ಗೋಪುರಗಳ ನಾಡಿನಲ್ಲಿ…ಹೆಜ್ಜೆ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಧುರೈ ಮೀನಾಕ್ಷಿ ಮಂದಿರ – 04/10/2023
ಮುಕ್ಕುರ್ನಿ ವಿನಾಯಗರ್

ನಮ್ಮ ಜೊತೆ ಇದ್ದ ಸ್ಥಳೀಯ ಮಾರ್ಗದರ್ಶಿ ಹಾಗೂ ಟ್ರಾವೆಲ್ಸ್4ಯು ಬಾಲಕೃಷ್ಣ ಅವರು, ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ತಿಳಿಸಿದ ಕೆಲವು ವಿಶೇಷ ಮಾಹಿತಿಗಳು ಹೀಗಿವೆ:

1. ದೇವಾಲಯದ ಆವರಣದಲ್ಲಿ ಒಟ್ಟು 108 ಗಣಪತಿ, 108 ಕಾರ್ತಿಕೇಯ ಹಾಗೂ 108 ಶಿವನ ವಿಗ್ರಹಗಳಿವೆ.

2. ಇಲ್ಲಿರುವ ಆಕರ್ಷಕವಾದ ‘ನಟರಾಜ’ನ ವಿಗ್ರಹವನ್ನು, ಶಿವನು ಬಲಗಾಲಿನಿಂದ ನೃತ್ಯ ಮಾಡುತ್ತಿರುವಂತೆ ಕೆತ್ತಲಾಗಿದೆ.. ಸಾಮಾನ್ಯವಾಗಿ, ನಟರಾಜನ ವಿಗ್ರಹಗಳಲ್ಲಿ ಎಡಗಾಲಿನಲ್ಲಿ ನೃತ್ಯ ಮಾಡುವ ಕೆತ್ತನೆಯಿರುತ್ತದೆ.

3. ಮೀನಾಕ್ಷಿ-ಸುಂದರೇಶ್ವರರ ಮದುವೆಗೆ ರಾಜ-ರಾಣಿಯರು ತಮ್ಮ ಅಂತಸ್ತಿಗೆ ತಕ್ಕಂತೆ ಬಹಳ ಅದ್ದೂರಿಯ ಭೋಜನ ಏರ್ಪಡಿದ್ದರಂತೆ. ಸುಂದರೇಶ್ವರನು ತನ್ನೊಂದಿಗೆ ಸಾಕಷ್ಟು ಜನರನ್ನು ದಿಬ್ಬಣದಲ್ಲಿ ಕರೆತರಲಿಲ್ಲ, ಮಾಡಿದ ಅಡುಗೆ ವ್ಯರ್ಥವಾಗುತ್ತದೆ ಎಂದು ರಾಣಿ ಕೊಂಕು ನುಡಿದಳಂತೆ. ಆಗ ಶಿವನು ತನ್ನ ಗಣದಲ್ಲಿ ಒಬ್ಬನಾದ ‘ಗುಂಡೋದರ’ನಿಗೆ ಅದಮ್ಯ ಹಸಿವೆಯಾಗುವಂತೆ ಮಾಡಿದ. ಅತಿಥೇಯರು ಮಾಡಿದ ಅಡುಗೆಯನ್ನೆಲ್ಲಾ ತಂದು ಬಡಿಸಿದರೂ, ಗುಂಡೋದರನ ಹಸಿವು ಇಂಗಲೇ ಇಲ್ಲ. ಆಗ ರಾಣಿಯ ಅಹಂ ಇಳಿಯಿತು.ಆಮೇಲೆ ಶಿವನ ಕೃಪೆಯಿಂದ ಗುಂಡೋದರ ಹಸಿವೂ ಇಂಗಿತು. ಈ ಹಿನ್ನೆಲೆಯಲ್ಲಿ, ಡೊಳ್ಳುಹೊಟ್ಟೆಯ ಗುಂಡೋದರ, ಬಕಾಸುರನಂತೆ ಊಟ ಮಾಡುವ ಶಿಲ್ಪ ಚೆನ್ನಾಗಿದೆ.

4. ಮುಕ್ಕುರ್ನಿ ವಿನಾಯಗರ್ : ಮೀನಾಕ್ಷಿ ಮಂದಿರದಲ್ಲಿ 7 ಅಡಿ ಎತ್ತರದ ಕಪ್ಪು ಶಿಲೆಯಿಂದ ಮಾಡಿದ ಸೊಗಸಾದ ‘ಮುಕ್ಕುರ್ನಿ ವಿನಾಯಗರ್’ ಎಂದು ಕರೆಯಲ್ಪಡುವ ಗಣಪತಿಯ ವಿಗ್ರಹವಿದೆ. ಗಣೇಶ ಚೌತಿಯಂದು ಇಲ್ಲಿ ಬಹಳಷ್ಟು ಜನರು ಸೇರುತ್ತಾರೆ. ಆದಿನ ‘ಮುಕ್ಕುರ್ನಿ ವಿನಾಯಕ’ನಿಗೆ ದೈತ್ಯಗಾತ್ರದ ಒಂದು ಕೊಜುಕಟ್ಟೈ (ಲಡ್ಡು/ಮೋದಕ)ವನ್ನು ಸಮರ್ಪಿಸುವುದು ಬಹಳ ವಿಶಿಷ್ಟ .ಇದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯ್ಕಕರವಾದ ಕಥೆಯೊಂದಿದೆ. ಒಮ್ಮೆ. ತನ್ನ ಪಾಡಿಗೆ ದೊಡ್ಡ ಹೊಟ್ಟೆ ನೇವರಿಸಿಕೊಂಡು ಇದ್ದ ಗಣಪತಿಯನ್ನು ‘ಸೋಮಾರಿ’ ಎಂದು ದೇವತೆಗಳು ಲೇವಡಿ ಮಾಡಿದರಂತೆ. ಹಾಗಾಗಿ, ಕುಪಿತನಾದ ಗಣಪತಿಯು, ತನ್ನ ಭಕ್ತನೊಬ್ಬನ ಮನೆಗೆ ಬಾಲಕನ ರೂಪದಲ್ಲಿ ಬಂದು ಯಾವುದಾದರೂ ಕೆಲಸ ಕೊಡಿ ಅಂದನಂತೆ. ಅವರು ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡಿದ ಬಾಲಕನಿಗೆ ಪ್ರತಿಯಾಗಿ ಏನು ಬೇಕೆಂದಾಗ, ಮುಗ್ಧ ಬಾಲಕನು ‘ ಮೂನು ಕುರ್ನಿ ‘ ಅಕ್ಕಿ ಕೇಳಿದನಂತೆ. ಒಂದು ಕುರ್ನಿ ಅಂದರೆ ಆಗಿನ ಕಾಲದಲ್ಲಿ ತಮಿಳಿನಾಡಿನಲ್ಲಿ ಬಳಸುತ್ತಿದ್ದ ಅಳತೆಯ ಮಾಪನ, ಅಂದಾಜು 10 ಕೆ.ಜಿ. ಹೀಗೆ ಮೂರು ಕುರ್ನಿ ಅಕ್ಕಿ ಪಡೆದ ಗಣಪತಿಯು ‘ಮುಕ್ಕುರ್ನಿ ವಿನಾಯಗರ್’ ಆದ. ಈ ಹಿನ್ನೆಲೆಯಲ್ಲಿ, ಗಣೇಶ ಚೌತಿಯಂದು, 32 ಕೆ.ಜಿ ಅಕ್ಕಿಯಿಂದ ತಯಾರಿಸಿದ ದೈತ್ಯಗಾತ್ರದ ಒಂದೇ ಲಡ್ಡು/ಮೋದಕವನ್ನು ಬಟ್ಟೆಯಲ್ಲಿ ಕಟ್ಟಿ, ಕೋಲಿಗೆ ಸಿಕ್ಕಿಸಿ ಹೆಗಲಿನಲ್ಲಿ ಹೊತ್ತು ತರುತ್ತಾರೆ ಹಾಗೂ ಅದನ್ನು ಆಮೇಲೆ ನೆರೆದಿದ್ದ ಭಕ್ತರಿಗೆ ಪ್ರಸಾದವಾಗಿ ಹಂಚುತ್ತಾರೆ.

PC : Internet

ಮಧುರೈ ದೇವಾಲಯದಲ್ಲಿ 33000 ಕ್ಕೂ ಹೆಚ್ಚು ಶಿಲ್ಪಗಳಿವೆಯಂತೆ. ಹಾಗಾಗಿ ಇಲ್ಲಿ ಇನ್ನಷ್ಟು ಸಮಯ ಇದ್ದರೆ ಉತ್ತಮವೆನಿಸಿತು. ಆದರೆ ನಮ್ಮ ಪ್ರಯಾಣ ಮುಂದುವರಿಯಲೇ ಬೇಕಷ್ಟೇ…ಬಸ್ಸು ರಾಮೇಶ್ವರದತ್ತ ಮುಖ ಮಾಡಿತು.

ಈ ಬರಹದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=39314

(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು

4 Responses

  1. ಎಂದಿನಂತೆ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು… ನನಗಿಷ್ಟವಾದ ದಂತಕಥೆಯಿಂದ ಇನ್ನಷ್ಟು ಮುದಕೊಟ್ಟಿತು… ಗೆಳತಿ ಹೇಮಾ..

  2. ನಯನ ಬಜಕೂಡ್ಲು says:

    ಬಹಳ ಸುಂದರ

  3. ಶಂಕರಿ ಶರ್ಮ says:

    ಗುಂಡೋದರನ ಕಥೆ ಕೇಳಿದಾಗ, ಕುಬೇರನ ಗರ್ವ ಮುರಿದ ಗಣಪತಿಯ ಕಥೆ ನೆನಪಾಯಿತು… ಲೇಖನ ಹಾಗೂ ಪೂರಕ ಚಿತ್ರಗಳು ಎಂದಿನಂತೆ ಚಂದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: