ಥೀಮ್ : ‘ನೆನಪಿನ ಜೋಳಿಗೆ’- ಹಸಿಬೆಯ ಚೀಲ
ಪೀಠಿಕೆ: ಇಲ್ಲಿ ಜೋಳಿಗೆ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಏಕೆಂದರೆ ಜೋಳಿಗೆ ಎಂದರೆ ಅದೊಂದು ಚೀಲ. ಅದು ಏನನ್ನಾದರೂ ತನ್ನೊಳಗೆ ಇರಿಸಿಕೊಳ್ಳಬಲ್ಲುದು. ಹಾಗಾಗಿ ನನ್ನ ಬಾಲ್ಯಕಾಲದ ಗ್ರಾಮೀಣ ಬದುಕಿನಲ್ಲಿ ನಾನುಕಂಡಿದ್ದು ಈಗ ಮರೆಯಾಗಿರುವ ಅನೇಕ ಉಪಯುಕ್ತ ಸಾಧನಗಳ ನೆನಪುಗಳನ್ನು ಈ ಜೋಳಿಗೆ ಸಂಗ್ರಹದಲ್ಲಿಟ್ಟುಕೊಂಡಿದೆ. ಎರಡು ದಶಕಕ್ಕೂ ಹೆಚ್ಚು ಕಾಲ ನಾನು ಬೆಳೆದದ್ದು ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಸಣ್ಣಗ್ರಾಮದಲ್ಲಿ. ನನ್ನ ಪೋಷಕರು ನನ್ನ ತಾತ (ತಂದೆಯ ತಂದೆ) ಮತ್ತು ಅಜ್ಜಿ. ನನ್ನ ಮಿತ್ರರು, ಒಡನಾಡಿಗಳೆಲ್ಲ ರೈತಾಪಿ ಜನರ ಮಕ್ಕಳು. ಹೀಗಾಗಿ ಅನೇಕ ನೆನಪುಗಳು ಎಷ್ಟೋ ಬಾರಿ ಕಣ್ಮುಂದೆ ಬರುತ್ತಲೇ ಇರುತ್ತವೆ. ಅವುಗಳಲ್ಲಿ ಅಂದಿನ ಸಾಮಾನ್ಯ ಜನರ ಮನೆಗಳಲ್ಲಿ ಬಳಸಲ್ಪಡುತ್ತಿದ್ದ ಕೆಲವು ಸಾಧನಗಳ ಬಗ್ಗೆ ಪ್ರಸ್ತಾಪಿಸುತ್ತೇನೆ.
1. ಜೋಳಿಗೆ: ಜೋಳಿಗೆಯಿಂದಲೇ ಪ್ರಾರಂಭಿಸುತ್ತೇನೆ. ಸಾಮಾನ್ಯವಾಗಿ ಮನೆಮನೆಗಳಿಂದ ಭಿಕ್ಷೆಯನ್ನು ಬೇಡಲು ಬರುತ್ತಿದ್ದ ಬಡಜನರ ಹೆಗಲಿನಲ್ಲಿ ಒಂದು ಬಟ್ಟೆಯಿಂದ ಹೊಲೆದಿದ್ದ ಉದ್ದನೆಯ ಚೀಲದಂತಿರುವ ಜೋಳಿಗೆ ನೇತಾಡುತ್ತಿತ್ತು. ಆಗೆಲ್ಲ ಭಿಕ್ಷಾಟನೆಯನ್ನು ಅಗೌರವವಾದ ವೃತ್ತಿಯೆಂದು ಪರಿಗಣಿಸುತ್ತಿರಲಿಲ್ಲ. ಇಲ್ಲದವರು ಕೆಲವರು ಅದನ್ನೇ ಜೀವನದ ಮಾರ್ಗವೆಂದು ಸ್ವೀಕರಿಸಿದ್ದುಂಟು. ಉದಾಹರಣೆಗೆ ಜಂಗಮರು, ದಾಸರು, ಕಿನ್ನರಿನುಡಿಸುವವರು, ಹಗಲುವೇಷಧಾರಿಗಳು, ದೊಂಬರಾಟ ಆಡುವವರು, ಕೋಲೆಬಸವನನ್ನು ಕರೆತರುವವರು. ಮುಂತಾದವರು. ಜೋಳಿಗೆಯ ವೈಶಿಷ್ಟ್ಯವೆಂದರೆ ಹೆಗಲಿನಿಂದ ಜೋತುಬಿದ್ದ ಚೀಲಗಳು ಹಿಂದಕ್ಕೊಂದು, ಮುಂದಕ್ಕೊಂದು ಇರುತ್ತಿದ್ದವು. ಅವಗಳೊಳಗೆ ಒಂದು ಚೀಲದಲ್ಲಿ ಎರಡು ಎರಡು ಪ್ರತ್ಯೇಕ ಭಾಗಗಳಿರುತ್ತಿದ್ದವು. ನಾನು ಕಂಡಂತೆ ದಾನ ನೀಡುವವರು ಧಾನ್ಯದ ಕಾಳುಗಳು, ಬೀಸಿದ ಹಿಟ್ಟುಗಳು, ಬೇಯಿಸಿದ ಪದಾರ್ಥಗಳು, ಮನೆಯಲ್ಲಿದ್ದ ಹಣ್ಣುಹಂಪಲುಗಳನ್ನು ನೀಡುತ್ತಿದ್ದರು. ಹಣ ಕೊಡುತ್ತಿದ್ದುದು ಅಪರೂಪ. ಧಾನ್ಯಗಳು ಮತ್ತು ಹಿಟ್ಟುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಹಾಕಿಸಿಕೊಳ್ಳುತ್ತಿದ್ದರು, ಹಾಗೂ ಬೇಯಿಸಿದ ಖಾದ್ಯಗಳನ್ನು ಮುಂಭಾಗದಲ್ಲಿನ ಚೀಲದಲ್ಲಿರಿಸಿಕೊಂಡಿದ್ದ ಪಾತ್ರೆಯೊಂದರಲ್ಲಿ ಇಟ್ಟುಕೊಳ್ಳುತ್ತಿದ್ದರು. ಚಿಕ್ಕ ಹುಡುಗನಾಗಿದ್ದಾಗ ನನಗೊಂದು ಸಂದೇಹ ಉಂಟಾಗುತ್ತಿತ್ತು. ರಾಗಿ, ಅಕ್ಕಿ, ಜೋಳ ಹೀಗೆ ಎಲ್ಲರೀತಿಯ ಧಾನ್ಯಗಳನ್ನು ಒಂದೇ ಚೀಲದಲ್ಲಿ ಹಾಕಿಸಿಕೊಳ್ಳುತ್ತಾರೆ. ಅವುಗಳನ್ನು ಉಪಯೋಗಿಸುವಾಗ ಹೇಗೆ ಬೇರ್ಪಡಿಸಿಕೊಳ್ಳುತ್ತಾರೆ ಎಂದು. ನಮ್ಮ ಅಜ್ಜಿಯನ್ನು ಇದರ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಹೇಗೋ ಮಾಡಿಕೊಳ್ಳುತ್ತಾರೆ. ನಿನಗೇಕೆ ಇಲ್ಲದ ಉಸಾಬರಿ ಎಂದು ಬಾಯ್ಮುಚ್ಚಿಸಿದ್ದರು. ಊರಿನಲ್ಲಿ ಹೇಳಿಕೊಳ್ಳುವಂಥ ಶ್ರೀಮಂತರಾರೂ ಇಲ್ಲದಿದ್ದರೂ ಅನುಕಂಪ ಹೊಂದಿದವರಿದ್ದರು. ಹೀಗಾಗಿ ಬೇಡುವವರಿಗೆ ಸಾಕಷ್ಟು ಭಿಕ್ಷೆ ದೊರೆತು ಅವರ ಜೀವನ ಹೇಗೋ ನಡೆಯುತ್ತಿತ್ತು.
2. ಹಸಿಬೆಯ ಚೀಲ: ಇದೊಂದು ಜೋಳಿಗೆಯ ಅಣ್ಣನ ರೂಪದ ಚೀಲ. ಆಗೆಲ್ಲ ಸಾಮಗ್ರಿಗಳನ್ನು ಒಯ್ಯಲು ಬಟ್ಟೆಯ ಚೀಲ, ಅಥವಾ ಗೋಣಿಕೈಚೀಲ (ಸೆಣಬಿನ ಬಟ್ಟೆಯದು) ಬಳಕೆಯಾಗುತ್ತಿದ್ದವು. ನಾನೀಗ ಹೇಳುತ್ತಿರುವುದು ಹೆಚ್ಚು ಪ್ರಮಾಣದಲ್ಲಿ ಸಾಮಗ್ರಿಗಳನ್ನು ಒಮ್ಮೆಗೇ ತುಂಬಿ ಒಯ್ಯಬಹುದಾದ ಚೀಲದ ಬಗ್ಗೆ. ಅದನ್ನು ಹಸಿಬೆಚೀಲವೆಂದು ಕರೆಯಲಾಗುತ್ತಿತ್ತು. ಇದರ ರಚನೆ ಕೂಡ ಜೋಳಿಗೆಯಂತಿದ್ದು ಎರಡೂ ಕಡೆಯಿರುತ್ತಿದ್ದ ಚೀಲಗಳು ದೊಡ್ಡದಾಗಿರುತ್ತಿದ್ದವು. ಪ್ರತಿ ಚೀಲದೊಳಗೆ ಮುರುನಾಲ್ಕು ಪದರಗಳಿದ್ದು ಬೇರೆಬೇರೆ ಸಾಮಗ್ರಿಗಳನ್ನು ಪ್ರತ್ಯೇಕವಾಗಿರಿಸಿಕೊಂಡು ಒಂದಕ್ಕೊಂದು ಬೆರೆಯದಂತೆ ಒಯ್ಯಬಹುದಾಗಿತ್ತು. ಆಗೆಲ್ಲ ವಾರಕ್ಕೊಮ್ಮೆ ಗ್ರಾಮದ ಸಂತೆ ನಡೆಯುತ್ತಿತ್ತು. ನಾಲ್ಕಾರು ಗ್ರಾಮಗಳ ಗುಂಪುಗಳಿಗೆ ಮಧ್ಯೆ ಇರುತ್ತಿದ್ದ ದೊಡ್ಡ ಗ್ರಾಮವೊಂದರಲ್ಲಿ ಸಂತೆ ನಡೆಸುತ್ತಿದ್ದರು. ಕೊಳ್ಳುವ, ಮಾರುವ ಜನರು ಮಂಜಾನೆಯಿಂದಲೇ ಬಂದು ವ್ಯಾಪಾರದಲ್ಲಿ ತೊಡಗುತ್ತಿದ್ದರು. ಊರುಗಳಲ್ಲಿ ದೊಡ್ಡ ಅಂಗಡಿಗಳಿರಲಿಲ್ಲ. ಹಾಗಾಗಿ ಆವಶ್ಯಕ ವಸ್ತುಗಳೆಲ್ಲವೂ ಸಂತೆಯಲ್ಲಿಯೇ ದೊರಕುತ್ತಿದ್ದವು. ವ್ಯಾಪಾರಿಗಳು ದೂರದಿಂದ ಚಕ್ಕಡಿಗಳನ್ನು ತುಂಬಿಕೊಂಡು ವಸ್ತುಗಳನ್ನು ತಂದು ಮಾರುತ್ತಿದ್ದರು. ಕೊಳ್ಳುವ ಜನರು ಅನೇಕ ವಸ್ತುಗಳನ್ನು ಖರೀದಿಸಿದರೂ ಅವುಗಳನ್ನು ತಮ್ಮ ಹಸಿಬೆಚೀಲದಲ್ಲಿ ಬೇರೆಬೇರೆಯಾಗಿ ತುಂಬಿಸಿ ಒಯ್ಯುತ್ತಿದ್ದರು. ಕೆಲವರು ಅದನ್ನು ಎತ್ತುಗಳ ಹೆಗಲಿಗೇರಿಸಿ, ಇನ್ನೂ ಕೆಲವರು ತಾವೇ ಹೊತ್ತು ಮನೆಗೆ ಸಾಗಿಸುತ್ತಿದ್ದರು. ಹಸಿಬೆ ಚೀಲದಲ್ಲಿ ಎರಡೂ ಕಡೆಯೂ ಸೇರಿ ಸುಮಾರು ನಲವತ್ತು ಸೇರಿನಷ್ಟು (ಈಗಿನ ಐವತ್ತು ಕೆ.ಜಿ.) ಧಾನ್ಯ, ಬಳಕೆಯ ವಸ್ತುಗಳು, ತರಕಾರಿಗಳು, ಬಟ್ಟೆಗಳು ಎಲ್ಲವನ್ನೂ ಒಯ್ಯತ್ತಿದ್ದುದುಂಟು. ಈಗ ಹೆಜ್ಜೆಗೊಂದು ಮಾರ್ಟ್‌ಗಳು ಇರುವುದರಿಂದ ಬೇಕೆಂದಾಗ ಅಗತ್ಯವಾದುದನ್ನು ಖರೀದಿಸಬಹುದು. ಒಮ್ಮೆಗೇ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ಆವಶ್ಯಕತೆಯಿಲ್ಲ. ಆದ್ದರಿಂದ ಹಸಿಬೆಚೀಲವಿಂದು ಕಣ್ಮರೆಯಾಗಿದೆ.
3. ವಾಡೆಗಳು: ರೈತರ ಮನೆಗಳಲ್ಲಿ ಒಂದು ಉಗ್ರಾಣದ ಕೋಣೆಯಿರುತ್ತಿತ್ತು. ಅಲ್ಲಿ ಬಳಕೆಯ ಸಕಲ ವಸ್ತುಗಳನ್ನು ಇಟ್ಟಿರುತ್ತಿದ್ದರು. ಅದರಲ್ಲಿ ಮಧ್ಯಭಾಗದ ಗೋಡೆಯೊಂದರಲ್ಲಿ ಅರ್ಧಭಾಗ ಒಳಕ್ಕೆ, ಅರ್ದಭಾಗ ಹೊರಕ್ಕೆ ಇರುವಂತೆ ಮಣ್ಣಿನಿಂದ ತಯಾರಿಸಿದ್ದ ಉದ್ದವಾದ ವಾಡೆಗಳನ್ನು ಕೂಡಿಸಿರುತ್ತಿದ್ದರು. ಇವುಗಳಲ್ಲಿ ದಿನಬಳಕೆಯ ಧಾನ್ಯಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಉದ್ದ ನಿಲುವಿನ ಹೂಜಿಯಾಕಾರದ ಗುಡಾಣದಂತಹ ಹೊಟ್ಟೆಯ ಮಣ್ಣಿನ ವಾಡೆಯಲ್ಲಿ ಧಾನ್ಯವು ಕೆಡದಂತೆ ಇರುತ್ತಿತ್ತು. ಮೇಲ್ಗಡೆಯಿರುವ ಬಾಯಿಯ ಮುಖಾಂತರ ಇದರೊಳಕ್ಕೆ ಧಾನ್ಯವನ್ನು ತುಂಬಿಸುತ್ತಿದ್ದರು. ಮೇಲೊಂದು ಮಣ್ಣಿನದ್ದೇ ಮುಚ್ಚಳದಿಂದ ಮುಚ್ಚುತ್ತಿದ್ದರು,. ಇದರ ಅತ್ಯಂತ ಕೆಳಭಾಗದಲ್ಲಿ ಒಂದು ರಂಧ್ರವಿರುತ್ತಿತ್ತು. ಅಗತ್ಯವಿದ್ದಾಗ ಬೇಕಾದ ಪ್ರಮಾಣದ ಧಾನ್ಯವನ್ನು ಈ ರಂಧ್ರದ ಮೂಲಕ ಹೊರಕ್ಕೆ ಬೀಳಿಸಿಕೊಂಡು ಮತ್ತೆ ರಂಧ್ರವನ್ನು ಹಳೆಬಟ್ಟೆಗಳನ್ನು ಸುತ್ತಿ ಮಾಡಿದ್ದ ಬಿರಡೆಯಿಂದ ಮುಚ್ಚಲಾಗುತ್ತಿತ್ತು. ಇದರ ಸೌಲಭ್ಯದಿಂದ ತಿಂಗಳು ಪೂರ್ತಿ ಬೇಕಾದ ದಾನ್ಯವನ್ನು ಕೆಡದಂತೆ ಸಂಗ್ರಹಿಸಿಟ್ಟು ಬಳಸುತ್ತಿದ್ದರು. ಇಲ್ಲಿ ನನ್ನದೊಂದು ಸವಿ ನೆನಪನ್ನು ಹೇಳಬಯಸುತ್ತೇನೆ. ನಮ್ಮ ಮನೆಯಲ್ಲೂ ಇಂಥದ್ದೊಂದು ವಾಡೆಯಿದ್ದು ನನ್ನಜ್ಜಿ ಅದರಲ್ಲಿ ನೆಲಗಡಲೆ ಕಾಯನ್ನು ಸಂಗ್ರಹಿಸಿಟ್ಟದ್ದರು. ಬೇಕಾದಾಗ ಒಂದೆರಡು ಸೇರು ಮಾತ್ರ ಹೊರತೆಗೆದು ಹುರಿದು ಬೆಲ್ಲದೊಡನೆ ಮನೆಯವರೆಲ್ಲರೂ ತಿನ್ನುತ್ತಿದ್ದೆವು. ಕಿರಿವಯಸ್ಸಿನ ನನಗೆ ಆಸೆಯಾದಾಗ ಅಜ್ಜಿ ಎಲ್ಲಾದರೂ ಹೋಗಿದ್ದಾಗ ಬಿರಡೆಯನ್ನು ತೆರೆದು ಜೇಬುತುಂಬ ಕಡೆಲೆಕಾಯನ್ನು ತುಂಬಿಸಿಕೊಂಡು ಮೊದಲಿನಂತೆ ಬಿರಡೆ ಮುಚ್ಚಿ ಹೊರಗೆ ಓಡುತ್ತಿದ್ದೆ. ಗೆಳೆಯರೊಡನೆ ಅವನ್ನೆಲ್ಲ ತಿಂದು ಖಾಲಿಮಾಡಿದ ಮೇಲೆ ಮನೆಗೆ ಬರುತ್ತಿದ್ದೆ. ಇದು ಹಿರಿಯರಿಗೆ ತಿಳಿಯುವವರೆಗೂ ಚೆನ್ನಾಗಿತ್ತು. ಒಮ್ಮೆ ಸಿಕ್ಕಿಹಾಕಿಕೊಂಡೆ ಆಗ ಬಿದ್ದ ಪೆಟ್ಟುಗಳು ಈಗಲೂ ನೆನಪಿನಲ್ಲಿವೆ.
4. ಗೂಡೆ: ಇದೇ ರೀತಿಯಲ್ಲಿ ಬಿದಿರಿನ ದೆಬ್ಬೆಗಳಿಂದ ಹೆಣೆದು ಮಾಡಿದ ಸಿಲಿಂಡರಾಕಾರದ ಗೂಡೆಗಳೂ ಬಳಸಲ್ಪಡುತ್ತಿದ್ದವು. ಆದರೆ ಇವುಗಳ ಒಳ ಮತ್ತು ಹೊರಮೈಯನ್ನು ದಪ್ಪನಾಗಿ ಸಗಣಿಯಿಂದ ಸಾರಿಸಿ ಒಣಗಿಸಲಾಗುತ್ತಿತ್ತು. ಇದರ ತಳವನ್ನು ಬಿದಿರಿನ ಹೆಣಿಗೆಯಿಂದಲೇ ಮುಚ್ಚಿರುತ್ತಿದ್ದುದರಿಂದ ಇದು ಈಗಿನ ಡ್ರಂಮ್ಮಿನಂತೆ ಕಾಣುತ್ತಿತ್ತು. ಆದರೆ ಇದನ್ನು ಕೋಣೆಯ ಮೂಲೆಯಲ್ಲಿ ಎರಡೂ ಗೋಡೆಗಳಿಗೆ ತಾಗಿರುವಂತೆ ನಿಲ್ಲಿಸಲಾಗುತ್ತಿತ್ತು. ಇದರಲ್ಲಿ ಹಗುರವಾಗಿರುವ ಹತ್ತಿ, ಹರಳುಬೀಜ (ಔಡಲಬೀಜ), ದನಗಳಿಗೆ ಹಾಕುವ ಬೂಸಾ ಮುಂತಾದುವನ್ನು ತುಂಬಿಸಿ ಇಡಲಾಗುತ್ತಿತ್ತು. ಇದೀಗ ಬರಿಯ ನೆನಪಷ್ಟೇ.
