ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ
ಶ್ರೀಯುತ ರಾಧಾಕೃಷ್ಣ ಅಡ್ಯಂತಾಯ ಇವರ ಭಾಷಣದ ಸಾರ
ಶ್ರೀರಾಮಚಂದ್ರನ ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶ ಮಹಾರಾಜನು ಅಯೋಧ್ಯೆಯಲ್ಲಿ ತಂದೆ ಶ್ರೀರಾಮನಿಗೆ ಭವ್ಯ ದೇಗುಲವನ್ನು ಕಟ್ಟಿಸಿದನು. ಸಾವಿರಾರು ವರ್ಷಗಳ ಕಾಲ ಅದು ವೈಭವದಿಂದ ಮೆರೆಯುತ್ತದೆ. ಆದರೆ, ಕ್ರಿಸ್ತಪೂರ್ವ 150ರಲ್ಲಿ ಮೆಲೆಯೆಂಡರ್ ಎಂಬ ಯವನನ ದಾಳಿಗೆ ತುತ್ತಾಗುತ್ತದೆ. ಬಳಿಕ ಕ್ರಿಸ್ತಪೂರ್ವ 1ರಲ್ಲಿ, ಬೌದ್ಧ ದೊರೆ ಮಿಹಿರಗುಪ್ತ ಎಂಬವನು ದಾಳಿ ನಡೆಸಿ ಅದನ್ನು ಧ್ವಂಸ ಮಾಡಿ ಅಲ್ಲಿ ಬೌದ್ಧ ದೇಗುಲವನ್ನು ನಿರ್ಮಿಸುವನು. ಮುಂದೆ ಮೂರ್ನಾಲ್ಕು ತಿಂಗಳುಗಳಲ್ಲೇ ಮಿಹಿರಗುಪ್ತನು ಹತನಾಗುವನು. ಅವನ ನಂತರದ ರಾಜರ ನಿರ್ಲಕ್ಷದಿಂದಾಗಿ ಅಯೋಧ್ಯೆಯಲ್ಲಿರುವ ದೇವಾಲಯ ಶಿಥಿಲಗೊಳ್ಳುತ್ತದೆ.
ಮುಂದೆ ಕ್ರಿಸ್ತಶಕ 380 – 413ರ ಮಧ್ಯೆ ರಾಜಾ ವಿಕ್ರಮಾದಿತ್ಯನ ಆಳ್ವಿಕೆಯ ಕಾಲ. ಅವನು ಒಮ್ಮೆ ಬೇಟೆಗಾಗಿ ಕಾಡಿಗೆ ಹೋದ ಸಂದರ್ಭದಲ್ಲಿ, ಅಲ್ಲಿಯ ಸರಯೂ ನದಿ ತೀರದಲ್ಲಿ ವಿಶ್ರಾಂತಿ ಪಡೆಯುವನು. ಅಲ್ಲಿ ಅವನಿಗೆ ಒಬ್ಬ ರಾಜಕುಮಾರನ ಭೇಟಿಯಾಗುತ್ತದೆ. ಅವನು ವಿಕ್ರಮಾದಿತ್ರನಲ್ಲಿ; ‘ನಿನಗೊಂದು ಸುವರ್ಣ ಅವಕಾಶ ಸಿಕ್ಕಿದೆ. ನಿನ್ನ ರಾಜ್ಯದಲ್ಲಿ ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯಿದೆ. ಅದರ ಪುನರ್ನಿರ್ಮಾಣ ನಿನ್ನಿಂದ ಆಗಬೇಕಿದೆ’ ಎನ್ನುವನು. ಆದರೆ ಆ ಜಾಗವನ್ನು ಗುರುತಿಸುವುದು ಹೇಗೆಂಬ ಸಮಸ್ಯೆಯು ವಿಕ್ರಮಾದಿತ್ಯನಿಗೆ ಎದುರಾಗುತ್ತವೆ. ಅದಕ್ಕೆ ರಾಜಕುಮಾರನು,’ ಆಗ ತಾನೆ ಕರು ಹಾಕಿದ ಹಸುವನ್ನು ಕರು ಸಮೇತ ಬಿಟ್ಟುಬಿಡು. ಅದು ಎಲ್ಲಿ ಹೋಗಿ ನಿಂತಾಗ ಅದರ ಕೆಚ್ಚಲಿನಿಂದ ಧಾರಾಕಾರವಾಗಿ ಹಾಲು ಸುರಿಯುತ್ತದೋ ಅದೇ ಶ್ರೀರಾಮಚಂದ್ರನ ಜನ್ಮಸ್ಥಾನ.’ ಎನ್ನುವನು. ಹಾಗೆಯೇ ಹಸುವನ್ನು ಕರು ಸಮೇತ ಕಾಡಿನಲ್ಲಿ ಬಿಟ್ಟಾಗ ಒಂದು ಕಡೆಯಲ್ಲಿ ಹಸು ನಿಲ್ಲುತ್ತದೆ. ತಕ್ಷಣ ಅದರ ಕೆಚ್ಚಲದಿಂದ ಧಾರಾಕಾರವಾಗಿ ಹಾಲು ಸುರಿಯಲು ಆರಂಭವಾಗುತ್ತದೆ. ಆ ಜಾಗವನ್ನು ಉತ್ಖನನ ಮಾಡಿದಾಗ, 84 ಕಂಬಗಳು ಸಿಗುವವು. ಒಂದೊಂದು ಕಂಬಗಳಲ್ಲಿಯೂ ವಿಶೇಷವಾದ ಕಲ್ಲುಗಳ ಜೋಡಣೆ ಕಂಡುಬರುತ್ತದೆ. ಈ ಕಲ್ಲುಗಳು ಸಾಮಾನ್ಯ ಕಲ್ಲುಗಳಾಗಿರದೆ, ಬಂಗಾರವನ್ನು ಪರೀಕ್ಷಿಸುವ ಕಲ್ಲುಗಳಾಗಿರುತ್ತವೆ. ಇವುಗಳು ಮಾತ್ರವಲ್ಲದೆ, ಇಂತಹ ಅನೇಕ ಸುವಸ್ತುಗಳು ಮಣ್ಣಿನಲ್ಲಿ ಲಭಿಸುತ್ತವೆ. ವಿಕ್ರಮಾದಿತ್ಯ ಮಹಾರಾಜನು ಇವುಗಳನ್ನೆಲ್ಲ ಉಪಯೋಗಿಸಿಕೊಂಡು; ನಾಡಿನ ಲಕ್ಷಾಂತರ ಕುಶಲ ಕರ್ಮಿಗಳು ಹಾಗೂ ಕೂಲಿ ಕಾರ್ಮಿಕರನ್ನು ಸೇರಿಸಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸುತ್ತಾನೆ. ನಂತರ ನೂರಾರು ವರ್ಷಗಳ ಕಾಲ ಅಯೋಧ್ಯೆಯ ರಾಮಮಂದಿರವು ವೈಭವಪೂರ್ಣವಾಗಿ ಮೆರೆದಾಡುತ್ತದೆ.
ಮುಂದಿನ ದಿನಗಳಲ್ಲಿ ದೇಶಕ್ಕೆ ಘೋರಿ ಮಹಮ್ಮದ್ ನ ದಾಳಿಯಾಗುತ್ತದೆ. ಆಗ ರಾಜನಾಗಿದ್ದ ಪೃಥ್ವಿರಾಜನಿಂದ ಅವನು ಸೋತು, ಕ್ಷಮೆ ಕೇಳಿ ಹಿನ್ನಡೆಯುತ್ತಾನೆ. ಆದರೆ, ಎರಡನೇ ಬಾರಿ ಪುನಃ ಯುದ್ಧಕ್ಕೆ ಬಂದಾಗ, ಜಯಚಂದನೆಂಬವನ ಸಹಾಯದಿಂದ, ಮೋಸದಿಂದ ಪೃಥ್ವಿರಾಜನನ್ನು ಬಂಧಿಸುತ್ತಾನೆ. ಈ ಸಮಯದಲ್ಲಿಯೇ ಅವನು ಅಯೋಧ್ಯೆ ಮೇಲೆ ದಾಳಿ ಮಾಡುತ್ತಾನೆ. ಆಮೇಲೆ ನಿರಂತರವಾಗಿ ಹೂಣರು, ಶಕರು, ಮೊಗಲರು ಮೊದಲಾದವರ ದಾಳಿಗೆ ಅಯೋಧ್ಯೆಯು ಸಿಲುಕಿ ನಲುಗುತ್ತದೆ. ಅವರೆಲ್ಲರೂ ದೇವಸ್ಥಾನದಲ್ಲಿದ್ದ ಅಪಾರ ಸಂಪತ್ತನ್ನು ಲೂಟಿ ಮಾಡುತ್ತಾರೆ. ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ ವೈಢೂರ್ಯಗಳು ಅವರ ಕೈ ಸೇರುತ್ತವೆ. ಆದರೆ, ಆಶ್ಚರ್ಯವೆಂದರೆ, ಅವರು ದೇವಸ್ಥಾನಕ್ಕಾಗಲಿ ಗರ್ಭಗುಡಿಯ ಮೂರ್ತಿಗಾಗಲಿ ಹಾನಿ ಮಾಡುವುದಿಲ್ಲ.
ಮುಂದೆ 1526ರಲ್ಲಿ ಬಾಬರನಿಂದ ದಾಳಿ ನಡೆಯುತ್ತದೆ. ವಿಶ್ವದೃಷ್ಟಿಯ ಕೇಂದ್ರವಾದ ಅಯೋಧ್ಯೆ ಮೇಲೆ ಅವನ ಕೆಟ್ಟ ದೃಷ್ಟಿಯು ಬೀಳುತ್ತದೆ. ಇಡೀ ಸಮಾಜವನ್ನು ಒಟ್ಟು ಮಾಡುವ ಶಕ್ತಿ ಈ ಅಯೋಧ್ಯೆಗಿದೆ. ಇದನ್ನು ಧ್ವಂಸ ಮಾಡಿದರೆ ಮಾತ್ರ ಹಿಂದೂ
ಶಕ್ತಿಯನ್ನು ಕುಂದಿಸಲು ಸಾಧ್ಯವೆಂದು ಯೋಚಿಸುತ್ತಾನೆ. ಬಾಬರನ ಆಪ್ತ ಸಲಹೆಗಾರರಾದ ಅಬ್ಬಾಸ್ ಮತ್ತು ಇನ್ನೊಬ್ಬ ಮುಸ್ಲಿಂ ಪಕೀರನಲ್ಲಿ ಈ ಕುರಿತು ಸಲಹೆಯನ್ನು ಕೇಳುತ್ತಾನೆ. ಅವರು; ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರವನ್ನು ನಿರ್ನಾಮ ಮಾಡಿ, ಆ ಜಾಗದಲ್ಲಿ ಭವ್ಯವಾದ ಮಸೀದಿ ಕಟ್ಟಬೇಕು ಎಂದು ಸಲಹೆ ನೀಡುತ್ತಾರೆ. ಅಂತೆಯೇ ಬಾಬರನು, ಮೀರ್ ಬಾಂಕಿ ಎಂಬ ಸೇನಾಪತಿಯನ್ನು ದೊಡ್ಡ ಸೇನೆಯೊಂದಿಗೆ ಅಯೋಧ್ಯೆಗೆ ಕಳುಹಿಸುತ್ತಾನೆ. ಸುದ್ದಿ ತಿಳಿದ ಕೂಡಲೇ ಅಯೋಧ್ಯೆಯಲ್ಲಿದ್ದ ಸಾಧು ಹಾಗೂ ಸಿದ್ಧಿ ಪುರುಷರಾದ ಶಾಮಾನಂದರು ಅಲ್ಲಿದ್ದ ವಿಗ್ರಹಗಳ ರಕ್ಷಣೆಗಾಗಿ; ಚಲ ವಿಗ್ರಹವನ್ನು ಸರಯೂ ನದಿಗೆ ಬಿಸಾಡಿ, ಇನ್ನೊಂದು ವಿಗ್ರಹವನ್ನು ತೆಗೆದುಕೊಂಡು ಹಿಮಾಲಯದತ್ತ ನಡೆಯುತ್ತಾರೆ. ಉಳಿದ ಅರ್ಚಕರೆಲ್ಲರೂ ಸೇರಿ ಪೂಜಾ ಸಾಮಗ್ರಿಗಳನ್ನು ರಕ್ಷಿಸುತ್ತಾರೆ.
ಬಾಬರನು ತನ್ನ ಪಟ್ಟು ಬಿಡದೆ ಪುನಃ ಬಹಳ ದೊಡ್ಡ ಸೇನೆಯೊಂದಿಗೆ ಆಯೋಧ್ಯೆ ಮೇಲೆ ದಾಳಿ ನಡೆಸುತ್ತಾನೆ. ಆದರೆ ಅಲ್ಲಿದ್ದ ಹಿಂದೂಗಳು ಬಲವಾದ ಪ್ರತಿರೋಧವೊಡ್ಡಿ ಅವನನ್ನು ತಡೆಯುತ್ತಾರೆ. ತುಂಬಾ ದಿನಗಳ ಕಾಲ ಹಿಂದೂ ಮುಸ್ಲಿಂ ಸಂಘರ್ಷ ನಡೆಯುತ್ತದೆ. ಈ ಸಂಘರ್ಷದಲ್ಲಿ 1,74,000 ಹಿಂದುಗಳ ಬಲಿದಾನವಾಗುತ್ತದೆ. ಮೀರ್ ಬಾಂಕಿಯು ಶ್ರೀರಾಮ ದೇಗುಲವನ್ನು ವಶಪಡಿಸಿಕೊಳ್ಳುತ್ತಾನೆ. ಕೈಯಲ್ಲಿ ಶಸ್ತ್ರಗಳಿಲ್ಲದ ಅರ್ಚಕರು ದೇಗುಲದೊಳಗೆ ಅವನು ಪ್ರವೇಶಿಸದಂತೆ ದೇಗುಲದ ದ್ವಾರದ ಎದುರಿಗೆ ಮಲಗಿ ಪ್ರತಿಭಟಿಸುತ್ತಾರೆ. ಆದರೆ ಕ್ರೂರಿ ಸೈನಿಕರು, ಮಲಗಿದ್ದ ಅರ್ಚಕರ ಶಿರಶ್ಚೇಧನಗೈದು ಒಳಗೆ ಪ್ರವೇಶ ಮಾಡಿ; ಶ್ರೀರಾಮ ಮಂದಿರವನ್ನು ಪೂರ್ತಿ ಧ್ವಂಸ ಮಾಡುತ್ತಾರೆ. ಅದೇ ಜಾಗದಲ್ಲಿ ಮಸೀದಿ ಕಟ್ಟುವ ಪ್ರಯತ್ನವನ್ನು ನಡೆಸುವರು. ದೇಶ ವಿದೇಶಗಳಿಂದ ಸಾವಿರಾರು ಶಿಲ್ಪಿಗಳು, ಕೂಲಿ ಕಾರ್ಮಿಕರನ್ನು ಕರೆತಂದು ಕೆಲಸ ಪ್ರಾರಂಭಿಸುವರು.
ಆದರೆ, ಸಾವಿರಾರು ಜನರು ಹಗಲಿರುಳು ದುಡಿದು ಕಟ್ಟಿದ ಕಟ್ಟಡವು ಬೆಳಗಾಗುವುದರೊಳಗಾಗಿ ನೆಲಸಮವಾಗಿರುತ್ತದೆ. ಪದೇ ಪದೇ ಇದೇ ಪುನರಾವರ್ತನೆಯಾದಾಗ ಬಾಬರನು ಆ ಜಾಗದಲ್ಲಿ ಬಲವಾದ ಕಾವಲನ್ನು ಹಾಕುವನು. ಆದರೆ ಈ ದುರ್ಘಟನೆಯ ಬಗ್ಗೆ ಕುರುಹು ಕೂಡಾ ಸಿಗದೇ ಹತಾಶನಾಗುವನು. ಅನೇಕ ತಿಂಗಳುಗಳ ಕಾಲ ಪ್ರಯತ್ನಿಸಿದರೂ ಇದರ ರಹಸ್ಯ ತಿಳಿಯಲು ಸಾಧ್ಯವಾಗುವುದೇ ಇಲ್ಲ. ಶಸ್ತ್ರ ಸಜ್ಜಿತ ಸೈನಿಕರು ರಾತ್ರಿ ಇಡೀ ಕಾವಲು ಕಾದರೂ ಪ್ರಯೋಜನವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರವನ್ನು ಹುಡುಕಲು ಬಾಬರನು ದೇಶದೆಲ್ಲೆಡೆಯಿಂದ ಸಂತರನ್ನು, ಯೋಗಿಗಳನ್ನು ಹಾಗೂ ಸಿದ್ಧಿಪುರುಷರನ್ನು ಕರೆಸುವ ಏರ್ಪಾಡು ಮಾಡುತ್ತಾನೆ. ಅವರ ಮುಂದೆ ಬಾಬರನು ತನ್ನ ಸಮಸ್ಯೆಯನ್ನು ಹೇಳಿಕೊಂಡು, ಜ್ಞಾನದೃಷ್ಟಿಯಿಂದ ಸತ್ಯ ಸಂಗತಿ ಅರಿತು ಹೇಳಬೇಕೆಂದು ಕೇಳಿಕೊಳ್ಳುತ್ತಾನೆ. ಅಲ್ಲಿಗೆ ಆಗಮಿಸಿದ ಪ್ರಮುಖರಾದ ಸಾಧು ಸಂತರು ಸೇರಿ ಚರ್ಚೆ ನಡೆಸುತ್ತಾರೆ. ಅಂತೆಯೇ, ಘಟನೆ ನಡೆಯುವ ಸ್ಥಳದಲ್ಲಿ ಒಂದು ಕಡೆ ಕುಳಿತು ಅನ್ನಾಹಾರಗಳನ್ನು ತೊರೆದು ಧ್ಯಾನಾಸಕ್ತರಾಗುತ್ತಾರೆ.
ಮಧ್ಯರಾತ್ರಿಯ ಸಮಯ. ಸಾಧುಗಳು ಕಣ್ಣು ಮುಚ್ಚಿ ಜ್ಞಾನದೃಷ್ಟಿಯಿಂದ ಸತ್ಯವನ್ನು ಅರಿಯುವ ಪ್ರಯತ್ನ ಮಾಡಿದರು. ಮಧ್ಯರಾತ್ರಿ ಕಳೆಯಿತು.. ಅವರ ಜ್ಞಾನದೃಷ್ಟಿಗೆ ಒಂದು ಬೃಹದಾಕಾರದ ಕಪಿಯು ಬಂದು, ಕಟ್ಟಿದ ಕಟ್ಟಡವನ್ನು ಧ್ವಂಸ ಮಾಡುವುದು ಗೋಚರಿಸಿತು . ಆಮೇಲೆ ಆ ಕೋತಿಯು ಹಿಂದಕ್ಕೆ ತೆರಳಿತು. ಆಗ ಅವರಿಗೆ ಇದು ರಾಮಭಕ್ತ ಹನುಮಂತನ ಕೆಲಸವೆಂದು ತಿಳಿಯಿತು. ಮರುದಿನ ಬಾಬರನನ್ನು ಕರೆದು, ‘ಅಯೋಧ್ಯೆಯ ರಾಮಮಂದಿರವನ್ನು ಮಸೀದಿ ಮಾಡುವುದಕ್ಕೆ ಹನುಮಂತನ ಆಕ್ಷೇಪವಿದೆ. ನೀನು ಮಸೀದಿ ಮಾಡಲು ಸಾಧ್ಯವಿಲ್ಲ.’ ಎಂದರು. ಹಾಗಾದರೆ ಮುಂದೇನು ದಾರಿ? ವಿನಿಯೋಗಿಸಿದ ಲಕ್ಷಾಂತರ ಹಣ ವ್ಯರ್ಥವಾಗುತ್ತಿದೆ ಎಂದನು ಬಾಬರ. ಇದಕ್ಕೆ ಸಾಧುಗಳು, ‘ಇದನ್ನು ಮಸೀದಿಯಾಗಿ ಕಟ್ಟಬಾರದು. ಅಂದರೆ, ಇದರಲ್ಲಿ ಮೀನಾರಗಳು ಇರಬಾರದು. ಅಲ್ಲದೆ, ಪ್ರದಕ್ಷಿಣಾ ಪಥಗಳನ್ನು ಸೇರಿಸಬೇಕು. ಇದನ್ನು ಸೀತಾ ಪಾಕಿಸ್ಥಾನ ಎನ್ನುವ ರೀತಿಯಲ್ಲಿ ಕಟ್ಟಬೇಕು’ ಎಂಬುದಾಗಿ ಸಲಹೆ ನೀಡಿದರು. ಅದೇ ರೀತಿಯಲ್ಲಿ ಕಟ್ಟಡದ ನಿರ್ಮಾಣವಾಗುತ್ತದೆ. ಆಮೇಲೆ ಅಲ್ಲಿ ಹೊರಗಡೆಗೆ ಹಿಂದುಗಳಿಗೆ ಭಜನೆ ಮಾಡಲು ಅವಕಾಶ ಕೊಡಬೇಕು ಎಂಬುದಾಗಿ ಸಾಧುಗಳು ಬೇಡಿಕೆ ಇಡುವರು. ಅದಕ್ಕೂ ಬಾಬರನು ಒಪ್ಪಿಗೆ ನೀಡುತ್ತಾನೆ. ಮೂರು ಗುಂಬಜ್ ಗಳಿರುವ ಭವ್ಯ ಕಟ್ಟಡವು ನಿರ್ಮಾಣವಾಗುತ್ತದೆ. ಬಾಬರನ ಅಂತ್ಯದ ಬಳಿಕ ಹಿಂದುಗಳು ಆ ಸ್ಥಳವನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನ ನಡೆಸುವರು. ಕಟ್ಟಡವನ್ನು ನೀವು ಕಟ್ಟಿದರೂ ಜಾಗ ನಮ್ಮದು, ನಮಗೆ ಸೇರಬೇಕು, ಎಂಬ ಹೋರಾಟವು ಎಡಬಿಡದೆ ನಡೆಯುತ್ತದೆ. ಇದರಿಂದಾಗಿ ಈ ಸ್ಥಳವು, ಒಮ್ಮೆ ಹಿಂದೂಗಳು ಗೆದ್ದು ಅವರ ಸ್ವಾಧೀನವಾದರೆ, ಇನ್ನೊಮ್ಮೆ ಮುಸ್ಲಿಮರು ಗೆದ್ದು ಅವರ ಸ್ವಾಧೀನವಾಗುತ್ತದೆ.
ಮುಂದೆ, ಬಾಬರನ ಮಗ ಹುಮಾಯೂನನ ಕಾಲದಲ್ಲಿ, ಅಯೋಧ್ಯೆಯ ಆಸುಪಾಸಿನ 10,000 ಮಂದಿ ಸೂರ್ಯವಂಶದ ಕ್ಷತ್ರಿಯರು ಒಟ್ಟಾಗಿ ಆಯುಧಧಾರಿಗಳಾಗಿ ಬಂದು ಘೋರ ಸಂಗ್ರಾಮ ನಡೆಯುತ್ತದೆ. ಹುಮಾಯುನನ ಸೇನೆಯು ಕ್ಷತ್ರಿಯರನ್ನು ನಿರ್ನಾಮ ಮಾಡುತ್ತದೆ. ಅವರ ಮನೆಗಳಿಗೆ ಬೆಂಕಿ ಹಚ್ಚುತ್ತಾರೆ. ಅಳಿದುಳಿದ ಕ್ಷತ್ರಿಯರು; ರಾಮ ಜನ್ಮಭೂಮಿ ನಮಗೆ ಸಿಗುವ ವರೆಗೆ ತಲೆಗೆ ರುಮಾಲು ಧರಿಸುವುದಿಲ್ಲ, ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ರಾಮ ಜನ್ಮಭೂಮಿಗೆ ಮುಕ್ತಿ ಸಿಗುವವರೆಗೆ ಕೊಡೆ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಎಂಬುದಾಗಿ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಈ ಪ್ರತಿಜ್ಞೆಯನ್ನು ಅವರು ವಂಶ ಪಾರಂಪರ್ಯವಾಗಿ ಇಂದಿಗೂ ಮುಂದುವರಿಸಿಕೊಂಡು ಬಂದಿರುವರು. ಈ ಸೋಲಿನಿಂದ ಕಂಗೆಡದೆ, ಪದೇ ಪದೇ ದಾಳಿ ಮಾಡಿ ಅಯೋಧ್ಯೆಯನ್ನು ಹಿಂದುಗಳು ಸ್ವಾಧೀನಪಡಿಸಿಕೊಳ್ಳುತ್ತಾರೆ. ಮಸೀದಿಯ ಮುಂಭಾಗದಲ್ಲಿ ದೊಡ್ಡ ವೇದಿಕೆ ನಿರ್ಮಾಣವಾಗುತ್ತದೆ. ಅಲ್ಲಿ ಶ್ರೀ ರಾಮನ ವಿಗ್ರಹವನ್ನು ಇರಿಸಿ ಪೂಜೆ ಪುನಸ್ಕಾರ ಹೋಮ ಹವನಗಳನ್ನು ಮಾಡಲು ಪ್ರಾರಂಭಿಸುವರು. ಶ್ರೀರಾಮನ ಮಂತ್ರ ಪಠಣ ನಡೆಯುವುದು. ಎಲ್ಲಾ ರೀತಿಯಲ್ಲಿಯೂ, ಹಿಂದುಗಳು ಮಾಡಬೇಕಾದ ಕಾರ್ಯಗಳನ್ನೆಲ್ಲಾ ಮಾಡುವರು. ಮುಂದೆ ಅಕ್ಬರನ ಆಡಳಿತದ ಕಾಲದಲ್ಲಿಯೂ ಇದನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಸಂಕೀರ್ತನೆ, ಪೂಜೆ ಪುನಸ್ಕಾರ, ಭಜನೆ, ರಾಮನಾಮ ಸ್ಮರಣೆ ನಿತ್ಯ ನಿರಂತರ ನಡೆಯುತ್ತದೆ. ಮುಂದೆ, ಜಹಾಂಗೀರ, ಶಹಜಹಾನನ ಕಾಲದವರೆಗೂ ಹಿಂದುಗಳು ಪೂಜೆ ಪುನಸ್ಕಾರಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಾರೆ.
1640 ನೇ ಇಸವಿ.. ಔರಂಗಜೇಬನ ಆಡಳಿತದ ಕಾಲಘಟ್ಟ ಪ್ರಾರಂಭ. ಹಿಂದುಗಳ ಮೇಲೆ ಅತ್ಯಂತ ಹೀನಾಯವಾಗಿ ಅನಾಚಾರವೆಸಗಿದ, ಜಗತ್ತಿನ ಅತ್ಯಂತ ಕ್ರೂರಿಯಾದ ಮುಸ್ಲಿಂ ರಾಜನೆಂದು ಪ್ರಸಿದ್ಧನಾದ ಈತನ ಪ್ರಜೆಗಳೂ ‘ಯಥಾ ರಾಜ ತಥಾ ಪ್ರಜಾ’ ಎನ್ನುವಂತೆ ಅವನಷ್ಟೇ ಕ್ರೂರಿಗಳಾಗಿದ್ದರು ಮತ್ತು ಟಿಪ್ಪು ಸುಲ್ತಾನನು ಕೂಡಾ ಇದೇ ಸಾಲಿಗೆ ಸೇರಿದವನಾಗಿದ್ದಾನೆ ಎಂಬುದಾಗಿ ಇತಿಹಾಸದಲ್ಲಿ ದಾಖಲಿಸಲಾಗಿದೆ. ಕಾಶಿಯಲ್ಲಿದ್ದ ಸುಮಾರು 1999 ಶಿವ ದೇಗುಲಗಳಲ್ಲಿ ಹೆಚ್ಚಿನವುಗಳನ್ನೆಲ್ಲಾ ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿಸಿರುವನು. ಈಗ ಕಾಶಿಯಲ್ಲಿ ಕೇವಲ 513 ಮಂದಿರಗಳು ಮಾತ್ರ ಉಳಿದಿವೆ. ಒಮ್ಮೆ ಔರಂಗಜೇಬನಿಗೆ ತೀರಾ ಅನಾರೋಗ್ಯ ಉಂಟಾದಾಗ ಕಾಶಿ ವಿಶ್ವನಾಥ ದೇಗುಲದಲ್ಲಿ ಅವನ ಹೆಸರಿನಲ್ಲಿ ಪೂಜೆ ಮಾಡಿದ ಬಳಿಕ ಗುಣಮುಖನಾಗುತ್ತಾನೆ. ಆದರೆ ಗುಣಮುಖನಾದ ಬಳಿಕ ಅವನು, ಕಾಶಿ ವಿಶ್ವನಾಥನ ದೇಗುಲದ ಮೇಲೆಯೇ ಮೊದಲು ದಾಳಿ ಮಾಡಿರುವನು. ಇಂತಹ ಕ್ರೂರಿಯ ಸೇನೆಯು ಅಯೋಧ್ಯೆಗೆ ದಾಳಿ ಮಾಡುತ್ತದೆ. ಅಯೋಧ್ಯಾವಾಸಿಗಳು ಇವರನ್ನು ಎದುರಿಸಲು ತಮ್ಮಲ್ಲಿ ಮೂರು ತಂಡಗಳನ್ನು ರಚನೆ ಮಾಡುತ್ತಾರೆ. ಒಂದನೇ ತಂಡದಲ್ಲಿ ಹಿಂದುಗಳು, ಎರಡನೇ ತಂಡದಲ್ಲಿ ಚಿಮಟಾ ಎಂಬ ಶಸ್ತ್ರಧಾರಿ ಸಾಧುಗಳು ಹಾಗೂ ಮೂರನೇ ತಂಡದಲ್ಲಿ ಗುರುಗೋವಿಂದ ಸಿಂಗರ ಸಿಖ್ಖರ ಸೇನೆ. ಮೂರೂ ಒಟ್ಟಾಗಿ ಔರಂಗಜೇಬನ ದಾಳಿಯನ್ನು ಎದುರಿಸಿ ಅವನ ಸೇನೆಯನ್ನು ಧೂಳೀಪಟ ಮಾಡುತ್ತಾರೆ. ಅಳಿದುಳಿದ ಸೈನಿಕರು ಓಡಿ ಹೋಗುತ್ತಾರೆ. ಸ್ವಲ್ಪ ಸಮಯದಲ್ಲಿ ಔರಂಗಜೇಬನು ನಡೆಸಿದ ಎರಡನೇ ದಾಳಿಯನ್ನು ಕೂಡಾ ಆಯೋಧ್ಯಾವಾಸಿಗಳು ಬಹಳ ವ್ಯವಸ್ಥಿತವಾಗಿ ಎದುರಿಸಿ ಗೆಲ್ಲುತ್ತಾರೆ. ಆ ಬಳಿಕ 4 ವರ್ಷಗಳ ಕಾಲ ಔರಂಗಜೇಬನು ಅಯೋಧ್ಯೆಯ ಕಡೆ ತಿರುಗಿ ನೋಡುವುದಿಲ್ಲ.
ಮುಂದೆ, 1664 ರಲ್ಲಿ ಮತ್ತೆ ಮುಸ್ಲಿಮರಿಂದ ಬಲವಾದ ದಾಳಿ ನಡೆಯುತ್ತದೆ. ಇದರಲ್ಲಿ 10,000 ಹಿಂದುಗಳ ಹತ್ಯೆ ನಡೆಯುತ್ತದೆ. ಈ ಶವಗಳನ್ನು ಅಯೋಧ್ಯೆಯಲ್ಲಿರುವ ಕಂದರ್ಪ ಎಂಬ ಪವಿತ್ರವಾದ ಸರೋವರಕ್ಕೆ ಹಾಕಿ, ಅದರ ಸುತ್ತಲೂ ಭದ್ರವಾದ ಗೋಡೆಯನ್ನು ನಿರ್ಮಿಸಿ, ಸರೋವರದ ನೀರನ್ನು ಮಲಿನಗೊಳಿಸುತ್ತಾರೆ.
ಮುಂದೆ, ಲಕ್ನೋದ ರಾಜ ನವಾಬನ ಕಾಲದಲ್ಲಿ ಮೂರು ಬಾರಿ ಯುದ್ಧ ನಡೆಯುತ್ತದೆ. ಪ್ರಾರಂಭದಲ್ಲಿ ಹಿಂದೂಗಳಿಗೆ ಗೆಲುವಾದರೂ, ಆಮೇಲೆ ಸ್ವಲ್ಪ ಸಮಯದಲ್ಲೇ ನಡೆದ ಯುದ್ಧದಲ್ಲಿ ಮುಸ್ಲಿಮರು ಗೆಲುವು ಸಾಧಿಸಿ ಅಯೋಧ್ಯೆಯನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ಒಂದರ ಮೇಲೊಂದರಂತೆ ದಾಳಿ ನಡೆಯುತ್ತಾ, ಒಮ್ಮೆ ಹಿಂದುಗಳಿಗೆ, ಮಗದೊಮ್ಮೆ ಮುಸ್ಲಿಮರಿಗೆ ಜಯವಾಗಿ ಅಯೋಧ್ಯೆಯನ್ನು ತಮ್ಮ ಸ್ವಾಧೀನಪಡಿಸತೊಡಗಿದರು.
ಆ ಬಳಿಕ, ಬ್ರಿಟಿಷರ ಆಳ್ವಿಕೆಯ ಕಾಲಘಟ್ಟ ಪ್ರಾರಂಭವಾಯಿತು. 1912 ರಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ನಡೆಯುತ್ತದೆ. 1934ರಲ್ಲಿ ಮತ್ತೊಮ್ಮೆ ಸಂಘರ್ಷ ನಡೆಯುತ್ತದೆ. ಇದರಲ್ಲಿ ಮೂವರು ಮುಸಲ್ಮಾನರು ಕೊಲ್ಲಲ್ಪಡುವರು ಹಾಗೂ ಹಿಂದುಗಳಿಗೆ ಜಯ ಲಭಿಸುವುದು. ಆದರೆ ಬ್ರಿಟಿಷರು ಹಿಂದುಗಳಿಂದಲೇ, ಅವರು ಕೆಡವಿದ ಮೂರು ಗುಂಬಜ್ ಗಳನ್ನು ಕಟ್ಟಿಸುತ್ತಾರೆ. ಕುರಾನಿನಲ್ಲಿ ಹೇಳಿರುವಂತೆ, 12 ವರ್ಷ ನಮಾಜ್ ಮಾಡದಿರುವ ಮಸೀದಿಯು ಮಸೀದಿಯಾಗಿ ಉಳಿಯುವುದಿಲ್ಲ, ದೇವರ ವಿಗ್ರಹ, ಚಿತ್ರಗಳು ಇತ್ಯಾದಿ ಇರುವಂತಹ ಕಟ್ಟಡದಲ್ಲಿ ಮಾಡಿದ ಪ್ರಾರ್ಥನೆ ಅಲ್ಲಾಹನಿಗೆ ಒಪ್ಪಿಗೆ ಆಗುವುದಿಲ್ಲ ಹಾಗೂ ಇನ್ನೊಬ್ಬರ ಆಕ್ಷೇಪವಿರುವ ಜಾಗದಲ್ಲಿ ಮಾಡಿದ ಪ್ರಾರ್ಥನೆ ಅಲ್ಲಾನಿಗೆ ತಲುಪುವುದಿಲ್ಲ. ಅಯೋಧ್ಯೆಯಲ್ಲಿ ಇರುವ ಮಸೀದಿಯ ಗುಂಬಜ್ ಗಳನ್ನು ಹಿಂದುಗಳು ಕಟ್ಟಿದ ಕಾರಣದಿಂದ ಅವುಗಳಲ್ಲಿ ದೇವದೇವತೆಗಳ ಚಿತ್ರಗಳು ಹಾಗೂ ದಶಾವತಾರದ ಚಿತ್ರಗಳು ಇದ್ದವು. ಯಾವುದೇ ಕಾರಣಕ್ಕೂ ಮುಸಲ್ಮಾನರಿಗೆ ಸೇರದ, ಎಲ್ಲಾ ದೃಷ್ಟಿಯಿಂದಲೂ ಹಿಂದುಗಳಿಗೆ ಸೇರತಕ್ಕಂತಹ ಅಯೋಧ್ಯೆ ನಮ್ಮದು ಎಂಬ ವಾದವಿರುವುದರಿಂದ ಅದು ಪ್ರಾರ್ಥನಾ ಯೋಗ್ಯ ಮಸೀದಿಯಾಗಿರುವುದಿಲ್ಲ.1935 ರಿಂದ ಇಂದಿನವರೆಗೆ ಆ ಪ್ರದೇಶವನ್ನು ಒಬ್ಬನೇ ಒಬ್ಬ ಮುಸ್ಲಿಮನು ಪ್ರವೇಶ ಮಾಡಿಲ್ಲ.
ಆದರೆ, ಬ್ರಿಟಿಷರದ್ದು ಒಡೆದು ಆಳುವ ನೀತಿಯಾದುದರಿಂದ, ಮುಸ್ಲಿಮರ ಪರವಾಗಿ ಬ್ರಿಟಿಷರು ನಿಲ್ಲುತ್ತಾರೆ. ನಮ್ಮ ದೇಶ ಬಾಂಧವರ ಹೋರಾಟದಿಂದ 1947ರಲ್ಲಿ ಬ್ರಿಟಿಷರ ಹಿಡಿತದಿಂದ ನಮಗೆ ಬಿಡುಗಡೆಯಾಗಿ, ಸ್ವಾತಂತ್ರ ಸಿಕ್ಕಿತು. ಇದಾದ ನಾಲ್ಕು ತಿಂಗಳುಗಳಲ್ಲಿ ಅಯೋಧ್ಯೆಯಲ್ಲಿ ವಿಶಿಷ್ಟ ಘಟನೆಯೊಂದು ನಡೆಯಿತು. 1949 ಡಿಸೆಂಬರ್ 22ನೇ ತಾರೀಕು. ರಾಮ ಮಂದಿರದ ಸುತ್ತ ಬಲವಾದ ಬೇಲಿಯಿತ್ತು. ರಾಮನ ದರ್ಶನ ಮಾಡುವ ಅವಕಾಶ ಹಿಂದುಗಳಿಗೆ ಇರಲಿಲ್ಲ. ಅಬ್ದುಲ್ ರಜಾ಼ಕ್ ಎಂಬ ಮುಸಲ್ಮಾನ ಪೇದೆಯು ರಾತ್ರಿ ಹೊತ್ತಲ್ಲಿ ಮಸೀದಿಯನ್ನು ಕಾಯುತ್ತಾ ಇದ್ದನು. ಅವನು 23ನೇ ತಾರೀಕು ದಿನ ಬೆಳಗ್ಗೆ ಜಿಲ್ಲಾ ಕಲೆಕ್ಟರ್ ರಲ್ಲಿ ಬಂದು ವಿಶೇಷವಾದ, ಅದ್ಭುತವಾದ ವಿಷಯವೊಂದರ ಬಗ್ಗೆ ದೂರು ಕೊಡುವನು. .ಏನೆಂದರೆ, 23ನೇ ತಾರೀಕಿನ ಬೆಳ್ಳಂಬೆಳಗ್ಗೆ 2ಗಂಟೆ ಹೊತ್ತಿಗೆ ಮಸೀದಿ ಒಳಗಡೆ ಒಂದು ದಿವ್ಯವಾದ, ಪ್ರಶಾಂತವಾದ ಬೆಳಕನ್ನು ಕಾಣುತ್ತಾನೆ. ಸ್ವಲ್ಪ ಹೊತ್ತಿಗೆ ಆ ಬೆಳಕು ಪ್ರಕಾಶಮಾನವಾಗಿ ಪ್ರಜ್ವಲಿಸತೊಡಗಿತು. ಸ್ವಲ್ಪ ಹೊತ್ತಿನಲ್ಲೇ ಹರಡಿದ್ದ ಬೆಳಕು ಒಂದು ಕಡೆ ಸೇರಿ ಬೆಳಗಲು ಪ್ರಾರಂಭವಾಯಿತು. ಬಳಿಕ ಅದರ ಮಧ್ಯದಲ್ಲಿ ನಾಲ್ಕು ವರ್ಷದ ಬಾಲಕನನ್ನು ಅವನು ಕಂಡನು. ಇದನ್ನು ನೋಡಿದ ತಕ್ಷಣ ಅವನು ಮೂರ್ಛೆ ತಪ್ಪಿ ಬಿದ್ದುಬಿಟ್ಟನು. ಎಚ್ಚರವಾದಾಗ ಮಸೀದಿಯ ಬಾಗಿಲು ತೆರೆದಿತ್ತು. ಸಾವಿರಾರು ಹಿಂದುಗಳ ಜಯಘೋಷ ಕೇಳಿಬರುತ್ತಿತ್ತು!
ಇದನ್ನು ಕೇಳಿದ ಜಿಲ್ಲಾಧಿಕಾರಿಗೆ ಬಹಳ ಆಶ್ಚರ್ಯವಾಗುತ್ತದೆ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ತಪಾಸಣೆ ನಡೆಸಲು ಅಜ್ಞಾಪಿಸುತ್ತಾರೆ. ಅಧಿಕಾರಿಗಳು ಅಯೋಧ್ಯೆಗೆ ಬರುವಾಗ ವೇದಿಕೆಯ ಮೇಲೆ ರಾಮನ ವಿಗ್ರಹವು ಕಾಣುತ್ತದೆ. ಅವರು ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತಾರೆ. ಆಗ ಜಿಲ್ಲಾಧಿಕಾರಿಯಾಗಿದ್ದ ಕೇರಳದ ಕೆ.ಕೆ. ನಾಯರ್ ಎಂಬವರು, ರಾಮನ ಮೂರ್ತಿಯನ್ನು ತಾನು ತೆರವು ಮಾಡಲಾರೆ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರು. ಆಗ ಕೇಂದ್ರದಲ್ಲಿ ಸರಕಾರ ನಡೆಸುವವರಿಗೆ ಭಯವಾಗತೊಡಗಿತು. ಅವರು ಮೂರ್ತಿಯನ್ನು ಅಲ್ಲೇ ಬಿಟ್ಟು ಸರಕಾರದ ವತಿಯಿಂದ ಅದಕ್ಕೆ ಪೂಜೆ ಸಲ್ಲಿಸಲು ಪ್ರಾರಂಭ ಮಾಡಿದರು. 1949 ಡಿಸೆಂಬರ್ 23ನೇ ತಾರೀಕಿನಿಂದ ನಿತ್ಯ ನಿರಂತರ ಪೂಜೆ ಅಲ್ಲಿ ಶ್ರೀರಾಮ ಮೂರ್ತಿಗೆ ನಡೆಯುತ್ತಿದ್ದರೂ, ಹಿಂದುಗಳಿಗೆ ಹತ್ತಿರ ಹೋಗಿ ದರ್ಶನ ಮಾಡುವ ಅವಕಾಶವನ್ನು ನೀಡಲಾಗುವುದಿಲ್ಲ. ಭಕ್ತರು ದೂರದಿಂದ ಮಾತ್ರ ನೋಡುವ ಅವಕಾಶವಿತ್ತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ, ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದಿತ್ತು. 1980ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ತು ಮೂಲಕ ರಾಮನ ಸ್ಥಿತಿಗತಿಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ನಡೆಯುತ್ತದೆ.
ಮೊದಲಿಗೆ ಗಂಗಾಜಲ ಯಾತ್ರೆ ಪ್ರಾರಂಭಿಸುತ್ತಾರೆ. ಗಂಗಾಜಲವನ್ನು ತಂದು ಊರಿನ ದೇವಾಲಯದಲ್ಲಿ ಇರಿಸಿದರು. ಅಲ್ಲಿ ಎಲ್ಲರೂ ಗಂಗಾಜಲ ಸ್ವೀಕರಿಸಿದ ಬಳಿಕ, ಅಯೋಧ್ಯೆಯಲ್ಲಿ ನಡೆದ ಎಲ್ಲಾ ವಿಷಯಗಳನ್ನು ಅವರಿಗೆ ತಿಳಿಸುತ್ತಾರೆ. ಮುಂದೆ ರಾಮ-ಜಾನಕಿ ರಥಯಾತ್ರೆ ನಡೆಯಿತು. ಮೂರನೇ ಬಾರಿ ಶಿಲಾ ಪೂಜನ ಕಾರ್ಯಕ್ರಮ ನಡೆಯಿತು. ಇದರಲ್ಲಿ, ಅಯೋಧ್ಯೆಯಿಂದ ತಂದ ಇಟ್ಟಿಗೆಯನ್ನು ಊರಿನ ದೇವಸ್ಥಾನದಲ್ಲಿ ಇರಿಸಿದರು. ಅದನ್ನು 10-15ಮಂದಿ ರಾಮಭಜನೆ ಮಾಡುತ್ತಾ ಮನೆ ಮನೆಗೆ ತೆಗೆದುಕೊಂಡು ಹೋದಾಗ, ಮನೆಯವರಿಂದ ಅದಕ್ಕೆ ಪೂಜೆ ಮಾಡಲಾಯಿತು. ಅಲ್ಲಿ ಅಯೋಧ್ಯೆಯ ಪ್ರಸ್ತುತ ವಿದ್ಯಮಾನಗಳನ್ನು ತಿಳಿಸಿದರು. ಅಯೋಧ್ಯೆಯಿಂದ ಬಂದ ಮಣ್ಣಿನ ಇಟ್ಟಿಗೆಯು ಮನೆ ಮನೆಗಳಲ್ಲಿ ಪೂಜೆಗೊಂಡು ರಾಮಶಿಲೆಯಾಗಿ ಹಿಂತಿರುಗಿತು. ಈ ರೀತಿಯಲ್ಲಿ, ಸಮಾಜದ ಹಿಂದೂ ಬಾಂಧವರಿಗೆ ಅಯೋಧ್ಯೆಯ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ನಡೆಯಿತು.
1989ರ ಹೊತ್ತಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಶಿಲಾನ್ಯಾಸದ ಯೋಜನೆಯು ಪ್ರಾರಂಭವಾಗುತ್ತದೆ. ಲಾಲ್ ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯು ಗುಜರಾತಿನ ಸೋಮನಾಥದಿಂದ ಅಯೋಧ್ಯೆಯ ವರೆಗೆ ಸಾಗುತ್ತದೆ. ಬಿಹಾರದಲ್ಲಿ ಅವರ ಬಂಧನವಾಗುತ್ತದೆ. ಇದಕ್ಕೆ ಎಲ್ಲಾ ಕಡೆಗಳಿಂದ ವಿರೋಧ ವ್ಯರ್ಥವಾಗುತ್ತದೆ. ಎಲ್ಲಾ ಅಡೆತಡೆಗಳ ನಡುವೆಯೇ 1989 ನವೆಂಬರ್ 9ರ ಏಕಾದಶಿಯಂದು ರಾಮ ಜನ್ಮಸ್ಥಾನದಲ್ಲಿ ಒಬ್ಬ ದಲಿತ ಸ್ವಾಮೀಜಿಯವರ ಕೈಯಿಂದ ಶಿಲಾನ್ಯಾಸ ನೆರವೇರುತ್ತದೆ. ಹಾಗೆಯೇ,1990ರಲ್ಲಿ ಕರಸೇವೆ ಮಾಡುವುದೆಂದು ನಿಶ್ಚಯ ಮಾಡಲಾಗುತ್ತದೆ. ಆದರೆ ಇದನ್ನು ತಡೆಯಲು ಸರಯೂ ನದಿಗೆ ಮೊಸಳೆಯನ್ನು ಬಿಡುತ್ತಾರೆ. ಹೋಗುವ ದಾರಿಗೆ ವಿದ್ಯುತ್ ತಂತಿ ಬೇಲಿಯನ್ನು ಹಾಕಿ ತಡೆಯೊಡ್ಡಲಾಗುತ್ತದೆ. ಗೋಳಿಬಾರು, ಅಶ್ರುವಾಯುಗಳನ್ನೂ ಪ್ರಯೋಗಿಸಲಾಗುತ್ತದೆ. ಇದರಿಂದಾಗಿ ಕರಸೇವಕರಿಗೆ ಹಿನ್ನಡೆಯಾದರೂ, 1990 ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ ಕರಸೇವಕರು ಹೋರಾಟ ನಡೆಸುತ್ತಾರೆ. ಆದರೆ ಆ ಬಳಿಕ ಕರಸೇವೆ ಸ್ತಬ್ಧವಾಗುತ್ತದೆ. 1992 ರಲ್ಲಿ ಎರಡನೇ ಬಾರಿ ಕರೆ ಸೇವೆಗೆ ನಿರ್ಧಾರವಾಗುತ್ತದೆ. ಲಕ್ಷಾಂತರ ಕರಸೇವಕರು ಸೇರುತ್ತಾರೆ. ದೊಡ್ಡ ವೇದಿಕೆ ನಿರ್ಮಾಣವಾಗುತ್ತದೆ. ಅಲ್ಲಿ ಭಾಷಣ ನಡೆಯುತ್ತದೆ. ದಶಂಬರ 6ರಂದು 11:00 ಗಂಟೆಗೆ ಕರಸೇವಕರು ಗುಂಬಜ್ ಕಡೆಗೆ ಹೋಗುತ್ತಾರೆ. 12 ಗಂಟೆಗೆ ಒಂದು ಗುಂಬಜ್ ಕೆಳಕ್ಕೆ ಬೀಳುತ್ತದೆ. ಕೊನೆಗೆ, ಸಾಯಂಕಾಲ 4 ಗಂಟೆ ಹೊತ್ತಿಗೆ 3 ಗುಂಬಜ್ ಗಳು ಕೆಳಕ್ಕೆ ಬೀಳುತ್ತವೆ. ರಾತ್ರಿ ಬೆಳಗಾಗುವುದರೊಳಗೆ ತಾತ್ಕಾಲಿಕವಾಗಿ ರಾಮನ ಮಂದಿರ ನಿರ್ಮಾಣ ಮಾಡಿ, ರಾಮನ ವಿಗ್ರಹವನ್ನು ಪ್ರತಿಷ್ಠೆ ಮಾಡಲಾಗುತ್ತದೆ. ಆ ಬಳಿಕ ಇದು ನ್ಯಾಯಾಲಯದ ಮೆಟ್ಟಲು ಹತ್ತುತ್ತದೆ. 2019 ನವೆಂಬರಿನಲ್ಲಿ ನ್ಯಾಯಾಲಯದಿಂದ ರಾಮಲಲ್ಲ ಪರ ನ್ಯಾಯ ಸಿಗುತ್ತದೆ. 14,00೦ ಚ. ಅಡಿ ಪ್ರದೇಶ ರಾಮನಿಗೆ ಸೇರಿದೆ ಎಂಬ ತೀರ್ಪು ಪ್ರಕಟವಾಗುತ್ತದೆ. 500 ವರ್ಷಗಳ ಕಾಲ ಹೋರಾಟದ, 4 ಲಕ್ಷ ಜನರ ಬಲಿದಾನದ ಫಲವಾಗಿ ರಾಮ ಜನ್ಮಭೂಮಿಯು ಹಿಂದುಗಳ ವಶವಾಗುತ್ತದೆ. 2020 ಅಗಸ್ಟ್ 5ಕ್ಕೆ, ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಭೂಮಿಪೂಜೆ ನಡೆದು, 2024 ಜನವರಿ 22ಕ್ಕೆ ಶ್ರೀರಾಮ ದೇಗುಲದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ.
ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ನಾವೆಲ್ಲರೂ ಅತ್ಯಂತ ಭಾಗ್ಯವಂತರು…
ಈ ಘಳಿಗೆಯನ್ನು ಸವಿಯೋಣ…🙏
ಜೈ ಶ್ರೀ ರಾಮ್
ಆಡಿಯೋ ಮೂಲ : ಶ್ರೀಯುತ ರಾಧಾಕೃಷ್ಣ ಅಡ್ಯಂತಾಯ
ಲಿಪಿಕಾರ್ತಿ :ಶಂಕರಿ ಶರ್ಮ, ಪುತ್ತೂರು.
ಅತ್ಯುತ್ತಮ ಮಾಹಿತಿಯುಳ್ಳ ಲೇಖನ… ವಿಷಯ ಎಲ್ಲಿಂದಲಾದರೂ ತೆಗೆದುಕೊಂಡಿರಲಿ..ನಿರೂಪಣೆ ಸೊಗಸಾಗಿ ಮೂಡಿಬಂದಿದೆ… ಧನ್ಯವಾದಗಳು ಶಂಕರಿ ಮೇಡಂ
ಹೆಚ್ಚಿನವರಿಗೆ ಗೊತ್ತಿಲ್ಲದ ಅಪರೂಪದ ಮಾಹಿತಿ. ಆಡಿಯೋವನ್ನು ಸೊಗಸಾಗಿ ಅಕ್ಷರರೂಪಕ್ಕಿಳಿಸಿದುದಕ್ಕೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಮೇಡಂ, ಸಾಕಷ್ಟು ವಿಷಯಗಳಿವೆ ಇದರಲ್ಲಿ.
ಗೊತ್ತಿಲ್ಲದ ಮಾಹಿತಿ ಸೊಗಸಾಗಿದೆ