ಬದಲಾದ ಬದುಕು – 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ. ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ. ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು. ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು. ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು ಎತ್ತಿಯೂ ಇಡುತ್ತಿರಲಿಲ್ಲ. ಆಹಾರ, ಸಾಮಾನುಗಳು ದಂಡ ಮಾಡುವುದಕ್ಕೆ ಲೆಕ್ಕವೇ ಇರುತ್ತಿರಲಿಲ್ಲ. ಮಾಡಿದ್ದ ಅಡುಗೆ ಹಾಗೇ ಇರುತಿತ್ತು. ಮತ್ತೆ ಏನಾದರೂ ತಿನ್ನ ಬೇಕೆನ್ನಿಸಿಬಿಟ್ಟರೆ ತಕ್ಷಣ ಆರ್ಡರ್ ಮಾಡಿ ಬಿಡುತ್ತಿದ್ದರು. ತಿಂದಷ್ಟು ತಿಂದದ್ದು, ಬಿಟ್ಟಷ್ಟು ಬಿಟ್ಟದ್ದು.
ಹಣ್ಣುಗಳು ಅಷ್ಟೆ. ಟೇಬಲ್ಲಿನ ಮೇಲೆ ಬುಟ್ಟಿಯ ತುಂಬಾ ತರತರಹದ ಹಣ್ಣುಗಳು ಇರುತ್ತಿತ್ತು. ಯಾವಾಗಲಾದರೂ ಸಮಯ, ಮನಸ್ಸು ಇದ್ದರೆ ಕಟ್ ಮಾಡಿ ತಿನ್ನುತ್ತಿದ್ದರು, ಸ್ಮೂತಿ, ಜ್ಯೂಸ್ ಮಾಡಿ ಕುಡಿಯುತ್ತಿದ್ದರು. ತಂದಿಟ್ಟ ಹಣ್ಣುಗಳಲ್ಲಿ ಅರ್ಧವೂ ಖರ್ಚಾಗುತ್ತಿರಲಿಲ್ಲ. ಹಾಗೆಯೇ ಒಣಗಿಯೋ, ಕೊಳೆತೋ ಹೋಗುತ್ತಿದ್ದವು. ಶನಿವಾರವೋ, ಭಾನುವಾರವೋ ಎಲ್ಲವನ್ನೂ ಬಿಸಾಕಿ, ತಕ್ಷಣವೇ ಹೊಸ ಹಣ್ಣುಗಳನ್ನು ತಂದು ಜೋಡಿಸಿಡುತ್ತಿದ್ದರು.
ಒಮ್ಮೆಯಂತೂ ಟೇಬಲ್ಲಿನ ಮೇಲೆ ತರತರಹದ ಹಣ್ಣುಗಳು ಜೋಡಿಸಿಡಲಾಗಿತ್ತು. ಅವುಗಳಲ್ಲಿ ಹಲವಾರು ಹಣ್ಣುಗಳು ಇನ್ನೊಂದೆರಡು ದಿನಗಳಲ್ಲಿ ಹಾಳಾಗುವುದರಲ್ಲಿದ್ದವು.
ನಮಿತಾ ಕೇಳಿದಳು – ಅಮ್ಮಾ ಜ್ಯಾಸ್ ಕುಡಿಯುತ್ತೀರಾ?
ಸೊಸೆಗೆ ಹಣ್ಣುಗಳು ಹಾಳಾಗುತ್ತಿರುವ ಮುಂಚೆ ಉಪಯೋಗಿಸುವ ಮನಸ್ಸು ಬಂದದ್ದು ಜಾನ್ಹವಿಗೆ ಖುಷಿಯಾಗಿ,
ಹೂಂ, ನಿನಗೂ ಯಾವುದು ಇಷ್ಟವೋ ಅದನ್ನೇ ಕುಡಿಯೋಣ
ಕರಬೂಜದ ಹಣ್ಣಿನ ಜ್ಯೂಸ್ ಓಕೆನಾ?
ಓಕೆ, ಆದರೆ . . . ಎನ್ನುತ್ತಾ ಮಾತು ನಿಲ್ಲಿಸಿದಳು. ಏಕೆಂದರೆ ಟೇಬಲ್ಲಿನ ಮೇಲೆ ಕರಬೂಜದ ಹಣ್ಣು ಇರಲಿಲ್ಲ.
ತಕ್ಷಣ ಮೊಬೈಲ್ ಕೈಗೆತ್ತಿಕೊಂಡ ನಮಿತಾ ಎರಡು ಜ್ಯೂಸುಗಳಿಗೆ ಆರ್ಡರ್ ಮಾಡಿದಳು.
ಜಾನ್ಹವಿಗೆ ಅರಗಿಸಿಕೊಳ್ಳುವುದು ಕಷ್ಟವಾಯಿತು. ಏರುತ್ತಿದ್ದ ಬಿಪಿಯನ್ನು ಮನಸ್ಸಿನಲ್ಲೆ ಹತ್ತಿಕ್ಕಿಕೊಂಡಳು. ಎರಡು ಕ್ಷಣಗಳಲ್ಲಿ ಸುಧಾರಿಸಿಕೊಂಡು ಹೇಳಿದಳು – ಶರತನಿಗೂ ಬೇಕೇನೋ ಕೇಳಬೇಕಿತ್ತು
ಇಲ್ಲಾ, ಅವರಿಗೆ ಬೇಕಿದ್ದರೆ ಅವರು ತರಿಸಿಕೊಳ್ಳುತ್ತಾರೆ ಬಿಡಿ.
ಜಾನ್ಹವಿ ಬಾಯಿ ಮುಚ್ಚಿಕೊಂಡು ಸುಮ್ಮನಾದಳು.
ಮಕ್ಕಳ ಜೀವನವನ್ನು ತಮ್ಮ ಜೀವನದೊಂದಿಗೆ ಎಂದೂ ತುಲನೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದರೂ, ಒಂದು ಕಿತ್ತಳೆ ಹಣ್ಣು ಬಿಡಿಸಿದರೂ, ತಾನು, ತನ್ನ ಗಂಡ, ಶರತ್ ಮೂರೂ ಜನರೂ ಎರಡೆರಡು ತೊಳೆ ಹಂಚಿ ತಿನ್ನುತ್ತಿದ್ದುದು ಜ್ಞಾಪಕಕ್ಕೆ ನುಗ್ಗಿ ಬಂತು. ಬಾಯಿಂದ ಮಾತು ಆಚೆ ಬರದಂತೆ ತಡೆದುಬಿಟ್ಟಳು.
ಒಮ್ಮೆ ಸಮಯವು ಇತ್ತೆಂದು ಮೂವರೂ ಒಟ್ಟಿಗೆ ಊಟ ಮಾಡಲು ಕುಳಿತಾಗ, ಶರತ್ ಚಿಕ್ಕವನಿದ್ದಾಗ ಇಷ್ಟಪಟ್ಟು ತಿನ್ನುತ್ತಿದ್ದ ಜಾನ್ಹವಿಯ ಕೈ ಅಡುಗೆಗಳ ರುಚಿಯನ್ನು ಜ್ಞಾಪಿಸಿಕೊಂಡು ನಾಲಿಗೆ ಚಪ್ಪರಿಸಹತ್ತಿದ.
ಇದೇ ಸಮಯವೆಂದು ಜಾನ್ಹವಿ ಹೇಳಿದಳು –
ಈಗಲೂ, ನಿಮ್ಮಿಬ್ಬರಿಗೂ ಆ ಅಡುಗೆಗಳನ್ನೆಲ್ಲಾ ಮಾಡಿ ಹಾಕುವ ಆಸೆ, ಆಸಕ್ತಿ, ಶಕ್ತಿ ಎಲ್ಲಾ ನನಗೆ ಇದೆ.
ಶರತ್ – ಇರಲಿ ಬಿಡಮ್ಮಾ, ಯಾಕೆ ಕಷ್ಟ ಪಡ್ತೀಯಾ, ಆರಾಮವಾಗಿರು.
ಜಾನ್ಹವಿ – ನನಗೆ ಕಷ್ಟವೇನಿಲ್ಲ, ಇಷ್ಟ.
ನಮಿತಾ – ಸರಿ ಅಮ್ಮಾ, ನಿಮಗೆ ಇಷ್ಟವಿದ್ದರೆ ಖಂಡಿತಾ ಮಾಡಿ. ನನಗೂ ಸಾಧ್ಯವಾದರೆ ನಾನೂ ಸಹಾಯ ಮಾಡ್ತೀನಿ. ಆದರೆ ಹೇಳಲು ಆಗೋಲ್ಲಾ, ಕೆಲಸ ಬಂದು ಬಿಟ್ಟರೆ ಸಮಯವಿರುವುದಿಲ್ಲ.
ಜಾನ್ಹವಿ – ಅಯ್ಯೋ ಮೂರು ಜನರಿಗೆ ಅಡುಗೆ ಮಾಡುವುದಕ್ಕೆ ಏನು ಮಹಾ. ನಾವೇನು ಸಮಾರಾಧನೆ ಅಡುಗೆ ಮಾಡಬೇಕೆ? ನಮ್ಮತ್ತೆ ಹೇಳುತ್ತಿದ್ದರು, ಈವತ್ತು ನಮ್ಮ ಮನೆಯಲ್ಲಿ ನೂರೊಂದು ಅಕ್ಕಿ ಸಮಾರಾಧನೆ ಅಂತ. ಹಾಗೆ, ಇಷ್ಟೊಂದು ಅನುಕೂಲಗಳೂ ಇರುವಾಗ ಅಡುಗೆ ಮಾಡುವುದು ಏನು ಕಷ್ಟ?
ನಮಿತಾ – ಸರಿ, ಹಾಗಿದ್ದರೆ ಒಂದು ಕೆಲಸ ಮಾಡೋಣ, ಮುಂದಿನ ಕೆಲವಾರು ವಾರಗಳು ವಾರಕ್ಕೆ ಒಂದು ದಿನ ʼಕುಕ್ ಬಾಯಿʼಗೆ ರಜ ಕೊಟ್ಟು ಬಿಡೋಣ. ಅಮ್ಮ ಅಂದು ನೀವು ಅಡುಗೆ ಮಾಡಿ.
ಶನಿವಾರ, ಭಾನುವಾರ ಬೇಡ, ಯಾಕೇಂದ್ರೆ ವೀಕೆಂಡ್ ನಿಮಗೆ ಮುಂಬೈ ತೋರಿಸಬೇಕು, ಇಲ್ಲಿನ ಬೇರೆ ಬೇರೆ ರೀತಿಯ ರೆಸ್ಟೊರೆಂಟುಗಳಿಗೆ ಕರೆದೊಯ್ಯಬೇಕು.
ಮೂವರಿಗೂ ನಮಿತಾಳ ಏರ್ಪಾಟು ಒಪ್ಪಿಗೆಯಾಯಿತು. ಸೊಸೆಯ ಒಳ್ಳೆಯತನ, ಜಾಣತನ ಜಾನ್ಹವಿಗೆ ಇಷ್ಟವಾಯಿತು. ಅಮ್ಮನ ಕೈಯಡುಗೆ ತಿನ್ನುವ ಖುಷಿ ಶರತ್ ಮುಖದಲ್ಲೂ ಮೂಡಿತು.
ಹೀಗೆ ಜಾನ್ಹವಿಗೆ ಮನದಲ್ಲಿ ವಿಭಿನ್ನ ಭಾವನೆಗಳ ತಾಕಲಾಟ ನಡೆಯುತಿತ್ತು.
ತನ್ನ ಕೈಯಡುಗೆಯನ್ನು ಮಗ ಸೊಸೆ ಇಬ್ಬರೂ ಚಪ್ಪರಿಸಿಕೊಂಡು ತಿನ್ನುವುದು ನೋಡಿದಾಗ ಜಾನ್ಹವಿಯ ಮಾತೃ ಹೃದಯ ಆರ್ದ್ರವಾಗುತಿತ್ತು. ಇವಳು ಅಡುಗೆ ಮಾಡುತ್ತಿರುವಾಗ ನಮಿತಾ ಮಧ್ಯದಲ್ಲಿ ತನ್ನ ಕೆಲಸ ಬಿಟ್ಟು ಎದ್ದು ಬಂದು, ಒಂದು ಲೋಟ ನೀರನ್ನೋ, ಜ್ಯೂಸನ್ನೋ ಬಗ್ಗಿಸಿ ಕೊಟ್ಟು ಹೇಳುತ್ತಿದ್ದಳು –
ಅಮ್ಮಾ ಕುಡಿಯಿರಿ, ಅಷ್ಟು ಹೊತ್ತಿನಿಂದ ನಿಂತು ಅಡುಗೆ ಮಾಡುತ್ತಿದ್ದೀರಿ, ಸುಸ್ತಾಗಿರುತ್ತೆ.
ಸೊಸೆ ತೋರಿಸುವ ಅಕರಾಸ್ಥೆ ಇಷ್ಟವಾಗುತಿತ್ತು. ಬೆಳಗ್ಗೆ ಎದ್ದಾಗ, ಮಲಗಲು ಹೋಗುವಾಗ ಅವಳು ಹೇಳುವ ಗುಡ್ ಮಾರ್ನಿಂಗ್, ಗುಡ್ ನೈಟುಗಳೂ ಇಷ್ಟವಾಗುತಿತ್ತು.
ಆಗೆಲ್ಲಾ, ಅಯ್ಯೋ ಎಲ್ಲಾ ಕುಟುಂಬಗಳಲ್ಲಿಯೂ ಸಕಾರಾತ್ಮಕ, ನಕಾರಾತ್ಮಕ ವಿಷಯಗಳಯ ಇದ್ದೇ ಇರುತ್ವೆ, ಇರಲಿ ಬಿಡು, ಎಂದುಕೊಳ್ಳುತ್ತಿದ್ದರೂ, ನಮಿತ ಸಾಮಾನುಗಳನ್ನು ದಂಡ ಮಾಡುತ್ತಿದ್ದ ಪರಿ, ಹಾಗೂ ಮನೆಯ, ಸಂಸಾರದ ಯಾವುದೇ ಒಂದು ವಿಚಾರಗಳಲ್ಲಿಯೂ ಶಿಸ್ತು, ಬದ್ಧತೆ ಇಲ್ಲದಿರುವುದನ್ನು ಕಂಡಾಗ ಮನಸ್ಸು ಕ್ಷೋಭೆಗೊಳುತಿತ್ತು.
ಒಮ್ಮೆ ತಡೆಯಲಿಕ್ಕಾಗದೇ ಮಗನೊಡನೆ ವಾದಕ್ಕೆ ಇಳಿದೇ ಬಿಟ್ಟಳು ಜಾನ್ಹವಿ. ನಮಿತಾ ಅಂದು ಆಫೀಸಿಗೆ ಹೋಗಿದ್ದಳು.
ಇದೇನು ಶರತ್, ಈ ಪಾಟಿ ದಂಡ ಮಾಡುತ್ತೀರಿ. ಇದೆಲ್ಲಾ ನ್ಯಾಷನಲ್ ವೇಸ್ಟ್ ಅಂತ ನಿನಗನ್ನಿಸುವುದಿಲ್ಲವಾ, ಯಾಕೆ ನೀನು ಏನೂ ಹೇಳುವುದಿಲ್ಲ ನಮಿತಾಗೆ?
ಅಮ್ಮಾ ಅವಳೇನು ಚಿಕ್ಕ ಮಗೂನಾ ನಾನು ಹೇಳುವುದಕ್ಕೆ. ಎಷ್ಟೋ ವಿಚಾರಗಳಲ್ಲಿ ನಾನು ಸರಿಯಿಲ್ಲ. ಈ ವಿಚಾರದಲ್ಲಿ ಅವಳು ಸರಿಯಿಲ್ಲ. ಆದರೆ ನಾವಿಬ್ಬರೂ ಒಬ್ಬರಿಗೊಬ್ಬರು ಏನೂ ಆಕ್ಷೇಪಣೆಯ ವಿಚಾರಗಳನ್ನು ಹೇಳುವುದಿಲ್. ಲಿವ್ ಅಂಡ್ ಲೆಟ್ ಲಿವ್ ಪಾಲಸಿ ನಮ್ಮದು.
