾರೀ ವಾಹನಗಳು. ಅದರಲ್ಲಿರುವವರೂ ಮಾನವರೇ ಆದರೂ ಅವರಿಗೆ ನಮ್ಮನ್ನು ಮಾತನಾಡಿಸುವಷ್ಟು ವ್ಯವಧಾನವಿಲ್ಲವಲ್ಲ! ಮುಂದೆ ಮುಂದೆ ನಡೆಯುತ್ತಿದ್ದಂತೆ ಅದೇಕೋ ನನ್ನ ಮನದಲ್ಲಿ ಅವ್ಯಕ್ತ ಭಯ ಮೊಳೆಯಲಾರಂಭಿಸಿತ್ತು. ಇದ್ದಕ್ಕಿದ್ದಂತೆ ಘಟಸರ್ಪ ಎದುರಾದರೆ? ಆನೆ, ಹುಲಿಗಳಂತಹ ಯಾವುದೋ ಕಾಡುಮೃಗ ಧುತ್ತನೆ ಪ್ರತ್ಯಕ್ಷವಾದರೆ? ಅಥವಾ ಮರದ ಮೇಲೆ ಹೊಂಚುಹಾಕಿ ಕುಳಿತ ಚಿರತೆ ಏಕಾಏಕಿ ನಮ್ಮ ಮೇಲೆ ಎರಗಿ ದಾಳಿಮಾಡಿದರೆ?-ಮುಂತಾದ ಯೋಚನೆಗಳಿಂದಾಗಿ ಮನಸ್ಸು ವ್ಯಾಕುಲಗೊಂಡಿತು. ಜೊತೆಯಲ್ಲಿ ನಡೆಯುತ್ತಿದ್ದವರ ಮನಸ್ಸನ್ನು ಅವರ ಮುಖಭಾವದಿಂದ ಅರಿಯಲು ನಾನು ಅವರತ್ತ ನೋಡಿದೆ. ಆದರೆ ಅವರಲ್ಲಿ ಯಾವ ಭಯದ ಚಿನ್ಹೆಗಳೂ ಕಾಣಲಿಲ್ಲ. ಎಲ್ಲರೂ ಮೌನವಾಗಿದ್ದು ನಿರ್ವಿಕಾರಭಾವದಿಂದ ನಡೆಯುತ್ತಿದ್ದರು. ಅವರನ್ನು ನೋಡಿ ನನಗೂ ಸ್ವಲ್ಪ ಧೈರ್ಯ ಮೂಡಿದಂತಾಗಿ ದೃಢವಾಗಿ ಹೆಜ್ಜೆಹಾಕಲು ಸಾಧ್ಯವಾಯಿತು. ಆದರೂ ಮನದೊಳಗಿನ ಕೋಲಾಹಲ ಮಾತ್ರ ಕಡಿಮೆಯಾಗಲಿಲ್ಲ. ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಅವರಿಗೆ ಹೇಳಿದರೆ ನಮ್ಮ ಗುಂಪಿನಲ್ಲಿದ್ದ ಪುರುಷರು ನನ್ನಲ್ಲಿನ ಪುಕ್ಕಲುತನಕ್ಕಾಗಿ ನನ್ನನ್ನು ಗೇಲಿಮಾಡಬಹುದು ಎನ್ನಿಸಿ ಸುಮ್ಮನಾದೆ. ನನ್ನ ನಡಿಗೆ ನಿಧಾನವಾದರೆ ಅವರಲ್ಲಿ ಒಬ್ಬರು- ಏಕೆ? ಏನಾಯಿತು?-ಎಂದು ಕೇಳುತ್ತಿದ್ದರು. ಏನಿಲ್ಲ-ಎನ್ನುತ್ತ ನಾನು ಮತ್ತೆ ನನ್ನ ನಡಿಗೆಯ ವೇಗವನ್ನು ಸ್ವಲ್ಪ ಹೆಚ್ಚಿಸುತ್ತಿದ್ದೆ.
ಬೆಳಗಿನ ಹವಾಮಾನ ಹಿತವಾಗಿದ್ದರೂ ಸೂರ್ಯ ಮೇಲೇರಿದಂತೆ ಬಿಸಿಲು ಹೆಚ್ಚಾಗತೊಡಗಿತ್ತು. ಕಾಲಿನ ಕೆಳಗೆ ರಸ್ತೆ, ತಲೆಯ ಮೇಲೆ ಸುಡುವ ಬಿಸಿಲು, ಅಲ್ಲಲ್ಲಿ ಮರಗಳ ನೆರಳು, ಮನದಲ್ಲಿ ಮಾತ್ರ ಅಯೋಧ್ಯೆಯನ್ನು ಯಾವಾಗ ತಲುಪುವೆವೋ ಎನ್ನುವ ಕಾತರ, ಆತುರ. ಹೀಗೇ ಎಷ್ಟು ದೂರ ಸಾಗಿದ್ದೆವೋ, ರಸ್ತೆಯಲ್ಲಿ ಸಾಗುತ್ತಿದ್ದ ಒಂದು ಮೆಟಡೋರ್ ನಮ್ಮ ಸಮೀಪ ಬಂದು ನಿಂತಿತು. ಅಚ್ಚರಿಯ ವಿಷಯವೆಂದರೆ ಅದರಲ್ಲಿ ಯಾವ ಪ್ರಯಾಣಿಕರೂ ಇರಲಿಲ್ಲ. ಮೆಟಡೋರ್‌ನ ಚಾಲಕ ವಾಹನವನ್ನು ನಿಲ್ಲಿಸಿ ನಮ್ಮತ್ತ ನಡೆದುಬಂದ. ಕಪ್ಪು ಗಡ್ಡ ಮೀಸೆಗಳನ್ನು ಬಿಟ್ಟಿದ್ದ ಆ ಯುವಕ ನೋಡಲು ಮುಸ್ಲಿಮ್‌ಧರ್ಮಕ್ಕೆ ಸೇರಿದವನಂತಿದ್ದ.
‘ನೀವೆಲ್ಲ ಯಾಕೆ ನಡೆದು ಹೋಗುತ್ತಿದ್ದೀರಿ?’-ಎಂದು ನಮ್ಮನ್ನು ಕೇಳಿದ. ಅವನ ಕಣ್ಣುಗಳಲ್ಲಿ ನಕ್ಷತ್ರಗಳ ಹೊಳಪಿತ್ತು. ಅವನ ದನಿಯಲ್ಲಿ ಉತ್ತರವನ್ನು ತಿಳಿಯುವ ಕುತೂಹಲವಿತ್ತು.
‘ನಾವೆಲ್ಲ ಅಯೋಧ್ಯೆಗೆ ಹೋಗುತ್ತಿದ್ದೇವೆ-‘ನಮ್ಮಲ್ಲಿನ ಕೆಲವರು ಉತ್ತರಿಸಿದರು.
‘ಏನು? ಅಯೋಧ್ಯೆಗಾ? ಅದೂ ನಡೆಯುತ್ತ! ಹೀಗಾದರೆ ನೀವು ಅಯೋಧ್ಯೆಯನ್ನು ತಲುಪುವುದು ಯಾವಾಗ?’ -ಅವನ ದನಿಯಲ್ಲಿ ನಾವು ಅಸಾಧ್ಯವಾದ ಸಾಹಸವೊಂದಕ್ಕೆ ಕೈಹಾಕಿದ್ದೇವೆಂಬ ಭಾವನೆ ವ್ಯಕ್ತವಾಗುತ್ತಿತ್ತು.
ಆತ ಮುಂದುವರಿದು-”ಬನ್ನಿ, ನಾನೂ ಅದೇ ದಾರಿಯಲ್ಲಿ ಹೋಗುವವನಿದ್ದೇನೆ. ನಿಮ್ಮನ್ನು ಅಯೋಧ್ಯೆಯ ಸಮೀಪಕ್ಕೆ ತಲುಪಿಸುವ ಜವಾಬ್ದಾರಿ ನನ್ನದು”-ಎನ್ನುತ್ತ ವಾಹನದ ಬಾಗಿಲನ್ನು ತೆರೆಯಲು ಮುಂದಾದ.
‘ಕ್ಷಮಿಸಿ, ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು, ನಾವು ಪಾದಯಾತ್ರಿಗಳಾಗಿ ನಡೆದೇ ಹೋಗುತ್ತೇವೆ’ -ನಮ್ಮಲಿನ ಒಬ್ಬರು ಹೇಳಿದರು.
ಆದರೆ ಆತ ಸುಮ್ಮನಾಗದೆ- ‘ನೀವು ಪಾದಯಾತ್ರಿಗಳೇ ಇರಬಹುದು, ಆದರೆ ಆ ದೇವರು ನೀವು ನಿಮ್ಮ ಪಾದಗಳನ್ನು ಎಷ್ಟು ಸವೆಸಿದಿರಿ, ನಿಮ್ಮ ಕಾಲುಗಳಿಗೆ ಅದೆಷ್ಟು ನೋವನ್ನು ಕೊಟ್ಟಿರಿ ಎಂಬುದನ್ನು ಗಮನಿಸುವುದಿಲ್ಲ. ನಿಮ್ಮ ಮನದಲ್ಲಿ ಅವನನ್ನು ಕುರಿತು ಎಷ್ಟು ಭಕ್ತಿಯಿದೆ, ಎಷ್ಟು ಪ್ರೇಮವಿದೆ ಎಂಬುದನ್ನಷ್ಟೇ ಆತ ಗಮನಿಸುತ್ತಾನೆ. ಇನ್ನಾದರೂ ನನ್ನ ವಾಹನದಲ್ಲಿ ಪ್ರಯಾಣಿಸಬಹುದಲ್ಲ! ನೀವು ಬೇಗ ಅಯೋಧ್ಯೆಯನ್ನು ತಲುಪುವಂತಾಗುತ್ತದೆ. ನಡೆಯಲು ಬಳಸುವ ಸಮಯವನ್ನು ಅಯೋಧ್ಯೆಯಲ್ಲೇ ಕಳೆಯಬಹುದಲ್ಲ!’-ಎಂದ. ನಾವೆಲ್ಲ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳತೊಡಗಿದೆವು. ಏನೆಂದು ಉತ್ತರಿಸುವುದು ಎನ್ನುವುದೇ ನಮಗೆ ಸಮಸ್ಯೆಯಾಗಿ ಕಾಡಿತ್ತು.
ನಮ್ಮಲ್ಲಿನ ಒಬ್ಬಾತ ಧೈರ್ಯಮಾಡಿ-‘ನೀವು ಹೇಳೋದು ಸರಿಯೇ. ಆದರೆ ಪ್ರಯಾಣದ ವೆಚ್ಚವನ್ನು ಭರಿಸಲು ನಮ್ಮಲ್ಲಿ ಹಣವಿಲ್ಲ’-ಎಂದು ಸತ್ಯವನ್ನು ತೆರೆದಿಟ್ಟರು. ಆ ಯುವಕನಿಗೆ ಇದೂ ಅಚ್ಚರಿಯೆನಿಸಿತೋ, ಅಥವಾ ನಮ್ಮ ಮೂರ್ಖತನ ಎನ್ನಿಸಿತೋ, ಒಟ್ಟಿನಲ್ಲಿ ಅವನು ಗೊಂದಲಕ್ಕೊಳಗಾಗಿರುವುದನ್ನು ಅವನ ಮುಖವೇ ತಿಳಿಸಿತ್ತು.
ಆತ ಸಾವರಿಸಿಕೊಂಡು-‘ನಿಮ್ಮನ್ನು ಹಣ ಕೊಡಿ ಎಂದು ಕೇಳಿದವರು ಯಾರು? ನಾನು ಹಣಕ್ಕಾಗಿ ನನ್ನ ವಾಹನವನ್ನು ನಿಲ್ಲಿಸಲಿಲ್ಲ. ಈ ಕಾಲದಲ್ಲೂ ಕಾಡುದಾರಿಯಲ್ಲಿ ನಡೆದುಹೋಗುತ್ತಿರುವ ನಿಮ್ಮನ್ನು ಕಂಡು ವಿಷಯ ತಿಳಿದು ನನ್ನ ಕೈಲಾದ ಸಹಾಯವನ್ನು ಮಾಡಲು ನಿರ್ಧರಿಸಿ ನಾನು ನಿಮ್ಮಲ್ಲಿಗೆ ಬಂದೆ. ನಾವು ಮಾನವರು, ಜಾತಿ,ಮತ, ಪಂಥಗಳನ್ನು ಲೆಕ್ಕಿಸದೆ ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ನಮ್ಮ ಧರ್ಮ. ನಿಮ್ಮನ್ನು ಹೀಗೆ ಇಲ್ಲಿ ಬಿಟ್ಟುಹೋಗುವುದು ನನಗೆ ಇಷ್ಟವಿಲ್ಲ. ದಯವಿಟ್ಟು ಬನ್ನಿ, ಎಲ್ಲರೂ ವಾಹನದಲ್ಲೇ ಪ್ರಯಾಣಿಸೋಣ’-ಎಂದು ನಮ್ಮೆಲ್ಲರತ್ತ ನೋಡಿದ.
ಅವನ ಆಗ್ರಹಕ್ಕೆ ಮಣಿದು ನಾವೆಲ್ಲರೂ ವಾಹನದಲ್ಲಿ ಆಸೀನರಾದೆವು. ಅವನು ಚಾಲಕನ ಸ್ಥಾನದಲ್ಲಿ ಕುಳಿತು ವಾಹನವನ್ನು ಚಲಾಯಿಸತೊಡಗಿದ. ನನ್ನ ಭಯ ಭಗವಂತನಿಗೆ ತಿಳಿದುಹೋಯಿತೇ? ಅವನು ನಿಜರೂಪದಲ್ಲಿ ನಮ್ಮ ನೆರವಿಗಾಗಿ ಈ ಧರೆಗೆ ಬರಲಾಗದೆ ಈ ಯುವಕನನ್ನು ಕಳಿಸಿರುವನೇ? ಭಗವಂತನ ಕೃಪೆ ಎಂದರೆ ಇದೇ ಅಲ್ಲವೇ?-ಮುಂತಾದ ಅನುಮಾನಗಳು ಮತ್ತು ಆಲೋಚನೆಗಳು ನನ್ನ ಮನದಲ್ಲಿ ಹರಿದಾಡತೊಡಗಿದವು. ನನಗಂತೂ ನೆಮ್ಮದಿಯೆನಿಸಿದ್ದು ನಿಜ. ಈಗ ನನ್ನ ಮನಸ್ಸು ಭಯಮುಕ್ತವಾಗಿತ್ತು. ನಾನು ಕಿಟಕಿಯ ಪಕ್ಕವೇ ಕುಳಿತಿದ್ದರಿಂದ ಹೊರಗಿನ ದೃಶ್ಯಗಳನ್ನು ನೋಡುವುದರಲ್ಲಿ ಮಗ್ನಳಾಗಿದ್ದೆ.
(ಮುಂದುವರಿಯುವುದು)
–ಲಲಿತ ಎಸ್, ಸಕಲೇಶಪುರ
ಸೊಗಸಾಗಿದೆ ಲಹರಿ. ರಾಮ ಅನ್ನುವ ಪದವೇ ಮನಸಿನಲ್ಲಿ ಭರವಸೆ ತುಂಬುವಂತದ್ದು.ಅಯೋಧ್ಯೆ ಕಡೆಗಿನ ಪ್ರಯಾಣದ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಾವು ಜೊತೆಯಲ್ಲಿ ಅಯೋಧ್ಯೆಗೆ ಪ್ರಯಾಣಿಸಿದಂತಿದೆ,,,,
ರಾಮಲಹರಿ ಸೊಗಸಾಗಿದೆ
ಲಹರಿ… ಪ್ರಾರಂಭವೇ ಸಿಗಸಾಗಿದೆ..ಮುಂದಿನ ಕಂತಿಗೆ ಕಾಯುವಂತಿದೆ ಗೆಳತಿ ಹರಿಸಿ ಓದಿ ಆನಂದಿಸೋಣ..
ರಾಮನೆಡೆಗೆ ಹೊರಟ ನಿಮ್ಮ ಲಹರಿ ನಮ್ಮನ್ನೂ ಜೊತೆ ಜೊತೆಗೆ ಕರೆದೊಯ್ಯುತಿದೆ.
ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಪಯಣ…ನಾವೂ ನಿಮ್ಮೊಂದಿಗೆ ನಡೆಯುವ ಲಹರಿಯು ಮನಕ್ಕೆ ಮುದನೀಡಿತು. ಅಯಾಚಿತವಾಗಿ ಪಡೆದ ನೆರವಿನ ಹಸ್ತಗಳು, ಭಗವಂತನ ದಿವ್ಯಹಸ್ತಗಳೇ ಸರಿ.. ಸೊಗಸಾದ ಲಹರಿಗೆ ವಂದನೆಗಳು.