ನಾ ಮೆಚ್ಚಿದ ಕೃತಿಯಲ್ಲಿ ಇಷ್ಟವಾದ ಪಾತ್ರ :’ಸುಮನ್’

Share Button

ನಯನ ಬಜಕೂಡ್ಲು

ಕಾದಂಬರಿ :-‘ಸುಮನ್
ಲೇಖಕರು :-ಶ್ರೀಮತಿ ಸುಚೇತಾ ಗೌತಮ್
ಪ್ರಕಟಗೊಂಡದ್ದು :-‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ

“ಸುಮನ್” – ಶ್ರೀಮತಿ ಸುಚೇತಾ ಗೌತಮ್  ಅವರ ಈ ಕಾದಂಬರಿಯನ್ನು ನಾನು ಓದಿದ್ದು ಹೇಮಮಾಲಾ ಬಿ ಮೈಸೂರು ಇವರು ನಡೆಸುತ್ತಿರುವ ಬ್ಲಾಗ್/ ಅಂತರ್ಜಾಲ ಪತ್ರಿಕೆ ಸುರಹೊನ್ನೇಯಲ್ಲಿ.  ಇದು ಪುಸ್ತಕದ ರೂಪದಲ್ಲಿ ಇದೆಯೋ  ಇಲ್ಲ.  ಒಟ್ಟು 19 ಕಂತುಗಳಲ್ಲಿ ಪ್ರಕಟಗೊಂಡ ಸುಂದರ ಕಾದಂಬರಿ. 

ಕಾದಂಬರಿಯ ಹೆಸರೇ ಸೂಚಿಸುವಂತೆ ಸುಮನ್ ಈ ಕಥೆಯ ನಾಯಕಿ.  ಸುಸಂಸ್ಕೃತ ಹೆಣ್ಣುಮಗಳು,  ಅಪ್ಪ ಅಮ್ಮ ಹಾಕಿದ ಗೆರೆಯನ್ನು ದಾಟದೆ  ಅವರ ಮಾತಿನಂತೆಯೇ ನಡೆದುಕೊಳ್ಳುವವಳು.  ತಮ್ಮ ವಿದ್ಯಾಭ್ಯಾಸ,  ಸಂಸ್ಕಾರ ಹೊಂದಿದವಳು.  ಅವಳದ್ದು ಮೂಲ ನಕ್ಷತ್ರವಾದ ಕಾರಣದಿಂದ ಮದುವೆಯಾಗುವುದು ಮುಂದೆ ಹೋಗುತ್ತಿರುತ್ತದೆ.  ಅವಳದ್ದು ಎಂತಹ ಗುಣನಡತೆ ಎಂದರೆ ಸಹೋದ್ಯೋಗಿಗಳು ಕೂಡ ಅವಳಿಗೆ ಒಳಿತಾಗಲಿ ಎಂದು ಹಾರೈಸುತ್ತಿರುತ್ತಾರೆ.  ಸಾಮಾನ್ಯ ಹೆಣ್ಣು ಮಕ್ಕಳಂತೆಯೇ  ನಮ್ಮ ಕಥಾನಾಯಕಿ ಕೂಡ ಒಳ್ಳೆಯ ಗಂಡ,  ಮಕ್ಕಳು  ತುಂಬಿದ  ಸುಂದರವಾದ ಸಂಸಾರದ ಕನಸು ಕಾಣುತ್ತಿರುತ್ತಾಳೆ.  ಸ್ವಲ್ಪ ತಡವಾಗಿಯಾದರೂ ಅವಳ ಮದುವೆಯ ಕನಸು ನನಸಾಗುತ್ತದೆ.  ಅವಳು ವಿವಾಹವಾಗಿ ಗಿರೀಶ್ ಎಂಬುವವನ ಮನೆಯಂಗಳವನ್ನು ಬೆಳಗಲು ತೆರಳುತ್ತಾಳೆ. 

ಐಶಾರಾಮಿ ಬದುಕು.  ಅಂದುಕೊಂಡದ್ದನ್ನೆಲ್ಲ  ಪಡೆಯಬಲ್ಲಂತಹ ಶ್ರೀಮಂತಿಕೆ.  ನಮ್ಮ ಸಹಜ ಸುಂದರಿ ನಾಯಕಿಯ ಮೋಹಪಾಶದಲ್ಲಿ  ಬೀಳುವ ನಾಯಕ.  ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.  ಬದುಕು ತನ್ನ ನಿಜವಾದ ದರ್ಶನ ನೀಡುವುದು ಕಾಲ ಬದಲಾದಂತೆ. 

ಎಲ್ಲಾ ಕೆಲಸಗಳಿಗೂ ಆಳುಕಾಳು.  ಅಡುಗೆ ಕೆಲಸಕ್ಕೂ.  ಬೆಳಗಿನ ತಿಂಡಿಗೆ  ಬರಿಯ ಬ್ರೆಡ್,  ಜಾಮ್, ಆಮ್ಲೆಟ್.  ಅಮ್ಮನ ಕೈಯ ಬಗೆ ಬಗೆಯ ತಿಂಡಿಯ ರುಚಿ ನೋಡಿದ ನಾಯಕಿಗೆ ಒಂದೇ ತೆರನಾದ ಆಹಾರ ಇಷ್ಟವಾಗುವುದಿಲ್ಲ.  ಎಂತಹವರಿಗಾದರೂ ಇಂತಹ ಆಹಾರ ಪದ್ಧತಿ ಬೇಸರ ತರಿಸುವುದು.  ಸಮಯ ಕಳೆಯಲು ಸುಮನ್ ಗಂಡನಿಗೆ ಖುದ್ದಾಗಿ  ಆಹಾರ ತಯಾರಿಸಲು ಮುಂದಾಗುತ್ತಾಳೆ.  ಕೆಲಸದವ ತಡೆದರೂ ಅವಳೇ ಅಡುಗೆ ಮಾಡುತ್ತಾಳೆ.  ಸಂತೋಷ ಪಡುವ ಬದಲು ಗಿರೀಶ್ ಕೋಪಗೊಂಡು ಹೆಂಡತಿಯನ್ನು ಬೈದು  ಅವಳು ಮಾಡಿದ ಅಡುಗೆಯನ್ನು ಊಟ ಮಾಡದೆ, ಒಣಕಲು  ಬ್ರೆಡ್ ಅನ್ನು ತಿಂದು ಕಚೇರಿಗೆ ತೆರಳುತ್ತಾನೆ.  ಹೆಂಡತಿಗೂ ದೇಹದ ಅಂದವನ್ನು ಕಾಪಾಡಿಕೊಳ್ಳುವ ಸಲಹೆ ನೀಡುವ ಈತನದ್ದು ಯಾವ ತರದ ಮನಸ್ಥಿತಿ ಇದು?  ಬಾಂಧವ್ಯ, ಪ್ರೀತಿಗಿಂತ  ದೇಹಕ್ಕೆ,  ಸೌಂದರ್ಯಕ್ಕೆ ಅವನು ಹೆಚ್ಚಿನ ಮಹತ್ವ ನೀಡಿರುವುದು ಇಲ್ಲಿ ಸ್ಪಷ್ಟ. 

ಪ್ರತಿಷ್ಠಿತ,  ಶ್ರೀಮಂತಿಕೆಯಿಂದ ಕೂಡಿದ ಕುಟುಂಬಗಳೇ ಗಿರೀಶನ ಸ್ನೇಹ ಬಳಗದಲ್ಲಿ ಇರುವುದು.  ಹೆಣ್ಣು ಗಂಡೆಂಬ ಭೇದವಿಲ್ಲದೆ ಆ ಹೆಣ್ಣು ಮಕ್ಕಳು ಗಂಡಸರೊಂದಿಗೆ ಬೆರೆಯುತ್ತಿರುತ್ತಾರೆ.  ಇಂತಹ ಒಡನಾಟ ನಮ್ಮ ಸುಸಂಸ್ಕೃತ ನಾಯಕಿಗೆ ಒಗ್ಗಿ  ಬರುವುದಿಲ್ಲ.  ಕುಡಿತ,  ಪಾರ್ಟಿ,  ಡಾನ್ಸ್ ಇವೆಲ್ಲವನ್ನು ಕಂಡು ಗಾಬರಿಗೊಳ್ಳುತ್ತಾಳೆ  ಅವಳು ಹಾಗೂ ಅರ್ಧದಲ್ಲೇ ಇವನ್ನೆಲ್ಲ ತೊರೆದು ಮನೆ ಸೇರಿ ಗಂಡನ ಕೆಂಗಣ್ಣಿಗೆ ಗುರಿಯಾಗುತ್ತಾಳೆ. 

ಅವರು ನೆನಪಾದಾಗ ಗಂಡನೊಡನೆ ತವರಿಗೆ ಹೋಗುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ.  ಆದರೆ ಗಿರೀಶ್ ಅಲ್ಲಿಗೆ ತೆರಳಲು ನಿರಾಕರಿಸುತ್ತಾನೆ.  ಆಗ ಅವಳು  ಒಬ್ಬಳೇ ತವರಿಗೆ ಹೋಗುತ್ತಾಳೆ.  ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ, ಮಂದಿಯ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದರೂ ಅದನ್ನು ತನ್ನ ತವರಿನ ಮುಂದೆ ತೋರ್ಪಡಿಸುವುದಿಲ್ಲ.  ಸುಮನ್ ಕೂಡ ಇದಕ್ಕೆ ಹೊರತಾಗಿಲ್ಲ. 

ಲೇಖಕರು :-ಶ್ರೀಮತಿ ಸುಚೇತಾ ಗೌತಮ್

ಗಿರೀಶ್ ಗೆ  ಸುಮನ್ ಮೇಲೆ  ಪ್ರೀತಿ ಇಲ್ಲ ಅಂತ ಏನಲ್ಲ,  ಆದರೂ  ಘನತೆ,  ಪ್ರತಿಷ್ಠೆ,  ಶ್ರೀಮಂತಿಕೆಯ ಅಹಂನಿಂದ ಬಂಧಿತವಾದ ಆ ಪ್ರೀತಿ ಕೇವಲ ಹೆಂಡತಿಯ  ಮೇಲೆ ಜೋರು,  ಅಧಿಕಾರ ಚಲಾಯಿಸುವುದೇ ತನ್ನ ಹಕ್ಕು,  ಅವಳು ತನ್ನಂತೆ ಎಲ್ಲರೊಡನೆ ಮೈ ಚಳಿ ಬಿಟ್ಟು ಬೆರೆಯಬೇಕು ಅನ್ನುವ ಅಹಂಕಾರದ ಪೊರೆಯಿಂದ ಆವರಿಸಿದೆ ಅವನ ಕಣ್ಣು.  ಮದುವೆ ಎಂದರೆ ಹೊಂದಾಣಿಕೆ,  ಪರಸ್ಪರರನ್ನು ಗೌರವಿಸುವುದು,  ಪರಸ್ಪರ ಪ್ರೀತಿ ಇವೆಲ್ಲ.  ಇದಲ್ಲದೆ ಒಬ್ಬರ ಮೇಲೊಬ್ಬರು ಅಧಿಕಾರ ಚಲಾಯಿಸುವ ಮನೋಭಾವ ಬೆಳೆದಾಗ ಆ ಮದುವೆ ತುಂಬಾ ದೂರ ಸಾಗದು. 

ಸುಮನಳನ್ನು   ಅವಳು ಇದ್ದಂತೆಯೇ  ಇರಲು ಬಿಡದೆ  ತನ್ನ ಅಭಿರುಚಿಗೆ ತಕ್ಕಂತೆ,  ಅವಳ ಮನಸ್ಸಿನಲ್ಲಿ ಏನಿದೆ ಅನ್ನುವುದಕ್ಕೂ ಗೌರವ ಕೊಡದೆ,  ಬದಲಾಯಿಸಲು ಪ್ರಯತ್ನಿಸುವ ಗಿರೀಶನ ನಡವಳಿಕೆ ಸುಮನಳಿಗೆ  ಇಷ್ಟವಾಗುವುದಿಲ್ಲ.  ಯಾವುದನ್ನೇ ಆಗಲಿ ಉಸಿರು ಗಟ್ಟುವಂತೆ ಬಿಗಿಯಾಗಿ ಹಿಡಿಯಲು ಹೋದರೆ,  ಅದು ಆ ಹಿಡಿತದಿಂದ ಹೊರಬರಲು ಪ್ರಯತ್ನಿಸಿಯೇ ತೀರುತ್ತದೆ.  ಅದು ಸಂಬಂಧವಾದರೂ ಸರಿ,  ಸ್ನೇಹ,  ಕಾಳಜಿಯಾದರು ಸರಿ.  ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚಂದ.  ಮದುವೆಯ ಅನುಬಂಧದಲ್ಲಿ ಪರಸ್ಪರರನ್ನು ಗೌರವಿಸುವುದು ಬಹಳ ಮುಖ್ಯ.  ಅದು ಇಲ್ಲದೆ ಹೋದಾಗ  ಆ ಸಂಬಂಧ ತುಂಬಾ ದೂರದವರೆಗೆ ಸಾಗದು. 

ಗೆಳೆಯನೇ ಆದರೂ ಅವನು ಹೊರಗಿನವನು.  ಗಂಡ ಹೆಂಡತಿಯ ನಡುವೆ ಅವನಿಗೆ ಜಾಗ ಇಲ್ಲ.  ಅಂತಹುದರಲ್ಲಿ  ಗೆಳೆಯನ ಮುಂದೆ ಕೈ ಹಿಡಿದ ಪತ್ನಿಯನ್ನು  ಅವಮಾನಿಸುವ  ಗಿರೀಶನದ್ದು ಅವನ ದೃಷ್ಟಿಯಲ್ಲಿ ನಾಗರಿಕವೆನ್ನಿಸುವ  ಅನಾಗರಿಕ ವರ್ತನೆ.  ಇವೆಲ್ಲವನ್ನು ಎಲ್ಲ ಮೆಲ್ಲನೆ ವಿರೋಧಿಸಲು ಕಲಿತಿರುವ ಸುಮನ್ ಬದಲಾವಣೆಯತ್ತ ಹೆಜ್ಜೆ ಇರಿಸ ತೊಡಗುತ್ತಾಳೆ. 

ಸಣ್ಣ ವಯಸ್ಸಿನಲ್ಲಿ ಅನುಭವಿಸಿದ ಅವಮಾನಗಳು,    ತಿಂದ ಏಟುಗಳು ಗಿರೀಶನನ್ನು ಈ ರೀತಿಯಾಗಿ ಬದಲಾಯಿಸಿರುತ್ತವೆ. ಹಣವೊಂದೇ ಎಲ್ಲ, ಅದೊಂದು ಇದ್ದರೆ ಏನು ಬೇಕಾದರೂ ಮಾಡಬಹುದು ಅನ್ನುವ ತೀರ್ಮಾನಕ್ಕೆ ಬಂದಿರುತ್ತಾನೆ ಅವನು. ಇದು ಎಷ್ಟು ಗಟ್ಟಿಯಾದ ಮನೋಭಾವ ಎಂದರೆ ಯಾರಿಂದಲೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲದಷ್ಟು. ಅಪ್ಪ ಅಮ್ಮನ ಸರಳತೆ ಸ್ವಲ್ಪವೂ ಅವನಲ್ಲಿ ಬಂದಿರುವುದಿಲ್ಲ. ಹಳೆಯ ಪ್ರೀತಿಯೊಂದು ಮತ್ತೆ ಅವನ ಬದುಕಲ್ಲಿ ಪ್ರವೇಶಿಸುತ್ತದೆ. ಗಿರೀಶ್ ಮದುವೆಯಾಗಿದ್ದರೂ ತನ್ನ ಹಳೆಯ ಪ್ರೀತಿಯತ್ತ ಸೆಳೆಯಲ್ಪಡುತ್ತಾನೆ. ಪರಿಸ್ಥಿತಿ ಹೀಗಿರುವಾಗ ಬದುಕಿನ ಪಯಣದಲ್ಲಿ ಭವಿಷ್ಯದ ಸಲುವಾಗಿ ಹೊಸ ಹಾಗೂ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ ನಮ್ಮ ನಾಯಕಿ. ಅಳುತ್ತಾ ಕೂರುವುದೇ ಜೀವನವಲ್ಲ. 

ಒಲ್ಲದ  ಗಂಡನ ಜೊತೆ ಬಾಳುವುದನ್ನು ಬಿಟ್ಟು ಹೊಸ ಗಮ್ಯದತ್ತ,  ದಾರಿಯತ್ತ ಹೆಜ್ಜೆ ಹಾಕುವ ನಿರ್ಧಾರ ಮಾಡುತ್ತಾಳೆ  ಸುಮನ್. ಅವನನ್ನು ತೊರೆದು ತವರು ಸೇರಿದರೂ ಮತ್ತೆ ಕಾಲೇಜಿಗೆ ಸೇರಿ ಮಕ್ಕಳಿಗೆ ಪಾಠ ಮಾಡುವ ವೃತ್ತಿಯನ್ನು ಆರಿಸಿಕೊಳ್ಳುತ್ತಾಳೆ. ಈ ದಿಟ್ಟ ನಿರ್ಧಾರ ಸ್ಪೂರ್ತಿದಾಯಕ ಹಾಗೂ ಕಥೆಯಲ್ಲಿ ಬರುವ ಹೊಸ ತಿರುವು. ಪ್ರಾಧ್ಯಾಪಕ ವೃತ್ತಿಯನ್ನು  ಮಾಡುವುದರ ಜೊತೆಗೆ ಓದನ್ನೂ ಮುಂದುವರೆಸುತ್ತಾಳೆ. 

ಬದುಕು ಎಲ್ಲೂ ನಿಲ್ಲುವುದಿಲ್ಲ.  ನೋವಿರಲಿ, ನಲಿವಿರಲಿ ಅದರ ಪಾಡಿಗೆ ಅದು  ಸಾಗುತ್ತಲೇ ಇರುತ್ತದೆ.  ಮನಸು ಮಾತ್ರ ಕನ್ನಡಿಯಂತೆ,  ಒಡೆದು ಚೂರಾದರೆ ಮತ್ತೆ ಮೊದಲಿನ ರೂಪ ಬರುವುದು ಕಷ್ಟ. ಇವೆಲ್ಲವೂ ಬದುಕು ಕಲಿಸುವ ಒಂದೊಂದು ಪಾಠಗಳು. ಇದನ್ನು ಅರಿತು ಗಟ್ಟಿಯಾಗಬೇಕು ನಾವು. 

ಛಿದ್ರಗೊಂಡ ವೈವಾಹಿಕ ಜೀವನಕ್ಕೆ ಹೆದರದೆ  ನೆಮ್ಮದಿಯ ಹುಡುಕಾಟಕ್ಕೆ ಹೊರಡುವ ನಾಯಕಿಯ ಪಾತ್ರ ಇಲ್ಲಿ ಹೆಣ್ಣು ಮಕ್ಕಳಿಗೆ  ಮಾದರಿ. ಮದುವೆಯ ಕನಸು ನುಚ್ಚು ನೂರಾಯಿತು ನಿಜ,  ಆದರೂ  ಬದುಕು ಅಲ್ಲಿಗೆಯೇ  ಮುಗಿಯುವುದಿಲ್ಲ. ಸುಮನ್ ಳ ಬದುಕಲ್ಲಿ ತೆರೆದುಕೊಳ್ಳುವ ಹೊಸ ಅಧ್ಯಾಯ ಒಂದು ಒಳ್ಳೆಯ ತಿರುವು ಕಾದಂಬರಿಯಲ್ಲಿ. ಮದುವೆಯೊಂದೇ ಬದುಕಿನ ಧ್ಯೇಯ ಅಲ್ಲ, ಅದರ ಹೊರತಾಗಿಯೂ ಸುಂದರ ಬದುಕಿದೆ ಅನ್ನುವ ಉತ್ತಮ ಸಂದೇಶವನ್ನು ಹೊತ್ತ ಕಾದಂಬರಿ “ಸುಮನ್”.

ಮದುವೆಯ ಅನುಬಂಧ ಗಟ್ಟಿಯಾಗಿ ಉಳಿಯುವುದು ಗಂಡ ಹೆಂಡತಿ ಇಬ್ಬರೂ ಪರಸ್ಪರರನ್ನು ಗೌರವಿಸಿದಾಗ, ಆದರಿಸಿದಾಗ, ಆರಾಧಿಸಿದಾಗ. ಇದರ ಹೊರತು  ಒಬ್ಬರ ಮೇಲೆ ಒಬ್ಬರು ಅಧಿಕಾರ ಚಲಾಯಿಸುವ,  ನಾನು ಹೇಳಿದಂತೆಯೇ  ಜೊತೆಯವರು ಇರಬೇಕು ಅನ್ನುವ  ಮನೋಭಾವ ಬೆಳೆದಾಗ ಈ ಸಂಬಂಧ ತುಂಬಾ ದೂರದವರೆಗೆ ಸಾಗದು,  ಶಾಶ್ವತವಾಗಿ ಉಳಿಯದು.  ಪೆಟ್ಟು ತಿಂದರೂ ಕಂಗೆಡದೆ  ಫೀನಿಕ್ಸ್  ಹಕ್ಕಿಯಂತೆ ಮತ್ತೆ ಮೇಲಿದ್ದು ಹೊಸ ಪಥವನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ನಾಯಕಿ ಸುಮನ್ ಇಲ್ಲಿ  ನನಗೆ ಬಹಳ ಇಷ್ಟವಾದ ಪಾತ್ರ. 

 -ನಯನ ಬಜಕೂಡ್ಲು

7 Responses

  1. ಸುಚೇತಾ says:

    ನಯನಾ ಅವರೇ, ಸುಮನ್ ಬಗ್ಗೆ ನೀವು ತೋರಿಸುತ್ತಿರುವ ಅಭಿಯಾನಕ್ಕೆ ಮೂಕಳಾಗಿದ್ದೇನೆ. ಬಹಳಷ್ಟು ಧನ್ಯವಾದಗಳು ಮೇಡಂ. ನಿಮ್ಮ ಅಭಿಮಾನ ಹೀಗೇ ಇರಲಿ.

  2. ಸುರಹೊನ್ನೆ..ಪತ್ರಿಕೆ ಯಲ್ಲಿ ಧಾರಾವಾಹಿ ಯಾಗಿ ಬಂದ..ಸುಮನ್ ಎಂಬ ಹೆಸರಿನ ಕಾದಂಬರಿಯ ಲ್ಲಿ..ನನಗಿಷ್ಟವಾದ ಪಾತ್ರ…ಕಾದಂಬರಿಯ ನಾಯಕಿ ಸುಮನ…ಇದರ ಬಗ್ಗೆ ವಿಶ್ಲೇಷಣೆ… ಮಾಡಿ ಬರದಿರುವ ರೀತಿ ತುಂಬಾ ಅಪ್ಯಾಯ ಮಾನವಾಗಿದೆ..ಮತ್ತೊಮ್ಮೆ ಕಾದಂಬರಿ ಯನ್ನು ಮೆಲಕು ಹಾಕುವಂತಿದೆ….ವಂದನೆಗಳು ನಯನ ಮೇಡಂ..

  3. Padma Anand says:

    ಸುಮನ್ ಕಾದಂಬರಿಯ ಸುಮನಳ ಪಾತ್ರ ಪರಿಚಯ ಆಪ್ಯಾಯಮಾನವಾಗಿ ಮೂಡಿ ಬಂದಿದೆ. ನನಗೂ ಇಷ್ಟವಾದ ಪಾತ್ರ ಇದಾಗಿತ್ತು. ಏಕೆ ಈ ಪಾತ್ರ ಇಷ್ಟವಾಗುತ್ತೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಸಮರ್ಥಿಸಿದ್ದಾರೆ ಶ್ರೀಮತಿ.ನಯನಾ ಅವರು. ಮೇಡಂ ಅಭಿನಂದನೆಗಳು.

  4. ಶಂಕರಿ ಶರ್ಮ says:

    ಸುಚೇತಾ ಮೇಡಂ ಅವರ “ಸುಮನ್” ಕಾದಂಬರಿಯ ನಾಯಕಿ ಸುಮನ್, ಸ್ತ್ರೀ ಸಮಾಜದ ನಾಯಕಿಯಾಗಿರುವುದರಲ್ಲಿ ಸಂಶಯವಿಲ್ಲ. ಪೂರ್ತಿ ಕಾದಂಬರಿಯಲ್ಲಿ ಅವಳ ಪ್ರತಿ ನಡೆಯೂ ಒಂದೊಂದು ಮಹತ್ವದ ಸಂದೇಶವನ್ನು ಹೊತ್ತಿದ್ದ ಬಗೆಯನ್ನು ಅತ್ಯಂತ ಸೊಗಸಾಗಿ ಸಾದರಪಡಿಸಿದ್ದಾರೆ ನಯನಾ ಮೇಡಂ ಅವರು…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: