ಗೋಪುರಗಳ ನಾಡಿನಲ್ಲಿ…ಹೆಜ್ಜೆ 6
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಧುರೈ ಮೀನಾಕ್ಷಿ ಮಂದಿರ – 04/10/2023
ಶುಚೀಂದ್ರಂನಿಂದ ಹೊರಟ ನಾವು ಅಂದಾಜು 240 ಕಿಮೀ ದೂರದಲ್ಲಿರುವ ಮಧುರೈ ತಲಪಿದಾಗ ಮಧ್ಯರಾತ್ರಿ ಸಮೀಪಿಸಿತ್ತು. ಹೋಟೆಲ್ ‘ರಾಜಧಾನಿ’ಯಲ್ಲಿ ನಮ್ಮ ವಾಸ್ತವ್ಯ. ಮರುದಿನ ಮಧುರೈ ಮೀನಾಕ್ಷಿಯನ್ನು ಕಣ್ತುಂಬಿಸಿಕೊಳ್ಳಲು ಬೆಳಗ್ಗೆ ಬೇಗನೆ ಸಿದ್ಧರಾದೆವು. ತಂಡದ ಇತರರು ಬರಲು ಇನ್ನೂ ಸಮಯವಿದ್ದುದರಿಂದ ಹೋಟೆಲ್ ನ ಎದುರು ಸುಮ್ಮನೇ ಅಡ್ಡಾಡಿದಾಗ, ಕಾಫಿ/ಚಹಾದ ಅಂಗಡಿ ಕಾಣಿಸಿತು. ಪಕ್ಕದಲ್ಲಿಯೇ ಬೃಹತ್ ಗಾತ್ರದ ಇಡ್ಲಿ ಪಾತ್ರೆ ಕಾಣಿಸಿತು. ರಸ್ತೆಬದಿಯಲ್ಲಿ ಎಷ್ಟು ಸರಳ ವಿಧಾನದಲ್ಲಿ ಬಿಸಿಬಿಸಿ ಇಡ್ಲಿ ಮಾಡುತ್ತಾರಲ್ಲಾ ಇವರು ಎಂಬ ಕುತೂಹಲದಿಂದ ಅವರನ್ನು ಮಾತನಾಡಿಸಿದೆ. ಒಂದು ಬಾರಿಗೆ 120 ಇಡ್ಲಿ ಸಿದ್ಧವಾಗುತ್ತದೆ ಎಂದರು. ಅಲ್ಲೊಂದು ರುಚಿಯಾದ ಕಾಫಿ ಸೇವನೆ ಮಾಡಿದೆವು. ನಮ್ಮ ಅಂದಿನ ಊಟೋಪಚಾರಕ್ಕಾಗಿ ‘ಹೋಟೆಲ್ ಶ್ರೀ ಶಬರೀಶ್’ ಎಂಬಲ್ಲಿಗೆ ಕರೆದೊಯ್ದರು. ಇಡ್ಲಿ, ದೋಸೆ, ಪೊಂಗಲ್ , ಸಿಹಿ ಇದ್ದ ಪುಷ್ಕಳವಾದ ‘ಮಿನಿ ಬ್ರೇಕ್ ಫಾಸ್ಟ್’ ತಿಂದೆವು. ತಮಿಳುನಾಡಿನಲ್ಲಿ ನಮ್ಮ ನಾಲಿಗೆಗೆ ರುಚಿಸುವ ಸಸ್ಯಾಹಾರ ಊಟ/ತಿಂಡಿ, ಅಲ್ಲಲ್ಲಿ ಧಾರಾಳವಾಗಿ ಸಿಗುತ್ತವೆ. ಆದರೆ ನೆರೆಯ ಕೇರಳ ಹಾಗೂ ಪಕ್ಕದ ಆಂಧ್ರಪ್ರದೇಶದಲ್ಲಿ ಸಸ್ಯಾಹಾರದ ಲಭ್ಯತೆ ಕಡಿಮೆ.
ಉಪಾಹಾರದ ನಂತರ ಮಧುರೈ ಮೀನಾಕ್ಷಿ ಮಂದಿರದತ್ತ ಹೊರಟೆವು.
