ಜಾಜಲಿಯ ಸಾಧನೆ…

Share Button

ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು. ಅವರ ತಪಸ್ಸು ಎಷ್ಟು ಕಠಿಣವಾಗಿತ್ತೆಂದರೆ ಮೈಮೇಲೆ ಹುತ್ತ ಬೆಳೆದುದೂ ಅವರ ಗಮನಕ್ಕೆ ಬರುತ್ತಿರಲಿಲ್ಲ. ಕಾರಣ ಏಕಾಗ್ರತಾ ಧ್ಯಾನದಿಂದ ಅವರು ಬಹಿರ್ಮುಖಗೊಳ್ಳುವುದೇ ಇಲ್ಲ. ಚ್ಯವನ, ವಾಲ್ಮೀಕಿ ಕತೆ ಹೀಗಾದರೆ ಇನ್ನೊಬ್ಬ ಮುನಿಯಿದ್ದ. ಆತನ ತಲೆಯಲ್ಲಿ ಜಟೆ ಬೆಳೆದುದಲ್ಲದೆ ಅದರಲ್ಲಿ ಗುಬ್ಬಚ್ಚಿಗಳು ನಿಶ್ಚಿಂತೆಯಿಂದ ಗೂಡು ಕಟ್ಟಿದವಂತೆ. ಬರೇ ಒಂದೆರಡು ದಿನಗಳ ಗೂಡಲ್ಲ! ಆ ಗುಬ್ಬಚ್ಚಿ ದಂಪತಿಗಳು ಗೂಡು ಕಟ್ಟಿ ವಾಸ ಮಾಡಿ ಮಕ್ಕಳಾದವು.  ಮರಿ ಮಕ್ಕಳಾದುವು. ಅವುಗಳ ಮಕ್ಕಳಿಗೂ ಮಕ್ಕಳಾದವಂತೆ.

ಈ ಮುನಿ ಯಾರು? ಈತನ ವಿಶೇಷತೆಯೇನು? ಎಂಬುದನ್ನು ನೋಡೋಣ.

ಹಿಂದಿನ ಒಂದು ಕಾಲದಲ್ಲಿ ಒಂದು ಬ್ರಾಹ್ಮಣ ದಂಪತಿಗೆ ಮಕ್ಕಳಿಲ್ಲದೆ ಇದ್ದು; ಬಹುಕಾಲದ ನಂತರ ಒಬ್ಬಮಗ ಹುಟ್ಟಿದ.  ಅವನಿಗೆ ಜಾಜಲಿ ಎಂದು ಹೆಸರಿಟ್ಟರು. ಇವನು ಸುಂದರನೂ ಚುರುಕು ಬುದ್ದಿಯವನೂ ಆಗಿದ್ದ. ಬ್ರಹ್ಮೋಪದೇಶವನ್ನು ಪಡೆದ ಬಾಲಕ ವೇದಾಧ್ಯಯನಕ್ಕೆಂದು ತೆರಳಿದ. ವೇದಾಧ್ಯಯನ ಪಾರಂಗತನಾದ ಜಾಬಲಿ ವನವೊಂದರಲ್ಲಿ ತಪೋ ನಿರತನಾದ.  ಮೊದ ಮೊದಲು ದೇಹಬಾಧೆಗಳನ್ನು ತೀರಿಸಲು ತಪಸ್ಸಿನಿಂದ ಬಹಿರ್ಮುಖನಾಗುತ್ತಿದ್ದ. ಮತ್ತೆ ಮತ್ತೆ ಹಣ್ಣು ಹಂಪಲುಗಳನ್ನು ಮಾತ್ರ ಸೇವಿಸುತ್ತ ಧ್ಯಾನಾಸಕ್ತನಾಗುತ್ತಿದ್ದ. ಕ್ರಮೇಣ ಎಲೆಗಳನ್ನು ತಿಂದು ಕೇವಲ ನೀರು ಕುಡಿಯುತ್ತಾ ತಪಸ್ಸು ಮಾಡಲು ತೊಡಗಿದ. ಮುಂದೆ ಆತನಿಗೆ ತಾನು ಅದ್ವಿತೀಯ ತಪಸ್ವಿಯಾಗಬೇಕೆಂದು ಇಚ್ಛೆಯುಂಟಾಯ್ತು. ಪ್ರಶಾಂತವಾದ ನಿಸರ್ಗ ರಮಣೀಯವಾದ ಕಡಲ ತಡಿಯ ಸ್ಥಳವನ್ನಾಯ್ದು ನಾರುಮಡಿಯನ್ನುಟ್ಟು ಕೃಷ್ಣಾಜಿನವನ್ನೂ ಹೊದ್ದುಕೊಂಡು ತಪೋ ಮಗ್ನನಾದನು ಜಾಜಲಿ.

ಅತ್ತಿತ್ತ ಮಿಸುಕಾಡದೆ ಕೆಲ ಕಾಲದಿಂದ ತಪಸ್ಸನ್ನಾಚರಿಸುತ್ತಿದ್ದ ಜಾಜಲಿಯನ್ನು ಎರಡು ಗುಬ್ಬಚ್ಚಿ ದಂಪತಿಗಳು ನೋಡಿದುವು. ಆತನ ಶಿರದಲ್ಲಿ ಸಮೃದ್ಧವಾಗಿ ಕೂದಲು ಬೆಳೆದುದನ್ನು ಸೂಕ್ಷ್ಮವಾಗಿ ಗಮನಿಸಿದ ಆ ಪಕ್ಷಿಗಳು ತಮ್ಮ ವಾಸಕ್ಕಾಗಿ ಗೂಡು ಕಟ್ಟಲು ಇದು ಪ್ರಶಸ್ತ ಜಾಗವೆಂದು ಹುಲ್ಲು-ಕಸ ,ಕಡ್ಡಿಗಳನ್ನು ತಂದು ಪುಟ್ಟದಾದ ತಮಗೆ ವಾಸಿಸಲು ಯೋಗ್ಯವಾದ ಮನೆಯನ್ನು ಕಟ್ಟಿದುವು. ದಿನಗಳು ಉರುಳಿದವು. ಆ ಪಕ್ಷಿಗಳಿಗೆ ಮಕ್ಕಳಾದುವು. ಮಕ್ಕಳೊಂದಿಗೆ ಸುಖವಾದ ಸಂಸಾರ ಮಾಡುತ್ತಾ ಹಾಯಾಗಿದ್ದುವು. ಕಾಲ ಕಳೆದಂತೆ ಆ ಮಕ್ಕಳಿಗೂ ಮಕ್ಕಳಾದುವು. ಈಗಲೂ ಜಾಜಲಿ ಕದಲದೆ ತನ್ನ ಏಕೋ ಧ್ಯಾನದಲ್ಲಿದ್ದ. ಹೀಗಿರಲು ಕಾಲ ಉರುಳಲು ಮುದಿ ಹಕ್ಕಿಗಳು ಅಸು ನೀಗಿದವು. ಅವುಗಳ ಮರಿಮಕ್ಕಳಿಗೂ ಮಕ್ಕಳಾದುವು. ಎಷ್ಟೋ ಕಾಲದ ನಂತರ ಜಾಜಲಿ ತಪಸ್ಸಿನಿಂದ ಇದ್ದಕ್ಕಿದ್ದಂತೆ ಬಹಿರ್ಮುಖನಾದ. ತನ್ನ ಶಿರದಲ್ಲಿ ಗುಬ್ಬಚ್ಚಿ ಸಂಸಾರ ಮಾಡಿರೋದನ್ನ ನೋಡಿ ಆಶ್ಚರ್ಯಪಟ್ಟ.  ಜೊತೆಗೆ ತನ್ನ ದಿವ್ಯ ಚಕ್ಷುವಿನಿಂದ ನೋಡಿ ತಲೆಯಲ್ಲಿ ಗುಬ್ಬಚ್ಚಿಗಳ ಮೂರನೇ ತಲೆಮಾರಿನ ಸಂಸಾರವಿದೆ ಎಂದು ತಿಳಿದ. ಏಕೆಂದರೆ  ತಾನು ಹೀಗಿರಬೇಕಾದರೆ ತನ್ನಷ್ಟು ಅದ್ವಿತೀಯನೆನಿಸಿದ ತಪಸ್ವಿ ಬಹುಶಃ ಬೇರಾರೂ ಇಲ್ಲ ಎನ್ನುವ ಜಂಭವೂ ಅವನಿಗೆ ಉಂಟಾಯ್ತು. ಈ ಒಂದು ಮನೋಭಾವನೆಯಲ್ಲಿಯೇ ದೇಶ ಸಂಚಾರವನ್ನು ಕೈಗೊಂಡನು.

ಹೀಗೇ ದೇಶಾಟನೆ ಮಾಡುತ್ತಾ ತನ್ನಷ್ಟು ಮಹಾತ್ಮನೂ ಧರ್ಮಾತ್ಮನೂ ಆದ ತಪಸ್ವಿ ಬೇರೆಲ್ಲೂ ಇರಲು ಸಾಧ್ಯವಿಲ್ಲವೆಂದು ಯೋಚಿಸುತ್ತಾ ಒಂದೆಡೆ ಕುಳಿತಿದ್ದಾಗ ‘ಅಯ್ಯಾ ನಿನಗಿಂತ ಶ್ರೇಷ್ಠ ತಪಸ್ವಿಗಳಿದ್ದಾರೆ. ವಾರಣಾಸಿಯಲ್ಲಿರುವ ‘ತುಲಾಧಾರ’ನಿಗೆ ನೀನು ಸಮಾನನಲ್ಲ ಎಂಬ ಅಶರೀರ ವಾಣಿ ಕೇಳಿಸಿತು. ಇದನ್ನು ಕೇಳಿದ ಜಾಜಲಿಗೆ ‘ತುಲಾಧಾರ’ನನ್ನು ಕಾಣಲೇಬೇಕೆಂಬ ತವಕ ಉಂಟಾಯ್ತು.  ಸರಿ, ವಾರಣಾಸಿಯ ದಾರಿ ಹಿಡಿದನು.

ಹೀಗೆ ಕಾಲ್ನಡಿಗೆಯಲ್ಲೇ ನಡೆಯುತ್ತಾ ಭಿಕ್ಷಾಟನೆಯಿಂದ ಉದರ ಪೋಷಣೆ ಮಾಡುತ್ತಾ ವಾರಣಾಸಿಗೆ ತಲುಪಿದ. ಜಾಜಲಿಗೆ ತುಲಾಧಾರನ ದರ್ಶನವಾಯ್ತು, ತುಲಾಧಾರನು ‘ಪರಮ ತಪಸ್ವಿಗಳು’ ಬರಬೇಕು ಎಂದು ಅತ್ಯಂತ ವಿನೀತ ಭಾವದಿಂದ ಜಾಜಲಿಯನ್ನು ಸ್ವಾಗತಿಸಿ ಸತ್ಕರಿಸಿದನು. ಬಳಿಕ ಮಾತನಾಡುತ್ತ ‘ತಾವು ಮಹಾ ತಪಸ್ವಿಗಳು, ತಲೆಯಲ್ಲಿ ಹಕ್ಕಿಗೂಡು ಕಟ್ಟಿ ಸಂಸಾರ ಮಾಡಿದರೂ ಏಕಾಗ್ರತೆಗೆ ಭಂಗವಾಗದೆ ನಿರ್ಲಿಪ್ತರಾಗಿ ಉಗ್ರ ತಪೋನಿಷ್ಠರಾದಿರಿ’ ಎಂದು ಸ್ವತಃ ನೋಡಿದವರಂತೆ ಹೇಳಿದನು.

ಜಾಜಲಿಗೆ ಪರಮಾಶ್ಚರ್ಯವಾಯ್ತು. ‘ತುಲಾಧಾರ’ನ ದಿವ್ಯ ಚಕ್ಷುವಿನ ಪ್ರತಿಭೆ ಇಷ್ಟು ತೀಕ್ಷ್ಣವಾಗಿರ ಬೇಕಾದರೆ… “ನಿನಗೆ ಇದೆಲ್ಲ ಹೇಗೆ ತಿಳಿಯಿತು?’ ತನಗರಿವಿಲ್ಲದೆಯೇ ಪ್ರಶ್ನಿಸಿದನು ಜಾಜಲಿ.

”ಯಾವ ಪ್ರಾಣಿಗಳಿಗೂ ಏನೂ ತೊಂದರೆಯಾಗದಂತೆ ಸರಳ ಜೀವನ ನಿರ್ವಹಿಸುತ್ತಿದ್ದೇನೆ. ನನ್ನ ಜೀವನದಿಂದಾಗಿ ಕಿಂಚಿತ್ ಜೀವಿಗೂ ನೋವಾಗದಂತೆ ನಡೆದುಕೊಳ್ಳುವುದೂ, ನನ್ನ ಸರಳ ಧರ್ಮ. ಅದನ್ನು ಅನುಸರಿಸುತ್ತಾ ಜೀವಿಸುವುದೇ ನನ್ನ ತಪಸ್ಸು” ಎನ್ನುತ್ತಾನೆ ತುಲಾಧಾರ. ಅವನ ಮಾತು ಕೇಳಿದ ಜಾಜಿಲಿಗೆ ತನ್ನ ಬಗ್ಗೆ ಇದ್ದ ಗರ್ವ ಇಂಗಿತು. ತಾನು ಕೈಗೊಂಡ ಕಠಿಣ ತಪಸ್ಸಿಗಿಂತಲೂ ಮಿಗಿಲಾದ ಶಕ್ತಿಯಿರುವ ಸಂಗತಿಯೊಂದಿದೆ ಎಂದು ಜಾಜಲಿ ಮುನಿಯು ತುಲಾಧಾರನ ಮಾರ್ಗದರ್ಶನದಿಂದ ಅರಿವು ಉಂಟಾಯ್ತು.  ತಾವೇ ಶ್ರೇಷ್ಠರು, ತಮ್ಮ ಸಾಧನೆಯೇ ಮಿಗಿಲು ಎನ್ನುವ ಅಹಂ ಕರಗಿಸುತ್ತದೆ ಜಾಜಲಿಯ ಕತೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

  1. ಪೌರಾಣಿಕ ಕಥೆ ಚೆನ್ನಾಗಿ ಮೂಡಿ ಬಂದಿದೆ

  2. Anonymous says:

    ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

  3. ಎಂದಿನಂತೆ ಪೌರಾಣಿಕ ಕಥೆಯ ಓದು ಮುದಕೊಟ್ಟಿತು..ಧನ್ಯವಾದಗಳು ವಿಜಯಾ ಮೇಡಂ

  4. ನಯನ ಬಜಕೂಡ್ಲು says:

    Very nice

  5. ಶಂಕರಿ ಶರ್ಮ says:

    ಜಾಜಲಿ ಮುನಿಯ ಗರ್ವ ಮುರಿದ ಸಾದಾ ವ್ಯಾಪಾರಿ ತುಲಾಧಾರನ ನಿಷ್ಠೆ ಮೆಚ್ಚುವಂತಹುದು. ಉತ್ತಮ ಸಂದೇಶ ಹೊತ್ತ ಕಥೆ.

  6. Padma Anand says:

    ಉತ್ತಮ ವಿಷಯಗಳನ್ನೊಳಗೊಂಡ ಸುಂದರ ಪೌರಾಣಿಕ ಕಥೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: