ಏಕಾಂಗಿ ಬದುಕು -2: ಏಕಾಂಗಿಯ ಬದುಕಲ್ಲಿ ಕಬ್ಬ ತಂದ ಹಬ್ಬ
ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ.
ಇದು ಎಲ್ಲರನ್ನೂ ಆವರಿಸುವುದಿಲ್ಲ. ಕೆಲವರನ್ನು ಮಾತ್ರ ಆವರಿಸುತ್ತದೆ ಅಲ್ಲವೇ. ನೋಡಿದ್ದು, ಕೇಳಿದ್ದು,ಕಲ್ಪಿಸಿದ್ದು, ಕಲ್ಪನೆಗೂ ಮೀರಿದ್ದು , ತೋಚಿದ್ದು, ಗೀಚಿದ್ದು, ಅನುಭವಿಸಿದ್ದು, ಕಲಿತದ್ದು, ಕಲಿಯ ಹೊರಟಿದ್ದು, ಕಲಿವಿನ ಅಂತರಂಗಕೆ ಜೊತೆಯಾದುದು ಎಲ್ಲ ಬರೆಹಗಳೂ ಒಂದಕ್ಕಿಂತ ಒಂದು ಅದ್ಭುತವೇ. ಬೆಚ್ಚನೆಯ ಎದೆ ಗೂಡಲ್ಲಿ ಬೆಚ್ಚಗೆ ಅವಿತುಕುಳಿತ ಪದಗಳು, ಬಿಳಿಹೃದಯದ ಮೇಲೆ ಸಾಲು ಸಾಲಾಗಿ ಕಪ್ಪು ಶಾಯಿಯಲ್ಲಿ ಹೊರಬಂದ ಪದ ಮೊಟ್ಟೆಗಳು ಮರಿಯ ಹಂತದಲ್ಲಿ ಹೊರಬಂದಾಗ ನನಗೆ ಹದಿನಾರು. ಹದಿನಾರರ ಹರೆಯ ಹುಡುಕಿಹೊರಟಿದ್ದು ಪ್ರೀತಿಸುವ ಹುಡುಗನನ್ನಲ್ಲ. ಹರೆಯಕೆ ತೋಚುವ ಬರೆಹವನ್ನು.ಸಿಕ್ಕಿದ್ದು ಗೀಚುವ ಅಂದಿನ ವಯಸ್ಸಿಗೆ ಕಲ್ಪನೆಯೇ ಕವಿತಾ ಶಕ್ತಿಯಾಗಿತ್ತು. ಆಕಾಶ, ಸೂರ್ಯ, ನೀರು, ಹೂವು,ಕೊಳ, ಕೆರೆ, ಸ್ನೇಹ ಹೀಗೆ ಸಿಕ್ಕಿದ, ನೋಡಿದ ವಸ್ತು ವಿಷಯಗಳು ನನ್ನ ಕೈಬೆರಳ ಲೇಖನಿಯಲ್ಲಿ ಅರ್ಥವಿಲ್ಲದ ಕವನವಾಗಿದ್ದವು. ಬರುಬರುತ್ತಾ ಓದಿನ ಜ್ಞಾನ, ಅನುಭವವು ಬರವಣಿಗೆಯ ಶಕ್ತಿಯಾಯಿತು. ಆ ಬರವಣಿಗೆಯ ಹಿಂದೆ ಲೇಖನಿ ಕೆಲಸಮಾಡುವುದು ಸುಲಭದ ಮಾತೇ ಅಲ್ಲ….ಬರೆದ ಪದವು ಜೋಡಿಕೆಯಾಗಿ, ಹೊಂದಿಕೆಯಾಗಿ,ಅಳಿಸಿ ತಿದ್ದಿ,ನಾಕು ಸಾಲು ಮೂಡುವ ಅಂದಿನ ಪರಿ ಅದೇನೋ ಮುಜುಗರ. ಬರೆದ ನಂತರ ನನ್ನೊಳಗೆ ಇಂಥ ಒಂದು ಶಕ್ತಿ ಇದೆಯ ಅಂತ ಅನಿಸಿ ನನಗೆ ನಾನೇ ಬೀಗುತ್ತಿದ್ದೆ. ನಾಲ್ಕು ಸಾಲು ಎಂಟಾಗಿ, ಹದಿನಾರಾಗಿ ಲಂಬಿಸುವ ಜಾಣ್ಮೆಗೆ ಅಂದು ಶಕ್ತಿ ಮೂಡಿಸಿದ ಪರಿ ಸುಲಭದ ಮಾತೇ ಅಲ್ಲ…….
ಬರೆದ ಪದವು ಗುಂಪುಗಳಾಗಿ,ತ್ರಿಪದಿಯಾಗಿ, ಚೌಪದಿಯಾಗಿ, ಸುನೀತವಾಗಿ, ಗಝಲ್ ಗಳಲ್ಲಿ ಗೆಜ್ಜೆಯಾಗಿ ಮಾರ್ಧನಿಸಿ, ಅಲಂಕಾರವಾಗಿ ಸಿಂಗರಗೊಂಡ ಕಾವ್ಯ ಕನ್ನಿಕೆಯಾಗಿ, ಛಂದಸ್ಸಾಗಿ ಚಂದಗೊಂಡು, ಪ್ರಾಸವಾಗಿ ತಾಳಹಿಡಿದು, ಷಟ್ಪದಿಯಾಗಿ ಸರಾಗವಾಗಿ ಪದಗಳು ಮೂಡಿ ಕವನವಾಗುವುದು ಸುಲಭದ ಮಾತೇ ಅಲ್ಲ……..ಭಾವನೆಗಳು ಲಜ್ಜೆಗಟ್ಟಿ ಪ್ರೇಮ ಗೀತೆಯಾಗಿ,ಭಾವವೊಂದು ತಾಕಲಾಟದ ಮಧ್ಯೆ ನುಸುಳಿ ಭಾವಗೀತೆಯಾಗಿ, ರಾಗ ಮೀಟಿ ಅನುರಾಗದ ಹಾದಿಯಲ್ಲಿ ಎದುರು ಕಳಿತ ಪ್ರೇಮಿಯಲ್ಲಿ ಕಚಗುಳಿಯ ಪಲ್ಲವಿಸಿ ಹಾಡಿದಂಥ ಕವಿತೆಸಾಲು ನನ್ನೊಳಗೊಂದು ಮೇಳೈಸಿ ಬರುವುದು ಸುಲಭದ ಮಾತೇ ಅಲ್ಲ…….ಆದಿಪ್ರಾಸವೊಂದು ಕುಳಿತು ಅಂತ್ಯದ ಪದದ ಅರ್ಥದಲ್ಲಿ ಮಿಳಿತವಾಗಿ ಹೆಣೆದ ನಾಕು ಸಾಲು ಜಾನಪದವಾಗಿ, ಕೋಲು ಹಿಡಿದು ಕುಣಿವ ಕುಣಿತವಾಗಿ, ಬಡಿತಕ್ಕೊಂದು ಮಿಡಿತ ಹಚ್ಚಿ , ಥಕಧಿಮಿತದ ಕುದಿತವಾಗಿ, ತಮಟೆನಾದದೊಳಗೆ ಬೆರೆತ ಪದಗಳು ಬರುವುದು ಸುಲಭದ ಮಾತೇ ಅಲ್ಲ…..