ದಂತಕಥೆ ಪ್ರಕಾರ, ಸ್ಥಳೀಯ ರಾಜ-ರಾಣಿಯರಾಗಿದ್ದ ಮಲಯಧ್ವಜ (ಕುಲಶೇಖರ) ಪಾಂಡ್ಯ ಮತ್ತು ಕಾಂಚನಮಾಲಾ ದಂಪತಿಗಳಿಗೆ ಮಕ್ಕಳಿರಲಿಲ್ಲ. ಈ ನಿಮಿತ್ತ ಅವರು ಕೈಗೊಂಡ ಯಜ್ಞದ ಫಲವಾಗಿ, ಪಾರ್ವತಿಯ ಅಂಶದಿಂದ 5 ವರ್ಷದ ಸುಂದರ ಬಾಲಕಿಯಾದ ಮೀನಾಕ್ಷಿಯು ಯಜ್ಞಕುಂಡದಿಂದ ಉದ್ಭವಿಸಿದಳು. ಆಕೆಗೆ ಮೂರು ಸ್ತನಗಳಿದ್ದುವು. ಅಪ್ರತಿಮ ಚತುರೆಯಾಗಿದ್ದ ಆಕೆ, ಯುಕ್ತ ವಯಸ್ಸಿಗೆ ಬಂದಾಗ ತಾನೇ ರಾಜ್ಯವಾಳುತ್ತಿದ್ದಳು. ಮಲಯಧ್ವಜ ರಾಜನಿಗೆ ಮೀನಾಕ್ಷಿಯ ವಿವಾಹದ ಬಗ್ಗೆ ಚಿಂತೆಯಿತ್ತು. ಯಾಕೆಂದರೆ ಆಕೆ, ತನ್ನನ್ನು ನೋಡಲು ಬಂದ ರಾಜಕುಮಾರರನ್ನು ಯುದ್ಧದಲ್ಲಿ ಸೋಲಿಸುತ್ತಿದ್ದಳು. ಆಗ ಋಷಿಯೊಬ್ಬರು ‘ಯಾರ ಮುಂದೆ ಆಕೆ ನಾಚಿಕೆಯಿಂದ ತಲೆಬಾಗಿ ನಿಲ್ಲುತ್ತಾಳೋ, ಆಗ ಅವಳ ದೈಹಿಕ ಅಸಹಜತೆ ಸರಿಯಾಗುತ್ತದೆ ಹಾಗೂ ಅವನೇ ಅವಳನ್ನು ವಿವಾಹವಾಗುತ್ತಾನೆ’ ಎಂದರಂತೆ. ಮುಂದೆ ಕೈಲಾಸದಲ್ಲಿರುವ ಶಿವನು, ತನ್ನ ನಿಜ ಸ್ವರೂಪವನ್ನು ಮರೆಮಾಚಿ, ಅಂದದ ರೂಪದ ‘ಸುಂದರೇಶ್ವರ’ನಾಗಿ ಮೀನಾಕ್ಷಿಯ ಮುಂದೆ ಬಂದನಂತೆ. ಅವನ ರೂಪಕ್ಕೆ ಮನಸೋತ ಮೀನಾಕ್ಷಿಯ ಅಸಹಜತೆ ಸರಿಯಾಯಿತು, ಯುದ್ಧ ಮಾಡದೆ ಆಕೆ ಲಜ್ಜೆಯಿಂದ ತಲೆತಗ್ಗಿಸಿದಳು. ವಿಷ್ಣುವು ‘ಪೆರುಮಾಳ್’ ಆಗಿ ಬಂದು, ಮೀನಾಕ್ಷಿಗೆ ಅಣ್ಣನ ಸ್ಥಾನದಲ್ಲಿ ನಿಂತು ಸುಂದರೇಶ್ವರನಿಗೆ ಅವಳನ್ನು ಧಾರೆಯೆರೆದು ಕೊಟ್ಟನಂತೆ. ಹೀಗೆ ಮೀನಾಕ್ಷಿ-ಸುಂದರೇಶ್ವರರ ಮದುವೆ ಸಂಪನ್ನವಾಯಿತು.
ಮಧುರೈ ಮೀನಾಕ್ಷಿ ದೇವಾಲಯವು ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿರುವ ಒಟ್ಟು 14 ಗೋಪುರಗಳಲ್ಲಿ 2 ಗೋಪುರಗಳಿಗೆ ಬಂಗಾರದ ಹೊದಿಕೆಯಿದೆ. ಈ ದೇವಸ್ಥಾನದ ಪ್ರಮುಖ ಗೋಪುರವು 170 ಅಡಿ ಎತ್ತರವಿದೆ. ಈಗ ನಾವು ಕಾಣುವ ದೇವಾಲಯವನ್ನು 1600 ರ ಅಸುಪಾಸಿನಲ್ಲಿ ರಲ್ಲಿ ನಿರ್ಮಿಸಿದರಂತೆ, ದೇವಸ್ಥಾನದ ಸಂಕೀರ್ಣವು ಸುಮಾರು 45 ಎಕ್ರೆ ಪ್ರದೇಶವನ್ನು ಆವರಿಸಿದೆ. ಆವರಣದಲ್ಲಿ ಸೊಗಸಾದ ಪುಷ್ಕರಿಣಿಯಿದೆ.
