ಇತ್ತೀಚಿನ ವರ್ಷಗಳಲ್ಲಿ ಹಣ್ಣಿನ ಅಂಗಡಿಗಳಲ್ಲಿ ಕೆಂಪು-ಗುಲಾಬಿ ಬಣ್ಣಗಳಿಂದ ಕೂಡಿದ, ವಿಶಿಷ್ಟ ಆಕಾರ ಹೊಂದಿರುವ ಹಾಗೂ ಹೆಸರನ್ನು ಕೇಳಿದಾಕ್ಷಣ ಇದು ವಿದೇಶಿ ಮೂಲದ್ದು ಎನಿಸುವಂತಹ ‘ಡ್ರ್ಯಾಗನ್ ಪ್ರುಟ್’ ಕಂಡುಬರುತ್ತಿದೆ. ಮಧ್ಯ ಅಮೇರಿಕಾ ಮೂಲದ ಹಣ್ಣಾದರೂ, ಸ್ಥಳೀಯವಾಗಿ ಬೆಳೆಯುವುದರಿಂದ ಈ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುತ್ತಿದೆ. ಅಧ್ಯಯನದ ಪ್ರಕಾರ, ಈ ಹಣ್ಣಿನಲ್ಲಿರುವ ಖನಿಜಾಂಶಗಳು, ನಾರು ಹಾಗೂ ಉತ್ಕರ್ಷಣಕಾರಿ ಪೋಷಕಾಂಶಗಳು ಕೀಲುನೋವು, ಉರಿಯೂತ, ಮಧುಮೇಹ ಮೊದಲಾದ ಸಮಸ್ಯೆಗಳಿಗೆ ಪ್ರಯೋಜನಕಾರಿ.
ಸ್ವಲ್ಪ ಉದ್ದವಾಗಿದ್ದು, ತಿಳಿಗುಲಾಬಿ ಬಣ್ಣದ ಸಿಪ್ಪೆ ಇರುವ ಡ್ರ್ಯಾಗನ್ ಫ಼್ರುಟ್ ಬಿಳಿಬಣ್ಣದ ತಿರುಳನ್ನು ಹೊಂದಿರುತ್ತದೆ ಹಾಗೂ ಕಡುಗುಲಾಬಿ ಬಣ್ಣವಿದ್ದು ಗುಂಡಗೆ ಇರುವ ಹಣ್ಣುಗಳು ಕೆಂಪು ತಿರುಳನ್ನು ಹೊಂದಿರುತ್ತವೆ. ಈ ಹಣ್ಣುಗಳನ್ನು ಮಿಶ್ರಮಾಡಿ ಅಥವಾ ಬೇರೆ ಬೇರೆಯಾಗಿ ಅಡುಗೆಗಳಲ್ಲಿ ಬಳಸಬಹುದು.
1. ಡ್ರ್ಯಾಗನ್ ಫ್ರುಟ್ ಜ್ಯೂಸ್
ಬೇಕಾಗುವ ಸಾಮಗ್ರಿಗಳು :
ಡ್ರ್ಯಾಗನ್ ಫ್ರುಟ್ : 1 , ನೀರು : 6 ಕಪ್ , ಸಕ್ಕರೆ : 6 ಚಮಚ
ನಿಂಬೆಹಣ್ಣು : ಅರ್ಧ , ಏಲಕ್ಕಿ ಪುಡಿ : ಚಿಟಿಕೆಯಷ್ಟು , ಐಸ್ ಕ್ಯೂಬ್ಸ್ ( ಬೇಕಿದ್ದರೆ); 8
ತಯಾರಿಸುವ ವಿಧಾನ :
ಬಿಳಿ ಅಥವಾ ಕೆಂಪು ಬಣ್ಣದ ಡ್ರ್ಯಾಗನ್ ಫ್ರುಟ್ ನ ಸಿಪ್ಪೆ ತೆಗೆದು ತಿರುಳನ್ನು ಹೆಚ್ಚಿ , ಮಿಕ್ಸಿಗೆ ಹಾಕಿ, ನೀರು, ಸಕ್ಕರೆ ಸೇರಿಸಿ ರುಬ್ಬಬೇಕು. ಆಮೇಲೆ ನಿಂಬೆಹಣ್ಣಿನ ರಸ ಹಾಗೂ ಏಲಕ್ಕಿ ಪುಡಿಯನ್ನು ಉದುರಿಸಿ ಚೆನ್ನಾಗಿ ಕದಡಿದರೆ ಡ್ರ್ಯಾಗನ್ ಫ್ರುಟ್ ಜ್ಯೂಸ್ ಸಿದ್ದವಾಗುತ್ತದೆ. ಬೇಕಿದ್ದಲ್ಲಿ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿ ಜ್ಯೂಸ್ ಕುಡಿಯಬಹುದು.
2. ಡ್ರ್ಯಾಗನ್ ಫ್ರುಟ್ ಸ್ವೀಟ್
ಬೇಕಾಗುವ ಸಾಮಗ್ರಿಗಳು :
ಡ್ರ್ಯಾಗನ್ ಫ್ರುಟ್ ಹಣ್ಣಿನ ತಿರುಳು : ಅರ್ಧ ಕಪ್ , ಉಪ್ಪಿಟ್ಟುರವೆ : 1 ಕಪ್ , ಸಕ್ಕರೆ : 1 ಕಪ್ , ನೀರು : 2 ಕಪ್
ತುಪ್ಪ : ಅರ್ಧ್ ಕಪ್, ಗೋಡಂಬಿ/ದ್ರಾಕ್ಷಿ : 2 ಚಮಚ , ಏಲಕ್ಕಿ ಪುಡಿ: ಚಿಟಿಕೆಯಷ್ಟು
ತಯಾರಿಸುವ ವಿಧಾನ :
ಕೆಂಪು ತಿರುಳಿನ ಡ್ರ್ಯಾಗನ್ ಫ್ರುಟ್ ನ ಸಿಪ್ಪೆ ತೆಗೆದು ಹೆಚ್ಚಿ, ಮಿಕ್ಸಿಗೆ ಹಾಕಿ ರುಬ್ಬಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಬಾಣಲಿಗೆ ಅರ್ಧ ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಗೋಡಂಬಿ/ದ್ರಾಕ್ಷಿಯನ್ನು ಕೆಂಪಾಗುವಷ್ಟು ಹುರಿದು ತೆಗೆದಿರಿಸಿಕೊಳ್ಳಿ. ಅದೇ ಬಾಣಲಿಗೆ ಪುನ: ಅರ್ಧ ಚಮಚ ತುಪ್ಪ ಮತ್ತು ರವೆಯನ್ನು ಹಾಕಿ ಸಣ್ಣ ಉರಿಯಲ್ಲಿ ಘಮ ಬರುವಷ್ಟು ಹುರಿದಿಟ್ಟುಕೊಳ್ಳಿ. ಬಾಣಲಿಯಲ್ಲಿ ಎರಡು ಕಪ್ ನೀರನ್ನು ಕುದಿಯಲು ಇಡಿ. ಹುರಿದಿಟ್ಟ ರವೆಯನ್ನು ಕುದಿಯುವ ನೀರಿಗೆ ಹಾಕಿ ಸೌಟಿನಲ್ಲಿ ಕೈಯಾಡಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. ಆಮೇಲೆ ಸಕ್ಕರೆಯನ್ನು ಸೇರಿಸಿ ಕೈಯಾಡಿಸಿ. ಸಕ್ಕರೆ ಮಿಶ್ರಣಕ್ಕೆ ಹೊಂದಿಕೊಂಡ ಮೇಲೆ, 4 ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಕಲಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ಈ ಹಂತದಲ್ಲಿ ರುಬ್ಬಿಟ್ಟ ಡ್ರ್ಯಾಗನ್ ಫ್ರುಟ್ ಸೇರಿಸಿ ಪುನ: ತಿರುವಿ. ಮಿಶ್ರಣವು ಚೆನ್ನಾಗಿ ಹೊಂದಿಕೊಂಡ ಮೇಲೆ ಏಲಕ್ಕಿ ಪುಡಿ ಮತ್ತು ಹುರಿದಿಟ್ಟ ಗೋಡಂಬಿ/ದ್ರಾಕ್ಷಿ ಸೇರಿಸಿ ಚೆನ್ನಾಗಿ ಬೆರೆಸಿ. ಚೆಂದದ ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರುಟ್ ಸ್ವೀಟ್ ತಿನ್ನಲು ಸಿದ್ಧವಾಗುತ್ತದೆ.
3. ಡ್ರ್ಯಾಗನ್ ಫ್ರುಟ್ ಕಸ್ಟಾರ್ಡ್
ಬೇಕಾಗುವ ಸಾಮಗ್ರಿಗಳು :
ಡ್ರ್ಯಾಗನ್ ಫ್ರುಟ್ : 1 , ಹಾಲು : 4 ಕಪ್ , ಸಕ್ಕರೆ : 8 ಚಮಚ ಕಸ್ಟಾರ್ಡ್ ಪೌಡರ್ : 2 ಚಮಚ ಗೋಡಂಬಿ/ಬಾದಾಮಿ/ದ್ರಾಕ್ಷಿ/ಪಿಸ್ತಾ ಚೂರುಗಳು : 2 ಚಮಚ
ತಯಾರಿಸುವ ವಿಧಾನ :
ಒಂದು ಪಾತ್ರೆಗೆ ಹಾಲು ಮತ್ತು ಕಸ್ಟಾರ್ಡ್ ಪುಡಿಯನ್ನು ಸುರಿದು, ಗಂಟಿಲ್ಲದಂತೆ ಕದಡಿ, ಸ್ಟವ್ ಮೇಲೆ ಇರಿಸಿ, ಸೌಟಿನಲ್ಲಿ ತಿರುವುತ್ತಾ ಸಣ್ಣ ಉರಿಯಲ್ಲಿ ಬೇಯಿಸಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಕುದಿಸಿ, ಆರಲು ಬಿಡಿ. ಕೆಂಪು ಅಥವಾ ಬಿಳಿ ಡ್ರ್ಯಾಗನ್ ಫ್ರುಟ್ ನ ಸಿಪ್ಪೆ ತೆಗೆದು ತಿರುಳನ್ನು ಹೆಚ್ಚಿ, ಮಿಕ್ಸಿಗೆ ಹಾಕಿ ಇಟ್ಟುಕೊಳ್ಳಿ. ಗೋಡಂಬಿ/ಪಿಸ್ತಾ/ಬಾದಾಮಿ/ದ್ರಾಕ್ಷಿ ಮೊದಲಾದ ಒಣಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಪುಟ್ಟ ಗಾಜಿನ ಬಟ್ಟಲುಗಳಲ್ಲಿ ಅರ್ಧ ಭಾಗದಷ್ಟು ಕಸ್ಟಾರ್ಡ್ ಮಿಶ್ರಣ ಸುರಿದು, ಅದರ ಮೇಲೆ ಇನ್ನರ್ಧ ಭಾಗದಷ್ಟು ಹಣ್ಣಿನ ಪಲ್ಪ್ ಅನ್ನು ಸುರಿದು, ಆಮೇಲೆ ಒಣಹಣ್ಣುಗಳಿಂದ ಅಲಂಕರಿಸಿ, ಫ್ರಿಜ್ ನಲ್ಲಿ ಎರಡು ಗಂಟೆ ಇರಿಸಿ. ತಣ್ಣಗಾದ ಡ್ರ್ಯಾಗನ್ ಫ್ರುಟ್ ಕಸ್ಟಾರ್ಡ್ ತಿನ್ನಲು ಸಿದ್ಧ.
4. ಡ್ರ್ಯಾಗನ್ ಫ್ರುಟ್ ತಂಬುಳಿ
ಬೇಕಾಗುವ ಸಾಮಗ್ರಿಗಳು :
ಡ್ರ್ಯಾಗನ್ ಫ್ರುಟ್ ನ ತಿರುಳು : ಕಾಲು ಕಪ್ , ಕಾಳುಮೆಣಸು: ಅರ್ಧ ಚಮಚ , ಜೀರಿಗೆ : ಅರ್ಧ ಚಮಚ ಹಸಿರುಮೆಣಸಿನಕಾಯಿ: 1 , ಕಾಯಿತುರಿ: ಅರ್ಧ ಕಪ್ , ಮಜ್ಜಿಗೆ : 4 ಕಪ್ ನೀರು: ಸ್ವಲ್ಪ. ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಎಣ್ಣೆ -ಅರ್ಧ ಚಮಚ, ಸಾಸಿವೆ – ಅರ್ಧ ಚಮಚ ಕರಿಬೇವಿನ – ಸ್ವಲ್ಪ
ತಯಾರಿಸುವ ವಿಧಾನ :
ಹೆಚ್ಚಿದ ಡ್ರ್ಯಾಗನ್ ಫ್ರುಟ್ ತಿರುಳು, ಕಾಯಿತುರಿ, ಕಾಳುಮೆಣಸು, ಹಸಿರುಮೆಣಸಿನಕಾಯಿ ಹಾಗೂ ಜೀರಿಗೆ – ಇವೆಲ್ಲವನ್ನೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಇದಕ್ಕೆ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಂಬುಳಿಯ ಹದಕ್ಕೆ ಬೆರೆಸಿ. ಆಮೇಲೆ ಸಾಸಿವೆ , ಕರಿಬೇವಿನ ಒಗ್ಗರಣೆ ಕೊಟ್ಟರೆ ನಸು ಸಿಹಿ-ಹುಳಿ ರುಚಿಯ ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರುಟ್ ತಂಬುಳಿ ಸಿದ್ಧವಾಗುತ್ತ್ದೆ. ಈ ತಂಬುಳಿಯನ್ನು ಅನ್ನದೊಂದಿಗೆ ಉಣ್ಣಬಹುದು ಅಥವಾ ಇನ್ನೂ ಸ್ವಲ್ಪ ನೀರಾಗಿಸಿ ಕುಡಿಯಲೂ ಚೆನ್ನಾಗಿರುತ್ತದೆ.
-ಹೇಮಮಾಲಾ.ಬಿ, ಮೈಸೂರು
ಆಹಾ ಡ್ರಾಗನ್ ಹಣ್ಣಿನ ವೈವಿದ್ಯ ತಿಂಡಿ ತೀರ್ಥ ಬಾಯಲ್ಲಿ ನೀರೂರುತ್ತದೆ..ಕಣ್ಣಿಗೂ ಹೊಟ್ಟೆಗೂ ತಂಪು.
ಅಪರೂಪದ ಹಣ್ಣಿನ ವಿಶಿಷ್ಟ ತಯಾರಿ ಹಾಗೂ ಪ್ರಯೋಜನ. ಮೆಚ್ಚುಗೆ ಆಯ್ತು.
ಡ್ರಾಗನ್ ಹಣ್ಣಿನ ವೈವದ್ಯಮಯ ತಿನಿಸು ಬಾಯಲ್ಲಿ ನೀರುರಿತು ಸಮಯ ಸಿಕ್ಕಾಗ ಮಾಡಿನೋಡಬೇಕು..ಹೊಸ ರಿಸಿಪಿ ತಿಳಿಸಿದಕ್ಕೆ ಧನ್ಯವಾದಗಳು ಹೇಮಾ…
ಎರಡು ಬಣ್ಣಗಳಲ್ಲಿ ಲಭ್ಯವಿರುವ ಡ್ರ್ಯಾಗನ್ ಹಣ್ಣಿನ ವೈವಿಧ್ಯಮಯ ಅಡುಗೆಗಳ ರಸಪಾಕದ ಜೊತೆಗೆ ಪೂರಕ ಚಿತ್ರಗಳು ಇಂದಿನ ಸುರಹೊನ್ನೆಯನ್ನು ಅಂದಗೊಳಿಸಿವೆ. ಧನ್ಯವಾದಗಳು ಮಾಲಾ…
ಧನ್ಯವಾದಗಳು..
A must try recipes. Wonderfully explained. May be we can also try the juice with a pinch of salt, lemon, mint/ginger.
Thank you..Yes, we can try salty juice as well.
ಸೂಪರ್. ಯಾವುದರಲ್ಲದರೂ ಬಗೆ ಬಗೆಯ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ನೀವು ಹೇಮಕ್ಕ, ನಳ ಪಾಕ ಪ್ರವೀಣೆ ನೀವು.
ಸುಮ್ನೆ ಏನಾದರೂ ಹೊಸ ರೆಸಿಪಿ ಪ್ರಯತ್ನಿಸುತ್ತೇನೆ ಅಷ್ಟೆ..ಥ್ಯಾಂಕ್ಯೂ.