‘ಸಿರಿಗನ್ನಡ ಓದುಗರ ಒಕ್ಕೂಟ’ದಲ್ಲಿ ಕನ್ನಡದ ಸವಿ ..
ಈಗ್ಗೆ 3-4 ವಾರಗಳ ಹಿಂದೆ, ಲೇಖಕಿ, ಗೆಳತಿ, ಶ್ರೀಮತಿ.ಬಿ.ಆರ್.ನಾಗರತ್ನ ಅವರು ಕರೆಮಾಡಿ – ನಮ್ಮ ಸಿರಿಗನ್ನಡ ಓದುಗರ ವೇದಿಕೆಯಲ್ಲಿ ʼಮಹಾಭಾರತʼದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದೇವೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಸತುಂಬುವ ಹುಮ್ಮಸ್ಸಿನಿಂದ ಹಾಗೂ ಬಳಗದ ಸದಸ್ಯರಲ್ಲಿ ಸ್ಪರ್ಧಾ ತೀವ್ರತೆಯನ್ನು ಉಂಟುಮಾಡುವ ದೃಷ್ಟಿಯಿಂದ ಕೆಲವೇ ಕಲವಾರು ಸದಸ್ಯರಲ್ಲದ ಅತಿಥಿ ಸ್ಪರ್ಧಿಗಳನ್ನೂ ಆಹ್ವಾನಿಸುತ್ತಿದ್ದೇವೆ. ನೀವೂ ಭಾಗವಹಿಸುವಿರೇನು? – ಎಂದು ಕೇಳಿದಾಗ ಅವರ ಬಾಯಿಂದ ಆಗಾಗ್ಗೆ ಸಿರಿಗನ್ನಡ ಓದುಗರ ವೇದಿಕೆಯ ವಿಶಿಷ್ಟ ಹಾಗೂ ಪ್ರಬುದ್ಧ ಸು-ಹವ್ಯಾಸದ ಬಗ್ಗೆ ಕೇಳಿದ್ದರಿಂದ ಅಲ್ಲಿಯ ಸದಸ್ಯರನ್ನು ಭೇಟಿ ಮಾಡುವ ಹಾಗೂ ಸ್ಪಧೋತ್ಸಾಹದಿಂದ (ಮನದಲ್ಲಿ ಅಳುಕಿದ್ದರೂ) ನನ್ನ ಹೆಸರನ್ನು ನೊಂದಾಯಿಸಿಕೊಂಡೆ.
ದಿನಾಂಕ 8-11-2023 ರ ಬುಧವಾರ ಕಾರ್ಯಕ್ರಮವೆಂದೂ, ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವುದೆಂದೂ ಹೇಳಿ ವಿಳಾಸವನ್ನು ಕಳುಹಿಸಿಕೊಟ್ಟರು.ಅಂದು ಅಲ್ಲಿಗೆ ಹೋದಾಗ ಕಂಡಿದ್ದು, ಮನದಲ್ಲಿ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುವಂತಹ “ಹಾಬಿ ಪ್ಲೇಸ್” ಸ್ಥಳದ ಒಳಾಂಗಣದಲ್ಲಿ ನೆರೆದಿದ್ದ, ಸುಂದರವಾಗಿ ಅಲಂಕರಿಸಿಕೊಂಡಿದ್ದ ಎಲ್ಲ ವಯೋಮಾನದ ಮಹಿಳಾಮಣಿಗಳ ದೊಡ್ಡ ಗುಂಪೊಂದನ್ನು. ಸುಮಾರು 40 ರಿಂದ 50 ಮಹಿಳೆಯರು ಅಲ್ಲಿ ನೆರೆದಿದ್ದರು.
ಕನ್ನಡ ತಾಯಿಗಾಗಿ ಪ್ರಾರ್ಥನೆಯ ರೂಪದಲ್ಲಿ “ಹಚ್ಚೇವು ಕನ್ನಡದ ದೀಪ”ವನ್ನು, ನಂತರ ನಾಡಗೀತೆಯಾದ “ಭಾರತ ಜನನಿಯ ತನುಜಾತೆ”ಯನ್ನು ಸುಶ್ರಾವ್ಯವಾಗಿ ಬಳಗದ ಸದಸ್ಯೆಯರೆಲ್ಲರೂ ಸಾಮೂಹಿಕವಾಗಿ ಹಾಡಿದರು. ಶ್ರೀಮತಿ. ಮಾಲತಿ ಅವರು ಆಗಮಿಸಿದ್ದ ಸರ್ವರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಉದ್ಘಾಟನಾ ಕಾರ್ಯಕ್ರಮವು ಸುಂದರವಾಗಿ ಅಲಂಕರಿಸಿಕೊಂಡ ದೀಪದ ಕಂಬದಲ್ಲಿ ದೀಪ ಬೆಳಗುವ ಮೂಲಕ ನೆರವೇರಿತು.
ವಕೀಲೆ ಶ್ರೀಮತಿ.ರೂಪ ಹೇಮಂತ್ ಅವರು ಸುಂದರವಾಗಿ ಬಿಡಿಸಿದ್ದ ರಂಗೋಲಿಯು ಕನ್ನಡ ತಾಯಿ ಭುವನೇಶ್ವರಿಯ ಚಿತ್ರದ ಮುಂದೆ ಕಂಗೊಳಿಸುತಿತ್ತು. ತಾಯಿಗೆ ಪುಷ್ಪಾರ್ಚನೆಯಾಯಿತು. ಅಂದಿನ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನೂ ಸಹ ಹೊತ್ತಿದ್ದವರು ಬಹುಮುಖ ಪ್ರತಿಭೆಯ ಶ್ರೀಮತಿ ರೂಪ ಅವರೇ. ಹಿರಿಯ ಲೇಖಕಿ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಶ್ರೀಮತಿ.ವಿಜಯಾ ಹರನ್ ಅವರು ಬಳಗದ ಆಶಯವನ್ನು ಅಚ್ಚುಕಟ್ಟಾಗಿ ವಿವರಿಸಿದರು.
ತಿಂಗಳಿಗೊಮ್ಮೆ ಒಂದಾಗಿ ಸೇರುವ ಸದಸ್ಯೆಯರುಗಳು ಹಿಂದಿನ ತಿಂಗಳೇ ನಿರ್ಧರಿಸಿದ್ದ ಯಾವುದಾದರೊಂದು ಉತ್ತಮ ಕನ್ನಡ ಪುಸ್ತಕವನ್ನು ಓದಿ, ತಮ್ಮ, ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕೆನ್ನುವುದು ಬಳಗದ ಸದಾಶಯ. ಹೀಗೆಯೇ ಕಳೆದ ಏಳೆಂಟು ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವುದಕ್ಕೆ ಶ್ರೀಮತಿ.ವಿಜಯಾ ಹರನ್ ಅವರು ಸಂತಸವನ್ನು ವ್ಯಕ್ತಪಡಿಸಿ ಸದಸ್ಯರುಗಳನ್ನು ಅಭಿನಂದಿಸಿದರು. ಹಾಗೂ ಆಸಕ್ತಿ ಇರುವವರುಗಳು ಸದಸ್ಯರುಗಳಾಗಬಹುದೆಂದು ಮುಕ್ತವಾಗಿ ಆಹ್ವಾನಿಸಿದರು. ಹಾಗೆಯೇ ವರ್ಷಕ್ಕೊಮ್ಮೆ ರಾಜ್ಯೋತ್ಸವ ಮತ್ತು ಆಗಾಗ್ಗೆ ಪ್ರವಾಸೀ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಎಷ್ಟೊಳ್ಳೆಯ ಆಶಯ! ಕಡ್ಡಾಯವಾಗಿ ತಿಂಗಳಿಗೊಂದು ಒಂದೊಳ್ಳೆಯ ಪುಸ್ತಕ ಓದುವ, ಓದಿದಾಗ ಅನ್ನಿಸಿದ ಅನಿಸಿಕೆಗಳನ್ನು ಸಮಾನಮನಸ್ಕರಲ್ಲಿ ಹಂಚಿಕೊಂಡಾಗ ಉಂಟಾಗುವ ಆನಂದ, ನೆನೆಸಿಕೊಂಡರೇ ಸಂತಸವೆನಿಸುವುದು. ಅಲ್ಲದೆ ಇತರ ಸದಸ್ಯೆಯರು ತಮ್ಮ ಅಭಿಪ್ರಾಯಗಳನ್ನು ಕುರಿತು ಹೇಳಿದಾಗ, ಒಂದೇ ಪುಸ್ತಕದ ಕುರಿತಾಗಿ ಮೂಡುವ ವಿವಿಧ ದೃಷ್ಠಿಕೋನಗಳ ಅನಿಸಿಕೆಗಳನ್ನು ಆಲಿಸಿದಾಗ ಮನದಲ್ಲಿ ಉಂಟಾಗಬಹುದಾದ ಮಂಥನಗಳನ್ನು ಯೋಚಿಸಿದಾಗ, ನಿಜಕ್ಕೂ ಓದುವ ಹವ್ಯಾಸವನ್ನು ಬೆಳೆಸುವ, ಅದರ ಕುರಿತು ಅಭಿಪ್ರಾಯಗಳನ್ನು ಮಂಡಿಸುತ್ತಾ ಬೌದ್ಧಿಕವಾಗಿ ವಿಕಸನಗೊಳ್ಳುಲು ಮಾದರಿಯಾದ ಸಂಸ್ಥೆ ಇದೆಂಬ ಅಭಿಪ್ರಾಯ ನನ್ನ ಮನದಲ್ಲಿ ಮೂಡಿತು.
ನಂತರ ಶ್ರೀಮತಿ.ಬಿ.ಆರ್. ನಾಗರತ್ನ ಅವರ ದಕ್ಷ ಸಾರಥ್ಯದಲ್ಲಿ ಪ್ರಾರಂಭವಾಯಿತು, “ಮಹಾಭಾರತ”ದ ಕುರಿತಾದ ರಸಪ್ರಶ್ನೆಯ ಸ್ಪರ್ಧೆ. ಅವರಿಗೆ ಶ್ರೀಮತಿ.ರೂಪ ಮತ್ತು ಶ್ರೀಮತಿ.ಪಾರ್ವತಿ ವಟ್ಟಂ ಅವರುಗಳ ಸಹಾಯ ಹಸ್ತ. ಅತ್ಯಂತ ಅಚ್ಚುಕಟ್ಟಾಗಿ ನಾಲ್ಕು ಸುತ್ತುಗಳನ್ನೊಳಗೊಂಡ ಎಲ್ಲ ಸ್ಪರ್ಧಿಗಳಲ್ಲಿ ಆರೋಗ್ಯಪೂರಿತ ಸ್ಪರ್ಧಾಮನೋಭಾವವವನ್ನು ಉಕ್ಕೇರಿಸುವಂತಹ ಸುಂದರ ಕಾರ್ಯಕ್ರಮ ಅದಾಗಿತ್ತು.
ಮೊದಲಿಗೆ ನೀತಿ ನಿಯಮಗಳನ್ನು ವಿವರಿಸಿದರು ಶ್ರೀಮತಿ.ನಾಗರತ್ನ ಅವರು. ಮೊದಲ ಸುತ್ತಿನಲ್ಲಿ ಚಿತ್ರಗಳನ್ನು ನೋಡಿ ಸನ್ನಿವೇಶಗಳನ್ನು ಗುರುತಿಸುವಂತಹ ಕುತೂಹಲಕಾರಿಯಾದ ಸುತ್ತು. ನಂತರ ಪ್ರಶ್ನೋತ್ತರ ಮಾಲಿಕೆಯ ಮೂರು ಸುತ್ತುಗಳು. ಹೀಗೆ ಒಟ್ಟು ನಾಲ್ಕು ಸುತ್ತುಗಳ ಪಾರದರ್ಶಕ ರಸಪ್ರಶ್ನೆ ಕಾರ್ಯಕ್ರಮ. ಕೆಲವೊಮ್ಮೆ ಅವರು ಪ್ರಶ್ನೆಗಳನ್ನು ಸ್ವಲ್ಪ ತಿರುಚಿ ಕೇಳುತ್ತಿದ್ದ ರೀತಿ, ಸುಲಭ ಉತ್ತರಗಳೂ ಹೊಳೆಯದಂತೆ ಮಾಡಿದಾಗ, ಸ್ಪರ್ಧಿಗಳಿಂದ ಬರುತ್ತಿದ್ದ ʼಅಯ್ಯೋ . . .ʼ ಎಂಬ ಉದ್ಗಾರ, ಪ್ರಶ್ನೆ ʼಪಾಸ್ʼ ಎಂದು ಮುಂದೆ ಹೋದ ನಂತರ ಉತ್ತರ ಹೊಳೆದು ಕೈ ಕೈ ಹಿಸುಕಿಕೊಳ್ಳುವಂತೆ ಆಗುತ್ತಿದ್ದ ಪರಿ. . . . . ಒಂದೇ, ಎರಡೇ, ಉಂಟಾಗುತ್ತಿದ್ದ ಆತುರ, ಕಾತುರ, ತೃಪ್ತಿ, ನಿರಾಶೆಗಳಿಗೆ ಲೆಕ್ಕವೇ ಇಲ್ಲ. ರಸಪ್ರಶ್ನೆ ಕಾರ್ಯಕ್ರಮ ಮುಕ್ತಾಯವಾಯಿತು.
ಸ್ಪರ್ಧಾಳುಗಳು ಗಳಿಸಿದ ಅಂಕಗಳನ್ನು ಪರಿಗಣಿಸಿ ಫಲಿತಾಂಶವನ್ನುನಿರ್ಧರಿಸಿ, ವಿಜೇತರ ಹೆಸರುಗಳನ್ನು ಘೋಷಿಸುವ ಪ್ರಕ್ರಿಯೆಗಾಗಿ ಶ್ರೀಮತಿ.ನಾಗರತ್ನ ಮತ್ತು ಟೀಂ ಅತ್ತ ಕಡೆ ಹೋದಾಗ, ಇಲ್ಲಿ ನೆರೆದಿದ್ದ ಎಲ್ಲ ಸದಸ್ಯರುಗಳಲ್ಲಿ ಒಮ್ಮತವಾಗಿ ಮೂಡಿದ ಅಭಿಪ್ರಾಯ – ಶ್ರೀಮತಿ.ನಾಗರತ್ನ ಅವರು ನಡೆಸಿಕೊಟ್ಟ ಅಚ್ಚುಕಟ್ಟಾದ ಕಾರ್ಯಕ್ರಮ ಮತ್ತು ಅದಕ್ಕಾಗಿ ಅವರು ವಹಿಸಿರಬಹುದಾದ ಪರಿಶ್ರಮದ ಕುರಿತಾಗಿ ಮೆಚ್ಚುಗೆ, ಅಭಿಮಾನ ಮತ್ತು ಪ್ರಶಂಸೆಗಳ ಸರಿಮಳೆ.
ಒಟ್ಟು ಒಂಭತ್ತು ನಗದು ಬಹುಮಾನಗಳು. ನಾಲ್ಕು, – ಮೊದಲನೆ, ಎರಡನೇ, ಮೂರನೇ ಮತ್ತು ನಾಲ್ಕನೇ ಬಹುಮಾನ ಹಾಗೂ ಐದು ಸಮಾಧಾನಕರ ಬಹುಮಾನಗಳು. ಒಬ್ಬೊಬ್ಬರ ಹೆಸರುಗಳನ್ನು ಘೋಷಿಸಿದಾಗಲೂ ಮೂಡುತಿದ್ದ ಹರ್ಷೋದ್ಗಾರಗಳು, ಪರಸ್ಪರ ಸಲ್ಲಿಸುತ್ತಿದ್ದ ಅಭಿನಂದನೆಗಳು ವಾತಾವರಣದಲ್ಲಿ ಸಂಭ್ರಮ ಮೂಡಿಸಿತ್ತು. ಹಿರಿಯ ಸದಸ್ಯೆಯಾದ ಶ್ರೀಮತಿ ವನಮಾಲಾ ಅವರು ಬಹುಮಾನಗಳನ್ನು ವಿತರಿಸಿದರು.
ಒಟ್ಟು ಒಂಭತ್ತು ಬಹುಮಾನಗಳಲ್ಲಿ ಅತಿಥಿ ಸ್ಪರ್ಧಿಗಳಾಗಿ ಆಗಮಿಸಿದ್ದ ಇಬ್ಬರು ಸದಸ್ಯರುಗಳಿಗೆ ಬಹುಮಾನ ಬಂದಿತ್ತು. ಲೇಖಕಿ ಶ್ರೀಮತಿ.ಬಿ.ಕೆ.ಮೀನಾಕ್ಷಿ ಅವರಿಗೆ ಸಮಾಧಾನಕರ ಬಹುಮಾನ ಬಂದಿದ್ದರೆ, ನಮ್ಮ “ಸುರಹೊನ್ನೆ”ಯ ಸಂಪಾದಕಿ ಶ್ರೀಮತಿ.ಹೇಮಮಾಲಾ ಅವರು ಮೊದಲ ಬಹುಮಾನಕ್ಕೆ ಭಾಜನರಾದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ.ಪೂರ್ಣಿಮ ಅವರು ಎಲ್ಲರನ್ನೂ ವಂದಿಸಿದರು.
ಒಂದು ಸಮೂಹ ಛಾಯಾಚಿತ್ರದ ನಂತರ ಸಿಹಿಯಿಂದೊಡಗೂಡಿದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಂತಾದರೂ, ಕೆಲ ಉತ್ಸಾಹಿ ಸದಸ್ಯೆಯರುಗಳು ಇನ್ನೂ ಚೆಂದದ ರಂಗೋಲಿಯ ಮಧ್ಯೆ ಉರಿಯುತ್ತಿದ್ದ ನಂದಾದೀಪದ ಸುತ್ತ ಲಯಬದ್ಧವಾದ ಹಾವಭಾವಗಳಿಂದೊಡಗೂಡಿ ನೃತ್ಯ ಮಾಡುತ್ತಿದ್ದರು, ಹಾಡು ಹಾಡುತ್ತಿದ್ದರು.
ನನ್ನನ್ನು ಸೇರಿ ಎಲ್ಲರಲ್ಲಿ ಬೌದ್ಧಿಕವಾಗಿ, ಮಾನಸಿಕವಾಗಿ ಒಂದೊಳ್ಳೆಯ ಸದಭಿರುಚಿಯ ಕಾರ್ಯಕ್ರಮದಲ್ಲಿ ಭಾಗವಾದ ತೃಪ್ತಿ ಮನೆ ಮಾಡಿತ್ತು. ಸಿರಿಗನ್ನಡ ಓದುಗರ ವೇದಿಕೆಯ ಕಾರ್ಯಕ್ರಮಗಳು ಹೀಗೆಯೇ ನಿರಂತರವಾಗಿ ಮುಂದುವರೆಯಲಿ.
‘ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ‘
-ಪದ್ಮಾ ಆನಂದ್ , ಮೈಸೂರು
ಹೇಮಮಾಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಧನ್ಯವಾದಗಳು.
ನಮ್ಮ ಸಿರಿಗನ್ನಡ ವೇದಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಅಲ್ಲಿನ ಆಶಯ ಮತ್ತು ಆದಿನ ನೆಡೆದ ಕಾರ್ಯ ಕ್ರಮದ ಬಾಹುಳ್ಯತೆ..ಅದರಿಂದ ತಮಗಾದ ಅನುಭವಗಳನ್ನು ಅಚ್ಚುಕಟ್ಟಾಗಿ ಲೇಖನ ಮೂಲಕ ಅಭಿವ್ಯಕ್ತಿಸಿ ಹಾರೈಸಿರುವ ಪದ್ಮಾ ಮೇಡಂಗೆ ಬಳಗದ ವತಿಯಿಂದ ಹಾಗೂ ವೈಯುಕ್ತಿಕವಾಗಿ ಹೃತ್ಪೂರ್ವಕವಾದ ಧನ್ಯವಾದಗಳು..
ಅತ್ಯಂತ ಮುತುವರ್ಜಿಯಿಂದ ವಿಶಿಷ್ಟವಾದ ರಸಪ್ರಶ್ನೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದಿರಿ.ಧನ್ಯವಾದಗಳು.
ಧನ್ಯವಾದಗಳು
ನಮಸ್ತೆ
ನಮ್ಮ ಸಿರಿಗನ್ನಡ ಓದುಗರ ಒಕ್ಕೂಟದ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಚಂದ ನುಡಿಗಳ ವ್ಯಕ್ತಪಡಿಸಿದ್ದೀರಿ ಮೇಡಮ್ ನಿಮಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಗಮನದಿಂದ ನಮ್ಮ ಸಿರಿಗನ್ನಡದ ಕಾರ್ಯಕ್ರಮ ಮತ್ತಷ್ಟೂ ಶ್ರೀಮಂತವಾಯ್ತು. ನಮ್ಮ ಶ್ತೀಮತಿ ವಿಜಯಾ ಹರನ್ ಮೇಡಮ್ ರ ಅಚ್ಚುಕಟ್ಟಾದ ಸಾರಥ್ಯದಲ್ಲಿ, ಶ್ರೀಮತಿ ಪೂರ್ಣಿಮಾ ಸುರೇಶ್ ಮೇಡಮ್ ರ ಪ್ರೀತಿಪೂರ್ವಕ ಸಂಘಟನೆಯಲ್ಲಿ, ಶ್ರೀಮತಿ ಬಿ.ಆರ್.ನಾಗರತ್ನ ಮೇಡಮ್ ರ ದಿಟ್ಟ ನೇರ ನುಡಿಗಳಲ್ಲಿ ನಮ್ಮ ಮಹಾಕಾವ್ಯವಾದ ಮಹಾಭಾರತ ಅಬ್ಬಬ್ಬ ಮತ್ತಷ್ಟು ಮಹಾ ಮಹಾ ಕಾವ್ಯವಾಗಿ ದಿಗ್ಧರ್ಶನ ತೋರಿತು. ಆಗಮಿಸಿದ ನಿಮಗೆಲ್ಲರಿಗೂ ಹೃನ್ಮನ ನಮನಗಳು. ಮತ್ತೆ ಮತ್ತೆ ಬನ್ನಿ ಒಂದಷ್ಟು ಕಲಿಯೋಣ, ಒಂದಿಷ್ಟು ನಲಿಯೋಣ.
‘ಸಿರಿಗನ್ನಡ ವೇದಿಕೆ’ಯು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೂ ಅವಕಾಶ ಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಚಟುವಟಿಕೆಗಳು, ಆತ್ಮೀಯತೆ,ಸತ್ಸಂಗ ನನಗೆ ಬಹಳ ಮುದ ಕೊಟ್ಟಿತು. ‘ಮಹಾಭಾರತ ರಸಪ್ರಶ್ನೆ’ಯಲ್ಲಿ ಅನಿರೀಕ್ಷಿತವಾಗಿ ಲಭಿಸಿದ ಬಹುಮಾನ ಇನ್ನಷ್ಟು ಖುಷಿ ತಂದಿತು. ಶ್ರೀಮತಿ ಪದ್ಮಾ ಆನಂದ್ ಎಲ್ಲಾ ಘಟನಾವಳಿಗಳನ್ನು ಚೆಂದಕೆ ಅಕ್ಷರರೂಪಕ್ಕಿಳಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು.
ಧನ್ಯವಾದಗಳು.
ಕಾರ್ಯಕ್ರಮದ ಕುರಿತಾಗಿ ಬಹಳ ಸೊಗಸಾಗಿ ಬರೆದಿದ್ದೀರಿ.
ಧನ್ಯವಾದಗಳು
ಪ್ರಿಯ ಗೆಳತಿ ಪದ್ಮಾ
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ನೀವು ನಮ್ಮ ಒಕ್ಕೂಟಕ್ಕೆ ಬಂದು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಸಮಾರಂಭದ ಸಮೀಕ್ಷೆಯನ್ನು ಅಚ್ಚುಕಟ್ಟಾಗಿ ಬರೆದಿದ್ದೀರಿ. ಧನ್ಯವಾದಗಳು. ಸ್ನೇಹ ಮುಂದುವರೆಯಲಿ, ಸಂತಸ ಹೆಚ್ಚಲಿ, ಒಕ್ಕೂಟದ ಸದಸ್ಯರಾಗಿ, ಮಾತಾಡೋಣ ವಿಚಾರ ವಿನಿಮಯ ಮಾಡೋಣ.
ಶುಭಾ ಶಂಸನೆಗಳು,
ಪ್ರೀತಿಯಿಂದ, ವಿಜಯಾ ಹರನ್
ತಮ್ಮಭಿಮಾನಕ್ಕೆ ಹೃನ್ಮನಪೂರ್ವಕ ಧನ್ಯವಾದಗಳು
ಕನ್ನಡದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ನಮ್ಮ ಒಕ್ಕೂಟದ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ನಮ್ಮೆಲ್ಲಾ ಗೆಳತಿಯರ ಸಹಕಾರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಸುಲಲಿತವಾಗಿ ನಿಜವಾದ ಅರ್ಥದಲ್ಲಿ ನಡೆಸಲ್ಪಟ್ಟ ಸಂಭ್ರಮದ ರಾಜ್ಯೋ ತ್ಸವದ ಕುರಿತು ತಮ್ಮ ಅಭಿಪ್ರಾಯ ಹಾಗೂ ಮೆಚ್ಚಿಗೆಗಳನ್ನು ತಿಳಿಸಿದ ಗೆಳತಿ ಪದ್ಮಾ ರವರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು. ನಿಮ್ಮ ಪ್ರಶಂಸೆ ನಮಗೆ ಸ್ಪೂರ್ತಿದಾಯಕ. ಸಿರಿಕನ್ನಡ ಒಕ್ಕೂಟ ವರುಷದಿಂದ ವರುಷಕ್ಕೆ ಮತ್ತಷ್ಟು ಹರುಷ ಮತ್ತು ಉತ್ಸಾಹದಿಂದ ತುಂಬಿರಲೆಂದು ಹಾರೈಸುತ್ತೇವೆ
ತಮ್ಮ ಸಂತಸ ಮತ್ತು ಹಾರೈಕೆಗಳಿಗಾಗಿ ವಂದನೆಗಳು.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಸಿರಿಗನ್ನಡ ಓದುಗರ ವೇದಿಕೆಗೆ ಬಂದು ಅಂದು ನಡೆದ ಕಾರ್ಯಕ್ರಮವನ್ನು ಮತೊಮ್ಮೆ ನಮ್ಮ ಕಣ್ಮುಂದೆ ಬರುವಂತೆ ಸೊಗಸಾಗಿ ನಿರೂಪಿಸಿದ್ದೀರಿ, ವೇದಿಕೆಗೆ ಸ್ವಾಗತ…. ಕಾರ್ಯಕ್ರಮದ ರೂವಾರಿ ಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಧನ್ಯವಾದಗಳು
ನಮ್ಮ ಒಕ್ಕೂಟ ನಡೆಸಿದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಬರಲಾಗಲಿಲ್ಲ ನಿಮ್ಮ ವಿವರಣೆ ಓದಿದ ನಂತರ ನಾನೇ ಭಾಗವಹಿಸಿದ ಅನುಭವವಾಯ್ತು ಧನ್ಯವಾದಗಳು ಮೇಡಂ…
ಪ್ರೀತಿ ಪೂರ್ವಕ ವಂದನೆಗಳು.
ಒಂದೊಳ್ಳೆಯ ಕಾರ್ಯಕ್ರಮದ ವಿವರಣಾತ್ಮಕ ಲೇಖನವು ಬಹಳ ಚೆನ್ನಾಗಿದೆ.
ತಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.