5. ಮೂಡೆ: ಇದೊಂದು ಕೌಶಲಪೂರ್ಣವಾದ ರಚನೆಯಿಂದ ತಯಾರು ಮಾಡುತ್ತಿದ್ದ ಸಂಗ್ರಹ ಸಾಧನ. ಸಾಮಾನ್ಯವಾಗಿ ಭತ್ತ, ನೆಲಗಡಲೆ, ಹುರುಳಿ, ಅವರೆಕಾಳು, ತೊಗರಿಕಾಳು ಮುಂತಾದುವನ್ನು ಮುಂದಿನ ಬಿತ್ತನೆ ಸಮಯದ ವರೆಗೆ ಸಂಗ್ರಹಿಸಿಡಲು ಇದನ್ನು ಬಳಸಲಾಗುತ್ತಿತ್ತು. ಇದನ್ನು ಸ್ಥಳೀಯವಾಗಿ ಲಭ್ಯವಿದ್ದ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತಿತ್ತು. ಒಣಗಿದ ನೆಲ್ಲುಹುಲ್ಲು (ಭತ್ತದಹುಲ್ಲು) ಉದ್ದವಾಗಿರುವುದರಿಂದ ಇದರಿಂದ ಹೆಣೆದ ಹಗ್ಗವನ್ನು ಮೊದಲು ತಯಾರಿಸಿಕೊಳ್ಳುತ್ತಿದ್ದರು. ಇಂತಹ ಮೂರುಹಗ್ಗಗಳನ್ನು ಜಡೆ ಹೆಣೆಯುವಂತೆ ಹೆಣೆಯುತ್ತಾ ಅಗಲವಾದ ಪಟ್ಟಿಯನ್ನು ತಯಾರಿಸಿಕೊಳ್ಳುತ್ತಿದ್ದರು. ನಂತರ ನಕ್ಷತ್ರಾಕಾರದಲ್ಲಿ ಹತ್ತು ಅಥವಾ ಹೆಚ್ಚು ಕಾಲುಗಳಂತೆ ನೆಲದಮೇಲೆ ಹರಡಿ ಅವುಗಳನ್ನು ಒಂದು ಕೊನೆಯಲ್ಲಿ ಬಿಗಿಯಾಗಿ ಕಟ್ಟಲಾಗುತ್ತಿತ್ತು. ನಂತರ ಕೆಳಮಧ್ಯಭಾಗದಿಂದ ಪ್ರಾರಂಭಿಸಿ ಬಿದಿರಿನ ಬುಟ್ಟಿ ಹೆಣೆಯುವಂತೆ ಮೊದಲು ತಯಾರಿಸಿಕೊಂಡಿದ್ದ ದಪ್ಪ ಜಡೆಯಂತ ಹಗ್ಗವನ್ನು ಚಕ್ರಾಕಾರವಾಗಿ ಸುತ್ತುತ್ತಾ ಅಗಲವಾಗಿ ಮಾಡಿಕೊಳ್ಳುತ್ತಿದ್ದರು ಅದರಮೇಲೆ ಮುಂದಿನ ರಚನೆಗೆ ಆಧಾರವಾಗಿರುವಂತೆ ತಳ ಗುಂಡಾಗಿರುವ ಹಂಡೆ ಅಥವಾ ತಪ್ಪಲೆಯನ್ನು ದಬ್ಬು ಹಾಕಿ ಅದರ ಮೇಲೆ ಅಗಲವಾಗಿ ತಯಾರಾಗಿದ್ದ ಬುಟ್ಟಿಯ ತಳಭಾಗದ ಹೆಣಿಕೆಯನ್ನು ಇಡಲಾಗುತ್ತಿತ್ತು. ಪಾತ್ರೆಯನ್ನು ಆಧಾರವಾಗಿಟ್ಟುಕೊಂಡು ಬಿಗಿಯಾಗಿ ಬುಟ್ಟಿಯಂತೆ ಜಡೆಯನ್ನು ಸುತ್ತುತ್ತಾ ಸಾಕಷ್ಟು ಎತ್ತರದವರೆಗೂ ತರಲಾಗುತ್ತಿತ್ತು. ಸುಮಾರು ಒಂದೂವರೆ ಅಡಿಯಷ್ಟಾದಾಗ ಮೂಡೆಯನ್ನು ಉಲ್ಟಾಮಾಡಿ ಆಧಾರವಾಗಿರಿಸಿದ್ದ ಪಾತ್ರೆಯನ್ನು ಹೊರತೆಗೆಯುತ್ತಿದ್ದರು. ಆಗ ಮೂಡಿದ್ದ ಹೆಣಿಕೆಯಿಂದ ಮೂಡೆಯು ಗುಂಡಾಗಿ ಹಂಡೆಯ ತಳದಂತೆಯೇ ಕಾಣುತ್ತಿತ್ತು. ಆಗ ಇದರ ತಳಕ್ಕೆ ಮತ್ತು ಒಳಮೈಯಿಗೆ ನೆಲ್ಲು ಹುಲ್ಲನ್ನು ಜೋಡಿಸಿ ಇದರಲ್ಲಿ ಸಂಗ್ರಹಮಾಡಬೇಕಾದ ದಾನ್ಯ/ಕಾಳುಗಳನ್ನು ಸುರಿಂiiಲಾಗುತ್ತಿತ್ತು. ಸುಮಾರು ನಲವತ್ತರಿಂದ ಐವತ್ತು ಸೇರಿನಷ್ಟು ಧಾನ್ಯ ಸುರಿದ ನಂತರ ಮೇಲ್ಭಾಗದಲ್ಲಿಯೂ ಜಡೆಹಗ್ಗದಿಂದ ಬುಟ್ಟಿಯಾಕಾರದಲ್ಲಿ ಸುತ್ತುತ್ತಾ ಅಗಲನ್ನು ಕ್ರಮೇಣ ಕಿರಿದಾಗಿಸುತ್ತಾ ಕೊನೆಗೆ ಒಂದೇ ಕಡೆಗೆ ಕೊನೆಗೊಳ್ಳುವಂತೆ ಮಾಡಲಾಗುತ್ತಿತ್ತು. ಈಗ ಸುತ್ತ ನಕ್ಷತ್ರಾಕಾರವಾಗಿ ಹರಡಿದ್ದ ತೆಂಗಿನ ನಾರಿನಿಂದ ತಯಾರಿಸಿದ ಹಗ್ಗಗಳನ್ನು ಬಿಗಿಗೊಳಿಸುತ್ತಾ ಒಂದೇ ಕೇಂದ್ರಕ್ಕೆ ಬರುವಂತೆ ಭದ್ರಗೊಳಿಸಲಾಗುತ್ತಿತ್ತು. ಇವುಗಳಿಂದ ಮೂಡೆಯ ಬಾಯಿಯನ್ನು ಮುಚ್ಚುವ ಮೊದಲು ಒಳಭಾಗಕ್ಕೆ ಮತ್ತಷ್ಟು ನೆಲ್ಲುಹುಲ್ಲಿನಿಂದ ಮುಚ್ಚಲಾಗುತ್ತಿತ್ತು. ಹೀಗಾಗಿ ಒಳಗಿದ್ದ ಧಾನ್ಯ ಹೊರಕ್ಕೆ ಚೆಲ್ಲುತ್ತಿರಲಿಲ್ಲ. ಧಾನ್ಯಕ್ಕೆ ಕ್ರಿಮಿಕೀಟಗಳು ಬಾರದಿರಲೆಂದು ಅದನ್ನು ತುಂಬು ಮೊದಲು ಮೆನ್ನೆಚ್ಚರಿಕೆಯಾಗಿ ಬೇವಿನ ಸೊಪ್ಪು ಮತ್ತು ವಿಷಮದಾರಿ ಸೊಪ್ಪನ್ನು ಒಳಮೈಯಿಗೆ ಮತ್ತು ಮೇಲ್ಭಾಗದಲ್ಲಿ ಒತ್ತಾಗಿ ಹರಡಲಾಗುತ್ತಿತ್ತು. ಎಲ್ಲ ಹಗ್ಗಗಳನ್ನು ಬಿಗಿಗೊಳಿಸಿದಾಗ ಒದೊಂದು ದೊಡ್ಡ ಚೆಂಡಿನಾಕಾರ ತಾಳುತ್ತಿತ್ತು. ಆಗ ಮೂಡೆಯನ್ನು ಹಲಗೆಗಳ ಮೇಲೆ ಜೋಡಿಸಿಡಲಾಗುತ್ತಿತ್ತು. ಇಂತಹ ಹಲವಾರು ಮೂಡೆಗಳಲ್ಲಿ ರೈತರು ಧಾನ್ಯ/ಕಾಳುಗಳನ್ನು ಕೆಡದಂತೆ ಸಂಗ್ರಹಿಸಿ ಇಡುತ್ತಿದ್ದರು. ಇಷ್ಟೆಲ್ಲಾ ಸರ್ಕಸ್ ಈಗ ಅಗತ್ಯವಿಲ್ಲ. ಆದ್ದರಿಂದ ಇವೆಲ್ಲ ಕಣ್ಮರೆಯಾದವು ಹಾಗೂ ಮೂಡೆಕಟ್ಟುವ ಕೌಶಲ ಕೂಡ ಮರೆಯಾಯಿತು.
6. ಹಗೇವು ಅಥವಾ ಕಣಜ.: ಹೆಚ್ಚು ಪ್ರಮಾಣದ ಧಾನ್ಯಗಳನ್ನು ಬಹಳ ಕಾಲದವರೆಗೆ ಸಂಗ್ರಹಿಸಿಡಲು ಮನೆಗಳಲ್ಲಿ ಹಗೇವು ಅಥವಾ ಕಣಜಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಇದೂ ಕೂಡ ಅಂದಿನ ಕೌಶಲಪೂರ್ಣ ನಿರ್ಮಾಣ. ಹಗೇವನ್ನು ಸಾಧಾರಣವಾಗಿ ಕೊಠಡಿಯ ನಿರ್ದಿಷ್ಟ ನೆಲದಾಳದಲ್ಲಿ ನಿರ್ಮಾಣ ಮಾಡುತ್ತಿದ್ದರು. ನೆಲದೊಳಗಿನ ಉಗ್ರಾಣವೆನ್ನಬಹುದು. ಕೊಠಡಿಯ ನೆಲಹಾಸನ್ನು ಅಗೆದು ಕೊನೆಯ ಪಕ್ಷ ಐದರಿಂದ- ಐದೂವರೆ ಅಡಿಯ ವರೆಗೆ ತಗ್ಗನ್ನು ತೆಗೆಯುತ್ತಿದ್ದರು. ಈ ಗವಿಯ ಉದ್ದ ಅಗಲಗಳನ್ನು ಆವಶ್ಯಕತೆಯಂತೆ ನಿಗದಿಗೊಳಿಸುತ್ತಿದ್ದರು. ಇದರ ತಳಕ್ಕೆ ಕಲ್ಲಿನ ಚಪ್ಪಡಿಗಳನ್ನು ಚೊಕ್ಕವಾಗಿ ಗಚ್ಚು ಗಾರೆಗಳಿಂದ ಕೂಡಿಸಿ ಭದ್ರಪಡಿಸುತ್ತಿದ್ದರು. ಇದು ಕೆಳಗಿನಿಂದ ತೇವಾಂಶ ಬರದಂತೆ ತಡೆಯುತ್ತಿತ್ತು. ಈ ಗವಿಯಾಕಾರದ ಸುತ್ತಲಿನ ಗೋಡೆಗಳನ್ನೂ ಕೂಡ ಕಲ್ಲುಚಪ್ಪಡಿಗಳಿಂದ ಭದ್ರಪಡಿಸುತ್ತಿದ್ದರು ಆಗಿನ್ನೂ ಸಿಮೆಂಟಿನ ಉಪಯೋಗ ಹೆಚ್ಚಾಗಿರುತ್ತಿರಲಿಲ್ಲ. ಹಾಗಾಗಿ ನುಣ್ಣಗೆ ತಯಾರಿಸಿದ ಸುಣ್ಣಕಲ್ಲು, ಮರಳಿನ ಗಾರೆಯಿಂದಲೇ ಎಲ್ಲ ಭದ್ರಪಡಿಸುವ ಕೆಲಸ ನಡೆಯುತ್ತಿತ್ತು. ವರ್ಷಗಳ ನಂತರವೂ ಈ ಗಾರೆ ಹಾಗೆಯೇ ಭದ್ರವಾಗಿರುತ್ತಿತ್ತು. ಒಳಮೈಯನ್ನೂ ಸಂಪೂರ್ಣವಾಗಿ ನಯವಾಗಿ ಗಾರೆಯಿಂದಲೇ ಸಾರಣೆ ಮಾಡಿದಾಗ ನುಣುಪಾಗಿ ಕಾಣುತ್ತಿತ್ತು. ಒಳಗಿನ ಗವಿ ಸಿದ್ಧವಾದನಂತರ ಕೊಠಡಿಯ ನೆಲಹಾಸನ್ನು ಹಗೇವು ಪೂರ್ತಿಯಾಗಿ ಮುಚ್ಚುವಂತೆ ತೆಳ್ಳಗಿನ ಕಲ್ಲುಚಪ್ಪಡಿಗಳಿಂದ ಮುಚ್ಚಿ ಕೆಳಗಿಳಿಯಲು ಮಾತ್ರ ಮೂರು+ಮೂರು ಚಚ್ಚೌಕಾರ ಬಿಟ್ಟು ಉಳಿದಂತೆ ಮೇಲ್ಗಡೆಯೂ ಗಾರೆಯಿಂದ ಸಾರಣೆ ಮಾಡಿಬಿಡುತ್ತಿದ್ದರು. ಇದರಿಂದ ಹಗೇವಿನ ಬಾಯಿಯೊಂದನ್ನು ಬಿಟ್ಟು ಉಳಿದಂತೆ ಕೊಠಡಿಯ ನೆಲವೇನೂ ವ್ಯತ್ಯಾಸವಿಲ್ಲದಂತೆ ಕಾಣುತ್ತಿತ್ತು. ಈಗ ಹಗೇವಿನ ಬಾಯಿಯನ್ನು ಸರಿಯಾದ ಅಳತೆಗೆ ಕತ್ತರಿಸಿ ನಯಗೊಳಿಸಿದ ಕಲ್ಲಿನ ಮುಚ್ಚಳದಿಂದ ಮುಚ್ಚುತ್ತಿದ್ದರು. ಕೆಲ ದಿನಗಳು ಒಣಗಿದ ನಂತರ ಹಗೇವಿನಲ್ಲಿ ಕ್ರಮವಾಗಿ ರಾಗಿ, ಭತ್ತ, ಜೋಳ, ಬೇಳೆಕಾಳುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಶೇಖರಿಸಿಡುತ್ತಿದ್ದರು. ಹಗೇವಿನ ಗೋಡೆಯಂಚಿಗೆ ಬೇವಿನ ಸೊಪ್ಪು, ವಿಷಮದಾರಿ ಸೊಪ್ಪುಗಳನ್ನು ಕ್ರಿಮಿಕೀಟಗಳಿಂದ ರಕ್ಷಣೆಗಾಗಿ ಹರಡಿರುತ್ತಿದ್ದರು. ಧಾನ್ಯವನ್ನು ತೆಗೆಯಬೇಕಾದಾಗ ಬಾಯಿಗೆ ಮುಚ್ಚಿದ್ದ ಕಲ್ಲುಮುಚ್ಚಳವನ್ನು ತೆರೆದು ಸ್ವಲ್ಪ ಕಾಲದವರೆಗೆ ಗಾಳಿಯಾಡಲು ಬಿಡುತ್ತಿದ್ದರು. ನಂತರ ಹೆಣೆದ ಬುಟ್ಟಿಯೊಂದರಲ್ಲಿ ಹಣತೆಯ ದೀಪವೊಂದನ್ನು ದಾರದ ಸಹಾಯದಿಂದ ಹಗೇವಿನ ಒಳಕ್ಕೆ ಬಿಡುತ್ತಿದ್ದರು. ಅದು ಯಾವುದೇ ತೊಂದರೆಯಿಲ್ಲದೆ ಉರಿಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ಒಬ್ಬ ಮನುಷ್ಯನನ್ನು ಏಣಿಯ ಸಹಾಯದಿಂದ ಒಳಕ್ಕೆ ಇಳಿಸಲಾಗುತ್ತಿತ್ತು. ಆತನು ಬುಟ್ಟಿಯಿಂದ ಧಾನ್ಯ/ಕಾಳುಗಳನ್ನು ತುಂಬಿ ಮೇಲಕ್ಕೆ ಕೊಡುತ್ತಿದ್ದ. ಮತ್ತೊಬ್ಬರು ಅದನ್ನು ಎತ್ತಿ ಬೇರೆಕಡೆ ಸುರಿಯುತ್ತಿದ್ದರು. ಅಗತ್ಯವಿದ್ದಷ್ಟು ಧಾನ್ಯ ಮೇಲಕ್ಕೆ ತಂದನಂತರ ಒಳಗಿಳಿದಿದ್ದ ಮನುಷ್ಯ ಮೇಲಕ್ಕೆ ಬಂದು ಹಗೇವಿನ ಬಾಯನ್ನು ಮೊದಲಿನಂತೆ ಭದ್ರವಾಗಿ ಮುಚ್ಚಲಾಗುತ್ತಿತ್ತು. ಈ ರೀತಿಯ ಸಂಗ್ರಹಾಗಾರದಲ್ಲಿ ರಾಗಿ, ಭತ್ತ ಮೊದಲಾದುವನ್ನು ವರ್ಷಕ್ಕಿಂತಲೂ ಹೆಚ್ಚುಕಾಲ ಸುರಕ್ಷಿತವಾಗಿರಿಸಿದ್ದನ್ನು ನಾನು ಕಂಡಿದ್ದೇನೆ. ಈಗ ಹಗೇವು/ಕಣಜಗಳು ಆಧುನಿಕ ರೂಪ ತಳೆದಿದ್ದು ಹಳೆಯ ಸಾಧನಗಳು ಕಣ್ಮರೆಯಾಗಿವೆ.
7. ಕಡೆಗೋಲು: ರೈತರು ವ್ಯವಸಾಯದ ಜೊತೆಗೆ ಪಶುಪಾಲನೆಯ ಕೆಲಸವನ್ನೂ ಮಾಡುತ್ತಿದ್ದರು. ನಾನು ಕಂಡ ಕೆಲವರ ಮನೆಗಳಲ್ಲಿ ಹತ್ತಾರು ಆಕಳುಗಳು, ಎಮ್ಮೆಗಳು ಇದ್ದವು. ಅವುಗಳಿಂದ ಕರೆದ ಹಾಲನ್ನು ಹೆಪ್ಪಿಟ್ಟು ಮಾರನೆಯ ದಿನ ದೊಡ್ಡ ಕಡೆಗೋಲಿನಿಂದ ಕಡೆದು ಬೆಣ್ಣೆ ತೆಗೆಯುತ್ತಿದ್ದರು. ಇದು ಆಗಿನ ರೈತರ ಮನೆಯ ಗೃಹಿಣಿಯರ ದಿನಚರಿಯಾಗಿತ್ತು. ಬೆಣ್ಣೆ ತೆಗೆದ ಮೇಲೆ ಮಜ್ಜಿಗೆಯು ಅಪಾರ ಪ್ರಮಾಣದಲ್ಲಿರುತ್ತಿತ್ತು. ಇದನ್ನು ಹೊರಗಿನಿಂದ ಬಿಸಿಲಿನಲ್ಲಿ ಬಂದವರ್‍ಯಾರೇ ಆದರೂ ಅವರಿಗೆ ಕುಡಿಯಲು ಕೊಡುತ್ತಿದ್ದರು. ಧಾರಾಳವಾಗಿ ಬೇಡಿದವರಿಗೂ ಕೊಡುತ್ತಿದ್ದರು ಇನ್ನೂ ಹೆಚ್ಚಾದರೆ ದನಗಳಿಗೆ ಕುಡಿಸುವ ಕಲಗಚ್ಚಿಗೆ ಸುರಿಯುತ್ತಿದ್ದರು. ಆಗೆಲ್ಲ ಮೊಸರು ಮಾಡುತ್ತಿದ್ದುದು ಮತ್ತು ಅದನ್ನು ಕಡೆಯುವುದು ಮಣ್ಣಿನ ಮಡಕೆಗಳಲ್ಲಿ. ಆದ್ದರಿಂದ ಕಡೆಗೋಲಿನಿಂದ ಕಡೆಯುವವರು ಎಚ್ಚರಿಕೆಯಿಂದ ಕಡೆಯಬೇಕಾಗಿತ್ತು. ಒಂದುವೇಳೆ ಕಡೆಗೋಲೇನಾದರೂ ರಭಸದಿಂದ ಕಡೆಯುವಾಗ ಮಡಕೆಯ ಒಳಭಾಗಕ್ಕೆ ತಾಕಿದರೆ ಅದು ಒಡೆದು ಹೋಗುವ ಸಂಭವ ಹೆಚ್ಚು. ಹಾಗಾಗಿ ಇಲ್ಲಿಯೂ ಕೌಶಲ ಬೇಕಾಗುತ್ತಿತ್ತು. ಇಲ್ಲಿ ಕಡೆಗೋಲನ್ನು ಸ್ಥಳದಲ್ಲೇ ಹಿಡಿದಿಡುವಂತೆ ಅದರ ದಂಡವನ್ನು ಎರಡು ಕಡೆಗಳಲ್ಲಿ ಗೋಡೆಯಿಂದ ಚಾಚಿರುವ ಕೊಕ್ಕೆಗಳಿಗೆ ಸಿಕ್ಕಿಸಲಾಗುತ್ತಿತ್ತು. ಮೊಸರಿನ ಗಡಿಗೆಯನ್ನು ನೆಲದ ಮೇಲೆ ಅಳ್ಳಾಡದಂತೆ ಇರಿಸಿಕೊಳ್ಳುವ ಹುಲ್ಲಿನ ಸಿಂಬೆಗಳ ಮೇಲೆ ಇರಿಸಲಾಗುತ್ತಿತ್ತು. ಕಡೆಗೋಲಿನ ಮಧ್ಯಭಾಗದಲ್ಲಿ ದಾರವನ್ನು ಸುತ್ತಿದ್ದು ಅದು ಇಲ್ಲಿ ಅದಕ್ಕಾಗಿ ಮಾಡಿದ್ದ ಗೆರೆಗಳಲ್ಲಿಯೇ ಓಡಾಡುತ್ತಿತ್ತು ದಾರದ ಎರಡೂ ತುದಿಗಳನ್ನು ಕಡೆಯುವವರು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಲಯಬದ್ಧವಾಗಿ ಮುಂದೆ ಹಿಂದೆ ಎಳೆಯುತ್ತಿದ್ದರು. ಇದರಿಂದ ಕಡೆಗೋಲಿನ ದಂಡಕ್ಕೆ ಕೆಳಭಾಗದಲ್ಲಿ ಸಿಕ್ಕಿಸಿದ್ದ ಮಂತು ಮೊಸರನ್ನು ಕಡೆಯುತ್ತಿತ್ತು. ಬೆಣ್ಣೆ ತೇಲುವಂತೆ ಬರುವವರೆಗೂ ಈ ಕೆಲಸ ಮುಂದುವರೆಯುತ್ತಿತ್ತು. ನಂತರ ಬೆಣ್ಣೆಯನ್ನು ಬೇರ್ಪಡಿಸುತ್ತಿದ್ದರು. ಉಳಿದದ್ದು ಗಟ್ಟಿಯಾದ ಮಜ್ಜಿಗೆ. ಇದಕ್ಕೆ ಸಾಕಷ್ಟು ನೀರನ್ನು ಬೆರೆಸಿ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಈಗ ಹಾಲನ್ನೇ ಡೈರಿಗಳಿಗೆ ಹಾಕಿಬಿಡುದುದರಿಂದ ಕಡೆಗೋಲಿಗೆ ಕೆಲಸವೇ ಇಲ್ಲ. ಹಾಗಾಗಿ ಇದು ಅನುಪಯುಕ್ತವಾಗಿದೆ.
8. ಒತ್ತು ಶ್ಯಾವಿಗೆ ಒರಳು: ಇದನ್ನು ಮರದಿಂದ ತಯಾರಿಸಲಾಗುತ್ತಿತ್ತು. ವರ್ಷದಲ್ಲಿ ಒಂದೆರಡು ಬಾರಿ ಒತ್ತುಶ್ಯಾವಿಗೆ ತಿನಿಸನ್ನು ಗ್ರಾಮದ ಮನೆಗಳಲ್ಲಿ ತಯಾರಿಸುತ್ತಿದ್ದರು. ಅದರಲ್ಲೂ ಊರಿನ ಗ್ರಾಮದೇವತೆಯ ಜಾತ್ರೆಯ ದಿನ ನೂರಕ್ಕೆ ತೊಂಬತ್ತು ಮನೆಗಳಲ್ಲಿ ಒತ್ತುಶ್ಯಾವಿಗೆಯೇ ವಿಶೇಷ. ಅದರ ಕಾರಣ ನನಗೆ ತಿಳಿಯದು. ಇದನ್ನು ತಯಾರಿಸಲು ಬಳಸುತ್ತಿದ್ದ ಸಾಧನವನ್ನು ಗ್ರಾಮದ ಬಡಗಿಗಳೇ ಮರದಿಂದ ತಯಾರಿಸುತ್ತಿದ್ದರು. ಇದರ ತಂತ್ರಜ್ಞಾನವು ಸರಳ ಯಂತ್ರದಂತೆ. ನಾಲ್ಕು ಕಾಲಿನ ಮೇಲೆ ನಿಂತ ಬಲವಾದ ಬೋದಿಗೆ. ಅದರಲ್ಲಿ ಮಧ್ಯಭಾಗದಲ್ಲಿ ಶ್ಯಾವಿಗೆ ಹಿಟ್ಟನ್ನು ಹಾಕಲು ಅನುಕೂಲವಾಗುವಂತೆ ಅಳವಡಿಸಿದ ಒರಳಿನಂಥ ವ್ಯವಸ್ಥೆ. ಇದರ ತಳಭಾಗದಲ್ಲಿ ಸಣ್ಣಸಣ್ಣ ರಂಧ್ರಗಳಿರುವ ಲೋಹದ ಜಾಲರಿಯನ್ನು ಕೂಡಿಸಿರುತ್ತಿತ್ತು. ಬೋದಿಗೆಯ ಒಂದು ಕೊನೆಯಲ್ಲಿ ಅಳವಡಿಸಿದ ತಿರುಪಿಗೆ ಸೇರಿಸಿದ್ದು ಮೇಲೆ ಕೆಳಗೆ ಆಡಿಸಬಹುದಾಗಿದ್ದ ಒತ್ತುಗೆಯ ಭಾಗ ಹಿಡಿಸಮೇತ ಇತ್ತು. ಒರಳಿನಲ್ಲಿ ಕರಾರುವಾಕ್ಕಾಗಿ ಕೂಡುವಂತಹ ಒತ್ತನ್ನು ಕೂಡ ಮರದಿಂದಲೇ ಮಾಡಲಾಗುತ್ತಿತ್ತು. ಬೇಯಿಸಿದ ಶ್ಯಾವಿಗೆ ಹಿಟ್ಟನ್ನು ಉಂಡೆಮಾಡಿ ಒರಳಿನಲ್ಲಿ ಕೂಡಿಸಿ ಮೇಲಿನಿಂದ ಇಟ್ಟ ಒತ್ತುಗೆಯನ್ನು ಒಬ್ಬರು ಬಲವಾಗಿ ಒತ್ತುತ್ತಿದ್ದರು. ಆಗ ಹಿಟ್ಟು ಸಣ್ಣದಾದ ಶ್ಯಾವಿಗೆಯಾಗಿ ಜಾಲರಿಯಿಂದ ಕೆಳಗಿಳಿಯುತ್ತಿತ್ತು. ಅದನ್ನು ಇನ್ನೊಬ್ಬರು ದೊಡ್ಡ ತಟ್ಟೆಯೊಂದರಲ್ಲಿ ಹಿಡಿಯುತ್ತಾ ಚಕ್ರಾಕಾರವಾಗಿ ನಿಧಾನವಾಗಿ ಸಂಗ್ರಹಿಸುತ್ತಿದ್ದರು. ಇದನ್ನು ಒತ್ತು ಶ್ಯಾವಿಗೆಯ ಒಂದು ಕೊಂತ ಎಂದು ಕರೆಯುತ್ತಿದ್ದರು. ತೆಂಗಿನಕಾಯಿ, ಹುರಿಗಡಲೆ, ಅಲ್ಪ ಪ್ರಮಾಣದ ಹುರಿದ ಬಿಳಿ ಎಳ್ಳು, ಗಸಗಸೆ ಸೇರಿಸಿ ರುಬ್ಬಿದ ಮಿಶ್ರಣವನ್ನು ಕರಗಿಸಿ ಸೋಸಿದ ಬೆಲ್ಲದೊಂದಿಗೆ ಕುದಿಸುತ್ತಿದ್ದರು. ಇದಕ್ಕೆ ಏಲಕ್ಕಿ ಪುಡಿ ಬೆರೆಸಿದಾಗ ಸುವಾಸನಾಭರಿತ ಕಾಯಿಹಾಲು ( ಗ್ರಾಮೀಣ ಭಾಷೆಯಲ್ಲಿ ಕಾಯಾಲು) ಹಾಕಿಕೊಂಡು ತಿನ್ನುವುದಕ್ಕೆ ಅತ್ಯಂತ ರುಚಿಕರ ಖಾದ್ಯವಾಗಿತ್ತು. ಈ ಅಡುಗೆ ಎಷ್ಟೊಂದು ವಿಶೇಷತೆಯನ್ನು ಹೊಂದಿತ್ತೆಂದರೆ ಒಂದು ನಾಣ್ನುಡಿಯಾಗಿತ್ತು ಅತ್ತೆ ಮನೆಗೆ ಅಳಿಯ ಬಂದ ಒತ್ತಿರಣ್ಣ ಶ್ಯಾವಿಗೆಯ ಎಂದು ಹೇಳುತ್ತಿದ್ದರು. ಮಾವನ ಮನೆಗೆ ಬಂದ ಹೊಸ ಅಳಿಯನಿಗೆ ಇದು ವಿಶೇಷ ಆತಿಥ್ಯ ಎನ್ನಿಸಿತ್ತು. ಇಂದಿನ ಲೋಹದ ಶ್ಯಾವಿಗೆ ಯಂತ್ರಗಳು ಮಾರುಕಟ್ಟೆಯಲ್ಲಿ ಸಿಕ್ಕರೂ ಈ ಖಾದ್ಯವನ್ನು ಮಾಡುವವರು, ಇಷ್ಟಪಟ್ಟು ತಿನ್ನುವವರಿಲ್ಲದೆ ಮರದ ಶ್ಯಾವಿಗೆ ಒರಳು ಮೂಲೆಸೇರಿದೆ.
ನನಗೆ ಬಾಲ್ಯಕಾಲದಿಂದ ನೆನಪಿನಲ್ಲಿದ್ದ ಮತ್ತು ಈಗ ಉಪಯೋಗದಿಂದ ಮರೆಯಾಗಿರುವ ಕೆಲವು ಗ್ರಾಮೀಣ ಸಾಧನಗಳ ಬಗ್ಗೆ ನನ್ನ ಜೋಳಿಗೆಯಿಂದ ಹೆಕ್ಕಿ ಓದುಗರ ಮುಂದಿಟ್ಟಿದ್ದೇನೆ. ಇನ್ನೂ ಇಂತಹ ಎಷ್ಟೋ ವಿಶೇಷಗಳಿರಬಹುದು. ಹೆಚ್ಚು ತಿಳಿದವರು ಹೇಳಿದರೆ ನಮಗೂ ಪರಿಚಯವಾಗುತ್ತದೆ.
ವಿನಂತಿ: ಮೇಲ್ಕಂಡ ವಿವರಣೆಗಳು ಮತ್ತು ಅನುಭವಗಳು ನನ್ನ ಪತಿಯವರದ್ದು. ಅವರೇ ಹಳ್ಳಿಯಲ್ಲಿ ಇದ್ದವರು. ನನಗೆ ಕೆಲವು ಮಾಹಿತಿಗಳು ತಿಳಿದಿದ್ದರೂ ಪೂರ್ಣ ಪರಿಚಯವಿರಲಿಲ್ಲ. ಆದಕಾರಣ ಪೂಣನಿರೂಪಣೆಯನ್ನು ಅವರ ಮಾತಿನಲ್ಲಿಯೇ ಮಾಡಿಸಿದ್ದೇನೆ. ನಾನು ಲಿಪಿಕಾರಳು ಮಾತ್ರ.
-ಬಿ.ಆರ್.ನಾಗರತ್ನ. ಮೈಸೂರು.
ಅಬ್ಬಬ್ಬಾ..ನಿಮ್ಮವರ ನೆನಪಿನ ಖಜಾನೆಯಲ್ಲಿ ಅದೆಷ್ಟು ಅಮೂಲ್ಯ ಭಂಡಾರವಿದೆ! ನಿರೂಪಣೆ ಸೂಪರ್
ಧನ್ಯವಾದಗಳು ಗೆಳತಿ ಹೇಮಾ..ನಿಮ್ಮ ಬಾಯಿಂದ ಬಂದ ಆ ಜೋಳಿಗೆ ಎಂಬ ಪದದಿಂದ ಇಷ್ಟು ವಿಷಯ ಹೊರಗೆ ತರಿಸಿದೆ..ಪ್ರಕಟಿಸಿದಕ್ಕೆ ಧನ್ಯವಾದಗಳು
ಅದೆಷ್ಟೊಂದು ಮಾಹಿತಿ ಪೂರ್ಣ, ಸೂಪರ್
ಅಮೂಲ್ಯ ಭಂಡಾರ! ನಿರೂಪಣೆ ಚೆನ್ನಾಗಿದೆ!
ಧನ್ಯವಾದಗಳು ಪದ್ಮಿನಿ ಮೇಡಂ
ಧನ್ಯವಾದಗಳು ನಯನ ಮೇಡಂ
ನೆನಪಿನ ಜೋಳಿಗೆಯೊಳಗಿಂದ ಜೋಳಿಗೆ ಸಹಿತ ಹೊರ ಬಂದ ಅಮೂಲ್ಯ ವಸ್ತುಗಳು ಈಗ ವಸ್ತು ಸಂಗ್ರಹಾಲಯವನ್ನು ಸೇರಿರಬಹುದು ಅನ್ನಿಸುತ್ತದೆ. ಚಂದದ ಬರಹಕ್ಕೆ ನಿಮ್ಮ ರೇಖಾಚಿತ್ರಗಳು ಇನ್ನಷ್ಟು ಮೆರುಗನ್ನು ನೀಡಿವೆ, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಶರ್ಮ..ಮೇಡಂ
ಲೇಖನ ಮಾಹಿತಿ ಪೂರ್ಣ ವಾಗಿದ್ದು ನಿರೂಪಣೆ ಸುಂದರವಾಗಿದೆ
ಧನ್ಯವಾದಗಳು ಗಾಯತ್ರಿ ಮೇಡಂ