ನಲ್ಲೆಯ ಕಣ್ಣೊಳಗೆ ಇಣುಕಿ,ಬಂಧಿಯಾದ ಮನವೊಂದು ಹಾಡು ಕಟ್ಟಿ,ಭಾವಯಾನದೊಳಗೆ ತೇಲಿ,ಹಲವು ರೂಪ ಪಡೆದುಕೊಂಡು, ಗುಳಿ ಗಲ್ಲ, ಕದಪುಗಳ ಚೆಲುವೊಳಗೆ ಮಿಂದು , ನಾಸಿಕದ ನತ್ತು ಕೊಟ್ಟ ಹತ್ತು ಮಾತ ತಂದು, ನೇವರಿಸುವ ಹೆರಳ ಜೊತೆ ದನಿಯಾದ ಪದವೊಂದು,ತುಟಿಯಂಚಲಿ ಗಾನವಾಗಿ ಬರುವ ಪದಗಳ ಹೆಕ್ಕುವುದು ಸುಲಭದ ಮಾತೇ ಅಲ್ಲ……ಎದೆ ಝಲ್ ಎನ್ನುವ ಗಝಲ್ ನ ಶಾಯರಿಗಳು ಕಿವಿಯೊಳಗೆ ಪಿಸುನುಡಿದು, ಎದೆಯೊಳಗೆ ಮಾರ್ದನಿಸಿ, ಧ್ವನಿತಕ್ಕೊಂದು ಅರ್ಥವಿತ್ತು, ಕಟ್ಟಿಕೊಟ್ಟ ಭಾವಬಿಂಬದ ಅವತರಣಿಕೆಯ ಗಝಲ್ ನೊಳಗೆ ಸಿಲುಕಿ, ಓದುಗರ ಎದೆಬಡಿತದಿಂದೆದ್ದು, ವಾವಾವಾವ್ ವಾದನದ ನಾದವಾದ, ಗಾಂಧಾರ ಕಲೆಯಲ್ಲಿ ಅದ್ದಿದಂಥ ಸೊಗವಿರುವ ಗಝಲ್ ಶಾಯರಿಗಳ ಗಂಧ ಮೂಡಿಸುವುದು ಸುಲಭದ ಮಾತೇ ಅಲ್ಲ….. ಕೈಕೊಟ್ಟ ಪ್ರೇಮಿಯ ಮಾನಸಿಕ ಯಾತನೆಯೊಂದು ಅವರ್ಣನೀಯ. ಪ್ರೀತಿ ಒಂಥರಾ ಅವರ್ಣನೀಯವಾದರೆ, ವಿರಹ ಒಂಥರಾ ಅವರ್ಣನೀಯ. ನೋವುಗಳು ಹೃದಯದ ನೋವಲ್ಲಿ ಬೆರೆತು, ನೋವು, ಹತಾಶೆಗಳಿಂದ ಕೂಡಿದ ಪ್ಯಾಥೋ ಕವನಗಳು ಕಣ್ಣೀರು ತರಿಸುವುದು ಸುಲಭದ ಮಾತೇ ಅಲ್ಲ….ಹೆಣ್ತನದ ಪ್ರತೀಕವಾಗಿ ತಾಯ್ತನವ ತಂದಿಡುವ ನವಮಾಸದ ಗುನುಗು ಪ್ರೀತಿ ,ವಾತ್ಸಲ್ಯ ,ಮಮತೆಯಾಗಿ,ಹೆಪ್ಪುಗಟ್ಟಿದ ರಕ್ತಕೆ ಜೀವತುಂಬುವಾಗ ಕರುಳಿನ ಸಂಬಂಧಕೆ ಲಾಲಿ ಪದವ ಕಟ್ಟಿ ಜೋಗುಳ ಹಾಡುವ ಹಾಡು ಬರುವುದು ಸುಲಭದ ಮಾತೇ ಅಲ್ಲ…..
ಹೀಗೆ ಪ್ರತೀ ಹಂತದಲ್ಲೂ ಬೆಳೆವಂತಹ ಕಥೆ, ಕವನದ ಸಾಲುಗಳು ಯಾವುದೋ ಮದುವೆ, ಸಂಭ್ರಮ, ಜಾತ್ರೆ,ಸಂತೆ, ಮಸಣದ ನಡುವಿನ ಘಟನೆಗಳು,ಅನುಭವಗಳು ನೆನಪಾದರೂ ಅದು ಕವನವಾಗಲು, ಸುಂದರ ಹಾಡಾಗಿ ಮರೆಯದ ರಾಗವಾಗಿ ನಮ್ಮೆದೆಯಲ್ಲಿ ಉಳಿಯಲು, ಕಥೆಯಾಗಿ ಓದುಗರೆದೆಯಲ್ಲಿ ಭಾವನೆಗಳು ಮಡುಗಟ್ಟುವಂತಾಗಲು, ಸಿನಿಮಾಗಳಲ್ಲಿ ಧ್ವನಿಸಿ ಶಾಶ್ವತವಾಗಿ ನೆಲೆನಿಲ್ಲುವಂತಹ ಒಂದು ಅಸ್ತಿತ್ವವನ್ನು ತಂದುಕೊಡಲು, ಸದಾ ಪ್ರಶಾಂತವಾಗಿರುವ ವಾತಾವರಣವನ್ನು ಸೃಷ್ಟಿಮಾಡಿಕೊಳ್ಳುತ್ತೇವೆ.
ಆನಂತರವೇ ಒಂಟಿಯಾಗಿ ಸೃಷ್ಟಿ ಮಾಡಿಕೊಂಡ ಸಂಗತಿಗಳನ್ನು ನಾಲ್ಕು ಜನರ ಮುಂದೆ ಇಟ್ಟು ಸರಿ, ತಪ್ಪುಗಳ ವಿಶ್ಲೇಷಣೆ ನಡೆಸುತ್ತೇವೆ. ನಾಲ್ಕು ಜನರಲ್ಲಿ ಖುಷಿ, ದುಃಖಗಳನ್ನು ಹಂಚಿಕೊಳ್ಳುತ್ತೇವೆ.ಆದರೆ ಒಳಗೊಳಗೇ ಹುಟ್ಟಿದ ಹಮ್ಮು ಬಿಮ್ಮುಗಳು, ಅನುಭವಿಸುವ ಯಾವುದೇ ಭಾವನೆಗಳನ್ನು ಹೊರಹಾಕಲು ಬಿಡುವುದಿಲ್ಲ. ಅದನ್ನೂ ಏಕಾಂತವಾಗಿಯೇ ಫೀಲ್ ಮಾಡುವ ಎಷ್ಟೋ ಜನರನ್ನು ನಾವು ನೋಡಿದ್ದೇವೆ.ಏಕಾಂಗಿಯ ಬದುಕಿನ ಹೋರಾಟದ ಮಜಲುಗಳನ್ನು ಹೊತ್ತು, ಮತ್ತಷ್ಟು ಮುದಕೊಡುವ ಸಂಗತಿಗಳನ್ನು ಮುಂದಿನ ಸಂಚಿಕೆಯಲ್ಲಿ ತರುವೆ. ಹೊಸ ವಿಷಯದೊಂದಿಗೆ ಬರುವೆ. ನಿಮಗೆ ಇಷ್ಟವಾದರೆ ಓದಿ ಪ್ರತಿಕ್ರಿಯಿಸಿ.
ಧನ್ಯವಾದಗಳು ಎಲ್ಲರಿಗೂ.
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ.
ಲೇಖನ ಚೆನ್ನಾಗಿದೆ ಸೋದರಿ..
ಧನ್ಯವಾದಗಳು ಮೇಡಂ
Nice one
ಧನ್ಯವಾದಗಳು ಮೇಡಂ
ಬರಹ ಚೆನ್ನಾಗಿದ್ದು ಓದಿಸಿಕೊಂಡುಹೋಗುತ್ತದೆ. ಭಾಷೆಯ ಮೇಲೆ ಹಿಡಿತ ಗಳಿಸಿಕೊಂಡಿದ್ದೀರಿ.
ಧನ್ಯವಾದಗಳು ಸರ್
ಧನ್ಯವಾದಗಳು ಮೇಡಂ
ಧನ್ಯವಾದಗಳು ಓದುಗರಿಗೆ
ಕಾವ್ಯಾತ್ಮಕ ಭಾವದ ಲೇಖನ ಪರಿ ಅನನ್ಯ ವಾಗಿದೆ
ಎಲ್ಲಾ ಪ್ರಕಾರಗಳಲ್ಲೂ ವಿವಿಧ ರಚನೆಗಳು ಮೂಡುವ ವಿಶ್ವಾಸವನ್ನು ವ್ಯಕ್ತಪಡಿಸಿದ ಲೇಖನ ಚೆನ್ನಾಗಿದೆ.