ವಾವ್!ಇದು ಅದಾಲಜ್ ನಿ ವಾವ್!!
ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದಾಗ, ಭೇಟಿ ನೀಡಿದ ಅದಾಲಜ್ ನಿ ವಾವ್ ಬಗ್ಗೆ ಈ ಲೇಖನ.
“ಇಲ್ಲೇ ಹತ್ತಿರದಲ್ಲಿ ನಾವು ನೋಡಲೇ ಬೇಕಾದ ಜಾಗ ಒಂದಿದೆ. ಹೇಗೂ ಇಷ್ಟು ದೂರ ಬಂದಿದ್ದೇವೆ. ನೋಡಿಕೊಂಡು ಬರೋಣ ಆಗದೇ?” ನಮ್ಮ ಜೊತೆ ಬಂದಿದ್ದ ರಮೇಶ್ ಸರ್ ಹೇಳಿದಾಗ “ಯಾವ ಜಾಗ ಸರ್?” ಅಂದಾಗ “ನಿಮಗೆಲ್ಲಾ ಸರ್ ಪ್ರೈಸ್” ಅಂದರು. “ಸರಿ ಸರ್, ಹೋಗೋಣ” ಅಂತ ರಿಕ್ಷಾ ಏರಿ ಹೊರಟು ಬಿಟ್ಟೆವು. ಗುಜರಾತಿನಲ್ಲಿರುವ ಶೇರ್ ಆಟೋದ ಚಾಲಕರು ಬಹಳ ಶ್ರಮಜೀವಿಗಳು ಹಾಗೆಯೇ ಹೃದಯವಂತರು. ರಿಕ್ಷಾ ಬಾಡಿಗೆ ತೀರಾ ಕಡಿಮೆಯೇ. ಮಂಗಳೂರಿನಲ್ಲಿ ರಿಕ್ಷಾ ಹತ್ತಿದರೆ, ಕನಿಷ್ಟ ದೂರಕ್ಕೂ 35 ರೂಪಾಯಿನೀಡಿ ರೂಢಿ. ಆದರೆ ಇಲ್ಲಿ ಏಳೆಂಟು ಕಿಲೋಮೀಟರ್ ನ್ನು ಶೇರ್ ಆಟೋದಲ್ಲಿ ಕೇವಲ ಹತ್ತು ರೂಪಾಯಿ ನೀಡಿ ಸಂಚರಿಸಬಹುದು. ರಿಕ್ಷಾದಲ್ಲಿ ಹೋಗುತ್ತಿರುವಾಗ ರಮೇಶ್ ಸರ್ ನೇರಳೆ ಬಣ್ಣದ ನೂರು ರೂಪಾಯಿ ನೋಟನ್ನು ತೆಗೆದು, “ಈ ನೋಟಿನ ಹಿಂದೆ ಒಂದು ಚಿತ್ರ ಇದೆ. ಆ ಜಾಗಕ್ಕೆ ನಾವೀಗ ಹೋಗುತ್ತಿದ್ದೇವೆ” ಅಂದರು. ನೋಟಿನಲ್ಲಿ ರಾಣಿ ಕಾ ವಾವ್ ಅಂತ ಮುದ್ರಿತವಾಗಿರುವುದನ್ನು ಇಲ್ಲಿಯ ತನಕ ಗಮನಿಸಿರಲಿಲ್ಲ. ಒಂದು ಐತಿಹಾಸಿಕ ಸ್ಥಳವನ್ನು ನೋಡಲಿದ್ದೇವೆ ಅನ್ನುವುದು ಖಾತರಿಯಾಯ್ತು. ನಿಗದಿತ ಪ್ರವೇಶಧನ ನೀಡಿ, ಆವರಣದ ಒಳ ಹೊಕ್ಕೆವು. ರೂಡಾಬಾಯಿ ಸ್ಟೆಪ್-ವೆಲ್ ಅಂತ ಬರೆದ ಫಲಕ ಕಂಡಾಗ ರಾಣಿಯ ಹೆಸರು ರೂಡಾಬಾಯಿ ಇರಬೇಕು ಅಂದುಕೊಂಡೆವು. ಉದ್ಯಾನದಂತೆ ತೋರುವ ಜಾಗಕ್ಕೆ ಬಂದಿದ್ದೇವೆ, ಏನೂ ವಿಶೇಷ ಕಾಣಿಸ್ತಾ ಇಲ್ಲವಲ್ಲಾ ಅಂತ ಅನ್ನಿಸಿತು. ಯಾರಾದರೂ ಮಾರ್ಗದರ್ಶಿ ಸಿಕ್ಕಿದರೆ ಒಳ್ಳೆಯದಿತ್ತು ಅಂದರು ರಮೇಶ್ ಸರ್. ಅಲ್ಲಿದ್ದ ಇಬ್ಬರು ಮಾರ್ಗದರ್ಶಿಗಳು ಅದಾಗಲೇ ಪ್ರವಾಸೀ ಗುಂಪುಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. “ಸರಿ, ನಾವೇ ನೋಡೋಣ” ಅಂತ ನೆಲಮಟ್ಟದಿಂದ ಒಂದು ಅಂತಸ್ತು ಕೆಳಗಿಳಿದಾಗ, ಕಣ್ಣಿಗೆ ಕಂಡ ವಾಸ್ತುಶಿಲ್ಪ ವೈಭವವನ್ನು ಬೆರಗಾಗಿ ನೋಡುವ ಸರದಿ ನಮ್ಮದಾಗಿತ್ತು. ನೆಲಮಟ್ಟದಿಂದ ಕೆಳಗೆ ಐದು ಅಂತಸ್ತುಗಳುಳ್ಳ ಭವ್ಯ ಇಳಿಮಹಡಿಯ ಬಾವಿ. ಬಾವಿ ಎನ್ನಲೋ, ಕಟ್ಟಡ ಎನ್ನಲೋ, ದೇವಾಲಯ ಅನ್ನಲೋ, ವಿಶ್ರಾಂತಿ ಧಾಮ ಅನ್ನಲೋ, ವಾಸ್ತುಶಿಲ್ಪದ ಆಗರ ಆನ್ನಲೋ. ಅಲ್ಲಿ ಎಲ್ಲವೂ ಇದೆ. ನಮ್ಮ ಪೂರ್ವಿಕರ ಬಗ್ಗೆ ನಿಜವಾಗಿಯೂ ಹೆಮ್ಮೆ ಎನ್ನಿಸಿತು. ಇಂತಹ ಅಪೂರ್ವ ರಚನೆಯಲ್ಲಿ ಭಾಗಿಯಾಗಿದ್ದ ಶಿಲ್ಪಿಗಳು, ಕುಶಲಕರ್ಮಿಗಳ ಕೈಚಳಕ ಕಂಡು ಹೃದಯ ತುಂಬಿ ಬಂತು.
ಕಂಬಗಳ ಸಹಾಯದಿಂದ ಕಟ್ಟಲ್ಪಟ್ಟ, ಅಲ್ಲಿರುವ ಅಪೂರ್ವ ಕುಸುರಿ ಕೆಲಸದ ಕೆತ್ತನೆಗಳಲ್ಲಿ ದೇವದೇವಿಯರು, ಮರಗಿಡಬಳ್ಳಿಗಳು, ಹಾಗೆಯೇಬಾವಿಯಿಂದ ನೀರು ತೆಗೆದುಕೊಂಡು ಹೋಗಲು ಮೆಟ್ಟಿಲುಗಳು, ನೀರು ತೆಗೆದುಕೊಂಡು ಹೋಗುವಾಗ ಚೆಲ್ಲುವ ನೀರು ಪುನಃ ಬಾವಿ ಸೇರುವಂತಹ ವ್ಯವಸ್ಥೆಎಲ್ಲವನ್ನೂ ನೋಡುತ್ತಿದ್ದಾಗ, ಆಗಿನ ಕಾಲದ ವಾಸ್ತುಶಿಲ್ಪಿಗಳ ಕೈಚಳಕದ ದರ್ಶನವಾಯಿತು. ಮನ ಬಂದಷ್ಟು ಪಟಗಳನ್ನು ಮೊಬೈಲಿನ ಮೂಲಕ ಸೆರೆ ಹಿಡಿದಿದ್ದು ಕೂಡಾ ಆಯಿತು. ಕಟ್ಟಡದ ಮೇಲೆ ಒಂದೆಡೆ ಗೋರಿಗಳನ್ನು ಹೋಲುವ 6 ಆಕಾರಗಳು ಕಂಡವು. ಅದರಲ್ಲಿ ಒಂದು ಭಗ್ನಗೊಂಡ ಸ್ಥಿತಿಯಲ್ಲಿತ್ತು. ಅಲ್ಲಿನ ಸೌಂದರ್ಯವನ್ನು ಮನಸಾರೆ ಕಣ್ತುಂಬಿಕೊಂಡು ವಾಪಸ್ ಹೊರಟೆವು. ನಮಗೆ ಮಾರ್ಗದರ್ಶಿ ಸಿಗದ ಕಾರಣ, ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿಕೊಂಡಿದ್ದವು. ನಾವು ತಂಗಿಕೊಂಡಿದ್ದ ಹೋಟೆಲಿಗೆ ವಾಪಸ್ ಬಂದ ಬಳಿಕ ಮೊದಲು ಮಾಡಿದ ಕೆಲಸವೇ ಗೂಗಲ್ ಹುಡುಕಾಟ. “ರಾಣಿ ಕಾ ವಾವ್” ಎಂದು ಹುಡುಕಾಟ ನಡೆಸಿದಾಗ ಸಿಕ್ಕ ಫಲಿತಾಂಶದಲ್ಲಿ ಸಿಕ್ಕ ಕೆಲವು ಚಿತ್ರಗಳು ನಾವು ನೋಡಿಕೊಂಡು ಬಂದ ಕಟ್ಟಡದ ಹಾಗೆ ಕಾಣಿಸಿದರೂ, ಇನ್ನು ಕೆಲವು ಚಿತ್ರಗಳು ಹಾಗೂ ವಿವರಣೆಗಳು ನಾವು ನೋಡಿದುದಕ್ಕಿಂತ ಭಿನ್ನವಾಗಿ ಕಂಡವು. ನಾವು ನೋಡಿದ ರಚನೆಯಲ್ಲಿ ಐದು ಅಂತಸ್ತುಗಳಿದ್ದರೆ, ಚಿತ್ರದಲ್ಲಿ ಏಳು ಅಂತಸ್ತುಗಳು ಕಾಣಿಸುತ್ತಿದ್ದವು. ಅಲ್ಲದೆ ನಾವು ನೋಡಿದ್ದ ಕಟ್ಟಡದ ಛಾವಣಿಯು ಸಮತಟ್ಟಾಗಿದ್ದರೆ, ಚಿತ್ರದಲ್ಲಿದ್ದ ಕಟ್ಟಡದ ಛಾವಣಿಯು ಇಳಿಜಾರಾಗಿ ಮಾಡಿನ ತರಹ ಕಾಣಿಸುತ್ತಿತ್ತು. ಎರಡನ್ನೂ ರೂಢಿಯಲ್ಲಿ ರಾಣಿ ಕಾ ವಾವ್ ಅನ್ನುತ್ತಾರೆ. ಈಗ ನಿಜವಾದ ಹುಡುಕಾಟ ಶುರುವಾಯ್ತು. ನಾವು ನೋಡಿದ್ದು ಯಾವ ಕಟ್ಟಡವನ್ನು ಅನ್ನುವ ಪ್ರಶ್ನೆ ಉಧ್ಬವವಾಯಿತು.
ರೂಡಾಬಾಯಿ ಸ್ಟೆಪ್ ವೆಲ್ ಅಂತ ಪ್ರವೇಶದ್ವಾರದ ಬಳಿ ಓದಿದ್ದೆವು. ನಾವು ನೋಡಿದ್ದು ರಾಣಿ ಕಾ ವಾವ್ ಹೌದೇ ಅಥವಾ ಅದನ್ನು ಹೋಲುವ ಕಟ್ಟಡವೇ ಅಂತ ತಿಳಿದುಕೊಳ್ಳುವ ಉತ್ಸುಕತೆ ಜಾಸ್ತಿಯಾಯಿತು. ಹುಡುಕಾಟ ತೀವ್ರವಾಗಿ ಮಾಡಿದಾಗ ನಮಗೆ ಅರ್ಥ ಆದ ವಿಷಯವೆಂದರೆ ವಾವ್ ಅಂದರೆ ಬಾವಿ. ಆಳವಾದ ಬಾವಿಗಳಿಂದ ನೀರನ್ನು ಕೊಂಡೊಯ್ಯಲು ಮೆಟ್ಟಿಲುಗಳ ರಚನೆಯಿರುವ ಕಾರಣ ಈ ಬಾವಿಗಳನ್ನು ಮೆಟ್ಟಿಲುಬಾವಿ ಅನ್ನುತ್ತಾರೆ. ಗುಜರಾತಿನಲ್ಲಿ ಅಂತಹ ಸುಮಾರು ಮೆಟ್ಟಿಲುಬಾವಿಗಳಿವೆ. ಮೂಲತಃ ಮಳೆ ಕಡಿಮೆ ಬೀಳುವ ಪ್ರದೇಶಗಳಾದ ಗುಜರಾತ್, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಇಂತಹ ಮೆಟ್ಟಿಲುಬಾವಿಗಳನ್ನು ನಿರ್ಮಿಸಿ, ಮಳೆನೀರು ಸಂಗ್ರಹಣೆ ಹಾಗೂ ಜಲಸಂರಕ್ಷಣೆಯನ್ನು, ಬಹಳಷ್ಟು ವರ್ಷಗಳ ಹಿಂದೆಯೇ ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ನೂರು ರೂಪಾಯಿ ನೋಟಿನ ಮೇಲೆ ಇರುವ ಮೆಟ್ಟಿಲುಬಾವಿಯನ್ನು ರಾಣಿ ಕಾ ವಾವ್ ಅನ್ನುತ್ತಾರೆ ಅದು ಸೂರತ್ ನಗರದ ಪಠಾಣ್ ಪಟ್ಟಣದಲ್ಲಿದೆಯೆಂಬುದು ಗೊತ್ತಾಯಿತು. ನಾವು ನೋಡಿದ ಮೆಟ್ಟಿಲುಬಾವಿಯನ್ನು ಸ್ಥಳೀಯರು ರಾಣಿ ಕಾ ವಾವ್ ಎಂದು ಕರೆಯುತ್ತಾರೆ. ಅದಾಲಜ್ ಅನ್ನುವ ಸ್ಥಳದಲ್ಲಿರುವುದರಿಂದ ಅದಾಲಜ್ ನಿ ವಾವ್ ಅಥವಾ ಅದಾಲಜ್ ಸ್ಟೆಪ್-ವೆಲ್ ಎಂದೂ, ರೂಡಾಬಾಯಿ ಅನ್ನುವ ರಾಣಿಯು ಕಟ್ಟಿಸಿರುವುದರಿಂದ ರೂಡಾಬಾಯಿ ವಾವ್ ಅಥವಾ ರೂಡಾಬಾಯಿ ಸ್ಟೆಪ್-ವೆಲ್ ಎಂದೂ ಕರೆಯುತ್ತಾರೆ ಅನ್ನುವ ವಿಷಯ ಮನದಟ್ಟಾಯಿತು.
ಇಷ್ಟೆಲ್ಲಾ ಬರೆದು, ಅದಾಲಜಿನಲ್ಲಿರುವ ಮೆಟ್ಟಿಲುಬಾವಿಯ ರಚನೆಯ ಹಿಂದಿನ ಕಥೆಯನ್ನು ನಿಮ್ಮ ಜೊತೆ ಹಂಚಿಕೊಳ್ಳದಿದ್ದರೆ ಈ ಲೇಖನ ಅಪೂರ್ಣವಾಗುವುದು. ವಘೇಲಾ ವಂಶಸ್ಥ ದಂಡೈ ದೇಶದ ರಾಜ, ರಣವೀರ ಸಿಂಹ (ರಣ ವೀರ ಸಿಂಗ್) ಹಾಗೂ ಆತನ ಪತ್ನಿ ರಾಣಿ ರೂಡಾಬಾಯಿ (ರೂಪ್ ಬಾ) ಹೇಳಿಮಾಡಿಸಿದ ಜೋಡಿ. ರಾಜನಿಗೆ ರಾಣಿಯ ಮೇಲೆ ಅತೀವ ಪ್ರೀತಿ. ಈರ್ವರಿಗೂ ತಮ್ಮ ರಾಜ್ಯದ ಪ್ರಜೆಗಳ ಮೇಲೆ ತುಂಬಾ ಪ್ರೀತಿ. ಅವರಿಬ್ಬರಲ್ಲೂ ಪ್ರಜಾಹಿತದ ಚಿಂತನೆಗಳು. ಆ ಭಾಗಗಳಲ್ಲಿ ಮಳೆ ಕಡಿಮೆಯೇ. ನೀರಿಗಾಗಿ ಮಹಿಳೆಯರು ಮೈಲುಗಟ್ಟಲೆ ನಡೆಯಬೇಕಾದ ಪರಿಸ್ಥಿತಿ. ಪ್ರಜೆಗಳ ಕಷ್ಟ ಗಮನಿಸಿದ ದೊರೆಗೆ ಮೆಟ್ಟಿಲುಬಾವಿಯನ್ನು ಕಟ್ಟುವ ಆಲೋಚನೆ ಬಂದದ್ದೇ ತಡ, ರೂಪವತಿಯೂ, ಸದ್ಗುಣಿಯೂ ಆಗಿದ್ದ ತನ್ನ ಪ್ರೀತಿಯ ರಾಣಿಯ ಹೆಸರಿನಲ್ಲಿ, ಬಾವಿಯ ಕೆಲಸ ಶುರುಮಾಡಿಸಿಯೇ ಬಿಟ್ಟ. ಬಾವಿಯ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿರುವಾಗಲೇ, ನೆರೆರಾಜ್ಯದ ರಾಜ ಮಹಮ್ಮದ್ ಬೇಗಡಾ ಆ ರಾಜ್ಯದ ಮೇಲೆ ಸಮರ ಸಾರಿದ. ಆ ಸಮರದಲ್ಲಿ ರಾಜ ರಣವೀರ ಹತನಾದ. ಗತಿಸಿದ ಪತಿಯ ಚಿತೆಯೇರಿ ಸತಿ ಸಹಗಮನ ಮಾಡಲು ಮುಂದಾದ ರಾಣಿ ರೂಡಾಬಾಯಿಯನ್ನು ಸಹಗಮನ ಮಾಡದಂತೆ ಮಹಮ್ಮದ್ ತಡೆದು, ತನ್ನನ್ನು ಮದುವೆಯಾಗುವಂತೆ ವಿನಂತಿಸಿದ. ಅವನ ಮಾತಿಗೆ ಒಪ್ಪಿದ ರಾಣಿ “ಮೊದಲು ತನ್ನ ಗಂಡ ಶುರು ಮಾಡಿದ ಮೆಟ್ಟಿಲುಬಾವಿಯ ಕೆಲಸವನ್ನು ಪೂರ್ತಿಗೊಳಿಸಬೇಕು. ಮೆಟ್ಟಿಲುಬಾವಿ ಪೂರ್ತಿಯಾದ ಬಳಿಕ ಮದುವೆಯಾಗುವೆ” ಎಂದು ಹೇಳಿದಳು. ರಾಣಿಯ ಮಾತಿಗೆ ಸಮ್ಮತಿಸಿದ ದೊರೆಮಹಮ್ಮದ್, ಮೆಟ್ಟಿಲುಬಾವಿಯ ರಚನೆಯನ್ನು ಮುಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ತ್ವರಿತಗತಿಯಲ್ಲಿ ಮುಗಿಸಿದನು. ಮೆಟ್ಟಿಲುಬಾವಿಯ ರಚನೆಯಲ್ಲಿ ಭಾಗಿಗಳಾಗಿದ್ದ ಆರು ಜನ ಕುಶಲಕರ್ಮಿಗಳ ಬಳಿ, ಇಂತಹದೇ ಬಾವಿಯನ್ನು ನೀವು ಬೇರೆ ಕಡೆ ನಿರ್ಮಿಸುವಿರಾ ಎಂದು ಕೇಳಿದಾಗ, ಹೌದೆಂದ ಆ ಆರೂ ಜನರನ್ನೂ ಕೊಲ್ಲಿಸಿಬಿಟ್ಟ(ನಾವು ಗಮನಿಸಿದ ಆರು ಘೋರಿಗಳು ಆ ಕುಶಲಕರ್ಮಿಗಳದ್ದೆಂಬುದು ಗೊತ್ತಾಯಿತು). ತಾನು ಕಟ್ಟಿಸಿದಂತಹ ಅಪೂರ್ವ ಬಾವಿ ಇನ್ನೆಲ್ಲೂ ಇರಬಾರದೆನ್ನುವುದು ಅವನ ಚಿಂತನೆಯಾಗಿತ್ತು. ಬಾವಿಯ ಕೆಲಸಗಳು ಮುಗಿದ ಮೇಲೆ ರಾಣಿ ರೂಡಾಬಾಯಿಗೆ “ನೀನು ಹೇಳಿದ ಕೆಲಸವನ್ನು ನಾನು ಮಾಡಿ ಮುಗಿಸಿದ್ಡೇನೆ. ನಮ್ಮ ಮದುವೆಯಾಗುವುದು ಮಾತ್ರ ಉಳಿದಿದೆ” ಎಂದೆನ್ನುತ್ತಾನೆ.ಬಾವಿಯ ಉದ್ಘಾಟನೆಗೆ ವ್ಯವಸ್ಥೆ ಮಾಡಬಹುದು ಎಂದ ರಾಣಿ ರೂಡಾಬಾಯಿ, ಒಂದು ದಿನ ರಾತ್ರಿ ಆ ವಾವಿಗೆ ಹಾರಿ ಪ್ರಾಣತ್ಯಾಗ ಮಾಡಿದಳಂತೆ. ಆದರೆ ತನ್ನ ಪಾಪ ವಿಮೋಚನೆ ಮಾಡಿಕೊಳ್ಳಲು, ತಾನು ಸಾಯುವ ಮೊದಲು ರಾಜ್ಯದಲ್ಲಿರುವ ಸಾಧುಸಂತರೆಲ್ಲರೂ ಆ ಬಾವಿಯಲ್ಲಿ ಸ್ನಾನ ಮಾಡಬೇಕೆಂದು ಕೂಡಾ ವಿನಂತಿಸಿದ್ದಳಂತೆ. ಈ ಬಾವಿಯ ಹಿಂದೆ ಪ್ರೀತಿ, ದ್ವೇಷ, ತ್ಯಾಗ, ಬಲಿದಾನಗಳ ಸಂಗಮದ ಕಥೆಯಿದೆ.
1498-1499 ರ ಅವಧಿಯಲ್ಲಿ ನಿರ್ಮಾಣವಾದ, ಐದು ಮಹಡಿಗಳುಳ್ಳ, ಸುಮಾರು ನೂರು ಅಡಿಗಳಷ್ಟು ಆಳವಿರುವ ಈ ಬಾವಿ ಅಷ್ಟಭುಜಾಕೃತಿ ಹೊಂದಿದೆ. ಬಲಿಷ್ಠ ಸ್ತಂಭಗಳನ್ನು ಹೊಂದಿರುವ ಈ ಬಾವಿಯ ರಚನೆಯಲ್ಲಿ ಮರಳುಶಿಲೆಗಳನ್ನು ಬಳಸಿಕೊಳ್ಳಲಾಗಿದೆ. ಪ್ರತಿಯೊಂದು ಅಂತಸ್ತಿನಲ್ಲಿಯೂ ಸಾಕಷ್ಟು ಪ್ರಮಾಣದ ಗಾಳಿ, ಬೆಳಕು ಬರುವಂತೆ ನಿರ್ಮಿಸಲಾಗಿದೆ. ಇಲ್ಲಿರುವ ವಾಸ್ತುಶಿಲ್ಪ ಶೈಲಿಯನ್ನು ಗಮನಿಸುವಾಗಕೆಳಗಿನ ಅಂತಸ್ತಿನಲ್ಲಿ ಹಿಂದೂ ದೇವ ದೇವಿಯರ ಕೆತ್ತನೆಗಳು,ನವಗ್ರಹಗಳು ಕಂಡುಬಂದರೆ ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿಯ ಕೆತ್ತನೆಗಳು ಕಾಣಸಿಗುತ್ತವೆ. ಜನರಿಗೆ ನೀರು ನೀಡುವ ಜೊತೆಗೆ, ಈ ಬಾವಿಯ ಬಳಿ ಉತ್ಸವಗಳು, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದುವೆಂದು ಹೇಳಲಾಗುತ್ತದೆ.ಈ ಬಾವಿಯ ರಚನೆ ಹೇಗಿದೆಯೆಂದರೆ ಇಲ್ಲಿ ನೀರಿಗೆ ಬಂದ ಮಹಿಳೆಯರಿಗೆ, ಪ್ರಯಾಣಿಕರಿಗೆ, ದಾರಿಹೋಕರಿಗೆ ಆಯಾಸ ಪರಿಹರಿಸಿಕೊಳ್ಳಲು ವಿಶ್ರಾಂತಿ ಕೊಠಡಿಗಳಿವೆ. ದೇವರನ್ನು ಪ್ರಾರ್ಥಿಸಲು ದೇವಾಲಯವಿದೆ. ಹೊರಗಿನ ಉಷ್ಣಾಂಶಕ್ಕಿಂತ, ಒಳಗಿನ ಉಷ್ಣಾಂಶವು ಸುಮಾರು 5 ರಿಂದ 6 ಡಿಗ್ರಿಗಳಷ್ಟು ಕಡಿಮೆಯಿದೆ.
ಅಹಮದಾಬಾದಿಗೆ ಹೋಗುವವರಿದ್ದರೆ, ಖಂಡಿತವಾಗಿಯೂ ನೋಡಲೇಬೇಕಾದ ಸ್ಠಳವಿದು. ಸ್ಠಳದ ಬಗ್ಗೆ ಒಂದಿನಿತೂ ಮಾಹಿತಿಯಿಲ್ಲದೆ, ಅಲ್ಲಿಯ ಸೌಂದರ್ಯ ಕಣ್ಣಲ್ಲಿ ತುಂಬಿಕೊಂಡ ಬಳಿಕ ಸ್ಠಳದಐತಿಹ್ಯದ ಬಗ್ಗೆ ತಿಳಿಯುವಂತಾದರೂ, ಬಹಳಷ್ಟು ವಿಷಯವನ್ನು ತಿಳಿದುಕೊಳ್ಳುವಂತಾಯಿತು. ಯಾವುದೇ ಐತಿಹಾಸಿಕ ಸ್ಠಳವಿರಲಿ, ಅಲ್ಲಿರುವ ಮಾರ್ಗದರ್ಶಿಗಳ ಸಹಾಯ ಪಡೆದುಕೊಳ್ಳುವುದರಿಂದ ಪ್ರಚಲಿತವಿರುವ/ಪ್ರಚಲಿತವಾದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಲೇಖನದ ಕೊನೆಯಲ್ಲಿ ಮನದಲ್ಲಿ ಮೂಡಿತೊಂದು ಭಾವ- ವಾವ್!ಇದುಅದಾಲಜ್ ನಿ ವಾವ್!!
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಚೆಂದದ ಬರಹ. ನಾನೂ ‘ಅಡಾಲಜ್ ಕಾ ರಾಣಿ ಕಾ ವಾವ್’ ಗೆ ಭೇಟಿ ಕೊಟ್ಟಿದ್ದೆ
ನಿಮ್ಮ ಲೇಖನ ಹುಡುಕಿ ಓದಿದೆ ಇಂದು
ಸುಂದರ ಬರಹ ನಾನೂ ಆಸ್ಥಳ ನೋಡಿದ್ದರಿಂದ ಮತ್ತೊಂದು ಸಾರಿ ನೆನಪಿಸಿಕೊಂಡಂತಾಯಿತು..
ಬಹಳ ಚೆನ್ನಾಗಿದೆ
ದಿನಬಳಕೆಯ ವಸ್ತುವನ್ನೂ ಸೌಕರ್ಯ ಮತ್ತೆ ಸೌಂದರ್ಯದ ದೃಷ್ಟಿಯಿಂದ ರೂಪಿಸಿಕೊಳ್ಳುವ ನಮ್ಮ ಪೂರ್ವಿಕರ ಮನಸ್ಥಿತಿಗೆ ಒಂದು ಉದಾಹರಣೆಯ ಚೆಂದಾದ ಚಿತ್ರಣ!
ಹಲವು ವರ್ಷಗಳ ಹಿಂದೆ ಅಹಮದಾಬಾದಿನಲ್ಲಿ ಈ ಬಾವಿಯನ್ನು ನೋಡಿದ ನೆನಪು ಮರುಕಳಿಸಿತು. …ನೋವಿನ ನಿಟ್ಟುಸಿರು ಬಿಡುತ್ತಿರುವ ಬಾವಿಯು, ಮಹಾರಾಣಿಯ ಬಲಿದಾನಕ್ಕೆ ಮೂಕ ಸಾಕ್ಷಿಯಾಗಿ ನಿಂತಿದೆ… ಸೊಗಸಾದ ನಿರೂಪಣೆ.
ಗುಜರಾತಿಗೆ ಭೇಟಿ ಕೊಟ್ಟಾಗ ಈ ಭಾವಿಯ ಮುಂದೆ ಮೂಕ ವಿಸ್ಮಿತಳಾಗಿ ನಿಂತಿದ್ದೆ
ನಿಮ್ಮ ಲೇಖನ ಓದಿ ಮತ್ತೊಮ್ಮೆ ಆ ನೆನಪುಗಳು ಮನಸ್ಸನ್ನು ಕಲಕಿದವು