ಚಿಂತನ : ಶ್ರೀ ವೇದವ್ಯಾಸರು

Share Button

ಓಂ ಶ್ರೀ ಗುರುಭ್ಯೋ ನಮಃ
ಸಾಕ್ಷಾತ್ ಶ್ರೀಮನ್ನಾರಾಯಣನ ಅಂಶ ಸಂಭೂತರಾಗಿಯೇ ಜನಿಸಿದ್ದ ವೇದವ್ಯಾಸರು ಭೂಲೋಕದ ಸುಜೀವರ ಉದ್ದಾರಾರ್ಥವಾಗಿ ಕೇವಲ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡವರು. ಹದಿನೆಂಟು ಪುರಾಣಗಳನ್ನು ಹದಿನೆಂಟು ಉಪ-ಪುರಾಣಗಳನ್ನು ಬರೆದವರು. ಅವುಗಳಲ್ಲಿ ಅತ್ಯಂತ ಕ್ಲಿಷ್ಟವಾದುದು ಮತ್ತು ಶ್ರೇಷ್ಠವಾದುದು ಮಹಾಭಾರತ. ಇದು “ಪಂಚಮವೇದ” ಎಂದು ಖ್ಯಾತಿಯನ್ನು ಪಡೆದಿದೆ.

ಬ್ರಹ್ಮರ್ಷಿ ವಸಿಷ್ಠರ ಮೊಮ್ಮಗ ಪರಾಶರ ಮಹರ್ಷಿಗಳು. ಪರಾಶರ ಮತ್ತು ಸತ್ಯವತಿಯರ ಮಗನೇ ವ್ಯಾಸ ಮಹರ್ಷಿಗಳು.
ಪರಮ ತೇಜಸ್ವಿಯಾದ ಮಗು ಹುಟ್ಟುತ್ತಲೇ ಬೆಳೆದು ಐದು ವರ್ಷದ ಬಾಲಕನಾದನು. ಆ ಬಾಲಕನು ತಾಯಿ ಸತ್ಯವತಿಗೆ ನಮಸ್ಕರಿಸಿ ಹೀಗೆ ಹೇಳಿದನು; ”ಅಮ್ಮ ಸಮಯ ಬಂದಾಗ ನನ್ನನ್ನು ನೆನೆಸಿಕೊ. ನಾನು ಖಂಡಿತವಾಗಿ ಬಂದು ನಿನ್ನ ಇಚ್ಛೆಯನ್ನು ನೆರವೇರಿಸಿ ಕೊಡುತ್ತೇನೆ ” ಎಂದು ಹೇಳಿ ತಂದೆ ಪರಾಶರ ಮಹರ್ಷಿಗಳ ಜೊತೆಯಲ್ಲಿ ಹೊರಟು ಹೋದರು.

ಪರಾಶರರು ಮಗನಿಗೆ “ಕೃಷ್ಣ” ಎಂದು ಹೆಸರಿಟ್ಟರು. ಇವರು ಗಂಗಾ ನದಿಯ ಮಧ್ಯ ಭಾಗದಲ್ಲಿ ಒಂದು ದ್ವೀಪದಲ್ಲಿ ಜನಿಸಿದ ಕಾರಣ “ದ್ವೈಪಾಯನ “ಎಂದು ಅವರಿಗೆ ಹೆಸರಾಯಿತು.ಅಲ್ಲಿಯೇ ವೇದಾಧ್ಯಯನವನ್ನು ಮಾಡಿ ಅತಿ ಬೇಗನೆ ವೇದ – ಶಾಸ್ತ್ರಗಳಲ್ಲಿಯೂ ಪಾರಂಗತರಾದರು. ಅಂತೆಯೇ ತನ್ನ ಶ್ರದ್ಧೆ – ನಿಷ್ಠೆಯ ಜೀವನದಿಂದ ಮಹರ್ಷಿಗಳೆಂದು ಪ್ರಸಿದ್ಧಿ ಪಡೆದರು.

ವ್ಯಾಸರ ಪರಂಪರೆ ಹೀಗಿದೆ—–
ಶ್ರೀ ವೇದವ್ಯಾಸರು ಬ್ರಹ್ಮ ಋಷಿ ಶ್ರೇಷ್ಠರಾದ ವಸಿಷ್ಠರ ಮರಿ ಮಗ. ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರ ಮುನಿಗಳ ಪುತ್ರ ಮತ್ತು ಶುಕ ಮಹರ್ಷಿಯ ತಂದೆ ಎಂಬುದಾಗಿ ಇವರ ವಂಶ ಪರಂಪರೆಯನ್ನು ಸ್ಮರಿಸಲಾಗುತ್ತದೆ .

” ವ್ಯಾಸಂ ವಸಿಷ್ಠ ನಪ್ತಾರಂ I
ಶಕ್ತೇ: ಪೌತ್ರಮ ಕಲ್ಮಶಂ II
ಪರಾಶರಾತ್ಮಜಂ ವಂದೇ I
ಶುಕತಾತಂ ತಪೋನಿಧಿಂ II”

ಬಳಿಕ ಬದರೀ ಕ್ಷೇತ್ರದಲ್ಲಿ ಆಶ್ರಮವನ್ನು ನಿರ್ಮಿಸಿ ಅಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದರು. ಇದರಿಂದ “ಬಾದರಾಯಣ” ಎಂದು ಹೆಸರು ಪಡೆದರು. ಇವರಿಗೆ ಅನೇಕ ಮಂದಿ ಶಿಷ್ಯರಿದ್ದರು. ಅವರು ಅಲ್ಲಿಯವರೆಗೂ ಏಕರೂಪವಾಗಿದ್ದ ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು. ದೇವತಾ ಸ್ತುತಿ ರೂಪವಾದ ಮಂತ್ರಗಳನ್ನು ಒಂದುಗೂಡಿಸಿ “ಋಗ್ವೇದ ” ಎಂದು ಹೆಸರಿಟ್ಟರು. ಆವಾಹಿತರಾದ ದೇವತೆಗಳನ್ನು ತೃಪ್ತಿಪಡಿಸಲು ಉಪಯೋಗವಾಗುವ ಮಂತ್ರಗಳನ್ನು ಒಂದುಗೂಡಿಸಿ “ಯಜುರ್ವೇದ” ಎಂದು ಹೆಸರಿಟ್ಟರು.ಯಜ್ಞಕ್ಕಾಗಿ ಬಂದ ದೇವತೆಗಳನ್ನು ಗಾನದಿಂದ ಸಂತೋಷಪಡಿಸಲು ಗಾನವನ್ನು ಅಳವಡಿಸಿದ ಮಂತ್ರ ಗುಚ್ಛಕ್ಕೆ “ಸಾಮವೇದ “ ಎಂದು ಹೆಸರಿಟ್ಟರು. ಶಾಂತಿ – ಪುಷ್ಟಿ ಕರ್ಮಗಳಿಗಾಗಿ ಎಂದರೆ ರೋಗ-ರುಜಿನ, ಕ್ಷಾಮ, ಶತ್ರು ಬಾಧೆ ಇವುಗಳ ನಿವಾರಣೆ ಮತ್ತು ಆರೋಗ್ಯ, ದೀರ್ಘಾಯುಷ್ಯ, ಸೌಭಾಗ್ಯಗಳ ಪ್ರಾಪ್ತಿಗಾಗಿ ಉಪಯುಕ್ತವಾದ ಮಂತ್ರಗಳನ್ನು ಒಂದುಗೂಡಿಸಿ ಅದಕ್ಕೆ “ಅಥರ್ವವೇದ ” ಎಂದು ಹೆಸರಿಟ್ಟರು.

ಈ ವೇದಗಳನ್ನು ಕ್ರಮವಾಗಿ ತಮ್ಮ ಶಿಷ್ಯರಾದ ಪೈಲ, ವೈಶಂಪಾಯನ ,ಜೈಮಿನಿ ಮತ್ತು ಸುಮಂತು ಎಂಬ ನಾಲ್ಕು ಮಂದಿಗೆ ಉಪದೇಶಿಸಿದರು. ವೇದಗಳನ್ನು ವಿಭಾಗಿಸಿದ್ದರಿಂದ ಕೃಷ್ಣಾ ದ್ವೈ ಪಾಯನರಿಗೆ “ವೇದವ್ಯಾಸ “ ಎಂದು ಹೆಸರಾಯಿತು.

ಇವರು ಆತ್ಮ ವಿಷಯಕವಾಗಿರುವ ದರ್ಶನಗಳನ್ನು ವಿಮರ್ಶಿಸಿ ವೇದಾಂತದರ್ಶನವನ್ನು ಸ್ಥಾಪಿಸುವ “ಬ್ರಹ್ಮಸೂತ್ರ ” ಎಂಬ ಸೂತ್ರ ಗ್ರಂಥವನ್ನು ರಚಿಸಿದರು.

ವ್ಯಾಸ ಮಹರ್ಷಿಗಳು ಸಂಕಲ್ಪಿಸಿದ ಒಂದು ಮಹಾ ಗ್ರಂಥವನ್ನು ಯಾರಿಂದ ಬರೆಯಿಸಲಿ ? ಎಂದು ಚಿಂತಿಸುತ್ತಿರಲು ಸ್ವತ: ಬ್ರಹ್ಮ ದೇವರೇ ಅವರ ಆಶ್ರಮಕ್ಕೆ ಚಿತ್ತೈಸಿ ಆ ಮಹಾನುಗ್ರಂಥವನ್ನು ಗಣೇಶನಿಂದ ಬರೆಸಲು ತಿಳಿಸಿದರು. ಅಂತೆಯೇ ವ್ಯಾಸ ಮುನಿಗಳು ಗಣೇಶನನ್ನು ಪ್ರಾರ್ಥಿಸಲು ಬಂದ ಗಣೇಶನು ವೇದವ್ಯಾಸರ ಮುಖದಿಂದ ಬಂದ ಶ್ಲೋಕವನ್ನು ಅರ್ಥೈಸಿಕೊಂಡು ಅದನ್ನು ಲಿಪಿ ರೂಪಕ್ಕೆ ಇಳಿಸಿದನು. ಹೀಗೆ ಮಹಾಭಾರತದ ರಚನೆಯಾಯಿತು.

ಅದುವೇ ಐದನೆಯ ವೇದವೆಂದೇ ಪ್ರಸಿದ್ಧವಾದ ” ಮಹಾಭಾರತ “.

ಇಷ್ಟೆಲ್ಲ ಗ್ರಂಥಗಳ ರಚನೆ ಮಾಡಿದರೂ ವ್ಯಾಸ ಮಹರ್ಷಿಗಳು ನನ್ನ ಮನಸ್ಸಿಗೆ ಶಾಂತಿಯೇ ಇಲ್ಲ. ಏಕೆ ಹೀಗೆ ? ಎಂದು ದೇವರ್ಷಿ ನಾರದರನ್ನು ಕೇಳಿದರು. ಅದಕ್ಕೆ ನಾರದರು ನೀವು ಮಾಡಿದ ಮಹತ್ಕಾರ್ಯಗಳು ಜಗತ್ತಿಗೆ ಅತ್ಯಂತ ಉಪಯುಕ್ತವಾದುದಾಗಿದೆ. ಆದರೂ ನಿಮ್ಮ ಮನ: ಶಾಂತಿಗಾಗಿ ಭಗವಂತನ ಲೀಲೆಗಳನ್ನೇ ವಿಶೇಷವಾಗಿ ವರ್ಣಿಸುವ ಭಗವಂತನ ಕಲ್ಯಾಣ ಗುಣಗಳನ್ನೇ ವಿಶೇಷವಾಗಿ ಗಾನ ಮಾಡುವ ಗ್ರಂಥವೊಂದನ್ನು ರಚಿಸಿರಿ; ಎಂದು ತಿಳಿಸಿದರು. ಇದರಿಂದ ನೀವು ಕೃತಕೃತ್ಯರಾಗುವಿರಿ; ನಿಮಗೆ ಮನ:ಶಾಂತಿಯೂ ಲಭಿಸುತ್ತದೆ; ಎಂದರು. ಒಡನೆಯೇ ವೇದವ್ಯಾಸರು ಶುಚಿರ್ಭೂತರಾಗಿ ಧ್ಯಾನಾಸಕ್ತರಾದರು ; ಮತ್ತು ಅವರಿಗೆ ಆದ ಪ್ರೇರಣೆಯಂತೆ ಭಕ್ತಿರಸದ ಪಾಕದಂತಿರುವ ಪರಮಹಂಸ ಸಂಹಿತೆಯೆಂದೇ ಪ್ರಸಿದ್ಧವಾಗಿರುವ “ಶ್ರೀಮದ್ಭಾಗವತ” ವನ್ನು ರಚಿಸಿದರು. ಅದನ್ನು ಮೊಟ್ಟಮೊದಲು ತಮ್ಮ ಮಗನಾದ ಶುಕಬ್ರಹ್ಮನಿಗೆ ಬೋಧಿಸಿದರು. ಇದರಿಂದ ಅವರ ಮನಸ್ಸಿಗೆ ಪರಮ ಶಾಂತಿಯು ಲಭಿಸಿತು.

ಭಗವಾನ್ ವೇದವ್ಯಾಸರು ಧರ್ಮ ಸಂಸ್ಥಾಪನೆಗಾಗಿ ಅವತರಿಸಿದ ಮಹಾತ್ಮರು. ಅವರು ಈಗಲೂ ಭಾರತ ದೇಶದಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ನೆಲೆಸಿದ್ದಾರೆ. ಶುದ್ಧ ಹೃದಯದ ಅನೇಕ ಸಾಧಕರಿಗೆ ಈಗಲೂ ಅವರ ದರ್ಶನ ಅನುಗ್ರಹಗಳಾಗುತ್ತವೆ.

ವೇದವ್ಯಾಸರು ಲೋಕಕಲ್ಯಾಣಕ್ಕಾಗಿ ಚಿರಂಜೀವಿಯಾಗಿ ಇಲ್ಲಿಯೇ ಉಳಿದುಕೊಂಡರು.

“ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣ:I
ಕೃಪಶ್ಚ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ:II”

ಎಂಬಂತೆ ಏಳು ಮಂದಿ ಪ್ರಸಿದ್ಧರಾದ ಚಿರಂಜೀವಿಗಳಲ್ಲಿ ಇವರು ಒಬ್ಬರು. ಇವರು ಮುನಿಗಳಲ್ಲಿ ಅತ್ಯಂತ ಶ್ರೇಷ್ಠರಾದ ಮಹಾ ವಿಭೂತಿ ಪುರುಷರು; ಎಂಬುದನ್ನು ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಸಾರುತ್ತಾನೆ. “ಮುನೀನಾಮಪ್ಯಹಂ ವ್ಯಾಸ: I” ಅಂತೆಯೇ ಋಷಿ ತರ್ಪಣ ಕೊಡುವಾಗ ” ಕೃಷ್ಣದ್ವೈಪಾಯನಾದ ಯೋ ಋಷಯ:” I ಎಂದು ಮೊಟ್ಟ ಮೊದಲಿಗೆ ಇವರ ಹೆಸರನ್ನೇ ಸ್ಮರಿಸಲಾಗುತ್ತದೆ.
ಹೀಗೆ ಭಗವಂತ ಮಹಾವಿಷ್ಣುವಿನ ಒಂದು ಅವತಾರವೇ ಇವರು ಆಗಿದ್ದಾರೆ; ಎಂಬುದಾಗಿ ಪುರಾಣಗಳು ಹೇಳುತ್ತವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಗವಾನ್ ವೇದವ್ಯಾಸರನ್ನು ಬಿಟ್ಟು ಭಾರತೀಯ ಸಂಸ್ಕೃತಿಯನ್ನು ಸ್ಮರಿಸುವುದಕ್ಕೇ ಬರುವುದಿಲ್ಲ. ಇವರು ಮಾತ್ರ ಲೋಕ ಕಲ್ಯಾಣದಲ್ಲಿಯೇ ನಿರತರಾದವರು ಎಂಬುದು ಇವರ ಹೆಗ್ಗಳಿಕೆಯಾಗಿದೆ. ಅಂತೆಯೇ ಕೃತಜ್ಞತೆಯಿಂದ ಶಾಸ್ತ್ರಗಳಲ್ಲಿ ಇವರನ್ನು ಸ್ಮರಿಸುತ್ತಾರೆ.

“ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣುವೇ I
ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ: II”

ಹೀಗೆ ಭಗವಂತನು ತನ್ನ ಅಂಶ ಸಂಭೂತರನ್ನು ಸೃಷ್ಟಿಸಿ ಮಾನವರ ಉದ್ಧಾರಕ್ಕಾಗಿ ನೇಮಿಸಿರುತ್ತಾನೆ. ಅಪರಿಮಿತವಾದ ಜ್ಞಾನ ಸಂಪನ್ನರು ಇಂದಿಗೂ ನಮ್ಮ ನಡುವೆ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಅದನ್ನರಿತು ಅವರ ದಾರಿದೀಪದಡಿಯಲ್ಲಿ ಮುನ್ನಡೆದು ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ನಾವೂ- ನೀವೂ ದೃಢ ಚಿತ್ತರಾಗಬೇಕು. ಕಾರ್ಯಪ್ರವೃತ್ತರಾಗೋಣ. ಆ ಮುಖೇನ ಸನಾತನ ಧರ್ಮದ ಏಳಿಗೆಗಾಗಿ ಶ್ರಮಿಸೋಣ. ಮುಂದಿನ ಜನಾಂಗಕ್ಕೆ ಉತ್ತಮ ಮಾರ್ಗದರ್ಶನಕ್ಕೆ ನಾವು ನಿಮಿತ್ತರಾಗೋಣ.
” ಜೈ ವೇದವ್ಯಾಸ “
“ಜೈ ಸನಾತನ ಧರ್ಮ”

-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು

12 Responses

  1. Anonymous says:

    ಉತ್ತಮ ಸಂಗ್ರಹ

  2. ಪುರಾಣ ವೇದ ಉಪನಿಷತ್ತುಗಳ ಬಗ್ಗೆ ಉತ್ತಮವಾದ ಮಾಹಿತಿ

  3. ಉತ್ತಮ ಮಾಹಿತಿಯುಳ್ಳ ಲೇಖನ.. ಚೆನ್ನಾಗಿ ಮೂಡಿಬಂದಿದೆ ಮೇಡಂ

  4. Padmini Hegde says:

    ಸನಾತನ ಧರ್ಮದ ಬುನಾದಿ ವ್ಯಾಸ ಎನ್ನುವ ಮಾತು ಚೆನ್ನಾಗಿದೆ

  5. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ, ಚೆನ್ನಾಗಿದೆ.

  6. ಶಂಕರಿ ಶರ್ಮ says:

    ಭಗವಂತನು ಮಾನವ ಕುಲದ ಉದ್ಧಾರಕ್ಕಾಗಿ ತನ್ನ ಅಂಶವೊಂದರಿಂದ ಅವತರಿಸಿದ ಮಹಾತ್ಮನಾದ ವೇದವ್ಯಾಸರ ಕುರಿತ ಲೇಖನ ಮಾಹಿತಿಪೂರ್ಣವಾಗಿದ್ದು ಸಂಗ್ರಹಯೋಗ್ಯವಾಗಿವೆ….‌ಧನ್ಯವಾದಗಳು ವನಿತಕ್ಕ.

  7. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    Thank you ,padmini, Nayana , Shankari akka

  8. Hema Mala says:

    ಚೆಂದದ ಮಾಹಿತಿಯುಕ್ತ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: