ಬಸವ ಜ್ಯೋತಿಯನ್ನು ಅರಸುತ್ತಾ..ಪುಟ 2

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಬಸವನ ಹುಟ್ಟೂರಾದ ಬಾಗೇವಾಡಿಯಿಂದ, ಅವರ ಕರ್ಮಭೂಮಿಯಾದ ಕಲ್ಯಾಣಕ್ಕೆ ಸಾಗಿತ್ತು ನಮ್ಮ ಪಯಣ. ಅನ್ವರ್ಥನಾಮವಾದ ಕಲ್ಯಾಣವು ಮಾನವ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಬಾಗೇವಾಡಿಯಲ್ಲಿ ಬಿತ್ತಿದ ಬೀಜವು ಕಲ್ಯಾಣದಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಇಡೀ ಜಗತ್ತಿಗೆ ಫಲ ಪುಷ್ಪಗಳನ್ನು ನೀಡಿತ್ತು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ / ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ / ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ / ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ / ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ ಎಂಬ ಸಪ್ತಶೀಲಗಳನ್ನು ಬಸವಣ್ಣನವರು ಜನರ ಮುಂದಿಡುತ್ತಾರೆ. ಜನಸಾಮಾನ್ಯರಿಗೂ ಸುಲಭವಾಗಿ ಮನನವಾಗುವಂತೆ ನೈತಿಕತೆಗೂ ಹಾಗೂ ಧಾರ್ಮಿಕತೆಗೂ ನಂಟು ಬೆಳೆಸಿದ ಪರಿ ಸೋಜಿಗವನ್ನುಂಟುಮಾಡುತ್ತದೆ. ಇಂತಹ ಮಾನವೀಯ ಮೌಲ್ಯಗಳನ್ನು ವಚನಗಳ ಮೂಲಕ ಜನರಿಗೆ ಕಟ್ಟಿಕೊಟ್ಟ ಸ್ಥಳವೇ ಬಸವಕಲ್ಯಾಣ. ಬೀದರ್ ಜಿಲ್ಲೆಯಲ್ಲಿರುವ ಕಲ್ಯಾಣವು ಹಲವು ರಾಜವಂಶಸ್ಥರ ಆಳ್ವಿಕೆಗೆ ಒಳಗಾಗಿತ್ತು. ಚಾಲುಕ್ಯರು, ಕಲ್ಯಾಣಿಯ ಕಲಚೂರಿ ವಂಶದವರು, ದೇವಗಿರಿಯ ಯಾದವರು, ಕಾಕತೀಯರು, ದೆಹಲಿಯ ಸುಲ್ತಾನರು, ಬಹಮನಿ ಸುಲ್ತಾನರು, ಬೀದರ್ ಸುಲ್ತಾನರು, ಬಿಜಾಪುರದ ಸುಲ್ತಾನರು, ಮೊಗಲರು ಹಾಗೂ ಹೈದರಾಬಾದಿನ ನಿಜಾಮರು ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಬೀದರ್‌ನಿಂದ 80 ಕಿ.ಮೀ ದೂರದಲ್ಲಿರುವ ಕಲ್ಯಾಣ ನಗರವು ಬಸವಣ್ಣನವರ ಕರ್ಮಭೂಮಿಯಾಗಿದ್ದುದರಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಬಸವ ಕಲ್ಯಾಣವೆಂದೇ ಖ್ಯಾತಿ ಪಡೆಯಿತು.

