ಗೋಪುರಗಳ ನಾಡಿನಲ್ಲಿ…ಹೆಜ್ಜೆ 8:ಮಧುರೈ
ಮಧುರೈ ಮೀನಾಕ್ಷಿಗೆ ‘ಪೀಟರ್ ಪಾದುಕಂ’
ಈವತ್ತು ಗೂಗಲ್ ನಲ್ಲಿ ಏನೋ ಹುಡುಕುತ್ತಿದ್ದಾಗ ,ಆಕಸ್ಮಿಕವಾಗಿ ‘ಮಧುರೈ ಮೀನಾಕ್ಷಿಗೆ ಬ್ರಿಟಿಷ್ ಅಧಿಕಾರಿ ಕೊಟ್ಟ ಪಾದುಕೆಗಳು’ ಎಂಬ ಅರ್ಥ ಬರುವ ಇಂಗ್ಲಿಷ್ ಬರಹ ಕಾಣಿಸಿತು. ನಿನ್ನೆ ತಾನೇ ಮಧುರೈ ಮೀನಾಕ್ಷಿ ಅಮ್ಮನ ಬಗ್ಗೆ ಬರೆದ ಕಾರಣ, ಈ ಪವಾಡಸದೃಶ ನೈಜ ಘಟನೆಯನ್ನು ಭಾಷಾಂತರಿಸಿ ನಮ್ಮ ಪ್ರವಾಸಕಥನದಲ್ಲಿ ಸೇರಿಸೋಣ ಅನಿಸಿತು.ಇನ್ನೂ ಸ್ವಲ್ಪ ಹುಡುಕಿದಾಗ, ಇದೇ ಘಟನೆಯ ಬಗ್ಗೆ ವಿಭಿನ್ನ ಶೈಲಿಯ ಇನ್ನೆರಡು ನಿರೂಪಣೆ ಕಾಣಿಸಿತು. ಒಟ್ಟಿನಲ್ಲಿ ಇದು ನಿಜ ಘಟನೆಯೇ ಇರಬಹುದು. ನಾನು ಅರ್ಥೈಸಿಕೊಂಡ ವಿಷಯ ಹೀಗಿದೆ:
ಇನ್ನೂರು ವರ್ಷಗಳ ಹಿಂದೆ, ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿತ್ತು. 1812-1828 ರ ಅವಧಿಯಲ್ಲಿ, ಈಗಿನ ಮಧುರೈ ನಲ್ಲಿ ‘ರೌಸ್ ಪೀಟರ್’ ಎಂಬವರು ಕಲೆಕ್ಟರ್ ಆಗಿದ್ದರು. ಮಧುರೈ ಮೀನಾಕ್ಷಿ ದೇವಾಲಯದ ರಸ್ತೆಯ ಒಂದು ತುದಿಯಲ್ಲಿ ಅವರ ಕಚೇರಿ ಹಾಗೂ ಇನ್ನೊಂದು ತುದಿಯಲ್ಲಿ ಅವರ ಬಂಗಲೆಯಿತ್ತು. ಪೀಟರ್ ಅವರು ಬ್ರಿಟಿಷ್ ಅಧಿಕಾರಿಯಾಗಿದ್ದರೂ ,ತನ್ನ ಸಮಕಾಲೀನ ಇತರ ಅಧಿಕಾರಿಗಳಂತೆ ದರ್ಪವುಳ್ಳವರಾಗಿರಲಿಲ್ಲ. ಸ್ಥಳೀಯರನ್ನೂ, ಸಂಸ್ಕೃತಿಯನ್ನೂ ಗೌರವಿಸುತ್ತಿದ್ದರು. ದೇವಾಲಯವೂ ಕಲೆಕ್ಟರ್ ಅವರ ಆಡಳಿತಕ್ಕೆ ಒಳಪಟ್ಟಿದ್ದುದರಿಂದ ಅವರು ಪ್ರತಿದಿನ ತನ್ನ ಬಂಗಲೆಯಿಂದ, ಕಚೇರಿಗೆ ಕುದುರೆಯಲ್ಲಿ ಹೋಗುವಾಗ, ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು ಹಾಗೂ ರಸ್ತೆಯಲ್ಲಿಯೇ ತನ್ನ ಹ್ಯಾಟ್ ಮತ್ತು ಶೂಸ್ ತೆಗೆದು , ದೇವಿಗೆ ಸೆಲ್ಯೂಟ್ ಹೊಡೆದು ಮೀನಾಕ್ಷಿಗೆ ಬ್ರಿಟಿಷ್ ಶೈಲಿಯಲ್ಲಿ ನಮಿಸುತ್ತಿದ್ದರು. ಇವರ ಆಡಳಿತವನ್ನು ಮೆಚ್ಚಿದ ಸ್ಥಳೀಯರು , ಇವರನ್ನು ‘ಪೀಟರ್ ಪಾಂಡ್ಯನ್’ ಎಂದು ಕರೆಯುತ್ತಿದ್ದರಂತೆ.
ಹೀಗಿರಲು, 1818 ರ ಬೇಸಗೆಯ ಒಂದು ದಿನ, ಪೀಟರ್ ಅವರು ಎಂದಿನಂತೆ ಕಚೇರಿಯ ಕೆಲಸ ಮುಗಿಸಿ ತನ್ನ ಬಂಗಲೆಗೆ ಬಂದು ರಾತ್ರಿ ವಿಶ್ರಾಂತಿಯಲ್ಲಿದ್ದ ಸಮಯ. ಅಕಾಲಿಕವಾಗಿ ಗುಡುಗು-ಮಿಂಚುಗಳೊಂದಿಗೆ ಧಾರಾಕಾರ ಮಳೆ ಸುರಿಯಿತು. ಮಲಗಿದ್ದ ಪೀಟರ್ ಅವರಿಗೆ ಮನೆಯ ಹೊರಗಿನಿಂದ ಕಾಲ್ಗೆಜ್ಜೆಯ ದನಿ ಕೇಳಿಸಿತು. ಈ ಸಮಯದಲ್ಲಿ ಯಾರಿರಬಹುದು ಎಂದು ನೋಡಿದಾಗ, ರೇಷ್ಮೆ ಲಂಗ ದಾವಣಿ ತೊಟ್ಟ, ಹೂಮುಡಿದ ಚಂದುಳ್ಳಿ ಚೆಲುವೆ 8 ವರ್ಷದ ಪುಟ್ಟ ಬಾಲಕಿಯೊಬ್ಬಳು, ಪೀಟರ್ ನ ಕೈಹಿಡಿದು ‘ ಪೀಟರ್ ಬಾ ಬಾ’ ಎನ್ನುತ್ತ ಮನೆಯಿಂದ ದೂರ ಕರೆದೊಯ್ದಳು. ಈ ಸಮಯದಲ್ಲಿ, ಇಂತಹಾ ಮಳೆ ಸುರಿಯುವಾಗ, ಪುಟ್ಟ ಬಾಲಕಿ ಎಲ್ಲಿಂದ, ಯಾಕೆ, ಹೇಗೆ ಬಂದಳು ಎಂದು ಆತ ವಿಸ್ಮಯಗೊಂಡರೂ, ಮಂತ್ರಮುಗ್ಧನಾಗಿ ಆಕೆಯನ್ನು ಹಿಂಬಾಲಿಸಿದರು. ಸುಮಾರು 300 ಅಡಿ ಹೋದ ಪೀಟರ್ ತನ್ನ ಮನೆಯತ್ತ ತಿರುಗಿ ನೋಡಿದಾಗ, ಮನೆಗೆ ಹಠಾತ್ ಸಿಡಿಲು ಬಡಿದು ಮನೆ ಕುಸಿದಿತ್ತು ಹಾಗೂ ಪಕ್ಕದಲ್ಲಿದ್ದ ವೈಗೈ ನದಿಯಿಂದ ಉಕ್ಕಿ ಬಂದ ನೀರಿನಲ್ಲಿ ಮನೆ ಜಲಸಮಾಧಿಯಾಗಿತ್ತು! ಭಯಭೀತನಾದ ಪೀಟರ್ ವಾಸ್ತವ ಪ್ರಜ್ಞೆಗೆ ಮರಳಿದಾಗ, ಜೊತೆಯಲ್ಲಿದ್ದ ಪುಟ್ಟ ಬಾಲಕಿ ನಾಪತ್ತೆಯಾಗಿದ್ದಳು. ಆಕೆ ದೇವಾಲಯದ ಕಡೆಗೆ ಓಡಿದ್ದಳು ಹಾಗೂ ಅವಳು ಬರಿಗಾಲಿನಲ್ಲಿದ್ದಳು ಎಂಬುದು ಮಾತ್ರ ಪೀಟರ್ ನ ಗಮನಕ್ಕೆ ಬಂದಿತ್ತು.
ಹಾಗಾದರೆ ಆ ಬಾಲಕಿ ಯಾರು? ಎಂದು ದೇವಾಲಯದ ಅರ್ಚಕರನ್ನೂ ಕೇಳಿದರು. ಅವರಿಗೂ ಗೊತ್ತಿರಲಿಲ್ಲ. ದೈವಕೃಪೆ ಎಂದರಂತೆ. ತನ್ನನ್ನು ರಕ್ಷಿಸಲು ಮೀನಾಕ್ಷಿಯೇ ಪುಟ್ಟ ಹುಡುಗಿಯ ರೂಪದಲ್ಲಿ ಬಂದಳು ಪೀಟರ್‌ಗೆ ಗೊತ್ತಾಯಿತು. ಹಾಗಾಗಿ, ಅವರು ಭಕ್ತಿಯಿಂದ ‘ಬರಿಗಾಲಿನಲ್ಲಿ’ ಬಂದಿದ್ದ ಬಾಲಕಿ ಮೀನಾಕ್ಷಿಗೆ, ಪಾದುಕೆಗಳನ್ನು ಕೊಡಬೇಕೆಂದು ಬಯಸಿದರು. ದೇವಾಲಯದ ಅರ್ಚಕರ ಸಲಹೆಯಂತೆ ನವರತ್ನಖಚಿತವಾದ ಪಾದುಕೆಗಳನ್ನೂ, ಇನ್ನಿತರ ಆಭರಣಗಳನ್ನೂ ತಯಾರಿಸಿ ಮೀನಾಕ್ಷಿಗೆ ಅರ್ಪಿಸಿದರು. ”ಪೀಟರ್ ಪಾದುಕಂ” ಎಂದು ಕರೆಯಲ್ಪಡುವ ಈ ಪಾದುಕೆಗಳನ್ನು ಇಂದಿಗೂ, ವಿಶೇಷ ಹಬ್ಬದ ದಿನಗಳಲ್ಲಿ ಮೀನಾಕ್ಷಿ ದೇವಿಗೆ ತೊಡಿಸುತ್ತಾರೆ.
ರೌಸ್ ಪೀಟರ್ ಅವರು ನಿವೃತ್ತಿಯ ನಂತರ, ಇಂಗ್ಲೆಂಡ್ ಗೆ ಹೋಗದೆ, ಮಧುರೈನಲ್ಲಿಯೇ ಇದ್ದರು. ತನ್ನ ಮರಣಾನಂತರ, ಮುಖವು ಮೀನಾಕ್ಷಿಯ ಮಂದಿರದತ್ತ ನೋಡುವಂತೆ ಸಮಾಧಿ ಮಾಡಬೇಕೆಂದು ತಿಳಿಸಿದ್ದರಂತೆ. ಅವರ ಕೊನೆಯ ಆಸೆಯಂತೆ, ಪೀಟರ್ ಅವರ ಕಣ್ಣುಗಳು ಮೀನಾಕ್ಷಿ ಮಂದಿರವನ್ನು ನೋಡುವಂತೆ ಸಮಾಧಿ ನಿರ್ಮಿಸಿದರಂತೆ. ಈಗಲೂ ಅವರ ಸಮಾಧಿ ಮಧುರೈನಲ್ಲಿ ಇದೆ. ರೌಸ್ ಪೀಟರ್ ಅವರ ಮುಂದಿನ ತಲೆಮಾರು ಕೂಡ ಮಧುರೈ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಇತ್ತೀಚೆಗೆ ಅಂದರೆ 2018 ರಲ್ಲಿ ಪೀಟರ್ ಅವರ 5 ನೇ ತಲೆಮಾರಿನವರು ದೇವಾಲಯಕ್ಕೆ ಭೇಟಿಕೊಟ್ಟಿದ್ದರಂತೆ. (ಆಂಗ್ಲ ಮಾಹಿತಿ ಮೂಲ: ಅಂತರ್ಜಾಲ)
(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು
ಒಂದು ಉತ್ತಮ ಮಾಹಿತಿ ಹಂಚಿರುವಿರಿ ಮೇಡಂ
ಮೈ ನವಿರೇಳಿಸುವ ಘಟನೆ
ವಂದನೆಗಳು
ಇತಿಹಾಸದಲ್ಲಿ ದಾಖಲಾಗಿರುವ ಈ ಘಟನೆಗಳು ಆಸಕ್ತಿ ಮೂಡಿಸುತ್ತವೆ. ದೇವರಿದ್ದಾನೆ ಎಂದು ಸಾರುತ್ತಾ ಆಸ್ತಿಕರ ನಂಬಿಕೆಗೆ ಪುರಾವೆ ನೀಡುತ್ತವೆ. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಪ್ರವಾಸ ಕಥನ. ಪ್ರತಿ ವಾರ ಕಾಯುವಂತಾಗಿದೆ.
ವಾವ್..ಅಪರೂಪದ..ಕಥೆ ನಿರೂಪಣೆ ಸೊಗಸಾಗಿ ಬಂದಿದೆ ಗೆಳತಿ ಹೇಮಾ..
ಬಹಳ ಉತ್ತಮ ಮಾಹಿತಿ ಮೇಡಂ, ಸೊಗಸಾದ ನಿರೂಪಣೆ
ಅಪರೂಪದ ಕಥೆ, ಸೊಗಸಾದ ನಿರೂಪಣೆ!
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ನವರತ್ನ ಖಚಿತ ಪೀಟರ್ ಪಾದುಕೆಯ ಹಿಂದಿನ ಮನೋಜ್ಞ ಕಥೆಯನ್ನು ಓದಿ ಭಾವುಕಳಾದೆ…ಎಂದಿನಂತೆ ಚಂದದ ನಿರೂಪಣೆ..ಧನ್ಯವಾದಗಳು ಮಾಲಾ ಅವರಿಗೆ