ಸಾಮಾನ್ಯವಾಗಿ, ದೇವ-ದೇವತೆಯರ ವಿಗ್ರಹಗಳು ಅಭಯಹಸ್ತವನ್ನು ಹೊಂದಿರುತ್ತವೆ. ಆದರೆ, ಪಚ್ಚೆಕಲ್ಲಿನಲ್ಲಿ ಕೆತ್ತಲಾದ ಮೀನಾಕ್ಷಿಯ ಸೊಗಸಾದ ವಿಗ್ರಹದ ಬಲಗೈಯಲ್ಲಿ ಬಂಗಾರದ ಗಿಳಿ ಹಾಗೂ ಎಡಗೈಯಲ್ಲಿ ಬಂಗಾರದ ಕೇದಿಗೆ ಹೂ ಇದೆ. ಈ ದೇವಿ ತನ್ನ ಸೊಗಸಾದ , ವಿಶಾಲವಾದ ಕಣ್ಣುಗಳಿಂದ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ.
ಸಾವಿರಾರು ಕಲಾಕೃತಿಗಳಿದ್ದರೂ, ಒಂದು ಶಿಲ್ಪವನ್ನು ಪ್ರಮುಖವಾದ ವಿವರಿಸಿದರು. ಅದೇನೆಂದರೆ, ‘ಪೆರುಮಾಳ್’ -ಅಂದರೆ ವಿಷ್ಣು ತನ್ನ ತಂಗಿಯಾದ ‘ಮೀನಾಕ್ಷಿಯನ್ನು’ , ‘ಸುಂದರೆಶ್ವರನಿಗೆ’ ಧಾರೆಯೆರೆದು ಕೊಡುವ ಸನ್ನಿವೇಶ. ಆ ಪೆರುಮಾಳ್ ಪ್ರತಿಮೆಯ ಮುಖದಲ್ಲಿ, ತಂಗಿಗೆ ಮದುವೆಯಾದ ಸಾರ್ಥಕತೆ ಬಿಂಬಿಸುವ ಸೊಗಸು, ಆತನ ಕೈಯಲ್ಲಿರುವ ‘ಕೊಂಬುಗಿಂಡಿ’, ಎಲ್ಲಾ ವಿಗ್ರಹಗಳ ಕುಸುರಿ ಕೆಲಸ ನಿಜಕ್ಕೂ ಮನುಷ್ಯರಿಂದ ಸಾಧ್ಯವೇ ಎನಿಸುವಷ್ಟು ದೈವಿಕವಾಗಿದೆ. ಎಲ್ಲೂ ಫೊಟೊ ತೆಗೆಯುವಂತಿಲ್ಲ. ಹಾಗಾಗಿ ಇಲ್ಲಿಯ ಕಲಾವೈಭವವನ್ನು ಕಣ್ಣಿನಲ್ಲಿಯೇ ಸೆರೆಹಿಡಿಯಬೇಕಷ್ಟೆ.
ಈ ಬರಹದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=39228
(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ದಂತಕತೆಯೊಂದಿಗೆ ಬಹಳ ಸೊಗಸಾಗಿ ನಿರೂಪಿತವಾಗಿದೆ..ಚಿತ್ರ ಗಳು ಸಾಂದರ್ಭಿಕ ವಾಗಿ ಬಂದಿವೆ..
ಚಂದದ ಬರಹ
Beautiful. ಪ್ರವಾಸ ಹೋದಲ್ಲಿ ಅಲ್ಲಿನ ಸ್ಥಳೀಯ ಆಹಾರ ಪದ್ಧತಿಗಳ ರುಚಿ ನೋಡಿ ತಿಳಿದುಕೊಳ್ಳುವ ನಿಮ್ಮ ಪರಿ ಇಷ್ಟವಾಗುತ್ತದೆ.
ಸುಂದರ ದಂತಕಥೆಯೊಂದಿಗಿನ ಪ್ರವಾಸ ಲೇಖನ ಬಹಳ ಇಷ್ಟವಾಯಿತು.