ಇನ್ನು ದಂಡದ ಬಗ್ಗೆ. ಅವಳಾಗಲೀ, ನಾನಾಗಲೀ ದಂಡ ಮಾಡಬೇಕು ಅಂತ ದಂಡ ಮಾಡುವುದಿಲ್ಲ. ಆದ್ರೆ, ಅಕಸ್ಮಾತ್ ಆದ್ರೆ, ತಲೆ ಕೆಡಿಸಿಕೊಳ್ಳೊಲ್ಲ ಅಷ್ಟೆ. ಯಾಕೇಂದ್ರೆ, ನಮ್ಮಗಳ ಈ ತಲೆಬಿಸಿಯ ವೃತ್ತಿಯಲ್ಲಿ ಅದಕ್ಕೆಲ್ಲಾ ವ್ಯವಧಾನ ಇಲ್ಲ. ಇಬ್ಬರೂ ಕೈ ತುಂಬ ದುಡಿಯುತ್ತೀವೆ, ಖರ್ಚು ಮಾಡುತ್ತೀವಿ. ಅಕಸ್ಮಾತ್ ಆಹಾರ ದಂಡವಾದರೂ ಎಲ್ಲಿ ಹೋಗುತ್ತೆ, ಮತ್ತೆ ಮಣ್ಣಿಗೆ ಸೇರಿ ಗೊಬ್ಬರ ಆಗುತ್ತೆ. ಅಲ್ಲದೆ ನಮ್ಮಿಂದ ಅದನ್ನು ಬೆಳೆದ ರೈತರಿಗೆ, ಒಂದಷ್ಟು ಹಣ ಹೋಗುತ್ತೆ. ಹೋಗಲಿ ಬಿಡು, ನಾವು ದುಡಿದದ್ದು ಎಲ್ಲಾ ನಾವೇ ಇಟ್ಕೊಬೇಕು ಅಂದ್ರೆ ಹೇಗೆ? ಪಡೆದದ್ದನ್ನು ಹಂಚ ಬೇಕು ಅಲ್ವಾ? ಕಾಲ ಬದಲಾಗಿದೆ ಅಮ್ಮಾ, ನಾವು ಜಾಸ್ತಿ ಜಾಸ್ತಿ ಕೊಂಡರೆ ತಾನೇ ರೈತರಿಗೆ, ವ್ಯಾಪಾರಿಗಳಿಗೆ ಜಾಸ್ತಿ ದುಡ್ಡು ಸೇರುತ್ತೆ.
ಶರತ್ ವಿತ್ತಂಡವಾದ ಮಾಡಬೇಡ
ಇಲ್ಲಾ ಅಮ್ಮಾ, ನೀನೇ ಯೋಚನೆ ಮಾಡು, ನೀನೇ ಹೇಳುತ್ತಿದ್ದೆ, ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಅಂತ. ಅದಕ್ಕೇ ಮಿತವ್ಯಯದ ಸಮಾಜವಾಗಿದ್ದ ನಾವು ಕೊಳ್ಳುಬಾಕ ಸಮಾಜವಾಗಿ ಬದಲಾಗುತ್ತಿದ್ದೇವೆ. ಇದು ದೇಶದ ಪ್ರಗತಿಯ ಸಂಕೇತ. ಯಾರಿಗೂ ಬಿಟ್ಟಿ ದುಡ್ಡು ತೆಗೆದುಕೊಳ್ಳಲು ಇಷ್ಟವಾಗುವುದಿಲ್ಲ. ನಾವು ವ್ಯಾಪಾರ ಮಾಡಿದಷ್ಟೂ ನಾವು ಸಂಪಾದಿಸಿದ ಹಣ ಹಂಚಲ್ಪಡುತ್ತದೆ.
ಜಾನ್ಹವಿಗೆ ಮಗ ಹೇಳುತ್ತಿರುವುದು ಸರಿಯಿಲ್ಲ ಎನ್ನಿಸಿದರೂ ಏನು ಹೇಳಬೇಕೋ ತಿಳಿಯದೆ ಚಡಪಡಿಸಹತ್ತಿದಳು.
ಅಮಾ, ರೆಸ್ಟ್ ಲೆಸ್ ಆಗಬೇಡ. ಬದಲಾಗುತ್ತಿರುವ ಕಾಲಮಾನಕ್ಕೆ ಹೊಂದಿಕೊಳ್ಳುವುದು ನಿಮ್ಮ ಜನರೇಶನ್ನಿಗೆ ಕಷ್ಟ ಅಂತ ಗೊತ್ತು. ಆದರೆ ನನಗೆ ನಂಬಿಕೆಯಿದೆ, ನನ್ನಮ್ಮನಂತ ಮೆಚ್ಯೂರ್ಡ್ ಲೇಡಿ, ಕೊನೆಯ ಪಕ್ಷ ಅರ್ಥ ಮಾಡಿಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ ಅಂತ.
ಏನೋಪ್ಪಾ ನೀನು ಹೇಳುವುದು ಸರೀ ಅನ್ನಿಸದಿದ್ದರೂ ತಪ್ಪು ಅಂತ ಹೇಗೆ ಹೇಳುವುದೋ ತಿಳಿಯುತ್ತಿಲ್ಲ.
ಇಲ್ಲಾ ಅಮ್ಮಾ, ನಾನು ಖಂಡಿತಾ ತಪ್ಪು ಹೇಳುತ್ತಿಲ್ಲ. ನನಗೆ ಗೊತ್ತು, ಇನ್ನೂ ಒಂದು ವಿಚಾರ ನಿನಗೆ ಇಷ್ಟ ಆಗುತ್ತಿಲ್ಲ ಅಂತ. ಅದು ನಮಿತಾ ಸಂಸಾರದ ಜವಾಬ್ದಾರಿ ಅಷ್ಟಾಗಿ ತೆಗೆದುಕೊಳ್ಳುವುದಿಲ್ಲ, ಮನೆ ಕೆಲಸ ಮಾಡುವುದಿಲ್ಲ ಅಂತ ಅಲ್ವಾ?
ಹೌದು, ನನ್ನ ಮನಸ್ಸಿನಲ್ಲಿ ಇದ್ದ ಮಾತನ್ನು ನೀನೇ ಹೇಳಿದೆ. ಮುಂದೆ ಅದೇ ವಿಷಯ ಮಾತನಾಡೋಣ ಅಂತ ಇದ್ದೆ.
ಹೌದಮ್ಮಾ, ಮುಂಚೆಯೇ ನಮ್ಮಿಬ್ಬರಲ್ಲಿ ಮಾತು ಆಗಿದೆ. ಅವರ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಟುಂಬ ನಿರ್ವಹಣೆಗೆ ಮಾತ್ರವೇ ಮೀಸಲಾಗಿಟ್ಟದ್ದನ್ನು ನೋಡಿ, ನೋಡಿ, ಅವಳೊಳಗೆ ಒಂಥರಾ, ನಿಮ್ಮ ಸಾಹಿತ್ಯಿಕ ಭಾಷೆಯಲ್ಲಿ ಹೇಳೋದಾದ್ರೆ, ರೋಷಾಗ್ನಿ ತುಂಬಿಕೊಂಡು ಬಿಟ್ಟಿದೆ. ಅದನ್ನ ನಾನು ನಿಧಾನಕ್ಕೆ ಶಮನ ಮಾಡೋದಕ್ಕೆ ಪ್ರಯತ್ನ ಪಡ್ತಾ ಇದೀನಿ.
ಆದ್ರೂ ಇದನ್ನೆಲ್ಲಾ ಅರಗಿಸಿಕೊಳ್ಳುವುದು ಕಷ್ಟ ಆಗುತ್ತೆ ಶರತ್, ದೇವರು ಹೆಂಗಸರಿಗೇ ಒಂದಷ್ಟು, ಗಂಡಸರಿಗೇ ಒಂದಷ್ಟು ಸ್ಪೆಷಲ್ ಗುಣಗಳನ್ನು ನೀಡಿರುತ್ತಾನೆ. ಇನ್ನೊಬ್ಬರು ಮಾಡಲಿಕ್ಕಾಗಲ್ಲ ಅಂತ ಅಲ್ಲ. ಆದ್ರೆ ಅವರವರೇ ಮಾಡಿದ್ರೆ ಕೆಲಸ ಚೆನ್ನಾಗಿ ಆಗುತ್ತೆ ಅಂತ.
ಹೌದು ಅಮ್ಮಾ, ನಿನ್ನ ಮಗ ನಾನು, ಇದೆಲ್ಲಾ ನನಗೆ ಗೊತ್ತಾಗುತ್ತೆ. ಎಲ್ಲಾ ಸಂಸಾರಗಳಲ್ಲಿ ಒಬ್ರು ಜಾಸ್ತಿ ಹೊಂದಿಕೊಂಡು ಹೋಗಬೇಕಾಗುತ್ತೆ. ಅಪ್ಪನಿಗೆ ಹಣಕಾಸಿನ ಶಿಸ್ತು ಇರಲಿಲ್ಲ. ಅಂತಹ ಸಮಯದಲ್ಲಿ ನೀನೇ ಜವಾಬ್ದಾರಿ ತಗೊಂಡು ಸಂಸಾರ ನಿರ್ವಹಿಸಲಿಲ್ಲವಾ? ನಿನ್ನದು, ಅಪ್ಪಂದು ಅರೇಂಜ್ಡ್ ಮ್ಯಾರೇಜ್, ಮದುವೆಯ ನಂತರ ಪ್ರೀತಿಸಿದ ನೀನೇ ಜಾಸ್ತಿ ಜವಾಬ್ದಾರಿ ತಗೊಂಡೆ. ಇನ್ನು ನಾನಂತೂ ನಮಿತಾಳನ್ನು ಪ್ರೀತಿಸಿ ಮದುವೆಯಾಗಿದ್ದೇನೆ, ಅವಳನ್ನು ಕಂಡ್ರೆ ನಂಗೆ ತುಂಬಾ ಇಷ್ಟ. ಅವಳು ಖುಷಿಯಾಗಿ ಇರೋದಕ್ಕೆ ನಾನು ಸ್ವಲ್ಪ ಜಾಸ್ತಿ ಹೊಂದಿಕೊಂಡು ಹೋಗ್ತೀನಿ ಅಷ್ಟೆ. ಡೋಂಟ್ ವರಿ, ಅವಳು ತುಂಬಾ ಒಳ್ಳೆಯ ಹುಡುಗಿ, ಮನೆ ಕೆಲಸ ಮಾಡೋಕ್ಕೆ ಇಷ್ಟ ಇಲ್ಲ, ತುಂಬಾ ಸೋಮಾರಿ. ಅಲ್ಲದೆ ಆಫೀಸಿನ ಒತ್ತಡವೂ ಏನು ಅವಳಿಗೂ ಕಮ್ಮಿ ಇರೋಲ್ಲಾ, ಅವಳೂ ದೊಡ್ಡ ಹುದ್ದೇಲಿ ಇದ್ದಾಳೆ.
ಇನ್ನೊಂದು ಅವಳ ವಾದ ಏನು ಅಂದ್ರೆ, ನಮಗೆ ಒಳ್ಳೆಯ ಮನೆಗೆಲಸದವರು, ಅಡುಗೆಯವರು ಸಿಕ್ಕಿರುವಾಗ, ಅವರಿಗೆ ಕೈತುಂಬಾ ಕೆಲಸ ಕೊಟ್ಟು ನಾವೂ ಸ್ವಲ್ಪ ಫ್ರೀ ಸಮಯ ಹೊಂದಿ ಅದನ್ನು ಕ್ವಾಲಿಟಿ ಟೈಂ ಆಗಿ ಪರಿವರ್ತಿಸಿಕೊಳ್ಳೋಣ, ಅವರಿಗೆ ಕೈತುಂಬಾ ದುಡ್ಡನ್ನೂ ಕೊಡೋಣ, ಅವರಿಗೂ ಆತ್ಮವಿಶ್ವಾಸ ಬೆಳೆಯುತ್ತೆ, ಅವರ ಕುಟುಂಬಕ್ಕೂ ಒಂದು ಒಳ್ಳೆಯ ಸಪೋರ್ಟ್ ಆಗುತ್ತೆ ಅಂತಾಳೆ, ಅದೂ ಸರೀ ಅಲ್ವಾ?
ಜಾನ್ಹವಿಗೆ ನಿಜಕ್ಕೂ ಉತ್ತರ ಹೇಳಲು ಏನೂ ತೋಚಲಿಲ್ಲ.
ಏನೋಪ್ಪಾ, ಇಬ್ಬರೂ ಖುಷಿಯಾಗಿದ್ದೀರಾ ತಾನೆ, ಅಷ್ಟು ಸಾಕು ಬಿಡು.
ನಾವಿಬ್ರೂ ಏನು ಕಮ್ಮಿ ಜಗಳಾ ಆಡೋದಿಲ್ಲ, ಆದ್ರೂ ಖಂಡಿತಾ ಖುಷಿಯಾಗಿದ್ದೀವಿ, ಅಷ್ಟೇ ಅಲ್ಲ ನಿನ್ನನ್ನೂ ಖುಷಿಯಾಗಿ ಇಷ್ಟೋತೀವಿ, ಏನೇನೋ ತಲೆಗೆ ಹಚ್ಚಿಕೊಂಡು ಕೊರಗಬೇಡ, ಇರು ಕಾಫಿ ಬಿಸಿ ಮಾಡ್ಕೊಂಡು ಬರ್ತೀನಿ, ಕುಡಿಯೋಣ.
ಅಯ್ಯೋ ಸಾಕು ಕುತ್ಕೋಳೋ, ನಾನು ಇರೋ ತನಕಾನಾದ್ರೂ ನಾನು ಕಾಫಿ ಕೊಡ್ತೀನಿ, ನೀನು ಕುಡಿ ಎನ್ನುತ್ತಾ ಎದ್ದಳು ಜಾನ್ಹವಿ.
ಗಂಡ ಮನೆ ಕೆಲಸದಲ್ಲಿ ಸಹಾಯ ಮಾಡಲಿಲ್ಲ ಅಂತ ಗೊಣಗೋ ಈ ಹೆಂಗಸರು, ಮಗ ಕೆಲ್ಸ ಮಾಡಿದ್ರೆ ಮಾತ್ರ ಯಾಕೆ ಸಂಕಟಪಡ್ತಾರೋ ದೇವರೇ ಬಲ್ಲ, ಎನ್ನುತ್ತಾ ಮೊಬೈಲ್ ಕೈಗೆ ತೆಗೆದುಕೊಂಡ ಶರತ್.
ದಿನಗಳು ಸರಿದದ್ದೇ ತಿಳಿಯಲಿಲ್ಲ. ಆಡಾಡುತ್ತಾ ಎರಡು ತಿಂಗಳುಗಳು ಕಳೆದು ಹೋದವು. ಜಾನ್ಹವಿ ಹೊರಡುವ ದಿನ ಹತ್ತಿರ ಬಂತು.
ನಮಿತಾ ಹತ್ತು ಹಲವಾರು ಗಿಫ್ಟುಗಳು, ತರತರಹದ ನವನವೀನ ಮನೆಯ ಸಾಮಾನುಗಳು, ನಾಲ್ಕಾರು ತರತರಹದ ಸೀರೆಗಳೂ, ಹೊಸ ಹೊಸ ರೀತಿಯ ಬೆಡ್ ಸ್ರ್ಪೆಡ್‌ಗಳು, ಸೆಂಟುಗಳು, ಹೇರ್ ಕ್ಲಿಪ್ಪುಗಳು ಎಲ್ಲವನ್ನೂ ಅತ್ತೆಗಾಗಿ ಖರೀದಿಸಿದಳು.
ಜಾನ್ಹವಿ ಕೈಯಲ್ಲಿದ್ದ ಒಂದು ಜೊತೆ ಚಿನ್ನದ ಬಳೆಗಳನ್ನು ಸೊಸೆ ನಮಿತಾಗೆ ತೊಡಿಸಿಬಿಟ್ಟಳು.
ಬುಧವಾರಕ್ಕೆ ವಿಮಾನ ಬುಕ್ ಆಗಿತ್ತು. ಕೊನೆಯ ವಾರಾಂತ್ಯ. ಶನಿವಾರ ಬೆಳಗ್ಗೆ ಎಲ್ಲರೂ ಜಾನ್ಹವಿ ಮಾಡಿದ ಮಸಾಲೆ ದೋಸೆ ತಿಂದು ಹರಟುತ್ತಾ ಕುಳಿತಿದ್ದರು.
ಹೇಗಾಯಿತಮ್ಮ ನಿಮ್ಮ ಮುಂಬೈ ಟ್ರಪ್ – ನಮಿತಾ ಕೇಳಿದಳು.
ಮಕ್ಕಳ ಹಲವಾರು ವಿಚಾರಧಾರೆಯನ್ನು ಒಪ್ಪಿಕೊಳ್ಳಲು ಮನಸ್ಸು ಒಪ್ಪದ್ದರಿಂದಲೋ ಏನೋ, ಜಾನ್ಹವಿಯ ಮನದಲ್ಲಿದ್ದ ಮಾತುಗಳು ತುಟಿಯಿಂದ ಆಚೆ ಉದುರಿಯೇ ಬಿಟ್ಟವು.
ತುಂಬಾನೇ ಚೆನ್ನಾಗಿತ್ತು. ಇಬ್ಬರೂ ತುಂಬಾ ಚೆನ್ನಾಗಿ ನೋಡಿಕೊಂಡಿರಿ. ನಿಮ್ಮಿಬ್ಬರ ಬಾಂಧವ್ಯಾನೂ ನೋಡಿ ತುಂಬಾ ಖುಷಿ ಆಯ್ತು.
ಆದ್ರೂ ಜನರೇಷನ್ ಗ್ಯಾಪ್ ಕೋಪಪ್ ಮಾಡೋದು ತುಂಬಾ ಕಷ್ಟ ಆಗುತ್ತೆ. ಇನ್ನು ನನ್ನ ಇಲ್ಲಿಗೆ ಬಾ, ಬಾ ಅಂತ ಕರೀಬೇಡಿ. ಯಾವಾಗ್ಯಾವಾಗ ಆಗುತ್ತೋ ಆಗೆಲ್ಲಾ ತುಮಕೂರಿಗೆ ಬರುತ್ತಾ ಇರಿ. ಯಾವಾಲೂ ನಿಮ್ಮಗಳನ್ನು ನಾನು ಕಾಯ್ತಾ ಇರ್ತೀನಿ, ನಿಮಗೆ ಖಂಡಿತಾ ಒಳ್ಳೇದಾಗುತ್ತೆ, ಒಳ್ಳೆದಾಗ್ಲಿ ಅಂತ ಹರಸುತ್ತೀನಿ – ಎಂದಳು.
ಇಬ್ಬರ ಮೊಗವೂ ಕೊಂಚ ಮಂಕಾದಂತೆ ಅನ್ನಿಸಿತು. ಆದರೆ ಆಗಲಿ, ಸ್ವಲ್ಪ ಆದ್ರೂ ಕಲಿತುಕೊಳ್ಳುವುದು ಇದೆ, ದೊಡ್ಡೋರಾದ ನಾವು ಹೇಳದೇನೇ ಇದ್ರೆ, ಅವರುಗಳು ತಿದ್ದಿಕೊಳ್ಳುವುದು ಯಾವ್ಯಾಗ, ಎಂದುಕೊಂಡು ಮಗನ ಮೆಚ್ಚಿನ ನುಚ್ಚಿನುಂಡೆ, ಸೊಸೆಯ ಪ್ರೀತಿಯ ಮಜ್ಜಿಗೆ ಪಳದ್ಯ ಮಾಡಲು ಅಡುಗೆ ಮನೆ ಕಡೆ ನಡೆದಳು ಜಾನ್ಹವಿ.
ಮಧ್ಯಾನ್ಹ ಊಟಕ್ಕೆ ಕುಳಿತಾಗಲೂ ಇಬ್ಬರಲ್ಲೂ ಅಷ್ಟೊಂದು ಲವಲವಿಕೆ ಇಲ್ಲದಂತೆಯೂ, ಅದನ್ನು ಮುಚ್ಚಲು ಹರಸಾಹಸ ಮಡುತ್ತಿರುವಂತೆಯೂ ಅನ್ನಿಸಿತು.
ನಾಲ್ಕು ಗಂಟೆಯ ವೇಳೆಗೆ ಮಗ ಸೊಸೆ ಮಲಗಿದ್ದು ನೋಡಿ, ಒಂದು ಚೀಟಿಯಲ್ಲಿ, ʼಭಜನಾ ಮಂಡಳಿಯ, ವಾಕಿಂಗಿನ ಫ್ರೆಂಡ್ಸುಗಳಿಗೆ ಬೈ ಹೇಳಿ ಬರುತ್ತೇನೆ ಎಂದು ಬರೆದಿಟ್ಟು ಇದ್ದ ಎರಡು ಡೋರ್ ಲಾಕ್ ಕೀಗಳಲ್ಲಿ ಒಂದನ್ನು ತೆಗೆದುಕೊಂಡು ಮುಂದುಗಡೆಯ ಬಾಗಿಲನ್ನು ಬೀಗ ಹಾಕಿಕೊಂಡು ಹೊರಟಳು.
ಆರು ಗಂಟೆಯ ವೇಳೆಗೆ ಬಂದಾಗ ಇನ್ನೂ ಬಾಗಿಲು ತೆರೆದೇ ಇಲ್ಲದ್ದನ್ನು ನೋಡಿ, ʼಏನು, ಇನ್ನೂ ಎದ್ದೇ ಇಲ್ಲವೇʼ, ಎಂದುಕೊಳ್ಳುತ್ತಾ ನಿಧಾನವಾಗಿ ತನ್ನ ಹತ್ತಿರ ಇದ್ದ ಕೀಲಿಕೈಯಿಂದ ಬೀಗವನ್ನು ತೆಗೆದು ಒಳಗಡಿ ಇಟ್ಟಾಗ, ಮನೆ ಮೌನವಾಗಿತ್ತು. ಮಕ್ಕಳು ಅವರ ಕೋಣೆಯಲ್ಲಿ ಇರಲಿಲ್ಲ.
ಬಾಲ್ಕನಿಯ ಕಡೆ ನೋಡಿದಾಗ ಎದೆ ಜಗ್ ಎಂದಿತು. ಶರತ್, ನಮಿತಾಳ ತೊಡೆಯ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಾ ಇದ್ದ, ನಮಿತಾಳೂ ಅವನ ಬೆನ್ನ ಮೇಲೆ ಕೈಯಾಡಿಸುತ್ತಾ, ಸಮಾಧಾನ ಪಡಿಸುತ್ತಾ ತಾನೂ ಅಳುತ್ತಿದ್ದಳು.
ಜಾನ್ಹವಿ ದಿಗ್ಭಾಂತಳಾಗಿ ಪಕ್ಕಕ್ಕೆ ಸರಿದು ನಿಂತಳು.
ಶರತ್ ಅಳುತ್ತಾ ಹೇಳುತ್ತಿದ್ದ – ನಾನು ಸೋತು ಹೋದೆ ನಮಿತಾ, ಅಮ್ಮ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾಳೆ, ಅವಳನ್ನು ಸುಖವಾಗಿ ನೋಡಿಕೊಳ್ಳ ಬೇಕು ಅಂತ ಎಷ್ಟೊಂದು ಯೋಚಿಸಿ, ಸಣ್ಣ ಸಣ್ಣ ವಿಚಾರಗಳಿಗೂ ಗಮನ ಹರಿಸಿದರೂ ಅಮ್ಮನನ್ನು ಖುಷಿಯಾಗಿ ಇಡಲಾಗಲಿಲ್ಲ. ಇದು ನನ್ನ ಜೀವನದ ದೊಡ್ಡ ಫೆಲ್ಯೂರ್ ನಮಿತಾ, ಇನ್ನು ನಾನು ಎಷ್ಟು ದುಡ್ಡು ಸಂಪಾದಿಸಿದರೇನು, ಯಾವ ಹುದ್ದೆಗೇರಿದರೇನು, ನನ್ನ ಗುರಿ ಇದ್ದದ್ದೇ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೊಂದೇ. ಅದನ್ನೇ ಸಾಧಿಸಲಾಗಿಲಿಲ್ಲವಲ್ಲ, ನಮ್ಮ ಮನೆಗೆ ಬರುವುದಿಲ್ಲಾ ಅಂದು ಬಿಟ್ಟರಲ್ಲಾ . . .
ಇಲ್ಲಾ ಶರತ್, ನೀನು ನನ್ನಿಂದಾಗಿ ದುಃಖ ಅನುಭವಿಸುತ್ತಿದ್ದೀಯಾ, ನನಗೇ ಭಯ ಇತ್ತು, ನಾನು ಪಿಯುಸಿಯಿಂದಲೇ ಹಾಸ್ಟಲ್ಲಿನಲ್ಲಿ ಸ್ವತಂತ್ರವಾಗಿ ಇದ್ದು ಬೆಳೆದವಳು. ಜೊತೆಗೆ ಸ್ವಲ್ಪ ಜಾಸ್ತಿನೇ ಎನ್ನುವಷ್ಟು ವಾಸ್ತವವಾದಿ. ನಿಮ್ಮ ಎಮೋಷನಲ್ ಕುಟುಂಬಕ್ಕೆ ನಾನು ಸರಿ ಹೊಂದುವುದಿಲ್ಲ ಎಂದು ಯೋಚಿಸಬೇಕಿತ್ತು, ಯೋಚಿಸಲಿಲ್ಲ, ನಿನ್ನ ಅಫೆಕ್ಷನ್, ಕೇರಿಂಗ್ ನೇಚರ್ ನಂಗೆ ತುಂಬಾನೇ ಇಷ್ಟ ಆಗಿ ಬಿಡ್ತು, ಹೊಂದಿಕೊಂಡ್ರೆ ಆಯ್ತು, ಅದೇನು ಮಾಹಾ ಎಂದುಕೊಂಡು ಬಿಟ್ಟೆ. ನೀನು ಮುಂಚೇನೇ ಹೇಳಿದ್ದೆ, ಅಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ. ನಾನು ಫೆಲ್ಯೂರ್ ಆಗಿ, ನನ್ನಿಂದಾಗಿ ನೀನೂ ಫೆಲ್ಯೂರ್ ಆಗುವಂತೆ ಮಾಡಿಬಿಟ್ಟೆ – ಎನ್ನುತ್ತಾ ಇಬ್ಬರೂ ತಮ್ಮನ್ನು ತಾವೇ ಬೈದುಕೊಂಡು, ಎದೆಮಟ್ಟ ಬೆಳೆದ ಮಕ್ಕಳು ಅಳುತ್ತಿರುವುದನ್ನು ಕಂಡ ಜಾನ್ಹವಿಯ ಜಂಘಾಬಲವೇ ಉಡುಗಿಹೋದಂತೆ ಆಗಿಬಿಟ್ಟಿತು.
ಅಯ್ಯೋ, ನನ್ನನ್ನು ನೋಡಿಕೊಳ್ಳಲು ಅವರುಗಳು ಎಷ್ಟೊಂದು ಮುತುವರ್ಜಿ ತೆಗೆದುಕೊಂಡರು, ಅವರುಗಳ ಮನಸ್ಸನ್ನು ನೋಯಿಸಿಬೆಟ್ಟೆನಲ್ಲಾ ಎನ್ನಿಸಿ, ಮನ ವಿಲವಿಲ ಒದ್ದಾಡಿತು.
ತಕ್ಷಣ ಹೋಗಿ ಇಬ್ಬರನ್ನೂ ಆಲಂಗಿಸಿ – ನೊಂದುಕೊಳ್ಳ ಬೇಡಿ ನನ್ನ ಮಕ್ಕಳೇ. . . . . ʼ, ಎಂದು ಸಂತೈಸ ಹೊರಟಾಗ, ಇಬ್ಬರೂ ಸಾವರಿಸಿಕೊಂಡು ಏನೂ ಆಗಿಯೇ ಇಲ್ಲವೇನೋ ಎಂಬಂತೆ, – ಏನೂ ಇಲ್ಲಮ್ಮಾ, ಏನೋ ಸುಮ್ಮನೆ ಮಾತನಾಡುತ್ತಿದ್ದೆವು ಅಷ್ಟೆ. ಎಲ್ಲರಿಗೂ ಬೈ ಹೇಳಿ ಬಂದೆಯಾ, – ಎಂದು ಮಾತನ್ನು ಮರೆಸಲೆತ್ನಿಸಿ, – ನಡೀ ನಡೀ ಕಾಫಿ ಕುಡಿದು ಒಂದು ಸುತ್ತು ಹಾಕಿಕೊಂಡು ಬರೋಣ – ಎಂದರು.
ಅಯ್ಯೋ ಇಷ್ಟೊಂದು ಒಳ್ಳೆಯ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂದು ಜಾನ್ಹವಿಯ ಜೀವ ಮಮ್ಮಲ ಮರುಗಿತು.
ಬೀಚಿನಲ್ಲಿ ಅಲೆಗಳಿಗೆದುರಾಗಿ, ಮರಳಿನಲ್ಲಿ ಕೈಬೆರಳುಗಳನ್ನಾಡಿಸುತ್ತಾ ಕುಳಿತಾಗ, ಜಾನ್ಹವಿ ತಪ್ಪೊಪ್ಪಿಕೊಂಡು ಬಿಟ್ಟಳು.
ನನ್ನ ಎದುರಿಗೆ ಮುಖವಾಡ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಇರಬೇಡಿ. ಬದಲಾಗುತ್ತಿರುವ ಬದುಕಿನ ವೇಗಕ್ಕೆ ಹೊಂದಿಕೊಳ್ಳಲಾರದೆ ಆ ರೀತಿ ಹೇಳಿಬಿಟ್ಟೆ. ನಾನು ನಿಮ್ಮಲ್ಲಿಗೆ ಬರದೆ, ನಿಮ್ಮನ್ನು ಬಿಟ್ಟು ಎಲ್ಲಿಗೆ ಹೋಗುವೆ. ನಿಮ್ಮ ವಯಸ್ಸನ್ನು ದಾಟಿ, ಅನುಭವ ಪಡೆದು ಮುಂದೆ ಬಂದಿರುವ ನನಗೇ ಹೊಂದಿಕೊಳ್ಳಲಾಗದಿದ್ದರೆ, ನಮ್ಮ ವಯಸ್ಸಾದವರ ಮನಸ್ಥಿತಿ ಹೇಗಿರಬಹುದೆಂಬದರ ಊಹೆಯೂ ಇರದ ನೀವು ನನ್ನನ್ನು ಸುಖವಾಗಿಡಲು ಎಷ್ಟು ಸಣ್ಣ ಸಣ್ಣ ವಿಷಯಗಳಿಗೂ ಗಮನ ಹರಿಸಿ ನೋಡಿ ಕೊಂಡಿದ್ದೀರಿ ಎಂಬುದು ತಿಳಿದೂ ಹಾಗೆ ಮಾತನಾಡಬಾರದಿತ್ತು. ಹೌದು ಬದುಕು ನಿಂತ ನೀರಾಗಬಾರದು, ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಹರಿವ ನದಿಯಂತಾಗಬೇಕು. ಆ ವೇಗದ ರಭಸಕ್ಕೆ ತತ್ತರಿಸಿ ಹಾಗೆ ಹೇಳಿಬಿಟ್ಟೆ. ನಿಮ್ಮಷ್ಟು ಸೂಕ್ಷ್ಮ, ಪ್ರೇಮಮಯಿ ಮಕ್ಕಳ ಆಸರೆ ನನಗಿರುವಾಗ, ಯಾವ ರಭಸಕ್ಕೂ ಅಂಜುವುದಿಲ್ಲ. ಅಷ್ಟೊಂದು ಬೇಜಾರು ಮಾಡಿಕೊಳ್ಳಬೇಡಿ, ಇಲ್ಲಾ ಅಂದ್ರೆ ಈಗಲೇ ಹೋಗಿ ತುಮಕೂರಿನ ಮನೆಯನ್ನು ಖಾಲಿ ಮಾಡಿ ಬಂದು ಬಿಡುತ್ತೇನೆ. ಪ್ಲೀಸ್ ಮನಸ್ಸಿನಲ್ಲಿ ಯಾವುದೇ ಕಹಿ ಇಟ್ಟುಕೊಳ್ಳಬೇಡಿ – ಎಂದು ಸಮಾಧಾನಿಸಿದಾಗ, ಕಳಾಹೀನವಾಗಿದ್ದ ಶರತ್, ನಮಿತಾರ ಮುಖದ ಮೇಲೆ ಹುಣ್ಣಿಮೆಯ ಚಂದ್ರನ ಕಾಂತಿಯು ಪಸರಿಸಿ ನಳನಳಿಸತೊಡಗಿತು. ಸುತ್ತಾಡಿಕೊಂಡು ಮನೆಗೆ ಹಿಂದಿರುಗಿದರು.
ಭಾನುವಾರ, ಜಾನ್ಹವಿ ಮತ್ತು ಶರತ್, ತುಮಕೂರಿನ ಅಕ್ಕಪಕ್ಕದವರಿಗೆ, ಬಂಧುಗಳಿಗೆ, ಶಾಲೆಯ ಗೆಳತಿಯರಿಗೆ ಕೊಡಲೆಂದು ಶಾಪಿಂಗಿಗೆಂದು ಹೊರ ಹೊರಟಾಗ ನಮಿತಾ ಮನೆಯಲ್ಲೇ ಉಳಿದಳು.
ದಾರಿಯಲ್ಲಿ ಶರತ್ ಮತ್ತೆ ವಿಷಯವೆತ್ತಿದ – ಅಮ್ಮಾ, ಅಪ್ಪನಿಗೆ, ನಿನಗೆ ಮನೆಕೆಲಸದಲ್ಲಿ ಸಹಾಯ ಮಾಡಬೇಕೆಂಬ ಆಸೆ ಇದ್ದರೂ, ಮಾಡಲು ತೋಚದೆ, ನೀನೂ ಹೇಳಿ ಮಾಡಿಸಿಕೊಳ್ಳಲು ಸಂಕೋಚ ಪಡುತ್ತಿದ್ದುದನ್ನು ನಾನು ನೋಡಿದ್ದೀನೆ. ಗೌರಿ ಹಬ್ಬದಲ್ಲಂತೂ ಪೂಜೆ ಮುಗಿಸಿ, ಎಲ್ಲರ ಅಗತ್ಯಗಳನ್ನು ಪೂರೈಸುವುದರೊಳಗೆ ನಿನಗೆ ಎಷ್ಟು ಸುಸ್ತು ಆಗಿರುತಿತ್ತು ಎಂದರೆ, ಎಷ್ಟೋ ಸಲ, ತೆಗೆದುಕೊಂಡಿರುವ ಹೊಸ ಸೀರೆಯನ್ನೂ ನೀನು ಉಟ್ಟುಕೊಳ್ಳುತ್ತಿರಲಿಲ್ಲ. ಆಗಲೇ ನಾನು ನಿರ್ಧರಿಸಿದ್ದೆ, ನನ್ನ ಅಮ್ಮ ಮತ್ತು ಹೆಂಡತಿಯನ್ನು ನಾನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು.
ಮುಂದುವರೆದು,
ಹಾಗೆಯೇ ಅವರ ಮನೆಯಲ್ಲಂತೂ ಹೆಂಗಸರು ಇರುವುದೇ ಗಂಡಸರ ಸೇವೆಗೆ ಎಂಬಂತಹ ವಾತಾವರಣದಿಂದ ಸಿಡಿದೆದ್ದು, ನಾನೂ ಓದಿ ಕೆಲಸಕ್ಕೆ ಸೇರಿ ದುಡ್ಡು ಸಂಪಾದಿಸುತ್ತೇನೆ. ಏನಾದರೂ ನಾನು ಮನೆಗೆಲಸವನ್ನು ಮಾಡುವುದಿಲ್ಲ, ಅದು ತಪ್ಪೇ ಆದರೂ, ಎಂಬ ಅಭಿಪ್ರಾಯವನ್ನು ಹೊಂದಿರುವ ನಮಿತಾ,
ಹೀಗಾಗಿ ಮೂರೂ ಜನ ಸಮನ್ವಯ ಸಾಧಿಸಲು ಸ್ವಲ್ಪ ಹೆಣಗಬೇಕು, ನಾನು ಹೆಣಗಲು ರೆಡಿ, ನಿಮ್ಮಿಬ್ಬರ ಸಪೋರ್ಟ್ ಬೇಕು – ಎಂದನು.
ಆಯ್ತು, ಮತ್ತೆ ನಾನು ತಪ್ಪಿತಸ್ಥ ಭಾವನೆಯಿಂದ ಕುಗ್ಗುವಂತೆ ಮಾಡಬೇಡ. ನನ್ನ ಬೆಂಬಲ ನಿನಗೆ ಯಾವಾಗಲೂ ಇದೆ – ಹೇಳಿದಳು ಜಾನ್ಹವಿ.
ಓಕೆ, ಆ ವಿಚಾರ ಅಲ್ಲಿಗೆ ಬಿಡೋಣ. ಬದಲಾದ ಪರಿಸ್ಥಿತಿಯ ಅರಿವು ನಿನಗೆ ಇರಲಿ ಎಂದು ಹೇಳುತ್ತೇನೆ. ಹಿಂದಿನಂತೆ ಗಂಡು ಒಪ್ಪಿಕೊಂಡು ಬಿಟ್ಟರೆ ಮದುವೆ ಆದಂತೆ ಎಂಬ ಕಾಲ ಮುಗಿದು ಹೋಗಿದೆ. ನಿಮ್ಮ ಕಾಲದಲ್ಲಿ ಬಹುಪಾಲು ಹೆಂಗಸರು ಅಗತ್ಯತೆಗೆ, ಅನಿವಾರ್ಯತೆಗೆ ಕೆಲಸಕ್ಕೆ ಹೋಗುತ್ತಿದ್ದರು. ಈಗ ಕಾಲ ಬದಲಾಗಿದೆ, ಕೆರಿಯರ್‌ಗೆಂದೇ ಕೆಲಸಕ್ಕೆ ಹೋಗುತ್ತಾರೆ. ಕೆಲಸದ ಒತ್ತಡವೂ ಬಹುವಾಗಿರುತ್ತದೆ. ಹಾಗಾಗಿ ಮನೆ ಕೆಲಸ ಮಾಡಬಾರದು, ಬರುವುದಿಲ್ಲ ಎಂದಲ್ಲ, ಅದನ್ನು ಮಾಡಲು ಜನ ಸಿಗುವುದಾದರೆ ನಾವು ಮಾಡುವುದಿಲ್ಲ ಎಂಬ ಭಾವೆನ ಉಂಟಾಗಿದೆ. ನನಗೂ ಅದು ತಪ್ಪು ಎನಿಸುವುದಿಲ್ಲ.
ಮಗನ ವಾಗ್ಝರಿಯನ್ನು ಕಿವಿಗೊಟ್ಟು ಆಲಿಸುತ್ತಿದ್ದಳು ಜಾನ್ಹವಿ.
ಶರತ್ ಮುಂದುವರೆಸಿದ – ಹಿಂದಿನಿಂದಲೂ ಹೇಗೆ ಡಾಕ್ಟರ್ ಹುಡುಗನಿಗೆ ಡಾಕ್ಟರ್ ಹುಡುಗಿಯೇ ಬೇಕು, ಏಕೆಂದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಸುಲಭ ಎಂದು ಹೇಳುತ್ತಿದ್ದರೋ, ಇಂದಿಗೆ ನಮ್ಮ ವಲಯವೂ ಹಾಗೇ ಆಗಿಬಿಟ್ಟಿದೆ. ಜಾಗತೀಕರಣದಿಂದಾಗಿ ಹೊತ್ತಲ್ಲದ ಹೊತ್ತಿನಲ್ಲಿ ಮೀಟಿಂಗುಗಳು, ಯಾವಾಗಲೂ ರಾಟ್ ರೇಸಿನ ಓಟ, ಸದಾ ನಮ್ಮನ್ನು ನಾವು ಅಪ್‌ಡೇಟೆಡ್ ಆಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆಗಳಿಂದಾಗಿ, ವೇವ್ ಲೆನ್ತ್ ಸರಿಹೊಂದದಿದ್ದರೆ ಇಬ್ಬರ ಜೀವನವೂ ನರಕವಾಗಿಬಿಡುತ್ತದೆ. ಬಾಕಿಯದೆಲ್ಲವನ್ನೂ ನಾವು ಸಂಪಾದಿಸುವ ದುಡ್ಡಿನಿಂದ ಪಡೆಯಬಹುದು. ಆದರೆ ಈ ಅಗತ್ಯದ ಹೊಂದಾಣಿಕೆ ಅನಿವಾರ್ಯವಾಗಿರುವುದರಿಂದ ಬಾಕಿಯ ಎಲ್ಲಾ ವಿಚಾರಗಳೂ ಚಲ್ತಾ ಹೈ ಆಗಿಬಿಟ್ಟಿವೆ. ಈ ವಿಚಾರದಲ್ಲಿ ನಮಿತಾ ನನಗೆ ಫರ್ ಫೆಕ್ಟ್ ಮ್ಯಾಚ್ ಆಗಿರುವುದರಿಂದ ಬಾಕೀ ಜವಾಬ್ದಾರಿಗಳನ್ನು ಹೊರಲು ನನಗೆ ಕಷ್ಟವೆನಿಸುವುದಿಲ್ಲ.
ಮುಂದುವರೆದು,
ನೀನು ಬಂದ ನಾಲ್ಕಾರು ದಿನಗಳು ನಿನ್ನೊಂದಿಗೆ ಗುಡ್ಡೀ ಗುಡ್ಡೀಯಾಗಿ ಮಾತಾಡಿಕೊಂಡು, ಕೆಲವಾರು ಉಡುಗೊರೆಗಳನ್ನು ಕೊಟ್ಟು, ನಿನಗೆ ಬೇಕಾದಂತೆಯೇ ನಡೆದುಕೊಳ್ಳುವ ನಾಟಕವಾಡಲು, ನಮಿತಾಳನ್ನು ತರಬೇತುಗೊಳಿಸಿವುದು ನನಗೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ, ನನಗೆ ನನ್ನಮ್ಮ ನಮ್ಮೆಲ್ಲಾ ಒಳಿತು ಕೆಡಕುಗಳೊಂದಿಗೆ ನಮ್ಮೊಂದಿಗಿರಬೇಕೆನ್ನುವುದು ನನ್ನ ಇಷ್ಟ, ಅಷ್ಟೆ – ಎಂದು ಮಾತಿಗೆ ವಿರಾಮ ಹಾಕಿದ ಶರತ್.
ಹೆಬ್ಬೆಟ್ಟನ್ನೆತ್ತಿ ಒಪ್ಪಿಗೆ ಸೂಚಿಸಿದಳು ಜಾನ್ಹವಿ. ಅಷ್ಟರಲ್ಲಿ ಮನೆ ಬಂತು.
ಮನೆಯೆಲ್ಲಾ ಘಂ ಎನ್ನುವ ಸುಗಂಧ ಹರಡಿತ್ತು. “ಲಾಟ್ಸ್ ಆಫ್ ಲವ್ ಟು ಮೈ ಅಮ್ಮ” ಎಂದು ಬರೆದಿದ್ದ ಆಗ ತಾನೇ ನಮಿತಾ ತಯಾರಿಸಿದ್ದ ಫ್ರಷ್ ಕೇಕ್ ಟೇಬಲ್ ಮೇಲೆ ನನಗಾಗಿ ಕಾಯುತಿತ್ತು. ಫ್ರಿಡ್ಜಿನೊಳಗೆ ಐಸ್ ಕ್ರೀಂ ಸಹ ತಯಾರಾಗಿ ಕುಳಿತಿತ್ತು. ಏಪ್ರಿನ್ ಕಟ್ಟಿಕೊಂಡಿದ್ದ ನಮಿತಾ ಕೊನೆಯ ಸುತ್ತಾಗಿ ಅಡುಗೆ ಕಟ್ಟೆಯನ್ನು ಕ್ಲೀನ್ ಮಾಡುತ್ತಿದ್ದಳು.
ಮಕ್ಕಳ ಅಕ್ಕರೆಯ ನೋಡಿ, ʼನಾನೇ ಧನ್ಯಳುʼ ಎಂದುಕೊಂಡಳು ಜಾನ್ಹವಿ.
ಎರಡು ದಿನಗಳು, ಎರಡು ಕ್ಷಣಗಳಂತೆ ಕಳೆದುಹೋದವು. ಬುಧವಾರ ಏರ್ ಪೋರ್ಟಿನಲ್ಲಿ ಇನ್ನೇನು ಶರತ್ ಮತ್ತು ಜಾನ್ಹವಿಯರ ಕಣ್ಣುಗಳು ಕಣ್ಣೀರ ಕೊಳಗಳಾಗಬೇಕು, ಅಷ್ಟರಲ್ಲಿ ನಮಿತಾ – ಓಕೆ ಅಮ್ಮಾ, ಹ್ಯಾಪಿ ಜರ್ನಿ, ಬೆಂಗಳೂರು ಏರ್ ಪೋರ್ಟಿನಿಂದಲೂ ಟ್ಯಾಕ್ಸಿ ಬುಕ್ ಆಗಿದೆ, ನೀವು ಮನೆ ತಲುಪುವ ತನಕ ನಾವುಗಳು ಟ್ರ್ಯಾಕ್ ಮಾಡುತ್ತಲೇ ಇರುತ್ತೇವೆ. ಎರಡೇ ತಿಂಗಳು, ಗೌರಿ, ಗಣೇಶ ಹಬ್ಬಕ್ಕೆ ನಾವಿಬ್ಬರೂ ತುಮಕೂರಿಗೆ ಹಾಜರ್. ಬರೀ ಎಂಟು ವೀಕೆಂಡ್ಸ್, ಅಷ್ಟೇ ಅಲ್ವಾ ಶರತ್ – ಎನ್ನುತ್ತಾ ವಾತಾವರಣವನ್ನು ತಿಳಿಗೊಳಿಸಿಬಿಟ್ಟಳು.
ವಿಮಾನ ಪ್ರಯಾಣ ಮುಗಿಯಿತು, ಟ್ಯಾಕ್ಸಿಯಲ್ಲಿ ಊರಿಗೆ ಹೋಗುತ್ತಿರುವಾಗ, ಹೊರಟಾಗಿನಿಂದ ನಡೆದ ಘಟನೆಗಳೆಲ್ಲಾ ಜಾನ್ಹವಿಯ ಅರೆಮುಚ್ಚಿದ ಕಣ್ಣುಗಳ ಮುಂದೆ ಸಿನಿಮಾ ರೀಲಿನಂತೆ ಮತ್ತೊಮ್ಮೆ ಹಾಯ್ದು ಹೋದಾಗ ಕೊನೆಯಲ್ಲಿ ಅವಳ ತುಟಿಯಂಚಿನಲ್ಲಿ ಒಂದು ಸಂತೃಪ್ತಿಯ ಕಿರುನಗೆ ಮೂಡಿತು. ಅಂದುಕೊಂಡಳು, ಆತ್ಮೀಯ ಗೆಳತಿಯಾದ ಲೇಖಕಿ ʼನಾಗುʼವಿಗೆ ಹೇಳಬೇಕು, ಬದಲಾದ ಬದುಕಿನ ಬವಣೆಗಳು, ಭರವಸೆಗಳು, ಅನಿವಾರ್ಯತೆ, ಅಗತ್ಯತೆಗಳ ಕುರಿತು ಒಂದು ನೀಳ್ಗತೆ ಬರೆಯಲು – ಎಂದುಕೊಂಡಳು.
(ಮುಗಿಯಿತು)
-ಪದ್ಮಾ ಆನಂದ್, ಮೈಸೂರು
ಕಥೆ ಬಹಳ ಅರ್ಥಗರ್ಭಿತವಾಗಿ, ಸೊಗಸಾಗಿ ಮೂಡಿ ಬಂದಿದೆ. ಗೆಳತಿ ‘ನಾಗು’ವಿಗೆ ಕಥೆ ಹೊಸೆಯಲು ಹೇಳುವೆ ಎನ್ನುತ್ತಾ ನೀವೇ ಕಥೆ ಅರಳಿಸಿದ ಶೈಲಿ ಸೂಪರ್.
ನನ್ನ ಕಥೆಯನ್ನು ಪ್ರಕಟಿಸಿದ್ದಕ್ಕಾಗಿ, ಹಾಗೂ ಮೆಚ್ಚಿಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ವಾವ್…ಪ್ರತಿಯೊಬ್ಬರನ್ನು ಚಿಂತನೆ ಗೆ ಹಚ್ಚಲು ಪ್ರಚೋದಿಸುವಂತಹ ಕಥೆ… ಸೊಗಸಾದ ನಿರೂಪಣೆ.. ಅಭಿನಂದನೆಗಳು ಪದ್ಮಾಮೇಡಂ
ನಿಮ್ಮ ಅಭಿಮಾನಪೂರ್ವಕ ನುಡಿಗಳಿಗಾಗಿ ವಂದನೆಗಳು.
ಸೊಗಸಾದ ಕಥೆ. ಇವತ್ತಿನ ಬದುಕಿನ ಶೈಲಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ಸಂಸಾರದಲ್ಲಿ ಪರಸ್ಪರ ಹೊಂದಿಕೊಂಡು, ಅನುಸರಿಸಿಕೊಂಡು ಸಾಗುವುದನ್ನು ಕಲಿತಾಗಲೇ ಬದುಕು ಸುಂದರವಾಗುವುದು.
ಹೌದು, ಹೊಂದಿಕೊಳ್ಳುವುದನ್ನು, ಕಷ್ಟವೆನ್ನದೆ, ಇಷ್ಟಪಟ್ಟು ಮೈಗೂಡಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ಅಗತ್ಯವಾಗಿದೆ. ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಬದಲಾದ ಕಾಲಕ್ಕೆ ತಕ್ಕಂತೆ ನಮ್ಮನ್ನೂ ಬದಲಾಯಿಸಿಕೊಳ್ಳುತ್ತಾ ಹೊಂದಿಕೊಂಡು ಬಾಳುವುದರಲ್ಲಿರುವ ಆನಂದವನ್ನು ನಮಗೆ ಉಣಬಡಿಸಿದ ಪದ್ಮಾಮೇಡಂ ಕಥೆ ಸುಪರ್!
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು