ಅಹಮಿಳಿದ ಹೊತ್ತು ………
ಮರವಾಗಲಾರೆ !
ಹಸಿರೆಲೆಯಾಗಿ ಜೀವಸತ್ವವ ಹೀರಿ
ಪ್ರಾಣವಾಯುವ ಹಾಗೆಯೇ ತೂರಿ,
ತರಗೆಲೆಯಾಗುದುರಿ ಗೊಬ್ಬರವಾಗುವೆ
ಹೂದೋಟವಾಗಲಾರೆ !
ನೇಸರನುದಯಕೆ ಅರಳುವ ಹೂವೊಂದರ
ದಳಕಂಟಿರುವ ಪರಾಗರೇಣುವ ಅಣುವಾಗಂಟಿ
ಪರಿಮಳ ಪಸರಿಸುತ ಪಾವನವಾಗುವೆ
ಸಾಗರವಾಗಲಾರೆ !
ಮಳೆಹನಿಯಾಗಿ ಕೆಳಗಿಳಿದು ಅಪಾರ
ಪಾರಾವಾರದಲೊಂದಾಗಿ ಜೀಕುವ ಅಲೆಯ
ಜೊತೆ ಜಾಗರವಾಡುತ ದಡವ ಮುತ್ತಿಕ್ಕುವೆ
ಗ್ರಹತಾರೆಯಾಗಲಾರೆ !
ತಣ್ಣಗುರಿವ ಹಣತೆಯ ಬೆಳಕಾಗಿ ಕೈ ಹಿಡಿದವರ
ದಾರಿದೀಪವಾಗಿ ಧನ್ಯವಾಗುತ, ಸ್ವಲ್ಪ ಹೊತ್ತಷ್ಟೇ
ಪ್ರಜ್ವಲಿಸಿ ಗಾಳಿಯಲೊಂದಾಗುವೆ
ಕವಿಯಾಗಲಾರೆ !
ಕೇವಲ ಭವಿಯಾಗುತ ನನ್ನಷ್ಟಕೆ ನಾ
ನನ್ನಿಷ್ಟದ ಗೀತ ಗುನುಗುತ ಲೋಕಜಂಜಡ
ಪಕ್ಕಕಿಟ್ಟು ಪಾಡನು ಹಾಡಾಗಿಸುವ ಪದವಾಗುವೆ
ನಾನು ನೀನಾಗಲಾರೆ !
ಬೆಟ್ಟದ ಬುಡದಲಿ ಕುಂತ ಗೋಪಾಲ ನುಡಿಸುವ
ಬಿದಿರ ಚದುರಿನುಲಿಯಾಗಿ ಪ್ರತಿಧ್ವನಿತಗೊಳುವ
ಕೊಳಲರಂಧ್ರವಾಗಿ ಖಾಲಿತನವನರ್ಥೈಸುವೆ
ನಾನೆಂಬ ಜೀವವಿದು !
ಅಖಂಡ ಬ್ರಹ್ಮಾಂಡ
ದೊಂದು ಧೂಳ ಕಣವೈ
ನೀನೆಂಬ ದೈವವದು !
ಅದನು ಸ್ಪರ್ಶಿಸುತ ಸುವರ್ಣ
ವಾಗಿಪ ಪವಾಡ ಕ್ಷಣವೈ !!
-ಮಂಜುರಾಜ್, ಮೈಸೂರು
ತುಂಬಾ ಅರ್ಥಪೂರ್ಣ ವಾದ ಕವಿತ ಸಾರ್ ಪ್ರತಿ ಯೊಂದಕ್ಕು ಕೊಟ್ಟಿರುವ ಹೋಲಿಕೆ… ಮುಖ್ಯ ವಾದುದಲ್ಲವಾದರೂ ಅದರಲ್ಲಿ ಇರುವಿಕೆ…ಅದರಿಂದ.. ಲೋಕಕ್ಕೆ.. ಕೊಡುಗೆ…ವನೀತ ಭಾವ..ನಮ್ರತೆ..ಅಭ್ಭಾ ಹೇಳುತ್ತಾ ಹೋದರೆ ..ಮತ್ತೊಂದು ಕವಿತೆಯೇ ಆದೀತು..ತುಂಬಾ ಮನಮುಟ್ಟುವಂತೆ ಇದೆ ಮಂಜು ಸಾರ್…
ಸೊಗಸಾಗಿದೆ ಕವನ. ಎಲ್ಲದರಲ್ಲೂ ಇದ್ದು, ಗುರುತಿಸುವಿಕೆ ಬಯಸದಂತ ಮನೋಭಾವ. ಖಂಡಿತವಾಗಿಯೂ ಅದು ಅಹಂ ಇಳಿದ ಹೊತ್ತೇ.
ತುಂಬಾ ಅರ್ಥವತ್ತಾದ ಕವನ. ನಮ್ಮ ಮನದಾಳದೊಳಗೆ ನಾವೇ ಇಳಿದು ವಿಶ್ಲೇಷಿಸಿಕೊಳ್ಳುವಂತಿದೆ.
ಬಹಳ ಅರ್ಥವತ್ತಾದ ಕವನ
ಅನುಭವದಿಂದ ಮತ್ತು ಮನದಾಳದಿಂದ ಬರೆದಿರುವಂತಹ ಕವಿತೆ. ಎಲ್ಲರನ್ನೂ ಅವಲೋಕನದ ಕಡೆಗೆ ಎಳೆಯುವ ಪ್ರಯತ್ನ ಮಾಡುತ್ತದೆ.
ಏನೆಂದು ಬಣ್ಣಿಸಲಿ ನಿನ್ನೀ ಕವನದ ಅಂತಸ್ಸತ್ವವನು.
ಹಣತೆಯ ಉರಿಯುವಿಕೆ ಕಣ್ಣಿಗೆ ತಂಪಾಗಿ ಕಾಣಿಸುತ್ತದೆ ಎಂಬುದನ್ನು ಕೇಳಿ ಅದರ ಸೊಬಗಿನ ಚಿತ್ರ ಕಣ್ಮುಂದೆ ಬಂತು. ಸೊಡರು ತಣ್ಣಗೆ ಉರಿಯುತ್ತದೆ. ಗಾಳಿಯಾಡಿದಾಗ ಆರುತ್ತದೆ. ಆದರೆ ಅದಕ್ಕೆ ಆಜ್ಯವಿದ್ದರೆ ದಹಿಸಿಬಿಡುತ್ತದೆ.
ಬ್ರಂಹಾಂಡದ ಒಂದಣುವಿನ ಧೂಳಿನ ಕಣದಲ್ಲೊಂದಾದ ನಾನು ಪರುಷಮಣಿಯಾದ ನಿನ್ನನ್ನು ಮುಟ್ಟಿದಾಗ ನಿನ್ನೊಳಗೆ ಬಂಗಾರೂಪಿನೊಳಗೊಂದಾಗುವ ಪರಿಯ ಕಲ್ಪನೆ ಅನನ್ಯ. .