‘ಕುರು’ವಿಗೆ ಮನೆಔಷಧಿ
ಕಾಸರಗೋಡಿನ ಕರಾವಳಿಯ ಗ್ರಾಮೀಣ ಪರಿಸರದಲ್ಲಿ ವಾಸಿಸುತ್ತಿರುವ ನಾನು ಈಗ ನಿವೃತ್ತ ಅಧ್ಯಾಪಕ. ನಮ್ಮ ಬಾಲ್ಯದಲ್ಲಿ ಮನೆಯ ಹತ್ತಿರದಲ್ಲಿ ಕ್ಲಿನಿಕ್ ಗಳಿದ್ದಿರಲಿಲ್ಲ. ಹಳ್ಳಿಯ ಜನರು ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸುತ್ತಲೇ ಇರಲಿಲ್ಲ. ಮನೆಯಲ್ಲಿಯೇ ಯಾವುದೋ ಸೂಕ್ತ ಸಸ್ಯೋತ್ಪನ್ನದ ತಂಬುಳಿ, ಕಷಾಯ ಮಾಡಿ ಕುಡಿಯುವುದು ಅಥವಾ ಯಾವುದೋ ಗಿಡಮೂಲಿಕೆಯ ಸಾರವನ್ನು ಲೇಪಿಸುವುದು ಹೀಗೆ ಮನೆಔಷಧಿ ಮಾಡಿಕೊಳ್ಳುತ್ತಿದ್ದರು. ತೀರಾ ಅನಿವಾರ್ಯ ಆದರೆ 5-6 ಮೈಲಿ ದೂರದ ಆಸ್ಪತ್ರೆಗೆ ಹೋಗುತ್ತಿದ್ದರು. ಅಲ್ಲಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಔಷಧಿ ಕೊಡುತ್ತಿದ್ದ ಒಬ್ಬರೇ ‘ಕುಟುಂಬ ವೈದ್ಯ’ (Family Physician) ಇರುತ್ತಿದ್ದರು. ಮಕ್ಕಳಿಗೂ, ಯುವಕ-ಯುವತಿಯರಿಗೂ, ಬಸುರಿ-ಬಾಣಂತಿಯರಿಗೂ, ವಯೋವೃದ್ಧರಿಗೂ….ಎಲ್ಲರಿಗೂ ಬರುವ ಸಮಸ್ತ ಕಾಯಿಲೆಗಳಿಗೂ ಅವರೇ ಔಷಧಿ ಕೊಡುತ್ತಿದ್ದರು .ಅವರ ಮಾತು ಅರ್ಧ ಕಾಯಿಲೆ ವಾಸಿ ಮಾಡಿದರೆ, ಅವರು ಕೊಡುತ್ತಿದ್ದ ಕೆಂಪು ಬಣ್ಣದ ಸಿರಪ್ ಅಥವಾ ಮಾತ್ರೆ ದಿವ್ಯೌಷಧಿಯಾಗಿ ಕೆಲಸ ಮಾಡುತ್ತಿತ್ತು. ಈಗಿನಂತೆ ಮಕ್ಕಳ ತಜ್ಞ, ಡೆಂಟಿಸ್ಟ್, ಆರ್ಥೋಪಿಡಿಶನ್ , ಚರ್ಮ ಸ್ಪೆಷಲಿಸ್ಟ್, ನೇತ್ರ ತಜ್ಞ…. ಮೊದಲಾದ ಡಾಕ್ಟರ್ ಗಳ ವರ್ಗೀಕರಣವನ್ನು ಕೇಳಿಯೂ ಗೊತ್ತಿರಲಿಲ್ಲ.
ನಾನು ಐದು ವರ್ಷದವನಾಗಿದ್ದಾಗ ಒಮ್ಮೆ ನನ್ನ ಮೈಯಲ್ಲಿ ‘ಕುರು’ ಕಾಣಿಸಿತು. ಗಾತ್ರದಲ್ಲಿ ಚಿಕ್ಕದಾದರೂ ‘ಕುರು’ ಅಸಹನೀಯ ನೋವನ್ನು ಕೊಡುತ್ತದೆಯಷ್ಟೆ. ನೋವಿನಿಂದ ನಿದ್ರೆ ಬಾರದೆ ರಾತ್ರಿ ಬೊಬ್ಬೆ ಹಾಕಿ ಅಳಲಾರಂಭಿಸಿದೆ. ಆಗ ನನ್ನ ತಂದೆಯವರು ಅಂಗಳದಿಂದ ಹಸಿ ಮಣ್ಣನ್ನು ತಂದು ನನ್ನ ಶರೀರದಲ್ಲಿದ್ದ ಕುರುವಿನ ಮೇಲೆ ಲೇಪಿಸಿದರು. ನೋವು ಮತ್ತು ಉರಿ ಕಡಿಮೆಯಾಯಿತು. ನನ್ನ ತಂದೆ ಮರುದಿನ ನನ್ನ ತಾಯಿಯ ಬಳಿ ‘ಹುಳಿಸೊಪ್ಪು/ಪುಳಿಂಚಪ್ಪು’ ಎಂಬ ಗಿಡದ ಬೇರನ್ನು ಅಕ್ಕಿ ತೊಳೆದ ಅಕ್ಕಚ್ಚಿನಲ್ಲಿ ತೇದು ‘ಕುರು’ವಿಗೆ ಹಚ್ಚಲು ಹೇಳಿದರು. ನನ್ನ ತಾಯಿಯವರು ಪುಳಿಂಚಪ್ಪಿನ ಬೇರನ್ನು ಅಕ್ಕಚ್ಚಿನಲ್ಲಿ ತೇದು ನನ್ನ ಮೈಯಲ್ಲಿದ್ದ ‘ಕುರು’ವಿಗೆ ಲೇಪಿಸಿದರು. ಮತ್ತೆರಡು ದಿನಗಳಲ್ಲಿ ಬಾತುಕೊಂಡಿದ್ದ ‘ಕುರು’ವಿನ ಕಲ್ಮಶಯುಕ್ತ ರಕ್ತ ಸೋರಿ ಹೋಗಿ ನೋವು, ಬಾವು ಮಾಯವಾಯಿತು.
ಅಲ್ಲಿಗೆ ನನ್ನ ಸಮಸ್ಯೆ ಪರಿಹಾರವಾಯಿತು. ನಾವು ಒಟ್ಟು ಐದು ಮಂದಿ ಮಕ್ಕಳಿದ್ದೆವು. ಮನೆಯಲ್ಲಿ ನನ್ನ ಅಜ್ಜಿ ಇದ್ದರು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇನ್ನು ಯಾವುದೇ ಮೊಮ್ಮಗುವಿಗೆ ಕುರು ಆಗದಂತೆ ಔಷಧಿ ತಯಾರಿಸಲು ಸಿದ್ಧತೆ ಮಾಡಿಕೊಂಡರು. ನಮ್ಮ ಮನೆಯ ಸಮೀಪದಲ್ಲಿ ದೇಸೀ ಔಷಧಿ ಗೊತ್ತಿದ್ದ ಅಧ್ಯಾಪಕರೊಬ್ಬರಿದ್ದರು. ಅವರ ಮನೆಗೆ ಹೋಗಿ ‘ಕಿರುಹತ್ತಿ ಸೊಪ್ಪು’ ಮತ್ತು ನಿಂಬೆಯ ವರ್ಗಕ್ಕೆ ಸೇರಿದ ‘ದುಡ್ಲುಹುಳಿ’ಯನ್ನು ತಂದರು. ಈ ಹುಳಿರಸದೊಂದಿಗೆ ಕಿರುಹತ್ತಿ ಸೊಪ್ಪನ್ನು ಚೆನ್ನಾಗಿ ಅರೆದು ಮೊಮ್ಮಕ್ಕಳಿಗೆಲ್ಲಾ ಕುಡಿಸಿ ‘ಇನ್ನು ನಿಮ್ಮ ಜನ್ಮದಲ್ಲಿ ನಿಮಗೆ ಕುರು ಬರಲಾರದು’ ಎಂದರು. ನನಗೆ ನೆನಪಿರುವ ಪ್ರಕಾರ ಅನಂತರ ನಮಗಾರಿಗೂ ಮೈಯಲ್ಲಿ ‘ಕುರು’ ಆಗಿಲ್ಲ. ಈ ಮನೆ ಔಷಧಿಯು ರಕ್ತದಿಂದ ಕಲ್ಮಶಗಳನ್ನು ಹೊರಹಾಕಿ ರಕ್ತಶುದ್ಧಿ ಮಾಡುತ್ತದೆ.
ಆಗಿನ ದಿನಗಳಲ್ಲಿ ಮನೆಯಂಗಳದಲ್ಲಿ, ತೋಟದಲ್ಲಿ ಹಲವಾರು ಮೂಲಿಕಾಸಸ್ಯಗಳು ತನ್ನಿಂತಾನೇ ಬೆಳೆಯುತ್ತಿದ್ದುವು. ಈಗಿನ ಕಾಂಕ್ರೀಟ್ ಕಾಡಿನಲ್ಲಿ ಇಂತಹ ಮೂಲಿಕಾಸಸ್ಯಗಳು ಬೆಳೆಯುವುದಿಲ್ಲ, ಅಕಸ್ಮಾತ್ ಕಾಣಸಿಕ್ಕಿದರೂ ಆ ಸಸ್ಯಗಳ ಪರಿಚಯ ಇರುವವರು ಬಲು ಕಡಿಮೆ. ಇನ್ನು ಅರೆಯುವುದು, ತೇಯುವುದು, ಕಾಯಿಸುವುದು, ಸೋಸುವುದು,ಲೇಪಿಸುವುದು….ಇತ್ಯಾದಿ ಸಮಯ ಬೇಡುವ ಪ್ರಾಕೃತಿಕ ಔಷಧಿಗಳನ್ನು ಮಾಡುವ ತಿಳಿವಳಿಕೆಯೂ, ತಾಳ್ಮೆಯೂ ಜನರಿಗಿಲ್ಲ.
-ಎಂ.ಕೆ.ಶಾಮ ಭಟ್, ಕಳತ್ತೂರು
ತುಂಬ ಸರಳ ಸುಂದರ,ಆಪ್ತ ಭಾವದ ಲೇಖನ. ಚೆನ್ನಾಗಿದೆ.
ಲೇಖನ ಬಹಳ ಚೆನ್ನಾಗಿದೆ. ಉಪಯುಕ್ತ ಮಾಹಿತಿ.
ಒಳ್ಳೆಯ ಮಾಹಿತಿ
ಉತ್ತಮ ಮಾಹಿತಿ ನೀಡುವ ಲೇಖನ..ಬಾಲ್ಯದ ನೆನಪಾಯಿತು
ಉಪಯುಕ್ತ ಮನೆ ಮದ್ದು…ಉತ್ತಮ ಮಾಹಿತಿ ಸಾರ್
ಲೇಖನ ಚೆನ್ನಾಗಿದೆ ನನಗೆ ಗೊತ್ತಿರಲಿಲ್ಲ. ಉತ್ತಮ ಮಾಹಿತಿ ಮತ್ತೂಒಂದು ಔಷಧಿ ಹಚ್ಚುವರು ಅಣ್ಣಾ, ಉಪ್ಪಳಿಕ ಮರದಲ್ಲಿ ಮಯಣಬರುತ್ತೆ ಅಲ್ವಾ ಅದನ್ನೂ ಹಚ್ಚುವರು …
ಮಾಹಿತಿಪೂರ್ಣವಾದ ಉತ್ತಮ ಲೇಖನ
ಹಿಂದೆ ಸಾಧಾರಣವಾಗಿ ಪ್ರಾಕೃತಿಕವಾಗಿ ಸಿಗುವ ಸಸ್ಯಗಳಿಂದಲೇ ಸಣ್ಣ ಪುಟ್ಟ ಅನಾರೋಗ್ಯಗಳಿಗೆ ಮನೆ ಔಷಧಿ ಅಥವಾ ಅಜ್ಜಿ ಮದ್ದು ನಡೆಯುತ್ತಿತ್ತು. ಮಾಹಿತಿಪೂರ್ಣವಾದ ಉಪಯುಕ್ತ ಲೇಖನವು ಆ ದಿನಗಳನ್ನು ನೆನಪಿಸಿತು. ಧನ್ಯವಾದಗಳು ಅಣ್ಣ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಇಂತಹ ಬಹಳಷ್ಟು ಮೂಲಿಕೆ ಔಷಧಿಗಳು ಎಲ್ಲರಿಗೂ ತಿಳಿದಿರುತ್ತದೆ. ಅನುಭವ ಹಂಚಿಕೊಂಡಲ್ಲಿ ಸ್ವಾಗತ.