ಕೂಡಲ ಸಂಗಮದಲ್ಲಿ ಹನ್ನೆರೆಡು ವರ್ಷಗಳ ಕಾಲ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಬಸವಣ್ಣನವರು ತನ್ನ ಸೋದರಮಾವ ಸಿದ್ಧರಸರು ಮಂತ್ರಿಗಳಾಗಿದ್ದ (ಚಾಲುಕ್ಯರ ಅಧೀನದಲ್ಲಿದ್ದ) ಮಂಗಳವೇಡೆಗೆ ತೆರಳುವರು. ಸಿದ್ಧರಸರು ಗಣಿತದಲ್ಲಿ ಜಾಣನಾಗಿದ್ದ ಬಸವಣ್ಣನನ್ನು, ಬಿಜ್ಜಳನ ಆಸ್ಥಾನದಲ್ಲಿ, ಹಣಕಾಸಿನ ಇಲಾಖೆಯಲ್ಲಿ ಕರಣಿಕನನ್ನಾಗಿ ಸೇರಿಸುವರು. ಬಸವಣ್ಣನವರು ಹಣಕಾಸಿನ ಇಲಾಖೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ತಡೆದು, ಲೆಕ್ಕ ಪತ್ರಗಳನ್ನು ಸರಿಪಡಿಸಿ ತಮ್ಮ ಜಾಣತನಕ್ಕೂ, ಪ್ರಾಮಾಣಿಕತೆಗೂ ಹೆಸರಾಗುವರು. ಆಗ ಕಲ್ಯಾಣದಲ್ಲಿ ಬಿಜ್ಜಳನ ಸೋದರಮಾವನಾದ ಮೂರನೆಯ ಸೋಮೇಶ್ವರನು ಸಾಮ್ರಾಟನಾಗಿದ್ದನು. ಮಂಗಳವೇಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸವಣ್ಣನವರು ಕಲ್ಯಾಣದಲ್ಲಿ ದಂಡನಾಯಕನಾಗಿದ್ದ ತಮ್ಮ ಸೋದರಮಾವನಾದ ಬಲದೇವನು ಮರಣಹೊಂದಿದ ಪ್ರಯುಕ್ತ ಕಲ್ಯಾಣಕ್ಕೆ ಹೋಗುವರು. ಬಸವಣ್ಣನವರು,’‘ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ ಮೂವತ್ತಾರು ವರುಷ ‘‘ ಎಂದು ತಮ್ಮ ವಚನವೊಂದರಲ್ಲಿ ಪ್ರಸ್ತಾಪಿಸುತ್ತಾರೆ. ತಮ್ಮ ಇಪ್ಪತ್ತೆರಡೆನೆಯ ವಯಸ್ಸಿನಲ್ಲಿ ಕಲ್ಯಾಣಕ್ಕೆ ಆಗಮಿಸಿದ ಬಸವಣ್ಣನವರು ಮಾನವೀಯತೆಯನ್ನು ಬಿಂಬಿಸುವ ಒಂದು ಹೊಸ ಧರ್ಮಕ್ಕೆ ಭದ್ರವಾದ ಅಡಿಪಾಯ ಹಾಕುವರು, ಜಾತಿ, ಮತ, ಪಂಥಗಳೆಂಬ ಬೇಧಭಾವವಿಲ್ಲದ ಸಮಾಜವನ್ನು ಕಟ್ಟಲು ಹಗಲಿರುಳೂ ಶ್ರಮಿಸುವರು. ಸಮಾಜದಲ್ಲಿರುವ ಎಲ್ಲ ವರ್ಗದವರ ದುಡಿಮೆಯೂ ಅಷ್ಟೇ ಮುಖ್ಯ, ಯಾವುದೂ ಮೇಲಲ್ಲ, ಯಾವುದೂ ಕೇಳಲ್ಲ ಎಂದು ಸಾರುವರು. ಹುಟ್ಟಿನಿಂದಾಗಲೀ, ಮಾಡುವ ಉದ್ಯೋಗದಿಂದಾಗಲೀ, ಅಂತಸ್ತಿನಿಂದಾಗಲೀ ಯಾರೂ ಉತ್ತಮರಾಗುವುದಿಲ್ಲ. ಸನ್ನಡತೆ, ಪರಿಶುದ್ಧವಾದ ಜೀವನ, ಕಾಯಕ ಹಾಗೂ ದಾಸೋಹದ ತತ್ವಗಳನ್ನು ಪಾಲಿಸುವವನು ಉತ್ತಮನು ಎಂದು ಪ್ರತಿಪಾದಿಸುವರು. ಬಡತನ ಸಿರಿತನ, ಮೇಲುಜಾತಿ ಕೀಳುಜಾತಿ, ಹೆಣ್ಣು ಗಂಡೆಂಬ ಬೇಧಭಾವಗಳಿಂದ ನಲುಗಿ ಹೋಗಿದ್ದ ಸಮಾಜವನ್ನು ಉದ್ಧರಿಸಲು ಸಂಕಲ್ಪ ಮಾಡುತ್ತಾರೆ, ಆ ನಿಟ್ಟಿನಲ್ಲಿ ಸೂಕ್ತವಾದ ಯೋಜನೆಗಳನ್ನು ರೂಪಿಸುತ್ತಾರೆ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರಲು ಅನುಭವ ಮಂಟಪವನ್ನು ಕಟ್ಟಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಕ್ರಿಯಾಶೀಲರಾಗುತ್ತಾರೆ.

ಬಸವಣ್ಣನವರ ಕರ್ಮಭೂಮಿಯಾದ ಬಸವ ಕಲ್ಯಾಣ ನಗರವನ್ನು ಒಂದು ಸುತ್ತು ಹಾಕೋಣ ಬನ್ನಿ. ಮೊದಲಿಗೆ ನಾವು ಭೇಟಿ ನೀಡಿದ್ದು ಪರುಷಕಟ್ಟೆಗೆ. ಬಸವಣ್ಣನವರು ತಮ್ಮ ಕಛೇರಿಯ ಕೆಲಸ ಮುಗಿಸಿದ ನಂತರ ತಮ್ಮ ಮನೆಯ ಮುಂದೆ ಒಂದು ಕಟ್ಟೆಯನ್ನು ಕಟ್ಟಿ, ಅಲ್ಲಿ ಕುಳಿತು ಜನರ ಕಷ್ಟಗಳನ್ನು ಆಲಿಸುತ್ತಾ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರಂತೆ. ಹೊಲೆಯರನ್ನು ದೇಗುಲಗಳಿಂದ ಮಾರು ದೂರ ಇಟ್ಟ ಪುರೋಹಿತಶಾಹಿ ವರ್ಗದವರಿಗೆ ತಕ್ಕ ಉತ್ತರವನ್ನು ನೀಡುತ್ತಾರೆ, ಇಷ್ಟಲಿಂಗವನ್ನು ಹೊಲೆಯರ ಕೊರಳಿಗೆ ಕಟ್ಟಿ, ದೇಹವೇ ದೇಗುಲವೆಂದೂ, ಮಾನವರೆಲ್ಲರೂ ಸಮಾನರು, ಎಲ್ಲರಲ್ಲಿಯೂ ಪರಬ್ರಹ್ಮಸ್ವರೂಪನಾದ ಆತ್ಮವು ಅಡಗಿದೆ ಎಂದು ಸಾರುತ್ತಾರೆ.. ಬಸವ ತತ್ವಗಳು ಸಂತ್ರಸ್ಥರ ಪಾಲಿಗೆ ಅಮೃತ ಸಿಂಚನದಂತಿದ್ದವು. ಪರುಷಕಟ್ಟೆಯಲ್ಲಿ ಒಂದು ಶಿವಲಿಂಗ ಹಾಗೂ ನಂದಿಯನ್ನು ಸ್ಥಾಪಿಸಿ, ಪೂಜೆ ಮಾಡಲಾಗುತ್ತಿದೆ. ಬಸವಣ್ಣನವರ ವಚನವೊಂದರ ಸಾಲುಗಳು ಪರುಷಕಟ್ಟೆಯ ಬಳಿ ನಿಂತ ನಮ್ಮ ಕಿವಿಯಲ್ಲಿ ಮೊಳಗುತ್ತಿದ್ದವು – ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ / ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ / ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ..

ಬಸವಣ್ಣನವರ ವಚನಗಳು ಜನರ ಬಾಯಿಂದ ಬಾಯಿಗೆ ಹರಡಿ ದೇಶದ ನಾನಾ ಮೂಲೆಗಳಿಂದ ಶರಣರು ತಂಡ ತಂಡವಾಗಿ ಕಲ್ಯಾಣಕ್ಕೆ ಬಂದರು. ತ್ರಿಪುರಾಂತ ಕೆರೆಯು ಇಲ್ಲಿನ ಜೀವನದಿಯಾಗಿದ್ದು, ಕಲ್ಯಾಣದ ಜನರ ಬದುಕಿಗೆ ಆಸರೆಯಾಗಿ ನಿಂತಿದೆ. ಸುತ್ತಲೂ ಹಸಿರು ಹೊದ್ದ ಬೆಟ್ಟ ಗುಡ್ಡಗಳು ಇದ್ದು ಈ ಸ್ಥಳಕ್ಕೆ ವಿಶೇಷವಾದ ಮೆರಗು ನೀಡಿವೆ. ತ್ರಿಪುರಾಂತ ಕೆರೆಯ ಪಕ್ಕದಲ್ಲಿಯೇ ಸಾಗುವ ‘ಬಂದವರ ಓಣಿ‘ ಇಲ್ಲಿರುವ ಅಪರೂಪವಾದ ಪ್ರೇಕ್ಷಣೀಯ ಸ್ಥಳ – ಬಸವಕಲ್ಯಾಣಕ್ಕೆ ಬರುವ ಶರಣರು ಮೊದಲು ಇಲ್ಲಿಯೇ ತಂಗುತ್ತಿದ್ದರಿಂದ ಬಂದ ಅನ್ವರ್ಥನಾಮ ‘ಬಂದವರ ಓಣಿ. ಇಲ್ಲಿ ಹಲವಾರು ಶರಣರು ತಪಗೈದ ಗವಿಗಳಿವೆ ಅಕ್ಕ ಮಹಾದೇವಿ ಗವಿ, ಅಂಬಿಗರ ಚೌಡಯ್ಯ ಗವಿ, ಅಕ್ಕ ನಾಗಮ್ಮನ ಗವಿ, ಹರಳಯ್ಯನವರ ಗವಿ ಇನ್ನೂ ಮುಂತಾದ ಶರಣರ ಗುಹೆಗಳಿವೆ. ಮಡಿವಾಳ ಮಾಚಿದೇವರ ಗವಿಯ ಮುಂದೆ ವಿಸ್ತಾರವಾದ ಮಡಿವಾಳ ಹೊಂಡವು ಇದೆ ಇಲ್ಲಿ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುತ್ತಾ, ಬಸವಣ್ಣನವರ ಜೊತೆ ಇದ್ದು ಶರಣರ ಸಂಘಟನೆಗೆ ನೆರವಾಗುತ್ತಿದ್ದರು. ಕಲ್ಯಾಣದ ಕ್ರಾಂತಿಯಾದಾಗ ವಚನ ಸಾಹಿತ್ಯವನ್ನು ಕಾಪಾಡಲು ಬಹಳಷ್ಟು ಶ್ರಮಿಸಿದರು. ಇವರ ಗವಿಯಿಂದ ಹೊಮ್ಮುತ್ತಿರುವ ವಚನವೊಂದನ್ನು ಕೇಳೋಣ ಬನ್ನಿ ವಾಯು ಗುಣವ ಸರ್ಪ ಬಲ್ಲದು; ಮಧುರ ಗುಣವ ಇರುವೆ ಬಲ್ಲದು / ಗೋತ್ರದ ಗುಣ ಕಾಗೆ ಬಲ್ಲದು; ವೇಳೆ ಗುಣ ಕಾಗೆ ಬಲ್ಲದು/ ಇದು ಕಾರಣ ಮನುಷ್ಯ ಜನ್ಮದಲಿ, ಬಂದು ಶಿವಜ್ಞಾನವರಿಯದಿದ್ದರೆ / ಆ ಕಾಗೆ ಕೋಳಿಗಳಿಗಿಂತ ಕರಕಷ್ಟಕಾಣಾ ಕಲಿದೇವರ ದೇವಾ.

ನಮ್ಮ ಮುಂದಿನ ಪಯಣ ವಿಶ್ವದ ಪ್ರಥಮ ಸಂಸತ್ತೆಂದೇ ಖ್ಯಾತಿ ಪಡೆದಿರುವ ಅನುಭವ ಮಂಟಪದತ್ತ. ಈ ಶರಣರ ಸಂಘಟನೆಯನ್ನು ಕಲ್ಯಾಣದಲ್ಲಿ ಸ್ಥಾಪಿಸಿದ ಬಸವಣ್ಣನವರು ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ವ್ಯಾವಹಾರಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ನೆಲೆಗಳಲ್ಲಿ ಆಳವಾಗಿ ಬೇರೂರಿದ್ದ ಕಳೆಯನ್ನು ಕಿತ್ತು ಹಾಕಲು ನಿರಂತರ ಪ್ರಯತ್ನ ನಡೆಸಿದರು. ಹೂವಿನ ಪರಿಮಳವನ್ನು ಗಾಳಿಯು ಎಲ್ಲೆಡೆ ಹೊತ್ತೊಯ್ಯುವಂತೆ, ಹಣತೆಯ ಬೆಳಕು ಎಲ್ಲೆಡೆ ಪಸರಿಸುವಂತೆ ಬಸನ ತತ್ವಗಳು ಭಾರತದಾಂದ್ಯತ ಹರಡಿದವು. ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ / ಸುಳಿದು ಬೀಸುವ ಗಾಳಿ ನಿಮ್ಮ ದಾನ / ನಿಮ್ಮ ದಾನನುಂಡು ಅನ್ಯರ ಹೊಗಳುವ / ಕುನ್ನಿಗಳನೇನೆಂಬೆ ರಾಮನಾಥ ಎಂದು ತಮ್ಮ ವಚನವೊಂದನ್ನು ಅನುಭವ ಮಂಟಪದಲ್ಲಿ ವಾಚನ ಮಾಡುತ್ತಿರುವವರು ಯಾರು ಗೊತ್ತೆ? ಇವರೇ ಜೇಡರ ದಾಸಿಮ್ಮಯ್ಯನವರು. ತಾನು ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು / ತಾನು ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತ್ತು / ತಾನು ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನ್ನೇರಿತ್ತು / ತಾನು ಮಾಡಿದ ಹೆಣ್ಣು ನಾರಾಯಣನ ಎದೆಯನ್ನೇರಿತ್ತು / ಇದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ / ಹೆಣ್ಣು ಸಾಕ್ಷಾತ್ ಕಪಿಲ ಸಿದ್ದ ಮಲ್ಲಿಕಾರ್ಜುನ ಎಂದು ವಾಚನ ಮಾಡುತ್ತಿರುವವರು ಕಾಯಕಯೋಗಿ ಸಿದ್ದರಾಮರು.

ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾದ ಶರಣರು ದೇಶ ವಿದೇಶಗಳಿಂದ ಬಸವಕಲ್ಯಾಣಕ್ಕೆ ಆಗಮಿಸಿ ಅನುಭವ ಮಂಟಪದ ಆಧ್ಯಾತ್ಮಿಕ ಸಂವಾದಗಳಲ್ಲಿ ಪಾಲ್ಗೊಂಡರು. ಅಲ್ಲಮ ಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಹನ್ನೆರಡನೇ ಶತಮಾನದಲ್ಲಿ ಸುಮಾರು ಒಂದು ಲಕ್ಷದ ತೊಂಭತ್ತಾರು ಸಾವಿರ ಶರಣರು ಅನುಭವ ಮಂಟಪದಲ್ಲಿ ಅಧ್ಯಯನ ಮಾಡಿದ್ದಾರೆಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ಲಭಿಸಿದೆ. ಏಳು ನೂರಾ ಎಪ್ಪತ್ತು ಅಮರಗಣಂಗಳು ಇಲ್ಲಿ ನೆಲೆಯಾಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರಂತೆ. ಶರಣರು ತಮ್ಮ ತಮ್ಮ ಕಾಯಕವನ್ನು ಮುಗಿಸಿ, ತಮ್ಮ ವೈಚಾರಿಕ ಹಾಗು ಆಧ್ಯಾತ್ಮಿಕ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದೆಡೆ ಸೇರುತ್ತಿದ್ದರು. ಜಾತಿ ಮತ ಪಂಥ ಲಿಂಗಗಳ ಬೇಧವಿಲ್ಲದೆ ಎಲ್ಲರೂ ಸೇರಿ ಚರ್ಚೆ ನಡೆಸುವ ಸಂಘಟನೆಗೆ ಅನುಭವ ಮಂಟಪ ಎಂದು ಕರೆಯಲಾಗುತ್ತಿತ್ತು. ಅನುಭವ ಮಂಟಪವು ಅಲ್ಲಮರ ನೇತೃತ್ವದಲ್ಲಿ ಅನುಭಾವ ಮಂಟಪವಾಗಿ ರೂಪುಗೊಳ್ಳತೊಡಗಿತ್ತು.

ಅನುಭವ ಮಂಟಪ

ಅನುಭವ ಮಂಟಪದತ್ತ ಹೆಜ್ಜೆ ಹಾಕಿದವರಿಗೆ ನಿರಾಸೆ ಕಾದಿತ್ತು, ಅನುಭವ ಮಂಟಪ ಎಂಬ ಹೆಸರು ಹೊತ್ತ ಫಲಕ, ಲಿಂಗಾಕಾರದ ಗೋಪುರ, ಒಂದು ವಿಶಾಲವಾದ ಸಭಾಂಗಣ, ಅಲ್ಲಿದ್ದ ವೇದಿಕೆಯ ಮೇಲೊಂದು ಅಲ್ಲಮಪ್ರಭುಗಳ ಮೂರ್ತಿ ಶೂನ್ಯ ಸಿಂಹಾಸನಾ ಪೀಠದಲ್ಲಿ ರಾರಾಜಿಸುತ್ತಿದೆ. ಸುತ್ತಲೂ ಶರಣರ ಭಾವಚಿತ್ರಗಳಿದ್ದು, ಆಯ್ದ ಶರಣರ ವಚನಗಳನ್ನು ಬರೆಸಲಾಗಿದೆ. ಭಾಲ್ಕಿ ಚೆನ್ನಬಸವ ಪಟ್ಟದ್ದೇವರ ಪ್ರಯತ್ನದಿಂದ ಈ ಅನುಭವ ಮಂಟಪದ ಕಟ್ಟಡವು ತಲೆ ಎತ್ತಿ ನಿಂತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಈ ಸಭಾಂಗಣವನ್ನು ಅನುಭವ ಮಂಟಪವೆಂದು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರಲಿಲ್ಲ. ಇಲ್ಲಿ ಏಳುನೂರಾ‌ ಎಪ್ಪತ್ತು ಶರಣರು ಹೇಗೆ ತಾನೆ ಸಂವಾದಗಳಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂಬ ಗೊಂದಲ ಮೂಡಿತ್ತು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸ್ಥಳೀಯರೊಬ್ಬರು ನಮ್ಮನ್ನು ಬಸವೇಶ್ವರ ದೇಗುಲದ ಹಿಂಬದಿಯಲ್ಲಿದ್ದ ಪೀರ್ ಪಾಶಾ ಬಂಗಲೆಗೆ ಕರೆದೊಯ್ದರು. ಸುಮಾರು ನಾಲ್ಕೈದು ಎಕರೆ ವಿಸ್ತೀರ್ಣದಲ್ಲಿದ್ದ ಈ ಬಂಗಲೆಯ ಮುಖ್ಯ ದ್ವಾರವು ಚಾಲುಕ್ಯರ ಶೈಲಿಯಲ್ಲಿದ್ದು, ಒಳಗೆ ಪ್ರವೇಶಿಸುತ್ತಲೇ ಒಂದು ದೊಡ್ಡ ಕಲ್ಲಿನ ಮಂಟಪವಿದ್ದು ಮಧ್ಯೆ ನಂದಿಯ ವಿಗ್ರಹವಿದೆ. ಈ ಪವಿತ್ರವಾದ ಸ್ಥಳದಲ್ಲಿ ಹೆಜ್ಜೆಯಿಡುತ್ತಿದ್ದಂತೆಯೇ ನಮಗೆ ಅರಿವಿಲ್ಲದಂತೆಯೇ ಮನದಾಳದಲ್ಲಿ ವಿಶೇಷವಾದ ಅನುಭೂತಿಯೊಂದು ಮೂಡತೊಡಗಿತ್ತ್ತು. ಹನ್ನೆರಡನೇ ಶತಮಾನದಲ್ಲಿ ಇಲ್ಲಿಯೇ ಅನುಭವ ಮಂಟಪದ ಸಭೆಗಳು ನಡೆಯುತ್ತಿದ್ದವು ಎಂಬ ಮಾಹಿತಿ ದೊರೆತಿತ್ತು. ಇಲ್ಲಿಗೆ ಆಗಮಿಸುವ ಶರಣರನ್ನು ಸತ್ಕರಿಸಲು ಒಂದು ದೊಡ್ಡ ತಂಡವೇ ಇತ್ತು – ಬಂದವರ ಸೌಖ್ಯ ವಿಚಾರಿಸಲು ಅಕ್ಕ ನಾಗಮ್ಮ, ನೀಲಾಂಬಿಕೆ, ಗಂಗಾಬಿಕೆ ಹಾಗೂ ಚೆನ್ನ ಬಸವಣ್ಣ ಮುಂದಾದರೆ, ದಾಸೋಹ ಕೇಂದ್ರ ನಡೆಸಲು ಬೇಕಾದ ದವಸಧಾನ್ಯ ಹೊತ್ತು ತರುವವರು, ನೀರು ತರುವವರು, ಕಟ್ಟಿಗೆ ಒಡೆದು ತರುವವರು, ಅಡಿಗೆ ಮಾಡುವವರು, ಊಟ ಬಡಿಸುವವರು, ಶುಚಿ ಮಾಡುವವರು ಹೀಗೆ ಸಮರೋಪಾದಿಯಲ್ಲಿ ಹಲವರು ಶ್ರದ್ಧಾಭಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈ ಸ್ಥಳದಲ್ಲಿ ಅಲ್ಲಮರ ಅಧ್ಯಕ್ಷತೆಯಲ್ಲಿ ಅನುಭವದ ಆಧಾರದ ಮೇಲೆಯೇ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಇಲ್ಲಿ ಬಸವರಾಜನು ಅಣ್ಣ ಬಸವಣ್ಣನಾದರೆ, ಮಹಾದೇವಿಯು ಅಕ್ಕನಾಗಿ ದುಃಖಿತರನ್ನು ಸಂತೈಸುವ ಹೊಣೆ ಹೊತ್ತಿದ್ದಳು. ಇತಿಹಾಸದ ಗರ್ಭದಲ್ಲಿ ಹೂತು ಹೋಗಿರುವ ಅನುಭವ ಮಂಟಪವನ್ನು ನಿರ್ಮಿಸಲು, ಈಗ ಕರ್ನಾಟಕ ಸರ್ಕಾರ ಲಿಂಗಾಕಾರದ ಬೃಹತ್ ಅನುಭವ ಮಂಟಪವನ್ನು ನಿರ್ಮಿಸಲು ಮುಂದಾಗಿದೆ.

(ಮುಂದುವರೆಯುವುದು)
ಈ ಬರಹದ ಹಿಂದಿನ ಪುಟ ಇಲ್ಲಿದೆ : https://www.surahonne.com/?p=39678

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

5 Responses

  1. Padma Anand says:

    ಅತ್ಯಂತ ಮಾಹಿತಿಪೂರ್ಣ ಲೇಖನ. ಸೊಗಸಾದ ನಿರೂಪಣೆ.

  2. ನಯನ ಬಜಕೂಡ್ಲು says:

    Very nice

  3. Padmini Hegde says:

    ಬಸವ ಜ್ಯೋತಿಯನ್ನು ಭಾವಿಸಿದ ರೀತಿ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಸಣ್ಣ ತರಗತಿಯಲ್ಲಿದ್ದ ಬಸವಣ್ಣನವರ ಕುರಿತ ಪಾಠವೊಂದರ ನೆನಪನ್ನು ಮರುಕಳಿಸುವಂತೆ ಮಾಡಿದ ಅವರ ಬಗೆಗಿನ ವಿಸ್ತೃತ ಲೇಖನವು ಸಂಗ್ರಹಯೋಗ್ಯವಾಗಿದೆ. ಬಸವಣ್ಣನವರ ಕರ್ಮಭೂಮಿಯಲ್ಲಿ ಓಡಾಡಿದ ನಿಮ್ಮ ಅನುಭವಪೂರ್ಣ ಬರಹ ಖುಶಿಕೊಟ್ಟಿತು, ಗಾಯತ್ರಿ ಮೇಡಂ.

  5. ಸಹೃದಯ ಓದುಗರಿಗೆ ನನ್ನ ಹೃದಯಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: