ಅವಿಸ್ಮರಣೀಯ ಅಮೆರಿಕ – ಎಳೆ 73
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸಿಯಾಟೆಲ್(Seattle)
ಪೆಸಿಫಿಕ್ ಮಹಾಸಾಗರದ ವಾಯವ್ಯ ದಿಕ್ಕಿನಲ್ಲಿರುವ ಸಿಯಾಟೆಲ್, ವಾಷಿಂಗ್ಟನ್ ರಾಜ್ಯದ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಮೈಕ್ರೋಸಾಫ್ಟ್, ಅಮೆಝಾನ್ ನಂತಹ ದೈತ್ಯ ಕಂಪೆನಿಗಳ ಮುಖ್ಯ ಕಚೇರಿಗಳು ಇಲ್ಲಿವೆ. ಬಹಳ ಸುಂದರ ಕರಾವಳಿಯನ್ನು ಹೊಂದಿರುವ ಸಿಯಾಟೆಲ್ ನಲ್ಲಿ ಸುಮಾರು 7ಲಕ್ಷ ಜನರು ವಾಸವಾಗಿರುವುದಲ್ಲದೆ; ಅತ್ಯಂತ ಹೆಚ್ಚು ವಿದ್ಯಾವಂತರಿರುವ ನಗರವೆಂದೂ ಪ್ರಸಿದ್ಧಿ ಪಡೆದಿದೆ. ಸುಮಾರು 2,500 ಎಕರೆಗಳಷ್ಟು ವಿಸ್ತಾರವಾಗಿರುವ ಇಲ್ಲಿಯ ವಿಮಾನ ನಿಲ್ದಾಣವು ವರ್ಷದಲ್ಲಿ ಸುಮಾರು ನಾಲ್ಕೂವರೆ ಕೋಟಿ ಯಾತ್ರಿಕರಿಂದ ಬಳಸಲ್ಪಡುತ್ತದೆ. ಅತ್ಯಂತ ವಿಶಾಲವಾದ ಈ ವಿಮಾನ ನಿಲ್ದಾಣವು ಪೂರ್ವ ಮತ್ತು ಪಶ್ಚಿಮ ಎಂದು ಎರಡು ವಿಭಾಗಗಳನ್ನು ಹೊಂದಿದ್ದು, ಇಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಪುಟ್ಟ ರೈಲಿನಂತಹ ಉಚಿತ ಸ್ವಯಂಚಾಲಿತ ವಾಹನವಿದೆ.
ನಾವು ಸಿಯಾಟೆಲ್ ತಲಪಿದಾಗ ಮಧ್ಯಾಹ್ನ ಒಂದು ಗಂಟೆ. ಅಲಾಸ್ಕಕ್ಕೆ ತೆರಳಲು ಇರುವ ಮುಂದಿನ ವಿಮಾನವು ರಾತ್ರಿ 9 ಗಂಟೆಗಿತ್ತು. ಇಷ್ಟು ದೀರ್ಘ ಸಮಯನ್ನು ಕಳೆಯಲು ಮಾನಸಿಕ ಸಿದ್ಧತೆ ಮಾಡಿಕೊಂಡೆವು. ಅತ್ಯಂತ ವಿಶಾಲವಾದ L ಆಕಾರದ ಹಜಾರ…ಇಕ್ಕೆಲಗಳಲ್ಲೂ ಪಟ್ಟಣದ ಬೀದಿಯನ್ನೂ ನಾಚಿಸುವಂತಹ ತರೆಹೇವಾರು ಅಲಂಕೃತ ಅಂಗಡಿಗಳು. ಇದರೊಳಗೇ ನಾನು ಒಬ್ಬಳೇ ಸುತ್ತಾಡಲು ಮಕ್ಕಳ ಪರವಾನಿಗಿ ಇದ್ದರೂ, ಕಣ್ಣಳತೆಯಿಂದ ದೂರ ಹೋಗಲು ಭಯ! ಆದ್ದರಿಂದ ನಾವು ಕುಳಿತಿದ್ದ ಸ್ಥಳದ ಸುತ್ತಮುತ್ತಲೇ ತಿರುಗಾಡುತ್ತಾ ಸಮಯ ಕಳೆಯುವಂತಾಯಿತು. ನಮ್ಮ ಮುಂದುಗಡೆ ಇದ್ದ Fireworks ಹೆಸರಿನ ಅಂಗಡಿಯಲ್ಲಿ ನಾನೇನು ವ್ಯಾಪಾರ ಮಾಡದಿದ್ದರೂ, ಅದರ ಒಳಗಡೆ ಹೋಗಿ ಎಷ್ಟು ಹೊತ್ತು ಬೇಕಾದರೂ ತಿರುಗಾಡಲು ಬಿಟ್ಟರು! ಅಲ್ಲಿರುವ ಪ್ರತಿಯೊಂದು ವಸ್ತುವನ್ನೂ ಕೂಲಂಕುಷವಾಗಿ ಪರಾಂಬರಿಸುತ್ತಾ ಸಮಯ ಕಳೆಯುವಂತಾಯಿತು. ನಮ್ಮಂತೆಯೇ ಅಲ್ಲಿಗೆ ಬಂದ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಹಜಾರದ ನಡುವೆ ಸರದಿಯಂತೆ ಹಾಡು ಹೇಳುತ್ತಾ ಮನರಂಜಿಸುತ್ತಿದ್ದ ಮಹಿಳೆ ಮತ್ತು ಬಾಲಕನ ಕಾರ್ಯಕ್ರಮ ಇಷ್ಟವಾಯಿತು. ಎಳೆ ಮಕ್ಕಳಿಗೆ ಆಟವಾಡಲು ಇರುವ ಪ್ರತ್ಯೇಕ ಸ್ಥಳದಲ್ಲಿ, ನಮ್ಮ ಮೊಮ್ಮಕ್ಕಳ ಮೇಲ್ವಿಚಾರಣೆಗಾಗಿ ಅಲ್ಲಿ ಕೊಂಚ ಸಮಯ ಕುಳಿತು ಅಲ್ಲಿರುವ ಹತ್ತಾರು ಮಕ್ಕಳ ಆಟವನ್ನು ನೋಡುತ್ತಾ ಸಮಯವಂತೂ ಉರುಳಿತು. ಅಂತೂ… ರಾತ್ರಿ 9:30ಕ್ಕೆ ನಾವು ಕುಳಿತ ಪುಟ್ಟ ವಿಮಾನವು ಅಲಾಸ್ಕಾದತ್ತ ಹಾರಿತು. ಅಲಾಸ್ಕಾದ ಮುಖ್ಯಪಟ್ಟಣವಾದ ಆಂಕರೇಜ್ ಗೆ ತಲಪಿದಾಗ ರಾತ್ರಿ 12:30…ಆದರೆ, ಇನ್ನೂ ಸಂಜೆಯ ತಿಳಿ ಬೆಳಕು ಹರಡಿತ್ತು! ಈ ದಿನಗಳಲ್ಲಿ ಇಲ್ಲಿ, ರಾತ್ರಿ 12:30ಕ್ಕೆ ಸೂರ್ಯಾಸ್ತವಾಗಿ ಬೆಳಗ್ಗೆ 3:20ಕ್ಕೆ ಸೂರ್ಯೋದಯವಾಗುತ್ತಿತ್ತು! ಅಂದರೆ, ಕೇವಲ 3ತಾಸು ಮಾತ್ರ ಕತ್ತಲು! ಇಂತಹ ಅನೇಕ ಪ್ರಾಕೃತಿಕ ವಿಶೇಷತೆಗಳುಳ್ಳ ನಾಡಿನ ವೀಕ್ಷಣೆಗೆ ಅತೀವ ಆಶ್ಚರ್ಯ ಕುತೂಹಲಗಳೊಂದಿಗೆ ಬಂದಿಳಿದೆವು, ಆಂಕರೇಜ್ ಎಂಬ ಪುಟ್ಟ ಪಟ್ಟಣಕ್ಕೆ….
ಆಂಕರೇಜ್(Anchorage) ಎಂಬ ಆಶ್ಚರ್ಯ..!
ಅಲಾಸ್ಕಾ ರಾಜ್ಯದ ದಕ್ಷಿಣ ಭಾಗದಲ್ಲಿರುವ ಸುಮಾರು 5ಚ.ಕಿ.ಮೀ ವಿಸ್ತೀರ್ಣವಿರುವ, ಸುಮಾರು 2.88ಲಕ್ಷ ಜನಸಂಖ್ಯೆ ಹೊಂದಿರುವ ಆಂಕರೇಜ್ ಪಟ್ಟಣವು; ಅಲಾಸ್ಕಾ ರಾಜ್ಯದ ನಿಸರ್ಗ ವೀಕ್ಷಣೆಗೆ ಮುಖ್ಯ ಪ್ರವೇಶದ್ವಾರದಂತಿದೆ! ರಾಜ್ಯದ ಪ್ರಸಿದ್ಧ ಸಂಗೀತಗಾರರು ಹಾಗೂ ಇತರ ಪ್ರತಿಭಾವಂತ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸಿಸುವರು. ಅಲ್ಲದೆ, ಇದು ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ, ಹಿಮದಾಟ ಪ್ರಿಯರಿಗಾಗಿ130ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಮದಲ್ಲಿ ಜಾರುವ(Ski Trails) ಸುರಕ್ಷಿತ ತಾಣಗಳಿವೆ. ಅಲ್ಲದೆ, ಹೊರಾಂಗಣ ಕ್ರೀಡಾಪ್ರಿಯರಿಗೆ ಸಾಕಷ್ಟು ಅವಕಾಶಗಳಿವೆ. ಅತ್ಯುತ್ತಮ ವ್ಯವಸ್ಥಿತ ನಗರವಾಗಿದೆ… ಈ ಆಂಕರೇಜ್.
ಇಲ್ಲಿ ಪ್ರವಾಸಕ್ಕೆ ಸಾಮಾನ್ಯವಾಗಿ ಕ್ರೂಸ್ (ಬಹು ಅಂತಸ್ತಿನ ಯಾಂತ್ರಿಕೃತ ದೋಣಿ ಅಥವಾ ಹಡಗು)ಗಳು ಅಥವಾ R V (Recreation Vehicle)ಗಳನ್ನು ಬಳಸುವುದು ರೂಢಿ. ಕ್ರೂಸ್ ಗಳಲ್ಲಿ ನೂರಾರು ಕೊಠಡಿಗಳು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಲಭ್ಯವಿರುತ್ತವೆ. ಇಲ್ಲಿ ಊಟೋಪಚಾರಗಳನ್ನು, ಹೋಟೆಲಿನಂತೆ ಅದರೊಳಗೇ ಒದಗಿಸಲಾಗುತ್ತದೆ. ಇದರಲ್ಲಿ ಸಮುದ್ರದಲ್ಲಿ ಪ್ರಯಾಣ ಸಾಗುತ್ತದೆ ಹಾಗೂ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಂಗರು ಹಾಕಿ ಕ್ರೂಸನ್ನು ನಿಲ್ಲಿಸಲಾಗುವುದು. ಪ್ರವಾಸಿಗರನ್ನು ಸುತ್ತಾಡಿಸಲು ಆಯಾಯ ಜಾಗಗಳಲ್ಲಿ ಮಧ್ಯವರ್ತಿಗಳು ಅನುಕೂಲಕರವಾದ ವಾಹನಗಳೊಂದಿಗೆ ಅಲ್ಲಿಯೇ ಹಾಜರಿರುತ್ತಾರೆ. ಪ್ರವಾಸಿಗರು ಸುತ್ತಾಡಿದ ಬಳಿಕ, ಸಂಘಟಕರು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಕ್ರೂಸಿಗೆ ಹಿಂತಿರುಗಬೇಕಾಗುತ್ತದೆ. ಇದರಲ್ಲಿ ಪ್ರವಾಸವು ಬಹಳ ತುಟ್ಟಿ.
R Vಯು ಚಲಿಸುವ ಸುವ್ಯಸ್ಥಿತ ಮನೆಯಂತಿದ್ದು; ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಲಭ್ಯವಿರುತ್ತದೆ. ಈ ತಾತ್ಕಾಲಿಕ, ಚಲಿಸುವ ಮನೆಯ ಬಾಡಿಗೆಯು; ಅದರ ಗಾತ್ರ, ಸವಲತ್ತುಗಳಿಗೆ ಹೊಂದಿಕೊಂಡು, ಕೈಗೆಟಕುವ ದರದಲ್ಲಿ ಲಭ್ಯ. ದಿನವೊಂದಕ್ಕೆ ಸುಮಾರು150ರಿಂದ 350 ಡಾಲರ್‍ಗಳಷ್ಟು ಬಾಡಿಗೆ ಇರುತ್ತದೆ, ಅಂದರೆ ಸುಮಾರು ರೂ10,500 ರಿಂದ ರೂ 24,500ರಷ್ಟು. ಅಮೆರಿಕದಲ್ಲಿ ಸಾಮಾನ್ಯವಾಗಿ, ಆಹಾರ, ವಸತಿಗಳಂತಹ ಅಗತ್ಯತೆಗಳ ಖರ್ಚು ವಿಪರೀತ ಹೆಚ್ಚು. ಪ್ರವಾಸಿ ಕೇಂದ್ರಗಳಲ್ಲಂತೂ ಇನ್ನೂ ತುಟ್ಟಿ. ಕುಟುಂಬದ ಜನರೆಲ್ಲಾ ಒಟ್ಟಾಗಿ ಹೋಗುವುದಾದರೆ; ಊಟ, ತಿಂಡಿ, ವಸತಿ ಎಲ್ಲವೂ ಈ ಪುಟ್ಟ ಮನೆಯಲ್ಲಿಯೇ ಆಗುವುದರಿಂದ, ಹೋಟೇಲ್ ಗಳಿಗಿಂತ ಇಂತಹ ಚಲಿಸುವ ಮನೆಗಳಿಗಾಗುವ ಖರ್ಚು ತುಂಬಾ ಕಡಿಮೆ. ಜೊತೆಗೆ, ಕೈಯಡುಗೆಯಾದ್ದರಿಂದ, ದೂರದ ಊರಿನ ಆಹಾರಗಳು ಕೆಲವೊಮ್ಮೆ ನಮಗೆ ಹೊಂದಿಕೆಯಾಗದೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಂಭವ ತೀರಾ ಕಡಿಮೆ.
ಅಲಾಸ್ಕಾವು ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿರುವುದರಿಂದ ಅವುಗಳಿಗೆ ಅನುಕೂಲವಾಗಿ ಪ್ರವಾಸಿಗರು ವಿಶೇಷವಾಗಿ ಈ ವಾಹನಗಳನ್ನು ಬಳಸುವರು. ಸಕಲ ಸವಲತ್ತುಗಳನ್ನು ಒಳಗೊಂಡ ಇವುಗಳು ಈ ಪ್ರದೇಶದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಜನಸ್ನೇಹಿಯಾದ ಈ ವಾಹನವು ಚಲಿಸಲು ಅನುಕೂಲವಾಗುವಂತೆ ಅಲಾಸ್ಕಾದ ರಸ್ತೆಗಳು ಅಗಲವಾಗಿ, ದೀರ್ಘ ತಿರುವು ಹಾಗೂ ಸಮತಟ್ಟಾಗಿ ರಚಿಸಲ್ಪಟ್ಟಿವೆ. ವಾಹನದ ಉದ್ದವು 30ಅಡಿಗಳಿಗಿಂತ ಜಾಸ್ತಿಯಿರುವುದಿಲ್ಲ. ಸುಮಾರು 1920ರಲ್ಲಿ ಉತ್ತರ ಅಮೇರಿಕಾದಲ್ಲಿ ಪ್ರವಾಸಿಗರಿಗಾಗಿ ವಾಹನ ಸೌಲಭ್ಯ ಪ್ರಾರಂಭಗೊಂಡಾಗ ಇವುಗಳು ಕುದುರೆಗಳಿಂದ ಎಳೆಯಲ್ಪಡುತ್ತಿದ್ದವು. 1950ರ ಸುಮಾರಿಗೆ ಆಧುನಿಕ ಯಂತ್ರಗಳನ್ನೊಳಗೊಂಡ R Vಗಳ ತಯಾರಿ ಅರಂಭಗೊಂಡವು. ಮುಖ್ಯವಾಗಿ ಉತ್ತರ ಅಮೇರಿಕಾದ ಭಾಗಗಳಲ್ಲಿ ದೀರ್ಘ ಚಳಿಗಾಲದ ಜೀವನವು ದುಸ್ತರವಾಗಿರುವುದರಿಂದ, ಉತ್ತರದಿಂದ ದಕ್ಷಿಣಕ್ಕೆ ಇದೇ ವಾಹನಗಳಲ್ಲಿ ಇಡೀ ಕುಟುಂಬ ಸಹಿತ ಜನರು ವಲಸೆ ಹೋಗಿ, ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ಹಿಂತಿರುಗಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವರು. ಕೆನಡ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಉತ್ತರ ಅಮೆರಿಕಗಳಲ್ಲಿ ಈ ವಾಹನದ ಬಳಕೆ ಹೆಚ್ಚು.
ಇದು ಬಾಡಿಗೆ ರೂಪದಲ್ಲಿ ಬಳಕೆಗೆ ಪ್ರಾರಂಭವಾದಾಗ, ಪ್ರವಾಸಿಗರಿಗೆ ಬಹಳ ಅನುಕೂಲಕರವಾಗಿ ಪರಿಣಮಿಸಿತು. ಎರಡೇ ಜನರ ಮಿನಿ R V ಯಿಂದ ಹಿಡಿದು, 10ಮಂದಿ ಬಳಸಬಹುದಾದ ದೊಡ್ಡ ಗಾತ್ರದವುಗಳೂ ಲಭ್ಯ. ತಮ್ಮ ತಮ್ಮ ಶಕ್ತ್ಯಾನುಸಾರ, ಪ್ರವಾಸಿಗರು ಇವುಗಳನ್ನು ಬಾಡಿಗೆಗೆ ಪಡೆದು ಬಳಸಲು ತುಂಬಾ ಯೋಗ್ಯವಾಗಿದೆ. ಸಾಮಾನ್ಯವಾಗಿ ಇಂಧನದಿಂದ ಚಲಿಸುವುದಾದರೂ, ಈಗೀಗ ಕೆಲವರು ತಮ್ಮ ವಾಹನಗಳಿಗೆ ಸೌರಶಕ್ತಿಯನ್ನು ಬಳಸುವುದೂ ಕಂಡುಬರುತ್ತದೆ.
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39080
-ಶಂಕರಿ ಶರ್ಮ, ಪುತ್ತೂರು
ಪ್ರವಾಸ ಕಥನ ಓದಿಸಿಕೊಂಡು ಹೋಯಿತು ಅದಕ್ಕೆ ಚಿತ್ರ ಗಳು ಪೂರಕವಾಗಿ ಬಂದಿದ್ದರಿಂದ ವಿವರಣೆ..ಅರ್ಥಪೂರ್ಣ ವಾಗಿತ್ತು.. ಶಂಕರಿ ಮೇಡಂ
ಧನ್ಯವಾದಗಳು ಮೇಡಂ
ಚೆನ್ನಾಗಿದೆ
ಧನ್ಯವಾದಗಳು ಮೇಡಂ
ಪ್ರಕೃತಿ ವೈವಿಧ್ಯಗಳನ್ನೊಳಗೊಂಡ ಅಲಾಸ್ಕದ ವರ್ಣನೆ, ಸೌಲಭ್ಯಗಳನ್ನು ಚಂದವಾಗಿ ಲಭ್ಯವಾಗಿಸಿದ ಸುಂದರ ಕಂತು ಈ ವಾರದ ಅವಿಸ್ಮರಣೀಯ ಅಮೆರಿಕಾ.