ಗೋಪುರಗಳ ನಾಡಿನಲ್ಲಿ…ಹೆಜ್ಜೆ 1
ನಿವೃತ್ತಿಯ ನಂತರ, ಅವಕಾಶ ಲಭಿಸಿದಾಗ, ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣ ಹಾಗೂ ಪ್ರವಾಸವನ್ನು ಇಷ್ಟಪಡುವ ಜಾಯಮಾನ ನಮ್ಮದು. 2023 ರ ಅಕ್ಟೋಬರ್ ತಿಂಗಳಿನಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಶ್ರೀ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ, ಟ್ರಾವೆಲ್ಸ್4ಯು ಪ್ರವಾಸಿ ಸಂಸ್ಥೆಯ ಸಹಯೋಗದೊಂದಿಗೆ ದಕ್ಷಿಣ ಭಾರತ ಪ್ರವಾಸ ಅಯೋಜನೆಯಾಗಿದೆ ಎಂಬ ಸುದ್ದಿ ತಿಳಿಯಿತು. ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣ ಭಾರತ ಪ್ರವಾಸ ಮಾಡಿದ್ದ ನೆನಪು ಮಸುಕಾಗಿತ್ತು. ಆಲ್ಲದೆ, ಈ ಬಾರಿ ಭೇಟಿ ಕೊಡಲಿರುವ ಕೆಲವು ಸ್ಥಳಗಳು ಆಗಿನ ಪಟ್ಟಿಯಲ್ಲಿ ಇದ್ದಿರಲಿಲ್ಲ. ಟ್ರಾವೆಲ್ಸ್4ಯು ಸಂಸ್ಥೆಯೊಂದಿಗೆ ಈಗಾಗಲೇ ಸುಲಲಿತವಾಗಿ ಕೆಲವು ಪ್ರವಾಸ ಮಾಡಿದ್ದ ಕಾರಣ, ಬೇರೇನೂ ಆಲೋಚಿಸದೆ ತಕ್ಷಣವೇ ಮುಂಗಡ ಹಣ ಪಾವತಿಸಿ ಹೆಸರು ನೋಂದಾಯಿಸಿದೆವು. ಬೆಂಗಳೂರಿನಲ್ಲಿರುವ ಅಮ್ಮನನ್ನೂ ಸೇರಿಸಿಕೊಂಡೆವು. ನಮ್ಮ ವ್ಯವಸ್ಥೆ ಗೊತ್ತಾದ ಮೇಲೆ, ಎದುರುಗಡೆ ಮನೆಯ ಸ್ನೇಹಿತರೂ ಜೊತೆಯಾದರು. ಹೀಗೆ ಪುತ್ತೂರಿನಿಂದ ನಾರಾಯಣ ಭಟ್ -ಸವಿತಾ ದಂಪತಿ, ಬೆಳ್ಳಾರೆಯಲ್ಲಿರುವ ಜಯಲಕ್ಷ್ಮಿ, ಮೈಸೂರಿನಿಂದ ಗಣೇಶ್-ಹೇಮಮಾಲಾ, ಚಂದ್ರಾವತಿ, ಸ್ನೇಹಿತರಾದ ರಮೇಶ್ ಪ್ರಸನ್ನಕುಮಾರಿ ದಂಪತಿ ..ಇಷ್ಟು ಮಂದಿ ದಕ್ಷಿಣಭಾರತ ಪ್ರವಾಸಕ್ಕೆ ಸಿದ್ಧರಾದೆವು. ಪೂರ್ವಭಾವಿಯಾಗಿ, ಪುತ್ತೂರಿನ ಶ್ರೀ ಪ್ರಸನ್ನ ಭಟ್ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ನಾವು ಭಾಗವಹಿಸದಿದ್ದರೂ, ಮಾಹಿತಿ ಹಾಗೂ ಟ್ರಾವೆಲ್ ಕಿಟ್ ನಮ್ಮ ಕೈಸೇರಿತ್ತು.
ಅಕ್ಟೋಬರ್ 01,2023 ರ ಮಧ್ಯಾಹ್ನ ಒಂದುವರೆ ಗಂಟೆಯ ಸಮಯ. ಮೈಸೂರಿನಿಂದ ಹೊರಟ ನಾವು ಕಾಸರಗೋಡಿನ ರೈಲ್ವೇನಿಲ್ದಾಣವನ್ನು ತಲಪಿಯಾಗಿತ್ತು. ಸ್ವಲ್ಪ ಸಮಯದಲ್ಲಿ, ಬೇರೆ ಬೇರೆ ಊರುಗಳಿಂದ ಬಂದು ಪುತ್ತೂರಿನಿಂದ ಜೊತೆಯಾದ ನಮ್ಮ ತಂಡದ ಸಹಪ್ರಯಾಣಿಕರು ಕಾಸರಗೋಡಿಗೆ ತಲಪಿದರು. ಎಲ್ಲರೂ ‘ವಂದೇ ಭಾರತ್ ‘ರೈಲ್ವೇ ಇದ್ದ ಪಕ್ಕದ ಪ್ಲಾಟ್ ಫಾರ್ಮ್ ಗೆ ಹೋದೆವು. ಅಲ್ಲಿ ಭೇಟಿಯಾದ ಕೆಲವರು ಪರಿಚಿತರು, ಇನ್ನು ಕೆಲವರು ಅಪರಿಚಿತರು. ನಮ್ಮೆಲ್ಲರ ಗುರಿ ಹಾಗೂ ಗಮ್ಯ ಒಂದೇ ಆಗಿದ್ದ ಕಾರಣ ಪರಸ್ಪರ ಕುಶಲೋಪರಿ ಆರಂಭವಾಗಿತ್ತು. ಮಧ್ಯಾಹ್ನ 02.30 ಕ್ಕೆ ‘ವಂದೇ ಭಾರತ್’ ಕಾಸರಗೋಡಿನಿಂದ ತಿರುವನಂತಪುರದತ್ತ ಹೊರಟಿತು.
‘ವಂದೇ ಭಾರತ್’ ಉತ್ತಮ ಶ್ರೇಣಿಯ ರೈಲು ಆದ ಕಾರಣ, ಪ್ರಥಮ ಬಾರಿಗೆ ಈ ರೈಲಿನಲ್ಲಿ ಬರುವವರಿಗೆ ಅದೊಂದು ಸಡಗರ. ನಮ್ಮ ತಂಡದಲ್ಲಿದ್ದ 70 ಮಂದಿಯಲ್ಲಿ ಕೆಲವರು ಮೊದಲ ಕೋಚ್ ನಲ್ಲೂ , ಇನ್ನು ಕೆಲವರು ಕೊನೆಯ ಕೋಚ್ ನಲ್ಲೂ, ಮಧ್ಯದ ಕೋಚ್ ಗಳಲ್ಲೂ ಇದ್ದ ಕಾರಣ ನಮಗೆ ರೈಲಿನೊಳಗೆ ಅತ್ತಿಂದಿತ್ತ ಓಡಾಡಲು ಪಿಳ್ಳೆನೆಪ ನಿರಾಯಾಸವಾಗಿ ಲಭಿಸಿತು. ಹಾಗೆಯೇ ರೈಲಿನ ಆಹಾರ ದಾಸ್ತಾನು ಕೋಣೆಯನ್ನು ಹಣಿಕಿ ನೋಡಿದೆವು. ಎ಼ಕ್ಸಿಕ್ಯುಟಿವ್ ಚಯರ್ ಕೋಚ್ ನಲ್ಲಿಯೂ ಅತ್ತಿಂದಿತ್ತ ತಿರುಗಾಡಿ, ಕೆಲವರ ಸಿಡುಕು ನೋಟವನ್ನೂ ಎದುರಿಸಿದೆವು. ‘ವಂದೇ ಭಾರತ್’ ರೈಲಿನ ಎಲ್ಲಾ ಕೋಚ್ ಗಳು ಹವಾ ನಿಯಂತ್ರಿತ. ವಿಮಾನದಲ್ಲಿ ಇರುವಂತಹ ಆಸನ ವ್ಯವಸ್ಥೆ, ಹೊರಗಡೆ ನೋಡಲು ಅನುಕೂಲವಾಗುವಂತಹ ವಿಶಾಲವಾದ ಕಿಟಿಕಿಗಳು. ಎಕ್ಸಿಕ್ಯೂಟಿವ್ ಕೋಚ್ ನಲ್ಲಿರುವ ಕುರ್ಚಿಗಳು ಇನ್ನಷ್ಟು ವಿಶಾಲವಾಗಿದ್ದುವು ಹಾಗೂ ಅವುಗಳನ್ನು 360 ಡಿಗ್ರಿ ತಿರುಗಿಸಬಹುದು. ಪ್ರತಿ ಬೋಗಿಯಲ್ಲಿರುವ ಟಿವಿ ಪರದೆಯ ಮೇಲೆ ನಾವು ಯಾವ ಸ್ಥಳದಲ್ಲಿದ್ದೇವೆ, ತಲಪಬೇಕಾದ ಜಾಗ ಇನ್ನೆಷ್ಟು ದೂರವಿದೆ ಎಂಬ ಮಾಹಿತಿ ಮೂಡಿ ಬರುತ್ತಿತ್ತು. ಧ್ವನಿ ವ್ಯವಸ್ಥೆ ಮೂಲಕವೂ ಮಾಹಿತಿ ಲಭಿಸುತ್ತಿತ್ತು . ಹೀಗೆ ಪಡುವಣ ತೀರದ ಕೇರಳ ನಾಡಿನ ಪ್ರಕೃತಿ ಸೊಬಗನ್ನು ನೋಡುತ್ತಾ ಪ್ರಯಾಣಿಸುತ್ತಿದ್ದ ನಮಗೆ ಆಗಾಗ ವರುಣನೂ ಸಾಥ್ ಕೊಟ್ಟಿದ್ದ.
ಕಿಟಿಕಿಯ ಹೊರಗಡೆ ನೋಡುವುದು, ತೂಕಡಿಸುವುದು, ಹರಟೆ ಹೊಡೆಯುವುದು, ಏನಾದರೂ ಓದುವುದು, ಅರ್ಥವಾಗದ ಮಲೆಯಾಳಂ ಭಾಷೆಯ ಪತ್ರಿಕೆಯ ಮೇಲೆ ಕಣ್ಣಾಡಿಸುವುದು, ರೈಲ್ವೇ ಮಾಹಿತಿಯನ್ನು ಬಿತ್ತರಿಸುವ ಫಲಕದ ಕಡೆಗೆ ಕಣ್ಣು ಹಾಯಿಸುವುದು ಹೀಗೆಲ್ಲಾ ಮಾಡುತ್ತಾ ನಮ್ಮ ಪ್ರಯಾಣ ಸಾಗುತ್ತಿತ್ತು. ಕಾಸರಗೋಡಿನಿಂದ ಹೊರಟು ಅಂದಾಜು ಒಂದು ಗಂಟೆ ಆದ ಮೇಲೆ ನಮಗೆ ಲಘು ಉಪಾಹಾರ ಹಾಗೂ ಕಾಫಿ ವಿತರಿಸಿದರು. ಬೇರೆ ಏನೂ ಕೆಲಸವಿಲ್ಲದ ಕಾರಣ, ಆ ಪೊಟ್ಟಣಗಳಲ್ಲಿ ಏನಿದೆ ಎಂದು ನೋಡುವ ಕುತೂಹಲ.ಇನ್ನು ಅದರಲ್ಲಿ ಆಕಸ್ಮಿಕವಾಗಿ ತಮಗೆ ಸೇರದ ಆಹಾರ ಇದೆಯೇ ಎಂದು ಪರಿಶೀಲಿಸುವ ತವಕ. ನಮಗೆ ಕೊಡಲಾದ ಪ್ಯಾಕೆಟ್ ಗಳಲ್ಲಿ, ಅವಲಕ್ಕಿ ಮಿಕ್ಚರ್, ಉದ್ದಿನ ವಡೆ, ಶೇಂಗಾ ಚಿಕ್ಕಿ ಹಾಗೂ ಕಾಫಿ ತಯಾರಿಸಲು ಬೇಕಾಗುವ ಇನ್ ಸ್ಟಂಟ್ ಕಾಫಿ ಪುಡಿ, ಹಾಲಿನ ಪುಡಿ, ಸಕ್ಕರೆ, ಕದಡಿಸಲು ಒಂದು ಕಡ್ಡಿ ಇದ್ದುವು. ಆಮೇಲೆ ಒಂದು ಕಪ್ ಬಿಸಿನೀರು ಕೊಟ್ಟರು. ಪುಟ್ಟ ಪ್ಯಾಕೇಟ್ ಗಳನ್ನು ಬಿಡಿಸಿ ಬಿಸಿನೀರಿಗೆ ಹಾಕಿ ಕದಡಿಸಿ ‘ಕಾಫಿ’ ಎಂದು ಹೆಸರಿಸಿ ಕುಡಿದಿದ್ದಾಯಿತು. ಒಟ್ಟಿನಲ್ಲಿ, ಈ ಲಕ್ಸುರಿ ಪ್ರಯಾಣದಲ್ಲಿ ಸಿಗುವ ಆಹಾರವು ನೋಟಕ್ಕೆ ಬಲು ಚೆಂದ. ಅದನ್ನು ಸೇವಿಸುವುದಕ್ಕಿಂತಲೂ, ಆ ಬಗ್ಗೆ ಮಾತನಾಡುತ್ತಾ ಹಾಸ್ಯ ಮಾಡುತ್ತಾ ಸಮಯ ಕಳೆಯುವುದು ಬಲು ಸೊಗಸು.
ಪ್ರಯಾಣವೂ, ಪಟ್ಟಾಂಗವೂ ಮುಂದುವರೆಯಿತು. ಕೇರಳ ಕರಾವಳಿಯ ನಿಸರ್ಗ ಸೊಬಗು ಕಣ್ತುಂಬಿತು. ರಾತ್ರಿಯ ಊಟಕ್ಕೆ ರೋಟಿ, ದಾಲ್, ಅನ್ನ, ಪನೀರ್ ಗ್ರೇವಿ,ಪಾಯಸ, ಮೊಸರು, ಉಪ್ಪಿನಕಾಯಿ ಊಟ ಕೊಟ್ಟರು. ಊಟ ಮುಗಿಸಿ ಅದೂ ಇದೂ ಹರಟುತ್ತಿದ್ದಾಗ ‘ವಂದೇ ಭಾರತ್’ ರೈಲು ನಮ್ಮನ್ನು ಅನಂತ ಪದ್ಮನಾಭನ ಊರಿಗೆ ತಲಪಿಸಿಬಿಟ್ಟಿತ್ತು. ಒಟ್ಟು ಎಂಟು ಗಂಟೆಯ ಪ್ರಯಾಣ ಸುಖಕರವಾಗಿತ್ತು. ಬೇರೆ ಬೇರೆ ಬೋಗಿಯಲ್ಲಿದ್ದ ತಂಡದ ಎಲ್ಲಾ ಸದಸ್ಯರನ್ನು ಒಂದೆಡೆ ಸೇರಿಸಿ, ಎಲ್ಲರ ಗೊಂದಲಗಳನ್ನು ಪರಿಹರಿಸುತ್ತಾ, ಮಣಭಾರದ ಲಗೇಜುಗಳನ್ನು ನಿಭಾಯಿಸುತ್ತಾ, ಟ್ರಾವೆಲ್ಸ್4ಯು ಸಂಸ್ಥೆಯ ಶ್ರೀ ಬಾಲಕೃಷ್ಣ, ಶ್ರೀ ಪ್ರಶಾಂತ್, ಶ್ರೀಮತಿ ಅಂಬಿಕಾ ಹಾಗೂ ಶ್ರೀ ಚೇತನ್ ನಮ್ಮನ್ನು ಸ್ಥಳೀಯ ಬಸ್ ಮೂಲಕ ಸುಮಾರು 15 ಕಿ.ಮೀ ದೂರದಲ್ಲಿದ್ದ ‘ಹೋಟೆಲ್ ಜಿಂಜರ್’ ಗೆ ಕರೆದೊಯ್ದರು. ಅಲ್ಲಿ ನಮ್ಮ ಅಂದಿನ ವಾಸ್ತವ್ಯ ಸುಸೂತ್ರವಾಯಿತು.
(ಮುಂದುವರಿಯುವುದು)
-ಹೇಮಮಾಲಾ.ಬಿ. ಮೈಸೂರು
ಚೆನ್ನಾಗಿದೆ ಮೇಡಂ
ಧನ್ಯವಾದಗಳು.
ದಕ್ಷಿಣ ಭಾರತದ ಪ್ರವಾಸದ ಮುನ್ನುಡಿ ಚೆನ್ನಾಗಿದೆ
ಒಂದೇ ಭಾರತ್ ರೈಲಿನ ಪರಿಚಯ ಆಯಿತು
ವಂದನೆಗಳು
ಧನ್ಯವಾದಗಳು.
ಪ್ರವಾಸ ಕಥನ ದ ಆರಂಭ ಅದಕ್ಕೆ ಪೂರಕ ಚಿತ್ರ ನಿರೂಪಣೆ ಮುದ ತಂದಿತು…ಗೆಳತಿ ಹೇಮಾ..
ಧನ್ಯವಾದಗಳು
ಮತ್ತೊಂದು ಪ್ರವಾಸ ಕಥನದ ರಸದೌತಣ. ಎಕ್ಸಲೆಂಟ್ ಹೇಮಕ್ಕ, ನಿಮ್ಮ ಪ್ರವಾಸ ಕಥನ ಗಳೆಂದರೆ ಹಬ್ಬ ಹೇಮಕ್ಕ, ಅಷ್ಟು ಚಂದ
ಧನ್ಯವಾದಗಳು
ಸುವ್ಯವಸ್ಥಿತ, ಸೊಗಸಾದ ರೈಲು ಪ್ರಯಾಣದ ಅನುಭವ ಕಥನ ಬಹಳ ಚೆನ್ನಾಗಿದೆ.. .ಮುಂದಿನ ಕಂತಿಗೆ ಆತುರದಿಂದ ಕಾಯುವಂತಾಗಿದೆ.
ಒಂದೇ ಭಾರತ್ ರೈಲಿನ ಸೌಕರ್ಯಗಳನ್ನು ವಿವರಿಸುತ್ತ ಪ್ರವಾಸದ ಶುಭಾರಂಭವಾದ ಲೇಖನ ಮಾಲಿಕೆ ಮುದ ನೀಡುತ್ತಾ ಮುಂದಿನ ಕಂತಿಗೆ ಕಾಯುವಂತೆ ಮಾಡಿತು.