ಬೇಗುದಿ
ಯಾವುದೋ ಸಮಾರಂಭಕ್ಕೆ ಹೊರಟಿದ್ದ ಮಗಳು, ಅಳಿಯ, ಮೊಮ್ಮಗನನ್ನು ಬೀಳ್ಕೊಟ್ಟು ಮನೆಯ ಮುಂದಿನ ಗೇಟನ್ನು ಭದ್ರಪಡಿಸಿ ಬಂದರು ಗಿರಿಜಮ್ಮ. ಒಳಗಿನಿಂದ ಕೈಯಲ್ಲಿ ಕಾಫಿ ಲೋಟಗಳನ್ನು ಹಿಡಿದುಕೊಂಡು ಬಂದ ಬೀಗಿತ್ತಿ ಲಲಿತಮ್ಮನವರನ್ನು ನೋಡಿದವರೇ ”ಅರೆ ! ನೀವೇಕೆ ತರಲು ಹೋದಿರಿ, ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದರು.
”ಪರವಾಗಿಲ್ಲ ಬಿಡಿ, ಅದರಲ್ಲೇನಿದೆ ಬನ್ನಿ ಇಲ್ಲೇ ಕುಳಿತುಕೊಳ್ಳೋಣ” ಎಂದು ಅವರ ಕೈಗೊಂದು ಲೋಟ ಕೊಟ್ಟು ತಾವೊಂದನ್ನು ಹಿಡಿದು ವೆರಾಂಡಾದಲ್ಲಿದ್ದ ಕುರ್ಚಿಯ ಮೇಲೆ ಕುಳಿತರು ಲಲಿತಮ್ಮ. ಮೌನವಾಗಿಯೇ ಕಾಫಿ ಆಸ್ವಾದಿಸುತ್ತಿದ್ದ ಗಿರಿಜಮ್ಮನವರನ್ನು ಓರೆಗಣ ಂದ ಬೀಗಿತ್ತಿ ವೀಕ್ಷಿಸಿದಾಗ ಅವರ ಕಂದಿದ ಮುಖಮುದ್ರೆ ಕಂಡು ಅಯ್ಯೋ ಎನ್ನಿಸಿತು. ತಡೆಯಲಾರದೆ ”ನಾನು ಹೀಗಂದೆ ಅಂದು ಬೇಸರಪಟ್ಟುಕೊಳ್ಳಬೇಡಿ” ಎಂದು ಮಾತಿಗಾರಂಭಿಸಿದರು.
ಯಾವ ವಿಷಯವೆಂದು ತಿಳಿಯದೆ ಏನೆಂದು ನನಗೆ ಅರ್ಥವಾಗಲಿಲ್ಲ. ”ನೀವು ಯಾವುದರ ಬಗ್ಗೆ ಹೇಳುತ್ತಿದ್ದೀರಿ? ಅದರಲ್ಲಿ ಬೇಸರಪಟ್ಟುಕೊಳ್ಳುವುದು”..ತಡೆತಡೆದು ಕೇಳಿದರು ಗಿರಿಜಮ್ಮ.
”ಏನಿಲ್ಲ, ಇವತ್ತು ನಮ್ಮ ಮೊಮ್ಮಗ ಶಶಾಂಕನೊಡನೆ ಆಟವಾಡುತ್ತಿದ್ದಾಗ ನೀವು ತಮಾಷೆ ಮಾಡಿದ್ದಕ್ಕೆ ಅವನು ಇದ್ದಕ್ಕಿದ್ದಂತೆ ಸಿಟ್ಟಿಗೆದ್ದು ನಿಮಗೆ ಹೊಡೆದದ್ದರಿಂದ ನೋವಾಗಿರಬೇಕಲ್ಲವೇ? ” ಎಂದು ಕೇಳಿದರು ಲಲಿತಮ್ಮ.
”ಹೂಂ..ಅವನು ಹೊಡೆದದ್ದಕ್ಕೆ ನೋವಾಗಲಿಲ್ಲ, ಆದರೆ ಈ ರೀತಿ ಹುಟ್ಟಿದಾಗಿನಿಂದ ಒರಟಾಗಿ ನಡೆದುಕೊಂಡಿದ್ದನ್ನು ನಾನು ಕಂಡಿದ್ದೇ ಇಲ್ಲ. ಎಷ್ಟೊಂದು ಸಾಧು ಸ್ವಭಾವದವನು, ಸೌಮ್ಯನಾಗಿರುತ್ತಿದ್ದ, ಹಿರಿಯರೆಂದರೆ ಗೌರವ, ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ. ಆದರೆ ಹೀಗೆ ಏಕಾಏಕಿ ಏಕಾದ?” ಎಂದು ಕಣ್ಣೊರೆಸಿಕೊಂಡರು.
”ಹೂಂ..ಒಂದು ಸಾರಿ ಹೀಗೆ ನಡೆದುಕೊಂಡಿದ್ದರಿಂದ ನಿಮಗೆ ಹೀಗನ್ನಿಸಿರಬೇಕಾದರೆ ದಿನನಿತ್ಯ ಅನುಭವಿಸುತ್ತಿರುವ ನನಗೇನನ್ನಿಸಿರಬೇಕು ಹೇಳಿ” ಎಂದರು ಲಲಿತಮ್ಮ.
”ಏನು! ಶಶಾಂಕ ನಿಮ್ಮ ಮೇಲೂ ಕೈಯೆತ್ತಿದ್ದಾನಾ?” ಎಂದು ಅಚ್ಚರಿಯಿಂದ ಪ್ರಶ್ನಿಸಿದರು ಗಿರಿಜಮ್ಮ.
”ಮೊದಲು ಹೀಗಿರಲಿಲ್ಲ, ಇತ್ತೀಚೆಗೆ ಎಷ್ಟೋಸಾರಿ ಹೊಡೆದಿದ್ದಾನೆ, ಕಚ್ಚಿದ್ದಾನೆ, ಕೈಗೆ ಸಿಕ್ಕಿದ ಸಾಮಾನುಗಳನ್ನು ನನ್ನತ್ತ ಎಸೆದಿದ್ದಾನೆ. ನಾನು ಇವನ್ನೆಲ್ಲ ಮಗ, ಸೊಸೆಯ ಮುಂದೆ ಹೇಳಲಿಕ್ಕಾಗದೆ, ಹೇಳಿದರೆ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂದು ಸುಮ್ಮನಾಗಿದ್ದೇನೆ. ಅವನು ಶಾಂತವಾದ ಮೂಡಿನಲ್ಲಿದ್ದಾಗ ಅನುನಯದಿಂದ ಅವನಿಗೆ ಹೀಗೆಲ್ಲ ಮಾಡಬಾರದು, ನೀನು ಜಾಣ ಹುಡುಗನಲ್ಲವೇ ಎಂದು ರಮಿಸಿ ಹೇಳುತ್ತಿದ್ದೆ. ಆಗ ತುಟಿಪಟಕ್ಕೆನ್ನದೆ ಕೇಳಿಸಿಕೊಳ್ಳುತ್ತಿದ್ದ. ಆ ದಿನ ಅಂತಹ ಪ್ರಸಂಗ ನಡೆಯುತ್ತಿರಲಿಲ್ಲ. ಮತ್ತೆ ಮಾರನೆಯ ದಿನ ಅದೇರಾಗ. ಇವತ್ತು ನಿಮಗೆ ಆಗಿದ್ದು ನೋಡಿ ನನಗೆ ತಡೆಯಲಾಗದೆ ಇದನ್ನೆಲ್ಲ ಹೇಳಬೇಕಾಯಿತು. ನೋಡಿ ಇಲ್ಲಿ ಉಗುರಿನಿಂದ ಜಿಗುಟಿದ್ದು, ಕಚ್ಚಿರುವ ಗುರುತುಗಳು” ಎಂದು ಹೊದ್ದಿದ್ದ ಸೆರಗನ್ನು ಸರಿಸಿ ಭುಜ, ಕತ್ತು ಎಲ್ಲವನ್ನೂ ತೋರಿಸಿದರು. ಅಲ್ಲೆಲ್ಲ ಗಾಯದ ಗುರುತುಗಳು ಇದ್ದದ್ದನ್ನು ನೊಡಿ ಗಿರಿಜಮ್ಮ ಹೌಹಾರಿದರು. ಮನಸ್ಸಿನಲ್ಲೇ ಅಲೋಚಿಸಿದರು. ತವು ಈ ಸಾರಿ ಬಂದಾಗಿನಿಂದ ಮೊಮ್ಮಗನ ವರ್ತನೆಗಳನ್ನು ಕಣ್ಮುಂದೆ ತಂದುಕೊಂಡರು.
ಬೆಳಗ್ಗೆ ಏಳುವುದಕ್ಕೆ ರಗಳೆಮಾಡುತ್ತಿದ್ದ, ತಿಂಡಿ ತಿನ್ನುವುದಕ್ಕೆ ಸತಾಯಿಸುತ್ತಿದ್ದ, ಸ್ಕೂಲಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದ, ಸ್ಕೂಲಿಂದ ಹಿಂದಿರುಗಿ ಬಂದಮೇಲೆ ಚೀಲವನ್ನೊಂದು ಕಡೆ, ಸಮವಸ್ತ್ರ, ಬೂಟು ಎಲ್ಲವನ್ನು ದಿಕ್ಕಾಪಾಲಾಗಿ ಎಸೆಯುತ್ತಿದ್ದ. ಡಬ್ಬಿಯಲ್ಲಿ ಹಾಕಿಕೊಟ್ಟಿರುತ್ತಿದ್ದ ತಿಂಡಿಯನ್ನು ಸರಿಯಾಗಿ ತಿನ್ನದೆ ಹಾಗೇ ತರುತ್ತಿದ್ದ, ಹೋಂವರ್ಕ್ ಮಾಡಿಸಲು ಅವರಮ್ಮ ಏನೇನೋ ಕಸರತ್ತು ಮಾಡಬೇಕಾಗುತ್ತಿತ್ತು. ಒಂದೇ ಎರಡೇ, ಮೊದಲೆಲ್ಲ ಹೀಗೆ ಅವನನ್ನು ನೋಡಿದ್ದೇ ಇಲ್ಲ. ಛೇ ! ನಮ್ಮೊಡನೆ ಬೇಸರ ಕಳೆಯಲು ಚೌಕಾಭಾರ, ಹಾವು ಏಣ ಯಾಟ, ಕೇರಂ ಆಡುತ್ತಿರುವಾಗ ತಾನು ಸೊಲುತ್ತಿದ್ದೇನೆಂಬ ಅರಿವಾದೊಡನೆ ಆಟವನ್ನು ಕೆಡಿಸುವುದು, ತಮಾಷೆ ಮಾತನಾಡಿದರೆ ದೊಡ್ಡವರೆನ್ನದೆ ಹೊಡೆಯುವುದು. ಎಲ್ಲವನ್ನೂ ತಾಳೆ ಹಾಕಿ ನೊಡಿ ಇದನ್ನು ಹೀಗೇ ಬಿಡಬಾರದು ಎಂದುಕೊಂಡರು. ಹಾಗೇ ಬೀಗಿತ್ತಿಯೊಡನೆ ”ನೀವು ನನ್ನೊಡನೆ ಸಹಕರಿಸಿ, ಹೆದರಬೇಡಿ ನಾನು ನನ್ನ ಮಗಳೊಡನೆ ಇದನ್ನು ಹೇಳುವುದಿಲ್ಲ. ಆದರೆ ಇದಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತೇನೆ” ಎಂದು ಸಮಾಧಾನದ ನುಡಿಗಳನ್ನಾಡಿದರು.
ರಾತ್ರಿ ಊಟ ಮುಗಿಸಿ ಮಲಗಿದ ಗಿರಿಜಮ್ಮನಿಗೆ ಎಷ್ಟೊತ್ತಾದರೂ ನಿದ್ರೆ ಬರಲಿಲ್ಲ. ನಮ್ಮ ಕರ್ತವ್ಯ ಮುಗಿಸಿದ್ದಾಯಿತು, ಇನ್ನೇನಿದ್ದರೂ ಮಗಳು ಮೊಮ್ಮಗನ ಬದುಕನ್ನು ನೋಡುತ್ತಾ ಕಾಲಹಾಕುವುದು ಎಂದುಕೊಂಡಿದ್ದ ಅವರಿಗೆ ಮೊಮ್ಮಗನ ಅತಿರೇಕದ ವರ್ತನೆ ಹೊಸ ಸಮಸ್ಯೆ ತಂದೊಡ್ಡಿತು. ಅಲ್ಲಿಯವರೆಗೆ ತಾವು ನಡೆದು ಬಂದಿದ್ದ ದಾರಿಯತ್ತ ಅವರ ಚಿತ್ತ ಸರಿಯಿತು.
ಮೈಸೂರಿನ ಸಮೀಪದ ಪಾಂಡವಪುರ ಪ್ರಾಥಮಿಕಶಾಲಾ ಮಾಸ್ತರರಾಗಿದ್ದ ಸದಾಶಿವರಾಯರು, ಮತ್ತು ಯಶೋದಾರವರ ಇಬ್ಬರು ಮಕ್ಕಳಲ್ಲಿ ಗಿರಿಜಮ್ಮ ಮತ್ತು ತಮ್ಮ ವಿನಾಯಕ. ತಂದೆ ನಿವೃತ್ತರಾಗುವುದರೊಳಗೆ ಮೈಸೂರಿನಲ್ಲೇ ಮನೆ ಮಾಡಿ ಇಬ್ಬರು ಮಕ್ಕಳನ್ನು ವಿದ್ಯಾಭ್ಯಾಸ ಕೊಡಿಸಿ ಅವರಿಗೊಂದು ನೆಲೆ ಕಲ್ಪಿಸುವುದರಲ್ಲಿ ಯಶಸ್ವಿಯಾಗಿದ್ದರು. ಗಿರಿಜಾ ಪದವಿ ಪೂರೈಸುತ್ತಿದ್ದಂತೆ ಅವಳನ್ನು ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ಶಿವಾನಂದರಿಗೆ ಕೊಟ್ಟು ವಿವಾಹ ಮಾಡಿಸಿದ್ದರು. ಮಗ ವಿನಾಯಕ ಒಂದು ಟ್ಯುಟೋರಿಯಲ್ ತೆಗೆದಿದ್ದ. ಅದರಿಂದ ಜೀವನಕ್ಕೊಂದು ಮಾರ್ಗವಾಗಿತ್ತು. ನಿವೃತ್ತ ಜೀವನವನ್ನು ತಮ್ಮ ಸ್ವಗ್ರಾಮದಲ್ಲಿ ಕಳೆದು ಅವರು ಗತಿಸಿಹೋಗಿದ್ದರು. ಗಿರಿಜಾಳ ಪತಿ ಶಿವಾನಂದ ತುಂಬ ಒಳ್ಳೆಯ ಶಿಕ್ಷಕ, ಅಷ್ಟೇ ಶಾಂತಸ್ವಭಾವದ ವ್ಯಕ್ತಿ. ಅವರಿಗೆ ಒಬ್ಬಳೇ ಮಗಳು ಧರಿತ್ರಿ. ಅವಳಿಗೆ ಇಂಜಿನಿಯರಿಂಗ್ ಓದಿಸಿದ್ದರು. ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಅವಳಂತೆಯೇ ಇಂಜಿನಿಯರಿಂಗ್ ಪದವೀಧರನಾಗಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶನೊಡನೆ ಅವಳ ವಿವಾಹವನ್ನೂ ಮಾಡಿದ್ದರು. ಅವರಿಬ್ಬರ ಮಗನೇ ‘ಶಶಾಂಕ ‘ಗಿರಿಜಮ್ಮನವರ ಮುದ್ದಿನ ಮೊಮ್ಮಗ. ಧರಿತ್ರಿಯ ಗಂಡನಿಗೆ ಕಂಪೆನಿಯ ಕಡೆಯಿಂದ ಹಲವಾರು ಸಾರಿ ಹೊರದೇಶಗಳಿಗೆ ಹೋಗಿಬರಬೇಕಾಗುತ್ತಿತ್ತು. ಹೀಗಾಗಿ ಧರಿತ್ರಿ ಮಗ ಹುಟ್ಟಿದ ನಂತರ ಕೆಲಸಕ್ಕೆ ರಾಜೀನಾಮೆಯಿತ್ತು ಮನೆ, ಮಗು, ಅತ್ತೆಯವರನ್ನು ನೋಡಿಕೊಳ್ಳುತ್ತಿದ್ದಳು. ಶಿವಾನಂದರು ನಿವೃತ್ತರಾದ ಮೇಲೆ ತಮ್ಮೂರು ತಾವರೇಕೆರೆಯಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ಹೊಲಮನೆಗಳನ್ನು ನೋಡಿಕೊಂಡು ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ಅದಕ್ಕಾಗಿ ಊರಿನಲ್ಲಿನ ಹಳೆಯ ಮನೆಯನ್ನು ದುರಸ್ಥಿ ಮಾಡಿಸುತ್ತಿದ್ದರು. ಗಿರಿಜಮ್ಮನ ಮನಸ್ಸು ತಡೆಯದೆ ಸಮಯವೆಷ್ಟಾಗಿದೆ ಎಂಬುದನ್ನೂ ಯೋಚಿಸದೆ ಪತಿ ಶಿವಾನಂದರಿಗೆ ಫೋನಾಯಿಸಿದರು. ಮಗಳ ಮನೆಯಲ್ಲಿ ತಾವು ಕಂಡ ವಿಚಿತ್ರಗಳನ್ನು ಸಾದ್ಯಂತವಾಗಿ ವಿವರಿಸಿದರು.
ಮೊಮ್ಮಗನಿಗೆ ತಾತ ಶಿವಾನಂದರೆಂದರೆ ಪಂಚಪ್ರಾಣ. ಅವರು ಮನೆಗೆ ಬಂದರೆ ಬಿಡುವಿನ ವೇಳೆಯನ್ನೆಲ್ಲ ಅವರೊಟ್ಟಿಗೇ ಕಳೆಯುತ್ತಿದ್ದ. ತನ್ನ ಶಾಲೆಯಲ್ಲಿ ನಡೆದಿದ್ದು, ಆಟಪಾಟಗಳು, ಎಲ್ಲವನ್ನೂ ತಾತನ ಮುಂದೆ ಹೇಳಿಕೊಳ್ಳುತ್ತಿದ್ದ. ರಾತ್ರಿ ಮಲಗುವಾಗ ತಾತನ ಪಕ್ಕದಲ್ಲೇ ಮಲಗಿ ಅವರಿಂದ ದಿನವೂ ಒಂದೊಂದು ಕಥೆ ಕೇಳಿಯೇ ಮಲಗುತ್ತಿದ್ದುದು ರೂಢಿಯಾಗಿತ್ತು. ಗಿರಿಜಮ್ಮನಿಗೆ ತಾತನವರಿಂದ ಶಶಾಂಕನಿಗೆ ಬುದ್ಧಿ ಹೇಳಿಸಿದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ. ಅತ್ತ ಕಡೆಯಿಂದ ಶಿವಾನಂದರು ”ಏ.ಗಿರಿಜಾ, ನೀನು ಸುಮ್ಮಸುಮ್ಮನೆ ಟೆನ್ಷನ್ ಮಾಡಿಕೊಂಡಿದ್ದೀಯೆ. ಅವನು ಅವರ ಅಪ್ಪ ಅಮ್ಮನೊಡನೆ ಇಂಗ್ಲೆಂಡಿಗೆ ಒಂದು ತಿಂಗಳ ಕಾಲ ಹೋಗಿಬಂದಿದ್ದಾನೆ. ಅಲ್ಲಿ ಹಾಯಾಗಿ ಕಾಲ ಕಳೆದಿದ್ದರಿಂದ ಅವನಿನ್ನೂ ಇಲ್ಲಿನ ಶಾಲೆಯ ಚಟುವಟಿಕೆಗಳಿಗೆ ಹೊಂದಿಕೊಂಡಿಲ್ಲ. ಅವನಿನ್ನೂ ಎರಡನೆಯ ತರಗತಿಯ ಹುಡುಗ. ಕೆಲವು ಕಾಲ ಕಳೆದರೆ ಮೊದಲಿನಂತಾಗುತ್ತಾನೆ. ಇಲ್ಲಿ ಮನೆಯ ಕೆಲಸ ಸ್ವಲ್ಪ ಬಾಕಿಯಿದೆ. ಬೇಗನೇ ಮುಗಿಸಿ ಬಂದುಬಿಡುತ್ತೇನೆ. ಅಲ್ಲಿಯವರೆಗೆ ಯಾರಿಗೂ ಏನನ್ನೂ ಹೇಳಬೇಡ. ಈಗ ಫೋನಿಡು” ಎಂದುಬಿಟ್ಟರು. ತನ್ನವರಿಂದ ಕೇಳಿದ ಭರವಸೆಯ ನುಡಿಗಳಿಂದ ಸಮಾಧಾನವಾದಂತೆ ನಿದ್ರಾದೇವಿ ಅವರನ್ನಾವರಿಸಿತು.
ಬೆಳಗ್ಗೆ ತನ್ನ ಗಂಡ ಹೇಳಿದಂತೆ ಒಂದು ತಿಂಗಳು ಶಾಲೆ ತಪ್ಪಿದ್ದರಿಂದ ವ್ಯತ್ಯಾಸ ಉಂಟಾಗಿದೆಯೆಂಬುದು ನಿಜವಿರಬಹುದು. ಆದರು ಶಾಲೆಯಲ್ಲಿ ಏನಾದರೂ ನಡೆಯಿತೇ ಎಂಬ ಬಗ್ಗೆ ಶಶಾಂಕನ ಸ್ನೇಹಿತರಿಂದ ವಿಚಾರಿಸಿದರೆ ಗೊತ್ತಾಗಬಹುದು ಎಂದು ಆಲೋಚಿಸಿ ಅವನ ಹತ್ತಿರದ ಸ್ನೇಹಿತ ಪೃಥ್ವಿಯ ಮನೆಗೆ ಹೋಗಲು ನಿರ್ಧರಿಸಿದರು. ಅವರ ತಾಯಿಯೂ ಗಿರಿಜಮ್ಮನಿಗೆ ಪರಿಚಯವಿರುವುದರಿಂದ ಸುಮ್ಮನೆ ಬಂದೆನೆಂದು ಕಾರಣ ಹೇಳಬಹುದು ಎಂದುಕೊಂಡರು. ಬೇಗನೆ ಸ್ನಾನ, ಪೂಜೆ, ತಿಂಡಿ ಮುಗಿಸಿ ಬೀಗಿತ್ತಿಗೆ ಯಾರದ್ದೋ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟರು. ದಾರಿಯಲ್ಲಿ ಹೋಗುತ್ತಿರುವಾಗ ದೂರದಲ್ಲಿ ಪೃಥ್ವಿಯೇ ಎದುರಿಗೆ ಬರುತ್ತಿರುವುದು ಕಾಣ ಸಿತು. ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಂತಾಯಿತು. ”ಏ..ಪೃಥ್ವೀ..ಪುಟ್ಟಾ ಬಾರೋ ಇಲ್ಲಿ” ಎಂದು ಕರೆದರು. ಅವನೂ ಶಶಾಂಕನ ಅಜ್ಜಿಯನ್ನು ನೋಡಿ ಬೇಗನೇ ಬಂದ. ”ಇವತ್ತು ಶಾಲೆಗೆ ಹೋಗಿಲ್ಲವೇನೋ?” ಎಂದಾಗ ಅವನು ”ಅಜ್ಜೀ, ಇವತ್ತು ಸಾಟರ್ಡೇ ನಮಗೆ ರಜೆಯಿದೆ. ಏಕೆ ಶಶಾಂಕ ನಿಮಗೆ ಹೇಳಿಲ್ಲವೇ? ಅಂದಹಾಗೆ ಅವನು ಮಮ್ಮಿ ಡ್ಯಾಡಿ ಜೊತೆ ಅದ್ಯಾವುದೋ ಊರಿನಲ್ಲಿನ ಫಂಕ್ಷನ್ನಿಗೆ ಹೋಗುತ್ತೇನೆಂದಿದ್ದ ಹೋಗಿಲ್ಲವೇ?” ಎಂದು ಕೇಳಿದ.
”ಹೋಗಿದ್ದಾನೆ, ಆದರೆ ನೀನು ಹೆಗಲಮೇಲೆ ಸ್ಕೂಲ್‌ಬ್ಯಾಗ್ ಹೊತ್ತು ಹೊರಟಿದ್ದೀಯಲ್ಲಾ?” ಎಂದರು.
”ನನ್ನ ಗೆಳೆಯ ತೇಜಸ್ಸಿನ ಮನೆಗೆ ಜೊತೆಯಾಗಿ ಓದಿಕೊಳ್ಳಲು ಹೋಗಿದ್ದೆ. ಅವನಿರಲಿಲ್ಲವೆಂದು ವಾಪಸ್ಸು ಮನೆಕಡೆಗೆ ಹೊರಟಿದ್ದೆ. ಅಷ್ಟರಲ್ಲಿ ನಿಮ್ಮನ್ನು ನೋಡಿದೆ” ಎಂದನು.
”ಅಂದಹಾಗೆ ಇತ್ತೀಚೆಗೆ ನೀನು ಶಶಾಂಕನೊಡನೆ ಮನೆಗೆ ಬರುತ್ತಿಲ್ಲವಲ್ಲಾ. ಮೊದಲು ಬಹಳ ಬರುತ್ತಿದ್ದೆ. ನಾನು ಬಂದಾಗಿನಿಂದ ಒಮ್ಮೆಯೂ ನೀನು ಬಂದೇ ಇಲ್ಲ. ಏನು ಕಾರಣ?” ಎಂದು ಪ್ರಶ್ನಿಸಿದರು.
”ಅಜ್ಜೀ, ಶಶಾಂಕ ಈಗ ಮೊದಲಿನಂತಿಲ್ಲ. ಮಾತಿಗೆ ಮುಂಚೆ ಸಿಡುಕುತ್ತಾನೆ. ತಮಾಷೆಯಾಗಿ ಮಾತನಾಡಿಸಿದರೂ ಸಿಟ್ಟಿಗೇಳುತ್ತಾನೆ. ಹೊಡೆಯುವುದಕ್ಕೇ ಬರುತ್ತಾನೆ. ಕ್ಲಾಸಿನಲ್ಲಿ ನಮ್ಮ ಮ್ಯಾಮ್ ಅವನನ್ನು ಮನೆಯಲ್ಲಿ ಸರಿಯಾಗಿ ಓದಿಕೊಂಡು ಬರುವುದಿಲ್ಲ, ವಿದೇಶಕ್ಕೆ ಹೋಗಿ ಜಾಲಿಯಾಗಿ ಮಜಾಮಾಡಲಿಕ್ಕಾಗುತ್ತೆ, ಪಾಠ ಓದಲಿಕ್ಕಾಗಲ್ವಾ? ಎಂದು ಬೈಯುತ್ತಲೇ ಇರುತ್ತಾರೆ. ಹೋಂವರ್ಕ್ ಸರಿಯಾಗಿ ಮಾಡಿಲ್ಲವೆಂದು ಕ್ಲಾಸಿನ ಕೊನೆಯಲ್ಲಿ ಪೀರಿಯಡ್ ಪೂರ್ತಿ ನಿಂತಿರುವಂತೆ ಪನಿಷ್‌ಮೆಂಟ್ ಕೊಡುತ್ತಾರೆ. ನಿನ್ನ ಗೆಳೆಯರೆಲ್ಲ ಚೆನ್ನಾಗಿ ಅಭ್ಯಾಸಮಾಡಿ ಮುಂದಿನ ತರಗತಿಗೆ ಹೋಗುತ್ತಾರೆ. ನೀನು ಫೇಲಾಗಿ ಇಲ್ಲೇ ಇರುತ್ತೀಯೆ” ಎಂದು ಬೈಯುತ್ತಾರೆ. ಆಗೆಲ್ಲ ಅವನು ಅಳುತ್ತಾನೆ. ಯಾರೊಂದಿಗೂ ಮಾತನಾಡುವುದಿಲ್ಲ. ಯಾರಾದರೂ ಸಮಾಧಾನ ಮಾಡಲು ಪ್ರಯತ್ನಿಸಿದರೆ ಅವರಿಗೆ ಬೆನ್ನಿನ ಮೇಲೆ ಗುದ್ದುತ್ತಾನೆ. ಅದಕ್ಕೇ ಯಾರೂ ಅವನ ತಂಟೆಗೇ ಹೋಗುವುದನ್ನು ನಿಲ್ಲಿಸಿದ್ದಾರೆ” ಎಂದು ವಿವರಿಸಿದ.
”ಇದೆಲ್ಲ ಶಶಾಂಕನ ಅಮ್ಮನಿಗೆ ಗೊತ್ತಾ? ಎಂದಿದ್ದಕ್ಕೆ ಇಲ್ಲ ಯಾರೂ ಹೇಳಿಲ, ನಮ್ಮ ಮ್ಯಾಮ್ ಮಾತ್ರ ಅವನ ತಂದೆತಾಯಿಗಳು ಯಾರೋ ದೊಡ್ಡ ಮನೆಯವರು, ಕ್ಲಾಸ್ ನಡೆಯುತ್ತಿರುವ ಸಮಯದಲ್ಲೇ ತಿಂಗಳುಗಟ್ಟಲೆ ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಾರೆ. ಅವನಿಗೆ ಕೊಬ್ಬು..ಉದಾಸಿನ ಮಾಡಿದರೆ ದಾರಿಗೆ ಬರುತ್ತಾನೆ ಎಂದು ಹೇಳುತ್ತಾರೆ. ಅವರ ಹೆದರಿಕೆಯಿಂದ ನಾವು ಸುಮ್ಮನಿದ್ದುಬಿಟ್ಟಿದ್ದೇವೆ” ಎಂದನು. ”ನಾನಿನ್ನು ಬರುತ್ತೇನಜ್ಜೀ, ನಾನು ಹೇಳಿದ್ದನ್ನು ಶಶಾಂಕನಿಗೆ ಹೇಳಬೇಡಿ” ಎಂದು ಕೇಳಿಕೊಂಡು ದೌಡಾಯಿಸಿದ.
ಎಲ್ಲವನ್ನೂ ಆಲಿಸಿದ ಗಿರಿಜಮ್ಮನವರಿಗೆ ಸಮಸ್ಯೆಯ ಸುಳಿವು ಸಿಕ್ಕಂತಾಗಿ ತಮ್ಮ ಪತಿಯಿಂದ ಇದಕ್ಕೊಂದು ಪರಿಹಾರ ದೊರಕಿಸಬೇಕೆಂದು ನಿರ್ಧರಿಸಿ ಮನೆಗೆ ಹಿಂದಿರುಗಿದರು. ಮನೆ ಸಮೀಪಿಸುತ್ತಿದ್ದಂತೆ ಮನೆಯ ಬಾಗಿಲಲ್ಲಿ ನಿಂತಿದ್ದ ಶಿವಾನಂದರನ್ನು ಕಂಡು ಅಚ್ಚರಿಯಾಯಿತು. ”ಅಲ್ಲಾ ಇನ್ನೂ ಸ್ವಲ್ಪ ಕೆಲಸವಿದೆ, ಅದನ್ನು ಮುಗಿಸಿ ಬರುತ್ತೇನೆ ಎಂದಿದ್ದಿರಿ. ಇವತ್ತೇ ಬಂದುಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು” ಗಿರಿಜಮ್ಮ.
”ಹಾಗೇ ಮಾಡೋಣವೆಂದು ಅಂದುಕೊಂಡಿದ್ದೆ. ಆದರೆ ರಾತ್ರಿ ನೀನು ಅವೇಳೆಯಲ್ಲಿ ಅಷ್ಟೊಂದು ಹೇಳಿಕೊಂಡದ್ದನ್ನು ಕೇಳಿ ಮೊದಲು ಸಮಸ್ಯೆಯೇನೆಂದು ನೋಡಿಯೇ ಹೋಗೋಣವೆಂದು ಬಂದುಬಿಟ್ಟೆ. ನೀನೇನು ಬೆಳಗ್ಗೆ ವಾಕಿಂಗ್ ಹೋಗಿರಲಿಲ್ಲವೇ? ಈಗ ಹೊರಟಿದ್ದೀಯಲ್ಲಾ?” ಎಂದು ಕೇಳಿದರು ಶಿವಾನಂದ.
”ಶಶಾಂಕನ ಗೆಳೆಯ ಪೃಥ್ವಿಯ ಮನೆಗೆ ಹೋಗಿದ್ದೆ”. ಎಂದು ಅವನಿಂದ ತಿಳಿದು ಬಂದ ವಿಷಂiiಗಳನ್ನೆಲ್ಲ ವಿವರವಾಗಿ ಗಂಡನಿಗೆ ತಿಳಿಸಿದರು. ಹೆಂಡತಿಯ ಮಾತುಗಳನ್ನು ಕೇಳಿದ ಶಿವಾನಂದ ”ನೋಡು ಗಿರಿಜಾ ನಿನ್ನ ಆತಂಕ ನನಗೆ ಅರ್ಥವಾಗುತ್ತೆ. ಆತುರಪಟ್ಟರೆ ಎಡವಟ್ಟಾಗುವ ಸಂಭವ ಹೆಚ್ಚು. ಈಗ ನಾನು ಬಂದಿದ್ದೇನಲ್ಲ ಸಮಯ ಸಂದರ್ಭ ನೋಡಿಕೊಂಡು ಶಶಾಂಕನಿಂದಲೇ ಇದಕ್ಕೇನು ಕಾರಣವೆಂದು ಬಾಯಿಬಿಡಿಸುತ್ತೇನೆ. ನಂತರ ನಮ್ಮ ಮಗಳಿಗೆ ಹೇಳಿ ಏನು ಮಾಡಬಹುದೆಂದು ತೀರ್ಮಾನಿಸೋಣ ದುಡುಕಬೇಡ” ಎಂದರು.
ಶಿವಾನಂದರ ಮಾತುಗಳನ್ನು ಕೇಳಿ ಲಲಿತಮ್ಮನವರೂ ಅದಕ್ಕೆ ದನಿಗೂಡಿಸಿ ಅದೇ ಸರಿಯಾದ ಮಾರ್ಗವೆಂದು ಒಮ್ಮತಕ್ಕೆ ಬಂದರು. ಅಂದು ಸಂಜೆಗೆ ತಂದೆತಾಯಿಗಳೊಡನೆ ಹಿಂತಿರುಗಿ ಬಂದ ಶಶಾಂಕ ತಾತನನ್ನು ನೋಡಿ ”ವಾವ್! ತಾತ ಬಂದುಬಿಟ್ಟಿದ್ದಾರೆ. ನೀವು ಬರುವುದು ಇನ್ನೂ ಲೇಟಾಗುತ್ತೆ ಎಂದಿದ್ದರು ಅಜ್ಜಿ” ಎನ್ನುತ್ತಾ ಹಿಗ್ಗಿನಿಂದ ಓಡಿಬಂದು ಶಿವಾನಂದರನ್ನು ತಬ್ಬಿಕೊಂಡ.
”ಹಾ..ಪುಟ್ಟಾ ಅಲ್ಲಿನ ಕೆಲಸ ಮುಗಿಯಿತು, ನಿನ್ನನ್ನು ನೋಡಬೇಕೆನ್ನಿಸಿತು, ಒಡೋಡಿ ಬಂದುಬಿಟ್ಟೆ” ಎಂದರು. ”ನನ್ನ ವಿಷಯ ಹಾಗಿರಲಿ ನೀವುಗಳು ಅಲ್ಲಿಂದ ನಾಳೆ ಬರುವಿರೆಂದು ಅಜ್ಜಿ ಹೇಳುತ್ತಿದ್ದಳು. ಇವತ್ತೇ ಬಂದುಬಿಟ್ಟಿದ್ದೀರಾ” ಎಂದರು ಶಿವಾನಂದ.
”ಹಾ..ಪಪ್ಪನಿಗೆ ಮತ್ತೆ ಯಾವುದೋ ಅರ್ಜೆಂಟ್ ಕೆಲಸದ ಕಾಲ್ ಬಂತು ಅದಕ್ಕಾಗಿ ಎಲ್ಲಿಗೋ ಹೋಗಬೇಕಂತೆ. ಅದಕ್ಕಾಗಿ ಇವತ್ತೇ ಬಂದುಬಿಟ್ಟೆವು. ಈ ಸಾರಿ ಮಮ್ಮಿ ಏನಾದರೂ ಪಪ್ಪನೊಡನೆ ಯು.ಕೆ.ಗೆ ಹೋದರೆ ನಾನಂತೂ ಅವರೊಟ್ಟಿಗೆ ಹೋಗುವುದಿಲ್ಲ. ನಿಮ್ಮೊಡನೆ ಊರಿಗೆ ಬಂದುಬಿಡುತ್ತೇನೆ. ಅಲ್ಲಿಯೇ ಇದ್ದು ಬಿಡುತ್ತೇನೆ” ಎಂದ ಶಶಾಂಕ.
ಶಾಲೆಗೆ ರಜೆ ಇದ್ದಾಗ ಬಂದೇ ಬರುತ್ತೀಯಲ್ಲ. ಈಗಲೇ ಬಂದರೆ ಶಾಲೆ? ಎಂದು ಶಿವಾನಂದ ಕೇಳುತ್ತಿದ್ದಂತೆಯೇ ಕಾರಿನಿಂದ ಲಗೇಜನ್ನು ತೆಗೆದುಕೊಂಡು ಒಳಕ್ಕೆ ಬರುತ್ತಿದ್ದ ಮಗಳು ಧರಿತ್ರಿ ಅವಳ ಮಗ ಹೇಳಿದ್ದನ್ನು ಕೇಳಿಸಿಕೊಂಡು ಅಪ್ಪಾ ಇವನಿಗೇನೋ ಆಗಿದೆ. ಯು.ಕೆ.ಗೆ ಹೋಗಿ ಬಂದಮೇಲೆ ಸ್ವಲ್ಪ ದಿನ ಚೆನ್ನಾಗಿದ್ದ. ನಂತರ ಇದೇ ರಾಗವಾಗಿಬಿಟ್ಟಿದೆ. ನನಗಂತೂ ಇವನನ್ನು ರಮಿಸಿ ಪಾಠ ಹೇಳಿ, ಹೋಂವರ್ಕ್ ಮಾಡಿಸಿ ಸ್ಕೂಲಿಗೆ ಕಳಿಸುವಷ್ಟರಲ್ಲಿ ಸಾಕುಬೇಕಾಗುತ್ತದೆ. ಹರಸಾಹಸ ಮಾಡಬೇಕು. ಮೈಗಳ್ಳನಾಗಿದ್ದಾನೆ. ನೀವೇ ಹೇಳಿ ಹೇಗಿದ್ದರೂ ನೀವೇ ಅವನಿಗೆ ಬೆಸ್ಟ್ ಫ್ರೆಂಡ್ ಎಂದು ಆರೋಪಗಳ ಸುರಿಮಳೆ ಸುರಿಸಿ ಒಳನಡೆದಳು.
ಹೆಂಡತಿ, ಮಗಳು, ಬೀಗಿತ್ತಿ ಮೊಮ್ಮಗನ ಗೆಳೆಯ ಪೃಥ್ವಿ ಇವರೆಲ್ಲರ ಮಾತುಗಳನ್ನು ಕೇಳಿದ ಶಿವಾನಂದರಿಗೆ ಮೊಮ್ಮಗನ ಪುಟ್ಟ ಹೃದಯಕ್ಕೆ ಏನೋ ಘಾಸಿಯಾಗಿದೆ. ಅದನ್ನು ಉಪಾಯವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿ ಆ ವಿಷಯವನ್ನು ಹೆಚ್ಚು ಕೆದಕಲು ಹೋಗದೆ ಆಯಿತು ಈಗ ಬಟ್ಟೆ ಬದಲಾಯಿಸಿ ಕೈಕಾಲು ಮುಖ ತೊಳೆದು ಅಜ್ಜಿಯಿಂದ ಏನಾದರೂ ತಿನ್ನಲು ಕೇಳಿ ತೆಗೆದುಕೋ ಎಂದು ಶಶಾಂಕನಿಗೆ ಹೇಳಿದರು.
ಮಾರನೆಯ ದಿನ ಭಾನುವಾರವಾದ್ದರಿಂದ ಕೆಲಸದ ಗಡಿಬಿಡಿಯಿಲ್ಲವೆಂದು ಊಟ ಮುಗಿಸಿ ತಮ್ಮತಮ್ಮ ರೂಮಿನ ಕಡೆ ನಡೆದರು. ಶಿವಾನಂದರ ಅಳಿಯ ಮಾವನವರೊಡನೆ ಒಂದೆರಡು ಔಪಚಾರಿಕ ಮಾತುಗಳನ್ನಾಡಿ ಕಂಪೆನಿ ಕಡೆಯಿಂದ ಸೋಮವಾರ ದೆಹಲಿಗೆ ಪ್ರಯಾಣ ಸಬೇಕಾದ ಅನಿವಾರ್ಯತೆಯನ್ನು ತಿಳಿಸಿ ಅದರ ತಯಾರಿಗಾಗಿ ಸ್ವಲ್ಪ ಕೆಲಸವಿದೆ ಎಂದು ತನ್ನ ರೂಮಿಗೆ ತೆರಳಿದನು. ಮೊಮ್ಮಗ ಶಶಾಂಕ ತನ್ನ ಬ್ಲ್ಯಾಂಕೆಟ್ ಹಿಡಿದು ತಾತನೊಡನೆ ಮಲಗಲು ಸಜ್ಜಾಗಿ ಅವರ ರೂಮಿಗೆ ಬಂದನು. ಅದನ್ನು ಕಂಡ ಗಿರಿಜಮ್ಮ ”ಆಹಾ ! ನಾನಿಲ್ಲಿಗೆ ಬಂದು ವಾರದ ಮೇಲಾಯಿತು, ಕರೆದರೂ ಬಾರದಿದ್ದವ ಈಗ ನೋಡಿ” ಎಂದು ನಗೆಚಟಾಕಿ ಹಾರಿಸಿದರು.
”ಹೌದು ಮಲಗುವಾಗ ನನಗೊಂದು ಕಥೆ ಹೇಳಿ ಎಂದರೆ ಎಲ್ಲ ಹಳೇ ಕಥೆಗಳನ್ನೇ ಮತ್ತೆ ಹೇಳ್ತೀರಿ. ತಾತ ಹಾಗೇನಿಲ್ಲ, ಪ್ರತಿ ಸಾರಿಯೂ ಹೊಸಹೊಸ ಕಥೆಗಳನ್ನು ಹೇಳುತ್ತಾರೆ. ಅದಕ್ಕೇ ನಾನಿಲ್ಲಿಗೆ ಬಂದದ್ದು” ಎಂದು ಅವರನ್ನು ಕೈಹಿಡಿದು ಕರೆದುಕೊಂಡೇ ರೂಮಿಗೆ ಹೋದ ಶಶಾಂಕ. ”ಅಜ್ಜೀ ನನ್ನ ಪಕ್ಕ ತಾತ ಮಲಗಲಿ. ನೀವು ಆಕಡೆಗೆ ಮಲಗಿಕೊಳ್ಳಿ” ಎಂದು ಗಿರಿಜಮ್ಮನವರಿಗೆ ಹೇಳಿದನು.
”ಏಕೋ ನೀನು ಯಾವಾಗಲೂ ನಮ್ಮಿಬ್ಬರ ಮಧ್ಯೆ ತಾನೇ ಮಲಗುವುದು..ಇವತ್ತೇನು? ಎಂದವರೇ ಬಿಡು ನಿಮ್ಮಿಬ್ಬರ ನಡುವೆ ನಾನು ಬರುವುದೇ ಇಲ್ಲ. ಇನ್ನೊಬ್ಬರು ಅಜ್ಜಿ ಇದ್ದಾರಲ್ಲ ಅವರ ರೂಮಿಗೇ ಹೋಗಿ ಬಿಡುತ್ತೇನೆ” ಎಂದು ತಮ್ಮ ಹೊದಿಕೆ ತೆಗೆದುಕೊಂಡು ಬೇಡವೆನ್ನುತ್ತಾನೇನೋ ಎಂದು ಅವನೆಡೆಗೆ ನೋಡಿದರು. ಊಹುಂ, ಅವನು ದಿಂಬುಗಳನ್ನು ಸರಿಪಡಿಸಿ ತಾತನನ್ನು ಮಲಗಲು ಹೇಳಿ ಅವರಿಗೆ ಹೊದಿಸಿ ತಾನು ತನ್ನ ಬ್ಲ್ಯಾಂಕೆಟ್ ಹೊದ್ದು ಗೋಡೆಯ ಪಕ್ಕ ಮಲಗಿ ”ಈಗ ಕಥೆ ಹೇಳಿ ತಾತ” ಎಂದನು.
ಹೊದಿಕೆ ಹಿಡಿದು ಅಲ್ಲೇ ನಿಂತಿದ್ದ ಹೆಂಡತಿಯನ್ನು ನೋಡಿ ಶಿವಾನಂದರು ”ಪುಟ್ಟಾ ಆ ಅಜ್ಜಿಗೆ ಇವರು ಹೋಗಿ ತೊಂದರೆ ಕೊಡುವುದು ಬೇಡ. ಈ ಅಜ್ಜಿ ಇಲ್ಲೇ ನೆಲದಮೇಲೆ ಜಮಖಾನೆ ಹಾಸಿ ಮಲಗಲಿ ಬಿಡು” ಎಂದರು.
ಶಶಾಂಕ ಕೂಡಲೆ ದಿಗ್ಗನೆದ್ದು ”ಬೇಡ ತಾತ, ಅಜ್ಜಿಗೆ ಬೆನ್ನು ನೋವು, ಕೆಳಗೆ ಮಲಗಿದ್ದನ್ನೇನಾದರೂ ಅಮ್ಮ ನೋಡಿದರೆ ಬೈಯುತ್ತಾರೆ. ಬನ್ನಿ ಅಜ್ಜಿ ಇಲ್ಲೇ ಅಡ್ಜಸ್ಟ್ ಮಾಡಿಕೊಳ್ಳೋಣ. ಆದರೆ ಒಂದು ಕಂಡೀಷನ್, ಕಥೆ ಹೇಳುವಾಗ ಮಧ್ಯೆ ನೀವು ಬಾಯಿ ಹಾಕಕೂಡದು. ಆಕಡೆ ಕೊನೆಯಲ್ಲಿ ಮಲಗಿ” ಎಂದು ಹೇಳುತ್ತಾ ತಾತನನ್ನು ಸ್ವಲ್ಪ ತನ್ನ ಕಡೆಗೆ ಸರಿಯಲು ಹೇಳಿದ.
”ಓ ಇವನಿಗೆ ಪ್ರೀತಿ, ಅನುಕಂಪವಿದೆ, ಆದರೆ ಕೆಲವುಸಾರಿ ಹಾಗೇಕೆ ವರ್ತಿಸುತ್ತಾನೆ? ” ಎಂದುಕೊಂಡು ಗಿರಿಜಮ್ಮ ಮೊಮ್ಮಗ ಹೇಳಿದಂತೆ ಇನ್ನೊಂದು ಕೊನೆಯಲ್ಲಿ ಮಲಗಿಕೊಂಡರು.
ಒಂದೆರಡು ಕಥೆಗಳನ್ನು ಕೇಳುತ್ತಿದ್ದಂತೆಯೇ ನಿದ್ರೆಗೆ ಜಾರಿದ ಮೊಮ್ಮಗನನ್ನು ಕಂಡು ಶಿವಾನಂದರು ತಾವು ಹೇಳುತ್ತಿದ್ದುದನ್ನು ನಿಲ್ಲಿಸಿದರು. ಅದುವರೆಗೆ ಸುಮ್ಮನಿದ್ದ ಗಿರಿಜಮ್ಮ ತನ್ನ ತಲೆಯೊಳಗೆ ಹೊಕ್ಕ ಆಲೋಚನೆಯನ್ನು ಹೊರ ಹಾಕಿದರು.
”ಹೂ..ಗಿರಿಜಾ, ನೀನು ಗಮನಿಸಿದೆಯಲ್ಲಾ ಒಂದು ಕಥೆ ಮುಗಿಯುತ್ತಿದ್ದಂತೆ ನಾನು ಇನ್ನೊಂದು ನೆನಪಿಸಿಕೊಳ್ಳುವಷ್ಟರಲ್ಲಿ ನೀನು ನಿನ್ನ ಶಾಲೆಯ ಬಗ್ಗೆ ಹೇಳು ಎಂದಿದ್ದಕ್ಕೆ ತನಗೆ ಕೇಳಿಸಲೇ ಇಲ್ಲವೇನೋ ಎಂಬಂತೆ ನಟಿಸಿದ. ನಾಳೆ ಹೇಗೂ ಭಾನುವಾರ, ಸಂಜೆ ಪಾರ್ಕಿಗೆ ಆಟವಾಡಲು ಕರೆದುಕೊಂಡು ಹೋದಾಗ ಮೆಲ್ಲಗೆ ಬಾಯಿಬಿಡಿಸುತ್ತೇನೆ. ಎಲ್ಲ ವಿಷಯಗಳು ಚಿಂತನೆಗೆ ಹಚ್ಚಿವೆ. ಕಾರಣವನ್ನು ಕಂಡು ಹಿಡಿಯಲೇಬೇಕು. ಈಗ ನೀನು ಮಲಗು” ಎಂದು ಹೇಳಿ ತಾವೂ ಮಗ್ಗಲು ಬದಲಾಯಿಸಿ ಮಲಗಿದರು ಶಿವಾನಂದ.
ಮಾರನೆಯ ದಿನ ಸಂಜೆ ತಾತ ಮೊಮ್ಮಗನ ಸವಾರಿ ಪಾರ್ಕಿನ ಕಡೆ ಹೊರಟಿತು. ಅಲ್ಲಿದ್ದ ಜಾರುಬಂಡೆ, ಐಸ್ಪೈಸ್, ಅಲ್ಲಿಗೆ ಬಂದಿದ್ದ ಇತರ ಚಿಕ್ಕ ಹುಡುಗರೊಡನೆ ಚೆಂಡಾಟ ಎಲ್ಲವನ್ನೂ ಅಡಿದ ಶಶಾಂಕ. ಶಿವಾನಂದರು ತಮ್ಮ ವಾಕಿಂಗ್ ಮುಗಿಸಿ ಬೆಂಚೊಂದರಮೇಲೆ ಕುಳಿತುಕೊಂಡರು. ಆಟವಾಡಿ ಬಂದ ಶಶಾಂಕ ತಾತನ ಪಕ್ಕದಲ್ಲಿ ಕುಳಿತು ಸುಧಾರಿಸಿಕೊಂಡ. ಅವರ ಕೈಯಲ್ಲಿದ್ದ ನೀರಿನ ಬಾಟಲಿ ತೆಗೆದುಕೊಂಡು ನೀರು ಕುಡಿದ. ಹಾಗೇ ”ತಾತಾ ಈ ಸಾರಿ ನಾನು ನಿಮ್ ಜೊತೆ ಊರಿಗೆ ಬರುತ್ತೇನೆ. ನನ್ನನ್ನು ಅಲ್ಲಿಯೇ ಸ್ಕೂಲಿಗೆ ಸೇರಿಸಿಬಿಡಿ. ಇಲ್ಲಿನ ಸ್ಕೂಲು ನನಗೆ ಬೇಡ” ಎಂದನು.
”ಏಕೆ ಪುಟ್ಟಾ? ಏನಾದರೂ ಒಂದು ಕಾರಣ ಬೇಕಲ್ಲ. ನಿಮ್ಮ ಅಪ್ಪ ಅಮ್ಮ ಸಾಕಷ್ಟು ದುಡ್ಡು ಖರ್ಚುಮಾಡಿ ಈ ಸ್ಕೂಲಿಗೆ ಸೇರಿಸಿದ್ದಾರೆ. ಅಲ್ಲದೆ ವರ್ಷದ ಮಧ್ಯದಲ್ಲಿ ಸ್ಕೂಲಿಗೆ ಯಾರು ಸೇರಿಸಿಕೊಳ್ಳುತ್ತಾರೆ” ಎಂದು ಕೇಳಿದರು ಶಿವಾನಂದ.
”ಹೋಗಲಿ ಬಿಡಿ ತಾತ, ಮುಂದಿನವರ್ಷ ಆರಂಭದಿಂದಲೇ ಸೇರಿಕೊಂಡರಾಯಿತು. ಹೇಗಿದ್ದರೂ ನಮ್ಮ ಮ್ಯಾಮ್ ಈ ಸಾರಿ ನೀನು ಪಾಸಾಗಲ್ಲ, ಇದೇ ಕ್ಲಾಸಿನಲ್ಲಿ ಇರುತ್ತೀಯೆಂದು ಹೇಳುತ್ತಲೇ ಇರುತ್ತಾರೆ. ಅದಕ್ಕೆ ಇನ್ನು ಮೂರು ತಿಂಗಳು ನಿಮ್ಮ ಜೊತೆಯಲ್ಲಿದ್ದು ನಂತರ ಊರಿನಲ್ಲಿ ಮನೆಯ ಹತ್ತಿರದ ಶಾಲೆಗೆ ಸೆರಿಕೊಳ್ಳುತ್ತೇನೆ” ಇದೇ ಕ್ಲಾಸಿಗೆ.
“ಅಲ್ಲ ಪುಟ್ಟಾ ಇದೇ ಕ್ಲಾಸಿನಲ್ಲೇ ಇರುತ್ತೀಯೆಂದು ಏಕೆ ಹೇಳುತ್ತಾರೆ. ಇನ್ನೂ ವಾರ್ಷಿಕ ಪರೀಕ್ಷೆಯೇ ಆಗಿಲ್ಲ. ರಿಸಲ್ಟ್ ಬಂದ ಮೇಲಲ್ಲವೇ ಗೊತ್ತಾಗುವುದು” ಎಂದು ಕೇಳಿದರು.
”ಊಹುಂ ಅವರಿಗೆ ಇಲ್ಲವಂತೆ, ನಾನು ಊರಿಗೆ ಹೋಗಿ ಎಲ್ಲ ಪಾಠಗಳನ್ನು ಮರೆತುಬಿಟ್ಟಿದ್ದೀನಂತೆ, ಹೋಂವರ್ಕ್ ಎಷ್ಟೇ ಚೆನ್ನಾಗಿ ಮಾಡಿಕೊಂಡು ಹೋದರೂ ಅದು ಸರಿಯಿಲ್ಲ ಅಂತ ಹೇಳಿ ನನಗೆ ಪನಿಷ್‌ಮೆಂಟ್ ಕೊಡುತ್ತಾರೆ. ಇಡಿ ಪೀರಿಯಡ್ ಕ್ಲಾಸಿನ ಹಿಂದುಗಡೆ ನಿಲ್ಲಿಸುತ್ತಾರೆ. ನಿನಗೆ ಮೋಜು ಮಸ್ತಿ ಮಾಡಕ್ಕೆ ಆಗುತ್ತೆ ಪಾಠ ಓದಿಕೊಂಡು ಬರಲಿಕ್ಕಾಗಲ್ಲ. ಪೇರೆಂಟ್ಸ್ ಜೊತೆ ತಿಂಗಳು ಕಾಲ ಚೈನಿ ಹೊಡಿಯಲಿಕ್ಕೆ ಹೋಗ್ತಾನೆ ಅಂತ ಎಲ್ಲರ ಮುಂದೆ ಇನ್ಸಲ್ಟ್ ಮಾಡುತ್ತಾರೆ. ಇದರಿಂದ ನನಗೆ ತುಂಬ ಬೇಸರವಾಗುತ್ತೆ. ನಾನು ಬೇಡವೆಂದರೂ ಅಮ್ಮ ಯು.ಕೆ. ಗೆ ಕರೆದುಕೊಂಡು ಹೋಗಿದ್ದರಿಂದಲೇ ಹೀಗೆ ಆಗಿದ್ದು. ನನಗೆ ಒಂದು ತಿಂಗಳ ಪಾಠ ಹಿಂದೆ ಹೋದವು. ಅವನ್ನು ಮಿಸ್ ಮಾಡಿಕೊಂಡೆನೆಂದು ಮನೆಯಲ್ಲಿ ಅಮ್ಮನಿಂದ ಹೇಳಿಸಿಕೊಂಡು ಒಂದೊಂದಾಗಿ ಬೇಗನೆ ಪಿಕಪ್ ಮಾಡಿಕೊಂಡೆ. ಆದರೆ ನಮ್ಮ ಮ್ಯಾಮ್ ಮಾತ್ರ ಯಾವ ರೀತಿ ಉತ್ತರ ಹೇಳಿದರೂ ಸರಿಯಿಲ್ಲ ಎನ್ನುತ್ತಾರೆ. ಅವರಿಗೆ ನನ್ನ ಕಂಡರೆ ಆಗುವುದಿಲ್ಲ. ನನ್ನ ಫ್ರೆಂಡ್ಸೆಲ್ಲಾ ನನ್ನನ್ನು ತಮಾಷೆ ಮಾಡುತ್ತಾರೆ. ನನಗೆ ಆಗ ತಡೆಯಲಾರದಷ್ಟು ಸಿಟ್ಟು ಬರುತ್ತದೆ. ಯಾರ ಜೊತೆಯಲ್ಲೂ ಸೇರಲು ಇಷ್ಟವಾಗುವುದಿಲ್ಲ. ಆದ್ದರಿಂದ ನನಗೆ ಈ ಸ್ಕೂಲೇ ಬೇಡವೆಂದದ್ದು” ಎಂದು ತಾತನನ್ನು ತಬ್ಬಿಕೊಂಡು ಬಿಕ್ಕಳಿಸಿ ಅಳತೊಡಗಿದ.
ಶಿವಾನಂದರಿಗೆ ಈಗ ಅವನಲ್ಲಾದ ಬದಲಾವಣೆಯ ಕಾರಣ ಅರ್ಥವಾಯಿತು. ಮೇಲಿಂದಮೇಲೆ ಅವನ ಗೆಳೆಯರ ಮುಂದೆ ಅವರ ಟೀಚರ್ ಬೈಯ್ಯುವುದರಿಂದ, ಹೀಯಾಳಿಸುವುದರಿಂದ ಪುಟ್ಟ ಮನಸ್ಸಿಗೆ ಘಾಸಿಯಾಗಿದೆ. ಅದನ್ನು ಸಿಟ್ಟಿನ ರೂಪದಲ್ಲಿ ಹೊರಗೆಡವುತ್ತಿದ್ದಾನೆ. ತಮ್ಮ ಮಗಳು ಅವನಿನ್ನೂ ಎರಡನೆಯ ತರಗತಿ ಅಲ್ಲವಾ, ಬಂದಮೇಲೆ ಮನೆಯಲ್ಲಿ ಅಷ್ಟು ಕಾಲದ ಪಾಠಗಳನ್ನು ಹೇಳಿಕೊಡಬಹುದು ಎಂದು ಒತ್ತಾಯಮಾಡಿ ತನ್ನೊಡನೆ ಪತಿಯು ಕೆಲಸ ಮಾಡುತ್ತಿದ್ದ ಯು.ಕೆ. ಗೆ ಕರೆದುಕೊಂಡು ಹೋಗಿದ್ದಳು. ಅವನಿಗೆ ಹೋಗಲು ಇಷ್ಟವಿರಲಿಲ್ಲ. ಹಿಂದಿರುಗಿ ಬಂದನಂತರ ಪ್ರತಿಯೊಂದನ್ನೂ ಮನೆಯಲ್ಲಿಯೇ ಕಲಿತು ಇತರರ ಸರಿಸಮಕ್ಕೆ ಬಂದಿದ್ದ. ಆದರೆ ಆ ಟೀಚರ್ ಇವನು ವಿದೇಶಕ್ಕೆ ಹೋದದ್ದೇ ಒಂದು ಅಪರಾಧವೆಂಬಂತೆ ಮಾತುಮಾತಿಗೂ ಅದನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದು ಅವನಿಗೆ ಮಾನಸಿಕವಾಗಿ ನೋವುಂಟು ಮಾಡಿತ್ತು. ಜೊತೆಗೆ ಸಹಪಾಠಿಗಳ ಮೂದಲಿಕೆಯಿಂದ ಮತ್ತಷ್ಟು ಮನಸ್ಸು ವ್ಯಗ್ರವಾಗುತ್ತಿತ್ತು. ತಾವು ಪದವಿ ತರಗತಿಯಲ್ಲಿ ಮನಶ್ಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಅಭ್ಯಾಸ ಮಾಡಿದ್ದ ಶಿವಾನಂದರಿಗೆ ಮೊಮ್ಮಗನ ಮನಸ್ಸಿನಲ್ಲಿ ಆಗಿದ್ದ ತಳಮಳ ಅರ್ಥವಾಗಿತ್ತು. ಅದನ್ನು ನಿವಾರಿಸದೆ ಹಾಗೇ ಬಿಡುವುದರಿಂದ ಮುಂದೆ ಕೆಟ್ಟ ಪರಿಣಾಮವಾಗಬಹುದೆಂದು ಆಲೋಚಿಸಿದರು. ಅಳುತ್ತಿದ್ದ ಶಶಾಂಕನನ್ನು ಸಮಾಧಾನ ಪಡಿಸಿ ಮುಂದೆ ಹೀಗಾಗಲು ಬಿಡಬಾರದು ಎಂದು ಆಲೋಚಿಸುತ್ತ ಕುಳಿತರು. ಶಶಾಂಕ ಸ್ವಲ್ಪ ಸಮಯದ ನಂತರ ತಾನೇ ನೀರಿನಿಂದ ಮುಖ ಕಣ್ಣು ತೊಳೆದುಕೊಂಡು ತಾತನ ಕರ್ಚೀಫಿನಿಂದ ಒರೆಸಿಕೊಂಡ. ಇನ್ನೂ ಸ್ವಲ್ಪ ನೀರು ಕುಡಿದು ”ತಾತ ಬನ್ನಿ ಕತ್ತಲಾಗುತ್ತಾ ಬಂತು, ಮನೆಗೆ ಹೋಗೋಣ. ಲೇಟಾದರೆ ಮಮ್ಮಿ ಬೈಯ್ಯುತ್ತಾರೆ” ಎಂದು ಅವರ ಕೈ ಹಿಡಿದುಕೊಂಡು ಮನೆಯ ಕಡೆ ಹೊರಟ.
ಶಿವಾನಂದರು ಅವನತ್ತ ನೋಡಿದಾಗ ಅವನ ಮುಖದಲ್ಲಿ ಭಯದ ನೆರಳು, ದುಃಖದ ಛಾಯೆ ಕಂಡಂತಾಯಿತು. ಮನೆಗೆ ಹೋದ ಕೂಡಲೇ ಇದನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸಿ ಅವನೊಡನೆ ಹೆಜ್ಜೆ ಹಾಕಿದರು.
ಮಗಳೊಂದಿಗೆ ನಡೆದದ್ದನ್ನೆಲ್ಲಾ ವಿವರಿಸಿ ಮಗುವಿಗೆ ಘಾಸಿಯಾಗುವಂತೆ ಮಾಡಿದ್ದಾರೆ ಅವರ ಟೀಚರ್ ಎಂದು ಸಮಸ್ಯೆಯನ್ನು ಅರ್ಥ ಮಾಡಿಸಿದರು. ಮಗಳು ಧರಿತ್ರಿ ”ನಾನು ಸೂಕ್ಷ್ಮವಾಗಿ ಗಮನಿಸಲಿಲ್ಲ. ನಾನೂ ಇವನದ್ದೇ ಏನೋ ತಪ್ಪಾಗಿದೆ ಎಂದು ತಿಳಿದು ದಂಡಿಸುತ್ತಿದ್ದೆ ”ಎಂದಳು. ಅಲ್ಲದೆ ”ಹಿರಿಯರ ಮೇಲೆ ಕೈಮಾಡಿದ್ದನ್ನು ಅತ್ತೆಯಾಗಲೀ, ಅಮ್ಮನಾಗಲೀ ನನಗೆ ಹೇಳಲೇ ಇಲ್ಲ. ನನಗ್ಹೇಗೆ ಗೊತ್ತಾಗಬೇಕು. ಹೋಗಲಿಬಿಡಿ ನಾಳೆ ಸ್ಕೂಲಿನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ. ನಾನು ಹೋಗುತ್ತೇನೆ. ಹೆಡ್‌ಮೇಡಂ ಹತ್ತಿರ ಮಾತನಾಡುತ್ತೇನೆ. ಇದಕ್ಕೆ ಪರ್‍ಯಾಯ ವ್ಯವಸ್ಥೆಯಾಗುವಂತೆ ಮಾಡಲು ಸಾಧ್ಯವೇ ಎಂದು ಕೇಳುತ್ತೇನೆ” ಎಂದಳು.
ಮಾರನೆಯ ದಿನ ಮಧ್ಯಾನ್ಹಕ್ಕೆ ಮೀಟಿಂಗ್ ಮುಗಿಸಿಕೊಂಡು ಮನೆಗೆ ಬಂದ ಮಗಳನ್ನು ”ಏನಾಯಿತೆಂದು” ಪ್ರಶ್ನಿಸಿದರು ಶಿವಾನಂದ. ”ಅಪ್ಪಾ ಇವತ್ತು ಆ ಟೀಚರ್ ಏನೋ ಕಾರಣದಿಂದ ಶಾಲೆಗೆ ಬಂದಿರಲಿಲ್ಲ. ಆದ್ದರಿಂದ ನಾನು ಹೆಡ್ಮೇಡಂ ಹತ್ತಿರ ಎಲ್ಲವನ್ನೂ ಸುಧೀರ್ಘವಾಗಿ ಹೇಳಿದೆ. ಇದರಿಂದಾಗಿ ನನ್ನ ಮಗನ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟಾಗಿದೆಯೆಂದು ಹೇಳಿದೆ. ಅವರು ಆ ಹೆಂಗಸು ಆಡಳಿತ ಮಂಡಳಿಯ ಸದಸ್ಯರೊಬ್ಬರ ಕಡೆಯಿಂದ ಬಂದವರು. ತುಂಬ ಧಿಮಾಕಿನ ಹೆಂಗಸು. ನೀವು ಮಗನನ್ನು ನಿಮ್ಮೊಡನೆ ಕರೆದುಕೊಂಡು ಹೋಗುವಾಗ ಅವರನ್ನು ಭೇಟಿಯಾಗಿ ಪರ್ಮಿಷನ್ ತೆಗೆದುಕೊಂಡಿಲ್ಲವೆಂದು ಈ ರೀತಿ ಮಾಡುತ್ತಿದ್ದಾರೆ. ವೈಯಕ್ತಿಕ ಪ್ರತಿಷ್ಠೆಯ ನಡವಳಿಕೆ. ಅವರ ಮೇಲೆ ಬೇರೆ ಪೇರೆಂಟ್ಸ್ ಕೂಡ ಹಲವು ಪ್ರಕರಣಗಳಲ್ಲಿ ಕಂಪ್ಲೇಂಟ್ ಮಾಡಿದ್ದಾರೆ. ನೀವು ಅವರ ಮುಂದೆ ಹೇಳದೆ ನನ್ನೊಡನೆ ಚರ್ಚಿಸಿದ್ದೇ ಒಳ್ಳೆಯದು. ನನ್ನಿಂದ ಏನು ಸಹಾಯ ಬೇಕು”’ ‘ಎಂದು ಕೇಳಿದರು. ನಾನು ನಮ್ಮ ಮಗನಿಗೆ ಬೇಕಿದ್ದರೆ ಕೌನ್ಸೆಲ್ಲಿಂಗ್ ಮಾಡಿಸುತ್ತೇನೆ. ಅವನನ್ನು ಬೇರೆ ಸೆಕ್ಷನ್ನಿಗೆ ಬದಲಾಯಿಸಿಕೊಟ್ಟರೆ ಉಪಕಾರವಾಗುತ್ತದೆ ಎಂದೆ. ಅವರು ತುಂಬ ಯೋಚಿಸಿ ಒಪ್ಪಿಕೊಂಡರು. ಅಪ್ಪಾ ಶಶಾಂಕ ಮೊದಲಿನಂತೆ ಸಮಾಧಾನವಾಗುವ ವರೆಗೆ ನೀವು ಊರಿಗೆ ಹೋಗಬೇಡಿ. ನೀವಿದ್ದರೆ ಅವನಿಗೆ ನೈತಿಕಬಲ ”ಎಂದು ಹೇಳಿದಳು.
”ಹೂ ನೀನು ಹೇಳುವುದೂ ಸರಿಯೇ, ಮಗಳೇ ಇದೆಲ್ಲ ಸರಿಹೋಗುವವರೆಗೂ ಇಲ್ಲಿಯೇ ಇರುವುದೆಂದು ನಾನಾಗಲೇ ನಿರ್ದರಿಸಿ ಬಿಟ್ಟಿದ್ದೇನೆ” ಎಂದರು ಶಿವಾನಂದ.
ಸಂಜೆಗೆ ಎಂದಿನಂತೆ ಶಾಲೆಯಿಂದ ಮನೆಗೆ ಬಂದ ಶಶಾಂಕ. ಬಾಗಿಲಿನಿಂದಲೇ ತಾತನನ್ನು ಕೂಗುತ್ತಾ ಅಲ್ಲೇ ನಿಂತಿದ್ದ ಅವರಿಗೆ ತೆಕ್ಕೆಬಿದ್ದು ಕೆನ್ನೆಗೊಂದು ಮುದ್ದುಕೊಟ್ಟು ”ಬೆಳಗ್ಗೆ ಅಮ್ಮ ಶಾಲೆಗೆ ಬಂದಿದ್ದರಲ್ಲ, ಏನು ಮಾಡಿದಿರಿ? ಈದಿನ ಮಿರೇಕಲ್ ಆಗಿಹೋಯ್ತು” ಎಂದ ಸಂತಸದಿಂದ.
”ಏನಪ್ಪಾ ಅಂತಹ ಮಿರೇಕಲ್ ? ಕೇಳಿ ಇಲ್ಲಿ ನನ್ನನ್ನು ಬೇರೆ ಸೆಕ್ಷನ್ನಿಗೆ ಬದಲಾಯಿಸಿ ಹಾಕಿದ್ದಾರೆ ದೊಡ್ಡ ಮ್ಯಾಮ್, ತಾವೇ ಬಂದು ನನ್ನನ್ನು ಬಿ ಸೆಕ್ಷನ್ನಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಹೋದರು. ಅಲ್ಲಿ ರಾಧಾ ಮ್ಯಾಮ್ ನನ್ನನ್ನು ವೆಲ್‌ಕಂ ಮಾಡಿ ತರಗತಿಗೆ ಸೇರಿಸಿಕೊಂಡರು. ಎಲ್ಲರಿಗೂ ಇಂಟ್ರೊಡ್ಯೂಸ್ ಮಾಡಿಸಿದರು” ಎಂದು ಕಣ್ಣರಳಿಸಿಕೊಂಡು ಹೇಳಿದ ಶಶಾಂಕ.
ಅದನ್ನು ಕೇಳಿದ ತಂದೆ ಮಗಳು ”ಅದು ಸರಿ ಮಗನೇ ಇವತ್ತಿನ್ನೂ ನೀನು ಆ ಸೆಕ್ಷನ್ನಿಗೆ ಹೋಗಿದ್ದೀಯ. ಅಷ್ಟು ಬೇಗ ನಿನಗದು ಇಷ್ಟವಾಗಿಬಿಡ್ತಾ?” ಎಂದು ಕೇಳಿದರು.
”ಹೂಂ ಮಮ್ಮೀ, ರಾಧಾ ಮ್ಯಾಮ್ ನನಗೆ ತುಂಬ ಇಷ್ಟ. ಅಲ್ಲದೆ ನನ್ನನ್ನು ಕಂಡರೆ ಇಷ್ಟ ಪಡೋ ಕ್ಲಾಸ್‌ಮೇಟ್ಗಳು ಗುರು, ಶ್ಯಾಮ, ಸಂಗೀತ, ಶಶಿ, ಎಲ್ಲ ಅಲ್ಲಿದ್ದಾರೆ. ಅವರೆಲ್ಲ ನನಗೆ ಪಿ.ಟಿ.ಫ್ರೆಂಡ್ಸ್. ಈಗ ವ್ಹಾವ್ ! ಥ್ಯಾಂಕ್ಯೂ ತಾತ ನೀವೇನೋ ಮ್ಯಾಜಿಕ್ ಮಾಡಿಬಿಟ್ಟಿರಿ” ಎಂದು ಮತ್ತೊಮ್ಮೆ ಅವರ ಕೊರಳಿಗೆ ಕೈಹಾಕಿ ತಬ್ಬಿಕೊಂಡ. ತನ್ನ ಸ್ಕೂಲ್ ಬ್ಯಾಗ್ ಹಿಡಿದು ಒಳಕ್ಕೆ ಓಡಿದ.
”ನಾನು ಏನೂ ಮಾಡ್ಲಿಲ್ಲ ಕಣೋ, ಅದೆಲ್ಲ ನಿನ್ನಮ್ಮ ಮಾಡಿದ್ದು” ಎಂದು ಹೇಳಲು ಬಾಯಿತೆರೆದ ಅಪ್ಪನನ್ನು ಸುಮ್ಮನಿರಿ ಎಂದು ಸನ್ನೆಮಾಡಿದಳು ಧರಿತ್ರಿ.
ಇದೆಲ್ಲ ಆಗಿ ಒಂದು ತಿಂಗಳು ಮಗಳ ಮನೆಯಲ್ಲಿದ್ದು ಮೊಮ್ಮಗನ ಮುಖದಲ್ಲಿ ಮೊದಲಿನ ಲವಲವಿಕೆ, ಉತ್ಸಾಹ, ಸಂತಸ ಕಂಡಮೇಲೆ ನೆಮ್ಮದಿಯಿಂದ ಪತ್ನಿ ಗಿರಿಜಾಳ ಜೊತೆ ಶಿವಾನಂದ ಊರಿಗೆ ಹಿಂತಿರುಗಿದರು. ಇನ್ನೊಬ್ಬ ಅಜ್ಜಿ ಲಲಿತಮ್ಮನವರು ಸಮಾಧಾನದ ನಿಟ್ಟಿಸಿರು ಬಿಟ್ಟು ಬೀಗಿತ್ತಿಗೆ ಮನದಲ್ಲೇ ಕೃತಜ್ಞತೆ ಅರ್ಪಿಸುತ್ತಿದ್ದರು. ಬರಸಿಡಿಲಿನಂತೆ ಬಡಿದು ಪುಟ್ಟ ಶಶಾಂಕನಿಗೆ ಉಂಟಾಗಿದ್ದ ಮನದ ಬೇಗುದಿ ಈಗ ಶಾಂತವಾಗಿತ್ತು, ನೆಮ್ಮದಿ ನೆಲೆಸಿತ್ತು.
– ಬಿ.ಆರ್.ನಾಗರತ್ನ, ಮೈಸೂರು
ಸೂಪರ್
ಧನ್ಯವಾದಗಳು ಸಹೃದಯರಿಗೆ…
ಮನಶಾಸ್ತ್ರದ ಪುಟಗಳನ್ನು ತೆರೆದು ಮಗುವಿನ ಬೇಗದಿಯನ್ನು ಪರಿಹರಿಸಿದ ಕಥೆ ಚೆನ್ನಾಗಿ ಮೂಡಿ ಬಂದಿದೆ ವಂದನೆಗಳು
ಧನ್ಯವಾದಗಳು ಗಾಯತ್ರಿ ಮೇಡಂ
ಸೊಗಸಾಗಿದೆ ಕಥೆ
ಧನ್ಯವಾದಗಳು ನಯನ ಮೇಡಂ
ಶಾಲಾಮಕ್ಕಳಲ್ಲಿ ಗಮನಿಸಬಹುದಾದ ಸಾಮಾನ್ಯ ಸಮಸ್ಯೆಯ ಮೂಲವನ್ನು ಕುರಿತ ವಿಶ್ಲೇಷಣಾತ್ಮಕ ಮನೋವೈಜ್ಞಾನಿಕ ಕಥೆ ಚೆನ್ನಾಗಿದೆ, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಪರಿಹಾರ ಸುಲಭವಾಗಿದೆ, ಚೆನ್ನಾಗಿದೆ
ಧನ್ಯವಾದಗಳು ಸಾಹಿತ್ಯ ಸಹೃದಯಿಗೆ
ಮನೋವೈಜ್ಞಾನಿಕದ ವಿಷಯವನ್ನು ಆಯ್ದುಕೊಂಡು, ಪ್ರತಿ ಕತೆಯಲ್ಲಿಯೂ ಸಮಸ್ಯೆಗೆ ಸೂಕ್ತವಾದ , ಧನಾತ್ಮಕವಾದ ಪರಿಹಾರ ಕಲ್ಪಿಸಿ ಕತೆ ಬರೆಯುವ ನಿಮ್ಮ ಕಥನ ಶೈಲಿ ಬಹಳ ಇಷ್ಟವಾಯಿತು.
ಧನ್ಯವಾದಗಳು ಹಾಗೇ ನಮ್ಮ ಬರಹವನ್ನು ಪ್ರಕಟಿಸಿ ಪ್ರೋತ್ಸಾಹ ಕೊಡುತ್ತಿರುವ ನಿಮಗೆ.ಹೃತ್ಪೂರ್ವಕವಾದ ವಂದನೆಗಳು
ಮಕ್ಕಳ ಮನಸ್ಸು ಸೂಕ್ಷ್ಮ ಎಂದು ಕೆಲವು ಶಿಕ್ಷಕರಿಗೆ ತಿಳಿಯುವುದೇ ಇಲ್ಲ. ಅವರ ಧೋರಣೆಯ ಸ್ವಭಾವ ಒಂದು ಕುಟುಂಬವನ್ನೇ ಯೋಚನೆಗೆ ಕಾರಣವಾಗಿ ಸಮಸ್ಯೆಯ ಪರಿಹಾರ ಕಂಡುಕೊಂಡು ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ ವೆಂಕಟೇಶ್
ಸುಂದರವಾದ ಮನೋವೈಜ್ಞಾನಿಕ ಕಥೆ. ಸೂಕ್ಷ್ಮ ಮನಸ್ಸಿನ ಮಗು ಶಶಾಂಕ ತನ್ನದಲ್ಲದ ತಪ್ಪಿಗೆ ಅನುಭವಿಸಿದ ವ್ಯಾಕುಲ ಮನಕರಗಿಸುತ್ತದೆ. ಉತ್ತಮವಾದ ನಿರೂಪಣೆಯೊಂದಿಗೆ ಅಚ್ಚುಕಟ್ಟಾಗಿ ಹೆಣೆಯಲ್ಪಟ್ಟ ಸೊಗಸಾದ ಕಥೆ.
ನಿಮ್ಮ ಪ್ರೀತಿ ಪೂರ್ವ ಕ ಅಭಿಪ್ರಾಯ ಅನಿಸಿಕೆಗಳಿಗೆ ಧನ್ಯವಾದಗಳು ಪದ್ಮಾ ಮೇಡಂ