ಸೂಳೆ ಕೆರೆ ( ಥೀಮ್ : ದಂತಕತಾ ಲೋಕ)
ರಾಜ ಮಹಾರಾಜರ ಕಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಕೆರೆ ಭಾವಿಗಳನ್ನು ಕಟ್ಟಿಸುತ್ತಿದ್ದುದು ಸಾಮಾನ್ಯ. ಆದರಿಲ್ಲಿ ಸೋಜಿಗದ ಸಂಗತಿಯೆಂದರೆ ಈ ಕೆರೆಯನ್ನು ಕಟ್ಟಿಸಿದ್ದು ರಾಜಕುಮಾರಿ ಶಾಂತಲೆಯಾದರೂ, ಹೆಸರು ‘ಸೂಳೆ ಕೆರೆ’. ಇದು ಅಂತಿಂಥ ಕೆರೆಯಲ್ಲ, ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿರುವ ಸಾಗರದಂತಹ ಬೃಹತ್ ಕೆರೆ. ಈ ಹೆಸರಿನ ರಹಸ್ಯವಾದರೂ ಏನು? ತಿಳಿಯೋಣ ಬನ್ನಿ.
ಹನ್ನೊಂದನೇ ಶತಮಾನದಲ್ಲಿ ಸ್ವರ್ಗವತಿ ಎಂಬ ಪಟ್ಟಣವಿತ್ತಂತೆ. ಈ ನಗರವನ್ನು ಆಳುತ್ತಿದ್ದ ದೊರೆಯ ಹೆಸರು ವಿಕ್ರಮರಾಯ. ಅರಸನಿಗೆ ಬಹಳಷ್ಟು ಕಾಲ ಮಕ್ಕಳಾಗಲೇ ಇಲ್ಲವಂತೆ. ಕೊನೆಗೆ ರಾಣಿಯು ಪಾರ್ವತೀದೇವಿಗೆ ಹರಕೆ ಹೊತ್ತು ಒಂದು ಹೆಣ್ಣುಮಗುವನ್ನು ಹಡೆದಳಂತೆ. ಆ ಮಗುವಿಗೆ ಶಾಂತಲಾ ದೇವಿ ಎಂದು ಹೆಸರಿಟ್ಟರಂತೆ. ಬಹಳ ಮುದ್ದಾದ ಮಗು, ಎಲ್ಲರನ್ನೂ ತನ್ನೆಡೆಗೆ ಆಯಸ್ಕಾಂತದಂತೆ ಸೆಳೆಯುತ್ತಿತ್ತು. ನೋಡ ನೋಡುತ್ತಲೇ ಶಾಂತಲಾ ತಾರುಣ್ಯಾವಸ್ಥೆಗೆ ತಲುಪಿದ್ದಳು. ಅವಳಂತಹ ಸುಂದರಿಯನ್ನು ವರಿಸಲು ರಾಜಕುವರರ ದಂಡೇ ಸಿದ್ಧವಿತ್ತು. ಆದರೆ ಶಾಂತಲಾ ಸಾಮಾನ್ಯ ಕುಟುಂಬಕ್ಕೆ ಸೇರಿದವನಾದ ಸಿದ್ದೇಶ್ವರ ಎಂಬುವನನ್ನು ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಾಗ, ಅರಸನಿಗೆ ಕೋಪ ನೆತ್ತಿಗೇರಿತ್ತು. ಮುದ್ದಿನ ಮಗಳು ಶತ್ರುವಿನಂತೆ ಕಂಡಳು. ರಾಜನು, ನೀನು ನಡತೆಗೆಟ್ಟವಳು, ಮನೆಯ ಮರ್ಯಾದೆ ಗಾಳಿಗೆ ತೂರಿದೆ ಎಂದೆಲ್ಲಾ ಬಯ್ದು ಅರಮನೆಯಿಂದ ಹೊರಗಟ್ಟಿದ. ಮನನೊಂದ ಶಾಂತಲಾ ಸಿದ್ದೇಶ್ವರನನ್ನು ವರಿಸಿ ಅವನೊಡನೆ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಳು. ಕಷ್ಟಪಟ್ಟು ಕೆಲಸ ಮಾಡುತ್ತಾ ಸಂಸಾರ ಸಾಗಿಸುತ್ತಿದ್ದಳು. ಆಗಾಗ್ಗೆ ನೆರೆಹೊರೆಯವರು ಆಡುವ ಚುಚ್ಚುಮಾತುಗಳು ಅವಳ ಕಿವಿಗೆ ಬೀಳುತ್ತಿತ್ತು, ಇವಳು ತನ್ನ ಹೆತ್ತವರಿಗೇ ಮೋಸಮಾಡಿದವಳು, ಇವಳೇನಾದರೂ ತಮ್ಮ ರಾಣಿ ಯಾಗಿದ್ದರೆ, ಪ್ರಜೆಗಳನ್ನು ಹೇಗೆ ತಾನೆ ಕಾಪಾಡಲು ಸಾಧ್ಯವಿತ್ತು?
ಇಂತಹ ಮಾತುಗಳನ್ನು ಕೇಳಿದ ಶಾಂತಲಾ ತಾನು ಏನಾದರೂ ಸಾಧನೆ ಮಾಡಿ ತೋರಿಸಲೇಬೇಕೆಂಬ ಧೃಢ ನಿರ್ಧಾರ ಮಾಡುತ್ತಾಳೆ. ತನ್ನ ಪತಿಯೊಡನೆ ಮಾತನಾಡಿ ಆ ಪಟ್ಟಣದಲ್ಲಿ ಜನರಿಗಾಗಿ ಒಂದು ಕೆರೆಯನ್ನು ನಿರ್ಮಾಣ ಮಾಡಬೇಕೆಂದು ಅಂದುಕೊಂಡು, ಸೂಕ್ತ ಸ್ಥಳಕ್ಕಾಗಿ ಹುಡುಕಾಡುತ್ತಾಳೆ. ಅವಳಲ್ಲಿ ಹಣವಿಲ್ಲ, ಕೇವಲ ಛಲವಿತ್ತು. ಆ ಊರ ಹೊರವಲಯದಲ್ಲಿದ್ದ ಸೂಳೆಗೇರಿಗೆ ಹೋಗಿ ಅವರನ್ನು ಬೇಡುತ್ತಾಳೆ, ”ಅಮ್ಮಾ, ನೀವು ದೊಡ್ಡ ಮನಸ್ಸು ಮಾಡಿ ನಿಮ್ಮ ಕೇರಿಯನ್ನು ಕೆರೆ ಕಟ್ಟಲು ಬಿಟ್ಟು ಕೊಡಿ”. ಅವರು ರಾಜಕುವರಿಯ ಸ್ಥಿತಿಯನ್ನು ಕಂಡು ಮರುಗಿ, ತಮ್ಮ ಕೇರಿಯನ್ನು ಬಿಟ್ಟು ಕೊಟ್ಟು ಬೇರೆ ಕಡೆ ತಮ್ಮ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಅಂದಿನಿಂದ ರಾಜಕುವರಿಯು ಹಗಲಿರುಳೂ ದುಡಿದು ಕೆರೆ ಕಟ್ಟಿಸುತ್ತಾಳೆ. ಉಳಿದ ಪ್ರಜೆಗಳೂ ಕೈಜೋಡಿಸುತ್ತಾರೆ. ಕೆರೆ ಕಟ್ಟಲು ಐದಾರು ವರ್ಷಗಳೇ ಬೇಕಾಗುತ್ತದೆ. ಆ ಕೆರೆಗೆ ಸ್ಥಳವನ್ನು ಬಿಟ್ಟುಕೊಟ್ಟ ಸೂಳೆಯರ ನೆನಪಿಗಾಗಿ ಸೂಳೆಕೆರೆ ಎಂದು ನಾಮಕರಣ ಮಾಡಿ, ಕೆರೆಯ ದಡದಲ್ಲಿ ಕುಳಿತು ಸಾಗರದಂತೆ ಕಾಣುವ ಕೆರೆಯನ್ನು ಕಣ್ತುಂಬಿಕೊಳ್ಳುವಳು. ದೈಹಿಕವಾಗಿ, ಮಾನಸಿಕವಾಗಿ ಸೋತುಹೋಗಿದ್ದ ಶಾಂತಲಾ, ಅಂದೇ ಕೆರೆಗೆ ಹಾರಿ ಗಂಗೆಯ ಮಡಿಲಿನಲ್ಲಿ ಲೀನವಾಗುವಳು. ಈ ಸುದ್ದಿ ತಿಳಿದ ಅವಳ ಪತಿ ಸಿದ್ದೇಶ್ವರ, ಶೋಕತಪ್ತನಾಗಿ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಅನ್ನ ನೀರು ಬಿಟ್ಟು ಪ್ರಾಣ ತ್ಯಾಗ ಮಾಡುವನು. ಅವನ ನೆನಪಿನಲ್ಲಿ ಗುಡ್ಡದ ಮೇಲೆ ಸಿದ್ದೇಶ್ವರ ದೇಗುಲವನ್ನು ನಿರ್ಮಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿರುವ ಸೂಳೆಕೆರೆ ಒಂದು ಹೆಣ್ಣಿನ ಪ್ರೀತಿ, ತ್ಯಾಗ, ಬಲಿದಾನದ ಕಥೆಯಾಗಿದೆ. ಸರ್ಕಾರದವರು ಈ ಕೆರೆಗೆ ‘ಶಾಂತಿ ಸಾಗರ’ ಎಂದು ಮರುನಾಮಕರಣ ಮಾಡಿದ್ದರೂ ಜನರು ‘ಸೂಳೆಕೆರೆ’ ಎಂದೇ ಕರೆಯುತ್ತಾರೆ. ಈ ಕೆರೆಯನ್ನು ಹರಿದ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ಹನ್ನೊಂದು ಹಳ್ಳಿಗಳಿಗೆ ಜೀವನಾಧಾರವಾಗಿದೆ. ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ರಾಜಕುವರಿ ಶಾಂತಲೆಗೆ ಮಡಿಲು ತುಂಬುವ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಇಂದು ಸೂಳೆಕೆರೆ ಪ್ರಮುಖ ಪ್ರವಾಸಿ ತಾಣವಾಗಿದೆ.
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಉತ್ತಮ ಮಾಹಿತಿ
ಚೆನ್ನಾದ ದಂತಕಥೆ.. ಗಾಯತ್ರಿ ಮೇಡಂ
ದಂತಕಥೆ ತುಂಬ ಚೆನ್ನಾಗಿದೆ ಮೇಡಂ
ಅವಮರ್ಯಾದೆಗೆ ಯೋಗ್ಯ ಪ್ರತಿಕ್ರಿಯೆ ತೋರಿದ ಕಥೆ! ಚೆನ್ನಾಗಿದೆ
ಚೆನ್ನಾಗಿದೆ
ಅವಮಾನಗೊಂಡರೂ ಛಲವೊಂದಿದ್ದರೆ ಅದನ್ನು ಮೆಟ್ಟಿ ನಿಂತು ಮಹೋನ್ನತವಾದುದನ್ನೇ ಸಾಧಿಸಬಹುದೆಂದು ತೋರಿಸಿಕೊಟ್ಟ ದಂತಕಥೆ ಬಹಳ ಚೆನ್ನಾಗಿದೆ ಮೇಡಂ
ಸೊಗಸಾದ ದಂತಕಥೆ.