ಸಾಹಿತ್ಯ ರಚನೆಯ ಹುಟ್ಟು

Share Button

ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ, ಭಾಷೆಯ ಮೂಲಕ ಅಭಿವ್ಯಕ್ತಿಗೊಳ್ಳುವುದೇ ಸಾಹಿತ್ಯ ರಚನೆಯಾಗುತ್ತದೆ. ಮನದಲ್ಲಿ ಜಮಾಯಿಸಲ್ಪಡುವ ಅನುಭವಗಳಲ್ಲಿ ಅಥವಾ ಭಾವನೆಗಳಲ್ಲಿ ಅಭಿವ್ಯಕ್ತಿಗೊಳಿಸಲು ಯಾವುದು ಯೋಗ್ಯ, ಯಾವುದು ಯೋಗ್ಯವಲ್ಲ ಎಂಬುದನ್ನು ನಾವು ನಿರ್ಧರಿಸಬೇಕಾಗುತ್ತದೆ. ಹೀಗೆ ನಿರ್ಧರಿಸಿದ ಭಾವನೆಗಳಿಗೊಂದು ಆಕಾರ ಕೊಟ್ಟು ಪ್ರಚುರ ಪಡಿಸುವುದರಲ್ಲಿ ಸಾಹಿತ್ಯದ ಉತ್ತಮಿಕೆ ಅಡಗಿದೆ. ಅದು ವಿಚಾರಪೂರ್ಣವೂ ಆರೋಗ್ಯವಾಗಿಯೂ ಸಮಾಜ ಸುಧಾರಣೆಗೆ ಪೂರಕವೂ ಆಗಿದ್ದರೆ; ಅಂತಹ ಬರಹ ಒಳ್ಳೆಯ ಸಾಹಿತ್ಯವಾಗಬಹುದು.

ಸಾಹಿತ್ಯ ಯಾರಿಗೂ ರಚಿಸಬಹುದು. ದೇಶ, ಕಾಲ, ವಯಸ್ಸು,ಜಾತಿ, ಪಂಥ ಯಾವುದೂ ಸಾಹಿತಿಗೆ ಅಡ್ಡಿಬಾರದು. ಆದರೂ ವಿದ್ಯಾರ್ಥಿ ದೆಸೆಯಲ್ಲಿ ಇದ್ದಾಗಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿದರೆ; ಜೀವನ ವಿಸ್ತರಿಸಿದಂತೆ ಅನುಭವ ಬುತ್ತಿಯ ಶೇಖರಣೆ ಹೆಚ್ಚುತ್ತಾ ಹೋಗಿ ಆತ ಅಥವಾ ಆಕೆ ಸಕಾಲಕ್ಕೆ ಪ್ರೌಢತ್ವ ಸಾಧಿಸಬಹುದು. ಪ್ರಥಮ ರಚನೆಯಲ್ಲೇ ಯಾರೂ ಶ್ರೇಷ್ಠ ಸಾಹಿತಿಯಾಗಲಾರ. ನಡೆದಾಡತೊಡಗಿದ ಮಗು ಪ್ರಾರಂಭದಲ್ಲಿ ಏಳುತ್ತಾ ಬೀಳುತ್ತಾ ಮತ್ತೆ ಗಟ್ಟಿ ಹೆಜ್ಜೆ ಊರುವಂತೆ ಸಾಹಿತ್ಯ ಕೃಷಿಯಲ್ಲಿ ಲೇಖಕನೂ ಎಡವುತ್ತಾ ಸಾಗಿ ಬಾಲಿಶದಿಂದ ಪ್ರೌಢತ್ವಕ್ಕೇರಬೇಕಾಗುತ್ತದೆ.

ಸಾಹಿತ್ಯ ರಚನೆಯ ವಿಮರ್ಶೆ
ತನ್ನ ಬರಹಕ್ಕೆ ಮೊದಲು ಸ್ವತಃ ಲೇಖಕನೇ ವಿಮರ್ಶಕ ನಾಗಬೇಕಾಗುತ್ತದೆ. ಅನೇಕಬಾರಿ ಓದಿ ನೋಡಿ ತಿದ್ದಿ ತೀಡಿ, ಯೋಗ್ಯ ರೂಪುಕೊಡಲು ಪ್ರಯತ್ನ ಪಡಬೇಕಾಗುತ್ತದೆ. ಹಾಗಯೇ ಶ್ರೇಷ್ಢ ಸಾಹಿತಿಗಳ ಕೃತಿಗಳನ್ನೋದುವುದೂ ಸಾಧ್ಯವಾದರೆ ಅವರ ಪರಿಚಯ, ಅನುಭವ ಪಡೆಯುವುದೂ ಬಹಳ ಸಹಕಾರಿ. ಸಾಹಿತ್ಯಸರಸ್ವತಿಯ ವ್ಯಾಪ್ತಿ ಬಹಳ ವಿಶಾಲ. ಕವನ, ಕಾವ್ಯ, ಕತೆ,ಕಾದಂಬರಿ, ವಿಚಾರಲೇಖನ,ಲಲಿತ, ಹಾಸ್ಯ ಎಂಬ ಅನೇಕ ಪ್ರಾಕಾರಗಳಲ್ಲಿ ತಮಗೆ ಯಾವುದರಲ್ಲಿ ಅನುಭವ ಅಥವಾ ಪರಿಣತಿ ಅಧಿಕ ಎಂದು ನೋಡಿಕೊಂಡು ಆ ವಿಚಾರದತ್ತ ಹೆಜ್ಜೆಯಿಡುವುದು ಸೂಕ್ತವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ , ಅಭಿರುಚಿ, ಇರುವ ಸಾಹಿತ್ಯಗಳನ್ನು ಹೆಚ್ಚು ಹೆಚ್ಚಾಗಿ ಓದಿಕೊಳ್ಳಬೇಕು. ದಿನದಲ್ಲಿ ನಿರ್ಧಿಷ್ಡ ಹಾಗೂ ಕನಿಷ್ಟ ಸಮಯವನ್ನಾದರೂ ಸಾಹಿತ್ಯಾಸಕ್ತಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸತತ ಸಾಧನೆ, ಧ್ಯೇಯ ಅಗತ್ಯ.

ಮಕ್ಕಳ ಶೈಶಾವಸ್ಥೆಯಲ್ಲಿ ತಾಯಿ ತನ್ನ ಮಗುವಿನ ದೃಷ್ಟಿಯಿಂದ ಹೇಗೆ ನಿದ್ದೆಗೆಟ್ಟು, ನೋವು ನುಂಗಿ ಮುತುವರ್ಜಿ ವಹಿಸುತ್ತಾಳೋ ಅಂತೆಯೇ ಸಾಹಿತ್ಯಸೃಷ್ಟಿಯಲ್ಲೂ ಕಷ್ಟಪಡಬೇಕಾಗುತ್ತದೆ. ಆದರೆ ತನ್ನ ಕೃತಿ ಜೀವ ತಳೆದಾಗ ಆ ಕಷ್ಟವೆಲ್ಲ ಹೇಳ ಹೆಸರಿಲ್ಲದಂತೆ ಮಾಯವಾಗಿ ಸಂತೋಷ ಉಕ್ಕುತ್ತದೆ. ಒಂದು ಒಳ್ಳೆಯ ಕೃತಿ ಬರೆದು ಮುಗಿಸಿ ಓದುಗರ ಮುಂದಿಡುವುದು ಎಂದರೆ ; ತಾಯಿಯು ತನ್ನ ಶಿಶುವಿಗೆ ಜನ್ಮ ನೀಡಿದಂತೆ.ಮಗುವಿನ ಮುಖ ನೋಡುತ್ತಲೇ ಮಾತೆಯು ಅದುವರೆಗೆ ಅನುಭವಿಸಿದ ಬವಣೆಗಳೆಲ್ಲ ಮರೆತು ಬಿಡುವಂತೆ ಲೇಖಕ,ಲೇಖಕಿಗೂ ತನ್ನ ಕೃತಿ ಬೆಳಕು ಕಂಡಾಗ ಅಲ್ಲಿಯವರೆಗೆ ತಾನು ಪಟ್ಟ ಶ್ರಮವೆಲ್ಲ ಕರಗಿ ಬಿಡುತ್ತದೆ. ತಾನು ಭೂಮಿಗಿಳಿಸಿದ ಮಕ್ಕಳಷ್ಟೇ ಅಭಿಮಾನ, ಸಂತಸ, ಸಾಹಿತ್ಯ ಕೃತಿ ಪ್ರಕಟವಾದಾಗ ಮನದಲ್ಲಿ ನೆಲೆಯೂರುತ್ತದೆ. ಮನುಷ್ಯನ ದೇಹ ನಾಶವಾದರೂ ಜನಮನದಲ್ಲಿ ಅವನನ್ನು ಜೀವಂತವಾಗಿಡುವುದು ಆತನ ಲೋಕೋಪಯೋಗಿ ಕೆಲಸ. ಈ ಸಾಲಿನಲ್ಲಿ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನ ಎನ್ನಬಹುದು. ಈ ಸಂದರ್ಭದಲ್ಲಿ ಪುರಾಣಕಾರರಾದ ವೇದವ್ಯಾಸ, ವಾಲ್ಮೀಕಿ, ರಾಘವಾಂಕ, ಕಾಳಿದಾಸ, ಭಾಸ ಮೊದಲಾದವರನ್ನೂ ಇತಿಹಾಸಕ್ಕೆ ಸೇರಿದವರಾದ ಪಂಪ, ರನ್ನ, ಹರಿಹರ, ಮಹಾದೇವಿಯಕ್ಕ, ಸರ್ವಜ್ಞ, ಕನಕದಾಸ, ತುಲಸಿದಾಸ ಮೊದಲಾದವರನ್ನೂ ಸ್ಮರಿಸಬಹುದು. ಹಾಗೆಯೇ ಇತ್ತೀಚಿನವರಾದ ಶ್ರೇಷ್ಠ ಸಾಹಿತ್ಯಕಾರರೆನಿಸಿದ ಕುವೆಂಪು, ಶಿವರಾಮಕಾರಂತ, ದ.ರಾ.ಬೇಂದ್ರೆ, ಅ.ನ.ಕೃ,, ತ್ರಿವೇಣಿ, ಬೈರಪ್ಪ, ಅನಂತಮೂರ್ತಿ, ಅನುಪಮಾ ನಿರಂಜನ ಮೊದಲಾದವರನ್ನು ನೆನೆಯದೆ ಖಂಡಿತ ಇರಲಾರೆವು.

ಬದುಕು ಸಾಹಿತ್ಯದ ತಾಯಿಬೇರು:-ಸಾಹಿತ್ಯದ ಸ್ವರೂಪ ಕಥೆ, ಕಾದಂಬರಿ, ಕವಿತೆ, ನಾಟಕ, ಪ್ರಬಂಧ ಯಾವುದೇ ಆಗಿರಲಿ.ಅದು ಅನುಭವಗಳ ಅಭಿವ್ಯಕ್ತಿಯ ಮಾಧ್ಯಮ. ವಾಸ್ತವಿಕದ ಅನುಭವದ ಅಭಿವ್ಯಕ್ತಿಯೇ ಸಾಹಿತ್ಯದ ಗುರಿ. ಅನುಭವಗಳು ಆಲೋಚನೆ, ಅನಿಸಿಕೆಗಳನ್ನು ಭಾಷಾ ಮಾಧ್ಯಮದ ಮೂಲಕ ಸಾಧ್ಯವಾಗುವ ಕ್ರಿಯೆಯನ್ನು ಅಭಿವ್ಯಕ್ತಿ ಎನ್ನಬಹುದು. ಹೃದಯವನ್ನು ಮಿಡಿಸಬಲ್ಲ ಶಕ್ತಿ ಆ ಭಾಷೆಗಿರಬೇಕು. ನಿಜವಾದ ಲಕ್ಷ್ಯದೆಡೆಗೆ ಬರಹ ಹರಿಯಬೇಕು. ಬರಹದ ಉದ್ದೇಶ ಪೂರ್ಣಗೊಳ್ಳಬೇಕು.

-ವಿಜಯಾಸುಬ್ರಹ್ಮಣ್ಯ ಕುಂಬಳೆ

10 Responses

  1. Anonymous says:

    ಉತ್ತಮ ಮಾಹಿತಿ

  2. ಸಾಹಿತ್ಯ ಕೃತಿಗಳ ರಚನೆಯ ಬಗ್ಗೆ ಉತ್ತಮವಾದ ಬರಹ

  3. ಸಾಹಿತ್ಯ…ಹುಟ್ಟು ಬೆಳವಣಿಗೆ.. ಬಳಸಿಕೊಳ್ಳುವ ಬಗೆ…ತಿಳಿಸುವ ಬರಹ ಚೆನ್ನಾಗಿ ದೆ ವಿಜಯಾ ಮೇಡಂ

  4. Anonymous says:

    ಸುರಹೊನ್ನೆಯ ಹೇಮಮಾಲಾ ಹಾಗೂ ಓದುಗರಿಗೆ
    ಧನ್ಯವಾದಗಳು. ಇಂದು ನಾನು ನೋಡುವಾಗ ಲೇಟಾಯಿತು.

  5. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಉತ್ತಮ ಮಾಹಿತಿ

  6. Padmini Hegde says:

    ಬದುಕು ಸಾಹಿತ್ಯದ ತಾಯಿಬೇರು:ಎನ್ನುವ ಚಿಂತನೆ ಚೆನ್ನಾಗಿದೆ

  7. ಶಂಕರಿ ಶರ್ಮ says:

    ಸಾಹಿತ್ಯದ ರಚನೆಯ ಪ್ರಾರಂಭಿಕ ಹಂತದಲ್ಲಿ ಕೈದೀವಿಗೆಯಾಗಬಲ್ಲ ಲೇಖನವು ಉತ್ತಮ ಮಾಹಿತಿಗಳನ್ನು ಹೊಂದಿದೆ

  8. ನಯನ ಬಜಕೂಡ್ಲು says:

    ಸಾಹಿತ್ಯ ರಚನೆಯ ಕುರಿತು ಬಹಳ ಚೆನ್ನಾಗಿ ಹೇಳಿದ್ದೀರಿ ಮೇಡಂ. ಹೌದು ನಾವು ಬರೆದದ್ದನ್ನು ಮತ್ತೆ ಮತ್ತೆ ಓದಿದಾಗಲೂ ತಿದ್ದಲು ಸಾಕಷ್ಟು ಇರುತ್ತದೆ.

  9. Hema Mala says:

    ಮಾಹಿತಿಯುಕ್ತ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: