ಬೆಳಕು-ಬಳ್ಳಿ

ಮೈತ್ರಿ ಕಾಲ

Share Button


ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾ
ಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾ
ಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲ
ನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ

ಈಗ ಅವರೆಲ್ಲಿರುವರೋ ಹೇಗಿರುವರೋ ತಿಳಿಯದು
ತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದು
ನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲ
ಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ

ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆ
ನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ ಬುಗ್ಗೆ
ನೆನಪಿನ ನಗರಿಯ ಸಂಚಾರ ಹೊರಟಾಗಲೆಲ್ಲ
ಪ್ರೀತಿಯ ಮಿತ್ರರದೇ ನೆನಹು ಎದುರಾಗುವುದಲ್ಲ

ಎಲ್ಲರ ಜೀವನದಿ ಆಗಿದೆ ಬದಲಾವಣೆ
ಎಲ್ಲರಿಗೂ ಅವರವರದೇ ಜವಾಬ್ದಾರಿ ಹೊಣೆ
ಕೆಲವರಿಗೆ ನೌಕರಿಯಿಂದ ಪುರುಸೊತ್ತು ಇಲ್ಲ
ಹಲವರಿಗೆ ಗೆಳೆಯರ ಅವಶ್ಯಕತೆಯೇ ಇಲ್ಲ

ಮಿತ್ರರ ನಡುವೆಯಿಂದು ಆವರಿಸಿದೆ ಮೌನದ ತೆರೆ
ಕಳಚಿಹೋಗಿದೆ ಈಗ ಆ ಆತ್ಮೀಯತೆಯ ಪೊರೆ
ಕಳೆದ ಆ ಕ್ಷಣಗಳ ನೆನೆದಾಗಲೆಲ್ಲಾ
ಹಳೆಯ ಮಿತ್ರರೆಲ್ಲರ ನೆನಪಾಗುವುದಲ್ಲ.

ನಿಧಾನವಾಗಿ ವಯಸ್ಸು ಮಾಗುತ್ತಾ ಬಂದಿದೆ
ಜೀವನ ನೆನಪಿನ ಪುಸ್ತಕ ಬರೆಯುತಿದೆ
ಒಮ್ಮೊಮ್ಮೆ ಕೆಲವರ ನೆನಪು ತುಂಬಾ ಕಾಡಿದರೆ
ಹಲವೊಮ್ಮೆ ಆ ನೆನಪುಗಳೇ ಈ ಜೀವಕಾಸರೆˌ

ಸಾಗರದ ಸಂಪತ್ತು ತೀರಕೆಂದೂ ತೇಲಿ ಬಾರದು
ಮತ್ತೆ ಹಳೆಯ ಮಿತ್ರರ ಸಂಗ ಮತ್ತೆಂದೂ ಸಿಗದು
ಸಿಕ್ಕ ಸ್ನೇಹ ಸವಿ ಕ್ಷಣಗಳ ನಿಮ್ಮದಾಗಿಸಿ ಜತನದಿ
ಮರಳಿಬಾರದು ಮುಂದೆ ಈ ಮೈತ್ರಿಕಾಲ ಜೀವನದಿ.


ಸುಜಾತಾ ರವೀಶ್
(ಮೂಲ: ಹಿಂದಿ, ಹರಿವಂಶರಾಯ್ ಬಚನ್ ಅವರ ಕವಿತೆಯ ಅನುವಾದ)

6 Comments on “ಮೈತ್ರಿ ಕಾಲ

  1. ಗೆಳೆತನದ ಮಹತ್ವವನ್ನು ಸಾಲುಗಳ ತುಂಬಾ ತುಂಬಿದ ಅನುವಾದಿತ ಕವನವು ಬಹಳ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *